ಉನ್ನತ ಶಕ್ತಿಯಲ್ಲಿ ಭರವಸೆ

ಕೃಷ್ಣನಿಂದ ಅಗಲಿಕೆಯೇ ನಮ್ಮ ಎಲ್ಲ ಭಯ ಮತ್ತು ಆತಂಕದ ಮೂಲ ಕಾರಣ. ಅವನ ಶರಣು ಹೋಗುವುದೇ ಇದಕ್ಕೆ ಮದ್ದು.

ಆಂಗ್ಲಮೂಲ : ಬ್ಯಾಕ್‌ ಟು ಗಾಡ್‌ಹೆಡ್‌, ಅರ್ಚನಾ ಸಿದ್ಧಿ ದೇವಿ ದಾಸಿ

ಬಾಲ್ಯದಲ್ಲೊಮ್ಮೆ ಪ್ರಚಂಡವಾಗಿ ಕಂಡುಬರುತ್ತಿದ್ದ ಜಾರುಬಂಡೆಯೊಂದರ ಮೆಟ್ಟಿಲುಗಳನ್ನು ಏರುತ್ತಿದ್ದುದು ನನಗೆ ನೆನಪು. ನನಗೋ ಪ್ರತಿ ಹೆಜ್ಜೆಗೂ ಕಾಲು ನಡುಕ, ಜೋರ್‌ ಎದೆ ಬಡೆತ. ಕೊನೆಗೂ ಕೊನೆಯ ಮೆಟ್ಟಿಲೇರಿ ಕೆಳಗೆ ನೋಡಿದಾಗ ಭಯದಿಂದ ತಲೆಸುತ್ತು! ರೋಮಾಂಚನವಾಗಿ ಪ್ರಾರಂಭವಾಗಿದ್ದು ದಿಗಿಲಾಗಿ ಪರಿಣಮಿಸಿತ್ತು. ಜಾರುಬಂಡೆಯ ಕೆಳಗಡೆ ನಿಂತಿದ್ದ ನನ್ನಪ್ಪ ಕೆಳಕ್ಕೆ ಜಾರಿ ಬರಲು ಹೇಳುತ್ತಿದ್ದರೂ ಅಂಜಿಕೆಯಿಂದ ಸೆಡೆದು ನಾನಲ್ಲೇ ನಿಂತುಬಿಟ್ಟೆ. ಮೆಟ್ಟಿಲಿಳಿದು ಹೋಗುವ ಯೋಚನೆ ಮೂಡಿತು, ಆದರೆ ಇತರ ಮಕ್ಕಳು ಅಲ್ಲಿ ಸಾಲಾಗಿ ನಿಂತುಬಿಟ್ಟಿದ್ದರು. ನನ್ನನು ಅಲ್ಲಿಂದ ಕದಲಿಸುವ ಆಶಯದಿಂದ ಕೆಣಕು ನುಡಿ ಆಡಿದರು. ಸಂದಿಗ್ಧ ಪರಿಸ್ಥತಿಯಲ್ಲಿ ಸಿಕ್ಕಿಬಿದ್ದು ಅಳಲಾರಂಭಿಸಿದೆ. ನನ್ನ ಅವಸ್ಥೆ ಕಂಡ ಅಪ್ಪ ಜಾರುಬಂಡೆ ಏರಿ ನನ್ನನ್ನು ಪಾರು ಮಾಡಿದರು. ನಿಟ್ಟುಸಿರು ಬಿಟ್ಟರೂ ನಾಚಿಕೆಯಾಯಿತು. ತಿರುಗಿ ಜಾರುಬಂಡೆಯ ಮೇಲೊಮ್ಮೆ ಕಣ್‌ ಹಾಯಿಸಿದರೆ ದೊಡ್ಡ ಬೆಟ್ಟದಂತೆ ಕಂಡುಬರುತ್ತಿತ್ತು ಅದು. ಭಯದ ಅಗಾಧ ಶಕ್ತಿಯಿಂದ ಆವೃತವಾದ ನೆನಪುಗಳಲ್ಲಿ ಇದು ಮೊದಲು.

ಈಗ ನಲವತ್ತು ವರ್ಷಗಳ ಅನಂತರ ಭಯ ಮತ್ತು ಆತಂಕದಿಂದ ಬಳಲುತ್ತಿರುವ ಜನರ ಜೊತೆ ಆಗಾಗ್ಗೆ ವ್ಯವಹರಿಸುತ್ತಿರುತ್ತೇನೆ. ಕೆಲವೊಮ್ಮೆ ಭಯವು ಲಿಫ್ಟ್‌, ಹಾವು, ಶವ ಅಥವಾ ಉಡ್ಡಯನದಂತಹ ಒಂದೇ ವಸ್ತು ಅಥವಾ ಘಟನೆಯಿಂದ ಆವೃತವಾಗಿರುತ್ತದೆ. ಆದರೆ ಬಹಳ ಬಾರಿ ಆತಂಕದ ಭಾವನೆಗಳು ಜೀವನದಲ್ಲೆಲ್ಲ ಹರಡಿ ಅತಿ ಸರಳ ಕೆಲಸವನ್ನೂ ಕ್ಲಿಷ್ಟಕರವನ್ನಾಗಿಸುತ್ತವೆ. ತಪ್ಪು ನಿರ್ಧಾರ ಮಾಡುವುದರ, ಏನಾದರೂ ಅಸಮಂಜಸ ಮಾತನಾಡುವುದರ, ಖಂಡನೆಗೆ ಒಳಗಾಗುವುದರ ಭಯದಿಂದ ಅವರು ತಮ್ಮ ಸುತ್ತಲೂ ಆತಂಕದ ದಾರದಿಂದ ಗೂಡು ಹೆಣೆದುಕೊಂಡು ಸುಖ-ಶಾಂತಿಯಿಂದ ಬದುಕುವ ಕ್ಷಮತೆಯನ್ನು ನಿರೋಧಿಸಿಕೊಳ್ಳುತ್ತಾರೆ.

ಅನೇಕ ಸ್ವ-ಸಹಾಯ ಪುಸ್ತಕಗಳು ಈ ಹಾನಿಕರ ಸಮಸ್ಯೆಯನ್ನು ಅನುಲಕ್ಷಿಸುತ್ತವೆ. ಅಂತಹ ಪುಸ್ತಕಗಳಲ್ಲಿ ಅಗ್ರಗಣ್ಯವಾದುದು ಮನಶ್ಶಾಸ್ತ್ರಜ್ಞ ಡಾ. ಎಡ್ಮಂಡ್‌ ಬೊರ್ನ್‌ ಬರೆದ “ದಿ ಆ್ಯಂಗ್ಸೈಟಿ ಆಂಡ್‌ ಫೋಬಿಯಾ ವರ್ಕ್‌ಬುಕ್‌.” ಓದುಗರಿಗೆ ವಿವಿಧ ಮಟ್ಟದ ಪರಿಹಾರ ದೊರಕಿತು ಮತ್ತು ಡಾ. ಬೋರ್ನ್‌ ಈ ವಿಷಯದ ಬಗೆಗಿನ ಜ್ಞಾತ ಪ್ರಾಮಾಣ್ಯರಾದರು. ಆದರೆ, ಇವರ ಜನಪ್ರಿಯ ಪುಸ್ತಕ ಬಿಡುಗಡೆಯಾದ ಕೆಲ ಸಮಯದ ಅನಂತರ ಸ್ವತಃ ಡಾ. ಬೋರ್ನ್‌ ಆತಂಕಕ್ಕೆ ಒಳಗಾದರು. ತಮ್ಮ ಪುಸ್ತಕದಲ್ಲಿ ಬರೆದ ಯಾವೊಂದು ವಿಚಾರವೂ ಅವರಿಗೆ ಉಪಯೋಗವಾಗಲಿಲ್ಲ. ಭೌತಿಕವಾದ ಯಾವುದರಿಂದಲೂ ಪರಿಹಾರ ದೊರಕದೆ, ಅವರು ಅಧ್ಯಾತ್ಮದ ಮೊರೆಹೋದರು. ಅವರ ಇತ್ತೀಚಿನ ಪುಸ್ತಕ “ಫ್ರೀಡಂ ಫ್ರಂ ಫಿಯರ್‌” ನಲ್ಲಿ ತಾವು ಗುಣಮುಖವಾಗುತ್ತಿರುವ ಬಗ್ಗೆ ಬರೆಯುತ್ತಾರೆ. ಸಾರಾಂಶದಲ್ಲಿ ಹೇಳುವುದಾದರೆ ಉನ್ನತ ಶಕ್ತಿಯೊಂದರಲ್ಲಿ ಭರವಸೆಯಿಡದಿರುವುದೇ ಆತಂಕದ ಮೂಲಕಾರಣವೆಂದು ಅವರು ಒಪ್ಪಿಕೊಳ್ಳುತ್ತಾರೆ.

ಅವರ ಈ ಗ್ರಹಿಕೆಯನ್ನು ವಿಶ್ವದ ಎಲ್ಲ ಪ್ರಮುಖ ಧರ್ಮಗ್ರಂಥಗಳು ದೃಢಪಡಿಸುತ್ತವೆ. ವೈದಿಕ ಗ್ರಂಥಗಳಲ್ಲಿ ಶಾಶ್ವತ ಆಧ್ಯಾತ್ಮಿಕ ಧಾಮವನ್ನು ವೈಕುಂಠ – “ಆತಂಕ/ಕುಂಠ ರಹಿತ” ಎಂದು ಕರೆಯಲಾಗಿದೆ. ಅಲ್ಲಿನ ಎಲ್ಲ ನಿವಾಸಿಗಳು ಪ್ರಭುವಿನ ಸುಖಕ್ಕಾಗಿ ಕಾರ್ಯೋನ್ಮುಖರಾಗಿರುತ್ತಾರೆ. ಪ್ರಭುವಿನಲ್ಲಿ ಅವರಿಗಿರುವ ಗಾಢ ಪ್ರೇಮವು ಅವರೆಲ್ಲ ಕಾರ್ಯಗಳನ್ನು ಪ್ರೇರೇಪಿಸುತ್ತದೆ. ಅವನ ಆಸಕ್ತಿ ಹೊರತುಪಡಿಸಿ ಇನ್ನಾವ ಆಸಕ್ತಿಯೂ ಇಲ್ಲದವರಾಗಿ, ಎಲ್ಲ ಚಿಂತೆಯಿಂದ ಮುಕ್ತಿಯನ್ನು ಅನುಭವಿಸುತ್ತಾರೆ.

ಭೌತಿಕ ಪ್ರಪಂಚದಲ್ಲಿ ಬಹುತೇಕರು ನಮ್ಮ ಇಂದ್ರಿಯಗಳನ್ನು ತೃಪ್ತಪಡಿಸುವುದರಲ್ಲಿಯೇ ಮಗ್ನರಾಗಿದ್ದೇವೆ. ನಮ್ಮ ಸೃಷ್ಟಿಕರ್ತನಿಂದ ಸ್ವತಂತ್ರರಾಗಿ ವರ್ತಿಸುತ್ತೇವೆ ಮತ್ತು ಅವನಿಂದ ಭಿನ್ನರಾಗಿ ಸುಖಿಸಲು ಪ್ರಯತ್ನಿಸುತ್ತೇವೆ. ಈ ಅಗಲಿಕೆಯೇ ನಮ್ಮ ಆತಂಕದ ಮೂಲಕಾರಣ. ಇತ್ತೀಚೆಗೆ ಪುಟ್ಟ ಮಗುವೊಂದು ತನ್ನ ತಾಯಿಯಿಂದ ಸ್ವಾತಂತ್ರ್ಯದ ಹಕ್ಕು ಸಾಧಿಸಲು ಅವಳಿಂದ ಓಡಿಹೋಗುವ ಪ್ರಯತ್ನವನ್ನು ನಾನು ಕಂಡೆ. ತನ್ನ ಹೊಸ ಸ್ವಾತಂತ್ರ್ಯವನ್ನು ಸವಿಯುತ್ತಾ ಅದು ನಗುತ್ತಿತ್ತು. ಆದರೆ ತಾಯಿಯು ಅದರಿಂದ ಅವಿತುಕೊಂಡ ತತ್‌ಕ್ಷಣ ಮಗುವು ಆತಂಕದಿಂದ ಅಳಲಾರಂಭಿಸಿತು. ಅದರ ದುಃಖವನ್ನು ನೋಡಿದ ತಾಯಿ ಮುಂದೆ ಬಂದು ಸಮಾಧಾನಪಡಿಸಿದಳು.

ಅನೇಕ ರೀತಿಯಲ್ಲಿ ನಾವೂ ಆ ಚಿಕ್ಕ ಮಗುವಿನಂತೆಯೇ. ಭಗವಂತನಿಂದ ಸ್ವತಂತ್ರರಾಗಲು ನಾವು ಪ್ರಯತ್ನಿಸಿದ್ದೇವೆ ಮತ್ತು ಆ ಪ್ರಕ್ರಿಯೆಯಲ್ಲಿ ಸುಖ – ಸಮಾಧಾನದ ಆಗರದಿಂದಲೇ ಬೇರ್ಪಟ್ಟಿದ್ದೇವೆ. ಆದರೆ ವ್ಯತ್ಯಾಸ ಇಷ್ಟೇ – ಮಗುವಿಗೆ ತಾನು ಅಮ್ಮನನ್ನು ಹುಡುಕುತ್ತಿರುವುದು ಗೊತ್ತು; ನಮಗೋ – ಏನನ್ನು ಕಳೆದುಕೊಂಡಿದ್ದೇವೆ ಎಂಬುವುದೂ, ಏನನ್ನು ಹುಡುಕಬೇಕೆಂಬುವುದೂ ತಿಳಿಯದು. ನಮ್ಮ ದುಃಖದಲ್ಲಿ ಇತರೆ ಪರಿಹಾರಗಳಿಗಾಗಿ ಹುಡುಕುತ್ತೇವೆ. ಆದರೆ ಬಹುಮಟ್ಟಿಗೆ ಆ ಪರಿಹಾರಗಳು ಹಾನಿಕಾರಕ ಮತ್ತು ನಮ್ಮ ನಿಜ ಹಿತಾರ್ಥದ ವಿರುದ್ಧವಾಗಿರುತ್ತವೆ. ಎಲ್ಲ ಭೌತಿಕ ಉಪಾಯಗಳ ವ್ಯರ್ಥತೆಯನ್ನರಿತಾಗ ಪ್ರಭುವಿನ ಆಶ್ರಯಕ್ಕಾಗಿ ಅವನತ್ತ ತಿರುಗಬಹುದು. ಪ್ರತ್ಯೇಕತಾವಾದದ ನಮ್ಮ ಮನಸ್ಥಿತಿಯನ್ನು ತಿದ್ದಲು ಕೃಷ್ಣನು ಬಲು ನೈಪುಣ್ಯದಿಂದ ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಸೃಷ್ಟಿಕರ್ತನ ಉದ್ದೇಶಾನುಸಾರ ನಾವು ಬದುಕಲು ನಿರ್ಧರಿಸಿದರೆ ನಮ್ಮ ಆಧ್ಯಾತಿಕ ಬೆಳವಣಿಗೆಗೆ ಪರಿಸರವು ಅನುಕೂಲಕರವಾಗಿರುವುದನ್ನು ಕಾಣುತ್ತೇವೆ. ಒಳಿತೋ, ಕೆಡಕೋ – ಎಲ್ಲವೂ ದೈವೇಚ್ಛೆಯೆಂದು ಅರ್ಥಮಾಡಿಕೊಂಡು ಆತ್ಮಸಾಕ್ಷಾತ್ಕಾರದ ನಮ್ಮ ಪಥದಲ್ಲಿ ಅವನ್ನು ಉಪಯೋಗಿಸಲು ಕಲಿಯುತ್ತೇವೆ.

ನಾವು ಅನುಭವಿಸುವ ಬಹುತೇಕ ಆತಂಕವು ಅನಗತ್ಯವಾಗಿದ್ದು ನಮ್ಮ ಭಾವಾತ್ಮಕ ಸ್ವಾಸ್ಥ್ಯಕ್ಕೂ, ಆಧ್ಯಾತ್ಮಿಕ ಬೆಳವಣಿಗೆಗೂ ತಡೆಯೊಡ್ಡುತ್ತದೆ. ಆದರೆ ಆತಂಕ ಮತ್ತು ಭಯವು ಈ ಭೌತಿಕ ಜಗತ್ತಿನಲ್ಲಿ ಬಾಳಲು ನಮಗೆ ನೆರವು ನೀಡಬಹುದು. ಕಾಲೇಜ್‌ನಲ್ಲಿ ನಪಾಸಾಗುವ ಆತಂಕ ಇರದೇ ಇದ್ದರೆ ನಾನು ತರಗತಿಗೆ ಹೋಗಿ ಪದವಿಯನ್ನು ಪಡೆಯದೇ ಇರುತ್ತಿದ್ದೆನೇನೋ. ಅಪಾಯಕಾರಿ ಸನ್ನಿವೇಶಗಳ ಭಯವು ಅಕಾಲಮೃತ್ಯುವಿನಿಂದ ರಕ್ಷಿಸಿಕೊಳ್ಳಲು ನನಗೆ ಸಹಾಯ ಮಾಡಿದೆ. ಬಹು ಮುಖ್ಯವಾಗಿ, ಬದುಕಿನ ಅರ್ಥ ಮತ್ತು ಉದ್ದೇಶವನ್ನು ಹುಡುಕುವ ಆತಂಕ, ಮತ್ತು ಸಾವಿನ, ಮರಣೋತ್ತರ ಜೀವನದ ಭಯವು ನನ್ನನ್ನು ಭಕ್ತರ ಸಹವಾಸದಲ್ಲಿ ತಂದುಬಿಟ್ಟಿದೆ.

ಇಪ್ಪತ್ತೇಳು ವರ್ಷಕ್ಕೂ ಹೆಚ್ಚು ಸಮಯ ಕೃಷ್ಣ ಪ್ರಜ್ಞೆಯನ್ನು ಆಚರಿಸಿದ ಅನಂತರ ಭೌತಿಕ ಆತಂಕ, ಭಯಗಳಿಂದ ನಾನು ಮುಕ್ತಳೇ? ಇಲ್ಲ, ನಾನು ಸಾಕಷ್ಟು ಮುನ್ನಡೆ ಸಾಧಿಸಿದ್ದರೂ, ಭಗವಂತನ ಮೇಲಿನ ನನ್ನ ಅವಲಂಬನೆಯನ್ನು ಪರೀಕ್ಷಿಸುವ ಸನ್ನಿವೇಶಗಳು ಎದರಾಗುತ್ತಲೇ ಇರುತ್ತವೆ. ಇತ್ತೀಚೆಗೆ ಬಾಲ್ಟಿಮೋರ್‌ನಲ್ಲಿದ್ದ ನಮ್ಮ ಮನೆಯನ್ನು ಮಾರಿ ಪ್ರಭುಪಾದ ಗ್ರಾಮ, ಉತ್ತರ ಕೆರೊಲೈನದಲ್ಲಿ ಮನೆ ಕಟ್ಟಲು ನಿರ್ಧರಿಸಿದೆವು. ಹಳೆ ಮನೆಯಿಂದ ಹೊಸ ಮನೆಗೆ ಸರಾಗವಾದ ಸ್ಥಳಾಂತರವನ್ನು ನಾವು ಆಯೋಜಿಸಿದ್ದೆವು. ನಮ್ಮ ಮನೆಯು ತತ್‌ಕ್ಷಣ ಮಾರಾಟವಾದರೂ, ಕೊಳ್ಳುಗರು, ನಮ್ಮ ನೂತನ ಮನೆ ನಿರ್ಮಾಣವಾಗುವವರೆಗೂ ಹಳೆ ಮನೆಯಲ್ಲಿಯೇ ಎರಡು ತಿಂಗಳ ಕಾಲ ಬಾಡಿಗೆಯಲ್ಲಿ ಇರಲು ನಮಗೆ ಅವಕಾಶ ಮಾಡಿಕೊಟ್ಟರು. ಆದರೆ ನಮ್ಮ ಹೊಸ ಮನೆ ಕೆಲಸ ನಿಧಾನವಾಗಿ ಸಾಗಿತು ಮತ್ತು ಶೀಘ್ರದಲ್ಲೇ ನಾವು ನಿರಾಶ್ರಿತರಾಗುವ ಮತ್ತು ಬಂಧು-ಮಿತ್ರರ ಔದಾರ್ಯವನ್ನು ಅವಲಂಬಿಸಬೇಕಾಗುವ ಅರಿವು ನಮಗೆ ಮೂಡಿತು. ಆತಂಕ ತೀವ್ರವಾಗಿ ರಾತ್ರಿ ನಿದ್ದೆ ಬಾರದಾಯಿತು. ಕೃಷ್ಣನು ನಮಗಾಗಿ ರೂಪಿಸಿರುವ ಯೋಜನೆಯಲ್ಲಿ ಭರವಸೆ ಇಡದಿರುವುದೇ ಇದಕ್ಕೆ ಕಾರಣವೆಂದು ಪತ್ತೆ ಹಚ್ಚುವುದು ಕಷ್ಟವಾಗಿರಲಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣನು ಎಲ್ಲ ಕಾರ್ಯಗಳಲ್ಲಿಯೂ ತನ್ನ ಮೇಲೆ ಅವಲಂಬಿತರಾಗಬೇಕೆಂದು ಹೇಳುತ್ತಾನೆ, ಮತ್ತು ಅದನ್ನು ಪಾಲಿಸುವುದರಲ್ಲಿ ನಾನು ಸ್ಪಷ್ಟವಾಗಿ ಅಲಕ್ಷ್ಯ ತೋರಿದ್ದೆ. ಪರಿಣಾಮವಾಗಿ ಅನಾರೋಗ್ಯಕರ ಆತಂಕದಿಂದ ಬಳಲುತ್ತಿದ್ದೆ.

ಹರೇ ಕೃಷ್ಣ ಮಂತ್ರ ಜಪದ ಅಂತಿಮ ಗುರಿಯು ನಮ್ಮನ್ನು ಭೌತಿಕವಾಗಿ ಗುರುತಿಸಲ್ಪಡುವುದರಿಂದ ಮುಕ್ತರನ್ನಾಗಿಸಿ, ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಅನಾವರಣಗೊಳಿಸಿ, ಕೃಷ್ಣ ಪ್ರೇಮವನ್ನು ಜಾಗೃತಗೊಳಿಸುವುದೇ ಆಗಿದ್ದರೂ, ನಮ್ಮ ಪ್ರಗತಿಯನ್ನು ನಿರೋಧಿಸುವ ತುರ್ತು ಸಮಸ್ಯೆಗಳನ್ನು ನಾವು ಬಗೆಹರಿಸಬೇಕು. ಒಳ್ಳೆಯ ಜಪವು ನಾನು ಕೃಷ್ಣನಲ್ಲಿ ದೃಢನಂಬಿಕೆ ಇರಿಸಿ ಅವನ ಮೇಲೆ ಅವಲಂಬಿತಳಾಗಲು ಸದಾ ಸಹಾಯ ಮಾಡಿದೆ – ಇದುವೇ ಅವನಲ್ಲಿ ಪ್ರೇಮ ಬೆಳೆಸಿಕೊಳ್ಳವುದಕ್ಕೆ ಪೂರ್ವಾಪೇಕ್ಷಿತ.

ಮಹಾಭಾರತದಲ್ಲಿ ನಾವು ದ್ರೌಪದಿಯ ಕಥೆ ಓದುತ್ತೇವೆ. ಅವಳ ಅಕಳಂಕ ಕೀರ್ತಿಗೆ ಧಕ್ಕೆ ತರಲು ಮತ್ತು ಅವಳನ್ನು ಅವಮಾನಿತಗೊಳಿಸಲು ದುಷ್ಟ ಕೌರವರು ತುಂಬಿದ ಸಭೆಯಲ್ಲಿ ಅವಳನ್ನು ನಗ್ನಗೊಳಿಸಲೆತ್ನಿಸಿದರು. ಆ ಸಮಯದ ರಾಜಕೀಯ ಪರಿಸ್ಥಿತಿಯಿಂದ ಯಾರಿಗೂ ಆ ದುಷ್ಕೃತ್ಯ ತಡೆಯಲಾಗಲಿಲ್ಲ. ದುಷ್ಟ ದುಶ್ಶಾಸನನು ಆಕೆಯ ಸೀರೆಯನ್ನು ಎಳೆಯಲಾರಂಭಿಸಿದಾಗ ಭಯಗ್ರಸ್ತ ದ್ರೌಪದಿ ಒಂದು ಕೈಯಿಂದ ಸೀರೆಯನ್ನು ಹಿಡಿದುಕೊಂಡು, ಇನ್ನೊಂದರಿಂದ ಕೃಷ್ಣನನ್ನು ಪ್ರಾರ್ಥಿಸಿದಳು. ಪ್ರಭುವನ್ನು ಬಿಟ್ಟು ಬೇರಾವ ಆಶ್ರಯವಿಲ್ಲವೆಂದು ಮನದಟ್ಟಾದಾಗ ಎರಡೂ ಕೈಗಳನ್ನೆತ್ತಿ ಕೃಷ್ಣನಿಗೆ ಶರಣಾದಳು. ಆ ಕ್ಷಣ ಪ್ರಭುವು ಅಪಾರ ವಸ್ತ್ರ ನೀಡಿ ಸಂರಕ್ಷಿಸಿದ.

ಮನೆಯನ್ನು ಕುರಿತ ಚಿಂತೆಯು ನಾನು ಆಧ್ಯಾತ್ಮಿಕ ಚಟುವಟಿಕೆ ಮತ್ತು ಧರ್ಮ ಗ್ರಂಥಗಳ ಮೊರೆಹೊಕ್ಕಾಗ ಶಮನವಾಯಿತು. ನಾನು ಮತ್ತು ನನ್ನ ಪತಿ ಸೇರಿ ನಮಗಿರುವ ಆಯ್ಕೆಗಳ ಪಟ್ಟಿ ಮಾಡಿದೆವು, ಮತ್ತು ಸಂದರ್ಭದ ಪ್ರಯೋಜನವನ್ನು ನೋಡಲು ನಾನು ಪ್ರಯತ್ನಿಸಿದೆ. ಬಂಧು-ಮಿತ್ರರೊಡನೆ ಅನ್ಯೋನ್ಯವಾಗಿ ಸಮಯ ಕಳೆಯುವುದೇ ಅತ್ಯಾಕರ್ಷಕ ಪ್ರಯೋಜನವಾಗಿತ್ತು. ಎಲ್ಲ ಸಂದರ್ಭಗಳಲ್ಲಿಯೂ ಕೃಷ್ಣನ ಮೇಲೆ ನಂಬಿಕೆಯಿಟ್ಟಿರುವುದೇ ನಾನು ಕಲಿತ ಪಾಠವಾಗಿತ್ತು.

ಚಿಂತೆಗೀಡು ಮಾಡುವ ಹಾಗೂ ಭಯಾನಕ ಸನ್ನಿವೇಶಗಳ ಪಟ್ಟಿಯನ್ನಿಡುವುದು ನನಗೆ ಸಹಾಯ ಮಾಡಿದೆ. ಹಿನ್ನೋಟದಲ್ಲಿ, ಕೃಷ್ಣನು ಅನುಕೂಲಕರ ಅಂತ್ಯವನ್ನು ಹೇಗೆ ಏರ್ಪಡಿಸುತ್ತಾನೆಂದು ನನಗೆ ನೋಡಲು ಸಾಧ್ಯವಾಗಿದೆ. ಈ ಘಟನೆಗಳು ಕೃಷ್ಣನು ನನ್ನನ್ನು ಪ್ರೀತಿಸುತ್ತಾನೆಂಬ ನಂಬಿಕೆಯನ್ನು ವೃದ್ಧಿಸುತ್ತವೆ. ಹೀಗೆ ದೈನಂದಿನ ಆತಂಕಗಳನ್ನು ಕುರಿತು ಕೃಷ್ಣಪ್ರಜ್ಞಾ ರೀತಿಯಲ್ಲಿ ವ್ಯವಹರಿಸಿದರೆ ಅದು ಅಂತಿಮ ಭಯಾನಕ ಸನ್ನಿವೇಶವಾದ ಮುಪ್ಪು-ಸಾವುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi