ಆಕರ : ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ನೀಡಿದ ವ್ಯಾಸಪೂಜಾ ಪ್ರವಚನಗಳಿಂದ
– ಅನುವಾದ : ಈಶ್ವರಚಂದ್ರ
ಬಗೆಬಗೆಯ ಪುಷ್ಪಗಳ ಮಾಲೆಯಿಂದ ಅಲಂಕೃತರಾಗಿ, ನಿಷ್ಠಾವಂತ ಅನುಯಾಯಿಗಳಿಂದ ಸುತ್ತುವರಿದ ಶ್ರೀಲ ಪ್ರಭುಪಾದರು ಶೋಭಾಯಮಾನವಾದ ಒಂದು ವ್ಯಾಸಾಸನದಲ್ಲಿ ಕುಳಿತಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ಶಿಷ್ಯರು ಶ್ರೀಲ ಪ್ರಭುಪಾದರ ಪದತಲದಲ್ಲಿ ನೆಲದ ಮೇಲೆ ದೀರ್ಘದಂಡ ನಮಸ್ಕಾರ ಮಾಡುತ್ತಿದ್ದಾರೆ.

ಶಿಷ್ಯರು ಅವರನ್ನು ಸುತ್ತಿಸುತ್ತಾರೆ. ಶ್ರೀಲ ಪ್ರಭುಪಾದರು ಗಂಭೀರವಾಗಿ ಕುಳಿತಿದ್ದಾರೆ. ಏನನ್ನೂ ನುಡಿಯುತ್ತಿಲ್ಲ. ಕೊನೆಯಲ್ಲಿ ಅವರು ಮಾತನಾಡಲು ಪ್ರಾರಂಭಿಸುತ್ತಾರೆ, ‘ವ್ಯಾಸಪೂಜಾ ಎಂದರೆ, ವರ್ಷದಲ್ಲೊಂದು ದಿನ ಗುರುಗಳ ಜನ್ಮದಿನದಂದು ಅವರಿಗೆ ಗೌರವವನ್ನು ಸಲ್ಲಿಸುವುದು.” ಏಕೆ? “ಏಕೆಂದರೆ ಅವರು ವೇದವ್ಯಾಸರ ಪ್ರತಿನಿಧಿ. ಅವರು ಗುರುಶಿಷ್ಯ ಪರಂಪರೆಯಿಂದ ಬಂದ ಮೂಲ ಜ್ಞಾನವನ್ನು ಯಾವುದೇ ವ್ಯತ್ಯಾಸವಿಲ್ಲದೆ ವಿತರಿಸುತ್ತಾರೆ.’
ಶ್ರೀಲ ಪ್ರಭುವಾದರ ಜನ್ಮದಿನ, ಪ್ರಭುಕೃಷ್ಣನ ಅವತಾರದ ಉತ್ಸವವಾದ ಜನ್ಮಾಷ್ಟಮಿಯ ಮರುದಿನ ಬರುತ್ತದೆ. ಅವರ ಶಿಷ್ಯರು ಆ ದಿನವನ್ನು ವ್ಯಾಸಪೂಜೆಯಾಗಿ ಆಚರಿಸುತ್ತಾರೆ. ವ್ಯಾಸಪೂಜಾ ಉತ್ಸವದ ಅರ್ಥವನ್ನು ಕುರಿತು ಶ್ರೀಲ ಪ್ರಭುಪಾದರ ವಿವರಣೆಯಿಂದ ಆಯ್ದು ಇಲ್ಲಿ ಕೊಡಲಾಗಿದೆ.
ಮೂಲ ಗುರು
”ವ್ಯಾಸರು ಮೂಲಗುರು. ಏಕೆಂದರೆ ಅವರ ಸಾಹಿತ್ಯದಿಂದ ನಾವು ಆಧ್ಯಾತ್ಮ ಜ್ಞಾನವನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ರಚಿಸಿದ ಈ ಎಲ್ಲ ಸಾಹಿತ್ಯ ಮೂಲತಃ ವ್ಯಾಸದೇವರ ಸೃಷ್ಟಿ ಗುರುವನ್ನು ಕೂಡಿಸುವ ಆಸನಕ್ಕೆ ವ್ಯಾಸಾಸನ ಎನ್ನುತ್ತಾರೆ. ಗುರುಗಳು ವ್ಯಾಸದೇವರ ಪ್ರತಿನಿಧಿ… ಆದ್ದರಿಂದ ಮಹಾ ಆಚಾರ್ಯ ವ್ಯಾಸದೇವರನ್ನು ಯಾರು ಪ್ರತಿನಿಧಿಸುತ್ತಾರೋ ಅವರಿಗೆ ವ್ಯಾಸಾಸನದ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತದೆ.”
ಗುರುಶಿಷ್ಯ ಪರಂಪರೆ
ಪ್ರಾಚೀನ ಸಂಪ್ರದಾಯವೊಂದರ ಸಾಂಪ್ರದಾಯಿಕ ಪ್ರತಿನಿಧಿಯಾದ ಶ್ರೀಲ ಪ್ರಭುಪಾದರು, ಆ ಆಚರಣೆ ಮತ್ತು ಆ ಸಂಪ್ರದಾಯದ ಹಿಂದಿರುವ ತತ್ತ್ವದ ಮೇಲಿನ ಗೌರವದಿಂದಾಗಿ ವ್ಯಾಸಪೂಜಾ ವಿಧಾನವನ್ನು ಅನುಸರಿಸುತ್ತಾರೆ. ಅವರು ಹೇಳುತ್ತಾರೆ: ”ದೇವೋತ್ತಮ ಪರಮಪುರುಷನಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವುದೇ ಈ ವ್ಯಾಸಪೂಜಾ ಉತ್ಸವದ ಅರ್ಥ.
ಏಕೆಂದರೆ ಅವನೇ ಮೂಲಗುರು. ನಾವು ಈ ಸಂದೇಶವನ್ನು ಪರಂಪರಾ ಪದ್ಧತಿಯ ಮೂಲಕ ಪಡೆಯುತ್ತೇವೆ. ಕೃಷ್ಣನಿಂದ ಬ್ರಹ್ಮ, ಬ್ರಹ್ಮನಿಂದ ನಾರದ, ನಾರದನಿಂದ ವ್ಯಾಸದೇವ…”
ಶ್ರೀಲ ಪ್ರಭುಪಾದರು ಗುರುಶಿಷ್ಯ ಪರಂಪರೆಯ ಈ ಸರಪಳಿಯಲ್ಲಿ ಪ್ರಸಿದ್ಧರಾದ ಗುರುಗಳ ಹೆಸರುಗಳನ್ನು ಹೇಳುವುದನ್ನು ಮುಂದುವರಿಸುತ್ತಾರೆ: ”ಮಾಧವೇಂದ್ರಪುರಿ, ಆಮೇಲೆ ಈಶ್ವರಪುರೀ, ಆಮೇಲೆ ಚೈತನ್ಯ ಮಹಾಪ್ರಭು, ಅನಂತರ ಆರು ಜನ ಗೋಸ್ವಾಮಿಗಳು, ಅನಂತರ ಇತರರು – ಭಕ್ತಿವಿನೋದ ಠಾಕುರ, ಜಗನ್ನಾಥ ದಾಸ ಬಾಬಾಜಿ, ಗೌರಕಿಶೋರದಾಸ ಬಾಬಾಜಿ, ಭಕ್ತಿಸಿದ್ಧಾಂತ ಸರಸ್ವತೀ…” ಈ ಪರಂಪರೆಯಲ್ಲಿಯೇ ಮುಂದಿನವರಾಗಿ ತಾವು ಬರುವುದನ್ನು ಶ್ರೀಲ ಪ್ರಭುಪಾದರು ತಿಳಿಸುತ್ತಾರೆ.
ಹೀಗೆ ನಾವು ಈ ದೀರ್ಘ ಪರಂಪರೆಯ ಮೂಲಕ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಅದೇ ರೀತಿಯಲ್ಲಿ ವ್ಯಾಸ ಪೂಜಾ ಉತ್ಸವದಲ್ಲಿ ನೀವು ಏನು ಗೌರವ, ಆದರ, ಕಾಣಿಕೆಗಳನ್ನು ಕೊಡುತ್ತೀರೋ ಅವು ಅದೇ ಪರಂಪರಾ ವಿಧಾನದ ಮೂಲಕ ಕೃಷ್ಣನಿಗೆ ಹೋಗಿ ತಲಪುತ್ತವೆ.”

ಪ್ರಭುವಿನ ಪ್ರತಿನಿಧಿ
ಶ್ರೀಲ ಪ್ರಭುಪಾದರು ವಿವರಿಸುತ್ತಾರೆ. ‘ಗುರುಗಳು ದೇವೋತ್ತಮ ಪರಮ ಪುರುಷನ ಪರವಾಗಿ ಎಲ್ಲ ಗೌರವ, ಎಲ್ಲ ಕಾಣಿಕೆಗಳನ್ನು ಸ್ವೀಕರಿಸುತ್ತಾರೆ, ತಮಗಾಗಿ ಅಲ್ಲ. ಉದಾಹರಣೆಗೆ ನಮ್ಮ ದೇಶದಲ್ಲಿ ಬ್ರಿಟಿಷರು ಆಳುತ್ತಿದ್ದಾಗ ವೈಸ್‌ರಾಯ್ ಎಂಬ ರಾಜನ ಪ್ರತಿನಿಧಿ ಇದ್ದ.
ಆದ್ದರಿಂದ ಸಹಜವಾಗಿಯೇ ಈ ವೈಸ್‌ರಾಯ್ ಕೆಲವು ಸಭೆಗಳಿಗೆ ಹಾಜರಾಗುತ್ತಿದ್ದಾಗ, ಅವನಿಗೆ ಗೌರವ ಸಲ್ಲಿಸಲೆಂದು ಅನೇಕ ಜನರು ಅಮೂಲ್ಯವಾದ ರತ್ನಾಭರಣಗಳನ್ನು ಕೊಡುತ್ತಿದ್ದರು. ಆದರೆ ಆ ವೈಸ್‌ರಾಯ್ ಒಂದು ಒಡವೆ ಅಥವಾ ಕಾಣಿಕೆಯನ್ನೂ ಮುಟ್ಟಬಾರದು ಎಂಬ ಕಾನೂನು ಇತ್ತ. ಅದು ರಾಜನ ಬೊಕ್ಕಸಕ್ಕೆ ಹೋಗುತ್ತಿತ್ತು. ರಾಜನ ಪರವಾಗಿ ವೈಸ್‌ರಾಯ್ ಎಲ್ಲ ಕಾಣಿಕೆಗಳನ್ನೂ ಸ್ವೀಕರಿಸಬಹುದಾಗಿತ್ತು. ಆದರೆ ಅವು ರಾಜನಿಗೇ ಹೋಗಿ ಸೇರುತ್ತಿದ್ದವು.
”ಅದೇ ರೀತಿಯಲ್ಲಿ ವ್ಯಾಸಪೂಜಾ ದಿನದಂದು ಏನೆಲ್ಲ ಗೌರವ, ಕಾಣಿಕೆ ಮತ್ತು ಭಾವನೆಗಳನ್ನು ಗುರುಗಳಿಗೆ ಸಲ್ಲಿಸಲಾಗುತ್ತದೆಯೋ ಅವು ಕೃಷ್ಣನಿಗೆ ಹೋಗಿ ಸೇರುತ್ತವೆ. ನಾವು ಹೇಗೆ ಮೇಲಿನಿಂದ ಜ್ಞಾನವನ್ನು ಸ್ವೀಕರಿಸಿದ್ದೇವೆಯೋ ಹಾಗೆಯೇ ಈ ಗೌರವವು ಮೇಲ್ಮುಖವಾಗಿ ಹೋಗುತ್ತದೆ.
”ಗುರುಗಳನ್ನು ದಾಟಿ ದೇವರ ಕಡೆಗೆ ನೆಗೆಯಬೇಡ, ಆಗ ಅದು ವಿಫಲವಾಗುತ್ತದೆ. ನಾವು ಗುರುಗಳ ಮುಖಾಂತರವೇ ಹೋಗಬೇಕು. ನಾವು ವ್ಯಾಸಪೂಜಾ ಉತ್ಸವವನ್ನು ಆಚರಿಸುತ್ತಿದ್ದೇವೆ. ನಮ್ಮ ಗುರು ಮಹಾರಾಜರ ಜನ್ಮದಿನೋತ್ಸವವನ್ನು ಆಚರಿಸುತ್ತಿದ್ದೇವೆ. ಏಕೆ? ಗುರುಗಳಿಲ್ಲದೆ ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ.
“ಯಾವನಾದರೊಬ್ಬನು ಗುರುಗಳನ್ನು ದಾಟಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದನೆಂದರೆ ಕೂಡಲೇ ಅವನು ಅಧಮನಾಗುತ್ತಾನೆ. ಕೃಷ್ಣನ ಅತ್ಯಂತ ವಿಶ್ವಾಸಪಾತ್ರ ಸೇವಕನ ಮೂಲಕ ಹೋಗುವ ವಿನಾ ಯಾರೂ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
“ನೀವು ಬಹಳ ಜ್ಞಾನಿಗಳಾಗಿದ್ದೀರಿ, ಬಹಳ ಪ್ರಗತಿಯನ್ನು ಸಾಧಿಸಿದ್ದೀರಿ, ಈಗ ಗುರುಗಳನ್ನು ಬಿಟ್ಟು ಕೃಷ್ಣನನ್ನು ಅರ್ಥ ಮಾಡಿಕೊಳ್ಳಬಹುದು ಎಂದು ನೀವು ಭಾವಿಸಿದರೆ ಅದು ಮೂರ್ಖತನ. ನಾವು ಸದಾ ಯಸ್ಯ ಪ್ರಸಾದಾದ್ ಭಗವತ್ ಪ್ರಸಾದಃ ಎಂದು ಪ್ರಾರ್ಥನೆ ಮಾಡಬೇಕು. ಅಂದರೆ ಗುರುಗಳ ಅನುಗ್ರಹದಿಂದ ಮಾತ್ರವೇ ಕೃಷ್ಣನ ಅನುಗ್ರಹ ಅಥವಾ ಕೃಪೆಯನ್ನು ನಾವು ಸಾಧಿಸಬಹುದು. ಇದೇ ವ್ಯಾಸಪೂಜೆಯ ಅರ್ಥ.”
ಒಂದು ಕ್ರಾಂತಿಕಾರಕ ಆಚರಣೆ
ಕೆಲವರು ವ್ಯಾಸಪೂಜಾ ಆಚರಣೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳ ಬಹುದು ಎನ್ನುವುದು ಶ್ರೀಲ ಪ್ರಭುಪಾದರಿಗೆ ಚೆನ್ನಾಗಿ ತಿಳಿದಿತ್ತು. ಅವರು ಹೇಳುತ್ತಾರೆ :

ಯಾರು ನನ್ನ ವಿದ್ಯಾರ್ಥಿಗಳಾಗಿದ್ದಾರೆಯೋ ಅವರಿಗೆ ಈ ಆಚರಣೆ ಎಂದರೇನು ಎನ್ನುವುದು ಸಹಜವಾಗಿಯೇ ತಿಳಿದಿದೆ… ಆದರೆ ಹೊರಗಿನವನು, ‘ಒಬ್ಬ ಮನುಷ್ಯನನ್ನು ದೇವರಂತೆ ಏಕೆ ಪೂಜಿಸಲಾಗುತ್ತಿದೆ?’ ಎಂದು ಕೇಳಬಹುದು. ಈ ವಿಷಯದಲ್ಲಿ ಸ್ವಲ್ಪ ಅನುಮಾನವಿರಬಹುದು. ಈಗ ನಾನು ನನ್ನ ಸ್ಥಾನವನ್ನು ಕುರಿತು ವಿವರಿಸುವೆ. ಏಕೆಂದರೆ ಈ ದಿನಗಳಲ್ಲಿ ಒಬ್ಬ ಮನುಷ್ಯನನ್ನು ಅತ್ಯಂತ ಉನ್ನತಿಗೆ ಏರಿದ ವ್ಯಕ್ತಿಯೆಂದು ಪೂಜಿಸುವುದು ಕ್ರಾಂತಿಕಾರಕವಾದ ಸಂಗತಿ.
ನನ್ನ ಶಿಷ್ಯರಿಗೆ ನನ್ನನ್ನು ಪೂಜಿಸುವಂತೆ – ಮಾನವ ಪೂಜೆ ಮಾಡುವಂತೆ – ತರಬೇತಿ ಕೊಡುತ್ತಿದ್ದೇನೆ ಎಂಬುದಲ್ಲ. ಅಥವಾ ಏನೂ ನೀಡದೆ ಅವರಿಂದ ನಾನು ಒಂದಷ್ಟು ಗೌರವವನ್ನು ಪಡೆಯುತ್ತಿದ್ದೇನೆ ಎಂಬುದಲ್ಲ. ಅದು ಸರಿಯಾದ ಗ್ರಹಿಕೆಯಲ್ಲ. ನೀವು ನಿಮ್ಮ ಗುರುಗಳಿಗೆ ಏನೆಲ್ಲ ಗೌರವ, ಏನೆಲ್ಲ ಆದರ, ಏನೆಲ್ಲ ಕಾಣಿಕೆ ಕೊಡುತ್ತಿದ್ದೀರೋ ಅದೆಲ್ಲ ಪರಂಪರಾ ವಿಧಾನದ ಮೂಲಕ ಕೃಷ್ಣನೆಡೆಗೆ ಹೋಗುತ್ತದೆ.
ಒಬ್ಬ ಹೊರಗಿನವನು ಹೀಗೆ ಯೋಚಿಸಬಹುದು, ‘ಈ ಮನುಷ್ಯನನ್ನು ಮಿತಿಮೀರಿ ಹೊಗಳಲಾಗುತ್ತಿದೆ, ಇವನು ತನ್ನ ಸ್ತೋತ್ರವನ್ನು ತಾನೇ ಕೇಳುತ್ತಿದ್ದಾನೆ.ʼ ಆದರೆ ಇದು ವಾಸ್ತವ ಸಂಗತಿ ಅಲ್ಲ. ಶಿಷ್ಯರು ಪ್ರಾಮಾಣಿಕವಾಗಿ ಸಂದೇಶವನ್ನು ಪಡೆಯುತ್ತಿದ್ದಾರೆ. ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೀಗೆ ಆ ಭಾವನೆಯು ದೇವೋತ್ತಮ ಪರಮಪುರುಷನ ಕಡೆಗೆ ಹೋಗುತ್ತಿದೆ. ಆ ಸಂದೇಶವು ಗುರುಶಿಷ್ಯ ಪರಂಪರೆಯ ದ್ವಾರಾ ಬಂದಿರುವಂತೆ ಈ ಎಲ್ಲ ಸ್ತೋತ್ರಗಳೂ ಆ ಗುರುಶಿಷ್ಯ ಪರಂಪರೆಯ ಮೂಲಕವೇ ಕೃಷ್ಣನನ್ನು ತಲಪುತ್ತವೆ.
ನೀವು ಆಚಾರ್ಯರಿಗೆ ಪ್ರಾರ್ಥನೆಗಳನ್ನು ಸಲ್ಲಿಸಿದರೆ, ಆಗ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಸಂತುಷ್ಟನಾಗುತ್ತಾನೆ. ಅವನನ್ನು ಸಂತುಷ್ಟಗೊಳಿಸಲು ನೀವು ಅವನ ಪ್ರತಿನಿಧಿಯನ್ನು ಸಂತುಷ್ಟಗೊಳಿಸಬೇಕು. ‘ನೀನು ನನ್ನನ್ನು ಪ್ರೀತಿಸಿದರೆ, ನನ್ನ ನಾಯಿಯನ್ನೂ ಪ್ರೀತಿಸು.’ ಭಗವದ್ಗೀತೆಯಲ್ಲಿ ಆಚಾರ್ಯೋಪಾಸನಮ್ ಎಂದು ಹೇಳಲಾಗಿದೆ : ಅಂದರೆ ನಾವು ಆಚಾರ್ಯರನ್ನು ಆರಾಧಿಸಬೇಕು.
” ಕೃಷ್ಣ ಹೇಳುತ್ತಾನೆ, ಆಚಾರ್ಯ೦ ಮಾಂ ವಿಜಾನೀಯಾಮ್: ‘ಆಚಾರ್ಯನನ್ನು ನಾನು ಎಂದು ಅಂಗೀಕರಿಸು.’ ಏಕೆ? ಅವನು ಒಬ್ಬ ಮನುಷ್ಯ ಎಂದು ನನಗೆ ಕಂಡುಬರುತ್ತಿದೆ. ಅವನ ಮಕ್ಕಳು ಅವನನ್ನು ಅಪ್ಪಾ ಎಂದು ಕರೆಯುತ್ತಾರೆ. ಅವನು ಮನುಷ್ಯನಂತೆಯೇ ಕಾಣುತ್ತಾನೆ.
ಅವನನ್ನು ದೇವರಂತೆಯೇ ಎಂದು ಏಕೆ ಭಾವಿಸಬೇಕು? ಏಕೆಂದರೆ ಅವನು ದೇವರಂತೆ ನುಡಿಯುತ್ತಾನೆ, ಅಷ್ಟೇ… ದೇವೋತ್ತಮ ಪರಮ ಪುರುಷನು ಹೇಳುವಂತೆಯೇ ಅವನೂ ಹೇಳುತ್ತಾನೆ; ಆದ್ದರಿಂದ ಅವನು ಗುರು.
ಲೌಕಿಕವಾಗಿಯೇ ಜನ್ಮ ತಾಳಿರುವಂತೆ ಅವನು ನಿಮಗೆ ಕಂಡುಬಂದರೂ, ಅವನ ನಡವಳಿಕೆಯು ಇತರ ಮನುಷ್ಯರ ಹಾಗೆಯೇ ಇರುವುದಾದರೂ, ವೇದಗಳಲ್ಲಿ ಹೇಳಿರುವ ಅಥವಾ ದೇವೋತ್ತಮ ಪುರುಷನು ಹೇಳಿರುವ ಸತ್ವವನ್ನೇ ಅವನೂ ಹೇಳುತ್ತಾನೆ; ಆದ್ದರಿಂದ ಅವನು ಗುರು. ಅವನು ಯಾವುದೇ ವಿಚಿತ್ರ ಬದಲಾವಣೆಯನ್ನೂ ಮಾಡುವುದಿಲ್ಲ. ಆದ್ದರಿಂದ ಅವನು ಗುರು. ಅದೇ ಲಕ್ಷಣ ನಿರೂಪಣೆ. ಇದು ಬಹಳ ಸರಳವಾಗಿದೆ.”
ಪರಿಶುದ್ಧ ಭಕ್ತನ ದೈನ್ಯ

ತಾವೇ ತಮ್ಮ ಗುರುಗಳ ಸೇವಕ ಎಂದು ಶ್ರೀಲ ಪ್ರಭುಪಾದ ವಿವರಿಸುತ್ತಾರೆ. ”ನನ್ನ ವಿದ್ಯಾರ್ಥಿಗಳು ನನಗೆ ಎಷ್ಟೆಲ್ಲಾ ಗೌರವವನ್ನು ಸಲ್ಲಿಸುತ್ತಾರೆ, ಆದರೆ ಈ ಎಲ್ಲ ಗೌರವಗಳೂ ನನ್ನ ಗುರುಗಳಿಗೆ ಸಲ್ಲುತ್ತವೆ. ನಾನು ಏನೂ ಅಲ್ಲ, ನಾನೊಬ್ಬ ಸೇವಕನಿದ್ದಂತೆ. ಒಬ್ಬ ಸೇವಕನು ಒಂದು ಪತ್ರವನ್ನು ವಿತರಿಸುವಾಗ ಅದರಲ್ಲಿ ಏನು ಬರದಿದೆ ಎನ್ನುವುದಕ್ಕೆ ಅವನು ಹೊಣೆಗಾರನಾಗಿರುವುದಿಲ್ಲ. ಅವನು ಕೇವಲ ವಿತರಿಸುತ್ತಾನೆ ಅಷ್ಟೇ.”
ಯಾರಿಂದ ಕೃಷ್ಣನ ಸಂದೇಶವನ್ನು ಪಡೆದರೋ ಆ ಗುರುಗಳಿಗಷ್ಟೇ ಅಲ್ಲದೆ, ಅದನ್ನು ಪಸರಿಸಲು ನೆರವಾದ ಶಿಷ್ಯರಿಗೂ ತಾವು ಋಣಿಗಳೆಂದು ಶ್ರೀಲ ಪ್ರಭುಪಾದರು ಭಾವಿಸುತ್ತಾರೆ. “ಕೃಷ್ಣಪ್ರಜ್ಞೆಗೆ ಬರುವ ಯಾರೇ ಆಗಲಿ ಒಬ್ಬ ಸಾಧಾರಣ ಜೀವಿಯಲ್ಲ. ವಾಸ್ತವದಲ್ಲಿ ಅವನೊಬ್ಬ ಮುಕ್ತಾತ್ಮ. ನಾನು ದಿವಂಗತನಾದ ಮೇಲೂ, ಇಂದು ಇಲ್ಲಿ ಅಭ್ಯಾಸ ಮಾಡುತ್ತಿರುವ ನನ್ನ ಶಿಷ್ಯರು ನನ್ನ ಆಂದೋಲನವನ್ನು ಮುಂದುವರಿಸುತ್ತಾರೆ ಎಂದು ನನಗೆ ಬಹಳ ವಿಶ್ವಾಸವಿದೆ…”
ಐರೋಪ್ಯ ಮತ್ತು ಅಮೆರಿಕನ್ ಜನರು ಕೂಡ ಚೈತನ್ಯ ಪಂಥದ ತತ್ತ್ವವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಭಕ್ತಿ ವಿನೋದ ಠಾಕುರರ ಆಶಯವಾಗಿತ್ತು. ಅದು ಅವರ ಅಭೀಪ್ಸೆಯಾಗಿತ್ತು. ನನ್ನ ಗುರು ಮಹಾರಾಜರು ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಪ್ರಭುಪಾದರು ಕೂಡ ಪಾಶ್ಚಾತ್ಯ ಜಗತ್ತಿನಲ್ಲಿ ಚೈತನ್ಯ ಪಂಥವನ್ನು ಪ್ರಚಾರ ಮಾಡಲು ತಮ್ಮ ಶಿಷ್ಯರನ್ನು ಕಳುಹಿಸಲು ಪ್ರಯತ್ನಿಸಿದರು.
ಪ್ರಾಯಃ ನಿಮಗೆ ಗೊತ್ತಿರುವಂತೆ, ನಮ್ಮ ಪ್ರಥಮ ಭೇಟಿಯಲ್ಲಿ ‘ಬೋಧಿಸು’ ಎಂದು ಅವರು ನನಗೆ ಹೇಳಿದರು. ಆಗ ನಾನೊಬ್ಬ ತರುಣ ಕೇವಲ ಇಪ್ಪತ್ತೈದು ವರ್ಷ ವಯಸ್ಸು. ಅಲ್ಲದೆ ನಾನೊಬ್ಬ ಗೃಹಸ್ಥನೂ ಆಗಿದ್ದೆ. ಆಗಲೇ ಸೇರಿಕೊಂಡು ಅವರು ಅಪೇಕ್ಷೆಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕಾಗಿತ್ತು.
ಆದರೆ ನನ್ನ ದುರದೃಷ್ಟದಿಂದ ಅವರ ಆಜ್ಞೆಯನ್ನು ಕೂಡಲೇ ನಾನು ಅನುಷ್ಠಾನಕ್ಕೆ ತರುವುದಾಗಲಿಲ್ಲ. ಆದರೆ ʼಅದನ್ನು ಮಾಡಬೇಕು’ ಎನ್ನುವುದು ನನ್ನ ಹೃದಯದಲ್ಲಿತ್ತು. ಏನಾದರಾಗಲಿ, ನನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಬಹಳ ತಡವಾಗಿ ಪ್ರಾರಂಭಿಸಿದರೂ, ನನ್ನ ಶಿಷ್ಯರ ನೆರವಿನಿಂದ ಈ ಆಂದೋಲನವು ಸಂಚಲನವನ್ನು ಪಡೆದುಕೊಂಡು ಜಗತ್ತಿನಾದ್ಯಂತ ಹಬ್ಬುತ್ತಿದೆ.
ಆದ್ದರಿಂದ ನಾನು ನಿಮಗೆ ಕೃತಜ್ಞತೆಯನ್ನು ಹೇಳಬೇಕು. ಇದೆಲ್ಲ ನಿಮ್ಮಿಂದ ಆದದ್ದು. ಇದರ ಮನ್ನಣೆ ನನಗೆ ಸಲ್ಲತಕ್ಕದ್ದಲ್ಲ. ನನ್ನ ಗುರು ಮಹಾರಾಜರ ಆಜ್ಞೆಯನ್ನು ಅನುಷ್ಠಾನಕ್ಕೆ ತರಲು ನೆರವಾಗುತ್ತಿರುವ ನಿಮಗೆಲ್ಲ ಸಲ್ಲಬೇಕು.
ಕೃಷ್ಣನು ಪ್ರತಿಯೊಬ್ಬರ ಒಳಗೂ ಇದ್ದಾನೆ. ಅದಕ್ಕೇ ಅವನನ್ನು ಚೈತ್ಯ ಗುರು, ಹೃದಯಾಂತರಳಾದಲ್ಲಿರುವ ಗುರು ಎಂದು ಕರೆಯುತ್ತಾರೆ. ಒಬ್ಬ ಜೀವಿಯು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಬಹಳ ಕಾತರದಿಂದಿದ್ದಾನೆ ಅಥವಾ ಅವನ ಕೃಷ್ಣಪ್ರಜ್ಞೆಯನ್ನು ಪುನಶ್ಚತನಗೊಳಿಸಲು ಬಯಸಿದ್ದಾನೆ ಎನ್ನುವುದು ಕೃಷ್ಣನಿಗೆ ಗೊತ್ತಾಗುತ್ತಿದ್ದಂತೆಯೇ ಅವನಿಗೆ ಎಲ್ಲ ಅವಕಾಶವನ್ನೂ ನೀಡುತ್ತಾನೆ.
ವಿಶೇಷವಾಗಿ ತಾನೇ ಗುರುವಿನ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ… ಆದ್ದರಿಂದ ಗುರುವು ಕೃಷ್ಣನ ಆವಿರ್ಭಾವ – ಒಬ್ಬ ವ್ಯಕ್ತಿಯು ತನ್ನ ಕೃಷ್ಣಪ್ರಜ್ಞೆಯನ್ನು ವಿಕಾಸಗೊಳಿಸಿಕೊಳ್ಳಲು ನೆರವಾಗುವ ಕೃಷ್ಣನ ಕರುಣಾವತಾರ. ಇಡೀ ಜಗತ್ತೇ ತಾಪತ್ರಯಗಳಿಂದ ಧಗಧಗಿಸಿ ಉರಿಯುತ್ತಿದೆ. ಈ ಲೌಕಿಕ ಯಾತನೆಗಳಿಂದ ಜನರನ್ನು ಉದ್ಧರಿಸಲು ಅಧಿಕೃತ ಅನುಮತಿಯನ್ನು ಪಡೆದವನನ್ನು ಗುರು ಎಂದು ಕರೆಯುತ್ತಾರೆ.
ಗುರು ಶಿಷ್ಯ ಪರಂಪರೆಯ ಮುಂದುವರಿಕೆ

ತಮ್ಮ ಶಿಷ್ಯರೂ ಗುರುಗಳಾಗಬೇಕು ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.
“ಗುರು ಎನ್ನುವುದು ಹೊಸ ಸಂಶೋಧನೆಯಲ್ಲ. ಇಲ್ಲಿ ಇರುವ ಎಲ್ಲ ನನ್ನ ಶಿಷ್ಯರೂ ಅನುಗ್ರಹೀತರಾದೆವೆಂದು ಭಾವಿಸುತ್ತಾರೆ… ಆದರೆ ನಾನು ಅವರಿಂದ ಅನುಗ್ರಹಿತನಾಗಿದ್ದೇನೆ. ಏಕೆಂದರೆ ಈ ಅಭಿಯಾನದಲ್ಲಿ ಅವರು ನನಗೆ ನೆರವಾಗುತ್ತಿದ್ದಾರೆ. ಅದೇ ಸಮಯದಲ್ಲಿ ಅವರೆಲ್ಲರೂ ಗುರುಗಳಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ.
ನಿಮ್ಮಲ್ಲಿ ಪ್ರತಿಯೊಬ್ಬರೂ ಮುಂದೆ ಗುರುಗಳಾಗಬೇಕು.” ನಿಮ್ಮ ಕರ್ತವ್ಯವೇನು? ನನ್ನಿಂದ ನೀವು ಏನನ್ನು ಕೇಳುತ್ತಿದ್ದೀರೋ, ನನ್ನಿಂದ ಏನನ್ನು ಕಲಿಯುತ್ತಿದ್ದೀರೋ ಅದನ್ನು ನೀವು ಸಮಗ್ರವಾಗಿ ವಿತರಣೆ ಮಾಡಬೇಕು. ಅದಕ್ಕೆ ಏನೂ ಸೇರ್ಪಡೆಯನ್ನಾಗಲಿ ಅಥವಾ ಮಾರ್ಪಾಟನ್ನಾಗಲಿ ಮಾಡಬಾರದು. ಆಗ ನೀವೆಲ್ಲ ಗುರುಗಳಾಗುತ್ತೀರಿ.
ಗುರುವಾಗುವುದು ಅಂತಹ ಅದ್ಭುತವಾದ ಸಂಗತಿಯೇನಲ್ಲ. ಒಬ್ಬನು ಪ್ರಾಮಾಣಿಕವಾದ ಆತ್ಮನಾಗಬೇಕು ಅಷ್ಟೇ. ಅದು ಕಷ್ಟವಲ್ಲ. ನೀವೇ ಏನಾದರೂ ತಯಾರು ಮಾಡಲು ಹೋದರೆ ಅದು ಕಷ್ಟವಾಗುತ್ತದೆ. ಆದರೆ ನೀವು ನಿಮ್ಮ ಗುರುಗಳಿಂದ ಏನನ್ನು ಕೇಳಿದ್ದೀರೋ ಅದನ್ನು ಸುಮ್ಮನೆ ಮಂಡಿಸಿದರೆ ಬಹಳ ಸುಲಭವಾಗುತ್ತದೆ.
ನಿಮ್ಮ ಗುರುಗಳಿಂದ ಕೇಳಿದ್ದಕ್ಕಿಂತಲೂ ಮಿಗಿಲಾಗಿ ಏನನ್ನಾದರೂ ಮಂಡಿಸಲು, ವ್ಯಾಖ್ಯಾನಿಸಲು ಬಯಸಿ ನೀವು ಅತಿ ಬುದ್ಧಿವಂತಿಕೆಯನ್ನು ತೋರಲು ಪ್ರಯತ್ನಿಸಿದರೆ, ಆಗ ನೀವು ಎಲ್ಲವನ್ನೂ ಹಾಳು ಮಾಡುತ್ತೀರಿ. ಏನೇ ಸೇರ್ಪಡೆಯನ್ನಾಗಲಿ ಅಥವಾ ಮಾರ್ಪಾಡನ್ನಾಗಲಿ ಮಾಡಬೇಡಿ, ಯಥಾರೂಪದಲ್ಲಿ ನಿರೂಪಿಸಿ ಅಷ್ಟೇ… ಸದಾ ನಿಮ್ಮ ಗುರುಗಳ ದಾಸರಾಗಿರಿ ಮತ್ತು ನೀವು ಕೇಳಿದ್ದಷ್ಟನ್ನೇ ನಿರೂಪಿಸಿ. ನೀವು ಆಗ ಗುರುವಾಗುತ್ತೀರಿ. ಇದೇ ಅದರ ರಹಸ್ಯ.
“ನಾನು ಗುರುವಾಗಲು ಅರ್ಹನಲ್ಲ ಎಂದು ವ್ಯಕ್ತಿಯು ಯೋಚಿಸಬಾರದು. ಪರಂಪರಾ ಪದ್ಧತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸಿದರೆ ನೀವು ಅರ್ಹರಾಗುತ್ತೀರಿ. ಈ ಪಂಥವನ್ನು ನೀವು ಬೋಧಿಸಿದರೂ ಸಾಕು – ‘ನನ್ನ ಪ್ರಿಯ ಮಿತ್ರ, ನನ್ನ ಪ್ರಿಯ ಸೋದರ, ಕೃಷ್ಣನಿಗೆ ಶರಣಾಗು’ ಎಂದು. ಆಗ ನೀವೂ ಒಬ್ಬ ಗುರುವಾಗುತ್ತೀರಿ.”
ಆವಶ್ಯಕತೆ ಇದೆ
ಪ್ರತಿಯೊಬ್ಬರೂ ಗುರುವಾಗಬೇಕು ಎಂದು ಚೈತನ್ಯ ಮಹಾಪ್ರಭುಗಳು ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬರೂ, ಏಕೆಂದರೆ ಗುರುಗಳ ಆವಶ್ಯಕತೆ ಇದೆ. ಈ ಪ್ರಪಂಚವು ಧೂರ್ತರಿಂದ ತುಂಬಿದೆ. ಆದ್ದರಿಂದ ಅವರಿಗೆ ಬೋಧಿಸಲು ಬಹಳ ಸಂಖ್ಯೆಯ ಗುರುಗಳು ಬೇಕು.
ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ: ಆಮಾರ ಆಜ್ಞಾಯ ಗುರು ಹನಾ ತಾರ ಏಸಿ ದೇಶಃ ನೀವು ಎಲ್ಲಿ ವಾಸ ಮಾಡುತ್ತೀರೋ ಅಲ್ಲಿಯೇ ಗುರುವಾಗಿ ಅವರನ್ನು ಉದ್ಧರಿಸಿ. ಉದಾಹರಣೆಗೆ ನೀವೊಂದು ಚಿಕ್ಕ ಸಮುದಾಯದಲ್ಲಿ ವಾಸ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆ ಸಮುದಾಯದಲ್ಲಿಯೇ ನೀವೊಬ್ಬರು ಗುರುವಾಗಿ ಅವರನ್ನು ಉದ್ಧರಿಸಬಹುದು.

“ಅದು ಹೇಗೆ ಸಾಧ್ಯ? ನನಗೆ ಶಿಕ್ಷಣವಿಲ್ಲ. ನನಗೆ ಜ್ಞಾನವಿಲ್ಲ. ನಾನು ಹೇಗೆ ಗುರುವಾಗಿ ಅವರನ್ನು ಉದ್ಧರಿಸಲಿ?” ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ: ಅದು ಏನೇನೂ ಕಷ್ಟವಲ್ಲ. ಯಾರೇ ದೇಖ, ತಾರೇ ಕಹ ಕೃಷ್ಣ – ಉಪದೇಶ. ಇದೇ ನಿಮ್ಮ ಅರ್ಹತೆ. ನೀವು ಕೇವಲ ಕೃಷ್ಣನ ಸಂದೇಶವನ್ನು ವಿತರಿಸಿದರೂ ಸಾಕು ಗುರುವಾಗಿಬಿಡುತ್ತಿರಿ.
ಕೃಷ್ಣ ಹೇಳಿದ್ದಾನೆ: ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ ( ಬೇರೆ ಎಲ್ಲ ವ್ಯಕ್ತಿಗಳನ್ನು ತೊರೆದು ನನಗೆ ಶರಣಾಗು) ನೀನು ಬೋಧಿಸು. ‘ಸ್ವಾಮಿ, ಕೃಷ್ಣನಿಗೆ ಶರಣಾಗಿ ಎಂದು ಪ್ರತಿಯೊಬ್ಬರನ್ನೂ ಪ್ರಾರ್ಥಿಸು, ಆಗ ನೀನು ಗುರುವಾಗುತ್ತೀಯೆ.
ಇದು ಬಹಳ ಸರಳ. ಕೃಷ್ಣ ಹೇಳಿದ್ದಾನೆ : ಮನ್ ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ ನಮಸ್ಕರು. (‘ನನ್ನನ್ನು ಕುರಿತು ಯೋಚಿಸು. ನನ್ನ ಭಕ್ತನಾಗು. ನನ್ನನ್ನು ಆರಾಧಿಸು, ನನಗೆ ಸಮಸ್ಕಾರಗಳನ್ನು ಸಲ್ಲಿಸು.’) ‘ಕೃಷ್ಣನ ಭಕ್ತನಾಗು, ಕೃಷ್ಣನಿಗೆ ನಮಸ್ಕಾರಗಳನ್ನು ಸಲ್ಲಿಸು. ಇಗೋ ಇಲ್ಲೊಂದು ದೇವಸ್ಥಾನವಿದೆ.
ಇಲ್ಲಿ ಕೃಷ್ಣನಿದ್ದಾನೆ. ದಯವಿಟ್ಟು ಇಲ್ಲಿಗೆ ಬಾ… ಎಂದು ಹೇಳು. ಇದೇ ಗುರುವಿನ ಅರ್ಹತೆ. ಗುರು ಯಾವ ಇಂದ್ರಜಾಲವನ್ನೂ ಮಾಡುವುದಿಲ್ಲ ಅಥವಾ ಗುರುವಾಗುವುದಕ್ಕಾಗಿ ಯಾವ ಅದ್ಭುತ ವಸ್ತುಗಳನ್ನೂ ಸೃಷ್ಟಿಸುವುದಿಲ್ಲ. ನಾನು ಪವಾಡಗಳನ್ನು ಮಾಡಿದ್ದೇನೆಂದು ಜನರು ನನಗೆ ಪ್ರಶಸ್ತಿ ಕೊಡುತ್ತಾರೆ.
ಆದರೆ ಚೈತನ್ಯ ಮಹಾಪ್ರಭುಗಳ ಸಂದೇಶವನ್ನು ಎಲ್ಲೆಡೆಗೆ ಒಯ್ದಿರುವುದೇ ನನ್ನ ಪವಾಡ; ಯಾರೇ ದೇಖ, ತಾರೇ ಕಹ ‘ಕೃಷ್ಣ’ – ಉಪದೇಶ. ಇಷ್ಟೇ ಅದರ ರಹಸ್ಯ. ನಿಮ್ಮಲ್ಲಿ ಯಾರೊಬ್ಬರು ಕೂಡ ಗುರುವಾಗಬಹುದು. ನಾನು ಅಸಾಧಾರಣ ಮನುಷ್ಯನೇನಲ್ಲ. ಯಾವುದೇ ರಹಸ್ಯ ಸ್ಥಳದಿಂದ ಬಂದ ಅಸಾಧಾರಣ ದೇವರೇನಲ್ಲ. ಅದು ಅತ್ಯಂತ ಸರಳವಾದ ಸಂಗತಿ.
ಚೈತನ್ಯ ಮಹಾಪ್ರಭು ಹೇಳುತ್ತಾರೆ : ಯಾರೇ ದೇವಿ, ತಾರೇ ಕದ ‘ಕೃಷ್ಣ’ – ಉಪದೇಶ. ಆದ್ದರಿಂದ ನೀವೂ ಕೂಡ ನಿಮ್ಮ ಮನೆಯಲ್ಲಿ ಗುರುವಾಗಬೇಕು ಎಂಬ ಚೈತನ್ಯ ಮಹಾಪ್ರಭುಗಳ ಉಪದೇಶವನ್ನು ನೀವು ಅನುಸರಿಸಬೇಕು ಎಂದು ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.
ಗುರುವಾಗುವುದಕ್ಕೆ ನೀವೊಂದು ಬೃಹತ್ ಪ್ರದರ್ಶನವನ್ನು ಮಾಡಬೇಕಾದ ಆವಶ್ಯಕತೆಯಿಲ್ಲ. ತಂದೆ ಒಬ್ಬ ಗುರುವಾಗಬೇಕು. ತಾಯಿ ಒಬ್ಬಳು ಗುರುವಾಗಬೇಕು. ತನ್ನ ಮಕ್ಕಳಿಗೆ ಗುರುವಾಗದವರು ತಂದೆಯಾಗಲೀ, ತಾಯಿಯಾಗಲೀ ಆಗಬಾರದು ಎಂದು ಶಾಸ್ತ್ರದಲ್ಲಿ ಹೇಳಿದೆ.
ಕೃಷ್ಣನ ಪ್ರೀತಿಪಾತ್ರರಾಗಿ
“ಎಲ್ಲ ಪುರುಷರು, ಸ್ತ್ರೀಯರು, ಬಾಲಕರು ಮತ್ತು ಬಾಲಕಿಯರು – ಗುರುಗಳಾಗಿ ಈ ಸೂತ್ರವನ್ನು ಅನುಸರಿಸುತ್ತೀರಿ ಎಂದು ನಾನು ಆಶಿಸುತ್ತೇನೆ. ಸುಮ್ಮನೆ ಪ್ರಾಮಾಣಿಕವಾಗಿ ಈ ಸೂತ್ರಗಳನ್ನು ಅನುಸರಿಸಿ ಮತ್ತು ಸಾರ್ವಜನಿಕರ ಬಳಿ ಮಾತನಾಡಿ. ಆಗ ನೀವು ಕೃಷ್ಣನ ಪ್ರೀತಿಪಾತ್ರರಾಗುತ್ತೀರಿ.
ಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ: ನ ಚ ತಸ್ಮಾನ್ ಮನುಷ್ಯೇಷು ಕಶ್ಚಿನ್ ಮೇ ಪ್ರಿಯ ಕೃಷ್ಣಮಃ. “ಕೃಷ್ಣಪ್ರಜ್ಞೆಯನ್ನು ಬೋಧಿಸುವ ಈ ವಿನೀತ ಕಾರ್ಯವನ್ನು ಯಾರು ಮಾಡುತ್ತಾರೋ, ಬೇರೆಲ್ಲರಿಗಿಂತ ಅವರು ನನಗೆ ಪ್ರಿಯರಾಗುತ್ತಾರೆ.
ಆದ್ದರಿಂದ ಬಹುಬೇಗ ಕೃಷ್ಣನ ಮನ್ನಣೆಯನ್ನು ಪಡೆಯಬೇಕೆಂದು ನೀವು ಬಯಸಿದ್ದರೆ, ಗುರುವಾಗುವ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಿ. ಭಗವದ್ಗೀತೆಯನ್ನು ಯಥಾರೂಪದಲ್ಲಿ ನಿರೂಪಿಸಿ. ಆಗ ನಿಮ್ಮ ಜೀವನ ಪರಿಪೂರ್ಣವಾಗುತ್ತದೆ.






Leave a Reply