ಪುತಿನ್ ಗೆ ಗೀತೆ

ಭಾರತ ಭೇಟಿ ವೇಳೆ ಪ್ರಧಾನಿ ಮೋದಿಯಿಂದ ಕೊಡುಗೆ

– ಮಂಜುನಾಥ್‌.ಇ.ಎ

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುತಿನ್‌ಗೆ ಪವಿತ್ರ ಗ್ರಂಥವಾದ ಭಗವದ್ಗೀತೆಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.‌ ಇದು ಇಸ್ಕಾನ್‌ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಬರೆದ ವ್ಯಾಖ್ಯಾನ ಎನ್ನುವುದು ಗಮನಾರ್ಹ.

ಪುತಿನ್‌ ಅವರಿಗೆ ಇದು ಅತ್ಯಂತ ವಿಶೇಷ ಉಡುಗೊರೆಯಾಗಿದೆ. ಭಾರತಕ್ಕೆ ಭೇಟಿ ನೀಡಿದ ಪುತಿನ್‌ ಅವರಿಗೆ ನೀಡಿರುವ ಈ ಉಡುಗೊರೆ ಭಾರತ ಎಷ್ಟು ವೈವಿಧ್ಯಮಯವಾಗಿದೆ, ಯಾವ ರೀತಿಯ ನಾಗರಿಕ ಪರಂಪರೆಯನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ಪವಿತ್ರ ಗ್ರಂಥವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂಬುದು ಗ್ರಂಥದ ಮೌಲ್ಯ ಎಷ್ಟೆಂಬುದನ್ನು ತಿಳಿಸುತ್ತದೆ.

ರಷ್ಯಾ ಅಧ್ಯಕ್ಷ ಪ್ರಸುತ್ತ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸವಾದ 7 ಲೋಕ ಕಲ್ಯಾಣ್‌ ಮಾರ್ಗದಲ್ಲಿ ಸ್ವಾಗತಿಸಿದರು. ಕುಶಲೋಪರಿಯ ನಂತರ ಪ್ರಧಾನಿ ಮೋದಿ ಭಗವದ್ಗೀತೆಯನ್ನು ನೀಡಿದರು. ಇದು 2011 ರಲ್ಲಿ ರಷ್ಯಾದ ನ್ಯಾಯಾಲಯದಲ್ಲಿ ಗೀತೆಯನ್ನು ನಿಷೇಧಿಸಲು ಪ್ರಕರಣವನ್ನು ದಾಖಲಿಸಿದ ನೆನಪುಗಳನ್ನು ಮರಳಿ ತಂದಿತು.

ಕಾಲವು ತುಂಬಾ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಕಾಲಚಕ್ರವು ಒಂದಲ್ಲ ಒಂದು ದಿನ ಅನಿವಾರ್ಯವಾಗಿ ತಿರುಗುತ್ತದೆ. ಆದರೆ ಈಗ ಕಾಲ ಬದಲಾಗಿದೆ ನೋಡಿ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧದಲ್ಲಿ ಕಾಲಚಕ್ರ ತಿರುಗಿದೆ. ಒಮ್ಮೆ ರಷ್ಯಾ ಭಗವದ್ಗೀತೆಯನ್ನು ನಿಷೇಧಿಸಲು ಹೊರಟಿತ್ತು. ಆದರೆ ಇಂದು, ಅದೇ ಹಿಂದೂ ಪವಿತ್ರ ಗ್ರಂಥವಾದ ಗೀತೆಯು ಪುತಿನ್‌ ಕೈ ಸೇರಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಪುತಿನ್‌ ಅವರು ಖುಷಿಯಿಂದ ಗೀತೆ ಪುಸ್ತಕವನ್ನು ಸ್ವೀಕರಿಸಿದ್ದಾರೆ.

ಏನಿದು ಪ್ರಕರಣ!?:

ಹೌದು, ಈ ಪ್ರಕರಣ 14 ವರ್ಷ ಹಳೆಯದು. 2011ರಲ್ಲಿ, ಇಸ್ಕಾನ್‌ ಪ್ರಕಟಣೆಯ ರಷ್ಯನ್‌ ಭಾಷಾಂತರದ ಗೀತೆಗೆ ಸಂಬಂಧಿಸಿದ ಪ್ರಕರಣವು ರಷ್ಯಾದ ಸೈಬೀರಿಯಾ ಪ್ರಾಂತ್ಯದ ಟಾಮ್ಸ್ಕನಲ್ಲಿರುವ ನ್ಯಾಯಾಲಯವನ್ನು ತಲುಪಿತು. ಪ್ರಭುಪಾದರು ಬರೆದ ಭಾವಾರ್ಥಗಳು “ಉಗ್ರಗಾಮಿ” ಭಾವ ಮತ್ತು ಧಾರ್ಮಿಕ ಅಸಹಿಷ್ಣುತೆಗಳನ್ನು ಹೊಂದಿವೆ, ಆದ್ದರಿಂದ ಈ ಪುಸ್ತಕವನ್ನು ಬ್ಯಾನ್‌ ಮಾಡಬೇಕು ಎಂಬ ಕರೆ ಕೆಲ “ಪಂಡಿತ” ರಿಂದ ಕೇಳಿಬಂದಿತು.

 ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಹಣೆಪಟ್ಟಿ ಕಟ್ಟಿ ನಿಷೇಧಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ರಷ್ಯಾದ ವಿದೇಶಾಂಗ ಸಚಿವಾಲಯವೂ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿತ್ತು. ಇದು ಭಾರತದ ಮನಸ್ಸಿನಲ್ಲಿ ರಷ್ಯಾ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿತ್ತು. ಆಗಿನ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ರಷ್ಯಾದ ರಾಯಭಾರಿಯೊಂದಿಗೆ ಮಾತನಾಡಿದ್ದರು. ಭಾರತದ ಅನೇಕ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು. ಜಾಗತಿಕವಾಗಿ ಹಿಂದೂ ಸಂಘಟನೆಗಳು ಧ್ವನಿ ಎತ್ತಿದ್ದವು.

ಅಂತಿಮವಾಗಿ, ಡಿಸೆಂಬರ್‌ 28, 2011ರಂದು ಗೀತೆ ಜಯಭೇರಿ ಬಾರಿಸಿತು. ರಷ್ಯಾದ ನ್ಯಾಯಾಲಯವು ಗೀತೆಯ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿತು. ಈ ಪವಿತ್ರ ಗ್ರಂಥದಲ್ಲಿ ಯಾವುದೇ ಉಗ್ರಗಾಮಿ ವಿಷಯವಿಲ್ಲ ಎಂದು ನ್ಯಾಯಾಲಯ ಒಪ್ಪಿಕೊಂಡಿತು. ಭಗವದ್ಗೀತೆಯ ರಷ್ಯನ್‌ ಅನುವಾದವನ್ನು ಫೆಡರಲ್‌ ಉಗ್ರಗಾಮಿ ಸಾಮಗ್ರಿಗಳ ಪಟ್ಟಿಗೆ ಸೇರಿಸುವ ಅಪಾಯವಿತ್ತು. ಆದಾಗ್ಯೂ ನ್ಯಾಯಾಲಯದ ತೀರ್ಪು ಇದನ್ನು ತಡೆಯಿತು. ನ್ಯಾಯಾಲಯವು ಇದನ್ನು ಕಾನೂನು ಬದ್ಧವೆಂದು ಪರಿಗಣಿಸಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi