ಹರೇಕೃಷ್ಣ ಮಂತ್ರ ಅಸ್ತಂಗತ

ಅದು ಕಲಿಯುಗಾಂತ

ಸ್ಥಳ: ಕೊಲಂಬಸ್, ಓಹೈಓ, ಮೇ 13, 1969

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಕವಿ ಅಲೆನ್ ಗಿನ್ಸ್‌ಬರ್ಗ್ ನಡುವೆ ನಡೆದ ಸಂವಾದ

ಶ್ರೀಲ ಪ್ರಭುಪಾದ: ಭಗವಾನ್ ಬುದ್ಧನು ಶ್ರೀಕೃಷ್ಣನ ಅವತಾರವೆಂದು ಅಂಗೀಕೃತವಾಗಿದೆ. ಇದು ಭಾಗವತದಲ್ಲಿ ಹೇಳಲ್ಪಟ್ಟಿದೆ. ಬಲದೇವನು ಎಂಟನೆಯವನು. ಹತ್ತನೆ ಅವತಾರದ ನಿರೀಕ್ಷೆ ಸಾಗಿದೆ.

ಅಲೆನ್ ಗಿನ್ಸ್‌ ಬರ್ಗ್: ಕಲ್ಕಿ

ಶ್ರೀಲ ಪ್ರಭುಪಾದ: ಕಲ್ಕಿ.

ಅಲೆನ್ ಗಿನ್ಸ್‌ ಬರ್ಗ್: ಕಲ್ಕಿಯ ಗುಣಲಕ್ಷಣಗಳೇನು?

ಶ್ರೀಲ ಪ್ರಭುಪಾದ: ಅದು ಭಾಗವತದಲ್ಲಿ ವಿವರಿಸಲ್ಪಟ್ಟಿದೆ. ಅವನು ರಾಜನಂತೆ ಬರುತ್ತಾನೆ. ವೈಭವದ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕತ್ತಿ ಹಿಡಿದು, ಕುದುರೆಯ ಮೇಲೆ ಕುಳಿತು ಬರುತ್ತಾನೆ. ಅವನು ಕೇವಲ ಕೊಲ್ಲುತ್ತ ಹೋಗುತ್ತಾನೆ. ಏನನ್ನೂ ಬೋಧಿಸುವುದಿಲ್ಲ. ಏಕೆಂದರೆ, ಆಗ ಭಗವಂತನನ್ನು ಅರಿಯುವ ಬುದ್ಧಿ ಸಾಮರ್ಥ್ಯ ಯಾರಿಗೂ ಇರುವುದಿಲ್ಲ.

ಅಲೆನ್ ಗಿನ್ಸ್‌ ಬರ್ಗ್: ಭಗವಂತನನ್ನು ಅರಿಯುವ ಸಾಮರ್ಥ್ಯವೇ ಇರುವುದಿಲ್ಲವೇ?

ಶ್ರೀಲ ಪ್ರಭುಪಾದ: ಜನರೆಲ್ಲ ಮಂದರಾಗಿ ಹೋಗಿರುತ್ತಾರೆ, ಅರಿವು ಪಡೆಯಲು ಒಳ್ಳೆಯ ಬುದ್ಧಿ ಸಾಮರ್ಥ್ಯ ಇರಬೇಕಾಗುತ್ತದೆ. ಅಲೆನ್ ಗಿನ್ಸ್‌ ಬರ್ಗ್: ಹಾಗಾದರೆ, ಕಲ್ಕಿಯು ಕಲಿಯುಗದ ಅಂತ್ಯದಲ್ಲಿ ಬರುವನೆ?

ಶ್ರೀಲ ಪ್ರಭುಪಾದ: ಹೌದು, ಅನಂತರ ಸತ್ಯಯುಗದ ಆರಂಭವಾಗುತ್ತದೆ.

ಅಲೆನ್ ಗಿನ್ಸ್ ಬರ್ಗ್: ಅದು ಯಾವುದು?

ಶ್ರೀಲ ಪ್ರಭುಪಾದ: ಸತ್ಯಯುಗವು ಪುಣ್ಯ ಯುಗ. ಸತ್ಯಯುಗದಲ್ಲಿ ಜನರೆಲ್ಲ ಧರ್ಮಭೀರುಗಳೂ, ಸತ್ಯಪರಾಯಣರೂ, ದೀರ್ಘಾಯುಷಿಗಳೂ ಆಗಿರುತ್ತಾರೆ.

ಅಲೆನ್ ಗಿನ್ಸ್ ಬರ್ಗ್: ಅವರು, ಕೊನೆಯಲ್ಲಿ ಉಳಿಯುವ ಜನರಾಗಿರುವರೇ, ಅಥವಾ ವಿನಾಶದ ಅನಂತರ ಸೃಷ್ಟಿಸಲ್ಪಡುವ ಹೊಸ ಜನರಾಗಿರುವರೇ?

ಶ್ರೀಲ ಪ್ರಭುಪಾದ: ಎಲ್ಲ ಆತತಾಯಿಗಳೂ ಕೊಲ್ಲಲ್ಪಡುವರು. ಕೆಲವು ಧಾರ್ಮಿಕ ಮನೋಭಾವದ ಜನ ಇದ್ದೇ ಇರುವರು, ಮತ್ತು ಅವರು ಉಳಿದುಕೊಳ್ಳುವರು.

ಅಲೆನ್ ಗಿನ್ಸ್‌ ಬರ್ಗ್: ಇದು ನಿಮ್ಮ ಶಿಷ್ಯರ ಜೀವಿತಾವಧಿಯಲ್ಲಿಯೇ ಒದಗಿಬರಬಹುದಾದ ಘಟನೆಯಾಗಿರುತ್ತದೆಯೇನು?

ಶ್ರೀಲ ಪ್ರಭುಪಾದ: ಇಲ್ಲ. ಇದು ಕಡೆಯಪಕ್ಷ 4,00,000 ವರ್ಷಗಳ ಅನಂತರ ಘಟಿಸುವಂಥದ್ದು. ಆ ವೇಳೆಗೆ ನನ್ನ ಶಿಷ್ಯರೆಲ್ಲರೂ ಕೃಷ್ಣನೊಂದಿಗಿರುವರು! (ನಗುವರು)

ಭಕ್ತರು: ಹರಿಬೋಲ್‌!

ಶ್ರೀಲ ಪ್ರಭುಪಾದ: ಮತ್ತು ಯಾರು ಅವರನ್ನು ಅನುಸರಿಸುವುದಿಲ್ಲವೋ ಅವರೆಲ್ಲರೂ ತಾವು ಕೊಲ್ಲಲ್ಪಡುವ ವಿನೋದವನ್ನು ಕಾಣುವರು (ನಗು)

ಅಲೆನ್ ಗಿನ್ಸ್ ಬರ್ಗ್: 4,00,000 ವರ್ಷಗಳವರೆಗೂ ಜನರು ‘ಹರೇಕೃಷ್ಣʼ ಮಂತ್ರ ಜಪಿಸುತ್ತಲೇ ಇರುವರೇನು?

ಶ್ರೀಲ ಪ್ರಭುಪಾದ: ಇಲ್ಲ. ಹರೇಕೃಷ್ಣ ಮಂತ್ರ ಪಠಣ ಮುಂದಿನ ಹತ್ತು ಸಾವಿರ ವರ್ಷಗಳಲ್ಲೇ ಕೊನೆಯಾಗುವುದು. ಅಲ್ಲಿಂದ ಮುಂದೆ ಅದು ಇರದು.

ಅಲೆನ್ ಗಿನ್ಸ್‌ ಬರ್ಗ್: ಆಹ್! ಹಾಗಾದರೆ ಉಳಿಯುವುದೇನು?

ಶ್ರೀಲ ಪ್ರಭುಪಾದ: ಏನೂ ಇಲ್ಲ. ನಾನು ನಿನ್ನನ್ನೂ ಕೊಂದು ತಿನ್ನುತ್ತೇನೆ, ನೀನೂ ನನ್ನನ್ನು ಕೊಲ್ಲುತ್ತೀಯ ಮತ್ತು ತಿನ್ನುತ್ತೀಯೆ. ಅಷ್ಟು ಮಾತ್ರ ಉಳಿಯುತ್ತದೆ.

ಅಲೆನ್ ಗಿನ್ಸ್ ಬರ್ಗ್: ಹತ್ತು ಸಾವಿರ ವರ್ಷಗಳ ಅನಂತರ?

ಶ್ರೀಲ ಪ್ರಭುಪಾದ: ಹೌದು, ಆಗ ಆಹಾರಧಾನ್ಯಗಳಿರುವುದಿಲ್ಲ. ಹಾಲು, ಸಕ್ಕರೆ, ಹಣ್ಣು- ಯಾವುದೂ ಇರುವುದಿಲ್ಲ. ಆಗ ನಾನು ನಿನ್ನನ್ನು ತಿನ್ನಲೇಬೇಕಾಗುತ್ತದೆ ಮತ್ತು ನೀನು ನನ್ನನ್ನು ತಿನ್ನುತ್ತೀಯೆ. ಮಾಂಸಾಹಾರಕ್ಕೆ ಸಂಪೂರ್ಣ ಅವಕಾಶ! (ನಗುವರು) ಸಂಪೂರ್ಣ ವ್ಯವಸ್ಥೆ! ಕೃಷ್ಣನು ಬಹಳ ದಯಾಳು.

ಅವನು ನಿನಗೆ ವ್ಯವಸ್ಥೆ ಮಾಡಿಕೊಡುವನು: “ಸರಿ, ಹಸು-ಕರುಗಳೇ ಏಕೆ? ನೀನು ನಿನ್ನ ಮಗನನ್ನೇ ತೆಗೆದುಕೋ. ಹೌದು, ಕುಳಿತು ಸುಖಭೋಜನ ಮಾಡು.” ಹಾವಿನ ಹಾಗೆ, ಅವು ತಮ್ಮ ಮೊಟ್ಟೆಗಳನ್ನೇ ನುಂಗುವಂತೆ, ಹುಲಿಗಳು ಕೂಡ ತಮ್ಮ ಮರಿಗಳನ್ನು ತಿನ್ನುತ್ತವೆ.

ಹಾಗೆಯೇ ಇದೂ ಆಗುತ್ತದೆ. ಮತ್ತಾಗ (ಭಗವಂತನನ್ನು) ಅರಿಯುವ ಸಾಮರ್ಥ್ಯವಿರುವುದಿಲ್ಲ. ಬೋಧಕರೂ ಇರುವುದಿಲ್ಲ, ಏನೂ ಇರುವುದಿಲ್ಲ. ಆಗ ಕೃಷ್ಣನು ಬರುವನು. ”ನಿಮ್ಮನ್ನು ಉಳಿಸುವುದಕ್ಕಾಗಿಯೇ ಕೊಲ್ಲುತ್ತೇನೆ” ಎಂದು ಪ್ರಹಾರ ಮಾಡುವನು.

ಅಲೆನ್ ಗಿನ್ಸ್ ಬರ್ಗ್: ಆದರೆ, ಮಂತ್ರ ಪಠಣದ ಹತ್ತು ಸಾವಿರ ವರ್ಷಗಳು ವಾಸ್ತವವಾಗಿ ಐತಿಹಾಸಿಕ ಸಂಗತಿಯೆನಿಸುವುದಿಲ್ಲವೆ?

ಶ್ರೀಲ ಪ್ರಭುಪಾದ: ಈಗ ಅದು ಮತ್ತೂ ಹೆಚ್ಚುತ್ತದೆ.

ಅಲೆನ್ ಗಿನ್ಸ್‌ ಬರ್ಗ್: ಎಲ್ಲಿಯವರೆಗೆ?

ಶ್ರೀಲ ಪ್ರಭುಪಾದ: ಹತ್ತು ಸಾವಿರ ವರ್ಷಗಳವರೆಗೆ.

ಅಲೆನ್ ಗಿನ್ಸ್‌ ಬರ್ಗ್: ಅನಂತರ?

ಶ್ರೀಲ ಪ್ರಭುಪಾದ: ಅನಂತರ, ಕುಗ್ಗುತ್ತದೆ ಅಥವಾ ಕಡಿಮೆಯಾಗುವುದು.

ಅಲೆನ್ ಗಿನ್ಸ್‌ಬರ್ಗ್: ಹಾಗಾದರೆ, ಈಗಿನ ಉದ್ದೇಶವೇನು?

ಶ್ರೀಲ ಪ್ರಭುಪಾದ: ಜನರು ಹತ್ತು ಸಾವಿರ ವರ್ಷಗಳ ಪರ್ಯಂತ ಇದರ ಪ್ರಯೋಜನ ಪಡೆಯುತ್ತಾರೆ. ಅನಂತರ ಅವರು…

ಅಲೆನ್ ಗಿನ್ಸ್‌ ಬರ್ಗ್: ಹಾಗಾದರೆ ಇದು ಕೊನೆಯ ಹಗ್ಗದಂತೆ ಕೊನೆಯ ಉಸಿರು.

ಶ್ರೀಲ ಪ್ರಭುಪಾದ: (ನಗುವರು) ಹೌದು, ನಾವು ಎಷ್ಟು ಶೀಘ್ರವಾಗಿ ಕೃಷ್ಣಪ್ರಜ್ಞೆಯನ್ನು ಆಶ್ರಯಿಸುತ್ತೇವೆಯೋ ಅಷ್ಟು ಒಳ್ಳೆಯದು. ಅಲೆನ್ ಗಿನ್ಸ್‌ ಬರ್ಗ್: ಈ ಯುಗ ಆರಂಭವಾಗಿದ್ದು ಯಾವಾಗ?

ಶ್ರೀಲ ಪ್ರಭುಪಾದ: ಕಲಿಯುಗದ ಆರಂಭ 5 ಸಾವಿರ ವರ್ಷಗಳ ಹಿಂದೆ ಆಯಿತು.

ಅಲೆನ್ ಗಿನ್ಸ್‌ ಬರ್ಗ್: ಈ ಎಲ್ಲ ಮಾಹಿತಿಗಳು ಎಲ್ಲಿ ದೊರೆಯುತ್ತವೆ?

ಶ್ರೀಲ ಪ್ರಭುಪಾದ: ವೈದಿಕ ಸಾಹಿತ್ಯದಲ್ಲಿ, ಭಾಗವತದಲ್ಲಿ.

ಅಲೆನ್ ಗಿನ್ಸ್ ಬರ್ಗ್: ಕಲಿಯುಗದಲ್ಲಿ ಏನು ನಡೆಯುತ್ತದೆಯೆಂಬ ಸವಿವರ ಮಾಹಿತಿ ಇಲ್ಲಿ ದೊರೆಯುವುದೇ?

ಶ್ರೀಲ ಪ್ರಭುಪಾದ: ಓಹ್, ಖಂಡಿತ, ನಾನದನ್ನು ಎಂದಾದರೂ ಓದಿ ಹೇಳುವೆ. 12ನೇ ಸ್ಕಂದದಲ್ಲಿ ಕಲಿಯುಗದ ಬಗ್ಗೆ ವಿವರಗಳಿವೆ. ಮತ್ತು ನೀವು ಈ ವಿವರಗಳು ಸತ್ಯವಾಗುತ್ತಿರುವುದನ್ನು ನೋಡುವಿರಿ.

ಉದಾಹರಣೆಗೆ, ಒಂದು ಹೇಳಿಕೆಯನ್ನು ಗಮನಿಸಿ; ‘ಸ್ವೀಕಾರ ಏವ ಉದ್ವಾಹೇ’ – ಮದುವೆಯು ಕೇವಲ ಪರಸ್ಪರ ಸಮ್ಮತಿಯಿಂದ ನಡೆದುಹೋಗುವುದು. ಇಂಥದ್ದೀಗ ನಡೆಯುತ್ತಿದೆ. ಮತ್ತು ಲಾವಣ್ಯಮ್ ಕೇಶಧಾರಣಮ್’ – ‘ಜನರು ಉದ್ದ ಕೂದಲು ಬೆಳೆಸುವುದರಿಂದ ಸುಂದರವಾಗಿ ಕಾಣುವೆವೆಂದು ಯೋಚಿಸುತ್ತಾರೆ.ʼ ಇದನ್ನು ಕೂಡ ನಾವಿಂದು ನೋಡುತ್ತಿದ್ದೇವೆ.

ಅಲೆನ್ ಗಿನ್ಸ್ ಬರ್ಗ್: ಭಾಗವತ ಪುರಾಣದಲ್ಲಿ ಚೈತನ್ಯ ಪಂಥಕ್ಕೆ ಅವಕಾಶವಿದೆಯೇ?

ಶ್ರೀಲ ಪ್ರಭುಪಾದ: ಓಹ್, ಖಂಡಿತವಾಗಿಯೂ, ನಾವದನ್ನು ತಮ್ಮ ಚೈತನ್ಯ ಮಹಾಪ್ರಭುಗಳ ಬೋಧನೆಗಳು’ ಎಂಬ ಪುಸ್ತಕದಲ್ಲಿ ನೀಡಿರುವೆವು.

ಅಲೆನ್ ಗಿನ್ಸ್ ಬರ್ಗ್: ಈ ಹತ್ತುಸಾವಿರ ವರ್ಷಗಳಲ್ಲಿ ಯಾರು ಕೃಷ್ಣನ ಹೆಸರನ್ನು ಪಠಿಸುತ್ತಾರೋ, ಆರಾಧಿಸುತ್ತಾರೋ ಅವರು ಮಾತ್ರ…

ಶ್ರೀಲ ಪ್ರಭುಪಾದ: ಅವರು ಮುಕ್ತಿ ಪಡೆದು ಭಗವದ್ಧಾಮಕ್ಕೆ ಮರಳುತ್ತಾರೆ.

ಅಲೆನ್ ಗಿನ್ಸ್ ಬರ್ಗ್: ಮತ್ತು ಬೇರೆ ಎಲ್ಲರೂ ಯುಗದಲ್ಲಿ ಗಾಢವಾಗಿ ಒಂದಾಗುತ್ತಾರೆ.

ಶ್ರೀಲ ಪ್ರಭುಪಾದ: ಹೌದು, ಹೌದು. ಆದ್ದರಿಂದ, ಯಾರು ಶಾಸ್ತ್ರಗಳಲ್ಲಿ ನಂಬಿಕೆಯಿಡುತ್ತಾರೋ, ಅವರು ಕೃಷ್ಣಪ್ರಜ್ಞೆಯನ್ನು ಅಂಗೀಕರಿಸಬೇಕು. ಅದುವೇ ಬುದ್ಧಿವಂತಿಕೆಯ ಕೆಲಸವಾಗಿದೆ. ಪ್ರಮಾಣೀಕೃತ ಶಾಸ್ತ್ರಗಳ ಉಪಯೋಗವನ್ನು ಪಡೆಯುವುದೇ ಬುದ್ಧಿವಂತಿಕೆಯ ಲಕ್ಷಣವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi