– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
“ಕೃಷ್ಣ ಗೋಕುಲದ ಕಣ್ಣಾಗಿ ಬೆಳೆಯುತ್ತಿದ್ದ. ಆಬಾಲ ವೃದ್ಧರಾದಿಯಾಗಿ ಹೆಣ್ಣು-ಗಂಡೆನ್ನದೆ ಎಲ್ಲರೂ ಕೃಷ್ಣ-ಬಲರಾಮಾ ಆಕರ್ಷಣೆಗೆ ಸಿಲುಕಿದ್ದರು. ಈ ನಡುವೆ ಕೃಷ್ಣನನ್ನು ಕೊಲ್ಲಲು ಬಂದ ತೃಣಾವರ್ತನ ಸಂಹಾರವೂ ನಡೆದುಹೋಯ್ತು. ಮುಂದೆ ಓದಿ…”

ಒಮ್ಮೊಮ್ಮೆ ತಾಯಿ ಯಶೋದೆ ತಾನು ಕುಳಿತುಕೊಳ್ಳಲು ಒಂದು ಮರದ ಮಣೆಯನ್ನು ತರುವಂತೆ ಕೃಷ್ಣನಿಗೆ ಹೇಳುತ್ತಿದ್ದಳು. ಮಣೆಯು ಮಗುವಿಗೆ ಭಾರವಾದರೂ ಕೃಷ್ಣನು ಹೇಗಾದರೂ ಮಾಡಿ ತಾಯಿಗೆ ತಂದು ಕೊಡುತ್ತಿದ್ದನು. ನಾರಾಯಣ ಪೂಜೆ ಮಾಡುವಾಗಲೂ ನಂದ ಮಹಾರಾಜನು ತನ್ನ ಮರದ ಪಾದರಕ್ಷೆಗಳನ್ನು ತರುವಂತೆ ಯಾವಾಗಲಾದರೊಮ್ಮೆ ಹೇಳುತ್ತಿದ್ದನು.
ಕೃಷ್ಣನು ಬಹು ಕಷ್ಟದಿಂದಲೇ ಅವುಗಳನ್ನು ತಲೆಯ ಮೇಲೆ ಹೊತ್ತು ತರುತ್ತಿದ್ದನು. ಯಾವುದಾದರೂ ಬಹುಭಾರವಾದ ವಸ್ತುವನ್ನು ಎತ್ತುವಂತೆ ಹೇಳಿದಾಗ ಅವನು ಅದನ್ನು ಎತ್ತಲಾಗದಿದ್ದರೆ ಸುಮ್ಮನೆ ತೋಳುಗಳನ್ನು ಅಲ್ಲಾಡಿಸುತ್ತಿದ್ದ. ಹೀಗೆ ಪ್ರತಿನಿತ್ಯವೂ ಪ್ರತಿಗಳಿಗೆಯೂ ಕೃಷ್ಣನು ತನ್ನ ತಂದೆ ತಾಯಿಯರಿಗೆ ಸಂತೋಷವುಂಟುಮಾಡುತ್ತಿದ್ದ.
ದೇವೋತ್ತಮ ಪರಮ ಪುರುಷನನ್ನು ಹೇಗೆ ಶುದ್ಧ ಮನಸ್ಸಿನ ಭಕ್ತರು ನಿಯಂತ್ರಿಸಬಹುದು, ಅವರ ಅಪೇಕ್ಷೆಗಳಿಗೆ ಅವನು ಹೇಗೆ ವಿಧೇಯನಾಗಿರುತ್ತಾನೆ ಎಂಬುದು ಇದರಿಂದ ತಿಳಿಯುತ್ತದೆ. ಪರಮ ಸತ್ಯವನ್ನು ಅರಸುತ್ತಿದ್ದ ಮಹಾ ತತ್ತ್ವಜ್ಞಾನಿಗಳಿಗೆ ಮತ್ತು ಋಷಿಗಳಿಗೆ ಈ ಅಂಶವನ್ನು ತೋರಿಸುವುದಕ್ಕೋಸ್ಕರ ಪ್ರಭುವು ವೃಂದಾವನ ವಾಸಿಗಳ ಮುಂದೆ ತನ್ನ ಬಾಲ ಲೀಲೆಗಳನ್ನು ಪ್ರದರ್ಶಿಸುತ್ತಿದ್ದನು.
ಒಂದು ದಿನ ಹಣ್ಣು ಮಾರುವವಳೊಬ್ಬಳು ನಂದ ಮಹಾರಾಜನ ಮನೆಯ ಮು೦ದೆ ಬ೦ದಳು “ಯಾರಿಗಾದರೂ ಹಣ್ಣು ಬೇಕಿದ್ದರೆ ಬಂದು ನನ್ನಿಂದ ತೆಗೆದುಕೊಳ್ಳಿ” ಎಂದು ಅವಳು ಕೂಗಿದುದನ್ನು ಕೇಳಿ ಬಾಲಕೃಷ್ಣನು ಕೂಡಲೇ ತನ್ನ ಕೈಯಲ್ಲಿ ಒಂದಿಷ್ಟು ಅಕ್ಕಿಯ ಕಾಳುಗಳನ್ನು ತೆಗೆದುಕೊಂಡು ಹೋದನು.
ಅಕ್ಕಿಯ ಕಾಳನ್ನು ಕೊಟ್ಟು ಹಣ್ಣನ್ನು ಕೊಳ್ಳುವುದು ಅವನ ಉದ್ದೇಶವಾಗಿತ್ತು. ಆಗಿನ ಕಾಲದಲ್ಲಿ ವ್ಯಾಪಾರವು ಆ ರೀತಿಯ ವಿನಿಮಯದಿಂದಲೇ ನಡೆಯುತ್ತಿತ್ತು. ತನ್ನ ತಂದೆ-ತಾಯಿಯರೂ ಇದೇ ರೀತಿ ಮಾಡುತ್ತಿದ್ದುದನ್ನು ನೋಡಿದ್ದ ಕೃಷ್ಣನು ಅದನ್ನೇ ಅನುಕರಿಸುತ್ತಿದ್ದನು. ಅವನ ಅಂಗೈಗಳು ಪುಟ್ಟವು.
ಅಕ್ಕಿಯ ಕಾಳುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿದುಕೊಂಡಿರಲಿಲ್ಲ. ಆದುದರಿಂದ ಕಾಳುಗಳು ಕೆಳಕ್ಕೆ ಬೀಳುತ್ತಿದ್ದವು. ಹಣ್ಣು ಮಾರುವವಳು ಇದನ್ನು ನೋಡಿದಳು. ಕೃಷ್ಣನ ಮೋಹಕ ರೂಪಕ್ಕೆ ಮಾರುಹೋಗಿ ಅವನ ಕೈಯಲ್ಲಿ ಉಳಿದಿದ್ದ ಕೆಲವು ಕಾಳುಗಳನ್ನು ತೆಗೆದುಕೊಂಡು ಅವನ ಪುಟ್ಟ ಕೈಗಳ ತುಂಬ ಹಣ್ಣುಗಳನ್ನು ಕೊಟ್ಟಳು.
ಕೂಡಲೇ ಅವನ ಹಣ್ಣಿನ ಬುಟ್ಟಿಯ ತುಂಬ ಆಭರಣಗಳು ತುಂಬಿ ಹೋದವು. ಎಲ್ಲ ವರಗಳನ್ನು ಅನುಗ್ರಹಿಸುವವನು ಪ್ರಭುವೇ. ಯಾರಾದರೂ ಪ್ರಭುವಿಗೆ ಏನನ್ನಾದರೂ ಕೊಟ್ಟರೆ ಅವನಿಗೆಂದೂ ನಷ್ಟವಾಗುವುದಿಲ್ಲ. ಬದಲಾಗಿ ಲಕ್ಷಗಟ್ಟಲೆ ಲಾಭವಾಗುತ್ತದೆ.

ಶ್ರೀಕೃಷ್ಣ ಬಲರಾಮರು ಮತ್ತಿತರ ಹುಡುಗರೊಂದಿಗೆ ಒಂದು ದಿನ ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದರು. ಬೆಳಗ್ಗೆ ಆಗಲೇ ಬಹಳ ಹೊತ್ತಾಗಿದ್ದರಿಂದ ತಾಯಿ ರೋಹಿಣಿ ಅವರನ್ನು ಮನೆಗೆ ಕರೆಯಲು ಬಂದಳು. ಆದರೆ ಮಕ್ಕಳಿಬ್ಬರೂ ಆಟದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ಅವರಿಗೆ ಹಿಂದಕ್ಕೆ ಹೋಗಲು ಇಷ್ಟವಿರಲಿಲ್ಲ.
ಅವರು ಇನ್ನಷ್ಟು ಆಟದಲ್ಲಿ ಮಗ್ನರಾದರು. ಅವರನ್ನು ಮನೆಗೆ ಕರೆದುಕೊಂಡು ಹೋಗುವುದು ರೋಹಿಣಿಗೆ ಸಾಧ್ಯವಾಗದಿದ್ದಾಗ ಅವಳು ಮನೆಗೆ ಹೋಗಿ ಅವರನ್ನು ಮತ್ತೆ ಕರೆಯುವಂತೆ ತಾಯಿ ಯಶೋದೆಗೆ ಹೇಳಿದಳು. ಯಶೋದೆಗೆ ತನ್ನ ಮಗನಲ್ಲಿ ಅದೆಷ್ಟು ಪ್ರೇಮವೆಂದರೆ ಅವನನ್ನು ಮನೆಗೆ ಬರುವಂತೆ ಕರೆಯಲು ಹೊರಕ್ಕೆ ಬರುತ್ತಲೇ ಅವಳ ಸ್ತನಗಳು ಹಾಲಿನಿಂದ ತುಂಬಿ ಹೋದವು.
ಅವಳು, “ನನ್ನ ಮುದ್ದು ಮಗು, ಮನೆಗೆ ಬಾ, ನಿನ್ನ ಊಟದ ಹೊತ್ತು ಆಗಲೇ ಮೀರಿ ಹೋಯಿತು” ಎಂದು ಗಟ್ಟಿಯಾಗಿ ಕರೆದಳು. ಹಾಗೆಯೇ ಮುಂದುವರಿದು “ನನ್ನ ಪ್ರೀತಿಯ ಕೃಷ್ಣ, ನನ್ನ ಮುದ್ದು ಪದ್ಮ ನಯನ ಮಗುವೆ, ದಯವಿಟ್ಟು ಬಂದು ನನ್ನ ಎದೆಯ ಹಾಲನ್ನು ಕುಡಿ. ನೀನು ಸಾಕಷ್ಟು
ಆಟವಾಡಿದ್ದೀಯೆ.
ನನ್ನ ಪುಟ್ಟ ಮಗು, ನಿನಗೆ ಬಹಳ ಹಸಿವಾಗಿರಬೇಕು. ಇಷ್ಟು ಹೊತ್ತು ಆಟವಾಡಿ ನಿನಗೆ ನನಗೆ ಬಹಳ ಆಯಾಸವಾಗಿದೆ’ ಎಂದಳು ಅನಂತರ ಬಲರಾಮನನ್ನು ಕುರಿತೂ ಹೀಗೆ ಹೇಳಿದಳು – ನನ್ನ ಮುದ್ದು ಹುಡುಗ, ನನ್ನ ಮನೆಯ ದಿವ್ಯ ಪ್ರಭೆಯೇ ನಿನ್ನ ತಮ್ಮ ಕೃಷ್ಣನೊಡನೆ ಕೂಡಲೇ ಬಾ. ಬೆಳಗಿನಿಂದ ನೀವು ಆಡುತ್ತಲೇ ಇದ್ದೀರಿ. ತುಂಬಾ ಆಯಾಸವಾಗಿರುತ್ತದೆ. ಮನೆಗೆ ಬಂದು ಊಟ ಮಾಡಿ. ನಿಮ್ಮ ತಂದೆ ನಂದ ರಾಜನು ನಿಮಗಾಗಿ ಕಾಯುತ್ತಿದ್ದಾರೆ. ಅವರೂ ಊಟಮಾಡಬೇಕು. ಆದ್ದರಿಂದ ಬೇಗ ಬನ್ನಿ.’
ನ೦ದ ಮಹಾರಾಜನು ತಮಗಾಗಿ ಕಾಯುತ್ತಿದ್ದಾನೆ. ತಾವಿಲ್ಲದೆ ಊಟ ಮಾಡುವುದು ಅವನಿಗೆ ಸಾಧ್ಯವಿಲ್ಲ ಎಂದು ಕೇಳುತ್ತಲೇ ಕೃಷ್ಣ ಬಲರಾಮರು ಮನೆಗೆ ಹೊರಡಲು ಸಿದ್ಧರಾದರು. ಆಗ ಅವರ ಜೊತೆಯಲ್ಲಿ ಆಟವಾಡುತ್ತಿದ್ದ ಹುಡುಗರು “ನಮ್ಮ ಆಟವು ಒಳ್ಳೆಯ ಘಟ್ಟಕ್ಕೆ ಬಂದಾಗಲೇ ಕೃಷ್ಣನು ಹೊರಟು ಹೋಗುತ್ತಿದ್ದಾನೆ. ಅವನು ಹಾಗೆ ಹೋಗಲು ನಾವು ಬಿಡುವುದಿಲ್ಲ” ಎಂದು ಹೇಳಿದರು.
ತಮ್ಮೊಂದಿಗೆ ಮತ್ತೆ ಆಟವಾಡಲು ಬಿಡುವುದಿಲ್ಲ ಎಂದು ಅವನ ಜೊತೆ ಹುಡುಗರು ಹೇಳಿದ್ದನ್ನು ಕೇಳಿದ ಕೃಷ್ಣನಿಗೆ ಹೆದರಿಕೆಯಾಯಿತು. ಮನೆಗೆ ಹಿಂತಿರುಗುವ ಬದಲು ಮತ್ತೆ ಅವರೊಂದಿಗೆ ಆಡಲು ಹೊರಟ. ಆಗ ಯಶೋದೆಯು ಹುಡುಗರನ್ನು ಗದರಿಸಿ ಕೃಷ್ಣನಿಗೆ ಹೀಗೆ ಹೇಳಿದಳು. ‘ನನ್ನ ಮುದ್ದುಕೃಷ್ಣ ನೀನು ಬೀದಿಯ ಹುಡುಗ ಎಂದುಕೊಂಡಿದ್ದೀಯೇನು? ನಿನಗೆ ಮನೆಯಿಲ್ಲವೇ? ದಯವಿಟ್ಟು ಮನೆಗೆ ಬಾ.
ಬೆಳಗಿನಿಂದ ಆಟವಾಡಿ ನಿನ್ನ ಮೈಯೆಲ್ಲಾ ಕೊಳೆಯಾಗಿದೆ. ಮನೆಗೆ ಬಂದು ಸ್ನಾನಮಾಡು. ಅಲ್ಲದೆ ಇವತ್ತು ನಿನ್ನ ಹುಟ್ಟು ಹಬ್ಬ. ನೀನು ಮನೆಗೆ ಬಂದು ಬ್ರಾಹ್ಮಣರಿಗೆ ಗೋದಾನ ಮಾಡಬೇಕು. ನಿನ್ನ ಜೊತೆಯ ಆಟಗಾರರನ್ನು ಅವರ ತಾಯಂದಿರು ಒಡವೆಗಳಿಂದ ಹೇಗೆ ಅಲಂಕರಿಸಿದ್ದಾರೆ ನೋಡಿದೆಯಾ? ನೀನು ಶುಚಿಯಾಗಿ ಒಳ್ಳೆಯ ಉಡುಪು ಮತ್ತು ಒಡವೆಗಳಿಂದ ಅಲಂಕಾರ ಮಾಡಿಕೊಳ್ಳಬೇಕು. ಆದ್ದರಿಂದ ಮಗು ದಯವಿಟ್ಟು ಮನೆಗೆ ಬಾ. ಸ್ನಾನ ಮಾಡು. ಸೊಗಸಾದ ಉಡುಪನ್ನು ಧರಿಸು. ಅನಂತರ ಮತ್ತೆ ಆಟಕ್ಕೆ ಹೋಗಬಹುದು.”

ಹೀಗೆ ಬ್ರಹ್ಮ ವಿಷ್ಣು ಶಿವ ಇಂತಹ ಮಹಾನ್ ದೇವತೆಗಳು ಪೂಜಿಸುವ ಕೃಷ್ಣ ಮತ್ತು ಬಲರಾಮನನ್ನು ತಾಯಿ ಯಶೋದೆಯು ಮನೆಗೆ ಬರುವಂತೆ ಕರೆದಳು. ಅವಳು ಅವರು ತನ್ನ ಮಕ್ಕಳೇ ಎಂದು ಯೋಚಿಸುತ್ತಿದ್ದಳು. ತಾಯಿ ಯಶೋದೆಯ ಮಕ್ಕಳಾದ ಕೃಷ್ಣ ಮತ್ತು ಬಲರಾಮರು ಮನೆಗೆ ಬಂದಾಗ ಅವಳು ಅವರಿಗೆ ಚೆನ್ನಾಗಿ ಸ್ನಾನ ಮಾಡಿಸಿ ಒಳ್ಳೆಯ ಉಡುಪನ್ನು ಹಾಕಿ ಒಡವೆಗಳನ್ನು ತೊಡಿಸಿದಳು.
ಅನಂತರ ಬ್ರಾಹ್ಮಣರಿಗೆ ಕರೆ ಕಳುಹಿಸಿ ಕೃಷ್ಣನ ಹುಟ್ಟು ಹಬ್ಬದ ಸಂದರ್ಭದಲ್ಲಿ ತನ್ನ ಮಕ್ಕಳ ಮೂಲಕ ಹಲವು ಗೋವುಗಳನ್ನು ದಾನ ಮಾಡಿದಳು. ಹೀಗೆ ಅವಳು ಮನೆಯಲ್ಲಿ ಕೃಷ್ಣನ ಹುಟ್ಟು ಹಬ್ಬವನ್ನು ಆಚರಿಸಿದಳು.
ಜೋಡಿ ವೃಕ್ಷಗಳು ಬಿದ್ದ ಘಟನೆಯನಂತರ ಎಲ್ಲ ಗೋಪಾಲಕರೂ ನಂದ ಮಹಾರಾಜನ ಅಧ್ಯಕ್ಷತೆಯಲ್ಲಿ ಸಭೆ ಸೇರಿದರು. ರಾಕ್ಷಸರಿಂದ ತಮಗೆ ಒದಗುತ್ತಿದ್ದ ವಿಪತ್ತುಗಳನ್ನು ನಿವಾರಿಸಿಕೊಳ್ಳುವ ಬಗೆಯ ಬಗ್ಗೆ ಅವರು ಸಮಾಲೋಚನೆ ಮಾಡತೊಡಗಿದರು. ನಂದ ಮಹಾರಾಜನ ಸಹೋದರ ಉಪನಂದನೂ ಸಭೆಯಲ್ಲಿದ್ದ.
ಅವನು ವಿದ್ವಾಂಸ ಮತ್ತು ಅನುಭವಿ ಎಂದು ಜನ ಗೌರವಿಸುತ್ತಿದ್ದರು. ಅವನೊಬ್ಬಮುಖಂಡನಾಗಿದ್ದನಲ್ಲದೆ ಕೃಷ್ಣ ಬಲರಾಮರ ಹಿತೈಷಿಯೂ ಆಗಿದ್ದನು. ಅವನು ಸಭೆಯನ್ನುದ್ದೇಶಿಸಿ ಹೀಗೆ ಹೇಳಿದನು: “ನನ್ನ ಪ್ರೀತಿಯ ಸ್ನೇಹಿತರೇ, ಇಲ್ಲಿನ ಶಾಂತಿಯನ್ನು ಭಂಗಗೊಳಿಸಲು ಮಹಾರಾಕ್ಷಸರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಿರುವುದನ್ನು ಕಾಣುತ್ತಿದ್ದೇವೆ.
ವಿಶೇಷವಾಗಿ ಅವರು ಸಣ್ಣ ಮಕ್ಕಳನ್ನು ಕೊಲ್ಲಲು ಬರುತ್ತಿದ್ದಾರೆ. ಆದ್ದರಿಂದ ನಾವು ಈ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗುವ ಬಗ್ಗೆ ಯೋಚಿಸಬೇಕಾಗಿದೆ. ಪೂತನಿಯ ವಿಷಯವನ್ನೇ ತೆಗೆದುಕೊಳ್ಳಿ, ಅಂತಹ ಮಹಾರಾಕ್ಷಸಿಯ ಕೈಗಳಿಂದ ಕೃಷ್ಣನು ತಪ್ಪಿಸಿಕೊಂಡದ್ದು ಶ್ರೀಹರಿಯ ಕೃಪೆಯಲ್ಲದೆ ಬೇರೇನೂ ಅಲ್ಲ ಅನಂತರ ಸುಂಟರಗಾಳಿ ರಾಕ್ಷಸನು ಕೃಷ್ಣನನ್ನು ಆಕಾಶಕ್ಕೆ ಎತ್ತಿಕೊಂಡು ಹೋದ.
ಶ್ರೀ ಹರಿಯ ಕೃಪೆಯಿಂದ ಕೃಷ್ಣ ಉಳಿದ, ರಾಕ್ಷಸನು ಕಲ್ಲಿನ ಮೇಲೆ ಬಿದ್ದು ಸತ್ತ. ಇತ್ತೀಚೆಗೆ ಮಗುವು ಎರಡು ಮರಗಳ ನಡುವೆ ಆಟವಾಡುತ್ತಿದ್ದಾಗ ಮರಗಳು ರಭಸದಿಂದ ಬಿದ್ದು ಹೋದವು. ಆದರೂ ಮಗುವಿಗೆ ಏನೂ ಅಪಾಯವಾಗಲಿಲ್ಲ. ಮತ್ತೆ ಶ್ರೀಹರಿಯೇ ಅವನನ್ನು ರಕ್ಷಿಸಿದ. ಈ ಮಗುವೋ ಆ ಮರಗಳ ಕೆಳಗೆ ಸಿಕ್ಕಿ ಜಜ್ಜಿ ಹೋಗಿದ್ದರೆ ಎಂತಹ ಅನಾಹುತವಾಗಿ ಬಿಡುತ್ತಿತ್ತು. ಈ ಎಲ್ಲ ಘಟನೆಗಳ ಬಗ್ಗೆ ಯೋಚಿಸಿದರೆ ನಮಗೆ ಈ ಸ್ಥಳದಲ್ಲಿ ಕ್ಷೇಮವಿಲ್ಲ ಎಂಬುದು ತಿಳಿದು ಬರುತ್ತದೆ. ನಾವು ಇಲ್ಲಿಂದ ಹೊರಟು ಹೋಗೋಣ.
ಪ್ರಭು ಹರಿಯ ಕೃಪೆಯು ಈವರೆವಿಗೂ ನಮ್ಮನ್ನು ವಿವಿಧ ಅನಾಹುತಗಳಿಂದ ಕಾಪಾಡಿದೆ. ಈಗಲಾದರೂ ನಾವು ಎಚ್ಚರಗೊಳ್ಳಬೇಕು. ಈ ಸ್ಥಳಗಳನ್ನು ಬಿಟ್ಟು ನಾವು ಶಾಂತವಾಗಿ ಬದುಕಲು ಸಾಧ್ಯವಿರುವ ಯಾವುದಾದರೂ ಸ್ಥಳಕ್ಕೆ ಹೋಗೋಣ. ವೃಂದಾವನ ಎಂಬ ಹೆಸರಿನ ಅರಣ್ಯಕ್ಕೆ ಹೋಗೋಣ. ಅಲ್ಲಿ ಈಗ ತಾನೆ ಹೊಸ ಗಿಡಮೂಲಿಕೆಗಳು ಬೆಳೆದಿವೆ. ನಮ್ಮ ಗೋವುಗಳಿಗೆ ಮೇಯಲು ತುಂಬ ಅನುಕೂಲವಾದ ಸ್ಥಳವಾಗಿದೆ. ನಾವೂ ನಮ್ಮ ಕುಟುಂಬಗಳೂ, ಗೋಪಿಯರೂ ಅವರ ಮಕ್ಕಳೂ ಅಲ್ಲಿ ಶಾಂತಿಯಿಂದ ಬದುಕಬಹುದು”.

ಉಪನಂದನನ ಮಾತುಗಳನ್ನು ಕೇಳಿದ ಗೋಪಾಲಕರೆಲ್ಲ ಅವನ ಮಾತನ್ನು ಒಪ್ಪಿದರು. ‘ನಾವೆಲ್ಲ ಕೂಡಲೇ ಅಲ್ಲಿಗೆ ಹೋಗೋಣ’ ಎಂದರು. ಎಲ್ಲರೂ ತಮ್ಮ ಮನೆಗಳ ಪೀಠೋಪಕರಣಗಳನ್ನೂ ಪಾತ್ರೆಗಳನ್ನೂ ಗಾಡಿಗಳಿಗೆ ತುಂಬಿಸಿ ವೃಂದಾವನಕ್ಕೆ ಹೊರಡಲು ಸಿದ್ಧವಾದರು. ಗ್ರಾಮದ ವೃದ್ಧರು, ಮಕ್ಕಳು ಮತ್ತು ಸ್ತ್ರೀಯರನ್ನು ಪೀಠಗಳಲ್ಲಿ ಕೂರಿಸಿದರು.
ಗೋಪಾಲಕರು ಬಿಲ್ಲು ಬಾಣಗಳೊಡನೆ ಗಾಡಿಯ ಹಿಂದೆ ನಡೆಯಲು ಸಿದ್ಧರಾದರು. ಎಲ್ಲ ಹಸುಗಳನ್ನೂ ಎತ್ತುಗಳನ್ನೂ ಕರುಗಳನ್ನೂ ಮುಂದೆ ಬಿಟ್ಟರು. ಗಂಡಸರು ಬಿಲ್ಲು ಬಾಣಗಳನ್ನು ಹಿಡಿದು ಗೋ ಮಂದೆಗಳ ಸುತ್ತ ನಿಂತು ಕಹಳೆ ಕೊಂಬುಗಳನ್ನು ಊದಿದರು. ಹೀಗೆ ಸದ್ದು ಗದ್ದಲಗಳನ್ನು ಮಾಡುತ್ತಾ ಅವರು ವೃಂದಾವನಕ್ಕೆ ಹೊರಟರು.
ಗಾಡಿಯಲ್ಲಿ ಕುಳಿತಿದ್ದ ವ್ರಜ ಸ್ತ್ರೀಯರ (ಗೋಪಿಯರ) ಸೌಂದರ್ಯವೂ ವರ್ಣನಾತೀತವಾಗಿತ್ತು. ಅವರೆಲ್ಲರೂ ಬೆಲೆ ಬಾಳುವ ಸೀರೆಗಳನ್ನು ಒಡವೆಗಳನ್ನು ಧರಿಸಿ ಅಲಂಕರಿಸಿಕೊಂಡಿದ್ದರು. ಗಾಡಿಯಲ್ಲಿ ಹೋಗುತ್ತಾ ಎಂದಿನಂತೆ ಮಗು ಕೃಷ್ಣನ ಬಾಲ ಲೀಲೆಗಳನ್ನು ಹಾಡಲು ಪ್ರಾರಂಭಿಸಿದರು. ತಾಯಿ ಯಶೋದೆ ಮತ್ತು ತಾಯಿ ರೋಹಿಣಿಯರು ಬೇರೊಂದು ಗಾಡಿಯಲ್ಲಿ ಕುಳಿತಿದ್ದರು.
ಕೃಷ್ಣ ಬಲರಾಮರು ಅವರ ತೊಡೆಯ ಮೇಲೆ ಕುಳಿತಿದ್ದರು. ಅವರು ತಮ್ಮ ಮಕ್ಕಳೊಂದಿಗೆ ಮಾತನಾಡುವುದರಲ್ಲಿ ಮಗ್ನವಾಗಿದ್ದರು. ಆ ಸಂತೋಷವನ್ನು ಅನುಭವಿಸುತ್ತಿದ್ದ ಅವರು ಬಹಳ ಸುಂದರವಾಗಿ ಕಂಡರು.
ವೃಂದಾವನವನ್ನು ತಲಪಿದ ಅನಂತರ ತಮ್ಮ ಗಾಡಿಗಳನ್ನೆಲ್ಲಾ ಅರ್ಧವೃತ್ತಾಕಾರದಲ್ಲಿ ನಿಲ್ಲಿಸಿದರು. ಅಲ್ಲಿ ತಮ್ಮ ತಾತ್ಕಾಲಿಕ ವಸತಿಯನ್ನು ನಿರ್ಮಿಸಿದರು. ಕೃಷ್ಣ ಬಲರಾಮರಿಗೂ ನದೀ ತೀರ, ವೃಂದಾವನ ಹಾಗೂ ಗೋವರ್ಧನಗಿರಿ ಇವೆಲ್ಲವೂ ಬಹಳ ಸುಂದರವಾಗಿ ಕಂಡಿತು. ಇದೆಲ್ಲವನ್ನು ಕಂಡು ಅವರಿಗೆ ಸಂತೋಷವಾಯಿತು. ತಂದೆ ತಾಯಿಯರ ಪ್ರೀತಿಯ ಆರೈಕೆಯಲ್ಲಿ ಬೆಳೆಯ ತೊಡಗಿದರು. ಅವರು ತಮ್ಮ ಬಾಲ ಲೀಲೆಗಳಿಂದ ತೊದಲು ನುಡಿಗಳಿಂದ ಗೋಪಾಲಕ ಗೋಪಿಯರಿಗೂ ಸಂತೋಷವುಂಟು ಮಾಡಿದರು.
ಕ್ರಮೇಣ ಕೃಷ್ಣ ಮತ್ತು ಬಲರಾಮರಿಗೆ ಕರುಗಳನ್ನು ನೋಡಿಕೊಳ್ಳುವ ಕೆಲಸವನ್ನು ವಹಿಸಲಾಯಿತು. ಗೋಪಾಲಕ ಬಾಲಕರ ಮೊದಲ ಕೆಲಸ ಪುಟ್ಟ ಕರುಗಳನ್ನು ನೋಡಿಕೊಳ್ಳುವುದು. ಅವರು ಬಾಲ್ಯದಿಂದಲೇ ಈ ಶಿಕ್ಷಣವನ್ನು ಕೊಡುತ್ತಿದ್ದರು. ಆದರಿಂದ ಇತರ ಪುಟ್ಟ ಗೋಪಾಲಕ ಹುಡುಗರೊಂದಿಗೆ ಕೃಷ್ಣ ಮತ್ತು ಬಲರಾಮರೂ ಹುಲ್ಲುಗಾವಲಿಗೆ ಹೋಗಿ ಕರುಗಳನ್ನು ನೋಡಿಕೊಳ್ಳುತ್ತಾ ತಮ್ಮ ಗೆಳೆಯರೊಂದಿಗೆ ಆಟವಾಡುತ್ತಿದ್ದರು.
ಒಮ್ಮೊಮ್ಮೆ ಈ ಅಣ್ಣತಮ್ಮಂದಿರು ಕೊಳಲನ್ನು ನುಡಿಸುತ್ತಿದ್ದರು. ಅಮಲಕಿ ಮತ್ತು ಬೇಲದ ಹಣ್ಣುಗಳೊಂದಿಗೆ ಚೆಂಡಾಟವಾಡುತ್ತಿದ್ದರು. ಕೆಲವೊಮ್ಮೆ ನರ್ತನ ಮಾಡುತ್ತಿದ್ದರು. ತಮ್ಮ ಕಿರುಗೆಜ್ಜೆಗಳಿಂದ ಹಿತವಾದ ಶಬ್ದ ಮಾಡುತ್ತಿದ್ದರು. ಕೆಲವು ಬಾರಿ ಕಂಬಳಿಗಳನ್ನು ಹೊದ್ದು ತಾವೇ ಎತ್ತು ಮತ್ತು ದನಗಳಂತೆ ನಟಿಸುತ್ತಿದ್ದರು.

ಅವುಗಳ ಧ್ವನಿಯನ್ನು ಅನುಸರಿಸಿ ಗೂಳಿಗಳ ಕಾಳಗದ ಆಟವಾಡುತ್ತಿದ್ದರು. ಕೆಲವು ಸಲ ವಿವಿಧ ಪ್ರಾಣಿ ಪಕ್ಷಿಗಳು ಕೂಗುವುದನ್ನು ಅನುಕರಿಸುತ್ತಿದ್ದುದೂ ಉಂಟು. ಹೀಗೆ ಹೊರ ನೋಟಕ್ಕೆ ಅವರಿಬ್ಬರೂ ಸಾಮಾನ್ಯ ಮಕ್ಕಳಂತೆ ಬಾಲ ಲೀಲೆಗಳಲ್ಲಿ ತೊಡಗಿ ಸಂತೋಷ ಪಡುತ್ತಿದ್ದರು.
ಒಂದು ದಿನ ಕೃಷ್ಣಮತ್ತು ಬಲರಾಮರು ಯಮುನಾ ನದೀ ತೀರದಲ್ಲಿ ಆಟವಾಡುತ್ತಿದ್ದರು. ಆಗ ಮತ್ಸಾಸುರನೆಂಬ ರಾಕ್ಷಸನು ಇವರನ್ನು ಕೊಲ್ಲಲು ಒಂದು ಕರುವಿನ ರೂಪದಲ್ಲಿ ಬಂದು ಇತರ ಕರುಗಳೊಂದಿಗೆ ಬೆರೆತನು. ಆದರೆ ಇದನ್ನು ಗಮನಿಸಿದ ಕೃಷ್ಣನು ಈ ವಿಚಾರವನ್ನು ಬಲರಾಮನಿಗೂ ತಿಳಿಸಿದನು.
ಇಬ್ಬರು ಸಹೋದರರು ಶಬ್ದ ಮಾಡದೆ ಕರುವಿನ ರೂಪದ ಅಸುರನ ಬಳಿಗೆ ಹೋದರು. ಕೃಷ್ಣನು ಕೂಡಲೇ ಅದರ ಹಿಂಗಾಲು ಮತ್ತು ಬಾಲವನ್ನು ಬಲವಾಗಿ ಹಿಡಿದು ಜೋರಾಗಿ ಸುತ್ತಿಸಿ ಮರದ ಮೇಲಕ್ಕೆ ಎಸೆದು ಬಿಟ್ಟನು. ಇದರಿಂದ ಪ್ರಾಣ ಕಳೆದುಕೊಂಡ ರಾಕ್ಷಸನು ಮರದ ಮೇಲಿಂದ ಭಯಂಕರವಾದ ಶಬ್ದದೊಂದಿಗೆ ಕೆಳಕ್ಕೆ ಬಿದ್ದನು.
ಇದನ್ನು ಕಂಡ ಅವನ ಗೋಪಬಾಲ ಸ್ನೇಹಿತರೆಲ್ಲರೂ ಅವನನ್ನು ಸುತ್ತುವರಿದು ಭಲೆ ಭಲೆ! ಎಂದು ಅಭಿನಂದಿಸಿದರು. ಆಗಸದಿಂದ ದೇವತೆಗಳೂ ಆನಂದಭರಿತರಾಗಿ ಹೂಮಳೆಗರೆದರು. ಹೀಗೆ ಕೃಷ್ಣ ಬಲರಾಮರು ಸಾಹಸ ಕಾರ್ಯಗಳನ್ನು ಮಾಡುತ್ತಾ ವೃಂದಾವನದ ಗೋಪಬಾಲರೊಂದಿಗೆ ಸಂತೋಷದಿಂದಿದ್ದರು.
ತಮ್ಮ ಕರುಗಳಿಗೆ ನೀರು ಕುಡಿಸಲೆಂದು ಎಲ್ಲ ಗೋಪ ಬಾಲಕರು ಪ್ರತಿನಿತ್ಯ ಯಮುನಾ ನದಿಯ ದಡಕ್ಕೆ ಹೋಗುತ್ತಿದ್ದರು. ಕರುಗಳು ನೀರು ಕುಡಿದರೆ ಜೊತೆಗೇ ಇವರೂ ನೀರು ಕುಡಿಯುತ್ತಿದ್ದರು. ಒಂದು ದಿನ ನೀರನ್ನು ಕುಡಿದು ಅವರು ನದಿಯ ತೀರದಲ್ಲಿ ಕುಳಿತಿದ್ದಾಗ ಬಕ ಪಕ್ಷಿಯ ಆಕಾರದ, ಗುಡ್ಡದ ಗಾತ್ರದ ಒಂದು ದೊಡ್ಡ ಪ್ರಾಣಿಯನ್ನು ಕಂಡರು. ಆದು ಸಿಡಿಲಿನಂತೆ ಬಲಶಾಲಿಯಾಗಿರುವಂತೆ ತೋರಿತು.
ಆ ಅಸಾಧಾರಣ ಪ್ರಾಣಿಯನ್ನು ಕಂಡು ಅವರು ಹೆದರಿದರು. ಆ ಪ್ರಾಣಿಯ ಹೆಸರು ಬಕಾಸುರ ಕಂಸನ ದುಷ್ಟ ಸ್ನೇಹಿತ. ಅವನು ಒಮ್ಮೆಲೇ ಕೃಷ್ಣನ ಮೇಲೆ ತನ್ನ ಚುಚ್ಚುವ ಹರಿತವಾದ ಕೊಕ್ಕಿನಿಂದ ಆಕ್ರಮಣ ಮಾಡಿ ನುಂಗಿ ಬಿಟ್ಟನು. ಇದನ್ನು ಕಂಡು ಬಲರಾಮ ಮತ್ತಿತರ ಹುಡುಗರು ಭಯದಿಂದ ಸ್ತಬ್ಧರಾದರು. ಸತ್ತವರಂತೆ ನಿಷ್ಕ್ರಿಯರಾದರು.
ಬಕಾಸುರನು ಕೃಷ್ಣನನ್ನು ನುಂಗುತ್ತಿರುವಾಗ ತನ್ನ ಗಂಟಲಿನೊಳಗೆ ಬೆಂಕಿ ಉರಿಯುತ್ತಿರುವಂತೆ ಅನುಭವವಾಗತೊಡಗಿತು. ಇದಕ್ಕೆ ಕಾರಣ ಕೃಷ್ಣನ ಹೊಳೆಯುವ ಪ್ರಭೆ. ರಾಕ್ಷಸನು ಕೂಡಲೇ ಕೃಷ್ಣನನ್ನು ಬಾಯಿಂದ ಉಗುಳಿ ತನ್ನ ಕೊಕ್ಕಿನಿಂದ ಚುಚ್ಚಿ ಅವನನ್ನು ಕೊಲ್ಲಲು ಯತ್ನಿಸಿದ. ತೋರಿಕೆಗೆ ಕೃಷ್ಣನು ನಂದ ಮಹಾರಾಜನ ಮಗುವಿನಂತಿದ್ದನು.

ಅವನು ಸೃಷ್ಟಿಕರ್ತನಾದ ಬ್ರಹ್ಮದೇವನ ನಿಜವಾದ ತಂದೆಯೆಂಬುದು ಬಕಾಸುರನಿಗೆ ತಿಳಿಯದು. ದೇವತೆಗಳಿಗೆ ಆನಂದ ಸಾಗರನೂ, ಸಾಧು ಸಜ್ಜನರ ಪಾಲಕನೂ ಆದ ಯಶೋದಾನಂದನನು ಆ ಬೃಹದಾಕಾರದ ಬಕಪಕ್ಷಿಯ ಕೊಕ್ಕನ್ನು ಹಿಡಿದು, ತನ್ನ ಗೋಪಾಲಕ ಗೆಳೆಯರ ಮುಂದೆ ಒಂದು ಹುಲ್ಲಿನ ಎಸಳನ್ನು ಸೀಳುವಷ್ಟು ಸುಲಭವಾಗಿ ರಾಕ್ಷಸನ ಬಾಯನ್ನು ಸೀಳಿದನು.
ಸ್ವರ್ಗಲೋಕದ ನಿವಾಸಿಗಳೆಲ್ಲ ಅತ್ಯಂತ ಸುವಾಸನೆಯುಳ್ಳ ಹೂವಾದ ಚಮೇಲಿಯಂತಹ ಹೂಗಳನ್ನು ತಮ್ಮ ಅಭಿನಂದನೆಯ ಸಂಕೇತವಾಗಿ ಆಕಾಶದಿಂದ ಮಳೆಗರೆದರು. ಹೀಗೆ ಹೂ ಮಳೆ ಬೀಳುವುದರೊಂದಿಗೆ ಕಹಳೆಗಳು, ಮೃದಂಗಗಳು ಹಾಗೂ ಶಂಖಗಳ ನಾದದ ಕಂಪನವೂ ಎಲ್ಲೆಡೆ ಹರಡಿತು.
ಇದೆಲ್ಲವನ್ನು ಕಂಡು ಕೃಷ್ಣನ ಜೊತೆಯ ಬಾಲಕರಿಗೆ ಬಹಳ ಆಶ್ಚರ್ಯವಾಯಿತು. ಕೃಷ್ಣನಿಗೇನೂ ಅಪಾಯವಾಗದಿರುವುದು ಕಂಡು ಬಲರಾಮನೂ ಸೇರಿದಂತೆ ಎಲ್ಲ ಹುಡುಗರಿಗೂ ಮತ್ತೆ ಜೀವಬಂದಂತಾಯಿತು. ಕೃಷ್ಣನು ತಮ್ಮ ಕಡೆಗೆ ಬ೦ದ ಕೂಡಲೇ ನಂದನು ಮಗನನ್ನು ಅಪ್ಪಿಕೊಂಡನು. ಅನಂತರ ಅವರೆಲ್ಲರೂ ತಮ್ಮ ಕರುಗಳನ್ನೆಲ್ಲಾ ಒಂದೆಡೆ ಸೇರಿಸಿ ಮನೆಗೆ ಹೊರಟರು.
ಮನೆಯನ್ನು ಸೇರಿದ ಕೂಡಲೇ ಅವರೆಲ್ಲರೂ ನಂದಕುವರನ ಅದ್ಭುತ ಚಟುವಟಿಕೆಗಳನ್ನು ಕುರಿತು ಮಾತನಾಡಲು ಪ್ರಾರಂಭಿಸಿದರು. ಬಾಲಕರಿಂದ ಅದನ್ನೆಲ್ಲಾ ಕೇಳಿದ ಗೋಪಿಯರಿಗೂ, ಗೋಪಾಲಕರಿಗೂ ಬಹಳ ಸಂತೋಷವಾಯಿತು. ಏಕೆಂದರೆ ಅವರಿಗೆ ಸಹಜವಾಗಿಯೇ ಕೃಷ್ಣನ ಬಗ್ಗೆ ಬಹಳ ಪ್ರೀತಿಯಿತ್ತು.
ಅವನ ಮಹಾತ್ಮೆಯನ್ನು ವಿಜಯದ ಕಾರ್ಯಗಳನ್ನು ಕೇಳಿ ಅವರ ಪ್ರೀತಿಯು ಇನ್ನೂ ಹೆಚ್ಚಿತು. ಸಾವಿನ ಬಾಯಿಂದ ಪಾರಾಗಿ ಬಂದನೆಂದು ಅವರೆಲ್ಲ ಅವನನ್ನು ಮತ್ತಷ್ಟು ವಿಶೇಷವಾಗಿ ಪ್ರೀತಿಸಿದರು. ಪ್ರೀತಿ-ವಾತ್ಸಲ್ಯದಿಂದಾಗಿ ಕೃಷ್ಣನಿಂದ ಬೇರೆಡೆ ಮುಖವನ್ನು ತಿರುಗಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಕೃಷ್ಣನ ಮೇಲೆ ರಾಕ್ಷಸರು ನಾನಾ ರೀತಿಯಲ್ಲಿ ಆಕ್ರಮಣ ಮಾಡುತ್ತಿದ್ದರು. ಆದರೆ ಆ ರಾಕ್ಷಸರು ಸಾಯುತ್ತಿದ್ದರೇ ಹೊರತು ಕೃಷ್ಣನಿಗೇನೂ ಅಪಾಯವಾಗುತ್ತಿಲ್ಲವಲ್ಲ. ಇದು ಎಷ್ಟು ಅದ್ಭುತ ಸಂಗತಿ ಎಂದು ಅವರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಅವರೆಲ್ಲ ಈ ರೀತಿಯ ಮಾತುಕತೆಯಲ್ಲಿ ಎಷ್ಟೊಂದು ಮೈಮರೆತಿದ್ದರೆಂದರೆ ತಮ್ಮ ಜೀವನದ ಎಲ್ಲ ನೋವುಗಳನ್ನು ಅವರು ಮರತೇಬಿಟ್ಟಿದ್ದರು.
ಇದೇ ಕೃಷ್ಣಪ್ರಜ್ಞೆಯ ಪರಿಣಾಮ. ನಂದ ಮಹಾರಾಜನು ಐದು ಸಾವಿರ ವರ್ಷಗಳ ಹಿಂದೆ ಇದನ್ನು ಅನುಭವಿಸಿದನು. ಆದರೆ ಈಗಲೂ, ಕೃಷ್ಣನ ಮತ್ತು ಅವನ ಗೆಳೆಯರ ಅಲೌಕಿಕ ಲೀಲೆಗಳನ್ನು ಕುರಿತು ಮಾತನಾಡುವುದರಿಂದಲೇ ಕೃಷ್ಣ ಪ್ರಜ್ಞೆಯಲ್ಲಿರುವವರು ಆ ಅನುಭವವನ್ನು ಪಡೆಯಬಹುದು.
ಹೀಗೆ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿದ ಶ್ರೀರಾಮಚಂದ್ರನ ವಾನರರಂತೆ ಸಮುದ್ರಲಂಘನ ಮಾಡಿ ಲಂಕೆಗೆ ಹೋದ ಹನುಮಂತನಂತೆ ಬಲರಾಮ ಮತ್ತು ಕೃಷ್ಣರು ತಮ್ಮ ಬಾಲ ಲೀಲೆಗಳಿಂದ ಸಂತೋಷ ಪಡುತ್ತಿದ್ದರು. ಇವರೊಂದಿಗೆ ಈ ಲೀಲೆಗಳಲ್ಲಿ ಭಾಗಿಗಳಾದ ಇವರ ಗೆಳೆಯರೂ ಇವರ ಜೊತೆ ಆನಂದದಿಂದ ಬಾಲ್ಯಾವಸ್ಥೆಯನ್ನು ಕಳೆದರು.

ಒಮ್ಮೆ ಪ್ರಭುವು ತನ್ನ ಎಲ್ಲ ಗೋಪಾಲಕ ಗೆಳೆಯರೊಡನೆ ಬೆಳಗ್ಗೆ ಬೇಗನೇ ಕಾಡಿಗೆ ಹೋಗಿ ಅಲ್ಲಿ ಊಟಮಾಡಬೇಕೆಂದು ಬಯಸಿದ. ಹಾಸಿಗೆಯನ್ನು ಬಿಟ್ಟೇಳುತ್ತಲೆ ಒಂದು ಎಮ್ಮೆಯ ಕೊಂಬಿನ ಮೂಲಕ ಊದಿ ತನ್ನ ಗೆಳೆಯರಿಗೆಲ್ಲ ಸೂಚನೆ ನೀಡಿ ಕರೆದ. ಅವರೆಲ್ಲ ತಮ್ಮ ಕರುಗಳನ್ನು ಅಟ್ಟಿಕೊಂಡು ಕಾಡಿಗೆ ಹೊರಟರು.
ಹೀಗೆ ಕೃಷ್ಣನೊಂದಿಗೆ ಸಾವಿರಾರು ಗೆಳೆಯರು ಸೇರಿದರು. ಅವರೆಲ್ಲರೂ ಕೋಲು, ಕೊಂಬು, ಕೊಳಲು ಹಾಗೂ ಊಟದ ಬುತ್ತಿಯನ್ನು ತಂದಿದ್ದರು. ಬಗೆ ಬಗೆಯ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿಕೊಂಡು ಬಂದಿದ್ದ ಆ ಬಾಲಕರೆಲ್ಲರೂ ತಮ್ಮ ಸಾವಿರಾರು ಕರುಗಳನ್ನು ನೋಡಿಕೊಳ್ಳುತ್ತಾ ಸಂತೋಷದಿಂದ ಸಾಗುತ್ತಿದ್ದರು.
ದಾರಿಯಲ್ಲಿ ಸಾಗುತ್ತಾ ಹುಡುಗಾಟವಾಡುತ್ತಾ ಕಾಡಿನ ಬೇರೆ ಬೇರೆ ಭಾಗಗಳಿಂದ ಹೂಗಳು, ಎಲೆಗಳು, ಕುಡಿಗಳು, ನವಿಲು ಗರಿಗಳು ಕೆಮ್ಮಣ್ಣು ಹೀಗೆ ನಾನಾ ರೀತಿಯ ವಸ್ತುಗಳನ್ನು ಸಂಗ್ರಹಿಸಿ ತಮ್ಮನ್ನು ತಾವು ಮತ್ತಷ್ಟು ಅಲಂಕರಿಸಿಕೊಂಡರು. ಕಾಡಿನಲ್ಲಿ ಸಾಗುತ್ತಾ ಇರುವಾಗ ಒಬ್ಬ ಹುಡುಗನು ಮತ್ತೊಬ್ಬನ ಬುತ್ತಿಯ ಚೀಲವನ್ನು ಕದ್ದು ಅದನ್ನು ಮೂರನೆಯವನಿಗೆ ಕೊಟ್ಟು ಬಿಡುವನು.
ಬುತ್ತಿಯ ಚೀಲವನ್ನು ಕಳೆದುಕೊಂಡವನಿಗೆ ಅದು ಗೊತ್ತಾದಾಗ ಅದನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸುವನು. ಆದರೆ ಹುಡುಗರು ಒಬ್ಬರಿಂದೊಬ್ಬರಿಗೆ ಅದನ್ನು ಎಸೆಯುತ್ತಾ ಹೋಗುವರು, ಹೀಗೆ ಹುಡುಗರ ಆ ಆಟಗಳು ಬಾಲ ಲೀಲೆಗಳಾಗಿ ಮೈದೋರಿದವು.
ಪ್ರಕೃತಿಯ ಸೌಂದರ್ಯವನ್ನು ನೋಡಲೆಂದು ಕೃಷ್ಣನು ಎಲ್ಲರಿಗಿಂತ ಮುಂದಾಗಿ ಹೋಗಿ ಒಂದು ಸ್ಥಳದಲ್ಲಿ ನಿಂತರೆ ಇತರ ಹುಡುಗರೂ ಅವನ ಹಿಂದೆ ಓಡುವರು. ಅವನನ್ನು ಮೊದಲು ಯಾರು ಮುಟ್ಟುವರು ಎಂಬ ಸ್ಪರ್ಧೆಯಾಗುತ್ತಿತ್ತು. ಅದು ಎಷ್ಟು ತೀವ್ರವಾಗಿತ್ತೆಂದರೆ ಒಬ್ಬನು ನಾನು ಮೊದಲು ಓಡಿ ಹೋಗಿ ಕೃಷ್ಣನನ್ನು ಮುಟ್ಟುತ್ತೇನೆ ಎಂದರೆ ಇನ್ನೊಬ್ಬನು ನಿನಗೆ ಅದು ಸಾಧ್ಯವಿಲ್ಲ ನಾನೇ ಕೃಷ್ಣನನ್ನು ಮೊದಲು ಮುಟ್ಟುತ್ತೇನೆ ಎನ್ನುವನು.
ಕೆಲವರು ಕೊಳಲನ್ನು ನುಡಿಸಿದರೆ ಇನ್ನು ಕೆಲವರು ಎಮ್ಮೆಯ ಕೊಂಬಿನಿಂದ ಮಾಡಿದ ಕಹಳೆಯನ್ನು ಊದಿದರು. ಕೆಲವರು ಸಂತೋಷದಿಂದ ನವಿಲಿನ ಹಿಂದೆ ನಡೆಯುತ್ತಾ ಕೋಗಿಲೆಯ ಧ್ವನಿಯನ್ನು ಅನುಕರಿಸಿದರು. ಆಕಾಶದಲ್ಲಿ ಪಕ್ಷಿಗಳು ಹಾರುತ್ತಿದ್ದಾಗ ನೆಲದ ಮೇಲೆ ಬೀಳುತ್ತಿದ್ದ ನೆರಳುಗಳನ್ನು ಹಿಂಬಾಲಿಸಲು ಓಡುತ್ತಿದ್ದರು ಹಾಗೂ ನವಿಲುಗಳ ವರ್ತನೆಯನ್ನು ಅನುಕರಿಸುತ್ತಿದ್ದರು.
ಕೆಲವರು ಕೋತಿಗಳ ಬಳಿಗೆ ಸದ್ದಿಲ್ಲದೆ ಹೋಗಿ ಕೂರುತ್ತಿದ್ದರು. ಇನ್ನು ಕೆಲವರು ಕೋತಿಗಳ ಬಾಲವನ್ನು ಹಿಡಿದು ಆಟವಾಡಿದರು. ಕೋತಿಗಳು ಮರದಿಂದ ಮರಕ್ಕೆ ಹಾರಾಡಿದಾಗ ಅವನ್ನು ಇವರೂ ಹಿಂಬಾಲಿಸಿದರು. ಒಂದು ಕೋತಿ ತನ್ನ ಹಲ್ಲುಗಳನ್ನು ತೋರಿಸಿದರೆ ಹುಡುಗನೊಬ್ಬ ಅದನ್ನು ಅನುಕರಿಸಿ ತಾನೂ ಹಲ್ಲುಗಳನ್ನು ತೋರಿಸಿದನು.
ಕೆಲವು ಹುಡುಗರು ಯಮುನೆ ತೀರದ ಕಪ್ಪೆಗಳನ್ನು ಹಿಡಿಯಲು ಹೋದರು. ಭಯದಿಂದ ಅವು ನೀರಿಗೆ ಹಾರಿದರೆ ಇವರೂ ನೀರಿಗೆ ಧುಮುಕಿದರು. ತಮ್ಮ ನೆರಳುಗಳನ್ನೇ ಕಂಡು ವಿವಿಧ ರೀತಿಯಲ್ಲಿ ಅದನ್ನು ಅನುಕರಿಸಿ ನಗುವರು. ನೀರಿಲ್ಲದ ಬಾವಿಯಲ್ಲಿ ಬಗ್ಗಿ ಗಟ್ಟಿಯಾಗಿ ಶಬ್ದಮಾಡುವರು. ಮಾರ್ದನಿಯು ಬಂದಾಗ ಅದಕ್ಕೆ ತಮಾಷೆಯ ಹೆಸರು ಕೊಟ್ಟು ನಗುವರು.
(ಮುಂದುವರಿಯುವುದು)






Leave a Reply