ದೈವಪ್ರಜ್ಞೆಯನ್ನು ದೇವರೇ ಬೋಧಿಸುತ್ತಿದ್ದಾನೆ

ಪರಮಪೂಜ್ಯ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರ ಜೊತೆ ಟಿ.ವಿ. ಸಂದರ್ಶಕರೊಬ್ಬರು ನಡೆಸಿದ ಮಾತುಕತೆಯನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಸಂಭಾಷಣೆಯು ಅಮೆರಿಕದ ಫ್ಲಾರಿಡಾ ಎಂಬಲ್ಲಿನ ಗೈನ್ಸ್‌ವೆಲ್ಲಿ ಎನ್ನುವ ಸ್ಥಳದಲ್ಲಿ 1971ರ ಜುಲೈ ತಿಂಗಳ 29ನೇ ತಾರೀಖಿನಂದು ನಡೆಯಿತು.

ಸಂದರ್ಶಕ: ಪರಮ ಪೂಜ್ಯರೆ, ನೀವು ಹಾಗೂ ನಿಮ್ಮ ಅನುಯಾಯಿಗಳು ಭಗವಾನ್ ಚೈತನ್ಯರ ಹೆಜ್ಜೆ ಗುರುತುಗಳನ್ನು ಹಿಡಿದು ಸಾಗುತ್ತಿರುವುದಾಗಿ ಹೇಳುತ್ತೀರಿ. ಚೈತನ್ಯರು ಈಗ್ಗೆ ಐನೂರು ವರ್ಷಗಳ ಹಿಂದೆ ಈ ಜಗತ್ತಿನಲ್ಲಿ ಅವತರಿಸಿದವರಲ್ಲವೆ?

ಪ್ರಭುಪಾದ: ಹೌದು.

ಸಂದರ್ಶಕ: ಚೈತನ್ಯರು ಭಾರತದಲ್ಲಿ ಅವತರಿಸಿದರು.

ಪ್ರಭುಪಾದ: ಹೌದು. ಭಾರತದಲ್ಲಿ ಅವತರಿಸಿದರು. ಆದ್ದರಿಂದ ಅವರು ಸ್ವಯಂ ಕೃಷ್ಣನೇ ಹೌದು. ಕೃಷ್ಣನನ್ನು ಹೇಗೆ ಪ್ರೀತಿಸಬೇಕೆಂಬುದನ್ನು ಅವರು ಬೋಧಿಸುತ್ತಿದ್ದಾರೆ. ಅವರ ಬೋಧನಾ ವಿಧಾನ ಅತ್ಯಂತ ಅಧಿಕೃತವಾದದ್ದು. ಉದಾಹರಣೆಗೆ ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ನೀವು ನುರಿತವರು.

ಹೊಸದಾಗಿ ಬಂದು ಕೆಲಸಕ್ಕೆ ಸೇರಿದ ಒಬ್ಬರು ಕಾರ್ಯಮಗ್ನರಾಗಿರುವಾಗ ನೀವು ವೈಯಕ್ತಿಕವಾಗಿ ಮುಂದೆ ನಿಂತು ಅವರಿಗೆ ಹೀಗೆ ಮಾಡತಕ್ಕದ್ದು’ ಎಂದು ಹೇಳಿಕೊಡುತ್ತೀರಿ. ಇದೀಗ ಅಧಿಕೃತ. ಹೀಗೆಯೇ ಭಗವಂತನು ಭಗವಾನ್ ಶ್ರೀಕೃಷ್ಣ ಚೈತನ್ಯರಾಗಿ ಅವತರಿಸಿದಾಗ, ಆ ದೇವರೇ ದೈವಪ್ರಜ್ಞೆಯನ್ನು ಬೋಧಿಸುತ್ತಿದ್ದಾನೆ.

ಭಗವದ್ಗೀತೆಯನ್ನೇ ತೆಗೆದುಕೊಳ್ಳಿ ಅಲ್ಲಿ ಭಗವಂತನು ತನ್ನನ್ನು ಕುರಿತು ಮಾತನಾಡುತ್ತಿದ್ದಾನೆ. ಕೊನೆಯಲ್ಲಿ ಅವನು, “ಸುಮ್ಮನೆ ನನಗೆ ಶರಣಾಗತನಾಗು. ನಿನ್ನನ್ನು ಸಲಹುವ ಕೆಲಸ ನನಗಿರಲಿ” ಎಂದ. ಜನ ಇದನ್ನು ತಪ್ಪಾಗಿ ಅರ್ಥೈಸಿಕೊಂಡರು.

ಆದ್ದರಿಂದ ಕೃಷ್ಣನೇ ಭಗವಾನ್ ಚೈತನ್ಯರಾಗಿ ಮರಳಿ ಭೂಮಿಗೆ ಬಂದ; ಕೃಷ್ಣನಿಗೆ ಹೇಗೆ ಶರಣಾಗುವುದೆಂದು ಜನರಿಗೆ ತಿಳಿಯ ಹೇಳಲು ಆಗಮಿಸಿದ. ಮತ್ತು ನಾವು ಭಗವಾನ್ ಚೈತನ್ಯರ ಹೆಜ್ಜೆ ಜಾಡಿನಲ್ಲಿ ನಡೆಯುತ್ತಿದ್ದೇವಾದ್ದರಿಂದ, ಈ ಬೋಧನಾ ವಿಧಾನ ಎಷ್ಟು ಉದಾತ್ತವಾದುದೆಂದರೆ ಕೃಷ್ಣನ ಬಗೆಗೆ ಏನೂ ತಿಳಿಯದಿದ್ದ ವಿದೇಶಿಯರು ಕೂಡ ಕೃಷ್ಣ ಭಕ್ತರನ್ನು ಅನುಸರಿಸುತ್ತಿದ್ದಾರೆ.

ಈ ಭಕ್ತಿ ವಿಧಾನವು ತುಂಬ ಶಕ್ತಿಯುತವಾದದ್ದು. ನಾನು ಇಲ್ಲಿಗೆ (ಅಮೆರಿಕಕ್ಕೆ) ಬಂದುದರ ಉದ್ದೇಶವೇ ಅದು. ”ಈ ಧರ್ಮಕ್ಕಿಂತ ಆ ಧರ್ಮ ದೊಡ್ಡದು” ಎಂದಾಗಲಿ “ನಾನು ಬೋಧಿಸುವ ಭಕ್ತಿವಿಧಾನವೇ ಮೇಲಾದದ್ದು” ಎಂದು ನಾವು ಹೇಳುವುದಿಲ್ಲ. ಆದರೆ ನಾವು ಫಲಿತಾಂಶ ನೋಡಿ ನಿರ್ಣಯಿಸಬೇಕು.

ಸಂಸ್ಕೃತದಲ್ಲಿ ಹೀಗೊಂದು ಉಕ್ತಿಯಿದೆ. ಫಲೇನ ಪರಿಚೇಯತೇ. ಶ್ರೀಮದ್ಭಾಗವತವು, “ಒಂದು ಧರ್ಮವನ್ನು ಅನುಷ್ಠಾನ ಮಾಡುವುದರಿಂದ ಒಬ್ಬ ವ್ಯಕ್ತಿಯು ಭಗವತ್ಪ್ರೀತಿ ಗಳಿಸಿದರೆ ಆಗ ಆ ಧರ್ಮಸಿದ್ಧಾಂತವು ಬಹು ಒಳ್ಳೆಯದು” ಎಂದು ಹೇಳುತ್ತದೆ.

ಸಂದರ್ಶಕ: ಹೌದು. ಆದರೆ ನೀವು ಬೋಧಿಸುವ, ವಿಶಿಷ್ಟ ವಿಧಿವಿಧಾನವನ್ನು ಬೋಧಿಸುತ್ತಿರುವುದು ನಿಮ್ಮ ಧರ್ಮವೊಂದೇ ಅಲ್ಲ ಎಂಬುದು ನಿಮಗೆ ತಿಳಿದೇ ಇದೆ.

ಪ್ರಭುಪಾದ: ನಮ್ಮ ಧರ್ಮ ಒಂದೇ ಆ ಕೆಲಸವನ್ನು ಮಾಡುತ್ತಿಲ್ಲ ಮಾತನ್ನೀಗ ವಿಶದೀಕರಿಸುತ್ತಿದ್ದೇನೆ. “ಭಗವಂತನನ್ನು ಪ್ರೀತಿಸುವವನಾಗು’ ಎಂದು ಹೇಳುವ ಅನೇಕರಿರಬಹುದು. ಆದರೆ ನಮ್ಮ ಬೋಧನಾ ವಿಧಾನವು ತುಂಬ ಪರಿಣಾಮಕಾರಿಯಾದದ್ದು.

ಸಂದರ್ಶಕ: ಈ ವಿಶಿಷ್ಟ ಸಿದ್ಧಾಂತದ ಮೂಲಸ್ಥಾನ ಭರತಖಂಡ ಸರಿತಾನೆ? ಅಂದರೆ ಭಾರತದಲ್ಲಿ ಎಂದರೆ ಜಗತ್ತಿನ ಪೂರ್ವ ಭಾಗದಲ್ಲಿ ಕೊನೆಯ ಪಕ್ಷ ನಮಗೆ ಕಾಣುವಂತೆ ಈ ನಿಮ್ಮ ಸಿದ್ಧಾಂತ ಸಫಲತೆ ಗಳಿಸಿದೆಯೆ?

ಪ್ರಭುಪಾದ: ಗಳಿಸಿದೆ.

ಸಂದರ್ಶಕ: ಅಲ್ಲಿ (ಭಾರತದಲ್ಲಿ ನಿಮಗೆ ಬಹುಸಂಖ್ಯೆಯ ಅನುಯಾಯಿಗಳಿದ್ದಾರೆಯೆ?

ಪ್ರಭುಪಾದ: ಇದ್ದಾರೆ. ಇತ್ತೀಚೆಗೆ ನಾನು ಭಾರತಕ್ಕೆ ಹೋಗಿದ್ದೆ. ಹತ್ತು ದಿನಗಳ ಅವಧಿಯ ಎರಡು ಪ್ರತ್ಯೇಕ ಸಭೆಗಳನ್ನು ನಾನು ಅಲ್ಲಿ ನಡೆಸಿದೆ. ಪ್ರತಿ ದಿನದ ಸಭೆಗೆ ಇಪ್ಪತ್ತರಿಂದ ಮೂವತ್ತು ಸಾವಿರ ಮಂದಿ ಬರುತ್ತಿದ್ದರು. ಭಾರತೀಯರ ಮನೋವೃತ್ತಿ ಹೇಗಿದೆಯೆಂದರೆ ಅವರು ಸ್ವಾಭಾವಿಕವಾಗಿಯೇ ಕೃಷ್ಣ ಪ್ರಜ್ಞೆಯುಳ್ಳವರು.

ಆದರೆ ತತ್‌ಕ್ಷಣದಲ್ಲಿ ಅವರು ಕೃಷ್ಣ ಪ್ರಜ್ಞಾವಂತರಲ್ಲ, ಇದಕ್ಕೆ ಅವರನ್ನು ನಡೆಸುತ್ತಿರುವ ಧುರೀಣರೆಂದು ಕರೆದುಕೊಳ್ಳುವ ಮಂದಿ ಕಾರಣ. ಈ ಧುರೀಣರಾದರೋ ಕೃಷ್ಣ ಪ್ರಜ್ಞೆಗೆ ಬದಲಾಗಿ ಭೋಗ ಪ್ರಜ್ಞೆ ತರಬಯಸುವ ಜನ.

ಸಂದರ್ಶಕ: ಕೃಷ್ಣ ಪ್ರಜ್ಞಾ ಸಿದ್ಧಾಂತವು ಹಿಂದೂ ಧರ್ಮದ ಜೊತೆ ಹೊಂದಿಕೊಳ್ಳುವಂಥದ್ದಾಗಿದೆಯೆ?

ಪ್ರಭುಪಾದ: ಯಾವುದೇ ಧರ್ಮದ ಜೊತೆ ಅದು ಹೊಂದಿಕೊಳ್ಳುತ್ತದೆ.

ಸಂದರ್ಶಕ: ಯಾವುದೇ ಧರ್ಮದ ಜೊತೆ?

ಪ್ರಭುಪಾದ: (ಹೌದು ಯಾವುದೇ ಧರ್ಮದ ಜೊತೆ ನಮ್ಮ ಸಿದ್ಧಾಂತ ಹೊಂದಿಕೊಳ್ಳುತ್ತದೆ). ಏಕೆಂದರೆ ದೇವರು ಒಬ್ಬನೇ. ಕೃಷ್ಣ ಪ್ರಜ್ಞಾ ವಿಧಾನವು ದೇವರನ್ನು ಕುರಿತ ವಿಜ್ಞಾನ. ಎರಡಕ್ಕೆ ಎರಡನ್ನು ಕೂಡಿಸಿದರೆ ನಾಲ್ಕಾಗುತ್ತದೆ. ಇದು ಎಲ್ಲರಿಗೂ ತಿಳಿಯುತ್ತದೆ.

(ದೈವವನ್ನು ಕುರಿತ ಮಾತು) ಕ್ರೈಸ್ತರಿಗೆ ಮಾತ್ರ ಅರ್ಥವಾಗಬೇಕು. ಹಿಂದೂಗಳಿಗೆ ಆಗಬಾರದು ಎಂದಲ್ಲ, ಎರಡಕ್ಕೆ ಎರಡು ಸೇರಿದರೆ ನಾಲ್ಕು ಎಂಬುದು ಪ್ರತಿಯೊಬ್ಬರ ಪಾಲಿಗೂ ಸತ್ಯ. ಇದೇ ರೀತಿ ದೇವರು ಎಲ್ಲರ ಪಾಲಿಗೂ ಸತ್ಯ. ಇದೀಗ ನಾವು ದೇವರನ್ನು ಪ್ರೀತಿಸುವ ವಿಧಾನದ ಮಾತಿಗೆ ಬಂದರೆ ನಾವು ಹೇಳುವುದು ಒಂದೇ ಮಾರ್ಗ.

ಸಂದರ್ಶಕ: ಹಾಗೆಂದಾದರೆ ನೀವು ಹೇಳುವ ವಿಧಾನವೇ ದೇವರನ್ನು ಪ್ರೀತಿಸುವ ಒಂದೇ ಮಾರ್ಗ ಎಂದು ನೀವು ಸ್ಥಾಪಿಸುತ್ತಿದ್ದೀರೋ ಹೇಗೆ?

ಪ್ರಭುಪಾದ: ಹೌದು. ಕಡೆಯ ಪಕ್ಷ ಈ ಯುಗದ ಮಟ್ಟಿಗಾದರೂ ನಮ್ಮ ವಿಧಾನವೇ ಸರಿಯಾದದ್ದು.

ಸಂದರ್ಶಕ: ಈ ಯುಗಕ್ಕೆ ಎಂದರೆ ಕಲಿಯುಗಕ್ಕೆ?

ಪ್ರಭುಪಾದ: ಹೌದು.

ಸಂದರ್ಶಕ: ಎಂದರೆ ಪ್ರಸಕ್ತ ನಾವೀಗ ಜೀವಿಸುತ್ತಿದ್ದೇವಲ್ಲ ಈ ದಿನಮಾನಗಳಿಗೆ, ಅಲ್ಲವೆ?

ಪ್ರಭುಪಾದ: ಏಕೆಂದರೆ ನಮ್ಮ ಭಕ್ತಿಯ ವಿಧಾನವು ಅಧಿಕೃತವಾದದ್ದು. ಕೃಷ್ಣನೇ ಇದನ್ನು ಹೇಳುತ್ತಾನೆ. ಕೃಷ್ಣ ಅವನ ಮೂಲ ರೂಪದಲ್ಲಿ ಹಾಗೂ ಭಗವಾನ್ ಚೈತನ್ಯ ರೂಪದ ಅವನ ಅಭಿವ್ಯಕ್ತಿಯಾಗಿ ಕೃಷ್ಣನೇ ಬೋಧಿಸಿದ ವಿಧಾನ ನಮ್ಮದು. ಆತ್ಮಸಾಕ್ಷಾತ್ಕಾರಕ್ಕೆ ದೈವ ಸಾಕ್ಷಾತ್ಕಾರಕ್ಕೆ ಅಥವಾ ದೇವರನ್ನು ಪ್ರೀತಿಸುವುದು ಹೇಗೆಂಬುದನ್ನು ಕಲಿತುಕೊಳ್ಳಲು ಕಲಿಯುಗದ ಜನರಿಗಿರುವ ದಾರಿ ಇದೊಂದೇ ಎಂದು ಕೃಷ್ಣ ಹೇಳುತ್ತಾನೆ.

ಅವನೇ ಕೃಷ್ಣನೇ ಹೇಳುತ್ತಾನೆ. ಆದ್ದರಿಂದ ಅದು ಅಧಿಕೃತ, ಮತ್ತು ಇದೆಲ್ಲ ನಿಜವಾಗಿಯೂ ನಡೆಯುತ್ತಿದೆ. ಹಾಗಲ್ಲದಿದ್ದರೆ ಈ ತರುಣ ತರುಣಿಯರು ಇದ್ದಾರಲ್ಲ. ಇವರೆಲ್ಲಾ ವಿದೇಶೀಯರು. ಇವರಿಗೆ ಕೃಷ್ಣನನ್ನು ಕುರಿತ ತಿಳಿವಳಿಕೆ ಇರಲಿಲ್ಲ. ಆದರೆ ನಮ್ಮ ಅರವತ್ತು ಕೇಂದ್ರಗಳಿವೆ. ಮತ್ತು ಪ್ರತಿ ಕೇಂದ್ರದಲ್ಲೂ ಸರಾಸರಿ ನೂರು ಮಂದಿ ಭಕ್ತರಿದ್ದಾರೆ. ಹಾಗೂ ಅವರೆಲ್ಲ ತಮ್ಮ ಬದುಕನ್ನೇ ಈ ಕೆಲಸಕ್ಕೆ ಮುಡಿಪಾಗಿಟ್ಟಿದ್ದಾರೆ. ನಮ್ಮ ವಿಧಾನ ಅಧಿಕೃತವಲ್ಲದಿದ್ದ ಪಕ್ಷದಲ್ಲಿ ಇದೆಲ್ಲಾ ಹೇಗಾಗುತ್ತಿತ್ತು?

ಸಂದರ್ಶಕ: ಸರಿ. ತಮಗೆ ಕೃಷ್ಣ ಈ ಮೊದಲು ತಿಳಿದಿರಲಿಲ್ಲ ಎಂದು ಈ ಮಂದಿ ಹೇಳುತ್ತಾರೆಂಬುದು ನಿಮಗೆ ಗೊತ್ತು. ನೀವು ಹೇಳುವುದೂ ಸರಿಯೆ. ಆದರೆ ದೇವರಿಗೆ ಬೇರೆ ಬೇರೆ ಜನ ಬೇರೆ ಹೆಸರು ಕೊಡುತ್ತಾರೆ. ನೀವು ನಿಮ್ಮ ದೇವರಿಗೆ ಕೃಷ್ಣ ಎಂಬ ಹೆಸರನ್ನು ಕೊಡುತ್ತೀರಿ. ಪಾಶ್ಚಿಮಾತ್ಯ ಜಗತ್ತಿನ ಜನರಲ್ಲಿ ಬಹುಪಾಲಿನವರು ತಮ್ಮ ದೇವರಿಗೆ ಕ್ರಿಸ್ತ ಎಂಬ ಹೆಸರು ಕೊಡುತ್ತಾರೆ.

ಪ್ರಭುಪಾದ: ಹೌದು, ಅದು ಸರಿ. ಈ ಸಂಬಂಧದಲ್ಲಿ ನಾವು ಏನು ಹೇಳುತ್ತೇವೆಂದರೆ, ದೇವರನ್ನು ಸೂಚಿಸುವ ಹೆಸರೊಂದು ನಿಮ್ಮಲ್ಲಿರುವುದಾದರೆ ಅದು ಕೂಡ ಸಾಕಾಗುತ್ತದೆ. ನಾವು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ…. ಎಂದು ಜಪಿಸುತ್ತೇವಲ್ಲ ಹಾಗೆ ಅವರೂ (ಅವರ ದೇವರ ಹಸರನ್ನು ಜಪಿನಲ್ಲಿ)

ಸಂದರ್ಶಕ: ಸರಿ. ನಿಮ್ಮ ಮಾತು ಸರಿ.

ಪ್ರಭುಪಾದ: ವೈದಿಕ ಸಾಹಿತ್ಯದ ಪ್ರಕಾರ ಕೃಷ್ಣಸ್ತು ಭಗವಾನ್ ಸ್ವಯಮ್ – “ಕೃಷ್ಣನು ದೇವೋತ್ತಮ ಪರಮ ಪುರುಷ.” ಅವನಿಗೆ ವಿವಿಧ ಹೆಸರುಗಳಿವೆ. ಸಹಸ್ರಾರು, ಲಕ್ಷಗಟ್ಟಲೇ ಹೆಸರುಗಳು ಅವನಿಗಿವೆ. ಕೃಷ್ಣ ಎನ್ನುವುದು ಮೂಲ ಹೆಸರು. ಆದ್ದರಿಂದ ಕೃಷ್ಣನಾಮ ಜಪಿಸಬೇಕೆಂದು ಭಗವಾನ್ ಚೈತನ್ಯರು ಹೇಳುತ್ತಾರೆ.

ಆದರೆ ದೇವರಿಗೆ ವಾಸ್ತವ ಹೆಸರೊಂದು ನಿಮ್ಮಲ್ಲಿರುವುದಾದರೆ ಅದನ್ನೇ ಜಪಿಸಿ. ಕೃಷ್ಣನ ಹೆಸರನ್ನೇ ಜಪಿಸಬೇಕೆಂದು ನಾವು ನಿಮಗೆ ಹೇಳುತ್ತಿಲ್ಲ. ದೇವರ ದಿಟವಾದ ಹೆಸರೊಂದು ನಿಮಗೆ ತಿಳಿದಿದ್ದರೆ ಅದನ್ನು ನೀವು ಜಪಿಸಬಹುದು. ನಮ್ಮ ಬಿನ್ನಹ ಇದು. “ದೇವರ ಪವಿತ್ರನಾಮವನ್ನು ಜಪಿಸಿ.”

ಸಂದರ್ಶಕ: ಆದರೆ ಈ ಮೊದಲು, ಎಂದರೆ ನೀವು ಇಲ್ಲಿಗೆ ಬಂದಾಗ ನೀವಿಲ್ಲಿಗೆ ಬಂದದ್ದು ಅರವತ್ತರ ದಶಕದ ಮಧ್ಯಭಾಗದಲ್ಲಿ ಒಂದು ದಶಕಕ್ಕೆ ಸ್ವಲ್ಪ ಮುಂಚೆ ಏನದು.. ಏನಾಗಿತ್ತು… ಆಗ… ನೀವು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಬರುವಂತೆ ಪ್ರೇರೇಪಿಸಿದ ಶಕ್ತಿ ಯಾವುದಾಗಿತ್ತು?

ಪ್ರಭುಪಾದ: ಈ ಕುರಿತು ಈಗಾಗಲೇ ವಿವರಿಸಿದ್ದಾಗಿದೆ. ಕೃಷ್ಣಪ್ರೇಮವನ್ನು ಕುರಿತಂತೆ ಜಗತ್ತಿನಲ್ಲೆಲ್ಲಾ ಪ್ರಚಾರವಾಗಬೇಕೆಂದು ಚೈತನ್ಯ ಮಹಾಪ್ರಭುಗಳು ಬಯಸಿದರು; ಜನ ಅದನ್ನು ಸ್ವೀಕರಿಸುತ್ತಾರೆಂದೂ ಅವರು ಹೇಳಿದರು. ಮತ್ತು ನನ್ನ ಗುರು ಮಹಾರಾಜರು ನನಗೆ ಹೇಳಿದರು. “ನೀನು ಹೋಗಿ ಕೃಷ್ಣ ಪ್ರಜ್ಞೆಯ ಪ್ರಚಾರ ಮಾಡಲು ಪ್ರಯತ್ನಿಸು. ನಾನು ಅವರ ಉದ್ದೇಶದ ಈಡೇರಿಕೆಗಾಗಿ ಇಲ್ಲಿಗೆ ಬಂದೆ. ನನ್ನ ಅಭೀಪ್ಸೆ ಈಡೇರುತ್ತಿದೆ.

ಸಂದರ್ಶಕ: ನೀವಿಲ್ಲಿಗೆ ಬರುವ ಮುನ್ನ ಜಗತ್ತಿನ ಈ ಭಾಗದ ಜನರು ದೇವರನ್ನು ಗ್ರಹಿಸಿದ್ದ ರೀತಿಯನ್ನು ಕುರಿತಂತೆ ನಿಮ್ಮಲ್ಲಿ ಅತೃಪ್ತಿಯ ಎಳೆಯೊಂದು ಕಾಣಿಸಿಕೊಂಡಿರಬೇಕು. ಇಲ್ಲದಿದ್ದರೆ ನೀನಿಲ್ಲಿಗೆ ಬಂದುದಕ್ಕೆ ಅರ್ಥವಿರುತ್ತಿರಲಿಲ್ಲ.

ಪ್ರಭುಪಾದ: ಅಂಥ ಅತೃಪ್ತಿ ಬರೀ ಜಗತ್ತಿನ ಈ ಭಾಗದ ಜನರ ಬಗೆಗೆ ಮಾತ್ರವಲ್ಲ ಜಗತ್ತಿನ ಎಲ್ಲ ಭಾಗಗಳ ಬಗೆಗೂ ಇತ್ತು. ಜಗತ್ತಿನ ಪ್ರತಿಯೊಂದು ಭಾಗದಲ್ಲೂ, ಹೆಚ್ಚು ಕಡಮೆ ಪ್ರತಿಯೊಬ್ಬರೂ ದೇವರಲ್ಲಿ ಅತಿ ಕಡಮೆ ಆಸಕ್ತಿ ಉಳ್ಳವರಾಗಿರುತ್ತಾರೆ. ಗಾಡ್ ಬಗೆಗೆ ಆಸಕ್ತಿಯಿಲ್ಲ; ಆದರೆ ಡಾಗ್‌ನ ಬಗೆಗೆ ಎಲ್ಲಿಲ್ಲದ ಆಸಕ್ತಿ.

ಸಂದರ್ಶಕ: ದೇವರ ಬಗೆಗೆ ಜನರ ಆಸಕ್ತಿಯನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ಹೀಗೆನ್ನುವುದು ಸರಿಯೇ?

ಪ್ರಭುಪಾದ: ಸರಿ. ಮಾನವರಾಗಿರುತ್ತ ನಮಗಿರುವ ಏಕೈಕ ಆಸಕ್ತಿಯೇ ಅದಾಗಿರಬೇಕು.

ಸಂದರ್ಶಕ: ದೇವರಿಗೆ ಇಂಥದೇ ನಿರ್ದಿಷ್ಟ ಹೆಸರಿರಬೇಕೆಂಬ ನಿಮಗೆ ಹೆಚ್ಚಿನ ಆಸಕ್ತಿ ಇದ್ದಂತಿಲ್ಲ.

ಪ್ರಭುಪಾದ: ಇಲ್ಲ ಇಲ್ಲ. ನಮ್ಮ ಉದ್ದೇಶ ಅಥವಾ ಗುರಿ ಜನ ದೈವ ಪ್ರಜ್ಞಾವಂತರಾಗಲಿ ಎಂಬುದು. ಮತ್ತು ಈ ಯುಗದಲ್ಲಿ ಅದಕ್ಕಿರುವ ವಿಧಾನವೆಂದರೆ ಭಗವಂತನ ಪವಿತ್ರನಾಮವನ್ನು ಸಂಕೀರ್ತಿಸುವುದು. ನಿಮ್ಮ ಬಳಿ ಹೆಸರು ಯಾವುದಾದರೂ ಇದ್ದು ಅದು ದೇವರ ಹೆಸರೇ ಆಗಿದ್ದರೆ ಈ ಹೆಸರನ್ನು ಜಪಿಸಿ ನೀವು ಜಯಶಾಲಿಗಳಾಗುತ್ತೀರಿ.

ಸಂದರ್ಶಕ: ಕೃಷ್ಣನಾಮ ಜಪ ಎಂದರೆ ಹರೇಕೃಷ್ಣ ಮಂತ್ರವು ನಿಮ್ಮ ಧಾರ್ಮಿಕ ನಂಬಿಕೆಯನ್ನು ಪಾಲಿಸುವುದರಲ್ಲಿ ಮುಖ್ಯ ಪಾತ್ರ ವಹಿಸುವಂತೆ ಕಾಣುತ್ತದೆ. ಸರಿಯೆ? ಇನ್ನು ಸ್ವಲ್ಪ ಹೊತ್ತಿನ ತರುವಾಯ ನಾನು ನಿಮ್ಮನ್ನು ಹಾಗೂ ಈ ರಾತ್ರಿ ನಮ್ಮೊಂದಿಗೆ ಇಲ್ಲಿ ಕುಳಿತಿರುವ ಭಕ್ತರನ್ನು ಕೃಷ್ಣನಾಮ ಸಂಕೀರ್ತನೆ ಮಾಡಿ ಎಂದು ಕೇಳಿದರೂ ಕೇಳಬಹುದು. ಈ ಹೊತ್ತಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಆ ಸಂಕೀರ್ತನೆ ಯುಕ್ತ ಅಂತ್ಯವಾದೀತು ಎನ್ನಬಹುದು.

ಇಷ್ಟಾದರೂ ನಿಮ್ಮ ಪಂಥದ ಕೆಲವು ಮಗ್ಗಲುಗಳ ಬಗೆಗೆ ನನ್ನ ಕೆಲವು ವಿಚಾರಗಳು ಹಾಗೇ ಉಳಿದಿದೆ. ನಾನು ನಿಮ್ಮ ಪುಸ್ತಕಗಳನ್ನು ಹೆಚ್ಚು ಓದಿಲ್ಲ. ಆದರೆ ನಿಮ್ಮ ಪತ್ರಿಕೆಯಲ್ಲಿ ಹಾಗೂ ಇತರ ಪ್ರಕಟಣೆಗಳಲ್ಲಿ ನೀವು ಪ್ರಕಟಿಸುವ ನಿಮ್ಮ ಬರಹಗಳನ್ನು ಓದುವುದರಿಂದ ವ್ಯಕ್ತಿ ಹಾಗೂ ದೈವದ ಮಧ್ಯೆ ಇರುವ ನಂಟಿನ ಮೇಲೆ ತುಂಬ ಒತ್ತು ಬಿದ್ದಿರುವಂತೆ ನನಗೆ ತೋರುತ್ತದೆ.

ಪ್ರಭುಪಾದ: ಹೌದು. ಆ ಬರಹಗಳು ಎಲ್ಲರಿಗಾಗಿ ಬರೆದವು.

ಸಂದರ್ಶಕ: ದೈವ-ವ್ಯಕ್ತಿ ಸಂಬಂಧದ ಮೇಲಿನ ಒತ್ತು, ವ್ಯಕ್ತಿ-ವ್ಯಕ್ತಿಯನ್ನು ಕುರಿತ ಸಂಬಂಧದ ಮೇಲಿನ ಒತ್ತಿಗಿಂತ ಹೆಚ್ಚಾಗಿರುವುದು ಸತ್ಯವೇ. ನನ್ನ ಅನಿಸಿಕೆ ಸರಿಯೇ?

ಪ್ರಭುಪಾದ: ತಪ್ಪು. ದೇವರ ಜೊತೆ ಕರೆದುಕೊಂಡಿರುವ ನಮ್ಮ ಸಂಬಂಧವನ್ನು ಪುನರಪಿ ಸ್ಥಾಪಿಸಬೇಕಾದ ಕಾರ್ಯ ನಮ್ಮದಾಗಿದೆ. ತಿಳಿಯಿತೆ? ದೈವ ಮನುಷ್ಯ ಸಂಬಂಧ ನಮಗೆ ಅರ್ಥವಾದರೆ ವ್ಯಕ್ತಿ-ವ್ಯಕ್ತಿ ನಡುವಣ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi