ಹೋರಾಟದ ಸ್ವಭಾವ

ಸ್ಥಳ: ಭಾರತ, ದಿನಾಂಕ: 13-12-1970

ಶೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಇಂದೋರಿನ ಮಿಲಿಟರಿ ಅಧಿಕಾರಿಯೊಬ್ಬರ ನಡುವೆ ನಡೆದ ಸಂವಾದ

– ಅನುವಾದ: ಚೇತನಾ ತೀರ್ಥಹಳ್ಳಿ

ಅತಿಥಿ: ನಾನು ತಮ್ಮಿಂದ ಏನು ಕೇಳಿಸಿಕೊಂಡನೋ, ಅದರ ಅನಂತರವೂ ಕೂಡ ನನಗೆ ಭಗವಂತನನ್ನು ಕುರಿತು ನಿಮ್ಮ ವಿಚಾರವೇನು ಎಂಬುದು ಅರ್ಥವಾಗಲಿಲ್ಲ.

ಶ್ರೀಲ ಪ್ರಭುಪಾದ: ಭಗವಂತನನ್ನು ಕುರಿತು ನಮ್ಮ ವಿಚಾರ, ಭಗವಂತನೊಬ್ಬ ಪಾರಮಾರ್ಥಿಕ ವ್ಯಕ್ತಿ. ‘ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಹಃ’ ‘ಈಶ್ವರ’ ಎಂದರೆ ಒಡೆಯ. ಪರಮ ಪುರುಷನು ಒಬ್ಬ ವ್ಯಕ್ತಿಯಾಗಿರುವನು. ಹೇಗೆ ನೀವು ಒಬ್ಬ ವ್ಯಕ್ತಿಯೋ ಹಾಗೆ ಅವನೂ ಒಬ್ಬ ವ್ಯಕ್ತಿ.

ಆದರೆ ಅವನು ಎಲ್ಲರಿಗಿಂತ ಉನ್ನತ ವ್ಯಕ್ತಿ. “ನಿತ್ಯೋ ನಿತ್ಯಾನಾಮ್..’ ಅವನು ನೇತಾರ. ನಾವೆಲ್ಲರೂ ಅವನ ಅನುಚರರು. ಭಗವಂತನು ಒಡೆಯ. ನಾವೆಲ್ಲರೂ ಅವನ ಸೇವಕರು. “ನಾನು ಭಗವಂತನ ನಿತ್ಯ ಸೇವಕ’ ಎಂದು ಅರ್ಥಮಾಡಿಕೊಳ್ಳುವುದೇ ಆತ್ಮ ಸಾಕ್ಷಾತ್ಕಾರ.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿರುವನು: ಮಮೈವಾಂಶೋ ಜೀವಲೋಕೇ ಜೀವಭೂತಾಃ ಸನಾತನಾಃ ‘ಎಲ್ಲ ಜೀವರಾಶಿಗಳೂ ನನ್ನ ನಿತ್ಯವಾದ ಅಂಶಗಳು’. ಯಾವುದೇ ವಸ್ತುವಿನ ಅಂಶಗಳೆಂದ ಮೇಲೆ ಪೂರ್ಣವಾದುದರ ಸೇವೆ ಮಾಡಬೇಕೆಂಬುದೇ ಪರಮಾರ್ಥ. ಜೀವರಾಶಿಗಳ ಏಕೈಕ ಕಾರ್ಯವೆಂದರೆ, ಪರಮಪ್ರಭುವಿನ ಸೇವೆ ಮಾಡುವುದು. ಅಷ್ಟೇ.

ಅತಿಥಿ: ಮತ್ತೊಂದು ವಿಷಯ. ಶ್ರೀಕೃಷ್ಣನು ಒಮ್ಮೆಯೂ ಅರ್ಜುನನಿಗೆ ಕುಳಿತು ಭಜನೆ ಮಾಡು ಎಂದು ಹೇಳಲಿಲ್ಲ. ಅವನು; ಉತ್ತಿಷ್ಠ ಮಾಮ್ ಅನುಸ್ಮರ ಯುದ್ಧ್ಯ – ‘ಏಳು, ಹೋರಾಡು’ ಎಂದು ಕರೆ ಕೊಟ್ಟ.

ಶ್ರೀಲ ಪ್ರಭುಪಾದ: ಹೌದು, ಆದರೆ ಯಾರೊಡನೆ ಹೋರಾಟ?

ಅತಿಥಿ: ಯಾರೊಂದಿಗಾದರೂ ಸರಿ, ಆದರೆ ಮೊದಲು ನಿನ್ನ ಶತ್ರುಗಳು ಯಾರು ಎಂದು ತಿಳಿದುಕೊಳ್ಳುವುದು ಅತ್ಯಾವಶ್ಯಕ.

ಶ್ರೀಲ ಪ್ರಭುಪಾದ: ಇದು ಒಳ್ಳೆಯ ಪ್ರಸ್ತಾವ. ನಿನಗೆ ನಿನ್ನ ಶತ್ರುಗಳು ಯಾರೆಂದೇ ತಿಳಿಯದೆ ಹೋದರೆ, ಹೋರಾಡುವುದಾದರೂ ಹೇಗೆ? ವೈಷ್ಣವರಾದ ನಾವು ಹೋರಾಟದ ಅಗತ್ಯವಿಲ್ಲವೆಂದು ಹೇಳುವುದಿಲ್ಲ. ಎಂದಿಗೂ ಇಲ್ಲ. ಯಾವಾಗ ಹೋರಾಟದ ಅಗತ್ಯವಿದೆಯೋ ಆಗ ಖಂಡಿತ ಹೋರಾಡಲೇಬೇಕು.

ನ್ಯೂಯಾರ್ಕ್‌ನಲ್ಲಿ ಗೋಲ್ಡ್‌ಸ್ಮಿತ್‌ ಎನ್ನುವರೊಬ್ಬರು ನನ್ನನ್ನು ಕೇಳಿದ್ದರು – “ಕೃಷ್ಣನು ಅರ್ಜುನನಿಗೆ ಹೋರಾಡು ಎಂದು ಹೇಳುವ ಮೂಲಕ ಹಿಂಸೆಯನ್ನೇಕೆ ಪ್ರಚೋದಿಸುತ್ತಿದ್ದಾನೆ?’ ಎಂದು. ಹೀಗೆ ಕೆಲವರು ವಿರೋಧ ವ್ಯಕ್ತಪಡಿಸಬಹುದು. ಆದರೆ ಹಾಗೆ ದೇವೋತ್ತಮ ಪರಮಪುರುಷನ ಕ್ರಿಯೆಯ ವಿರುದ್ಧ ಪ್ರತಿಭಟನೆ ತೋರುವುದರಲ್ಲಿ ಯಾವ ಅರ್ಥವೂ ಇಲ್ಲ. ಅದು ನಮ್ಮ ದೃಷ್ಟಿ.

ನಾವು ವೈಷ್ಣವರು, ಮತ್ತು ನಾವು ಸಂಕೀರ್ತನೆ ನಡೆಸುತ್ತೇವೆ. ಆದರೆ ಇದರ ಅರ್ಥ, ಯಾವಾಗ ಹೋರಾಟದ ಅಗತ್ಯ ಬೀಳುತ್ತದೆಯೋ ಆಗ ನಮ್ಮಲ್ಲಿ ಬಲವಿರುವುದಿಲ್ಲ ಎಂದಲ್ಲ. ನಾವು ಕೂಡ ಹೋರಾಡಬಲ್ಲೆವು. ಒಬ್ಬ ಸಂಭಾವಿತ ವ್ಯಕ್ತಿ ನನಗೆ ಹೇಳಿದರು, ”ವೈಷ್ಣವತ್ತ್ವವು ವ್ಯಕ್ತಿಯನ್ನು ಕಳಾಹೀನನಾಗಿಸುತ್ತದೆ.

ಅವರು ಚಟುವಟಿಕೆಯಿಂದ ಇರಲು ಸಾಧ್ಯವಾಗದು” ಎಂದು. ಆದರೆ ನಾನು. ‘ಇಲ್ಲ, ನೀವು ವೈಷ್ಣವರನ್ನು ನೋಡಿಯೇ ಇಲ್ಲ’ ಎಂದು ಉತ್ತರಿಸಿದೆ. ರಾಮಾಯಣ ಮತ್ತು ಮಹಾಭಾರತಗಳಲ್ಲಿ ಹನುಮಂತ ಮತ್ತು ಅರ್ಜುನರು ವೀರ ಯೋಧರಾಗಿದ್ದರು ಮತ್ತು ಹೋರಾಡಿದ್ದರು.

ಅತಿಥಿ: ಅವರು ಹೋರಾಡಿದ್ದರು.

ಶ್ರೀಲ ಪ್ರಭುಪಾದ: ಹೌದು ಮತ್ತೀಗ ಅವರಿಗಿಂತ ಉತ್ತಮರಾದ ವೈಷ್ಣವರು ಬೇರೆ ಯಾರಿದ್ದಾರೆ?

ಅತಿಥಿ: ಯಾರೂ ಇಲ್ಲ.

ಶ್ರೀಲ ಪ್ರಭುಪಾದ: ಆದ್ದರಿಂದ ವೈಷ್ಣವನಾಗಿರುವುದೆಂದರೆ ಕಳಾಹೀನನಾಗಿರುವುದೆಂದಲ್ಲ. ಎಂದಿಗೂ ಅಲ್ಲ.

ಅತಿಥಿ: ಅದು ಚೆನ್ನಾಗಿ ಸಾಧಿತವಾಯಿತು. ಅಗತ್ಯ ಬಿದ್ದಾಗ…

ಶ್ರೀಲ ಪ್ರಭುಪಾದ: ಹೌದು. ಸದ್ಯಕ್ಕೆ ನಮ್ಮ ಹೋರಾಟ ನಾಸ್ತಿಕತೆಯ ವಿರುದ್ಧ. ನಾಸ್ತಿಕರು, ‘ದೇವರೆಂಬುವನಿಲ್ಲ, ದೇವರು ನಿರ್ಜೀವ ನಾನೇ ದೇವರು. ನೀವೂ ದೇವರೇ” ಎಂದೆಲ್ಲ ಹೇಳಿಕೊಂಡು ತಿರುಗುತ್ತಾರೆ. ನಾವು ಈ ತತ್ತ್ವಗಳ ವಿರುದ್ಧ ಹೋರಾಡುತ್ತೇವೆ. ನಮ್ಮ ಹೋರಾಟವು ಬಹಳ ಮಜಬೂತಾದುದಾಗಿದೆ. ನಾವು ತೆಪ್ಪಗಿದ್ದೇವೆಂದು ತಿಳಿಯಬೇಡಿ, ನಾಸ್ತಿಕರ ವಿರುದ್ಧ ಹೋರಾಡಲೆಂದೇ ನಾನಿಲ್ಲಿಗೆ ಬಂದಿರುವೆ.

ನಾವು ಹೇಳುತ್ತೇವೆ, ”ಭಗವಂತನೆಂದರೆ ಕೃಷ್ಣ. ದೇವೋತ್ತಮ ಪರಮಪುರುಷನು ಶ್ರೀಕೃಷ್ಣ. ಅವನೊಬ್ಬ ವ್ಯಕ್ತಿ. ನಿರ್ಜೀವನಲ್ಲ.” ಇದು ನಮ್ಮ ಬೋಧನೆ. ಆದ್ದರಿಂದಲೇ ಇದೊಂದು ಹೋರಾಟ.

ಅತಿಥಿ: ಭಗವಂತನು ನಿರ್ಜೀವನಲ್ಲ. ಅವನು ಸತ್ತಿಲ್ಲ.

ಶ್ರೀಲ ಪ್ರಭುಪಾದ: ಅವನು ಸಾಯುವುದು ಹೇಗೆ ಸಾಧ್ಯ? ದೇವರು ಸಾಯುವನೆಂದು ಹೇಗೆ ಯೋಚಿಸಬಲ್ಲಿರಿ ನೀವು? ಅದು ಶುದ್ಧ ಮೂರ್ಖತನ.

ಅತಿಥಿ: ದೇವರು ಸತ್ತಿರುವನೆಂದು ತಿಳಿಯುತ್ತಾರಾದರೆ ಅದು ಅಂಥವರ ಮೌಢ್ಯವಷ್ಟೆ.

ಶ್ರೀಲ ಪ್ರಭುಪಾದ: ಆದ್ದರಿಂದಲೇ ನಾವು ಇಂತಹ ಮೌಢ್ಯದ ವಿರುದ್ಧ ಹೋರಾಡುತ್ತಿರುವೆವು. ಮತ್ತು ಇತ್ತೀಚೆಗೆ ಕೆಲವು (ಪೊಳ್ಳು) ವಾದಗಳು ಮತ್ತು ಧಾರ್ಮಿಕ ತತ್ತ್ವಗಳು ಅನಾವಶ್ಯಕವಾಗಿ ತಲೆಯೆತ್ತಿರುವವು. ನೀವು ನೋಡುತ್ತಿರುವಿರಲ್ಲವೆ? ಆದರೆ ನಾವು ಮಾತ್ರ ಪರಮ ಪ್ರಭುವಿಗೆ ಶರಣಾಗುವುದೇ ಏಕೈಕ ಧರ್ಮವೆಂಬ ತತ್ತ್ವಕ್ಕೆ ಅಂಟಿಕೊಂಡಿರುವೆವು. ಅದೇ ನಿಜವಾದ ಧರ್ಮ. ಅದು ಶರಣಾಗತಿ.

ಅತಿಥಿ: ಸಂಪೂರ್ಣ ಶರಣಾಗತಿ.

ಶ್ರೀಲ ಪ್ರಭುಪಾದ: ಸಂಪೂರ್ಣ ಶರಣಾಗತಿ. ಅದೇ ನೈಜ ಧರ್ಮ. ಕೃಷ್ಣನು ಹೇಳುವನು, ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕರ್ ಶರಣಮ್ ವ್ರಜ ಎಂದು. ಅಂದರೆ, “ಎಲ್ಲ ವಿಧದ ಧರ್ಮಗಳನ್ನೂ ತ್ಯಜಿಸಿ ಕೇವಲ ನನ್ನಲ್ಲಿ ಶರಣಾಗು” ಎಂದು. ಇವು ಕೃಷ್ಣನ ಮಾತುಗಳು. ಬಹೂನಾಮ್ ಜನ್ಮನಾಮ್ ಅನ್ತೇ ಜ್ಞಾನವಾನ್ ಮಾಮ್‌ಪ್ರಪದ್ಯತೇ- ಪ್ರಪದ್ಯತೇ ಅದು ಶರಣಾಗತಿ. ಅತಿಥಿ: ಈ ಕಾರ್ಯಕ್ರಮದ ಉದ್ಘಾಟನೆಯ ದಿನ ವಾಗ್ಮಿಗಳು ಕರ್ಮಯೋಗದ ಪ್ರಸ್ತಾವ ಮಾಡಿದ್ದರು.

ಶ್ರೀಲ ಪ್ರಭುಪಾದ: ಓಹ್! ಗವರ್ನರ್ ಸಾಹೇಬರು, ನೋಡಿ, ಅವರು ಕರ್ಮಯೋಗದ ಮಾತಾಡುತ್ತಿದ್ದರು. ಭಾರತದಲ್ಲಿ – ಋಷಿಮುನಿಗಳ, ಕೃಷ್ಣನ, ರಾಮಚಂದ್ರನ, ರಾಜಾ ಪರೀಕ್ಷಿತನ ಪುಣ್ಯಭೂಮಿಯಲ್ಲಿ ಹಸುಗಳ ವಧೆ ನಿರಾಂತಕವಾಗಿ ಸಾಗುತ್ತಿದೆ ಮತ್ತು ಅವರು ಕರ್ಮಯೋಗದ ಮಾತಾಡುತ್ತಾರೆ! ಹೇಗಿದೆ ತಮಾಷೆ!

ಅತಿಥಿ: ಭಾರತವು ಎತ್ತ ಸಾಗುತ್ತಿದೆ, ಕೃಷ್ಣನ ಭೂಮಿಯು ಎತ್ತ ಸಾಗುತ್ತಿದೆ ಎಂಬುದೇ ನನಗೆ ತಿಳಿಯದಾಗಿದೆ.

ಶ್ರೀಲ ಪ್ರಭುಪಾದ: ಒಳ್ಳೆಯದು, ನಾವು ನಮ್ಮ ಕೈಲಾಗುವುದೆಲ್ಲವನ್ನೂ ಮಾಡಬೇಕು.

ಅತಿಥಿ: ಹೌದು, ನಾವು ಈ ಎಲ್ಲದರ ವಿರುದ್ಧ ಹೋರಾಡಬೇಕು. ಅದು ನಮ್ಮ ಕರ್ತವ್ಯ.

ಶ್ರೀಲ ಪ್ರಭುಪಾದ: ಅದು ಹೌದು. ನೀವೊಬ್ಬ ಸೈನ್ಯಕ್ಕೆ ಸೇರಿದ ಮನುಷ್ಯ. ಈ ಎಲ್ಲ ಮೂರ್ಖತನದ ವಿರುದ್ಧ ಹೋರಾಡುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi