– ಮಥುರೇಶ ದಾಸ
ಭಗವಂತನನ್ನು `ಪರಮ ಶ್ರೇಷ್ಠ’ ಎಂದು ಪರಿಭಾವಿಸುತ್ತ ಜನರು ಅನೇಕ ವೇಳೆ ಅವನನ್ನು ಆಕಾಶ, ವಾಯು ಅಥವಾ ಬಾಹ್ಯಾಕಾಶದಂತಹ ನೈಸರ್ಗಿಕ ಗೋಚರ ಅಂಶವೆಂದು ಕಲ್ಪಿಸಿಕೊಳ್ಳುತ್ತಾರೆ. ಆದಿವಾಸಿಗಳೂ ಕೂಡ ಪರ್ವತ, ಜಲಪಾತ, ಮಿಂಚು ಅಥವಾ ಭೂಕಂಪನದಂತಹ ನೈಸರ್ಗಿಕ ಆಕರ್ಷಣೆಗಳಿಗೆ ಬೆರಗಾಗಿ ಅವುಗಳನ್ನು ಪೂಜಿಸುತ್ತಾರೆ. ಇದೇ ಪ್ರವೃತ್ತಿ ನಾಗರಿಕ ಸಮಾಜದಲ್ಲಿಯೂ ಕಂಡುಬರುತ್ತದೆ. ಅತಿ ಶ್ರೇಷ್ಠವಾದ ಶೋಧವು ನಮ್ಮನ್ನು ಅಂತಿಮವಾಗಿ ಎಲ್ಲವೂ ಭಗವಂತ ಅಥವಾ ಜಗತ್ತೇ ದೇವರು ಎಂಬ ಕಲ್ಪನೆ, ಭಾವನೆಯತ್ತ ಒಯ್ಯುತ್ತದೆ. ಅದೇ ಸಂಪೂರ್ಣ, ಪರಿಪೂರ್ಣ ಅಸ್ತಿತ್ವ.
ಜಗತ್ತೇ ದೇವರು ಎಂಬ ಈ ಭಾವನೆಯೂ ಸೇರಿದಂತೆ ಭಗವಂತನ ಅನೇಕ ರೂಪ ಮತ್ತು ಕಲ್ಪನೆಗಳನ್ನು ವೈದಿಕ ಸಾಹಿತ್ಯ ವಿವರಿಸುತ್ತದೆ. ಈ ಜಗತ್ತೇ ದೇವರು ಎಂಬ ಭಾವನೆಯನ್ನು ವೈದಿಕ ವಿದ್ವಾಂಸರು ವಿರಾಟ್-ರೂಪ ಅಥವಾ ವಿಶ್ವ ರೂಪ ಎಂದು ಕರೆಯುತ್ತಾರೆ. ಲೌಕಿಕ ವಸ್ತುಗಳಿಂದ ರಚಿತವಾಗಿರುವ ವಿಶ್ವ ರೂಪವು ಭಗವಂತನ ಲೌಕಿಕ ಕಲ್ಪನೆಯಾಗಿದೆ. ಆದುದರಿಂದ ಪ್ರಾಪಂಚಿಕ ಮಾತ್ರ ಅಸ್ತಿತ್ವದಲ್ಲಿದೆ ಎಂದು ನಂಬುವ ಮತ್ತು ಭಗವಂತನನ್ನು ಸಾಂಪ್ರದಾಯಿಕವಾಗಿ ಪೂಜಿಸುವ ಸ್ವರೂಪವನ್ನು ನಿರಾಕರಿಸವ ಲೌಕಿಕವಾದಿಗಳು ಜಗತ್ತೇ ವಿಶ್ವ ಎಂಬ ಅಂಶವನ್ನು ಗ್ರಹಿಸಬಹುದು.

ಆದರೆ, ಜಗತ್ತೆ ಭಗವಂತ ಎಂದು ಹೇಳಿಬಿಡುವುದು ಅರ್ಧ-ಸತ್ಯ ಮಾತ್ರ. ಏಕೆಂದರೆ ಭೌತಿಕ ಪ್ರಕೃತಿಯು ಭಗವಂತನ ಒಂದು ಶಕ್ತಿಯೇ ವಿನಃ ಅವನ ಸ್ವಯಂ ಆತ್ಮ ಅಲ್ಲ. ಹೇಗೆ ಸೂರ್ಯನು ಸೂರ್ಯ ಬೆಳಕಿನಿಂದ ಭಿನ್ನವೋ ಅದೆ ರೀತಿ ಭಗವಂತನು ಸಹ ತನ್ನ ಶಕ್ತಿಗೆ ಅನನ್ಯ ಮತ್ತು ಭಿನ್ನ. ವೈದಿಕ ಮೂಲಗಳ ಪ್ರಕಾರ, ಪೂರ್ಣಸತ್ಯ ದೇವರೆಂದರೆ ದೇವೋತ್ತಮ ಪರಮ ಪುರುಷ ಕೃಷ್ಣ. ಅವನ ಲೌಕಿಕ ಶಕ್ತಿಯನ್ನು ನಾವು ವಿಶ್ವ ರೂಪದಲ್ಲಿ ಪರಿಭಾವಿಸುತ್ತೇವೆ. `ಪರಮ ನಿಯಂತ್ರಕ ಕೃಷ್ಣ. ಶಾಶ್ವತ, ಆನಂದಮಯ ಮತ್ತು ಆಧ್ಯಾತ್ಮಿಕ ದೇಹ ಉಳ್ಳವನು ಅವನು. ಅವನೇ ಎಲ್ಲಕ್ಕೂ ಮೂಲ. ಅವನಿಗೆ ಮೂಲ ಎಂಬುದಿಲ್ಲ. ಅವನೇ ಎಲ್ಲ ಕಾರಣಗಳಿಗೂ ಕಾರಣ.’ ಎಂದು ಬ್ರಹ್ಮ-ಸಂಹಿತೆ ಹೇಳುತ್ತದೆ.
ಆತಂಕವೆಂದರೆ, ಅತ್ಯಂತ ಶ್ರೇಷ್ಠರು ಯಾರೆಂಬ ಶೋಧನೆಯನ್ನು ಪ್ರಾಮಾಣಿಕವಾಗಿ ಮಾಡಿರುವ ಮತ್ತು ಜಗತ್ತೇ ದೇವರು ಎಂಬ ಕಲ್ಪನೆಗೆ ಬಂದಿರುವ ವ್ಯಕ್ತಿಗಳು ಅನಿವಾರ್ಯವೋ ಎಂಬಂತೆ ವ್ಯಕ್ತಿತ್ವದ ಎಲ್ಲ ಅಂಶಗಳನ್ನೂ ಹಿಂದೆಯೇ ಬಿಟ್ಟುಬಿಟ್ಟಿದ್ದಾರೆ. ವ್ಯಕ್ತಿಗಳು ತಮ್ಮ ಅನುಭವದಲ್ಲಿ ಅಪರಿಪೂರ್ಣರು, ಅಪೂರ್ಣರು ಮತ್ತು ಸೀಮಿತದವರು. ಆದುದರಿಂದ ಅಸೀಮಿತನಾದ ಭಗವಂತನು ನಿರಾಕಾರನಾಗಿರಬೇಕು.
ವಿಶ್ವ ರೂಪವು ನಿರಾಕಾರ ಶಕ್ತಿಯಿಂದ ಮಾಡಲ್ಪಟ್ಟಿದೆಯಾದರೂ ಅಂತಿಮವಾಗಿ ಭಗವಂತನು ನಿರಾಕಾರ ಎಂಬ ಅಭಿಮತವನ್ನು ಸರಿಪಡಿಸಲು ವೈದಿಕ ವಿದ್ವಾಂಸರು ಮುಂದಾಗುತ್ತಾರೆ. ಭಗವಂತನು ವ್ಯಕ್ತಿ ಎಂದು ಅವರು ಒತ್ತಾಯಪೂರ್ವಕವಾಗಿ ಹೇಳುತ್ತಾರೆ. ಆದರೆ ಅವನು ನಮ್ಮಂತೆ ಸೀಮಿತನಲ್ಲ, ಎನ್ನುತ್ತಾರೆ. ಅವನು ಪರಿಪೂರ್ಣ, ಪರಿಪಕ್ವ ಮತ್ತು ಅಸೀಮಿತ. ಸೀಮಿತ ವ್ಯಕ್ತಿಗಳಾದ ನಾವು ಅವನತ್ತ ನಮ್ಮ ಗಮನ ಮತ್ತು ಸೇವೆಯನ್ನು ಪುನರ್ ರೂಪಿಸಿಕೊಂಡರೆ ನಾವು ಅವನ ನಿರಾಕಾರ ಲೌಕಿಕ ಶಕ್ತಿಗಿಂತ ಮೇಲೇಳುತ್ತೇವೆ ಮತ್ತು ಅವನ ಪರಿವಾರದ ಭಾಗವಾಗಿ ನಮ್ಮ ಪರಿಪೂರ್ಣತೆಯನ್ನು ಮತ್ತೆ ಗಳಿಸುತ್ತೇವೆ. ಕೃಷ್ಣ ಘೋಷಿಸುತ್ತಾನೆ, `ಲೌಕಿಕ ಸ್ವಭಾವದ ಮೂರು ಸ್ವರೂಪಗಳನ್ನು ಹೊಂದಿರುವ ನನ್ನ ದೈವಿಕ ಶಕ್ತಿಯನ್ನು ಗೆಲ್ಲುವುದು ಕಷ್ಟ. ಆದರೆ ನನಗೆ ಶರಣಾದವರು ಅದನ್ನು ದಾಟಿ ಮುಂದೆ ಹೋಗಬಲ್ಲರು.’
ವ್ಯಕ್ತಿತ್ವದ ಅಭಿಪ್ರಾಯದತ್ತ ಪ್ರಾಮಾಣಿಕ ಶೋಧಕರನ್ನು ಮತ್ತೆ ತರಲು ವೈದಿಕ ಸಾಹಿತ್ಯವು ವಿಶ್ವವನ್ನು ಭಗವಂತನ ದೇಹದೊಂದಿಗೆ ಹೆಚ್ಚೂಕಮ್ಮಿ ಕಲ್ಪಿತ ಹೋಲಿಕೆ ಮಾಡುತ್ತದೆ. ಇಲ್ಲಿ, ಶ್ರೀಮದ್ ಭಾಗವತದ 10ನೇ ಸ್ಕಂಧದಲ್ಲಿನ ಪ್ರಾರ್ಥನೆಯೊಂದನ್ನು ಉದ್ದರಿಸಲಾಗಿದೆ ಇದು ವಿಶ್ವ ರೂಪದ ಅನೇಕ ವರ್ಣನೆಗಳಲ್ಲಿ ಒಂದು-
“ಓ! ನನ್ನ ಪ್ರೀತಿಯ ದೇವರೆ, ಬೆಂಕಿ ನಿನ್ನ ಬಾಯಿ, ಭೂಮಿ ನಿನ್ನ ಪಾದ, ಸೂರ್ಯ ನಿನ್ನ ಕಣ್ಣು. ಆಕಾಶವು ನಿನ್ನ ನಾಭಿ ಮತ್ತು ನಿನ್ನ ಕಿವಿಗಳು ದಿಕ್ಕುಗಳು. ಅಂತರಿಕ್ಷ ನಿನ್ನ ಶಿರ, ದೇವತೆಗಳು ನಿನ್ನ ಬಾಹುಗಳು, ಸಮುದ್ರಗಳು ನಿನ್ನ ಉದರ ಮತ್ತು ಗಾಳಿ ಹಾಗೂ ವಾಯು ನಿನ್ನ ಶಕ್ತಿ ಮತ್ತು ಚೈತನ್ಯ. ಎಲ್ಲ ಗಿಡ ಮತ್ತು ಸಸ್ಯಗಳು ನಿನ್ನ ದೇಹದ ಕೂದಲು: ಮೋಡ ನಿನ್ನ ಕೂದಲು, ಪರ್ವತಗಳು ನಿನ್ನ ಮೂಳೆ ಮತ್ತು ಉಗುರು, ಹಗಲು-ರಾತ್ರಿಗಳು ನಿನ್ನ ಕಣ್ಣು ಗುಡ್ಡೆಯ ಮಿನುಗು ಮತ್ತು ಮಳೆಯು ನಿನ್ನ ರೇತಸ್ಸು .”
ಪುನಃ ಎರಡನೆಯ ಸ್ಕಂಧದಲ್ಲಿ –
“ಅವನ ದೇಹದ ಮೇಲಿನ ಕೂದಲುಗಳು ಸಸ್ಯ ವರ್ಗಗಳಿಗೆ ಕಾರಣ… ಅವನ ದೇಹ ಮತ್ತು ಮುಖದ ಮೇಲಿನ ಕೂದಲು ಮೋಡಗಳಿಗೆ ಸಂಗ್ರಹಾಲಯ ಮತ್ತು ಅವನ ಉಗುರುಗಳು ವಿದ್ಯುತ್, ಕಲ್ಲು ಮತ್ತು ಕಬ್ಬಿಣದ ಅದುರಿನ ಉತ್ಪತ್ತಿ ತಾಣ. ಭಗವಂತನ ಹಿಂಭಾಗವು ಎಲ್ಲ ರೀತಿಯ ಹತಾಶೆ, ಮೌಢ್ಯ ಮತ್ತು ಅನೈತಿಕತೆಯ ಸ್ಥಳ. ಅವನ ರಕ್ತನಾಳಗಳಿಂದ ಪ್ರಮುಖ ನದಿಗಳು ಮತ್ತು ಉಪ ನದಿಗಳು ಹರಿಯುತ್ತವೆ ಹಾಗೂ ಅವನ ಮೂಳೆಗಳಲ್ಲಿ ಬೃಹತ್ ಪರ್ವತಗಳು.”
ವಿಶ್ವರೂಪ ಕುರಿತಂತೆ ಭಗವದ್ಗೀತೆಯಲ್ಲಿ ಅತ್ಯುತ್ತಮ ವಿವರಗಳಿವೆ. ಆದರೆ ಗೀತೆಯಲ್ಲಿ ವಿಶ್ವ ರೂಪವು ಕಾವ್ಯಮಯವಾಗಿ ಮಾತ್ರ ಕಂಡುಬರುವುದಿಲ್ಲ. ಅದು ಉಗ್ರ, ಸರ್ವ-ವಿನಾಶಕ, ಬಹು-ಬಾಯಿಯ ವಿಕಾರ ರೂಪಿಯಾಗಿ ಕಾಣುತ್ತದೆ. ಈ ಭಯಾನಕ ಅತಿಮಾನುಷ ರೂಪದ ಮುಂದೆ ನಡುಗುತ್ತ, ಅರ್ಜುನ ಪ್ರಾರ್ಥನೆ ಸಲ್ಲಿಸುತ್ತಾನೆ. ಅದರಿಂದ ಆಯ್ದವು ಇಲ್ಲಿವೆ :
`ವಿಶ್ವೇಶ್ವರನೇ, ವಿಶ್ವರೂಪನೇ, ನಿನ್ನ ದೇಹದಲ್ಲಿ ನಾನು ಎಲ್ಲೆಲ್ಲೂ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ತೋಳುಗಳನ್ನೂ ಉದರಗಳನ್ನೂ ಬಾಯಿಗಳನ್ನೂ ಮತ್ತು ಕಣ್ಣುಗಳನ್ನೂ ಕಾಣುತ್ತಿದ್ದೇನೆ. ನಿನ್ನಲ್ಲಿ ಆದಿಯನ್ನಾಗಲಿ, ಮಧ್ಯವನ್ನಾಗಲಿ ಮತ್ತು ಅಂತ್ಯವನ್ನಾಗಲಿ ಕಾಣಲಾರೆನು. ನಿನಗೆ ಅಸಂಖ್ಯ ಬಾಹುಗಳಿವೆ. ಸೂರ್ಯ ಚಂದ್ರರು ನಿನ್ನ ಕಣ್ಣುಗಳು. ಪ್ರಜ್ವಲಿಸುವ ಉರಿಯು ನಿನ್ನ ಬಾಯಿಯಿಂದ ಹೊರಬರುತ್ತಿರುವುದನ್ನೂ ನಿನ್ನ ಪ್ರಕಾಶವು ಇಡೀ ವಿಶ್ವವನ್ನು ಸುಡುತ್ತಿರುವುದನ್ನೂ ಕಾಣುತ್ತಿದ್ದೇನೆ. ಎಲ್ಲ ಪ್ರಭುಗಳ ಪ್ರಭುವೇ, ಎಲ್ಲ ಲೋಕಗಳ ಆಶ್ರಯನೇ ನನ್ನಲ್ಲಿ ಕೃಪೆ ಮಾಡು. ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ ಭಯಂಕರವಾದ ಹಲ್ಲುಗಳನ್ನೂ ಕಂಡು ನಾನು ನನ್ನ ಸಮತೋಲನವನ್ನು ಉಳಿಸಿಕೊಳ್ಳಲಾರೆ. ಎಲ್ಲ ರೀತಿಯಲ್ಲಿಯೂ ನಾನು ದಿಗ್ಭ್ರಾಂತನಾಗಿದ್ದೇನೆ. ಎಲ್ಲರೂ ವೇಗವಾಗಿ ನಿನ್ನ ಭಯಂಕರ ಬಾಯಿಗಳನ್ನು ಪ್ರವೇಶಿಸುತ್ತಿದ್ದಾರೆ. ಪತಂಗಗಳು ತಮ್ಮ ನಾಶಕ್ಕಾಗಿ ಉರಿಯುತ್ತಿರುವ ಜ್ವಾಲೆಯನ್ನು ಪ್ರವೇಶಿಸುವಂತೆ ಈ ಜನರು ನಿನ್ನ ಬಾಯಿಯೊಳಗೆ ಪ್ರವೇಶಿಸುತ್ತಿದ್ದಾರೆ.’

ವಿಶ್ವ ರೂಪ ಕುರಿತಂತೆ ಗೀತೆಯ ವಿವರವು ಎಷ್ಟು ಕಣ್ಣಿಗೆ ಕಟ್ಟುವಂತಿದೆ ಮತ್ತು ಅರ್ಜುನನ ಭಯವು ಎಷ್ಟು ಸ್ಪರ್ಶ ಗೋಚರವೆನಿಸಿದೆಯೆಂದರೆ ವಿಶ್ವ ರೂಪವು ಕಲ್ಪಿತ ಎಂಬ ಸಮರ್ಥನೆಯು ಕುತೂಹಲವೆನಿಸುತ್ತದೆ. ಅತಿ ಮಾನುಷವು ಅರ್ಜುನನನ್ನು ಭಯಪಡಿಸಿತಲ್ಲದೆ ಅದು ಅವನೊಂದಿಗೆ ಮಾತನಾಡಿತು. ಗೀತೆಯನ್ನು ಬೋಧಿಸಿದ ಕುರುಕ್ಷೇತ್ರದಲ್ಲಿ ಕೃಷ್ಣನು ಸ್ವತಃ ಪ್ರತ್ಯಕ್ಷನಾಗಿದ್ದ ಮತ್ತು ಅವನು ತನ್ನ ವಿಶ್ವ ರೂಪವನ್ನು ನೇರವಾಗಿ ಪ್ರದರ್ಶಿಸಿದ. ಆದರೂ ನಾವು ಸಾಮಾನ್ಯವಾಗಿ ಇಷ್ಟು ಹೇಳಬಹುದು – ಕೃಷ್ಣನು ವಿಶ್ವ ರೂಪದಲ್ಲಿ ವೈಯಕ್ತಿಕವಾಗಿ ಪ್ರತ್ಯಕ್ಷವಾಗಿಲ್ಲ. ಮತ್ತು ಭಗವಂತನನ್ನು ಅರಿಯುವ ಅಲೌಕಿಕ, ಹಾದಿಯಲ್ಲಿ ಸಾಗುವ ಲೌಕಿಕವಾದಿಗಳಿಗೆ ಅದರ ಮೂರ್ತ ರೂಪವು ಆರಂಭದ ಸಾಧನ. ಶ್ರೀಮದ್ ಭಾಗವತ ಕೂಡ ಇದನ್ನು ಸ್ಪಷ್ಟಪಡಿಸುತ್ತದೆ (1.3.10) :
`ವಿಶ್ವ ರೂಪದ ಭಾವನೆಯು ಕಲ್ಪಿತ. ಭಗವಂತನಿಗೆ ರೂಪವಿದೆಯೆಂಬ ಅಭಿಪ್ರಾಯಕ್ಕೆ ಅಲ್ಪ ಜ್ಞಾನಿಗಳಿಗೆ ಹೊಂದಿಕೊಳ್ಳಲು ಇದರಿಂದ ಸಾಧ್ಯ. ಆದರೆ ವಾಸ್ತವವಾಗಿ ಭಗವಂತನಿಗೆ ಲೌಕಿಕ ರೂಪವಿಲ್ಲ. ಕೃಷ್ಣನ ಮೂಲ ರೂಪವು ಅವನ ಸತ್-ಚಿದ್-ಆನಂದ ಆಧ್ಯಾತ್ಮಿಕ ದೇಹ ಮತ್ತು ಅವನ ಪರಮ ವ್ಯಕ್ತಿತ್ವವು ಅಲೌಕಿಕ ದೇಹ.’
ಆದರೆ, ಕುರುಕ್ಷೇತ್ರದಲ್ಲಿ ಕೃಷ್ಣ ಪ್ರತ್ಯಕ್ಷನಾಗಿದ್ದರಿಂದ ವಿಶ್ವ ರೂಪವು ನೈಜವಾಗಿ ಕಂಡಿತು. ಎಲ್ಲ ಉಗ್ರತೆಯಿಂದ ದಿಗ್ಭ್ರಾಂತನಾದ ಅರ್ಜುನನು ಕೇಳಿದ,
“ಪ್ರಭುಗಳ ಪ್ರಭುವೇ, ಉಗ್ರ ರೂಪನೇ, ದಯೆಯಿಟ್ಟು ನೀನು ಯಾರೆಂದು ಹೇಳು. ನನ್ನಲ್ಲಿ ಕೃಪೆ ಇಡು. ನೀನು ಆದಿ ಪುರುಷನು. ನಿನ್ನ ಬಗೆಗೆ ತಿಳಿಯ ಬಯಸುತ್ತೇನೆ. ನಿನ್ನ ಉದ್ದೇಶವನ್ನು ತಿಳಿಯಲಾರೆನು. ಆದುದರಿಂದ ನಿನ್ನನ್ನು ತಿಳಿಯಬಯಸುತ್ತೇನೆ.”
ಈ ಕೋರಿಕೆಗೆ ಕೃಷ್ಣ ಉತ್ತರಿಸಿದ ,
“ನಾನು ಕಾಲನು. ಎಲ್ಲ ಲೋಕಗಳ ನಾಶಕಾರ. ಎಲ್ಲ ಜನರನ್ನು ನಾಶ ಮಾಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಬಿಟ್ಟು (ಪಾಂಡವರನ್ನು) ಎರಡು ಪಕ್ಷಗಳ ಎಲ್ಲ ಯೋಧರೂ ಕೊಲ್ಲಲ್ಪಡುವರು.”
ಆದುದರಿಂದ ಅರ್ಜುನನ ಮುಂದಿದ್ದ ಭಯ ರೂಪಿಯು ಕಾಲನ ಪ್ರತಿನಿಧಿ. ಭಗವಂತನ ಮತ್ತೊಂದು ಶಕ್ತಿಯಾದ ಕಾಲನು ವಿಶ್ವ ಮತ್ತು ಅದರೊಳಗಿನ ಎಲ್ಲವನ್ನೂ ವ್ಯಾಪಿಸಿ, ನಿಯಂತ್ರಿಸಿ ಮತ್ತು ಅಂತಿಮವಾಗಿ ನಾಶಪಡಿಸುತ್ತದೆ. ಕಾಲನು ತನ್ನ ಉಗ್ರವಾದ ಹಲ್ಲುಗಳಿಂದ ನಮ್ಮನ್ನು ಚುಚ್ಚಿ ಭಕ್ಷಿಸುವ ಅಮಾನುಷ.
ಆದರೆ ಅರ್ಜುನ ಮತ್ತು ಅವನ ಸೋದರರರಿಗೆ ಯಾಕೆ ತಾರತಮ್ಯ? ಕೃಷ್ಣನು ತನ್ನ ಮಿತ್ರರಿಗೆ ಪಕ್ಷಪಾತ ತೋರಿದನೇ? ಅಥವಾ ತನ್ನ ಭಕ್ತರಿಗೆ ಆದ್ಯತೆ ನೀಡಿದನೆ?
ಹಾಗೆ ಏನೂ ಅಲ್ಲ. ಹೌದು, ಕೃಷ್ಣನು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಅರ್ಜುನನನ್ನು ರಕ್ಷಿಸಿದ. ಆದರೆ, ಲೌಕಿಕ ಬದುಕಿನ ಭಾವನೆಯನ್ನು ಬಿಟ್ಟು ಅಲೌಕಿಕತೆಗೆ ಬರುವ ಎಲ್ಲ ಭಕ್ತರಿಗೂ ಭಗವಂತನ ಈ ರಕ್ಷಣೆ ಇದೆ. ಕಾಲವು ನಿಯಂತ್ರಿಸಿ ನಾಶಪಡಿಸುವ ಲೌಕಿಕ ದೇಹಗಳು ನಾವಲ್ಲ, ನಾವು ದೇಹದೊಳಗೇ ಶಾಶ್ವತ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳು ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಅವನಿಂದ ಪ್ರತ್ಯೇಕವಾಗಿ ನಮ್ಮ ಎಲ್ಲ ಅಪೇಕ್ಷೆಗಳನ್ನು ಲೌಕಿಕ ಸ್ವಭಾವದ ಪಾರುಪತ್ಯದ ಮೂಲಕ ಅನುಭವಿಸಲು ಕೃಷ್ಣನು ನಮಗೆ ಈ ದೇಹ ನೀಡಿದ್ದಾನೆ. ಆದರೆ ಪರಿಶುದ್ಧ ಆತ್ಮವಾಗಿ ನಮಗೆ ಅದೆಲ್ಲ ಬೇಡ. ನಮ್ಮ ಶಾಶ್ವತ ಸ್ಥಾನವು ದೇವೋತ್ತಮ ಪರಮ ಪುರುಷ ಕೃಷ್ಣನ ಸೇವೆ ಗೈಯುತ್ತ ಆನಂದಮಯ, ಸಾವುರಹಿತ ಬದುಕನ್ನು ಅನುಭವಿಸುವುದೇ ಆಗಿದೆ.
ಕೃಷ್ಣನು ಪ್ರೀತಿಯಿಂದ ಅವನ ಸೇವೆಯಿಂದ ನಮ್ಮನ್ನು ಮುಕ್ತಗೊಳಿಸಿದರೂ ನಮ್ಮಷ್ಟಕ್ಕೆ ನಾವು ಬದುಕನ್ನು ಅನುಭವಿಸುವ ಅಪೇಕ್ಷೆಯು ಮಾಯೆ ಎಂದು ಅವನು ತನ್ನ ಕಾಲ ಶಕ್ತಿ ಮೂಲಕ ನಮಗೆ ನೆನಪು ಮಾಡಿಕೊಡುತ್ತಾನೆ. ಬೆರಳೊಂದು ಇಡೀ ದೇಹದಿಂದ ಪ್ರತ್ಯೇಕಗೊಂಡು ಹೇಗೆ ಪುಷ್ಟೀಕರಿಸಲಾಗುವುದಿಲ್ಲವೋ ಅದೇ ರೀತಿ ಭಗವಂತನಿಂದ ಬೇರ್ಪಟ್ಟು ನಾವು ಸುಖವಾಗಿರಲು ಸಾಧ್ಯವಿಲ್ಲ. ಭೌತಿಕ ಪ್ರಕೃತಿಯ ಮೂಲಕ ನಾವು ಒಂದು ಬದುಕಿನಿಂದ ಇನ್ನೊಂದು ಬದುಕಿಗೆ ಅಲೆದಾಡಿದರೂ ನಾವು ಪರೋಕ್ಷವಾಗಿ ಅವನ ಜೊತೆ ಸಂಪರ್ಕ ಹೊಂದಿದ್ದೇವೆ. ಏಕೆಂದರೆ, ಭೌತಿಕ ಪ್ರಕೃತಿಯು ಅವನ ಶಕ್ತಿ. ಕಾಲವು ಪದೇ ಪದೆ ನಮ್ಮ ಲೌಕಿಕ ದೇಹ ಮತ್ತು ಎಲ್ಲ ಲೌಕಿಕ ಸ್ವಭಾವದ ರೂಪಗಳನ್ನು ನಾಶ ಪಡಿಸುತ್ತದೆ ಎಂಬ ವಾಸ್ತವಾಂಶದ ಪಾಠವನ್ನು ನಾವು ಈ ಅಲೆದಾಟದಲ್ಲಿ ಕಲಿಯಬೇಕಾಗಿದೆ.
ಕೃಷ್ಣನ ಪರಿಶುದ್ಧ ಭಕ್ತರಾದ ಕಾರಣ ಅರ್ಜುನ ಮತ್ತು ಅವನ ಸಹೋದರರಿಗೆ ಕಾಲನ ವಿನಾಶದಿಂದ ವಿನಾಯಿತಿ ನೀಡಲಾಗಿತ್ತು. ತಮ್ಮ ದೊರೆ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ ಅವರಿಗೆ ಲೌಕಿಕ ವಿಶ್ವದಲ್ಲಿ ಆಸಕ್ತಿ ಇರಲಿಲ್ಲ. ಅವರ ಆ ಭಕ್ತಿಯು ಅಲೌಕಿಕ ಮತ್ತು ಶಾಶ್ವತ. ಅದು ಕಾಲನ ವ್ಯಾಪ್ತಿ ಮೀರಿದುದು. ಅರ್ಜುನ ಮಾತ್ರ ಅಲ್ಲ, ಎಲ್ಲ ಪರಿಶುದ್ಧ ಭಕ್ತರೂ ಕಾಲನ ಭಕ್ಷದಿಂದ ರಕ್ಷಿಸಲ್ಪಡುವರು. ಕಾಲಕ್ರಮೇಣ ಭಕ್ತರ ದೇಹಗಳು ನಾಶವಾದರೂ ಅವರು ಸಾವನಪ್ಪಿದರೆಂದು ಹೇಳುವುದು ಸರಿಯಲ್ಲ.

ವಿಶ್ವ ರೂಪವನ್ನು ಕಂಡ ಮೇಲೆ ಎರಡು ಭುಜದ ಮೂಲ ರೂಪವನ್ನು ತೋರಲು ಅರ್ಜುನನು ಭಗವಂತನಲ್ಲಿ ಕೋರಿದ. ಕೃಷ್ಣ ಅದಕ್ಕೆ ಒಪ್ಪಿದ. ಭಕ್ತನಾಗಿ ಅರ್ಜುನನು ಮೂಲ ದೇವೋತ್ತಮ ಪರಮ ಪುರುಷ ಕೃಷ್ಣನನ್ನು ವಿಶೇಷವಾಗಿ ಪ್ರೀತಿಸುತ್ತಿದ್ದ. ವಿಶ್ವ ರೂಪವನ್ನು ಅವನು ಮೆಚ್ಚಿಕೊಂಡಿದ್ದ. ಅದು ಅವನಿಗೆ ಅಚ್ಚರಿ ಉಂಟು ಮಾಡಿತ್ತು ಮತ್ತು ಅವನಿಂದ ಪ್ರಾರ್ಥನೆ ಹೊರಹೊಮ್ಮುವಂತೆ ಮಾಡಿತ್ತು. ಆದರೆ ವಿಶ್ವ ರೂಪದ ಭಯಾನಕ ಸ್ವರೂಪವನ್ನು ನೀವು ಪ್ರೀತಿಸಲಾರಿರಿ. ಆದುದರಿಂದ ಅಂತಿಮವಾಗಿ ಅರ್ಜುನನಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ನಾವೂ ಕೂಡ ಅರ್ಜುನನ ಉದಾಹರಣೆಯನ್ನು ಅನುಸರಿಸಬಹುದು. ಭಗವಂತನ ವಿಶ್ವರೂಪಕ್ಕೆ ಮನಸೋಲದೆ ಕೃಷ್ಣನ ಸೇವೆ ಮಾಡುವ ಅಪೇಕ್ಷೆ ಹೊಂದೋಣ.






Leave a Reply