ಮಿತಿಮೀರಿ ಗಳಿಕೆ

ಜನರು ತಮಗೆ ಅಗತ್ಯವಾದುದಕ್ಕಿಂತ ಹೆಚ್ಚು ಗಳಿಸುತ್ತಾರೆಯೇ?

ಜನರು ಹಣ ಮತ್ತು ಇತರವುಗಳನ್ನು ತಮ್ಮ ಬದುಕಿನ ಅಗತ್ಯಕ್ಕಿಂತ ಹೆಚ್ಚು ಗಳಿಸುತ್ತಾರೆ ಅಥವಾ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಎನ್ನುವುದು ಸಮೀಕ್ಷೆಗಳಿಂದ ದೃಢಪಟ್ಟಿದೆ. ನಮ್ಮ ಬದುಕಿನ ಅಗತ್ಯಗಳಿಗೆ ಮತ್ತು ನಮ್ಮ ಭವಿಷ್ಯಕ್ಕಾಗಿಯೂ ನಮಗೆ ಹಣ ಬೇಕು, ನಿಜ. ಆದರೆ ಎಷ್ಟು ಬೇಕು? ಅದನ್ನು ನಾವು ನಿರ್ಧರಿಸಬೇಕು. ದುರಾಸೆಯ ವ್ಯಕ್ತಿಗೆ ಆಕಾಶವೇ ಮಿತಿಯಾದೀತು!

ಕೆಲವು ವರ್ಷಗಳ ಹಿಂದೆ 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಯಿತಲ್ಲವೆ? ಅಪಾರವಾಗಿ ಹಣ ಶೇಖರಿಸಿಕೊಂಡಿದ್ದವರಿಗೆ ಅದು ದೊಡ್ಡ ಹೊಡೆತ. ಕೆಲವರು ಕಪ್ಪು ಹಣವನ್ನು ಪರಿವರ್ತಿಸಲು ಪ್ರಯತ್ನಿಸಿ ಸಿಕ್ಕಿಬಿದ್ದರು. ಕೆಲವರು ಅಪಾರವಾಗಿ ತೆರಿಗೆ ನೀಡಿ ಸಂಗ್ರಹಿಸಿದ್ದ ಹಣವನ್ನು ಕ್ರಮಗೊಳಿಸಿದರು. ಕೆಲವರು ಏನೂ ಮಾಡಲಾಗದೆ ನೋಟುಗಳನ್ನು ಸುಟ್ಟು ಹಾಕಿದರು! ಅಪಾರ ಸೊತ್ತನ್ನು ಸಂಗ್ರಹಿಸಿಕೊಂಡರೆ ಆಗುವ ಕಥೆ ಇದು.

ಶ್ರೀಲ ಪ್ರಭುಪಾದರು ಹೇಳುತ್ತಾರೆ, ”ಜನರು ಇಂದು ಒಂದು ಕುಟುಂಬವನ್ನು ಚೆನ್ನಾಗಿ ನಡೆಸಲು, ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಲು ಎಷ್ಟು ಬೇಕೋ ಅಷ್ಟು ಧನದಿಂದ ತೃಪ್ತರಾಗುತ್ತಿಲ್ಲ. ಆ ಎರಡೂ ಉದ್ದೇಶಗಳೂ ಮಾನವನ ಜೀವನದಲ್ಲಿ ಅಗತ್ಯವಾದವುಗಳು. ಈಗ ಪ್ರತಿಯೊಬ್ಬನಿಗೂ ಎಂದಿಗೂ ತೃಪ್ತಿಯಾಗದ ಆಸೆಗಳನ್ನು ಪೂರೈಸಿಕೊಳ್ಳಲು ಅಧಿಕ ಹಣ ಬೇಕು. ಜನರ ಅಕ್ರಮವಾದ ಆಸೆಗಳಿಗೆ ತಕ್ಕ ಪ್ರಮಾಣದಲ್ಲಿ ಅವರು ಸಂಗ್ರಹಿಸಿದ ಹಣವನ್ನು ಮಾಯಾಶಕ್ತಿಯ ಪ್ರತಿನಿಧಿಗಳಾಗಿ ವೈದ್ಯರು, ವಕೀಲರು, ತೆರಿಗೆ ಅಧಿಕಾರಿಗಳು, ಸಂಘಸಂಸ್ಥೆಗಳು, ಸಂತರೆನಿಸಿಕೊಂಡವರು, ಬರ, ಭೂಕಂಪ, ಹೀಗೆ ವಿವಿಧ ನೈಸರ್ಗಿಕ ದುರಂತಗಳ ರೂಪದಲ್ಲಿ ಪ್ರಕೃತಿಯು ಕಿತ್ತುಕೊಂಡು ಬಿಡುತ್ತದೆ… ದಿಟವಾಗಿ ಅದು ನಿಸರ್ಗ ನಿಯಮ. ಧನವನ್ನು ಭಗವಂತನ ಸೇವೆಗಾಗಿ ವಿನಿಯೋಗಿಸದೆ ಹೋದರೆ ಅದನ್ನು ವ್ಯರ್ಥ ಶಕ್ತಿಯಾಗಿ ವ್ಯಾಜ್ಯಗಳಿಗೋ ರೋಗಗಳಿಗೋ ಯಾವುದೋ ಒಂದು ರೂಪದಲ್ಲಿ ವೆಚ್ಚಮಾಡಬೇಕಾಗುತ್ತದೆ. ಮೂರ್ಖರಿಗೆ ಈ ವಿಷಯಗಳನ್ನು ನೋಡುವ ಕಣ್ಣಿಲ್ಲ. ಆದ್ದರಿಂದ ಪರಮ ಪುರುಷನ ಕಟ್ಟಳೆಗಳಿಗೆ ಅವರು ತುತ್ತಾಗುತ್ತಾರೆ… “ (ಕೃಷ್ಣಪ್ರಜ್ಞೆಗೆ ಆರೋಹಣ, ಅಧ್ಯಾಯ 2).

ಮರುಳು ಮಾಡುವ ಹಣ

ನಮ್ಮ ಎಲ್ಲ ಕಷ್ಟಗಳಿಗೆ ಹಣವೇ ಅಮೃತವೆಂದು ನಾವು ಭಾವಿಸಿದರೆ, ನಾವು ಮೂರ್ಖರ ಸ್ವರ್ಗದಲ್ಲಿ ಇದ್ದೇವೆ ಎಂದು ಅರ್ಥ. ನಾವು ಸಂಗ್ರಹಿಸಿದ ಸೊತ್ತಿನ ವಿಷಯದಲ್ಲಿ ನಮಗೆ ತೃಪ್ತಿ ಇಲ್ಲ. “ಇನ್ನೂ ಬೇಕು” ಎನ್ನುವುದೇ ಮನದಾಸೆ. ಕೀರ್ತಿ, ಅಧಿಕಾರ, ಸ್ಥಾನಗಳಿಗೆ ಹಣವೇ ಮಾರ್ಗವೆಂದು ಪರಿಗಣಿಸಲಾಗಿದೆ. ಕಾಗದದ ಹಣವನ್ನು ಶೇಖರಿಸುವ ಅನ್ವೇಷಣೆಯಲ್ಲಿ ನಾವು ನಮ್ಮ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ ಮತ್ತು ನಮ್ಮ ಬಂಧುಬಾಂಧವರೊಂದಿಗೆ ಬಾಂಧವ್ಯ ರೂಢಿಸಿಕೊಳ್ಳುವುದು ಅಗತ್ಯವೆಂದು ಭಾವಿಸುವುದಿಲ್ಲ. ಲೌಕಿಕ ಲೋಕದ ವಸ್ತುಗಳನ್ನು ಖರೀದಿಸಲು ಹಣವು ನಮಗೆ ನೆರವಾಗುತ್ತದೆ, ನಿಜ. ಆದರೆ ಹಣಕ್ಕೆ ಸೀಮಿತ ಗುಣಗಳಿವೆ. ಹಣವು ಹೃದಯವನ್ನು ತಣಿಸುವುದಿಲ್ಲ, ಮನಸ್ಸನ್ನು ಶಾಂತಗೊಳಿಸುವುದಿಲ್ಲ ಮತ್ತು ದೀರ್ಘ ಕಾಲದ ನೆಮ್ಮದಿಯನ್ನು ನೀಡುವುದಿಲ್ಲ.

ಭಾಗವತವು ಹೇಳುತ್ತದೆ (4.22.33), “ಹಣ ಸಂಪಾದನೆ ಹೇಗೆ ಮಾಡಬೇಕು ಮತ್ತು ಅದನ್ನು ಇಂದ್ರಿಯ ಸುಖಕ್ಕೆ ಹೇಗೆ ಬಳಸಬೇಕು ಎನ್ನುವುದನ್ನು ಯೋಚಿಸುತ್ತಾ ಇದ್ದರೆ, ಅದು ಮಾನವ ಸಮಾಜದಲ್ಲಿ ಪ್ರತಿಯೊಬ್ಬರ ಹಿತವನ್ನೂ ಹಾಳುಗೆಡವುತ್ತದೆ…“

ನಾವು ಯಾವಾಗಲೂ ಯೋಜಿಸುತ್ತೇವೆ, “ನನಗೆ ಈವತ್ತು ಇಷ್ಟು ಸಂಪತ್ತು ಇದೆ. ಮತ್ತು ನನ್ನ ಯೋಜನೆಗಳಿಗೆ ಅನುಗುಣವಾಗಿ ಇನ್ನೂ ಹೆಚ್ಚು ಸಂಪಾದಿಸುತ್ತೇನೆ. ಈಗ ನನ್ನದು ಇಷ್ಟಿದೆ, ಮುಂದೆ ಹೆಚ್ಚಾಗುತ್ತಾ ಹೋಗುತ್ತದೆ.” (ಭಗವದ್ಗೀತೆ 16.13)

ಆಧ್ಯಾತ್ಮಿಕ ಸಂಪತ್ತಿಗಾಗಿ

ವೇದಗಳು ಸಂಪತ್ತನ್ನು ಅರ್ಥ ಎನ್ನುತ್ತವೆ. ಅರ್ಥ ಎಂದರೆ ಹಣ ಮತ್ತು ಅರ್ಥ ಗ್ರಹಿಕೆ. ಆದುದರಿಂದ ಅರ್ಥಪೂರ್ಣವಾದ ರೀತಿಯಲ್ಲಿ ಹಣವನ್ನು ಗಳಿಸಬೇಕು ಎಂದು ವೇದಗಳು ಹೇಳುತ್ತವೆ. ನಾವು ಆಧ್ಯಾತ್ಮಿಕ ಲೋಕಕ್ಕೆ ಸೇರಿದವರು ಮತ್ತು ತಾತ್ಕಾಲಿಕವಾದ ಈ ಲೌಕಿಕ ಲೋಕದ ಭಾಗವಲ್ಲ ಎಂದು ವೇದಗಳು ನಮಗೆ ನೆನಪು ಮಾಡಿಕೊಡುತ್ತವೆ. ನಾವು ಈ ಲೋಕದ ಗೀಳು ಬೆಳೆಸಿಕೊಳ್ಳಬಾರದು. ಏಕೆಂದರೆ, ನಾವು ಇಲ್ಲಿ ಏನೇನು ಶೇಖರಿಸಿ ಇಟ್ಟುಕೊಳ್ಳುತ್ತೇವೆಯೋ ಅದನ್ನೆಲ್ಲಾ ಒಂದಲ್ಲ ಒಂದು ದಿನ ಕಿತ್ತುಕೊಳ್ಳಲಾಗುತ್ತದೆ. ಸಾವಿನ ಪ್ರತಿನಿಧಿಗಳು ಬಾಗಿಲು ತಟ್ಟಿದಾಗ ಅವರಿಗೆ ಲಂಚ ನೀಡಲು ನಾವು ನಮ್ಮ ಕಾಗದದ ಹಣವನ್ನು ಬಳಸಲಾಗುವುದಿಲ್ಲ. ಹೀಗಾಗಿ ಅದು ನಿಷ್ಪ್ರಯೋಜಕವಾಗುತ್ತದೆ. ಈ ಲೋಕದಿಂದ ನಿರ್ಗಮಿಸುವಾಗ ಒಂದು ಕಾಸನ್ನೂ ತೆಗೆದುಕೊಂಡು ಹೋಗಲಾಗದು.

ನಮಗೆ ದುರಾಸೆ ಇರಬೇಕು! ಯಾವುದಕ್ಕಾಗಿ? ಆಧ್ಯಾತ್ಮಿಕ ಸಂಪತ್ತನ್ನು ಸಂಗ್ರಹಿಸಿಕೊಳ್ಳಲು. ಏಕೆಂದರೆ, ನಾವು ಶೇಖರಿಸುವ ಆಧ್ಯಾತ್ಮಿಕ ಸಂಪತ್ತು ನಮ್ಮ ಶಾಶ್ವತ ಆಧ್ಯಾತ್ಮಿಕ ಬ್ಯಾಂಕ್‌‍ ಖಾತೆಗೆ ಜಮಾ ಆಗುತ್ತದೆ. ಅದು ಎಂದಿಗೂ ಕಳೆದು ಹೋಗುವುದಿಲ್ಲ ಮತ್ತು ಶಾಶ್ವತ ಸುಖದ ದ್ವಾರವನ್ನು ತೆರೆಯುತ್ತದೆ.

ಮತ್ತು ಆಧ್ಯಾತ್ಮಿಕ ಸಂಪತ್ತು ಯಾವುದು? ಶ್ರೀ ಕೃಷ್ಣನ ಭಕ್ತಿ ಸೇವೆ. ಅವನ ಕುರಿತಾದ ಶ್ರವಣ, ಕೀರ್ತನೆ, ಸ್ಮರಣೆ, ವಂದನೆ, ಪಾದಸೇವೆ, ಅರ್ಚನೆ, ದಾಸ್ಯ, ಸಖ್ಯ, ಮತ್ತು ಆತ್ಮ ನಿವೇದನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi