ಹೆಸರು ಬೇಳೆಯ ಖಾದ್ಯಗಳು

ಶ್ರೀಕೃಷ್ಣ ಪಾಕಶಾಲೆ

– ಶ್ರೀಮತಿ ಎಂ.ಅಹಲ್ಯ

ಹೆಸರು ಬೇಳೆಯ ಲಡ್ಡು

ಬೇಕಾಗುವ ಪದಾರ್ಥಗಳು:

ಬೇಳೆ – 250 ಗ್ರಾಂ

ಸಕ್ಕರೆ – 200 ಗ್ರಾಂ

ಏಲಕ್ಕಿ – 1

ಗೋಡಂಬಿ ಚೂರುಗಳು – ಸ್ವಲ್ಪ

ಮಾಡುವ ವಿಧಾನ: ಹೆಸರುಬೇಳೆಯನ್ನು ಕೆಂಪು ಬಣ್ಣಕ್ಕೆ ಹುರಿದು ಸಕ್ಕರೆ ಮತ್ತು ಬೇಳೆಯನ್ನು ಸಣ್ಣಗೆ ಪುಡಿಮಾಡಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಪುನಃ ಬೇಳೆ ಪುಡಿಯನ್ನು ತುಪ್ಪದಲ್ಲಿ ಸ್ವಲ್ಪ ಬಿಸಿಮಾಡಿ ಕೊನೆಗೆ ಮೇಲೆ ತಿಳಿಸಿದ ಎಲ್ಲವನ್ನೂ ಸೇರಿಸಿ ಬಿಸಿಯಿರುವಾಗಲೇ ಉಂಡೆ ಕಟ್ಟಬೇಕು.

ಹೆಸರುಕಾಳಿನ ದೋಸೆ

ಬೇಕಾಗುವ ಪದಾರ್ಥಗಳು:

ಹೆಸರುಕಾಳು – 250 ಗ್ರಾಂ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಹೆಸರು ಕಾಳುಗಳನ್ನು ಮತ್ತು ಅಕ್ಕಿಯನ್ನು ರಾತ್ರಿ ತೊಳೆದು ಬೇರೆ ಬೇರೆ ನೀರಿನಲ್ಲಿ ನೆನೆಸಬೇಕು. ಮಾರನೇ ದಿನ ಎರಡನ್ನೂ ದೋಸೆಯ ಹದಕ್ಕೆ ರುಬ್ಬಿ ಉಪ್ಪು ಹಾಕಿ ದೋಸೆ ಹುಯ್ಯಬೇಕು. ಇದನ್ನು ಚಟ್ನಿಯೊಂದಿಗೆ ಸವಿಯಬಹುದು.

ಹೆಸರುಪ್ಪಿಟ್ಟು

ಬೇಕಾಗುವ ಪದಾರ್ಥಗಳು:

ಹೆಸರುಬೇಳೆ – 250 ಗ್ರಾಂ

ಹಸಿರುಮೆಣಸಿಕಾಯಿ – 6

ಕೊತ್ತಂಬರಿ ಸೊಪ್ಪು – ಸ್ವಲ್ಪ

ನಿಂಬೆ ಹಣ್ಣು – 1

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಚಿಕ್ಕ ಸೌಟಿನಷ್ಟು

ಸಾಸಿವೆ – ¼ ಚಮಚ

ಕರಿಬೇವು – 2 ಕಡ್ಡಿ

ಕಾಯಿತುರಿ – ಸ್ವಲ್ಪ

ಮಾಡುವ ವಿಧಾನ: ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿ, ತರಿತರಿಯಾಗಿ ರುಬ್ಬಿ ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿ, ಇಡ್ಲಿ ತರಹ ಮಾಡಿಕೊಳ್ಳಬೇಕು. ಅದನ್ನು ಪುಡಿಮಾಡಿಕೊಂಡು ಉಪ್ಪಿಟ್ಟು ತರಹ ಮಾಡಿಕೊಳ್ಳಬೇಕು.

ಹೆಸರುಪ್ಪಿಟ್ಟಿನ ಸಿಹಿ

ಬೇಕಾಗುವ ಪದಾರ್ಥಗಳು:

ಹೆಸರುಬೇಳೆ – 250 ಗ್ರಾಂ

ಬೆಲ್ಲ – 180 ಗ್ರಾಂ

ಕಾಯಿತುರಿ – ಸ್ವಲ್ಪ

ಏಲಕ್ಕಿ – 1

ಮಾಡುವ ವಿಧಾನ: ಬೇಳೆಯನ್ನು ಮೂರು ಗಂಟೆಗಳ ಕಾಲ ನೆನೆಸಿ ಇಡ್ಲಿ ಹದಕ್ಕೆ ರುಬ್ಬಿ, ಇಡ್ಲಿ ತರಹ ಬೇಯಿಸಿ ಅದನ್ನು ಪುಡಿಮಾಡಿಕೊಳ್ಳಬೇಕು. ಬೆಲ್ಲವನ್ನು ಪುಡಿಮಾಡಿ ಸ್ವಲ್ಪ ನೀರು ಸೇರಿಸಿ ಜಾಮೂನು ಪಾಕದಷ್ಟು ಆದಮೇಲೆ ಏಲಕ್ಕಿ ಪುಡಿ, ಹಿಟ್ಟಿನ ಮತ್ತು ಕಾಯಿತುರಿಯನ್ನು ಸೇರಿಸಿ ಸ್ವಲ್ಪ ಬಿಸಿಯಾದ ಅನಂತರ ಇಳಿಸಬೇಕು.

ಹೆಸರು ಕಡಿಯಾ

ಬೇಕಾಗುವ ಪದಾರ್ಥಗಳು:

ಹೆಸರುಬೇಳೆ – 250 ಗ್ರಾಂ

ಅಕ್ಕಿ – 1 ಮುಷ್ಟಿ

ಉದ್ದಿನಬೇಳೆ – 1 ಸ್ಪೂನ್‌

ಉಪ್ಪು – ರುಚಿಗೆ ತಕ್ಕಷ್ಟು

ಬೆಲ್ಲ – ಸ್ವಲ್ಪ

ಎಣ್ಣೆ – 5 ಸೌಟು

ಮಾಡುವ ವಿಧಾನ: ಬೇಳೆ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಬೇರೆ ಬೇರೆ 3 ಗಂಟೆಗಳ ಕಾಲ ನೆನೆಸಿ, ನೀರಿನಂಶ ತೆಗೆದು ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ, ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚಪ್ಪಟೆಯಾಗಿರುವ ಬಾಂಡ್ಲಿಗೆ ಎಣ್ಣೆ ಹಾಕಿ ಎರಡು ದೊನ್ನೆಗಳನ್ನು ಸೇರಿಸಿ ಹಿಟ್ಟು ಹಾಕಿಕೊಂಡು ಎಣ್ಣೆ ಕಾದನಂತರ ಕಡಿಯಾ ತರಹ ಹುಯ್ದು ಪುನಃ ಮಗುಚಿ ತೆಗೆಯಬೇಕು. ಇದನ್ನು ಚಟ್ನಿ ಮತ್ತು ಸಬ್ಬಕ್ಕಿ ಪಾಯಸ ಅಥವಾ ಶಾವಿಗೆ ಪಾಸಯಸದೊಂದಿಗೆ ಸೇವಿಸಬೇಕು. ಎಲ್ಲಾ ತಿಂಡಿಗಳನ್ನು ಶ್ರೀರಾಧಾಕೃಷ್ಣನಿಗೆ ಅರ್ಪಿಸಿ ಮನೆಯಲ್ಲಿ ಎಲ್ಲರೂ ಸೇವಿಸಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi