ಗೋವರ್ಧನೋದ್ಧಾರಕ…

“ಕಾಳಿಯ ಮರ್ದನ ನಡೆಸಿ ಕೃಷ್ಣನು ಯಮುನೆಯು ವಿಷಮಯವಾಗುವುದನ್ನು ತಪ್ಪಿಸಿದನು. ಕಾಳ್ಗಿಚ್ಚನ್ನು ನುಂಗಿ ವ್ರಜವಾಸಿಗಳನ್ನು ಕಾಪಾಡಿದನು. ಶರದೃತುವಿನಲ್ಲಿ ಗೆಳೆಯರೊಡನೆ ಆನಂದಿಸಿದನು. ದುರ್ಗಾದೇವಿ ಪೂಜೆಯಲ್ಲಿ ತೊಡಗಿ ಕೃಷ್ಣನನ್ನು ಪತಿಯಾಗಿ ಕರುಣಿಸುವಂತೆ ವ್ರತ ತೊಟ್ಟಿದ್ದ ಗೋಪಕನ್ಯೆಯರ ವಸ್ತ್ರಾಪಹರಣ ಮಾಡಿ, ಅವರನ್ನು ಅನುಗ್ರಹಿಸಿದನು. ಬ್ರಾಹ್ಮಣ ಪತ್ನಿಯರಿಂದ ಭೋಜನ ಸ್ವೀಕರಿಸಿ ಅವರನ್ನು ಉದ್ಧರಿಸಿದನು. ಹೀಗೆ ವೃಂದಾವನದಲ್ಲಿ ಕೃಷ್ಣನ ಲೀಲಾ ನಾಟಕವು ಸಾಗಿತ್ತು… (ಮುಂದೆ ಓದಿ…)

ವೃಂದಾವನವಾಸಿಗಳು ಸ್ವರ್ಗದ ಅರಸನೂ, ಮಳೆಸುರಿಸುವವನೂ, ಆದ ಇಂದ್ರನನ್ನು ತೃಪ್ತಿಗೊಳಿಸಲು ಒಂದು ಯಜ್ಞವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದುದನ್ನು ಕೃಷ್ಣ ಬಲರಾಮರು ಕಂಡರು. ಶ್ರೀಕೃಷ್ಣನ ಪರಿಶುದ್ಧ ಭಕ್ತರು ಅವನನ್ನು ಭಕ್ತಿಯಿಂದ ಸೇವಿಸಿದರೆ ಸಾಕು, ಯಾವುದೇ ಯಜ್ಞ ಯಾಗಾದಿಗಳ ಅವಶ್ಯಕತೆಯಿರುವುದಿಲ್ಲ.

ಕೃಷ್ಣನು ಈ ವಿಷಯವನ್ನು ಸ್ಪಷ್ಟಪಡಿಸಲು ನಿರ್ಧರಿಸಿ ನಂದ ಮಹಾರಾಜನನ್ನು ಕುರಿತು ಹೀಗೆಂದನು: ”ಪ್ರೀತಿಯ ತಂದೆಯೇ, ಈ ಯಜ್ಞದ ಫಲವೇನು? ಮತ್ತು ಅದು ಯಾರಿಗಾಗಿ? ಅದನ್ನು ಮಾಡುವುದು ಹೇಗೆ ದಯವಿಟ್ಟು ಹೇಳುವೆಯಾ?” ನಂದ ಮಹಾರಾಜನು ಯಜ್ಞದಂತಹ ವಿಷಯದ ಬಗ್ಗೆ ತಿಳಿ ಹೇಳಲು ಕೃಷ್ಣನು ಇನ್ನೂ ಬಹಳ ಚಿಕ್ಕವನೆಂದು ತಿಳಿದು ಏನೂ ಮಾತನಾಡದೆ ಸುಮ್ಮನಿದ್ದನು.

ಆದರೆ ಕೃಷ್ಣನು ಸುಮ್ಮನಿರದೆ ಮತ್ತೆ ಕೇಳಿದನು. ‘ಕುಟುಂಬದ ಸದಸ್ಯರಲ್ಲಿ ಎಂದೂ ವಿಷಯವನ್ನು ಮುಚ್ಚಿಡಬಾರದು. ಆದ್ದರಿಂದ ಈ ಯಜ್ಞವನ್ನು ಮಾಡುತ್ತಿರುವ ಉದ್ದೇಶವೇನೆಂದು ಹೇಳು” ಎಂದನು.

ಆಗ ನಂದ ಮಹಾರಾಜನು, “ಪ್ರೀತಿಯ ಮಗು, ಈ ಉತ್ಸವವು ಬಹುಮಟ್ಟಿಗೆ ಸಾಂಪ್ರದಾಯಿಕವೇ. ಮಳೆ ಬರುವುದು ಇಂದ್ರನ ಕೃಪೆಯಿಂದ. ನೀರು ನಮ್ಮ ಜೀವ ಜಲ. ಅದನ್ನು ಕರುಣಿಸುವ ಅವನಿಗೆ ನಾವು ಋಣಿಗಳಾಗಿರಬೇಕಲ್ಲವೆ? ಇಂದ್ರನು ಧಾರಾಳವಾಗಿ ಮೋಡಗಳನ್ನು ಕಳುಹಿಸಿ ನಮ್ಮ ವ್ಯವಸಾಯಕ್ಕೆ ಬೇಕಾದಷ್ಟು ನೀರನ್ನು ಕರುಣಿಸುತ್ತಿದ್ದಾನೆ. ಆದ್ದರಿಂದ ಅವನನ್ನು ಸುಪ್ರೀತಗೊಳಿಸಲು ಈ ಯಜ್ಞವನ್ನು ಮಾಡಲಿದ್ದೇವೆ” ಎಂದನು.

ಇಂದ್ರ ರಾಕ್ಷಸನಲ್ಲ. ಅವನೊಬ್ಬ ಭಕ್ತ, ದೇವತೆ. ಆದರೆ ಅವನಿಗೆ ದುರಹಂಕಾರ ಬಂದಿದ್ದು ಕೃಷ್ಣನಿಗೆ ತಿಳಿದಿತ್ತು. ಈಗ ಅವನಿಗೆ ಗೋಪಾಲಕರು ಯಜ್ಞ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ಇಂದ್ರನಿಗೆ ಕೋಪಬರುವಂತೆ ಮಾಡಿ ಅವನಿಗೆ ಬುದ್ಧಿ ಕಲಿಸಬೇಕೆಂದುಕೊಂಡ ಶ್ರೀಕೃಷ್ಣ ತನ್ನ ತಂದೆಯ ಮತ್ತು ವೃಂದಾವನದ ಗೋಪಾಲಕರ ಎದುರಿನಲ್ಲಿ ಸ್ವರ್ಗದ ರಾಜ ಇಂದ್ರನಿಗೆ ಬಹಳ ಕೋಪ ಬರುವಂತೆ ಮಾತನಾಡಿದನು.

ಅವರು ಯಜ್ಞವನ್ನು ಬಿಟ್ಟು ಬಿಡಬೇಕೆಂದು ಸಲಹೆ ಮಾಡಿದನು. ಹೀಗೆ ಈ ಯಜ್ಞವನ್ನು ತ್ಯಜಿಸಲು ಅವನು ಎರಡು ಕಾರಣಗಳನ್ನು ಕೊಟ್ಟನು. ಮೊದಲನೆಯದಾಗಿ ಭಗವದ್ಗೀತೆಯಲ್ಲಿ ಹೇಳಿರುವಂತೆ ಯಾವುದೋ ಭೌತಿಕ ಪ್ರಯೋಜನಕ್ಕಾಗಿ ದೇವತೆಗಳನ್ನು ಪೂಜಿಸುವ ಅಗತ್ಯವಿಲ್ಲ. ದೇವತೆಗಳನ್ನು ಪೂಜಿಸುವುದರಿಂದ ಪಡೆಯುವ ಫಲವೆಲ್ಲ ಅಲ್ಪಕಾಲದ್ದು. ಮಂದಬುದ್ಧಿಯವರಿಗೆ ಮಾತ್ರ ಅಲ್ಪಕಾಲದ ಫಲಗಳಲ್ಲಿ ಆಸಕ್ತಿಯಿರುತ್ತದೆ.

ಎರಡನೆಯದಾಗಿ ದೇವತೆಗಳನ್ನು ಪೂಜಿಸಿ ಪಡೆಯುವ ಯಾವುದೇ ಅಲ್ಪಕಾಲದ ಫಲವನ್ನು ದೇವೋತ್ತಮ ಪರಮ ಪುರುಷನ ಅನುಮತಿಯಿಂದಲೇ ಕೊಡಲು ಸಾಧ್ಯ.

ಶ್ರೀಕೃಷ್ಣನು ಕರ್ಮ ಮೀಮಾಂಸೆಗೆ ಅನುಗುಣವಾಗಿ ತನ್ನ ತಂದೆಯೊಡನೆ ಮಾತನಾಡಲು ಪ್ರಾರಂಭಿಸಿದ. ಅವನು, “ಪ್ರೀತಿಯ ತಂದೆಯೇ, ನೀವು ನಿಮ್ಮ ವ್ಯವಸಾಯದ ಕಾರ್ಯಗಳು ಯಶಸ್ವಿಯಾಗಿ ನಡೆಯಬೇಕೆಂದು ಯಾವುದೇ ದೇವತೆಯ ಪೂಜೆಯನ್ನು ಮಾಡುವ ಅಗತ್ಯವಿಲ್ಲವೆಂದು ನನಗೆ ತೋರುತ್ತದೆ.

ಪ್ರತಿಯೊಬ್ಬ ಜೀವಿಯೂ ತನ್ನ ಹಿಂದಿನ ಕರ್ಮಗಳಿಗೆ ಅನುಗುಣವಾಗಿ ಬೇರೆ ಬೇರೆ ವರ್ಗಗಳಲ್ಲಿ ಹುಟ್ಟುತ್ತಾನೆ. ಮತ್ತು ವರ್ತಮಾನದ ಕರ್ಮಫಲವನ್ನು ಕಟ್ಟಿಕೊಂಡು ಪ್ರಪಂಚವನ್ನು ಬಿಟ್ಟು ಹೋಗುತ್ತಾನೆ. ಬದುಕಿನಲ್ಲಿ ಸುಖದುಃಖಗಳು, ನೆಮ್ಮದಿ ಮತ್ತು ಅನುಕೂಲತೆಗಳು, ಹಾಗೂ ಬೇರೆ ಬೇರೆ ಮಟ್ಟಗಳಿಗೆ ಕಾರಣ, ಹಿಂದಿನ ಜನ್ಮದ ಅಥವಾ ಈ ಜನ್ಮದ ಬೇರೆ ಬೇರೆ ಬಗೆಯ ಕೆಲಸ ಕಾರ್ಯಗಳು.”

ಇದನ್ನು ಕೇಳಿದ ನಂದ ಮಹಾರಾಜ ಮತ್ತಿತರ ಹಿರಿಯರು ಪ್ರಬಲನಾದ ದೇವತೆಯನ್ನು ಸಂತುಷ್ಟಗೊಳಿಸದೆ ಕೇವಲ ಭೌತಿಕ ಚಟುವಟಿಕೆಗಳಿಂದ ಮಾತ್ರವೇ ಒಳ್ಳೆಯ ಫಲವನ್ನು ಪಡೆಯುವುದು ಸಾಧ್ಯವಿಲ್ಲ ಎಂದು ವಾದಿಸಿದರು. ಆದರೆ ಇದಕ್ಕೆ ಒಪ್ಪದ ಕೃಷ್ಣನು ಹೀಗೆ ತನ್ನ ಮಾತನ್ನು ಮುಂದುವರಿಸಿದನು.

“ಆದರೆ ಪ್ರೀತಿಯ ತಂದೆಯೇ, ದೇವತೆಯಾದ ಇಂದ್ರನನ್ನು ಪೂಜಿಸುವ ಅಗತ್ಯವಿಲ್ಲ. ಪ್ರತಿಯೊಬ್ಬನೂ ತನ್ನ ಕೆಲಸದ ಪ್ರಯೋಜನವನ್ನು ಪಡೆಯಬೇಕು. ನಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ದೇವತೆಗಳು ತೃಪ್ತರಾಗುತ್ತಾರೆ. ಆದುದರಿಂದ ಅವರನ್ನು ಪೂಜಿಸುವ ಅಗತ್ಯವಿಲ್ಲ. 

ಬ್ರಾಹ್ಮಣರಿಗೆ ನಿಗದಿತವಾದ ಕರ್ತವ್ಯ ವೇದಾಧ್ಯಯನ, ಕ್ಷತ್ರಿಯರ ಯೋಗ್ಯ ಕರ್ತವ್ಯ ಪ್ರಜೆಗಳ ರಕ್ಷಣೆಯಲ್ಲಿ ತೊಡಗುವುದು, ವೈಶ್ಯರ ಮೂಲ ಕರ್ತವ್ಯ ಕೃಷಿ. ವ್ಯಾಪಾರ ಮತ್ತು ಗೋ ರಕ್ಷಣೆ. ಶೂದ್ರರು ಮಾಡಬೇಕಾದ ಕರ್ತವ್ಯವೆಂದರೆ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಈ ಮೂರೂ ಮೇಲು ವರ್ಗಗಳ ಸೇವೆ. ನಾವು ವೈಶ್ಯವರ್ಗಕ್ಕೆ ಸೇರಿದವರು. ನಮ್ಮ ಯೋಗ್ಯ ಕರ್ತವ್ಯವೆಂದರೆ ವ್ಯವಸಾಯ ಅಥವಾ ಕೃಷಿಯಿಂದ ಬಂದ ಉತ್ಪನ್ನಗಳ ಮಾರಾಟ, ಗೋರಕ್ಷಣೆ ಮತ್ತು ಲೇವಾದೇವಿ.

“ನೀನು ಇಂದ್ರನನ್ನು ಸಂತುಷ್ಟಿಗೊಳಿಸದಿದ್ದರೂ ತಾನೇ ಅವನೇನು ಮಾಡಬಲ್ಲ? ಇಂದ್ರನಿಂದ ನಮಗೆ ಯಾವ ವಿಶೇಷ ಲಾಭವೂ ಇಲ್ಲ. ಅವನಿಂದ ಲಾಭವೇನಾದರೂ ಇದ್ದರೂ ನೀರಿನ ಅಗತ್ಯವಿಲ್ಲದ ಸಮುದ್ರದ ಮೇಲೂ ನೀರನ್ನು ಸುರಿಸುತ್ತಾನೆ. ಅದು ನಾವು ಅವನನ್ನು ಪೂಜಿಸುವುದನ್ನೇನೂ ಅವಲಂಬಿಸುವುದಿಲ್ಲ.

ನಮ್ಮ ಮಟ್ಟಿಗೆ ಹೇಳುವುದಾದರೆ ನಾವು ಬೇರೊಂದು ನಗರಕ್ಕೆ ಹಳ್ಳಿಗೆ ಅಥವಾ ಬೇರೊಂದು ದೇಶಕ್ಕೆ ಹೋಗಬೇಕಿಲ್ಲ. ನಮ್ಮ ಖಚಿತವಾದ ಬಾಂಧವ್ಯವಿರುವುದು ಗೋವರ್ಧನ ಗಿರಿಯೊಂದಿಗೆ ಮತ್ತು ವೃಂದಾವನದ ಕಾಡಿನೊಂದಿಗೆ, ಬೇರೆ ಯಾವುದರೊಂದಿಗೂ ಇಲ್ಲ. ಆದ್ದರಿಂದ ಪ್ರೀತಿಯ ತಂದೆಯೇ, ಸ್ಥಳೀಯ ಬ್ರಾಹ್ಮಣರನ್ನು ಗೋವರ್ಧನ ಗಿರಿಯನ್ನೂ ತೃಪ್ತಿಗೊಳಿಸಲು ಒಂದು ಯಜ್ಞವನ್ನು ಪ್ರಾರಂಭಿಸೋಣ. ಇಂದ್ರನೊಡನೆ ನಮಗೆ ಸಂಬಂಧವೇ ಬೇಡ.”

ಕೃಷ್ಣನ ಮಾತನ್ನು ಕೇಳಿ ನಂದ ಮಹಾರಾಜನು, ನೀನು ಕೇಳುತ್ತಿರುವುದರಿಂದ ಸ್ಥಳೀಯ ಬ್ರಾಹ್ಮಣರು ಮತ್ತು ಗೋವರ್ಧನ ಗಿರಿಗಾಗಿ ಒಂದು ಪ್ರತ್ಯೇಕ ಯಜ್ಞವನ್ನು ಏರ್ಪಡಿಸುತ್ತೇನೆ. ಆದರೆ ಈಗ ನಾವು ಇಂದ್ರ ಯಜ್ಞವನ್ನು ಮಾಡೋಣ”

ಆಗ ಕೃಷ್ಣನು ಹೀಗೆ ಉತ್ತರಿಸಿದನು: “ಪ್ರೀತಿಯ ತಂದೆಯೇ, ವಿಳಂಬ ಮಾಡಬೇಡ, ಗೋವರ್ಧನ ಗಿರಿಗೆ ಮತ್ತು ಸ್ಥಳೀಯ ಬ್ರಾಹ್ಮಣರಿಗೆ ಏರ್ಪಡಿಸಬೇಕೆಂದಿರುವ ಯಜ್ಞಕ್ಕೆ ಬಹಳ ಕಾಲವು ಬೇಕು. ಇಂದ್ರ ಯಜ್ಞಕ್ಕಾಗಿ ನೀನು ಮಾಡಿರುವ ಸಿದ್ಧತೆಗಳನ್ನೇ ಬಳಸಿಕೊಂಡು ಗೋವರ್ಧನ ಗಿರಿಯನ್ನು ಸ್ಥಳೀಯ ಬ್ರಾಹ್ಮಣರನ್ನು ತೃಪ್ತಿಗೊಳಿಸಲು ಅವನ್ನು ಕೂಡಲೆ ಉಪಯೋಗಿಸಿಕೊಳ್ಳುವುದು ಉತ್ತಮ.”

ಇದಕ್ಕೆ ಪ್ರತಿಯಾಡಲಾಗದೆ ನಂದ ಮಹಾರಾಜನು ಈ ಯಜ್ಞವನ್ನು ಮಾಡಲು ಒಪ್ಪಿದನು. ಈ ಯಜ್ಞವನ್ನು ಹೇಗೆ ಮಾಡಬೇಕೆಂದು ಗೋಪಾಲಕರು ಕೃಷ್ಣನನ್ನು ಕೇಳಿದರು. ಆಗ ಕೃಷ್ಣನು ಈ ರೀತಿ ಮಾರ್ಗದರ್ಶನವನ್ನು ಮಾಡಿದನು. ”ಧಾನ್ಯದಿಂದ ಮತ್ತು ತುಪ್ಪದಿಂದ ಸೊಗಸಾದ ಎಲ್ಲ ಬಗೆಯ ಆಹಾರವನ್ನು ಮಾಡಿ.

ಅನ್ನ, ಬೇಳೆ, ಹಲ್ವ, ಪಕೋಡ, ಪೂರಿ ಇವುಗಳನ್ನು ಮಾಡಿ ಜೊತೆಗೆ ಸಿಹಿ ಭಾತು, ಸಿಹಿ ಉಂಡೆ, ಸಂದೇಶ ರಸಗುಲ್ಲ ಹಾಗೂ ಲಡ್ಡುಗಳಂತಹ ಹಾಲಿನಿಂದ ಮಾಡುವ ತಿಂಡಿಗಳನ್ನು ಮಾಡಿ. ವೈದಿಕ ಪ್ರಾರ್ಥನೆಗಳನ್ನು ಪಠಿಸಿ ಅಗ್ನಿಗೆ ಆಹುತಿಕೊಡಬಲ್ಲ ವಿದ್ವಾಂಸ ಬ್ರಾಹ್ಮಣರನ್ನು ಆಹ್ವಾನಿಸಿ ಅವರಿಗೆ ದಾನವಾಗಿ ಎಲ್ಲ ಬಗೆಯ ದವಸ ಧಾನ್ಯಗಳನ್ನು ಕೊಡಬೇಕು.

ಅನಂತರ ಎಲ್ಲ ಹಸುಗಳಿಗೆ ಅಲಂಕಾರ ಮಾಡಿ ಒಳ್ಳೆಯ ಆಹಾರವನ್ನು ಕೊಡಬೇಕು. ಆಮೇಲೆ ಬ್ರಾಹ್ಮಣರಿಗೆ ದಕ್ಷಿಣೆ ನೀಡಿ ನಾಯಿಗಳಂತಹ ಕೆಳವರ್ಗದ ಪ್ರಾಣಿಗಳು, ಚಂಡಾಲರಂತಹ ಅಥವಾ ಪಂಚಮರು ಇವರಿಗೆಲ್ಲ ಸಮೃದ್ಧವಾಗಿ ಪ್ರಸಾದ ಕೊಡಿ. ಹಸುಗಳಿಗೆ ಒಳ್ಳೆಯ ಹುಲ್ಲನ್ನು ತಿನ್ನಿಸಿದ ಅನಂತರ ಕೂಡಲೆ ಗೋವರ್ಧನ ಪೂಜೆ ಎನ್ನುವ ಯಜ್ಞವು ಪ್ರಾರಂಭವಾಗಬಹುದು. ಈ ಯಜ್ಞದಿಂದ ನನಗೆ ಬಹಳ ತೃಪ್ತಿಯಾಗುತ್ತದೆ.” ಹೀಗೆ ಗೋವರ್ಧನ ಪೂಜೆ ನಡೆಯಿತು.

ಕೃಷ್ಣನು ಗೋವರ್ಧನ ಪೂಜೆಯು ತನ್ನ ಪೂಜೆಗೆ ಸಮಾನ ಎಂದು ಹೇಳಿದ್ದಾನೆ. ಅಂದಿನಿಂದ ಗೋವರ್ಧನ ಪೂಜೆಯು ನಡೆದು ಬರುತ್ತಿದೆ. ಇದಕ್ಕೆ ಅನ್ನಕೂಟ ಎಂದು ಹೆಸರು. ವೃಂದಾವನದಲ್ಲಿಯ ಮತ್ತು ಅದರಾಚೆಯ ಎಲ್ಲ ದೇವಾಲಯಗಳಲ್ಲಿ ಈ ಉತ್ಸವದಿನದಂದು ಸಮೃದ್ಧಿಯಾಗಿ ಆಹಾರವನ್ನು ಸಿದ್ಧಗೊಳಿಸಿ ಜನ ಸಾಮಾನ್ಯರಿಗೆ ಯಥೇಚ್ಛವಾಗಿ ಹಂಚಲಾಗುತ್ತದೆ.

ಹೀಗೆ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಇಂದ್ರಯಜ್ಞವನ್ನು ನಿಲ್ಲಿಸಿ ಗೋವರ್ಧನ ಗಿರಿಯ ಪೂಜೆಯನ್ನು ಮಾಡುವಂತೆ ಗೋಪಾಲಕರಿಗೆ ಉಪದೇಶಿಸಿದನು. ನಂದಮಹಾರಾಜನ ನಾಯಕತ್ವದಲ್ಲಿದ್ದ ಪ್ರಾಮಾಣಿಕರಾದ ಮತ್ತು ಸರಳ ಮನಸ್ಸಿನ ಗೋಪಾಲಕರು ಅವನ ಸೂಚನೆಯನ್ನು ಒಪ್ಪಿಕೊಂಡು ಪ್ರತಿಯೊಂದು ವಿವರವನ್ನು ಪಾಲಿಸಿದರು.

ಎಲ್ಲವೂ ಮುಗಿದ ಅನಂತರ ಗೋವರ್ಧನಗಿರಿಯೂ, ಕೃಷ್ಣನೂ ಒಂದೇ ಎಂದು ಭಕ್ತರಿಗೆ ಮನದಟ್ಟು ಮಾಡಿಕೊಡಲು ಕೃಷ್ಣನು ದಿವ್ಯ ರೂಪವನ್ನು ತಳೆದು ತಾನೇ ಗೋವರ್ಧನಗಿರಿ ಎಂದು ವೃಂದಾವನ ವಾಸಿಗಳಿಗೆ ಘೋಷಿಸಿ ಹೇಳಿದನು. ಅಲ್ಲಿ ಅರ್ಪಿಸಿದ್ದ ನೈವೇದ್ಯವನ್ನು ತಾನೇ ತಿನ್ನಲು ಪ್ರಾರಂಭಿಸಿದನು. ಹೀಗಾಗಿ ಇಂದಿಗೂ ಕೃಷ್ಣ ಮತ್ತು ಗೋವರ್ಧನಗಿರಿ ಒಂದೇ ಎಂದು ಅದನ್ನು ಗೌರವಿಸಲಾಗುತ್ತದೆ. ಭಕ್ತರು ಗೋವರ್ಧನಗಿರಿಯಿಂದ ಶಿಲೆಗಳನ್ನು ತೆಗೆದುಕೊಂಡು ಹೋಗಿ ಮನೆಗಳಲ್ಲಿಟ್ಟುಕೊಂಡು ಪೂಜಿಸುತ್ತಾರೆ.

ಕೃಷ್ಣನು ತಾನೇ ಗೋವರ್ಧನಗಿರಿ ಎಂದು ತೋರಿಸಿದರೂ ವೃಂದಾವನವಾಸಿಗಳೊಂದಿಗೆ ಸೇರಿ ತಾನೂ ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಿದನು. ಅನಂತರ ಹೀಗೆ ನುಡಿದನು: “ವೃಂದಾವನ ವಾಸಿಗಳೆಲ್ಲ ತಮ್ಮ ಮತ್ತು ತಮ್ಮ ದನಕರುಗಳ ಯೋಗಕ್ಷೇಮಕ್ಕಾಗಿ ಗೋವರ್ಧನಗಿರಿಯನ್ನು ನಾನು ತಿಳಿಸಿರುವ ಕ್ರಮದಲ್ಲಿ ಪೂಜಿಸಬೇಕು.

ಯಾರು ಈ ಪೂಜೆಯನ್ನು ನಿರ್ಲಕ್ಷಿಸುತ್ತಾರೋ ಅವರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. ಈ ಗಿರಿಯಲ್ಲಿ ಹಲವಾರು ಹಾವುಗಳಿವೆ. ಗಿರಿಯ ಪೂಜೆಯನ್ನು ನಿರ್ಲಕ್ಷಿಸಿದವರು ಈ ಹಾವುಗಳಿಂದ ಕಚ್ಚಲ್ಪಡುತ್ತಾರೆ ಹಾಗೂ ಸಾವನ್ನಪ್ಪುತ್ತಾರೆ” ಎಂದನು.

ಹೀಗೆ ಕೃಷ್ಣನ ಸಲಹೆ ಮಾರ್ಗದರ್ಶನಗಳಂತೆ ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಿದ ವೃಂದಾವನವಾಸಿಗಳು ತಮ್ಮ ಮನೆಗಳಿಗೆ ಹಿಂತಿರುಗಿದರು.

ವೃಂದಾವನದ ನಿವಾಸಿಗಳು ತನಗರ್ಪಿಸುತ್ತಿದ್ದ ಯಜ್ಞವನ್ನು ಕೃಷ್ಣನು ನಿಲ್ಲಿಸಿದ್ದಾನೆ ಎಂದು ಗೊತ್ತಾದಾಗ ಇಂದ್ರನಿಗೆ ವಿಪರೀತವಾದ ಕೋಪ ಬಂದಿತು. ಮೋಡಗಳ ನಿಯಂತ್ರಕನಾದ ಅವನು ಸಂವರ್ತಕ ಎನ್ನುವ ಮೋಡವನ್ನು ಕರೆದನು. ಇಡೀ ಬ್ರಹ್ಮಾಂಡವನ್ನೇ ವಿನಾಶ ಮಾಡುವ ಅಗತ್ಯವಿದ್ದಾಗ ಈ ಮೋಡವನ್ನು ಬರಮಾಡಲಾಗುತ್ತದೆ.

ವೃಂದಾವನಕ್ಕೆ ಹೋಗಿ ಇಡೀ ಪ್ರದೇಶದಲ್ಲಿ ಪ್ರವಾಹವುಂಟಾಗುವಂತೆ ಧಾರಾಕಾರವಾಗಿ ಮಳೆಯನ್ನು ಸುರಿಸುವಂತೆ ಇಂದ್ರನು ಈ ಮೋಡಕ್ಕೆ ಅಪ್ಪಣೆ ಮಾಡಿದನು. ತನ್ನ ಸ್ಥಾನದಿಂದ ಅಹಂಕಾರಿಯಾಗಿ ಮೆರೆಯುತ್ತಿದ್ದ ಇಂದ್ರನು ಪರಮನಿಯಂತ್ರಕನಿಗೆ ಸವಾಲು ಒಡ್ಡಲು ಬಯಸಿದ. ಆ ಕಾಲದ ಮಟ್ಟಿಗಾದರೂ ತಾನು ಕೃಷ್ಣನಿಗಿಂತ ಬಲಶಾಲಿ ಎಂದು ಅವನು ಭಾವಿಸಿದ.

”ವೃ೦ದಾವನದ ನಿವಾಸಿಗಳಿಗೆ ಅದೆಷ್ಟು ಸೊಕ್ಕು! ಅವರು ಕಾಡಿನ ನಿವಾಸಿಗಳಷ್ಟೇ. ಆದರೆ ಕೃಷ್ಣನಲ್ಲಿನ ಅತಿಯಾದ ಮೋಹದಿಂದಾಗಿ ದೇವತೆಗಳನ್ನು ಧಿಕ್ಕರಿಸುವಷ್ಟು ಧೈರ್ಯ ಅವರಿಗೆ ಬಂದಿದೆ. ಕೃಷ್ಣನು ಒಬ್ಬ ಸಾಮಾನ್ಯ ಮನುಷ್ಯ ಅಷ್ಟೇ” ಎಂದುಕೊಂಡ.

ಭಗವದ್ಗೀತೆಯಲ್ಲಿ ಕೃಷ್ಣನು ದೇವತೆಗಳನ್ನು ಪೂಜಿಸುವವರು ಅಷ್ಟೇನೂ ಜಾಣರಲ್ಲ ಎಂದಿದ್ದಾನೆ. ಎಲ್ಲ ಬಗೆಯ ಪೂಜೆಗಳನ್ನು ಬಿಟ್ಟು ಕೃಷ್ಣಪ್ರಜ್ಞೆಯಲ್ಲಿ ಮನಸ್ಸನ್ನು ನಿಲ್ಲಿಸಬೇಕು ಎಂದು ಅವನು ಹೇಳಿದ್ದಾನೆ.

ಆದರೆ ಇ೦ದ್ರನು ಸಂವರ್ತಕನಿಗೆ ಹೀಗೆ ಹೇಳತೊಡಗಿದನು. ”ಈ ವೃಂದಾವನದ ಗೋಪಾಲಕರು ಕೃಷ್ಣ ಎನ್ನುವ ಹರಟೆಮಲ್ಲನ ಮಾತು ಕೇಳಿ ನನ್ನ ಅಧಿಕಾರವನ್ನು ಉಪೇಕ್ಷೆ ಮಾಡಿದ್ದಾರೆ. ಕೃಷ್ಣನ ಮಾತಿಗೆ ಅಷ್ಟೊಂದು ಬೆಲೆಕೊಡುವ ಅವರನ್ನು ಶಿಕ್ಷಿಸಲೇಬೇಕು. ಅವರ ಗೋವುಗಳೊಂದಿಗೆ ಅವರನ್ನು ನಾಶಮಾಡಿಬಿಡಬೇಕು.

ಆದ್ದರಿಂದ ನೀನು ಮತ್ತು ಇತರ ಮೋಡಗಳೂ ಹೋಗಿ ವೃಂದಾವನವನ್ನೇ ನಾಶಮಾಡಿಬಿಡಿ” ಎಂದು ಹೇಳಿದಾಗ ಸಂವರ್ತಕ ಮತ್ತು ಇತರ ಮೋಡಗಳಿಗೆ ಈ ಕಾರ್ಯವನ್ನು ಮಾಡುವ ಬಗ್ಗೆ ಹೆದರಿಕೆಯೇ ಆಯಿತು. ಆದರೆ ಇಂದ್ರನು ಅವರಿಗೆ ಈ ರೀತಿ ಭರವಸೆಯನ್ನಿತ್ತನು. ”ನೀವು ಹೆದರದೆ ಹೋಗಿ ನಾನೂ ಸಹ ನನ್ನ ಆನೆ ಐರಾವತದೊಂದಿಗೆ ಪ್ರಚಂಡ ಮಾರುತಗಳನ್ನೊಡಗೂಡಿ ಬರುತ್ತೇನೆ. ವೃಂದಾವನದ ನಿವಾಸಿಗಳನ್ನು ನಾಶಮಾಡುವ ಎಲ್ಲ ಶಕ್ತಿಯನ್ನು ಬಳಸುತ್ತೇನೆ” ಎಂದನು.

ಹೀಗೆ ಇಂದ್ರರಾಜನು ಅಪ್ಪಣೆ ಮಾಡಿದಾಗ ಅದನ್ನು ಮೀರಲಾರದೆ ಎಲ್ಲ ಅಪಾಯಕಾರಿ ಮೋಡಗಳೂ ವೃಂದಾವನದ ಮೇಲೆ ಕಾಣಿಸಿಕೊಂಡವು. ತಮ್ಮೆಲ್ಲ ಶಕ್ತಿಯನ್ನು ಬಳಸಿ ಧಾರಾಕಾರವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದವು. ಒಂದೇ ಸಮನೆ ಗುಡುಗು ಮಿಂಚುಗಳ ಹಾವಳಿ, ಬಲವಾದ ಬಾಣಗಳಂತಿದ್ದವು.

ಮೋಡಗಳು ನೀರಿನ ಕಂಬಗಳಂತೆ ಮಳೆಯನ್ನು ಸುರಿಸಿ ವೃಂದಾವನವನ್ನೇ ನೀರಿನಿಂದ ಆವರಿಸಿಬಿಟ್ಟವು. ಎತ್ತರ ತಗ್ಗು ಪ್ರದೇಶಗಳ ವ್ಯತ್ಯಾಸವೇ ಕಾಣದಂತಾಗಿತ್ತು. ಪ್ರಾಣಿಗಳಿಗಂತೂ ಈ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿತ್ತು. ಅತಿವೃಷ್ಟಿಯೊಂದಿಗೆ ಪ್ರಚಂಡವಾದ ಮಾರುತವೂ ಬಂದು ವೃಂದಾವನದ ಪ್ರತಿಯೊಂದು ಜೀವಿಯೂ ಚಳಿಯಿಂದ ಗಾಳಿಯಿಂದ ತತ್ತರಿಸಿಹೋಯಿತು.

ತಮ್ಮನ್ನು ಉಳಿಸಿಕೊಳ್ಳಲು ಯಾವ ಮಾರ್ಗವನ್ನು ಕಾಣದ ಅವರೆಲ್ಲ ಕೃಷ್ಣನನ್ನು ಮೊರೆಹೊಕ್ಕರು. “ಪ್ರೀತಿಯ ಕೃಷ್ಣನೇ, ನೀನು ಸರ್ವಶಕ್ತ, ನಿನ್ನ ಭಕ್ತರಲ್ಲಿ ನಿನಗೆ ಅಪಾರ ಪ್ರೀತಿಯಿದೆ. ಕೋಪಗೊಂಡ ಇಂದ್ರನಿಂದ ತೊಂದರೆಗೆ ಸಿಲುಕಿರುವ ನಮ್ಮನ್ನು ಕಾಪಾಡು” ಎಂದು ಪ್ರಾರ್ಥಿಸಿದರು.

ಅವರೆಲ್ಲರ ಪ್ರಾರ್ಥನೆಯನ್ನು ಆಲಿಸಿದ ಕೃಷ್ಣನಿಗೆ ತನಗೆ ಅವಮಾನವಾಗಿದೆಯೆಂದು ಸೇಡು ತೀರಿಸಿಕೊಳ್ಳಲು ಇಂದ್ರನು ಮಾಡಿರುವ ಕೆಲಸವಿದೆಂದು ತಿಳಿಯಿತು. ಇದು ಇಂದ್ರನ ಕೋಪದ ಉದ್ದೇಶಪೂರ್ವಕ ಪ್ರದರ್ಶನ ಎಂದು ತಿಳಿಯಿತು. ಆಗ ಅವನು ‘ತಾನೇ ಸರ್ವಶ್ರೇಷ್ಠನೆಂದು ಬಗೆದಿರುವ ಈ ದೇವತೆಯು ತನ್ನ ಮಹಾಶಕ್ತಿಯನ್ನು ತೋರುತ್ತಿದ್ದಾನೆ.

ಆದರೆ ನಾನು ಸರಿಯಾಗಿ ಅವನಿಗೆ ಉತ್ತರಿಸುತ್ತೇನೆ. ಬ್ರಹ್ಮಾಂಡದ ನಿರ್ವಹಣೆಯಲ್ಲಿ ಅವನು ಸ್ವತಂತ್ರನಲ್ಲ ಎಂದು ಅವನಿಗೆ ಅರಿವು ಮಾಡಿಕೊಡುತ್ತೇನೆ. ನಾನು ಎಲ್ಲದರ ಪರಮ ಪ್ರಭು. ಅವನ ಶಕ್ತಿಯಿಂದ ಅವನಲ್ಲಿ ಉಂಟಾಗಿರುವ ಹುಸಿ ಪ್ರತಿಷ್ಠೆಯನ್ನು ತೊಡೆದು ಹಾಕುತ್ತೇನೆ. ದೇವತೆಗಳು ನನ್ನ ಭಕ್ತರು.

ಆದುದರಿಂದ ಅವರು ನನ್ನ ಪರಮಾಧಿಕಾರವನ್ನು ಮೀರುವಂತಿಲ್ಲ. ವೃಂದಾವನದ ನಿವಾಸಿಗಳು ಶುದ್ಧ ಮನಸ್ಸಿನವರು. ಅವರು ಸಂಪೂರ್ಣವಾಗಿ ನನ್ನ ಕೃಪೆಯನ್ನು ಅವಲಂಬಿಸಿದ್ದಾರೆ. ಅವರನ್ನು ನನ್ನ ರಕ್ಷಣೆಯಲ್ಲಿ ತೆಗೆದುಕೊಂಡಿದ್ದೇನೆ. ನನ್ನ ನಿಗೂಢಶಕ್ತಿಯಿಂದ ಅವರನ್ನು ಕಾಪಾಡಿಯೇ ತೀರುತ್ತೇನೆ” ಎಂದು ನಿರ್ಣಯಿಸಿದನು.

ಹೀಗೆ ಯೋಚಿಸಿದ ಕೃಷ್ಣನು ಒಂದು ಮಗುವು ಹಗುರವಾದ ನಾಯಿಕೊಡೆಯನ್ನು ನೆಲದಿಂದ ಎತ್ತಿಕೊಳ್ಳುವಂತೆ ಗೋವರ್ಧನ ಗಿರಿಯನ್ನು ಒಂದೇ ಕೈಯಲ್ಲಿ ಮೇಲೆತ್ತಿದನು. ಇಡೀ ಪರ್ವತವನ್ನು ತನ್ನ ಕಿರುಬೆರಳಿನ ಮೇಲೆ ಇಟ್ಟುಕೊಂಡು ಸರ್ವಶಕ್ತ ಶ್ರೀಕೃಷ್ಣನು ತನ್ನ ಭಕ್ತರಿಗೆ ಹೀಗೆ ಹೇಳಿದನು: ‘ನನ್ನ ಸೋದರರೆ, ತಂದೆಯೇ, ವೃಂದಾವನದ ನಿವಾಸಿಗಳೇ, ನೀವೆಲ್ಲ ಈಗ ಈ ಗೋವರ್ಧನವೆಂಬ ಕೊಡೆಯ ಕೆಳಗೆ ಸುರಕ್ಷಿತವಾಗಿರಬಹುದು, ಬನ್ನಿ.

ಗಿರಿಯು ನನ್ನ ಕೈಯಿಂದ ಬೀಳುವುದೆಂಬ ಹೆದರಿಕೆ ನಿಮಗೆ ಬೇಡ. ನಿಮ್ಮ ಪ್ರಾಣಿಗಳೊಂದಿಗೆ ಈ ಮಹಾ ಕೊಡೆಯ ಕೆಳಗೆ ನಿಶ್ಚಿಂತೆಯಿಂದಿರಿ’ ಎಂದನು. ಕೃಷ್ಣನ ಈ ಭರವಸೆಯಿಂದ ಸಂತೋಷಗೊಂಡ ವೃಂದಾವನದ ಎಲ್ಲ ನಿವಾಸಿಗಳೂ ತಮ್ಮ ಪ್ರಾಣಿಗಳೊಂದಿಗೆ ಗೋವರ್ಧನ ಗಿರಿಯಡಿಗೆ ಬಂದರು.

ಅಲ್ಲಿ ಅವರು ಒಂದು ವಾರದ ಕಾಲ ಹಸಿವು ಬಾಯಾರಿಕೆಯಂತಹ ಯಾವುದೇ ತೊಂದರೆಗಳಿಗೆ ಒಳಗಾಗದೆ ನಿರಾತಂಕವಾಗಿ ಉಳಿದರು. ಅವರೆಲ್ಲರಿಗೂ ಕೃಷ್ಣನು ತನ್ನ ಎಡಗೈ ಕಿರುಬೆರಳಿನಿಂದ ಇಡೀ ಪರ್ವತವನ್ನು ಎತ್ತಿಹಿಡಿದುದು ಅತೀವ ಬೆರಗನ್ನು ಉಂಟು ಮಾಡಿತ್ತು.

ಕೃಷ್ಣನ ಈ ಅಪ್ರತಿಮವಾದ ಮಹಾನ್ ಶಕ್ತಿಯನ್ನು ಕಂಡ ಇಂದ್ರನು ಸ್ತಂಭೀಭೂತನಾದನು. ಅವನ ಸಂಕಲ್ಪವು ಸಡಿಲಿತು. ಅವನು ಕೂಡಲೇ ತನ್ನ ಎಲ್ಲ ಮೋಡಗಳಿಗೂ ಮಳೆಯನ್ನು ಸುರಿಸದಿರಲು ಹೇಳಿದನು. ಆಗ ಮೋಡಗಳು ಆಕಾಶದಿಂದ ಸಂಪೂರ್ಣವಾಗಿ ಮಾಯವಾಗಿ ಚಂಡಮಾರುತ ಹಾಗೂ ಧಾರಾಕಾರವಾದ ಮಳೆ ನಿಂತುಹೋದವು.

ಸೂರ್ಯನ ಪ್ರಕಾಶಮಾನವಾದ ಬೆಳಕು ಕಾಣಿಸಿಕೊಂಡಿತು. ಆಗ ಕೃಷ್ಣನು ತನ್ನ ಜನರಿಗೆ ‘ನನ್ನ ಪ್ರೀತಿಯ ಗೋಪಾಲಕರೇ, ನೀವು ನಿಮ್ಮದೆಲ್ಲವನ್ನು ತೆಗೆದುಕೊಂಡು ನಿರಾತಂಕವಾಗಿ ಹೋಗಿ. ಯಮುನಾ ನದಿಯ ಪ್ರವಾಹವೂ ಇಳಿದಿದೆ. ನಿಮಗೆ ಇನ್ನಾವ ತೊಂದರೆಯೂ ಆಗುವುದಿಲ್ಲ” ಎಂದನು.

ವೃಂದಾವನದ ನಿವಾಸಿಗಳು ತಮ್ಮ ತಮ್ಮ ವಸ್ತುಗಳು, ಹಸುಕರುಗಳೊಂದಿಗೆ ಹೊರಟರು. ಅವರೆಲ್ಲರೂ ಸಂಪೂರ್ಣವಾಗಿ ಹೊರಗೆ ಹೋದ ಮೇಲೆ ಕೃಷ್ಣನು ನಿಧಾನವಾಗಿ ಗಿರಿಯನ್ನು ಮೊದಲು ಹೇಗೆ ಇತ್ತೋ ಹಾಗೇ ಇರಿಸಿದನು. ಹೀಗೆ ತಮ್ಮನ್ನು ಅಪಾಯದಿಂದ ಪಾರು ಮಾಡಿದ ಕೃಷ್ಣನನ್ನು ವೃಂದಾವನವಾಸಿಗಳು ಭಕ್ತಿಯಿಂದ ಸ್ತುತಿಸಿದರು. ಗೋವರ್ಧನ ಗಿರಿಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದರಿಂದ ಕೃಷ್ಣನಿಗೆ ಗೋವರ್ಧನಗಿರಿಧರನೆಂಬ ಹೆಸರೂ ಬಂದಿತು.

ಹೀಗೆ ಪ್ರಭು ಕೃಷ್ಣನು ವೃ೦ದಾವನ ವಾಸಿಗಳನ್ನು ಗೋವರ್ಧನ ಗಿರಿಯಡಿಯಲ್ಲಿ ಸಂರಕ್ಷಿಸಿ ಇಂದ್ರನ ಕೋಪದಿಂದ ರಕ್ಷಿಸಿದಾಗ ಸ್ವರ್ಗಾಧಿಪತಿಯಾದ ಇಂದ್ರನೂ, ಗೋಲೋಕ ವೃಂದಾವನದಿಂದ ಸುರಭಿ ಎಂಬ ಹಸುವೂ ಕೃಷ್ಣನ ಬಳಿಗೆ ಬಂದಿತು. ಅವನಿಗೆ ತಾನು ಕೃಷ್ಣನಿಗೆ ಅಪರಾಧ ಮಾಡಿದ್ದೇನೆ ಎ೦ಬುದು ಅರಿವಾಗಿತ್ತು.

ಆದ್ದರಿಂದ ಅವನು ಜನರಹಿತವಾದ ಒಂದು ಸ್ಥಳದಲ್ಲಿ ಕೃಷ್ಣನ ಮುಂದೆ ಕಾಣಿಸಿಕೊಂಡನು. ಹಾಗೂ ಕೃಷ್ಣನ  ಚರಣಕಮಲಗಳಿಗೆ ಎರಗಿದನು. ಇಂದ್ರನಿಗೆ ಕೃಷ್ಣನೇ ದೇವತೆಗಳ ಒಡೆಯನೆಂಬ ಅವನ ಉನ್ನತ ಸ್ಥಾನದ ಅರಿವಿತ್ತು. ಅದರೆ ಕೃಷ್ಣನು ಭೂಮಿಗಿಳಿದು ವೃಂದಾವನದ ನಿವಾಸಿಗಳೊಂದಿಗೆ ಹೀಗೆ ಸರಳವಾಗಿ ವಾಸಮಾಡುತ್ತಾನೆಂದು ನಂಬಲು ಸಾಧ್ಯವಾಗಿರಲಿಲ್ಲ.

ಕೃಷ್ಣನು ಇಂದ್ರನ ಅಧಿಕಾರವನ್ನು ಧಿಕ್ಕರಿಸಿದಾಗ ಈ ವಿಶ್ವದಲ್ಲಿ ತಾನೇ ಪರಮ ಪ್ರಭು, ಶಕ್ತಿಯಲ್ಲಿ ತನಗೆ ಸಮನಾದವರು ಯಾರೂ ಇಲ್ಲ ಎಂದು ಭಾವಿಸಿದ ಇಂದ್ರನಿಗೆ ಕೋಪ ಬಂದಿತ್ತು. ಆದರೆ ಈ ಘಟನೆಯ ಅನಂತರ ಅವನ ಹುಸಿ ಪ್ರತಿಷ್ಠೆಯು ನಾಶವಾಯಿತು. ತನ್ನ ಸ್ಥಾನವೇನೆಂಬುದು ತಿಳಿಯಿತು.

ಅವನು ಕೃಷ್ಣನ ಮುಂದೆ ಕೈಮುಗಿದು ನಿಂತು ಹೀಗೆ ಪ್ರಾರ್ಥಿಸಲು ತೊಡಗಿದನು: “ನನ್ನ ಪ್ರೀತಿಯ ಪ್ರಭುವೇ, ಹುಸಿ ಪ್ರತಿಷ್ಠೆಯಿಂದ ಬೀಗುತ್ತಾ ಗೋಪಾಲಕರು ಇಂದ್ರಯಜ್ಞವನ್ನು ಮಾಡಲು ಅವಕಾಶಕೊಡದೆ ನೀನು ನನ್ನ ವಿಷಯದಲ್ಲಿ ಅಪರಾಧ ಮಾಡಿದೆ, ಯಜ್ಞಕ್ಕೆ ಸಿದ್ಧತೆ ಮಾಡಿದ ಕಾಣಿಕೆಗಳನ್ನು ನೀನೇ ಪಡೆದುಕೊಳ್ಳಲು ಅಪೇಕ್ಷಿಸಿದೆ ಎಂದು ನಾನು ಯೋಚಿಸಿದೆ.

ನಾನು ನಿನ್ನ ಬಗ್ಗೆ ತಪ್ಪಾಗಿ ತಿಳಿದೆ. ಈಗ ನಿನ್ನ ಕೃಪೆಯಿಂದಲೇ, ನೀನು ದೇವೋತ್ತಮ ಪರಮ ಪುರುಷ, ಈ ಸಮಸ್ತ ಬ್ರಹ್ಮಾಂಡದ ಮೂಲನೂ ನೀನೇ ಎಂಬುದು ಅರಿವಾಗಿದೆ. ನಿನ್ನ ವಿಷಯದಲ್ಲಿ ನಾನು ಮಹಾ ಅಪರಾಧವನ್ನು ಮಾಡಿಬಿಟ್ಟಿದ್ದೇನೆ. ದಯವಿಟ್ಟು ನನ್ನ ಅಪರಾಧವನ್ನು ಕ್ಷಮಿಸು. ನಾನು ನಿನ್ನ ಚರಣಕಮಲಗಳಲ್ಲಿ ಶರಣಾಗಿದ್ದೇನೆ.”

ಆಗ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಂದಹಾಸ ಬೀರುತ್ತಾ ನುಡಿದನು, ” ಪ್ರಿಯ ಇಂದ್ರನೇ, ನನ್ನ ನಿಷ್ಕಾರಣ ಕರುಣೆಯನ್ನು ತೋರಲು ಮತ್ತು ನಾನೇ ಶಾಶ್ವತ ಪ್ರಭು ಎನ್ನುವುದನ್ನು ನೆನಪು ಮಾಡಿಕೊಡಲು ಮಾತ್ರ ನಾನು ನಿನ್ನ ಯಜ್ಞವನ್ನು ನಿಲ್ಲಿಸಿದೆ.

ನಾನು ನಿನಗಷ್ಟೇ ಅಲ್ಲದೇ ಎಲ್ಲ ದೇವತೆಗಳಿಗೆ ಪ್ರಭು. ನಾನು ಯಾರಿಗಾದರೂ ಕೃಪೆ ತೋರಬಲ್ಲೆ,  ಶಿಕ್ಷೆಯನ್ನೂ ಕೊಡಬಲ್ಲೆ, ಯಾರಾದರೂ ಹುಸಿ ಅಹಂಕಾರಕ್ಕೆ ವಶವಾದುದನ್ನು ಕಂಡರೆ ನನ್ನ ನಿಷ್ಕಾರಣ ಕರುಣೆಯನ್ನು ತೋರಲು ಅವನ ಶ್ರೀಮಂತಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ.”

ಒಬ್ಬ ಶ್ರೀಮಂತನು ತನ್ನ ಆತ್ಮವನ್ನು ಶ್ರೀಕೃಷ್ಣನಿಗೆ ಅರ್ಪಿಸಲು ನೆರವಾಗಲು ಪ್ರಭುವು ಕೆಲವೊಮ್ಮೆ ಅವನ ಎಲ್ಲ ಶ್ರೀಮಂತಿಕೆಯನ್ನೂ ತೆಗೆದುಹಾಕುತ್ತಾನೆ ಎಂಬುದು ಗಮನಾರ್ಹ. ಐಶ್ವರ್ಯ, ಶಕ್ತಿ, ಕೀರ್ತಿ, ಬುದ್ಧಿವಂತಿಕೆ, ಸೌಂದರ್ಯ, ಮುಂತಾದ ಎಲ್ಲ ಗುಣಗಳನ್ನೂ ಕೊಡುವಾತನೂ ಕೃಷ್ಣನೇ. ಈ ಪ್ರಪಂಚದಲ್ಲಿ ಶ್ರೀಕೃಷ್ಣನು ಅವತರಿಸಿದಾಗ ಅವನು ಸರ್ವಶಕ್ತನೆಂದು ತೋರಿಸಿಕೊಡುತ್ತಾನೆ. ಪ್ರಬಲ ದೇವತೆಗಳಾದ ಬ್ರಹ್ಮ ಹಾಗೂ ಶಿವರೂ ಅವನ ಶಕ್ತಿಯನ್ನು ಮೀರಲಾರರು.

ಇಂದ್ರನಿಗೆ ತನ್ನ ನಿಜ ಸ್ವರೂಪದ ವಿಷಯವನ್ನು ತಿಳಿಸಿದ ಕೃಷ್ಣನು, ತಾನೇ ಶ್ರೇಷ್ಠನೆಂಬ ಅಹಂಕಾರವನ್ನು ಇನ್ನೆಂದೂ ಪಡಬಾರದೆಂದೂ ಆದೇಶಿಸಿದನು.

ಇದಾದ ಅನಂತರ ಸುರಭಿ ಹಸುವು ಕೃಷ್ಣನಿಗೆ ತನ್ನ ಭಕ್ತಿಯನ್ನು ಅರ್ಪಿಸಲು ತನ್ನ ಹಾಲಿನಿಂದ ಕ್ಷೀರಾಭಿಷೇಕವನ್ನು ಮಾಡಿತು. ಅನಂತರ ಇಂದ್ರನೇ ಮೊದಲಾಗಿ ಇತರ ದೇವತೆಗಳೂ ಪವಿತ್ರ ಗಂಗಾಜಲದಿಂದ ಪ್ರಭುವಿಗೆ ಅಭಿಷೇಕ ಮಾಡಿದರು. ಇದರಿಂದ ಕೃಷ್ಣನು ಪ್ರಸನ್ನನಾದನು. ಕೊನೆಗೆ ಇಂದ್ರನು ಕೃಷ್ಣನ ಒಪ್ಪಿಗೆ ಪಡೆದು ತನ್ನ ಸ್ವರ್ಗಲೋಕಕ್ಕೆ ಹಿಂದಿರುಗಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi