– ವಿದ್ವಾನ್ ಎಸ್.ವಿ.ಶ್ಯಾಮಭಟ್ಟ
ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಿದ್ದಾರೆ, ಶ್ರುತಿ, ಸ್ಮೃತಿ, ಪುರಾಣೇತಿಹಾಸಗಳಲ್ಲಿ ಗೋವಿನ ಪ್ರಶಂಸೆ ಇದೆ. ಲೌಕಿಕ ವ್ಯವಹಾರಗಳು ಸಾವಕಾಶವಾಗಿ ನಡೆಯಲು ಗೋ ಸಂತತಿಯ ಸಹಕಾರದ ಮಹತ್ವ ನಮಗೆ ತಿಳಿದದ್ದೇ. ಗೂಳಿ-ಹಸುಗಳು ಲೋಕದ ಮಾತಾಪಿತೃಗಳು ಎಂದು ಮಹಾಭಾರತದಲ್ಲಿ ಹೇಳಿದೆ.

ಈ ಪ್ರಪಂಚವು ಚಿತ್ರವಿಚಿತ್ರವಾದುದು. ಇದನ್ನು ಸಚೇತನದ ನಿಶ್ಚೇತನ ಎಂದು ವಿಂಗಡಿಸಿದ್ದಾರೆ.
ಸಚೇತನವೆಂದರೆ ವೃದ್ಧಿಕ್ಷಯಾದಿಗಳುಳ್ಳದ್ದು, ಅವೇ ಪ್ರಾಣಿಗಳು – ಸಸ್ಯ, -ಕ್ರಿಮಿ – ಕೀಟ-ಮಾನವರು, ಮುಂತಾದವರು.
ನಿಶ್ಚೇತನವೆಂದರೆ ವೃದ್ಧಿಕ್ಷಯಾದಿಗಳಿಲ್ಲದೆ ಇರುವ ಕಲ್ಲು ಮಣ್ಣು ಬಂಡಿ ಮುಂತಾದುವು. ಇವೇ ಜಡಪದಾರ್ಥಗಳು.
ಈ ಸಚೇತನ ರಾಶಿಯನ್ನು ಎಂಬತ್ತನಾಲ್ಕು ಲಕ್ಷಜೀವರಾಶಿಯೆಂದು, ಅಪರೋಕ್ಷ ಜ್ಞಾನಿಗಳಾದ ಮಹರ್ಷಿಗಳು ಸಾಮಾನ್ಯವಾಗಿ ವಿಂಗಡಿಸಿದ್ದಾರೆ. ಅದರಲ್ಲಿ ಮಾನವರು ಅತ್ಯುತ್ತಮರು. ಇವರು ಕೋಟಿ ಕೋಟಿ ಸಂಖ್ಯೆಯಲ್ಲಿರುವರು. ಇವರಿಗೆ ಸರ್ವಾಂಗಗಳು ಸಮಗ್ರವಾಗಿದ್ದು, ವಿವೇಚನಾತ್ಮಕವಾದ ಬುದ್ಧಿ ಶಕ್ತಿಯೂ ಪ್ರಖರವಾಗಿರುವುದರಿಂದಲೇ ಅತ್ಯಂತ ಶ್ರೇಷ್ಠರು.
ಇವರೇ ಗುರು-ಹಿರಿಯರ ಉಪದೇಶಗಳನ್ನು ಕೇಳಲು, ಶಾಸ್ತ್ರವಚನದಂತೆ ಅನುಷ್ಠಾನ ಮಾಡಿ ಕೃತಾರ್ಥರಾಗಲು, ಉತ್ತಮಾಧಿಕಾರಿಗಳು. ಇವರಲ್ಲೂ ಬುದ್ಧಿಪ್ರಖರತೆಯುಳ್ಳ ಅನುಷ್ಠಾತೃಗಳು ಹಾಗೂ ತತ್ತ್ವಜ್ಞಾನಿಗಳು ಉತ್ತಮೋತ್ತಮರು.
ಹಾಗೆಯೇ ಚತುಷ್ಪಾತ್ಪ್ರಾಣಿಗಳಲ್ಲಿ ಗೋವುಗಳ ಪಾತ್ರ ಅತ್ಯಂತ ಮಿಗಿಲಾದುದು. ಗೋ ಎಂಬುದು ಸಂಸ್ಕೃತ ಭಾಷೆಯ ಶಬ್ದ. ಇದಕ್ಕೆ ಸ್ವರ್ಗ, ಬಾಣ, ಇಂದ್ರಿಯ, ಹಸು, ಎತ್ತು ಮುಂತಾದ ಅನೇಕ ಅರ್ಥಗಳಿವೆ. ಈಗ ಹಸು, ಮತ್ತು ಗೂಳಿ ಎಂಬ ಉಭಯ ಲಿಂಗದ ಗೋ ಶಬ್ದದ ಬಗ್ಗೆ ವಿಮರ್ಶಿಸಲಾಗುವುದು.
“ಪಿತರೋ ವೃಷಭಾಜ್ಞೇಯಾಃಗಾವೋ ಲೋಕಸ್ಯಮಾತರಃ” ಎಂಬುದು ಮಹಾಭಾರತದ ಸೂಕ್ತಿ. ಗೂಳಿ – ಹಸುಗಳು ಲೋಕದ ಮಾತಾಪಿತೃಗಳು. ಇವೆರಡನ್ನು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿ ಕೊಂಡಾಡಿದ್ದಾರೆ. ಇವು ಇಡೀ ಪ್ರಪಂಚಕ್ಕೆ ಅತ್ಯಂತ ಉಪಯುಕ್ತ ಮೂಕ ಜಂತುಗಳು.
ಇವುಗಳ ಬಗ್ಗೆ ಶ್ರುತಿ, ಸ್ಮೃತಿ, ಪುರಾಣ, ಇತಿಹಾಸ, ಸಂಸ್ಕೃತ ಕಾವ್ಯ ಮತ್ತು ಪ್ರಾದೇಶಿಕ ಭಾಷಾ ಕಾವ್ಯಗಳಲ್ಲಿ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಅಲ್ಲದೆ ಪ್ರಪಂಚದ ಎಲ್ಲ ದೇಶದವರೂ ಇದರ ಉಪಯೋಗವನ್ನು ವಿಶೇಷವಾಗಿ ಪಡೆಯುತ್ತಿದ್ದಾರೆ. ಹುಟ್ಟಿದ ಶಿಶುವಿಗೆ ಇದರ ಹಾಲೇ ಆಹಾರ.
ಜಾತಕರ್ಮದಲ್ಲಿ ಇದರ ತುಪ್ಪದಲ್ಲಿ ಚಿನ್ನವನ್ನು ತೇದು ಶಿಶುವಿಗೆ ನೆಕ್ಕಿಸುವರು.ಗೋವುಗಳ ಸ್ಥೂಲ ಸೂಕ್ಷ್ಮವಾದ ಒಂದೊಂದು ಅಂಗಗಳಲ್ಲಿಯೂ 330 ಕೋಟಿ ದೇವತೆಗಳು ಇದ್ದಾರೆ೦ದು ಸರ್ವದೇವಾಃ ಸ್ಥಿರ ದೇಹೇ ಸರ್ವದೇವಮಯಿ ಹಿಗೌಃ || ಎಂದು ಮಹಾಭಾರತದಲ್ಲಿ ವಿವರಿಸಿದ್ದಾರೆ.

ಅಲ್ಲದೆ, ವಿಷ್ಣುಪುರಾಣ, ಬ್ರಹ್ಮವೈವರ್ತ ಮುಂತಾದ ಪುರಾಣಗಳಲ್ಲಿಯೂ, ಅಪಾರ ಮಾಹಿತಿಯು ದೊರೆಯುತ್ತದೆ. ನಾಲ್ಕು, ವೇದಗಳಲ್ಲಿ ಗೋಪ್ರಶಂಸೆಯನ್ನು ಗಮನಿಸಬಹುದು. ಋಗ್ವೇದದ ಗೋಸೂಕ್ತವು ”ಗೋವುಗಳು ನಮ್ಮ ಮನೆಗೆ ಬರಲಿ ಸನ್ಮಂಗಳವನ್ನು ನೀಡಲಿ” ಎಂದು ಆರಂಭಿಸಿ, ‘ಆ ಗೋವುಗಳ ಸಂತತಿಯು ವೃದ್ಧಿಗೊಂಡು ನಾವೂ ಸುಖವಾಗಿರುವಂತಾಗಲಿ” ಎಂದೇ ಪ್ರಾರ್ಥಿಸುತ್ತದೆ.
ಹಾಗೆಯೇ ಕೃಷ್ಣಯಜುರ್ವೇದದ ವೈದಿಕ ರಾಷ್ಟ್ರಗೀತೆಯಲ್ಲಿ ‘ದೋಗ್ಧ್ರೀಧೇನು ರ್ವೋಢಾನಡ್ವಾನ್’ ಕರೆವ ಹಸುಗಳನ್ನು ದಷ್ಟಪುಷ್ಟ ಗೂಳಿಗಳನ್ನು ಪ್ರಾರ್ಥಿಸಲಾಗಿದೆ. ಹಾಗೆ ‘ಶಮು ಸಂತುಗಾವಃ’ ಎಂದು ಹೇಳಿದೆ. ಸಾಮ- ಅಥರ್ವವೇದಗಳಲ್ಲೂ ಉಪನಿಷತ್ತುಗಳಲ್ಲಿಯೂ ಗೋಪ್ರಶಂಸೆಯನ್ನು ಕಾಣಬಹುದು.
ಸತ್ಯ ಕಾಮನ ಗೋರಕ್ಷೆ, ಜನಕನು ಸುವರ್ಣಾಸ್ಯಾಲಂಕೃತ ಸಾವಿರಗೋವುಗಳನ್ನು ಬ್ರಹ್ಮಷ್ಠರ ಪಣವಾಗಿ ವಿದ್ವದ್ಗೋಷ್ಠಿಯಲ್ಲಿ ಪ್ರಕಟಿಸಿದುದು, ವಾಜಿಶ್ರವಸ್ಸಿನ ವಿಶ್ವಜಿದ್ಯಾಗದಲ್ಲಿ ಸಕಲ ವಿಧ ಗೋಗಳನ್ನು ದಾನಕ್ಕಾಗಿ ಅಣಿಗೊಳಿಸಿದ್ದ ಪರಿಣಾಮವಾಗಿ ಮಗನಾದ ನಚಿಕೇತನು ವೈವಸ್ವತನಿಂದ ಬ್ರಹ್ಮವಿದ್ಯೆಯನ್ನು ಪಡೆದು ಈ ಭೂಮಿಯ ಜಿಜ್ಞಾಸುಗಳಿಗೆ ಅನುಗ್ರಹಿಸಿದುದೂ, ಅವಿಸ್ಮರಣೀಯ ವಿಷಯಗಳಾಗಿವೆ.
ಪುರಾಣಗಳಲ್ಲಿಯೂ ಗೋಮಹಿಮೆಯು ಅಧಿಕ ಪ್ರಮಾಣದಲ್ಲಿದೆ. ಕ್ಷೀರ ಸಮುದ್ರವನ್ನು ಅಮೃತಕ್ಕಾಗಿ ಮಥಿಸಿದಾಗ ಕಾಮಧೇನುವೂ ಲಭಿಸಿತು. ರಾಮಾಯಣದ ಭಾರದ್ವಾಜಾತಿಥ್ಯ ಪ್ರಸಂಗದಲ್ಲಿ ಶ್ರೀರಾಮಚಂದ್ರನ ಪರಿವಾರವನ್ನು ಸಂತೃಪ್ತಿಪಡಿಸಿದುದು ಸುರಭಿ, ವಸಿಷ್ಠಾಶ್ರಮಕ್ಕೆ ಭೇಟಿಕೊಟ್ಟ ವಿಶ್ವಾಮಿತ್ರರ ಅಪಾರ ಸೈನ್ಯವನ್ನು ಸಂತೃಪ್ತಿಪಡಿಸಿದುದು ಕಾಮಧೇನು, ಕಾರ್ತವೀರ್ಯಾರ್ಜುನನ ದೊಡ್ಡ ಪರಿವಾರವನ್ನು ಸಂತೈಸಿದುದು ಜಮಗ್ನಿಗಳ ಹೋಮಧೇನು, ದಿಲೀಪನಿಗೆ ಸಂತತಿಪ್ರದಳು, ಕಾಮಧೇನುವಿನ ಮಗಳಾದ ವಸಿಷ್ಠರ ನಂದಿನಿಯು.
ಮಹಾಭಾರತದಲ್ಲಂತೂ ಬಹು ವಿಸ್ತೃತವಾಗಿ ಗೋವಿನ ಬಗ್ಗೆ ವಿಚಾರ ಮಾಡಲಾಗಿದೆ. ಪದ್ಮಪುರಾಣದಲ್ಲಿನ ನಂದಾ ಚರಿತ್ರೆಯು ಕನ್ನಡದಲ್ಲಿ ಪುಣ್ಯಕೋಟಿಯೆಂಬ ಗೋವಿನಕಥೆ “ಧರಣಿಮಂಡಲ ಮಧ್ಯದೊಳಗೆ “ ಎಂದೇ ಆರಂಭವಾಗುವುದು. ಇದು ಕನ್ನಡಿಗರ ಮೆಚ್ಚಿನ ಕಥೆ. ಇದು ಸತ್ಯಸಂಧತೆಗೆ ಸಾಕ್ಷಿಯಾಗಿದೆ.
ಈ ಎಲ್ಲಾ ಕಾರಣಗಳಿಂದಲೇ ನಮ್ಮ ಸಂಸ್ಕೃತಿಯಲ್ಲಿ ಗೋವುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಎಲ್ಲಾ ಶುಭಕಾರ್ಯಗಳಲ್ಲೂ, ಪ್ರತಿ ಹಬ್ಬದಲ್ಲೂ, ಗೋಗ್ರಾಸಕ್ಕಾಗಿ ಮಾಡಿದ ಎಲ್ಲ ಅಡುಗೆಯನ್ನು ಬಡಿಸಿ, ಮೊದಲು ಗೋವಿಗೆ ನೀಡುವ ಪದ್ಧತಿಯೂ, ಪ್ರತಿನಿತ್ಯ ಗೃಹಿಣಿಯು ಏಳುತ್ತಲೇ ಗೋವನ್ನು ನೋಡಿ ಪೂಜಿಸಿ ಗೋಗ್ರಾಸ ನೀಡುವ ಪದ್ಧತಿಯೂ ಇತ್ತು. ಅಂದರೆ ಪ್ರತಿ ಮನೆಯಲ್ಲೂ ದನಗಳನ್ನು ಅಧಿಕ ಸಂಖ್ಯೆಯಲ್ಲಿ ಸಾಕುತ್ತಿದ್ದರು. ನೂತನ ಗೃಹ ಪ್ರವೇಶದಲ್ಲಿ ಸಪ್ತ ಶುದ್ಧ ಸಂಸ್ಕಾರಗಳಲ್ಲಿ ಗೋಪ್ರವೇಶವೂ ಒಂದು.
ಶಾಂತಿ, ಪುಷ್ಟಿಕರ್ಮಗಳಲ್ಲೂ ಅಂತ್ಯೇಷ್ಟಿ ಕರ್ಮಗಳಲ್ಲೂ ಯಜ್ಞ ಯಾಗಾದಿಗಳಲ್ಲೂ ಹವನ, ಪೂರ್ತಕರ್ಮಗಳಲ್ಲಿಯೂ ಗೋದಾನಕ್ಕೆ ವಿಶೇಷ ಮಹತ್ವವುಂಟು. ಔರ್ಧ್ವ ದೈಹಿಕ ಕರ್ಮದಲ್ಲಿ ಉತ್ಕ್ರಾಂತಿಗೆ ಗೋದಾನ, ವೈತರಣೀ ಗೋದಾನ, ವೃಷೋತ್ಸವಗಳು ಅತ್ಯಗತ್ಯವೆಂದಿರುತ್ತಾರೆ. ದುಷ್ಟ ನಕ್ಷತ್ರದಲ್ಲಿ ಜನಿಸಿದ ಶಿಶುವಿಗೆ ಗೋಮುಖ ಪ್ರಸವ ಶಾಂತಿಯು ಅರಿಷ್ಟ ಪರಿಹಾರಕ್ಕೆ ಅಗತ್ಯ. ದಶದಾನಗಳಲ್ಲಿ ಗೋದಾನವೇ ಮೊದಲನೆಯದು. ಅಶಕ್ತರು ಪ್ರತಿಯಾಗಿ ಧನವನ್ನಾದರೂ ನೀಡಬೇಕು.
ಶ್ರೀಮದ್ಭಾಗವತದಲ್ಲಿ ಶ್ರೀಕೃಷ್ಣನಿಗೂ, ಗೋವುಗಳಿಗೂ ಇದ್ದ ಅವ್ಯಾಜ ಪ್ರೀತಿಯು ಬಹುವಾಗಿ ವರ್ಣಿತವಾಗಿದೆ. ಕೃಷ್ಣನು ಕೊಳಲೂದುತ್ತಲೇ ಗೋವುಗಳು ಸುತ್ತಲೂ ಮುತ್ತಿಕೊಳ್ಳುತ್ತಿದ್ದವು ಶ್ರೀಕೃಷ್ಣನೂ ಸಹ ಅದಕ್ಕೆ ಕೊ೦ಚವೂ ವ್ಯಥೆಯಾಗದಂತೆ ಸಲಹುತ್ತಿದ್ದನಷ್ಟೇ. ಅದಕ್ಕೆ ಗೋವರ್ಧನಗಿರಿಯನ್ನೇ ಮೇಲೆತ್ತಿ ಗೋವುಗಳ ಹಿಂಡನ್ನು ಮಳೆಯಿಂದ ರಕ್ಷಿಸಿ ಗೋವಿಂದ, ಗೋಪಾಲನೆಂದೇ ಪ್ರಖ್ಯಾತನಾದನು.
ಅದರ ಕುರುಹಾಗಿ ಇಂದಿಗೂ ದೀಪಾವಳಿಯಲ್ಲಿ ಗೋವರ್ಧನಗಿರಿಯ ಶ್ರೀಕೃಷ್ಣನ ಪೂಜೆ, ಕಿಚ್ಚು ಹಾಯಿಸುವುದು, ಮಣ್ಣೆತ್ತಿನ ಪೂಜೆ ಬಸವನಪೂಜಾದಿಗಳೂ ಸಂಪ್ರದಾಯದಲ್ಲಿ ನಡೆದು ಬಂದಿವೆ. ಪ್ರಕೃತಕ್ಕೆ ಈ ಕಥೆ ಒಪ್ಪುತ್ತದೆ – ಒಮ್ಮೆ ಚ್ಯವನ ಮಹರ್ಷಿಗಳು ನದಿಯ ದಡದಲ್ಲಿ ಅನುಷ್ಠಾನ ಮಾಡುತ್ತಿರಲು, ಕಾಲು ಜಾರಿ ನದಿಯ ಪಾಲಾದರು.

ಅದೇ ಸಮಯಕ್ಕೆ ಮೀನು ಹಿಡಿಯಲು ಬಲೆ ಬೀಸಿದ್ದ ಬೆಸ್ತನಿಗೆ ಅನೇಕ ಮೀನುಗಳೊಂದಿಗೆ ಋಷಿಗಳೂ ಸಿಕ್ಕಿಕೊಂಡರು. ತಿಳಿಯದ ಬೆಸ್ತನಿಗೆ ಬಹಳ ದೊಡ್ಡ ಮೀನು ಸಿಕ್ಕಿದೆ, ಹಣವು ಇಂದು ಅಧಿಕವಾಗಿ ದೊರೆಯಲಿದೆ ಎಂದು ಖುಷಿ. ಆದರೆ ಹತ್ತಿರಕ್ಕೆ ಬಲೆಯನ್ನು ಎಳೆಯುತ್ತಲೇ ಬಲೆಯಲ್ಲಿ ಋಷಿಗಳನ್ನು ನೋಡಿ, ಬಹುವಾಗಿ ಹೆದರಿ, ನಡುಗುತ್ತಾ ಬಲೆಯಿಂದ ಪಾರುಮಾಡಿ ಕ್ಷಮೆ ಬೇಡಿದನು.
ಆದರೆ ಅವರು ʼಅಯ್ಯಾ! ನಾನು ನಿನ್ನ ಕ್ರಯ ವಸ್ತು. ಯಾರಿಗಾದರೂ ನನ್ನನ್ನು ಮಾರಿ ಹಣವನ್ನು ಸಂಪಾದಿಸಿಕೋ’ ಎಂದರೆ, ಯಾರೂ ಕೊಳ್ಳಲು ಮುಂದೆ ಬರಲಿಲ್ಲ, ನಡುಗಿದರು. ಆಗ ಋಷಿಗಳು ಓರ್ವ ಭೂಪಾಲನಿಗೆ “” ಒಂದು ಗೋವು ಬ್ರಹ್ಮಾಂಡಕ್ಕೆ ಸಮ ಒಂದು ಉತ್ತಮ ಗೋವನ್ನು ನೀಡಿ ತೆಗೆದುಕೊ’ ಎಂದರಂತೆ. ಈ ಕಥೆ ಗೋದಾನದ ಹಿರಿಮೆಗೆ ಸಾಕ್ಷಿ.
“ಪಿತರೋ ವೃಷಭಾಜ್ಞೇಯಾಃ” ಎಂದು ಹೇಳಲಾಗಿದೆ, ತಾಯಿಯಾದ ಹಸು ಮತ್ತು ತಂದೆಯಾದ ಗೂಳಿಯೂ ಅವಿಭಾಜ್ಯ ದೇಹಿಗಳಷ್ಟೇ. ವೃಷವೆಂದರೆ ಧರ್ಮ ಸ್ವರೂಪವೇ. ಧರ್ಮವೂ ಅಮೂರ್ತ ವಸ್ತು. ಆದರ ಮೂರ್ತರೂಪವೇ ವೃಷಭ. ಇದರ ಹಿರಿಮೆಯನ್ನೂ ಶಾಸ್ತ್ರಗಳಲ್ಲಿ ಕಾಣಬಹುದು.
ಭಾರತವು ಕೃಷಿ ಪ್ರಧಾನವಾದ ದೇಶ. ಗೋವುಗಳು ರೈತರ ಬೆನ್ನೆಲುಬುಗಳು. ಅವು ಎಲ್ಲ ಕಾರ್ಯಗಳಲ್ಲೂ ಮಹೋಪಕಾರಿಗಳು. ಅದಕ್ಕಾಗಿ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ.
ಗವ್ಯಗಳಿಂದ ಯಜ್ಞ ಯಾಗಗಳು, ಯಾಗಗಳಿಂದ ದೇವತೆಗಳ ತೃಪ್ತಿ. ಅದರಿಂದ ಸುವೃಷ್ಟಿ. ಅದರಿಂದ ಸಸ್ಯಸಮೃದ್ಧಿ, ಅದರಿಂದ ಪ್ರಜೆಗಳಿಗೆ ನೆಮ್ಮದಿ ಎಂಬುದನ್ನು ಮರೆಯಲಾಗದು. ಕಾಳಿದಾಸನು “ದುದೋಹಗಾಂನ ಯಜ್ಞಾಯ, ಸಸ್ಯಾಯಮಘವಾದಿವಮ್। ಸಂಪದ್ವಿನಿಮ ಯೋನೋಬೌ ದಧತುರ್ಭುವನ ದ್ವಯವಂ” ಎಂದು ರಘುವಂಶದಲ್ಲಿ ಸಾರಿಹೇಳಿದ್ದಾನೆ.
ಗೋವುಗಳು ಸರ್ವೋಪಕಾರಿಯಾದ ಜಂತುಗಳು. ಇದಕ್ಕೆ ಸಮನಾದುದು ಮತ್ತೊಂದಿಲ್ಲ. ಈಗ ಈ ಕೆಳಗಿನ ಪದ್ಯಗಳನ್ನು ಗಮನಿಸಿ – ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೇ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ … ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ, ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ, ಮೇಲಾದ ತುಪ್ಪವೂ ನಾನಾದೆ ಕಾಸಿದರೆ …..
ಉಳುವೇನಾ ಭೂಮಿಯನು ಹೊರುವೆ ನಾ ಹೇರನ್ನು, ತುಳಿದು ಕಡ್ಡಿಯ ಕಾಳ ವಿಂಗಡಿಸುವೆ. ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ. ಇತ್ಯಾದಿ ಉಪಕರಿಸಿದೆ. ನೀನಾರಿಗಾದೆಯೋ ಎಲೆ ಮಾನವ?
ಗೋವುಗಳ ಗಂಜಲ – ಗೋಮಯ – ಹಾಲು – ಮೊಸರು – ತುಪ್ಪ ಇವೇ ಪಂಚಗವ್ಯಗಳು. ಇವನ್ನು ವಿಧಿವತ್ತಾಗಿ ಬೆರಸಿ ಪ್ರಾಶನ ಮಾಡಿದರೆ ಸಕಲಪಾಪ ನಿವೃತ್ತಿ ಎನ್ನಲಾಗಿದೆ. ಪಂಚಾಮೃತಕ್ಕೂ ಕ್ಷೀರದಧಿ – ಆಜ್ಯಗಳು ಅಗತ್ಯ, ಅಭಿಷೇಕಕ್ಕೆ ಇವು ಮೀಸಲು. ಈ ಎಲ್ಲಾ ವಸ್ತುಗಳಿಂದ ಸಕಲವಿಧ ರೋಗ ನಿವೃತ್ತಿಯೂ ದೇಹಪುಷ್ಟಿಗೆ ಅಮೃತಮಯ ಔಷಧವೂ ಸಹ ಎಂದು ಎಲ್ಲರೂ ನಂಬಿದ್ದಾರೆ.
ಇಂದಿನ ಪರಿಸ್ಥಿತಿಯು ಗೋವುಗಳಿಗೆ ಮಾರಕವಾಗಿದೆ, ಪೋಷಕವಾಗಿಲ್ಲ. ಅಲ್ಲದೆ ಹತ್ಯೆಯೂ ನಡೆಯುತ್ತಿದೆ, ಅದಕ್ಕೆ ಕಾರಣವೇನು? ಹೇಗೆ ಪರಿಹಾರ? ಎಂದರೆ, ಇಂದಿನ ಜನ ಧನ ಪಿಶಾಚಗ್ರಸ್ತರು. ಅದರ ಮೂಲ ಆಸೆ ಮಾತ್ರವಲ್ಲ. ದುರಾಸೆ, ಹಾಗೂ ನಾಲಗೆಯ ಚಾಪಲ್ಯ. ಇವು ಹೋಗಲು ವಿವೇಕವೇ ದಿವ್ಯೌಷಧಿ. ಅದಕ್ಕೆ ಸಾಧು ಸಜ್ಜನರ ದಿವ್ಯೋಪದೇಶವೇ ಮದ್ದು.
ಗಜೇಕಡಂಗರಿಯೇತು ಜಾರೇ ರಾಜನ ವಾಪುನಃ |
ಪಾಪಕೃತ್ಯುಚ ವಿದ್ವತ್ಸು, ನಿಯಂತಾಜಂತುರತ್ರಕಃ ||
ಎಂಬ ಸುಭಾಷಿತದಿಂದ ಸುರಭಿಗೆ ನಮಿಸಿ ವಿರಮಿಸುತ್ತೇನೆ.






Leave a Reply