ನವದ್ವೀಪ ಪರಿಕ್ರಮ…

ಶ್ರೀಕ್ಷೇತ್ರ ಮಾಯಾಪುರ (ಭಾಗ-3)

– ಡಾ.ಬಿ.ಆರ್‌.ಸುಹಾಸ್‌

ನವದ್ವೀಪ

ಮಾರ್ಗಸೂಚಿ : ಇಸ್ಕಾನ್‌ ದೇವಾಲಯದ ಹೆಬ್ಬಾಗಿಲಿನಿಂದ ಹೊರಬಂದು ಬಲಕ್ಕೆ ತಿರುಗಿ 1 1/2 ಕಿ.ಮೀ. ದೂರ ಹೋಗಬೇಕು.

ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಬಾಲ್ಯ, ಯೌವನ, ಮತ್ತು ಸಂನ್ಯಾಸ ಸ್ವೀಕರಿಸುವವರೆಗಿನ ಜೀವನವನ್ನು ನವದ್ವೀಪದಲ್ಲಿಯೇ ಕಳೆದರು. ಚೈತನ್ಯರ ಜೀವನ ಚರಿತ್ರೆಯ ಅಧಿಕೃತ ಗ್ರಂಥವಾದ ಕೃಷ್ಣದಾಸ ಕವಿರಾಜರ ಚೈತನ್ಯ ಚರಿತಾಮೃತದಲ್ಲಿ ವರ್ಣಿತವಾಗಿರುವಂತೆ, ಜಗತ್ತಿನ ತುಂಬ ಮೋಸ, ವಂಚನೆ, ಅಧಾರ್ಮಿಕತೆಗಳು ತಾಂಡವವಾಡುತ್ತಿರಲು, ಅದ್ವೈತಾಚಾರ್ಯರೆಂಬ ಪರಮಭಕ್ತರು ಶ್ರೀಕೃಷ್ಣನ ಅವತಾರಕ್ಕಾಗಿ ಪ್ರಾರ್ಥಿಸಿದರು.

ಅವರ ಪ್ರಾರ್ಥನೆಗೆ ಓಗೊಟ್ಟ ಶ್ರೀ ಕೃಷ್ಣನು ತಾನೇ ಒಬ್ಬಭಕ್ತನ ರೂಪದಲ್ಲಿ ಅವತರಿಸಲು ಸಂಕಲ್ಪಿಸಿದನು. ಮೊದಲು ಅವನು ತನ್ನ ತಾಯ್ತಂದೆಯರೂ ಇತರ ಅನೇಕ ಭಕ್ತರೂ ಅವತರಿಸುವಂತೆ ಮಾಡಿ ಅನಂತರ ತಾನೇ ಅವತರಿಸಿದನು. ತನ್ನ ನಿತ್ಯ ಪ್ರಿಯತಮೆಯಾದ ರಾಧಾದೇವಿಯ ಮೈಕಾಂತಿ ಮತ್ತು ಭಾವನೆಗಳಿಂದ ಯುಕ್ತವಾಗಿ ಚೈತನ್ಯ ಮಹಾಪ್ರಭುವಾಗಿ ಅವತರಿಸಿದನು. ಹೀಗೆ, ಚೈತನ್ಯರು ರಾಧೆಯ ಹಾಗೂ ಕೃಷ್ಣನ ಅಂಶಗಳಿಂದ ಕೂಡಿದ ಒಂದು ಭಕ್ತ್ಯಾವತಾರ. ಆದ್ದರಿಂದಲೇ ಇವರಲ್ಲಿ ಕೃಷ್ಣಪ್ರೇಮ ಅತ್ಯಧಿಕವಾಗಿತ್ತು.

1486ರ ಫಾಲ್ಗುಣ ಮಾಸದ ಪೂರ್ಣಿಮೆಯ ಸಂಜೆ ಚೈತನ್ಯರು ಜನಿಸಿದರು. ಬಾಲ್ಯದಿಂದಲೇ ಇವರು ಅನೇಕ ಪವಾಡಗಳನ್ನು ತೋರಿದರು. ಮಗುವಿಗೆ ಹರಿನಾಮದ ಮೇಲೆ ಬಹಳ ಪ್ರೀತಿ. ಹೆಂಗಸರು ʼಹರೇ ಕೃಷ್ಣ’ ಎನ್ನುತ್ತಿದ್ದರೆ ಅಳುವುದನ್ನು ನಿಲ್ಲಿಸುತ್ತಿತ್ತು! ಹರೇ ಕೃಷ್ಣ ಎಂದು ಹೇಳುವುದನ್ನು ನಿಲ್ಲಿಸಿದರೆ ಮತ್ತೆ ಅಳುತ್ತಿತ್ತು!

ಒಂದು ದಿನ, ಇಬ್ಬರು ಕಳ್ಳರು ಒಡವೆಗಳನ್ನು ಕದಿಯಲೆಂದು, ಚೆನ್ನಾಗಿ ಅಲಂಕರಿಸಲ್ಪಟ್ಟಿದ್ದ ಮಗುವನ್ನು ಎತ್ತಿಕೊಂಡು ಹೋದರು. ಆದರೆ ಮರುಳಾದ ಅವರು, ತಮ್ಮ ಮನೆಗೆ ಹೋಗದೆ, ಸುತ್ತಿ ಬಳಸಿ ಪುನಃ ಚೈತನ್ಯರ ಮನೆಗೆ ಬಂದರು! ಹೆದರಿದ ಅವರು, ಮಗುವನ್ನು ಅಲ್ಲೇ ಬಿಟ್ಟು ಓಡಿದರು. ಮಗುವಿಗೆ ವಿಶ್ವಂಭರನೆಂದು ಹೆಸರಿಟ್ಟರು. ಪ್ರೀತಿಯಿಂದ ನಿಮಾಯ್ ಎಂದೂ ಕರೆಯುತ್ತಿದ್ದರು.

ನಿಮಾಯ್‌ಗೆ ಏಳು ವರ್ಷ ತುಂಬಿದಾಗ ಅವನ ತಂದೆ ಅವನಿಗೆ ಉಪನಯನ ಮಾಡಿದರು. ತನ್ನ ಎಂಟನೆಯ ವಯಸ್ಸಿನಲ್ಲಿ ನಿಮಾಯ್ ಗಂಗಾದಾಸ ಪಂಡಿತರಲ್ಲಿ ಸಂಸ್ಕೃತಾಭ್ಯಾಸ ಮಾಡಿದನು. ಎರಡೇ ವರ್ಷಗಳಲ್ಲಿ ಸಂಸ್ಕೃತ ವ್ಯಾಕರಣ ಮತ್ತು ತತ್ತ್ವಶಾಸ್ತ್ರಗಳಲ್ಲಿ ಅವನು ಪಾರಂಗತನಾದನು. ಹದಿನಾಲ್ಕನೆಯ ವಯಸ್ಸಿನಲ್ಲಿ ಅವನು ವಲ್ಲಭಾಚಾರ್ಯರ ಮಗಳಾದ ಲಕ್ಷ್ಮೀಪ್ರಿಯಾಳನ್ನು ಮದುವೆಯಾದರು. ಆದರೆ ನಾಲ್ಕು ವರ್ಷಗಳಲ್ಲಿ ಅವಳು ತೀರಿಕೊಂಡಳು!

ನಿಮಾಯ್ ತನ್ನ ಹದಿನೇಳನೆಯ ವಯಸ್ಸಿನಲ್ಲಿ ತನ್ನದೇ ಆದ ಸಂಸ್ಕೃತ ಶಾಲೆಯೊಂದನ್ನು ತೆರೆದು ನಿಮಾಯ್‌ ಪಂಡಿತ್ ಎಂದು ಸುಪ್ರಸಿದ್ಧನಾದನು. ಅಂದಿನ ದಿನಗಳಲ್ಲಿ ಮಹಾಪಂಡಿತನೆಂದು ಹೆಸರುವಾಸಿಯಾಗಿದ್ದ ಕೇಶವ ಕಾಶ್ಮೀರಿಯನ್ನೇ ಸೋಲಿಸಿದನು.

ಒಂದು ಬಾರಿ, ತಮ್ಮ ತಂದೆಯ ತಿಥಿಗೆಂದು ಚೈತನ್ಯರು ಗಯೆಗೆ ಹೋದಾಗ, ಅಲ್ಲಿ ಅವರು ಈಶ್ವರ ಪುರಿಗಳೆಂಬ ಭಕ್ತ ಮುನಿಗಳನ್ನು ಭೇಟಿಯಾಗಿ ಅವರಿಂದ ವೈಷ್ಣವದೀಕ್ಷೆ ಪಡೆದರು. ಗಯೆಯಿಂದ ಹಿಂದಿರುಗಿದ ಬಳಿಕ ಅವರಿಗೆ ಪ್ರಾಪಂಚಿಕ ಜೀವನದಲ್ಲಿ ವೈರಾಗ್ಯ ಹುಟ್ಟಿ ಶ್ರೀ ಕೃಷ್ಣನ ಭಕ್ತಿ ಹೆಚ್ಚಿತು.

ಆಗಲೇ ಅವರು ಹರಿನಾಮ ಸಂಕೀರ್ತನೆಯನ್ನಾರಂಭಿಸಿದುದು, ನಗರದ ಬೀದಿಗಳಲ್ಲಿ ಅವರು ಭಕ್ತರೊಂದಿಗೆ ಸಂಕೀರ್ತನೆ ನಡೆಸುತ್ತಿದ್ದಾಗ ಕಾಜಿ, ಜಗಾಯ್ ಮಧಾಯ್ ಎಂಬ ಸಹೋದರರು, ಮೊದಲಾದವರು ಅಡ್ಡಿಪಡಿಸಿದರು. ಆದರೆ ಚೈತನ್ಯರು ಅವರೆಲ್ಲರನ್ನೂ ಉದ್ಧರಿಸಿದರು.

ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಅವರು ಕಾಟ್ವಾಗೆ ಹೋಗಿ ಕೇಶವಭಾರತಿಗಳಿಂದ ಸಂನ್ಯಾಸ ಸ್ವೀಕರಿಸಿದರು. ಹೀಗೆ ನಿಮಾಯ್ ಪಂಡಿತ್‌, ಕೃಷ್ಣಚೈತನ್ಯರಾದರು.

ಶ್ರೀ ಶ್ರೀವಾಸ ಆಂಗನ್

ಇದೊಂದು ಮುಖ್ಯಸ್ಥಳ. ಹಿಂದೆ, ಇಲ್ಲಿ ಚೈತನ್ಯರ ಪ್ರಮುಖ ಅನುಯಾಯಿಗಳೊಬ್ಬರಾದ ಶ್ರೀವಾಸ ಪಂಡಿತರ ಮನೆಯಿತ್ತು. ಹೆಬ್ಬಾಗಿಲನ್ನು ಪ್ರವೇಶಿಸಿದಂತೆ, ಬಲಗಡೆಗೆ ಒಂದು ದೇವಸ್ಥಾನವಿರುವುದು ಕಾಣುತ್ತದೆ. ಶ್ರೀವಾಸ ಪಂಡಿತರ ಮನೆ ಇಲ್ಲಿಯೇ ಇತ್ತೆಂದು ಇದು ಸೂಚಿಸುತ್ತದೆ.

ಇಲ್ಲಿನ ಎಡವೇದಿಕೆಯ ಮೇಲೆ ರಾಧಾಕೃಷ್ಣರ ವಿಗ್ರಹಗಳಿವೆ. ಅಂತೆಯೇ ಕೈಗಳನ್ನು ಮೇಲೆತ್ತಿರುವ ಚೈತನ್ಯರ ವಿಗ್ರಹವೊಂದಿದೆ. ಬಲವೇದಿಕೆಯ ಮೇಲೆ ಚೈತನ್ಯ ಮತ್ತು ನಿತ್ಯಾನಂದ ಪ್ರಭುಗಳ ವಿಗ್ರಹಗಳಿವೆ. ಮಹಾಪ್ರಕಾಶ ರೂಪದಲ್ಲಿರುವ ಚೈತನ್ಯರ ವಿಗ್ರಹವಿದೆ. ಛತ್ರಿ ಹಿಡಿದ ಶ್ರೀವಾಸರ ವಿಗ್ರಹವೂ ಚಾಮರ ಹಿಡಿದ ಗದಾಧರರ ವಿಗ್ರಹಗಳೂ ಇವೆ.

ಈ ಸ್ಥಳದಲ್ಲಿ ಶ್ರೀ ಚೈತನ್ಯರು ಮಹಾಪ್ರಕಾಶ ಸ್ವರೂಪವನ್ನು ತೋರಿಸಿದರು. ಅಂದರೆ, ತಾನೇ ಭಗವಂತನೆಂಬ ರಹಸ್ಯವನ್ನು ತಮ್ಮ ವಿವಿಧ ಅವತಾರಗಳನ್ನು ಪ್ರದರ್ಶಿಸುತ್ತಾ ಪ್ರಕಟಪಡಿಸಿದರು. ಇಪ್ಪತ್ತೊಂದು ಗಂಟೆಗಳ ಕಾಲ ಅವರು ದಿವ್ಯ ಭಾವದಲ್ಲಿದ್ದು ಭಕ್ತರ ಪೂಜೆಯನ್ನು ಸ್ವೀಕರಿಸುತ್ತಾ ಪ್ರತಿಯೊಬ್ಬರಿಗೂ ಅವರು ಇಚ್ಛಿಸಿದ ರೂಪವನ್ನು ತೋರಿಸಿದರು. ಶ್ರೀವಾಸರು ಅವರಿಗೆ ಅಭಿಷೇಕ ಮಾಡಿ ಅರ್ಚಿಸಿದರು.

ಇದೇ ಸ್ಥಳದಲ್ಲಿ ಚೈತನ್ಯರು ನಿತ್ಯಾನಂದ ಪ್ರಭುಗಳಿಗೆ ತಾವು ಬಿಲ್ಲು, ಬಾಣ, ಕೊಳಲು, ದಂಡ ಕಮಂಡಲುಗಳನ್ನು ಹಿಡಿದ ಷಡ್ಬುಜ ರೂಪವನ್ನು ತೋರಿಸಿದರು.

ಇದೇ ಸ್ಥಳದಲ್ಲಿ ಚಾಂದ್ ಕಾಜಿ ಮತ್ತು ಅವನ ಕಡೆಯವರು, ಭಕ್ತರ ಒಂದು ಮೃದಂಗವನ್ನು ಒಡೆದು ಹಾಕಿದರು. ಹಾಗಾಗಿ ಈ ಸ್ಥಳಕ್ಕೆ ಖೋಲ್‌ ಭಂಗ ದಂಗ ಎಂಬ ಹೆಸರೂ ಇದೆ.

ಒಂದು ರಾತ್ರಿ ಚೈತನ್ಯರು ಭಕ್ತರೊಂದಿಗೆ ಶ್ರೀವಾಸರ ಮನೆಯ ಅಂಗಳದಲ್ಲಿ ಸಂಕೀರ್ತನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಶ್ರೀವಾಸರ ಮಗು ಸತ್ತುಹೋಯಿತು. ಮನೆಯ ಹೆಂಗಸರೆಲ್ಲಾ ದುಃಖದಿಂದ ಅಳತೊಡಗಿದರು. ಪ್ರಭುಗಳ ಕೀರ್ತನೆಗೆ ಅಡ್ಡಿಯಾಗುವುದೆಂದು ಶ್ರೀವಾಸರು ಅವರಿಗೆ ಅಳದಿರುವಂತೆ ಹೇಳಿದರು.

ತಾವೂ ದುಃಖಿಯಾಗಿದ್ದರೆ ಕೀರ್ತನೆಯಲ್ಲಿ ಸೇರಿಕೊಂಡರು. ಸ್ವಲ್ಪ ಹೊತ್ತಿನ ಬಳಿಕ, ಏನೋ ದುಃಖದ ಸಂಗತಿ ನಡೆದಿದೆಯೆಂದು ಚೈತನ್ಯರ ಅಂತರಂಗಕ್ಕೆ ಹೊಳೆದು ಅವರು ಕೀರ್ತನೆ ನಿಲ್ಲಿಸಿದರು. ಅಷ್ಟರಲ್ಲಿ ಅನೇಕರಿಗೆ ನಡೆದ ವಿಷಯ ತಿಳಿದಿತ್ತು. ಚೈತನ್ಯರಿಗೆ ವಿಷಯ ತಿಳಿಸಿ ಎಲ್ಲರೂ ಮಗುವಿನ ಅಂತ್ಯಕ್ರಿಯೆಗೆ ಸಮ್ಮತಿ ಬೇಡಿದರು. ಸತ್ತ ಮಗುವನ್ನು ನೋಡಿ ಚೈತನ್ಯರು, “ಏಕಪ್ಪಾ ಶ್ರೀವಾಸರ ಮನೆಯನ್ನು ಬಿಟ್ಟು ಹೋಗುತ್ತಿರುವೆ?” ಎಂದು ಕೇಳಿದರು. ಆಗ ಸತ್ತ ಮಗುವು ಇದ್ದಕ್ಕಿದ್ದಂತೆ ಎದ್ದು ಮಾತನಾಡಿತು!

“ಪ್ರಭು! ವಿಧಿಯ ನಿರ್ಣಯದ ಮೇರೆಗೆ ಇದುವರೆಗೂ ನಾನು ಇಲ್ಲಿದ್ದೆ. ಆ ಕಾಲ ಮುಗಿದಿರಲು, ನಿನ್ನ ನಿರ್ದೇಶನದಂತೆ ಇನ್ನೆಲ್ಲಿಗೋ ಹೋಗುತ್ತಿರುವೆ. ನಾನು ನಿನ್ನ ನಿತ್ಯ ಸೇವಕ ಪ್ರಭು! ಸ್ವತಂತ್ರನಲ್ಲ!”

ಹೀಗೆ ಹೇಳಿ ಮಗುವು ಮತ್ತೆ ಸತ್ತಂತೆ ಮಲಗಿತು. ಶ್ರೀವಾಸರಿಗೂ ಇತರರಿಗೂ ಜ್ಞಾನೋದಯವಾಯಿತು. ಮಗುವಿನ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ಚೈತನ್ಯರು ಶ್ರೀವಾಸರಿಗೆ, “ನೀವು ಒಂದು ಮಗುವನ್ನು ಕಳೆದುಕೊಂಡಿರುವಿರಿ, ಆದರೆ ನಾನೂ

ನಾನೂ ನಿತ್ಯಾನಂದನೂ ನಿಮ್ಮ ನಿತ್ಯ ಮಕ್ಕಳಲ್ಲವೇ?” ಎಂದು ಹೇಳಿ ಸಮಾಧಾನ ಪಡಿಸಿದರು.

ಒಮ್ಮೆ ಶ್ರೀ ಚೈತನ್ಯರು ಶ್ರೀವಾಸರ ಮನೆಯಲ್ಲಿ ವಿಷ್ಣು ಸಿಂಹಾಸನದ ಮೇಲೆ ಕುಳಿತಿದ್ದರು. ಆಗ ಅವರು, ತಮ್ಮ ತಾಯಿಯಾದ ಶಚೀದೇವಿಯು ಅದ್ವೈತಾಚಾರ್ಯರನ್ನು ನಿಂದಿಸಿ ವೈಷ್ಣವಾಪರಾಧವನ್ನು ಮಾಡಿದ್ದಳೆಂದೂ ಆ ತಪ್ಪಿಗಾಗಿ ಅವಳು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದೂ ಹೇಳಿದರು.

ಅವರ ಅಣ್ಣನಾದ ವಿಶ್ವರೂಪನು ಸಂನ್ಯಾಸ ಸ್ವೀಕರಿಸಲು ಅದ್ವೈತರೇ ಕಾರಣವೆಂದೂ ತಿಳಿದು ಅವರನ್ನು ಅವಳು ನಿಂದಿಸಿದ್ದಳು. ಇದನ್ನು ಕೇಳಿದ ಭಕ್ತರು ಅದ್ವೈತರನ್ನು ಅಲ್ಲಿಗೆ ಕರೆತರಲು ಹೋದರು. ಅದ್ವೈತರು ಶಚೀಮಾತೆಯ ಗುಣಗಾನ ಮಾಡುತ್ತಾ ಬಂದು ಭಕ್ತ್ಯಾವೇಶದಿಂದ ಸ್ಮೃತಿ ತಪ್ಪಿ ಬಿದ್ದು ಬಿಟ್ಟರು! ಇದೇ ಸಮಯ ಸಾಧಿಸಿ ತಮ್ಮ ತಾಯಿಯು ಅವರ ಪಾದಮುಟ್ಟಲು ಚೈತನ್ಯರು ಸೂಚಿಸಿದರು. ಶಚೀಮಾತೆ ಹಾಗೆಯೇ ಮಾಡಿದಳು.

ಶ್ರೀವಾಸ ಅಂಗನ್‌ನ ದರ್ಶನ ವೇಳೆ, ಬೆಳಗ್ಗೆ 8:30 ರಿಂದ 11:00 ಗಂಟೆಯವರೆಗೆ, ಹಾಗೂ ಮಧ್ಯಾಹ್ನ 3:30ರಿಂದ ರಾತ್ರಿ 8:30 ರವರೆಗೆ.

ಮಾರ್ಗಸೂಚಿ : ಇಸ್ಕಾನ್ ದೇವಾಲಯದ ಹೆಬ್ಬಾಗಿಲಿನಿಂದ ಹೊರಬಂದು, ಬಲಗಡೆಗೆ ಹೋದರೆ, 1 3/4 ಕಿ.ಮೀ.ಗಳ ದೂರದಲ್ಲಿ ನಿಮ್ಮ ಬಲಕ್ಕೆ ಈ ಸ್ಥಳವಿರುತ್ತದೆ. ಇದು ಚೈತನ್ಯರ ಜನ್ಮಸ್ಥಳದಿಂದ 1/2 ಕಿ.ಮೀ ಗಿಂತಲೂ ಕಡಮೆ ದೂರದಲ್ಲಿದೆ.

ಶ್ರೀ ಅದ್ವೈತ ಭವನ

ಇದೊಂದು ಪುಟ್ಟ ದೇವಾಲಯವಾಗಿದ್ದು, ಇಲ್ಲಿ ಚೈತನ್ಯರ ವಿಗ್ರಹದ ಪಾದಗಳ ಬಳಿ ಕುಳಿತಿರುವ ಅದ್ವೈತರ ವಿಗ್ರಹವಿದೆ.

ಅದ್ವೈತಾಚಾರ್ಯರು ಇಲ್ಲಿ ವಾಸಿಸುತ್ತಿದ್ದರು. ಶ್ರೀ ಕೃಷ್ಣನು ಪುನಃ ಭೂಮಿಯಲ್ಲಿ ಅವತರಿಸಲೆಂದು ಅವರು ಸಾಲಿಗ್ರಾಮ ಶಿಲೆಯೊಂದನ್ನು ಗಂಗಾಜಲ ಮತ್ತು ತುಳಸೀ ದಳಗಳಿಂದ ಇಲ್ಲಿ ಅರ್ಚಿಸುತ್ತಿದ್ದರು. ಈ ಸ್ಥಳದಲ್ಲಿ ಅದ್ವೈತಾಚಾರ್ಯರು ವಿಶ್ವರೂಪ (ಚೈತನ್ಯರ ಅಣ್ಣ), ಶ್ರೀವಾಸ ಪಂಡಿತ, ಹರಿದಾಸ ಠಾಕುರ, ಚಂದ್ರಶೇಖರ, ಮುರಾರಿ, ಮೊದಲಾದ ವೈಷ್ಣವರಿಗೆ ಭಗವದ್ಗೀತೆ, ಭಾಗವತಗಳ ಉಪದೇಶ ಮಾಡುತ್ತಿದ್ದರು.

ಚೈತನ್ಯರು ಸಂನ್ಯಾಸ ಸ್ವೀಕರಿಸಿದ ಬಳಿಕ ಅದ್ವೈತರು ಈ ಸ್ಥಳವನ್ನು ಬಿಟ್ಟು ತಮ್ಮ ಮೂಲ ಸ್ಥಳವಾದ ಶಾಂತಿಪುರಕ್ಕೆ ಹೋದರು.

ಮಾರ್ಗಸೂಚಿ : ಶ್ರೀವಾಸ ಆಂಗನ್ ಮುಖ್ಯ ದೇವಾಲಯದ ಹೊರಗೆ ಸುಮಾರು 30 ಮೀಟರ್‌ಗಳಷ್ಟು ದೂರದಲ್ಲಿ ಎರಡು ಪುಟ್ಟ ದೇವಾಲಯಗಳು ಒಂದೇ ಆವರಣದಲ್ಲಿವೆ. ಎಡಕ್ಕಿರುವುದೇ ಅದ್ವೈತ ಭವನ.

ಶ್ರೀ ಗದಾಧರ ಆಂಗನ್

ಮೇಲೆ ಹೇಳಿದ ಎರಡು ಪುಟ್ಟ ದೇವಾಲಯಗಳಲ್ಲಿ ಬಲಕ್ಕಿರುವುದೇ ಗದಾಧರ ಆಂಗನ್. ಇಲ್ಲಿ, ಚೈತನ್ಯ ಮಹಾಪ್ರಭುಗಳ ಮತ್ತು ಗದಾಧರ ಪಂಡಿತರ ವಿಗ್ರಹಗಳಿವೆ. ಗದಾಧರರು ಶ್ರೀಮತಿ ರಾಧಾದೇವಿಯ ಅವತಾರವೆಂದು ಹೇಳುತ್ತಾರೆ.

ಶ್ರೀ ಚೈತನ್ಯ ಮಠ

ಶ್ರೀ ಚಂದ್ರಶೇಖರರು ವಾಸಿಸುತ್ತಿದ್ದ ಮನೆಯಿದ್ದ ಈ ಸ್ಥಳದಲ್ಲಿ ಈಗ ಚೈತನ್ಯ ಮಠವಿದೆ. ಚಂದ್ರಶೇಖರರ ಪತ್ನಿ ಮಾಲತೀ, ಚೈತನ್ಯರ ತಾಯಿ ಶಚೀಮಾತೆಯ ತಂಗಿ. ಇವರಿಗೆ ಒಂದು ಮಗುವೂ ಇರಲಿಲ್ಲ. ಚೈತನ್ಯರ ತಂದೆ ಜಗನ್ನಾಥಮಿಶ್ರರು ಅವರು ಚಿಕ್ಕವರಾಗಿದ್ದಾಗಲೇ ಅವರನ್ನಗಲಿ ಮುಕ್ತಿಗೈದರು.

ಆಗ ಚಂದ್ರಶೇಖರರೇ ಚೈತನ್ಯರಿಗೆ ತಂದೆಯಂತಿದ್ದು ಅವರ ಮತ್ತು ಶಚೀದೇವಿಯ ಜವಾಬ್ದಾರಿ ಹೊತ್ತರು. ಚಂದ್ರಶೇಖರರ ಮನೆಯಲ್ಲಿ ಚೈತನ್ಯರು ತಮ್ಮ ಭಕ್ತ ಅನುಯಾಯಿಗಳಾದ ಅದ್ವೈತ, ಶ್ರೀವಾಸ, ಗದಾಧರ, ಹರಿದಾಸ ಠಾಕುರರೊಂದಿಗೆ ನಾಟಕಗಳನ್ನಾಡುತ್ತಿದ್ದರು.

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಗಳು ಚೈತನ್ಯ ಮಠವನ್ನು 1918ರಲ್ಲಿ ಸ್ಥಾಪಿಸಿ, ಈ ಇಡೀ ಪ್ರದೇಶವನ್ನು ವ್ರಜಪಟ್ಟಣವೆಂದು ಕರೆದರು.

ಇದು ಚೈತನ್ಯರ ಜನ್ಮಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದು ಎರಡು ದ್ವಾರಗಳನ್ನು ಹೊಂದಿದೆ. ಮುಖ್ಯದ್ವಾರವನ್ನು ಪ್ರವೇಶಿಸಿದರೆ, 25 ಮೀಟ‌ರ್‌ಗಳಷ್ಟು ಮುಂದೆ, ಹಾಗೂ ಬಲಗಡೆಗೆ ರಾಧಾಗೋವಿಂದರ ದೇವಾಲಯವಿದೆ. ರಾಧಾಗೋವಿಂದ ವಿಗ್ರಹಗಳ ಬಲಕ್ಕೆ ಎರಡು ಚೈತನ್ಯ ವಿಗ್ರಹಗಳಿವೆ. ಈ ವಿಗ್ರಹಗಳಿಗೆ ಪ್ರದಕ್ಷಿಣೆ ಮಾಡುವಾಗ, ಶ್ರೀ ಮಧ್ವಾಚಾರ್ಯ, ವಿಷ್ಣುಸ್ವಾಮಿ, ಶ್ರೀನಿಂಬಾರ್ಕ ಮತ್ತು ಶ್ರೀ ರಾಮಾನುಜಾಚಾರ್ಯರ ವಿಗ್ರಹಗಳಿರುವುದು ಕಾಣುತ್ತದೆ.

ರಾಜಾಗೋವಿ೦ದ ದೇವಾಲಯದಿಂದ ಹೊರಗೆ ಬಂದರೆ, ಬಲಗಡೆಗೆ ಗೋವರ್ಧನ ಪರ್ವತವಿದೆ. ಇದರ ಮೇಲೆ ನೂರಾರು ಗೋವರ್ಧನ ಶಿಲೆಗಳಿವೆ. ಇದರ ಸನಿಹದಲ್ಲೇ ರಾಧಾಕುಂಡವೆಂಬ ಕೊಳವಿದೆ. ಇದು ವೃಂದಾವನದ ರಾಧಾಕುಂಡದಿಂದ ಬೇರೆಯಲ್ಲ. ಇದರ ಸನಿಹದಲ್ಲಿ ಶ್ಯಾಮಕುಂಡವೂ ಕೇಲೀಕದಂಬ ವೃಕ್ಷವೂ ಇದೆ.

ಇನ್ನೊಂದು ದ್ವಾರದಿಂದ ಹೋದರೆ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ಸಮಾಧಿ ಸಿಗುತ್ತದೆ. ಭಕ್ತಿ ಸಿದ್ಧಾಂತರು, ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಗುರುಗಳು. ಇವರ ಸಮಾಧಿ ಶ್ಯಾಮಕುಂಡಕ್ಕೆ ಮುಖ ಮಾಡಿಕೊಂಡಿದೆ.

ರಾಧಾಗೋವಿಂದ ದೇವಾಲಯದ ಪಕ್ಕದಲ್ಲಿ ಶ್ರೀಲ ಕಿರೋರದಾಸ ಬಾಬಾಜಿ ಮಹಾರಾಜರ ಸಮಾಧಿ ಇರುವ ದೇವಾಲಯವಿದೆ. ಇವರು ಶ್ರೀಲ ಭಕ್ತಿಸಿದ್ಧಾಂತರ ಗುರುಗಳು. ಇವರು 1915ರಲ್ಲಿ ಕೋಲದ್ವೀಪದಲ್ಲಿ ಭಗವದ್ಭಾಮ ಸೇರಿದರು.

ಮೊದಲು ಇವರ ಸಮಾಧಿ ಗಂಗಾನದಿಯ ಪಶ್ಚಿಮ ದಂಡೆಯಲ್ಲಿ ಕುಲಿಯಾಗ್ರಾಮದ ಮುಟಂಚಡ (ಈಗಿನ ನವದ್ವೀಪ ನಗರ) ದಲ್ಲಿತ್ತು. ಇವರು ಸಮಾಧಿಸ್ಥರಾಗಿ ಹದಿನಾರು ವರ್ಷಗಳ ಬಳಿಕ, ಗಂಗಾನದಿಗೆ ನೆರೆ ಬರಲು, ಶ್ರೀ ಭಕ್ತಿಸಿದ್ಧಾಂತರು ಈ ಸಮಾಧಿಯನ್ನು ದೋಣಿಯಲ್ಲಿ ಈ ಸ್ಥಳಕ್ಕೆ ಸಾಗಿಸಿದರು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi