ಅವರೊಬ್ಬ ಸದ್ಗುರು ಹಾಗೂ ನಿಜ ಆಧ್ಯಾತ್ಮಿಕ ನಾಯಕ

ದಿನಾಂಕ 17ನೇ ಆಗಸ್ಟ್ 2006 – ಶ್ರೀಲ ಪ್ರಭುಪಾದರ 110ನೇ ಜನ್ಮದಿನದಂದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಚತುರ್ವೇದಿಯವರೊಡನೆ ನಡೆಸಿದ ಸಂದರ್ಶನದ ಸಾರಾಂಶ.

ಶ್ರೀ ಶ್ರೀಮದ್‌ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅನೇಕ ಜನರಿಗೆ ಪ್ರೇರಣೆ ನೀಡಿದರು. ಅವರ ಸಾವಿರಾರು ಶಿಷ್ಯರು ಇದನ್ನು ಸ್ಮರಿಸಿದ್ದಾರೆ. ಯಾವುದೋ ಒಂದು ನಿಮಿಷದ ಭೇಟಿಯೇ ಶಿಷ್ಯರ ಇಡೀ ಜೀವನವನ್ನೇ ಮಾರ್ಪಡಿಸಿತು. ಸಮಾಜದ ವಿಭಿನ್ನ ಸ್ಥರದ ಜನರಿಗೆ ಏಕತ್ರವಾದ ಪ್ರೇರಣೆ ನೀಡಿದ ಮಹಾನುಭಾವರು ಅವರು. ಈ ಲೇಖನದಲ್ಲಿ ಅಂತಹ ಮೂವರು ಗಣ್ಯರ ಸ್ವಂತ ಅನುಭವವನ್ನು ನೀಡಿದ್ದೇವೆ. ಇವರೆಲ್ಲರೂ ಶೀಲ ಪ್ರಭುಪಾದರನ್ನು ಸ್ವತಃ ಭೇಟಿ ಮಾಡಿದ್ದರು. ಪ್ರಭುಪಾದರ 10ನೇ ಜನ್ಮದಿನದ ಅಂಗವಾಗಿ ಗಣ್ಯರು ಶ್ರೀಲ ಪ್ರಭುಪಾದರೊಡನೆ ತಮ್ಮ ಭೇಟಿಯ ಸ್ಮರಣೆಯನ್ನು ಭಕ್ತಿವೇದಾಂತ ದರ್ಶನ ಓದುಗರಿಗಾಗಿ ನೀಡಿದ್ದಾರೆ. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಈ ಮೂವರು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಗೈದಿದ್ದಾರೆ. ಒಬ್ಬರು ರಾಜನೀತಜ್ಞರಾದರೆ, ಮತ್ತೊಬ್ಬರು ನ್ಯಾಯತಜ್ಞರು ಇನ್ನೊಬ್ಬರು ಯೋಗ ವಿಜ್ಞಾನಿ.

ಶ್ರೀಲ ಪ್ರಭುಪಾದರ ಬಗ್ಗೆ ಮೊದಲು ಕೇಳಿದ್ದು:

ಇದು ಸರಿಸುಮಾರು 68 ಅಥವಾ 69ರ ವರ್ಷ ಇರಬೇಕು. ನನ್ನ ಅನೇಕ ಸ್ನೇಹಿತರು, ಅದರಲ್ಲೂ ನನ್ನ ಭಾವ ಶ್ರೀ ವಿನಯ್ ದುಬೆಯವರು ಶ್ರೀಲ ಪ್ರಭುಪಾದರ ಬಗ್ಗೆ ಹೇಳಿದರು. ಶ್ರೀಲ ಪ್ರಭುಪಾದರು ತಮ್ಮ ಪೂರ್ವಾಶ್ರಮದಲ್ಲಿ ಅಲಹಾಬಾದಿನಲ್ಲಿ ಒಬ್ಬ ರಸಾಯನಶಾಸ್ತ್ರಜ್ಞರಾಗಿದ್ದರು.

ಆಗ ನನ್ನ ಸ್ನೇಹಿತರು ಅವರನ್ನು ಭೇಟಿಯಾಗಿದ್ದರು. ಶ್ರೀ ದುಬೆಯವರು ಈಗ ಅವರು ಶ್ರೀ ಭಕ್ತಿವೇದಾಂತಸ್ವಾಮಿ ಪ್ರಭುಪಾದರೆಂದು ಖ್ಯಾತರಾಗಿ ನಮ್ಮ ಸಂಸ್ಕೃತಿಯನ್ನು ಪಾಶ್ಚಾತ್ಯರಲ್ಲಿ ಬಿತ್ತಿದ್ದಾರೆಂದು ನನಗೆ ಹೇಳಿದರು. ಅನೇಕ ಯುವ ಅಮೆರಿಕನ್ನರನ್ನು ಹರೇಕೃಷ್ಣ ಆಂದೋಲನದೆಡೆ ಆಕರ್ಷಿಸಿದ್ದಾರೆ ಎಂಬುದು ನನಗೆ ತಿಳಿಯಿತು.

1960ರ ದಶಕದಲ್ಲಿ ಯುವಕರಲ್ಲಿ ಭಾರಿ ಕೋಲಾಹಲವಿತ್ತು. ಯುದ್ಧದಿಂದ ಬೇಸತ್ತು ಲೌಕಿಕ ಪ್ರಗತಿಯಿಂದ ರೋಸಿ ಹೋಗಿದ್ದರು. ಅವರಿಗೊಂದು ಆಶಾಕಿರಣ ಬೇಕಾಗಿತ್ತು. ಆದ್ದರಿಂದ ಆಧ್ಯಾತ್ಮಿಕತೆಗೆ ಒಲವು ತೋರುತ್ತಿದ್ದರು. ಶ್ರೀಲ ಪ್ರಭುಪಾದರು ಅದನ್ನು ನೀಡಿ ಸಫಲರಾಗಿದ್ದರು.

ತಮ್ಮ ಮೊದಲ ಭೇಟಿಯ ಬಗ್ಗೆ:

ಶ್ರೀ ಆದಿತ್ಯನಾಥ ಝಾ ಎಂಬ ಸಜ್ಜನರು ಆಗ ದಿಲ್ಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿದ್ದರು. ಅವರೂ ಕೂಡ ಅಲಹಾಬಾದ್‌ ನಿಂದ ಬಂದವರು. ಪಂಡಿತರೂ ಮತ್ತು ಮೇಧಾವಿಗಳೂ ಆಗಿದ್ದರು. ನಾನು ಕೂಡ ಆಗ ದೆಹಲಿಯಲ್ಲಿದ್ದೆ. ಶ್ರೀಯುತ ಝಾರೊಡನೆ ನನ್ನ ನಿಕಟ ಸಂಪರ್ಕವಿತ್ತು.

ಇದು 1971 ಇರಬೇಕು. ಶ್ರೀಲ ಪ್ರಭುಪಾದರು ಆಗಿನ್ನು ತಮ್ಮ ಶಿಷ್ಯ (ಬಹುತೇಕವಾಗಿ ಅಮೆರಿಕೆಯ ಯುವಜನರು) ರೊಂದಿಗೆ ಭಾರತಕ್ಕೆ ಬಂದಿದ್ದರು. ಅವರನ್ನು ಅಭಿನಂದಿಸಲು ದೆಹಲಿಯಲ್ಲಿ ಆಗಿನ್ನು ಸ್ವಾಗತ ಸಮಿತಿಯನ್ನು ರಚಿಸಲಾಗಿತ್ತು. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅದರಲ್ಲಿ ಒಂದು ಬೃಹತ್ ಪೆಂಡಾಲ್ ಕಾರ್ಯಕ್ರಮವೂ ಇತ್ತು. ಅದಕ್ಕೆ ನನ್ನನ್ನು ಅತಿಥಿಯಾಗಿ ಕರೆಯಲಾಗಿತ್ತು. ನಾನು ಅವರೊಡನೆ ರಂಗದಲ್ಲಿ ಇದ್ದೆ. ಶ್ರೀಯುತ ಝಾರವರು ಶ್ರೀಲ ಪ್ರಭುಪಾದರನ್ನು ಜನ ಸಮೂಹಕ್ಕೆ ಪರಿಚಯಿಸಿದರು. ಹಾಗೆ ಪರಿಚಯಿಸುವಾಗ ಭಾರತೀಯ ಸಾಧುಸಂತರ ಒಳ್ಳೆ ಸಂಸ್ಕೃತಿಯ ಬಗ್ಗೆ ಸ್ವಲ್ಪ ವಿಷಯವನ್ನು ಅವರು ಹೇಳಿದರು.

ಆಗ ನಾನೂ ಕೂಡ ಸ್ವಾಗತಕೋರಿ ಒಂದೆರಡು ಹಿತವಚನಗಳನ್ನು ನುಡಿದೆ. ಕಾರ್ಯಕ್ರಮದಲ್ಲಿ ಪ್ರಸಾದ ವಿತರಣೆ, ಕೀರ್ತನೆ ಹಾಗೂ ಪ್ರಭುಪಾದರ ಪ್ರವಚನಗಳು ನಡೆಯಬೇಕಿತ್ತು. ಒಂದು ಘನತೆವೆತ್ತ ಸ್ವಾಗತ ಸಮಿತಿಯು ಮುಂದುವರಿಯುವುದನ್ನು ಕಂಡು ನನ್ನ ಮನವೊಲಿದಿತ್ತು.

ಅಲ್ಲಿ ನೆರೆದಿದ್ದ ಜನಮಾನಸದಲ್ಲಿ ಕೆಲವರು ಸಂಶಯದಿಂದ, ಇನ್ನೂ ಕೆಲವರು ಆದರ ಮತ್ತು ಭಕ್ತಿಯಿಂದ ಬಂದು ಸೇರಿದ್ದರು. (ಸಂದೇಹ ಇದ್ದದ್ದು ಏಕೆಂದರೆ, ಆಗ ಅನೇಕ ಸಾಧುಗಳೆನಿಸಿಕೊಂಡವರು ಅಮೆರಿಕಕ್ಕೆ ಹೋಗಿ ಬರುವುದು ವಾಡಿಕೆಯಾಗಿತ್ತು. ಸಾಧು ಎಂದು ಅವರನ್ನು ಕರೆಯುವುದೇ ಬಹಳ ಕಷ್ಟವಾಗಿತ್ತು. ಆದ್ದರಿಂದ ಸಂಶಯ ಕೆಲವರಲ್ಲಿ ಮೊಳೆತಿತ್ತು.) ಶ್ರೀಲ ಪ್ರಭುಪಾದರು ತಮ್ಮ ಪ್ರವಚನವನ್ನು ನೀಡಿದರು.

ಅವರ ಮಾತು ಸ್ಪಷ್ಟವಾಗಿತ್ತು, ದೃಢವಾಗಿತ್ತು. ಅವರು ಹೇಳುವ ವಿಷಯದ ಬಗ್ಗೆ ಸ್ಪಷ್ಟ ಗ್ರಹಿಕೆ ಅವರಿಗಿತ್ತು. ಮಾತುಗಾರಿಕೆ ಹಾಗೂ ವಾಕ್‌ ಚಾತುರ್ಯಕ್ಕೆ ಹೆಚ್ಚು ಗಮನ ಕೊಡದೆ ವಿಷಯವನ್ನು ಸ್ಪಷ್ಟವಾಗಿ ಹೇಳಿದರು. ನೆರೆದಿದ್ದ ಎಲ್ಲರೂ ಭಕ್ತಿಯಿಂದ ಕೇಳಿದರು. ಅವರ ಪ್ರಾಮಾಣಿಕತೆ ಎಲ್ಲರನ್ನು ಮುಟ್ಟಿತು.

ನನಗೂ ಸಹ ಇಲ್ಲೊಬ್ಬ ಸದ್ಗುರುವಿದ್ದಾರೆ. ತಮ್ಮ ಸಂದೇಶವನ್ನು ಜಗತ್ತಿನಾದ್ಯಂತ ಪ್ರಸರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಅರಿವಾಯಿತು. ನಾನು ಕೂಡ ಇತರ ಭಾರತೀಯರ ಹಾಗೆ ಗೌರವ ಮತ್ತು ಆದರಗಳಿಂದ ಅವರನ್ನು ಕಂಡೆ.

ಇತರ ಭೇಟಿಗಳ ಬಗ್ಗೆ:

ಒಂದೆರಡು ವರ್ಷಗಳು ಕಳೆಯಿತು. ನನ್ನ ಜವಾಬ್ದಾರಿಗಳು ನನ್ನನ್ನು ಅನೇಕ ಜಾಗಗಳಿಗೆ ಕೊಂಡೊಯ್ಯುತ್ತಿತ್ತು. ನಾನು ಆಗ ಚಂಡೀಘಡದ ಮುಖ್ಯ ಆಯುಕ್ತನಾಗಿದ್ದೆ. ಶ್ರಿಲ ಪ್ರಭುಪಾದರು ಆಗ ಐದು ದಿನಗಳವರೆಗೆ ಚಂಡೀಘಡದಲ್ಲಿದ್ದರು. ದೆಹಲಿಗಿಂತಲೂ ದೊಡ್ಡದಾದ ಪೆಂಡಾಲ್ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮುಖ್ಯ ಆಯುಕ್ತನಾದುದರಿಂದ ಆಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾನೇ  ವಹಿಸಿದ್ದೆ.

ಈ ಕಾರ್ಯಕ್ರಮದಲ್ಲೂ ಕೂಡ ಅನೇಕರು ಸೇರಿದ್ದರು. ಭಕ್ತಿಭಾವದಿಂದ ಕೂಡಿದ ಹಾಗೂ ಸ್ವಲ್ಪ ಸಂದೇಹದಿಂದಲೇ ಸೇರಿದವರೂ ಅಲ್ಲಿ ನೆರೆದಿದ್ದರು. ಈಗಲೂ ಕೂಡ ಪ್ರಭುಪಾದರು ಅವರ ಮನಗೆದ್ದರು. ಅವರ ವ್ಯಕ್ತಿತ್ವದಲ್ಲಿ ಏನೋ ಒಂದು ಆಯಸ್ಕಾಂತೀಯ ಗುಣವಿತ್ತು. ಅದರಿಂದ ಅಮೆರಿಕರನ್ನು ಆಕರ್ಷಿಸಿದ್ದರು. ಈಗ ಭಾರತೀಯರನ್ನು ಆಕರ್ಷಿಸುತ್ತಿದ್ದರು.

ಅವರೊಡನೆ ವೈಯಕ್ತಿಕ ಸಂಭಾಷಣೆ:

ಚಂಡೀಗಢದ ಕಾರ್ಯಕ್ರಮನಂತರ ಶಿಷ್ಯರಲ್ಲಿ ಒಬ್ಬರು ನನ್ನನ್ನು ಶ್ರೀಲ ಪ್ರಭುವಾದರೂಡನ ವೈಯಕ್ತಿಕವಾಗಿ ನೀವು ಮಾತನಾಡಬಾರದೇಕೆ ಎಂದು ಕೇಳಿದಾಗ ನಾನು ಅದಕ್ಕೆ ಒಪ್ಪಿದೆ. ನಾನು ನನ್ನ ಧರ್ಮಪತ್ನಿ ಇಬ್ಬರೂ ಸೇರಿ ಅವರು ತಂಗಿದ್ದಲ್ಲಿಗೆ ಮರುದಿನ ಬೆಳಗ್ಗೆ ಹೋದೆವು.

ಅವರು ನಗರದ ಒಬ್ಬ ಕೈಗಾರಿಕೋದ್ಯಮಿಯ ಮನೆಯಲ್ಲಿ ತಂಗಿದ್ದರು. ಅಲ್ಲಿ ಅವರನ್ನು ಭೇಟಿಮಾಡಿದೆವು. ಆಗ ಸುದೀರ್ಘ ವಿಚಾರ ವಿನಿಮಯವೇ ಆಯಿತು. ಅವರು ತಮ್ಮ ವಿಚಾರವನ್ನು ಹೇಳುತ್ತಾ ಆಗಾಗ ಗೀತೆಯ ಶ್ಲೋಕವನ್ನು ಉದಾಹರಿಸುತ್ತಿದ್ದರು. ನನಗೆ ‘Bhagavadgita As It Is’ ಗ್ರಂಥವನ್ನು ನೀಡಿದರು. ಅದರಲ್ಲಿ ಅವರು ಸಹಿಯನ್ನು ಕೂಡ ಮಾಡಿದರು. ಅದು ನನ್ನ ಲೈಬ್ರರಿಯಲ್ಲಿ ಈಗಲೂ ಇದೆ.

ಸಂಭಾಷಣೆಯಲ್ಲಿ ನಾನು ಮೂಢ ನಂಬಿಕೆ ಸಲ್ಲದು, ನಾವು ಎಲ್ಲವನ್ನು ವೈಚಾರಿಕತೆಯಿಂದ ಗ್ರಹಿಸಬೇಕು ಎಂದು ಹೇಳಿದಾಗ, ಶ್ರೀಲ ಪ್ರಭುಪಾದರು ಅದನ್ನು ಮನಸಾ ಒಪ್ಪಿ, ಕುರುಡು ನಂಬಿಕೆ ಸಲ್ಲದು ಎಂದು ಹೇಳಿದರು. ಗೀತೆ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಮನೆ ಮಾಡಿದೆ.

ನಾನೂ ಕೂಡ ಗೀತೆಯ ಬಗ್ಗೆ ಓದಿದ್ದವನು. ಮತ್ತು ರಾಷ್ಟ್ರೀಯ ಭಾವನೆ ನನ್ನಲ್ಲಿ ಮನೆ ಮಾಡಿತ್ತು. ಶ್ರೀ ಲೋಕಮಾನ್ಯ ತಿಲಕರ ಗೀತೆಯ ಟೀಕೆಯ ಬಗ್ಗೆ ಪ್ರಭುಪಾದರನ್ನು ಪ್ರಶ್ನಿಸಿದೆ. ಆಗ ಶ್ರೀಲ ಪ್ರಭುಪಾದರು ಹೀಗೆ ಹೇಳಿದರು. “ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ.

ಆದರೆ ತಿಲಕರು ಗೀತೆಯನ್ನು ರಾಷ್ಟ್ರೀಯತೆಯ ಹಾಗೂ ಆಗಿನ ರಾಜಕೀಯ ದೃಷ್ಟಿಕೋನದಿಂದ ಕಂಡಿದ್ದಾರೆ. ನಾನು ಮಾಡಿರುವ ಪ್ರಯತ್ನ ಗೀತೆಯನ್ನು ಯಥಾರೂಪವಾಗಿ ನೀಡುವುದು. ನನ್ನ ಗುರುಗಳ ಕರುಣೆಯಿಂದ ಕೃಷ್ಣನು ಏನು ಹೇಳಬೇಕೆನ್ನುತ್ತಾನೋ ಅದನ್ನೇ ಹೇಳಿದ್ದೇನೆ. ಆದ್ದರಿಂದ ಇದು ಸರ್ವಕಾಲಿಕ.”

ಇದರಿಂದ ನಾನು ಪ್ರಭಾವಿತನಾದೆ. ಅವರಿಗೆ ಗೀತೆಯ ಬಗ್ಗೆ ಉನ್ನತ ದೃಷ್ಟಿಕೋನವಿದ್ದುದು ನಮಗೆ ಅರಿವಾಯಿತು. ದುರಿತಗಳಲ್ಲಿ ಸಿಲುಕಿರುವ ಮಾನವನನ್ನು ಉದ್ಧರಿಸುವುದು ಇವರ ಉದ್ದೇಶ ಎಂಬುದು ಸ್ಪಷ್ಟವಾಯಿತು. ನನ್ನ ಶ್ರೀಮತಿಯಂತೂ ಯಾರನ್ನೂ ಸಂಶಯಿಸದೆ ಒಪ್ಪದವಳು, ಪ್ರಭುಪಾದರ ಪ್ರಾಮಾಣಿಕತೆಯಿಂದ ಅವಳೂ ಪ್ರಭಾವಿತಳಾಗಿದ್ದಳು.

ಅವರ ಗೀತೆಯ ಟೀಕೆಯ ಬಗ್ಗೆ ಹೇಳುವುದಾದರೆ ಅವರು ನೀಡಿರುವ ವ್ಯಾಖ್ಯೆ ಹಾಗು ಅನುವಾದ ಸ್ಪಷ್ಟವಾಗಿದ್ದು ಯಾರನ್ನು ಬೇಕಾದರು ಒಪ್ಪುವಂತೆ ಮಾಡುತ್ತದೆ. ಮಹಾನ್ ವ್ಯಕ್ತಿಗಳು ಅದರ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ. ಆದರೆ ಪ್ರಭುಪಾದರದ್ದು ಆಧ್ಯಾತ್ಮಿಕದಿಂದ ಕೂಡಿತ್ತು. ಅವರು ಕೃಷ್ಣ ಹೇಳಿದ್ದನ್ನು ಹೇಳಿದ್ದಾರೆ ಮತ್ತು ಅನೇಕರನ್ನು ಒಪ್ಪಿಸಿದ್ದಾರೆ. ಮುಂದೆ ಒಪ್ಪಿಸುತ್ತಾರೆ ಕೂಡ.

ಹರೇಕೃಷ್ಣ ಆಂದೋಲನದ ಸಂಪರ್ಕದ ಬಗ್ಗೆ:

ವೈಯಕ್ತಿಕ ಸಂಭಾಷಣೆಯನಂತರ ಅವರನ್ನು ಸ್ವತಃ ಭೇಟಿಮಾಡಲಾಗದಿದ್ದರೂ ಅವರು ಭಾರತಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದಾರೆಂದು ಅರಿತಿದ್ದೆ. ಅವರ ಶಿಷ್ಯರು ನನ್ನನ್ನು ಆಗಾಗ್ಗೆ ಭೇಟಿ ಮಾಡುತ್ತಿದರು. ನಾನು ಜೈಪುರದಲ್ಲಿದ್ದಾಗಲೂ ಕೆಲವರು ಭೇಟಿ ಮಾಡಿ ನನಗೆ ಗ್ರಂಥಗಳನ್ನು ನೀಡುತ್ತಿದ್ದರು.

ಕೃಷ್ಣ ದೇವೋತ್ತಮ ಗ್ರಂಥವನ್ನು ಅವರು ನನಗೆ ಆಗಲೇ ನೀಡಿದರು. ಚಂಡೀಘಡದಲ್ಲಿ ಮುಖ್ಯ ಆಯುಕ್ತನಾಗಿರುವಾಗಲೇ ದೇವಾಲಯಕ್ಕೆ ನಿವೇಶನವನ್ನು ಕೇಳುವ ಅರ್ಜಿ ನೀಡಿದ್ದರು. ನನ್ನ ಸಮಯದಲ್ಲಿ ಆ ಕೆಲಸ ಪೂರ್ಣವಾಗಲಿಲ್ಲ. ಅದು ನಂತರ ನಾನು ಶಿಕ್ಷಣ ಇಲಾಖೆಯಲ್ಲಿದ್ದಾಗ ಕೆಲವು ಶಿಷ್ಯರು ಬಂದು ನಿವೇಶನವನ್ನು ದಿಲ್ಲಿಯಲ್ಲಿ ಪಡೆಯಲು ಸಹಾಯಮಾಡಬೇಕೆಂದು ಹೇಳಿದರು.

ಆಗ ನನ್ನ ಹಿರಿಯ ಹಾಗೂ ಕಿರಿಯ ಸಹವರ್ತಿಗಳಿಗೆ ಹೇಳಿ ನಿವೇಶನವನ್ನು ಪಡೆಯುವಲ್ಲಿ ನಾನು ಸಹಾಯ ಮಾಡಿದೆ. ಸುದೀರ್ಘ ಪ್ರಯತ್ನದನಂತರ ನಾನು ಗೃಹ ಕಾರ್ಯದರ್ಶಿ ಕಛೇರಿಯಲ್ಲಿದ್ದಾಗ ನಿವೇಶನ ಇಸ್ಕಾನ್‌ ಗೆ ದಕ್ಕಿತು. ಅನಂತರ ಶ್ರೀ ಅಟಲ್‌ ಜೀಯವರು ಪ್ರಧಾನಿಯಾಗಿದ್ದಾಗ ಆ ದೇವಾಲಯ ಮತ್ತು ಸಾಂಸ್ಕೃತಿಕ ಕೇಂದ್ರ ಉದ್ಘಾಟನೆಯಾಯಿತು. ಉದ್ಘಾಟನಾ ಸಮಾರಂಭಕ್ಕೆ ನನಗೆ ಆರೋಗ್ಯ ಕೆಟ್ಟಿದ್ದರಿಂದ ಹೋಗಲಾಗಲಿಲ್ಲ.

ನಾನು ಇಸ್ಕಾನ್‌ನ ಮುಂಬೈ, ಭುವನೇಶ್ವರ್, ಮಥುರಾ ದೇವಾಲಯಗಳನ್ನು ಭೇಟಿ ಮಾಡಿದ್ದೇನೆ. ಬೆಂಗಳೂರಿನ ದೇವಾಲಯವನ್ನು ನೋಡಿದ್ದೇನೆ. ಭಕ್ತರು ಆಗಾಗ ನನ್ನನ್ನು ಭೇಟಿ ಮಾಡುತ್ತಿದ್ದಾಗಲೆಲ್ಲ ಪ್ರಸಾದ ನೀಡುತ್ತಾರೆ. ವಾಷಿಂಗ್‌ಟನ್‌ ನಲ್ಲಿ ಇದ್ದಾಗಲೂ ಕೂಡ ನಾನು ಭಕ್ತರನ್ನು ಸಂಕೀರ್ತನೆ ಮಾಡುವಾಗ ಭೇಟಿಮಾಡಿದ್ದೇನೆ. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi