ಏರುತ್ತಿರುವ ಜನಸಂಖ್ಯೆ : ಸಮಸ್ಯೆಯಲ್ಲ

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇಂದಾತ ಸ್ವಾಮಿ ಪ್ರಭುಪಾದರು ಹಾಗೂ ಪತ್ರಕರ್ತರ ನಡುವೆ ನಡೆದ ಸಂವಾದ

ಸ್ಥಳ: ಲಂಡನ್, ದಿನಾಂಕ: ಆಗಸ್ಟ್ 18, 1971

– ಅನುವಾದ : ಚೇತನಾ ತೀರ್ಥಹಳ್ಳಿ

ಶ್ರೀಲ ಪ್ರಭುಪಾದ: ಭಾರತವೀಗ ಪಾಶ್ಚಾತ್ಯ ನಾಗರಿಕತೆಯನ್ನು ಅನುಕರಿಸಲು ಹೋಗಿ ಹಲವಾರು ಸಮಸ್ಯೆಗಳನ್ನು ಎದುರುಹಾಕಿಕೊಂಡಿದೆ.

ಅತಿಥಿ: ಕೇವಲ ಜನಸಂಖ್ಯಾ ಹೆಚ್ಚಳದಿಂದ ಅಲ್ಲವೇನು?

ಶ್ರೀಲ ಪ್ರಭುಪಾದ: ಹೆಚ್ಚಿರುವ ಜನಸಂಖ್ಯೆಯದೊಂದು ಪ್ರಶ್ನೆಯೇ ಅಲ್ಲ. ಈ ಆಲೋಚನೆ ಯಾವಾಗಲೂ ಮೂರ್ಖತನದ್ದೆಂದೇ ನಾನು ಹೇಳುವೆ. ಪ್ರಾಣಿಪಕ್ಷಿಗಳು ಕೂಡ ತಮ್ಮ ಸಂಖ್ಯೆ ಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಅವಕ್ಕೆಲ್ಲ ಯಾರು ಆಹಾರ ಒದಗಿಸುತ್ತಿರುವರು? ಒಟ್ಟಾರೆಯಾಗಿ 84,00,000 ಬಗೆಯ ಜೀವ ಪ್ರಭೇದಗಳಿವೆ.

ಇವುಗಳಲ್ಲಿ 80,00,000 ಜೀವ ಪ್ರಭೇದಗಳು ಮಾನವ ಜೀವಿಗಳಿಗಿಂತ ಬೇರೆಯಾಗಿವೆ, ಮತ್ತು 4,00,000 ಜೀವ ಪ್ರಭೇದಗಳು ಮಾನವ ಜೀವಿಗಳಾಗಿವೆ. ಅವುಗಳಲ್ಲಿ ನಾಗರಿಕ ವ್ಯಕ್ತಿಗಳ ಸಂಖ್ಯೆ ಸ್ವಲ್ಪ ಮಾತ್ರ ಮತ್ತು ಎಲ್ಲ ಸಮಸ್ಯೆಗಳೂ ಈ ನಾಗರಿಕ ಜನಸಂಖ್ಯೆಯೆಂದು ಕರೆಯಲ್ಪಡುವ ಸಮಾಜದಲ್ಲಿ ಮಾತ್ರ ಇದೆ.

ಭಗವಂತನೇ ಮೂಲಪಿತನೆಂಬುದು ನಮಗೆ ಗೊತ್ತು. ಅವನು ಪ್ರತಿಯೊಬ್ಬರ ನಿರ್ವಹಣೆಗೂ ಒದಗಿಸುತ್ತಿರುವನು. ಜನಸಂಖ್ಯೆಯ ಹೆಚ್ಚಳವಾದಲ್ಲಿ, ಅವರೆಲ್ಲರಿಗೂ ಉಣಬಡಿಸಲು ಸಾಕಾಗುವಷ್ಟು ಸಂಪನ್ಮೂಲವನ್ನು ಭಗವಂತನು ಹೊಂದಿರುವನು. ಏರುತ್ತಿರುವ ಜನಸಂಖ್ಯೆ ಸಮಸ್ಯೆಯಲ್ಲ. ಅಸುರೀ ನಾಗರಿಕತೆಯೇ ಒಂದು ಸಮಸ್ಯೆ.

ಪತ್ರಕರ್ತ: ನಾನು ನಿಮ್ಮನ್ನು ಆ ನಾಗರಿಕತೆಯ ಬಗ್ಗೆ ಕೇಳಲು ಬಯಸುತ್ತಿದ್ದೆ.

ಶ್ರೀಲ ಪ್ರಭುಪಾದ: ಅಸುರೀ ನಾಗರಿಕತೆ ಏರುತ್ತಿರುವ ಜನಸಂಖ್ಯೆಯಲ್ಲ – ಅದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಇಲ್ಲಿಯವರೆಗೆ ನಾನು ಅಮೆರಿಕ, ಆಫ್ರಿಕ, ಆಸ್ಟ್ರೇಲಿಯಾಗಳಲ್ಲಿ ಅಭ್ಯಸಿಸಿದಂತೆ, ಅಲ್ಲೆಲ್ಲ ಬಹಳಷ್ಟು ಖಾಲಿ ಸ್ಥಳಗಳಿವೆ. ಇಂದಿನ ಜಾಗತಿಕ ಜನಸಂಖ್ಯೆಯಲ್ಲಿ ಹತ್ತುಪಟ್ಟು ಏರಿಕೆಯಾದರೂ ಎಲ್ಲರಿಗೂ ಸಾಕಾಗುವಷ್ಟು ಆಹಾರವಿದ್ದೇ ಇರುತ್ತದೆ.

ಪತ್ರಕರ್ತ: ಸಾಕಾಗುವಷ್ಟು ಆಹಾರವಿರುತ್ತದೆ ಎಂದು ನೀವು ಯೋಚಿಸುತ್ತೀರೇನು?

ಶ್ರೀಲ ಪ್ರಭುಪಾದ: ಅಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ನಾವು ಕೃತಕ ವಿಭಾಗಗಳನ್ನು ಮಾಡಿಕೊಂಡಿರುವೆವು. “ಇದು ಅಮೆರಿಕ” ಇತ್ಯಾದಿಯಾಗಿ. ಅಮೆರಿಕನ್ನರು ಯೂರೋಪಿನಿಂದ ಬಂದವರು ಮತ್ತು ಕಾನೂನು ಬಾಹಿರವಾಗಿ ಅಮೆರಿಕವನ್ನು ಅತಿಕ್ರಮಿಸಿದವರು. ಆದರೀಗ ಅವರು ಬೇರೆಯಾರನ್ನೂ ಅಲ್ಲಿಗೆ ಬರಲು ಬಿಡುವುದಿಲ್ಲ.

ಹಾಗೆಯೇ, ಆಸ್ಟ್ರೇಲಿಯನ್ನರು ಯಾರನ್ನೂ ಅಲ್ಲಿಗೆ ಬರಲು ಬಿಡುವುದಿಲ್ಲ. ಇದೇ ರೀತಿಯಲ್ಲಿ ನ್ಯೂಜಿಲೆಂಡ್, ಆಫ್ರಿಕಗಳಲ್ಲಿ ಸಹಾ, ಯಾಕೆ? ಪ್ರತಿಯೊಂದೂ ಭಗವಂತನಿಗೆ ಸೇರಿದ್ದು ಮತ್ತು ನಾವೆಲ್ಲರೂ ದೇವರ ಮಕ್ಕಳು ಎನ್ನುವುದು ನಮ್ಮ ಸಿದ್ಧಾಂತ. ಭಗವಂತನಿಂದಾಗಿ ಪ್ರತಿಯೊಬ್ಬರೂ ಬದುಕುವ ಹಕ್ಕನ್ನು ಪಡೆದಿರುವರು.

ಪತ್ರಕರ್ತ: ಆದರೆ ಪಾಶ್ಚಾತ್ಯ ನಾಗರಿಕತೆಯ ಮೌಲ್ಯಗಳು…

ಶ್ರೀಲ ಪ್ರಭುಪಾದ: ಪಾಶ್ಚಾತ್ಯ ನಾಗರಿಕತೆಯು ”ಇದು ಆಫ್ರಿಕ, ಇದು ಅಮೆರಿಕ, ಇದು ಯೂರೋಪ್” ಎಂಬ ಕೃತಕ ಚಿಂತನೆಯನ್ನು ಸೃಷ್ಟಿಸಿರುವುದು.

ಪತ್ರಕರ್ತ: ಆದ್ದರಿಂದಲೇ ಅದು ದೇವರ ಮಕ್ಕಳಾಗಿ ಬದುಕುವುದನ್ನು ಅಸಾಧ್ಯವಾಗಿಸಿದೆ.

ಶ್ರೀಲ ಪ್ರಭುಪಾದ: ಹೌದು, ಏಕೆಂದರೆ ದೇವರ ಮಗನು ಮತ್ತೊಬ್ಬ ಮಗನನ್ನು ಒಳಗೆ ಬರಲು ಬಿಡುತ್ತಿಲ್ಲ. ಆದರೆ ಅವನು ನಿರಾಕರಣೆಯ ಹಕ್ಕನ್ನು ಹೊಂದಿಲ್ಲ. ನಿಮ್ಮ ತಂದೆಗೆ ಹತ್ತು ಮಕ್ಕಳಿರುವರು ಎಂದುಕೊಳ್ಳೋಣ. ಎಲ್ಲಾ ಹತ್ತು ಮಕ್ಕಳಿಗೂ ತಮ್ಮ ತಂದೆಯ ಆಸ್ತಿಯನ್ನು ಬಳಸಲು ಹಕ್ಕು ಇರುವುದು. ಇದು ಕಾನೂನು. ಹಾಗೆಯೇ, ಎಲ್ಲ ಜೀವರಾಶಿಗಳಿಗೆ – ಕೇವಲ ಮಾನವರಲ್ಲದೆ ಪಕ್ಷಿಗಳು, ಪ್ರಾಣಿಗಳೂ ಸೇರಿ – ಎಲ್ಲರಿಗೂ ಭಗವಂತನ ಸ್ವತ್ತನ್ನು ಬಳಸುವ ಹಕ್ಕಿರುವುದು.

ವೈದಿಕ ನಾಗರಿಕತೆಯ ಪ್ರಕಾರ, ಗೃಹಸ್ಥನಾದವನು ಕೋಣೆಯೊಳಗಿನ ಹಲ್ಲಿಗೆ ಕೂಡ ಆಹಾರ ದೊರಕಿದೆಯೇ ಎಂಬುದನ್ನು ಗಮನಿಸಬೇಕು. ಗೃಹಸ್ಥನು ದಾರಿಯಲ್ಲಿ ನಿಂತು ತನ್ನ ಊಟಕ್ಕೆ ಮೊದಲು, “ಯಾರಾದರೂ ಹಸಿದಿದ್ದರೆ ದಯವಿಟ್ಟು ಬನ್ನಿ ನನ್ನ ಬಳಿ ಆಹಾರವಿದೆ” ಎಂದು ಜೋರಾಗಿ ಕೂಗಿ ಹೇಳಬೇಕು. ಯಾರಿಂದಲೂ ಪ್ರತಿಕ್ರಿಯೆ ಬರದಿದ್ದ ಪಕ್ಷದಲ್ಲಿ, ಅನಂತರವಷ್ಟೆ ಅವನು ಆಹಾರ ಸ್ವೀಕರಿಸಬೇಕು.

ಪತ್ರಕರ್ತ: ನಾಗರಿಕತೆಯಲ್ಲಿನ ಬಹಳಷ್ಟು ಜನರಿಗೆ ಇದು ಅತ್ಯಂತ ಕಷ್ಟಕರವಾದ ನಿಯಮವಾಗಿದೆ.

ಶ್ರೀಲ ಪ್ರಭುಪಾದ: ಆದರೆ, ಅದುವೇ ನಿಜವಾದ ನಾಗರಿಕತೆ. ಒಂದು ನಾಯಿ ಬರುತ್ತಿದ್ದ ಹಾಗೆಯೇ ಮತ್ತೊಂದು ನಾಯಿ ಬೊಗಳುವುದು, ‘ಬೌ!ಬೌ!ಬೌ! ನೀನೇಕೆ ಬಂದೆ?” ಹೀಗೆಯೇ ಇಲ್ಲಿ ಮತ್ತು ಎಲ್ಲೆಡೆ, ವಲಸೆ ವಿಭಾಗವು ಕೇಳುತ್ತಿರುವುದು, “ಓಹ್, ನೀವು ಎಷ್ಟು ಕಾಲ ಉಳಿಯುವವರಿದ್ದೀರಿ?” ಅವರೇಕೆ ಅದನ್ನು ಕೇಳಬೇಕು? ಮಾನವನೊಬ್ಬನು ಬರುತ್ತಿರುವನು. ವೈದಿಕ ನಾಗರಿಕತೆಯಲ್ಲಿ ಒಬ್ಬ ಶತ್ರುವೇ ಮನೆಗೆ ಬಂದರೂ ನೀವು ಅವನು ಶತ್ರುವೆಂಬುದನ್ನು ಮರೆತು ಸ್ನೇಹಪರತೆಯಿಂದ ಬರಮಾಡಿಕೊಳ್ಳಬೇಕು.

ಪತ್ರಕರ್ತ: ಆದರೆ ನಿಮಗೆ ಈ ಮೌಲ್ಯಗಳನ್ನು ಬೋಧಿಸಲು ಬಹಳ ಕಷ್ಟವಾಗಿದ್ದೀತು.

ಶ್ರೀಲ ಪ್ರಭುಪಾದ: ಇದು ಕಷ್ಟ ಯಾಕೆಂದರೆ ಈ ನಾಗರಿಕತೆಯು ಅಸುರೀಯವಾಗಿದೆ. ಭಾರತವು ಪ್ರತಿಯೊಬ್ಬರನ್ನೂ ಸ್ವಾಗತಿಸಿತು, ಆದರೆ ಪರಿಣಾಮವಾಗಿ ಅವರು ಅತಿಕ್ರಮಿಸಲ್ಪಟ್ಟರು. ನಿಮ್ಮ ಇಂಗ್ಲಿಷ್‌ ಜನರೂ ಸ್ವಾಗತಿಸಲ್ಪಟ್ಟರು.

ಲಾರ್ಡ್‌ಕ್ಲೈವ್‌ಗೆ ಸ್ವಾಗತ ದೊರಕಿತು. ಆದರೆ ಅವನು ಭಾರತವನ್ನು ಕಬಳಿಸುವ ಹೊಂಚು ಹೂಡಿದ. ಅವನ ವಿಗ್ರಹವನ್ನು ಇಲ್ಲಿ, ಲಂಡನ್ನಿನಲ್ಲಿ ಆರಾಧಿಸಲಾಗುತ್ತಿದೆ. ಆದರೆ ಅವನ ಕೊಡುಗೆಯಾದರೂ ಏನು? ಅವನು ಹೊಂಚು ಹೂಡಿದ – ಅವನು ಕಾನೂನು ಬಾಹಿರವಾಗಿ ಭಾರತವನ್ನು ಹೊಕ್ಕು ಅತಿಕ್ರಮಿಸಿದ. ಅದು ಪಾಶ್ಚಾತ್ಯ ನಾಗರಿಕತೆ.

ಪತ್ರಕರ್ತ: ವಾಸ್ತವವಾಗಿ ನಾನು ಅದನ್ನೇ ಕೇಳಲು ಹೊರಟಿದ್ದೆ. ಇಂದಿನ ಸಮಾಜದಲ್ಲಿ ನಿಮಗೆ ಭ್ರಾತೃತ್ವದ ಮೌಲ್ಯಗಳನ್ನು ಬೋಧಿಸುವುದು ಬಹಳ ಕಷ್ಟಕರವಾಗಿ ತೋರಿರಬೇಕು.

ಶ್ರೀಲ ಪ್ರಭುಪಾದ: ಭ್ರಾತೃತ್ವವು ಸಹಜ. ಕುಟುಂಬವೊಂದರಲ್ಲಿ ಹತ್ತು ಮಕ್ಕಳಿದ್ದರೆ, ಅವರೆಲ್ಲರೂ ಸಹಜವಾಗಿಯೇ ಸಹೋದರರಾಗಿರುವರು. ಆದರೆ ಒಬ್ಬ ಮಗನು ಎಲ್ಲ ಸ್ವತ್ತನ್ನೂ ಕಬಳಿಸುವುದು ಹೇಗೆಂದು ಸಂಚು ಮಾಡುತ್ತಿರುವನು. ಅದೇ ಈಗ ನಡೆಯುತ್ತಿರುವುದು. ಇದು ಅಸುರೀಯ.

ಪತ್ರಕರ್ತ: ನೀವಿದನ್ನು ಹೇಗೆ ತಡೆಯುವಿರಿ?

ಶ್ರೀಲ ಪ್ರಭುಪಾದ: ಕೃಷ್ಣಪ್ರಜ್ಞೆಯಿಂದ. ಯಾವಾಗ ಭಗವಂತನು ಒಬ್ಬನೇ ಎಂದು, ತಂದೆಯು ಒಬ್ಬನೇ ಎಂದು, ಮತ್ತು ನಾವೆಲ್ಲರೂ ಅವನ ಮಕ್ಕಳೆಂದು ನೀವು ಶಿಕ್ಷಣ ಪಡೆಯುತ್ತೀರೋ, ಆಗ ಸಂಪೂರ್ಣ ಪರಿಹಾರವು ಸಿದ್ಧಗೊಳ್ಳುವುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi