– ಇಂಗ್ಲಿಷ್ ಮೂಲ: ರೋಹಿಣಿನಂದನ ದಾಸ, ಕನ್ನಡಕ್ಕೆ: ಗೀತಾ ಶ್ರೀನಾಥ್
ಅವನ ಸಂದಿಗ್ಧ ಪರಿಸ್ಥಿತಿಯ ಸತ್ಯ ಅವನಿಗೆ ಸ್ಪಷ್ಟವಾಯಿತು. ಆದರೂ ತಾನು ಸಾಯುವೆನೆಂಬ ವಾಸ್ತವವನ್ನು ಪ್ರತಿರೋಧಿಸುವ ಕೆಲಸವನ್ನು ಉದ್ದಕ್ಕೂ ಅವನ ಪ್ರಜ್ಞೆ ಮಾಡುತ್ತಿತ್ತು.

ಅದೊಂದು ಸಾಮಾನ್ಯ ಟೋಪಿ, ಆದರೆ ಅವನಿಗೆ ಅದು ಸ್ವಾತಂತ್ರ್ಯವನ್ನು ಪ್ರತಿಪಾದಿಸುವಂಥದ್ದು. ಆ ಟೋಪಿಯನ್ನು ಅವನು ಓರೆಯಾಗಿ ಇಟ್ಟುಕೊಂಡು ಕಡಲ ತೀರದುದ್ದಕ್ಕೂ ಅಡ್ಡಾಡುತ್ತಿದ್ದ. ಅವನು ಮಾಡುತ್ತಿದ್ದ ಅಪಸ್ವರದ ಶಿಳ್ಳೆ, ಕಡಲಿನ ಅಲೆಗಳ ಭೋರ್ಗರೆತದಲ್ಲಿ ಮುಳುಗಿಹೋಯಿತು.
ನಾಯಿಗಳು ಗಾಳಿಯಲ್ಲಿ ಆಟವಾಡುತ್ತಿದ್ದವು. ಕೆಲವೊಮ್ಮೆ ತೇಲುತ್ತಾ ಕೆಲವೊಮ್ಮೆ ರಭಸದಿಂದ ಬೀಸುವ ಗಾಳಿಯನ್ನು ಸವರುತ್ತಾ, ಅವು ಒಂದಕ್ಕೊಂದು ಕೂಗುತ್ತಾ ಇದ್ದವು. ಸೂರ್ಯನಿಗೆ ಇದಿರಾಗಿ ಮೋಡಗಳು ತೇಲಿಕೊಂಡು ಹೋಗುತ್ತಿದ್ದವು. ಸಮುದ್ರದ ಮೇಲೆ ಬೀಳುತ್ತಿದ್ದ ಅವುಗಳ ನೆರಳು ಅವನ್ನು ಹಿಂಬಾಲಿಸುತ್ತಿದ್ದವು.
ಏಕಾಂಗಿ, ಷರಾಯಿಯ ಜೇಬುಗಳಲ್ಲಿ ಹೆಬ್ಬೆರಳು ಕಾಣಿಸುವ ಹಾಗೆ ಕೈಗಳನ್ನು ತೂರಿಸಿಕೊಂಡು, ಭುಜಗಳನ್ನು ಮೇಲೆತ್ತಿಕೊಂಡು, ಬೀಸುವ ಗಾಳಿಗೆ ಒರಗಿಕೊಂಡು ಅವನು ಆ ಶಕ್ತಿಶಾಲಿ ಸಮುದ್ರವನ್ನು ನಿರ್ಲಿಪ್ತತೆಯಿಂದ ಎವೆಯಿಕ್ಕದಂತೆ ನೋಡುತ್ತಿದ್ದ. ಟೋಪಿ ಇನ್ನು ತನ್ನ ತಲೆಯ ಮೇಲಿದೆ ಎನ್ನುವುದನ್ನು ಅವನು ಆಗಾಗ ಖಚಿತಪಡಿಸಿಕೊಳ್ಳುತ್ತಿದ್ದ.
ಅವನು ಭವಿಷ್ಯವನ್ನು ಕುರಿತು ಆಲೋಚಿಸುತ್ತಿದ್ದ. ತನ್ನ ಗುರುತಾಗಿ ಈ ಜಗತ್ತಿಗೆ ವಿಶಿಷ್ಟವಾದದ್ದು ಮತ್ತು ಅಪೂರ್ವವಾದದ್ದನ್ನು ಮಾಡುತ್ತೇನೆಂಬ ನಂಬಿಕೆ ಅವನಲ್ಲಿತ್ತು. ಅವನು ಸಮುದ್ರವನ್ನು ನೋಡುತ್ತಿದ್ದರೂ, ಸೀಗಲ್ ಕೂಗಾಟವನ್ನು ಕೇಳುತ್ತಿದ್ದರೂ, ಗಾಳಿಯ ಅನುಭವ ಪಡೆಯುತ್ತಿದ್ದರೂ ಅವನು ತನ್ನ ಆಲೋಚನೆಗಳಲ್ಲಿ ಮಗ್ನನಾಗಿದ್ದ.
ಒಂದು ಕಲ್ಲನ್ನು ಒದ್ದು ಅದು ಇನ್ನೊಂದು ಕಲ್ಲಿಗೆ ನಿಖರವಾಗಿ ಬಡಿಯುವುದನ್ನು ನೋಡಿ ಅವನು ತೃಪ್ತಿಪಟ್ಟ. ಅವನು ನಸುನಕ್ಕ. ಏಕಾಂಗಿಯಾಗಿದ್ದಾಗ ಮಾತ್ರ ತಾನು ಗಮನಾರ್ಹ ವಾದ ಭಾವನೆ ಉಳ್ಳವನಾಗಿರುತ್ತೇನೆಯೇ ಎನ್ನುವುದನ್ನು ಪರಿಗಣಿಸಲು ತನಗೆ ತಾನೇ ಅವನು ಸಮ್ಮತಿಸಲಿಲ್ಲ. ಮುಖ್ಯವಾಗಿ ಅವನು ತಾನೇ ನಿರ್ಮಿಸಿದ ಕನ್ನಡಿಯ ಕಾರಾಗೃಹದಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ. ಅವನು ಕಲ್ಲನ್ನು ಮತ್ತೆ ದೂರದವರೆಗೂ ಒದ್ದ.
ಇದ್ದಕ್ಕಿದ್ದಂತೆ ಗಾಳಿ ಅಬ್ಬರಿಸಿ, ಟೋಪಿಯ ಅಂಚನ್ನು ಹಿಡಿದು ಅದನ್ನು ಸಮುದ್ರಕ್ಕೆ ಎಸೆಯಿತು. ಕಡಲಿನ ಅಲೆಗಳ ಆಚೆಯ ಮೇಲ್ಮೆಯಲ್ಲಿ ಆ ಟೋಪಿ ಗಂಭೀರವಾಗಿ ಇಳಿಯಿತು. ಟೋಪಿಯ ಒಂದು ಪುಕ್ಕ ಹೆಮ್ಮೆಯಿಂದ ಗಾಳಿಯಲ್ಲಿ ತೂರಿಕೊಂಡು ಅವನನ್ನು ಅಣಕಿಸುತ್ತಿದೆಯೇನೋ ಎನ್ನುವಂತೆ ಕಾಣುತ್ತಿತ್ತು.
ಗಾಳಿಯಲ್ಲಿ ತೂರಿಕೊಂಡು ಹೋಗುತ್ತಿದ್ದ ಆ ಪುಕ್ಕವನ್ನು ಇನ್ನೂ ನೋಡುತ್ತಲೇ ಇದ್ದ. ಯಾವ ಪ್ರಯತ್ನವೂ ಇಲ್ಲದೆ ತನ್ನ ಹೊಸ ಟೋಪಿಯನ್ನು ತನ್ನಿಂದ ಕಸಿದುಕೊಂಡಿದ್ದಕ್ಕೆ ಅವನಿಗೆ ಕೋಪ ಬಂದಿತು. ಅದನ್ನು ಒಪ್ಪಿಕೊಳ್ಳುವುದು ಕಷ್ಟವೆನಿಸಿತು. ಆದರೆ ಅದನ್ನು ಮರಳಿ ಪಡೆಯುವುದಾಗಿ ಛಲದಿಂದ ತೀರ್ಮಾನಿಸಿದ.
ಆದರೆ, ಅಲೆಗಳು ಆ ಚಿಕ್ಕ ಹೊರೆಯನ್ನು ವೇಗವಾಗಿ ತೇಲಿ ಹೋಗುವಂತೆ ಮಾಡಿದವು. ಉಕ್ಕೇರುವ ಅಲೆಗಳಲ್ಲಿ ತನ್ನ ಸರಿವಂತಿಕೆಯ ಟೋಪಿ ತನ್ನನ್ನು ಮೂದಲಿಸುವಂತೆ ಕುಣಿಯುತ್ತಾ ಹೋಗುವುದನ್ನು ಆ ಹುಡುಗ ಹಂಬಲಿಕೆಯಿಂದ ನೋಡಿದ.
ತನ್ನ ಕೋಪದ ಕಣ್ಣೀರನ್ನು ತಡೆದು, ಕಡಲ ನಾವಿಕನಂತೆ ಅವನು ತನ್ನ ಟೋಪಿಯ ಸಂಭಾವ್ಯ ಪಥವನ್ನು ಸೂಕ್ಷ್ಮವಾಗಿ ಗಮನಿಸಿದ. ಸಮುದ್ರಕ್ಕೆ ಚಾಚಿಕೊಂಡಿರುವ ದೃಢವಾದ ಬಂಡೆಗಳ ದ್ವೀಪ ಕಾಣಿಸಿತು. ಟೋಪಿ ಅಲ್ಲಿ ಹೋಗಿ ಬೀಳಬಹುದು ಎಂದು ಅನ್ನಿಸಿತು.
ಆ ಬೃಹತ್ ಬಂಡೆಗಳನ್ನು ನೋಡಿದಾಗ ಅಲ್ಲಿಗೆ ಹೋಗಬಹುದೆಂದು ಎಣಿಸಿದ, ಆದರೆ ಹಿಂಜರಿದ. ಆ ದಾರಿ ಅಪಾಯಕಾರಿಯಾಗಿ ಕಾಣಿಸಿತೆ? ಅವನು ಹಿಂದಕ್ಕೆ ಓಡಿಹೋಗಿ ಸಹಾಯ ಕೇಳಬೇಕೇ? ಆ ಎಲ್ಲವನ್ನೂ ಮರೆಯುವುದು ಒಳ್ಳೆಯದೇ? ‘ಇಲ್ಲ’ ಎಂದು ಹುಡುಗ ಆಲೋಚಿಸಿದ ನಾನೀಗ ಪುರುಷನಾಗಿದ್ದೀನಿ, ನನ್ನ ಟೋಪಿಯನ್ನು ನಾನೇ ತೆಗೆದುಕೊಳ್ಳಬಹುದು. ಅಲ್ಲದೆ, ಕಾಲಕಳೆಯುವ ಸಮಯವಿದಲ್ಲ.

ತೀರದ ಉದ್ದಕ್ಕೂ ಅವನು ಓಡಿದಂತೆ ಆ ಬಂಡೆಗಳು ಅವನಿಗೆ ಮೊದಲು ಕಂಡಿದ್ದಕ್ಕಿಂತಲೂ ಎತ್ತರವಾಗಿ, ಭಯಂಕರವಾಗಿ ಕಂಡವು. ಕೆಲವು ಬಂಡೆಗಳ ಮೇಲೆ ತೆವಳುತ್ತಾ ಮತ್ತೆ ಕೆಲವು ಬಂಡೆಗಳನ್ನು ಅವನು ಜಾರುತ್ತಿದ್ದರೂ ಅವನಿಗೆ ಅವುಗಳ ಚಿಂತೆ ಇರಲಿಲ್ಲ. ಉದ್ರೇಕಗೊಂಡಿದ್ದ ಅವನಲ್ಲಿ ತನ್ನ ಟೋಪಿ ಎಲ್ಲಿ ಹಾದು ಹೋಗುತ್ತದೆಯೋ ಆ ಜಾಗವನ್ನು ತಲಪುವ ಲೆಕ್ಕ ಹಾಕುತ್ತಿದ್ದ.
ಬಂಡೆಗಳು ಮೊನಚಾಗಿದ್ದವು. ಚೂಪಾಗಿದ್ದವು, ಭೂಮಿಯ ಮೂಲೆಗಳನ್ನೇ ಅಲ್ಲಿ ಹಾಕಿದ್ದಾರೇನೋ ಎನ್ನಿಸುವಷ್ಟು ಹೆದರಿಸುವಂತೆ ಕಡಿದಾಗಿದ್ದವು. ಅವನು ಒಂದು ಕಡಿದಾದ ಬಂಡೆಯನ್ನು ಅತ್ಯಂತ ಎಚ್ಚರಿಕೆಯಿಂದ ಕೈಗಳಿಂದ ಹಾಗೂ ಮಂಡಿಗಳಿಂದ ಪ್ರಯಾಸದಿಂದ ತೆವಳುತ್ತಾ ಏರಿ ಆದರ ತುದಿ ತಲಪಿದ.
ಎಲ್ಲಿ ಬಂಡೆಗೆ ಚಿಕ್ಕ ಬಂಡೆಯ ಕಡೆಗೆ ಹಠಾತ್ತಾಗಿ ಇಳಿದಿದೆಯೋ ಅಲ್ಲಿಗೆ ಅವನು ಬಂದ. ಕೊನೆಯ ಆ ಹದಿನೈದು ಅಡಿಗಳನ್ನು ಹೇಗೆ ಇಳಿಯುವುದೆಂದು ಚಿಂತಿಸುವುದೇ ಅವನಲ್ಲಿ ಭಯವನ್ನು ಉಂಟುಮಾಡುತ್ತಿತ್ತು. ಆದರೆ ಕೆಳಗಿಳಿಯುವ ಪ್ರಯತ್ನವನ್ನು ಅವನು ಮಾಡಲಿಲ್ಲ.
ಆದರೂ ಕೂಡ ಅವನು ಅನಾಕರ್ಷಕವಾಗಿ ಮುಂದಕ್ಕೆ ಚಾಚಿಕೊಂಡಿರುವ ಬಂಡೆಗಳನ್ನು ತನ್ನ ಬಿಳಿಯದಾದ ಬೆರಳಿನ ಗೆಣ್ಣುಗಳಿಂದ ಹಿಡಿತ ಸಾಧಿಸಿ ಒಂದು ಚೂರು ಕೆಳಕೆ ಇಳಿದ ಸ್ವಲ್ಪ ಬೆದರಿಕೆಯ ನೆಗೆತದಿಂದಲೇ ಅವನು ಕೊನೆಯ ಐದು ಅಡಿಗಳನ್ನು ಹಾರಿದ.
ಅವನು ಅಲ್ಲಿ ಇಳಿಯುತ್ತಿದ್ದಂತೆ ಅಗಾಧವಾದ ಆ ಸಮುದ್ರದ ಸಾಮರ್ಥ್ಯವನ್ನು ಅನುಭವಿಸಿದ. ಸಮುದ್ರವು ಹೀರಿಕೊಳ್ಳುವಂತೆ, ಅವರಿಸಿಕೊಳ್ಳುವಂತೆ ಅವನ ಸುತ್ತಲೂ ಆವರಿಸಿಕೊಂಡಿತ್ತು. ಅದು ಭಯಂಕರವಾಗಿ ಬಲದಿಂದ ಉಕ್ಕೇರುತ್ತಿತ್ತು. ಅಂತಹ ಸ್ವಾಭಾವಿಕ ಸಾಮರ್ಥ್ಯವನ್ನು ಕಂಡು ಅವನು ಹೆದರಿದ. ಆ ಸಾಮರ್ಥ್ಯವು ಅವನ ನಿರ್ವಹಣೆ ಮತ್ತು ಸ್ವಯಂ ಪ್ರತಿಫಲನ ಜಗತ್ತಿನ ಮೇಲೆ ಅಪರೂಪವಾಗಿ ಅಡ್ಡಿಯನ್ನುಂಟು ಮಾಡಿತ್ತು.
ಆದರೂ, ಅವನು ಯೋಚಿಸಿದ, ‘ನಾನು ನನ್ನ ಟೋಪಿಯನ್ನು ಹುಡುಕಿಕೊಂಡು ಕ್ಷಣಮಾತ್ರದಲ್ಲಿ ಇಲ್ಲಿಂದ ಹೊರಬರುತ್ತೇನೆ. ಆದರೆ, ಆ ಹಾಳಾದ ಟೋಪಿ ಎಲ್ಲಿ?”
ಈಗ ಅವನು ತನ್ನ ದೈತ್ಯಾಕಾರದ ಎದುರಾಳಿಯನ್ನು ಮುಖಾಮುಖಿಯಾದ ತನ್ನ ಟೋಪಿಯನ್ನು ಮರಳಿ ಪಡೆಯುವುದು ಅಸಾಧ್ಯ ಎನ್ನುವುದು ಅವನಿಗೆ ಅರ್ಥವಾಗಿತ್ತು. ಅದೇ ಅವನ ಹತ್ತಿರಕ್ಕೆ ಬಂದರೂ, ಅದರ ಹತ್ತಿರ ಧೈರ್ಯದಿಂದ ಹೋಗುವುದಕ್ಕೆ ದಾರಿಗಳಿರಲಿಲ್ಲ. ಅವನ ಪಾದಗಳಿಗೆ ಅಂಟಿಕೊಂಡಿದ್ದ ಬಂಡೆ ಅನೇಕ ವರ್ಷಗಳಿಂದ ಸ್ಥಿರವಾದ ಉಜ್ಜಿವಿಕೆಗೆ ಒಳಗಾಗಿ ಪಾದಗಳನ್ನು ದೃಢವಾಗಿ ಇರುವಂತೆ ಗುಂಡಿಯಾಗಿತ್ತು.
ಆದರೆ ಅದು ನೀರು ಸೇರುವುದರಿಂದ ವಕ್ರಗೊಂಡು ಗಟ್ಟಿಯಾದ ಹಸಿರು ಪಾಚಿ ಅದರಲ್ಲಿ ತುಂಬಿಕೊಂಡಿತ್ತು. ಅಲ್ಲಿಂದ ಅವನು ಟೋಪಿ ಇರುವ ಜಾಗಕ್ಕೆ ಹೋಗಲು ಪ್ರಯತ್ನಿಸಿದರೆ ಜಾರಿ ಬೀಳುತ್ತೇನೆ ಎನ್ನುವುದು ಅವನಿಗೆ ಗೊತ್ತಿತ್ತು. ಆ ಚಿಕ್ಕ ಕಟ್ಟೆಯಿಂದ ಬೀಳುವುದೆಂದರೆ ಅಸಹಾಯಕನಾಗಿ ಕೊಚ್ಚಿಕೊಂಡು ಹೋಗಿ ಬಂಡೆಗೆ ಬಡಿದು ಚೂರು ಚೂರಾದಂತೆ.
‘ಇದೊಂದು ಅಂದವಾದ ಒರಟು ಸಮುದ್ರ’ ಅವನು ಒಪ್ಪಿಕೊಂಡು ತನ್ನ ಪ್ರಯತ್ನವನ್ನು ಕೈಬಿಡಲು ನಿರ್ಧರಿಸಿದ. ಅಲ್ಲಿಂದ ಹೊರಡುವುದಕ್ಕೆ ತಿರುಗಿದ. ಆಗ ಇದು ನಡೆಯಿತು.
ಮುಂದಾಗಬಹುದಾಗಿದ್ದರ ಬಗ್ಗೆ ಅವನು ಯೋಚಿಸಬಹುದಿತ್ತು. ಅಲೆಗಳ ಏರಿಳಿತದ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ, ಗವಿಗಳಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗರ ಬಗ್ಗೆಯೂ ಅವನು ಕೇಳಿದ್ದ. ತನ್ನ ಟೋಪಿಯನ್ನು ಹುಡುಕುವ ತರಾತುರಿಯಲ್ಲಿ ಅವನಿಗೆ ಈ ಆಲೋಚನೆಗಳು ಜಾರಿಹೋಗಿದ್ದವು.

ಸಮುದ್ರ ಅಥವಾ ನಾವಿಕ ಎಷ್ಟಾದರೂ ಇದನ್ನು ಮರೆತಿರಲಿಲ್ಲ. ಪರಮೋತ್ಸಾಹದಿಂದ ಅಲೆಯೊಂದು ಇವನು ನಿಂತಿದ್ದ ಸಣ್ಣ ಬಂಡೆಯನ್ನು ಸುತ್ತುವರಿದು ಅವನನ್ನು ಕೆಳಕ್ಕುರುಳಿಸಿ ತನ್ನ ಭೀತಿ ಹುಟ್ಟಿಸುವ ಆಲಿಂಗನದಿಂದ ಸುತ್ತುವರಿಯಿತು.
ರಾಕ್ಷಸನಂತಹ ಶತ್ರು ತನ್ನನ್ನು ಬಿಗಿ ಮುಷ್ಟಿಯಲ್ಲಿ ಹಿಡಿದು ಆಳಕ್ಕೆ ಎಳೆದುಕೊಂಡು ಹೋಗದಂತೆ ಅವನು, ರೆಕ್ಕೆಗಳನ್ನು ಕದರಿಕೊಂಡಿರುವ ಕಿಸಗಾಲ ಗರುಡ ಪಕ್ಷಿಯಂತೆ ಹತೋಟಿ ಮೀರಿ ಕಲ್ಲಿನ ಹೆಕ್ಕಳಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ನೀರಿನ ಮಟ್ಟ ಇಳಿದು ಬಂದಷ್ಟೇ ವೇಗವಾಗಿ ಹೊರಟು ಹೋಯಿತು.
ಹುಡುಗ ಅತ್ಯಂತ ಎಚ್ಚರಿಕೆಯಿಂದ ನಿಂತುಕೊಂಡು ತನ್ನ ಕೈಗಳು ಹಾಗೂ ಕಾಲುಗಳ ಮೇಲಾಗಿರುವ ಗಾಯಗಳನ್ನು ನೋಡಿಕೊಂಡ. ನೀರಿನಿಂದ ಉಂಟಾದ ಚಳಿಗಿಂತಲೂ ಅವನು ಭಯದಿಂದ ನಡುಗಿದ. ಗಾಬರಿಯಿಂದ ಅವನ ಬಾಯಿ ಸೊಟ್ಟಗಾಗಿತ್ತು. ಈ ರೀತಿ ಅವನಿಗೆ ಎಂದೂ ಆಗಿರಲಿಲ್ಲ. ಯಾರನ್ನಾದರೂ ಕೂಗಿ ಕರೆಯಬೇಕೆಂದು ಅವನಿಗೆ ಅನ್ನಿಸಿತು. ಆದರೆ ಸಮುದ್ರದ ಭೋರ್ಗರೆತದಿಂದಾಗಿ ಯಾರಿಗೂ ತನ್ನ ದುರ್ಬಲ ಕೂಗು ಕೇಳಿಸುವುದಿಲ್ಲ ಎನ್ನುವುದು ಅವನಿಗೆ ಗೊತ್ತಿತ್ತು.
ಮುಂದಿನ ದೊಡ್ಡ ಅಲೆ ಬರುವುದಕ್ಕಿಂತ ಮುಂಚೆ ಏಳು ಇಲ್ಲವೆ ಹತ್ತು ಅಲೆಗಳು ಬರಬಹುದೆಂದು ಅವನು ವಿವೇಚಿಸಿ ತನ್ನನ್ನು ತಾನೇ ಸಿಮಿತಕ್ಕೆ ತಂದುಕೊಳ್ಳಲು ಅವನು ಪ್ರಯತ್ನಿಸಿದ. ಸುರಕ್ಷಿತ ಜಾಗಕ್ಕೆ ಹತ್ತಿ ಹೋಗುವುದಕ್ಕೆ ಅವನಿಗೆ ನಿಜವಾಗಿಯೂ ಸಮಯವಿತ್ತು. ಇನ್ನೊಂದು ಸಲ ಅವನು ತಪ್ಪಿಸಿಕೊಳ್ಳಲು ಮುಂದಾದ. ಆದರೆ ಈಗ ಅವನ ಬಂಧನದ ಗೋಡೆ ಥಳಥಳಿಸಿತು. ಒಂದು ಕ್ಷಣ ಅವನು ಹಿ೦ಜರಿದ.
‘ನಾನು ಇದನ್ನು ಮಾಡಲೇಬೇಕು!’ ಎಂದು ಚೀರುತ್ತಲೇ ಹತ್ತುವುದಕ್ಕೆ ಪ್ರಯತ್ನಿಸಿದ. ಕಾಲೂರುವುದಕ್ಕೆ ಬೇಕಾದ ಆಸರೆಗಾಗಿ ಅವನು ಮತ್ತೆ ಮತ್ತೆ ಪ್ರಯತ್ನಿಸಿದ. ಆದರೆ ಜಾರಿ ಬಿದ್ದ. ಆಗ ಇನ್ನೊಂದು ದೊಡ್ಡ ಅಲೆ ಬಂದಿತು. ಅವನನ್ನು ಹಿಡಿದು, ಸುತ್ತುವರಿದು ಅಪ್ರಯತ್ನಪೂರ್ವಕವಾಗಿ ಅವನನ್ನು ಎಳೆದು ಕೆಳಕ್ಕುರುಳಿಸಿತು.
ಕೆಳಗೆ ನಡೆಯುತ್ತಿರುವ ನಾಟಕದ ಅರಿವಿಲ್ಲದಂತೆ ಸೀಳುನಾಯಿಗಳು ಅತ್ಯಾನಂದದಿಂದ ಆಗಸದಲ್ಲಿ ರಭಸದಿಂದ, ಗಾಳಿಯಲ್ಲಿ ತೇಲುತ್ತಾ, ಸೆಣಸುತ್ತಾ ಇದ್ದವು. ಅವುಗಳಿಗೆ ಸಮುದ್ರದ ಭಯವೇ ಇರಲಿಲ್ಲ. ಅದು ವಿಶ್ರಾಂತಿಯ ಸ್ಥಳ ಹಾಗೂ ತಮಗೆ ಆಹಾರವನ್ನು ನೀಡುತ್ತದೆ ಎನ್ನುವುದನ್ನು ಕಂಡುಕೊಂಡಿದ್ದವು. ಅವುಗಳಿಗೆ ಸಾವಿನ ಭಯವೂ ಇರಲಿಲ್ಲ.
ಅವುಗಳಿಗೆ ಆ ಹುಡುಗ, ಅಲೆಗಳ ಪ್ರವಾಹಕ್ಕೆ ಹೊಡೆದುಕೊಂಡು ದುರ್ಬಲವಾಗಿ ಬಿದ್ದಿರುವ ಪದಾರ್ಥದ ಹಾಗೆ ಕಾಣಿಸಿದ. ಸಮುದ್ರದಲ್ಲಿ ಯಾವಾಗಲೂ ಹಲವಾರು ತುಂಡುಗಳು, ತುಣುಕುಗಳು ತೇಲುತ್ತಲೇ ಇರುತ್ತವೆ.
ಸಮುದ್ರದ ಕಳೆಯ ಲೋಳೆಯ ಮೇಲೆ ತಾನು ಜಾರಿ ಬಿಳುತ್ತಿದ್ದೇನೆಂಬ ಅನುಭವ ಅವನಿಗಾಯಿತು. ಯಾವುದನ್ನಾದರೂ ಗಟ್ಟಿಯಾಗಿ ಹಿಡಿಯಲು ಅವನು ಪ್ರಯತ್ನಿಸಿದ. ಅಲೆಯಿಂದ ಆವೃತನಾಗಿದ್ದ ಅವನಿಗೆ ನೋಡಲೂ ಆಗಲಿಲ್ಲ. ಉಸಿರಾಡಲೂ ಸಾಧ್ಯವಾಗಲಿಲ್ಲ. ಆಗ ಅವನ ಕೈಗಳು ಅಸಾಮಾನ್ಯವಾಗಿ ಮೇಲೆದ್ದು ಬಂದಿದ್ದ ಬಂಡೆಯನ್ನು ಸುತ್ತುವರಿದಿದ್ದು, ನೀರು ಇಳಿದು ಅವನನ್ನು ಅರ್ಧ ಮುಳುಗುವಂತೆ ಮೂಡಿತ್ತು.
ಸಮುದ್ರದ ಕಟುವಾದ ಉಪ್ಪು ನೀರನ್ನು ಎಳೆದುಕೊಂಡದ್ದರಿಂದ ಉಸಿರುಕಟ್ಟಿದಂತಾಗಿ ಅವನು ಕೆಮ್ಮಿದ. ತನ್ನೆಲ್ಲಾ ಶಕ್ತಿಯನ್ನು ಬಳಸಿ ಬಂಡೆಯನ್ನು ಅಪ್ಪಿಕೊಂಡು ತನ್ನನ್ನು ತಾನು ಮೇಲಕ್ಕೆಳೆದುಕೊಂಡ. ಅವನು ದೊಪ್ಪನೆ ಕೆಳಕ್ಕೆ ಬಿದ್ದ. ಆನಂದದಿಂದ, ವೃತ್ತಾಕಾರವಾಗಿ ಹಾರುತ್ತಿರುವ ಹಕ್ಕಿಗಳನ್ನು ತಲೆ ಎತ್ತಿ ನೋಡಿ, ಅವುಗಳ ಸ್ವಾತಂತ್ರ್ಯವನ್ನು ಕಂಡು ಅಸೂಯೆಪಟ್ಟ. ‘ನಾನೂ ಹಾರಾಡುವಂತಿದ್ದರೆ!’
ಕಳೆಯುವಷ್ಟು ಸಮಯವಾಗಲಿ, ತನ್ನ ದೇಹದ ಮೇಲೆ ಜಜ್ಜಿ ಆಗಿರುವ ಗಾಯಗಳನ್ನು ನೋಡಿಕೊಳ್ಳುವಷ್ಟು ಸಮಯವಾಗಲಿ ಇರಲಿಲ್ಲ. ಅಲೆಗಳ ಉಬ್ಬರವಿಳಿತ ಈಗ ವೇಗವಾಗಿ ಬರುತ್ತಿತ್ತು. ಅವನು ನಿಂತ ಚಿಕ್ಕ ಕಟ್ಟೆಯನ್ನು ಅವು ತೊಳೆದವು. ಅವನು ಎಚ್ಚರಿಕೆಯಿಂದ ತೆವಳುತ್ತಾ ಬಂಡೆಯ ಮುಖವನ್ನು ತಲಪಿದ. ಯಾವುದೇ ಗಳಿಗೆಯಲ್ಲಿ ಅವನನ್ನು ಕೊಚ್ಚಿಕೊಂಡು ಹೋಗುವಂತೆ ಅಲೆಗಳು ಹೆದರಿಸುತ್ತಿದ್ದವು.
‘ಓಹ್, ದಯವಿಟ್ಟು ನನಗೆ ಹಾಗಾಗುವುದು ಬೇಡ’ ಎನ್ನುತ್ತಾ ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆಂಬ ಅರಿವಿಲ್ಲದೆ ಗೋಳಾಡಿದ. ತನ್ನ ಉತ್ಕಟ ಸ್ಥಿತಿಯ ಕಠೋರ ಸತ್ಯ ಅವನಿಗೆ ಸ್ಪಷ್ಟವಾಯಿತು. ತಾನು ಸಾಯುವವನಿದ್ದೇನೆ ಎನ್ನುವ ಸತ್ಯವನ್ನು ಅವನ ಪೂರ್ಣಪ್ರಜ್ಞೆಯು ಉದ್ದಕ್ಕೂ ನಿಗ್ರಹಿಸುತ್ತಿತ್ತು.
ಅಂತಹ ಆಲೋಚನೆಗಳಿಗೆ ಆಸ್ಪದವಿಲ್ಲದಂತೆ ಮಾಡಿದ್ದ. ಆದರೆ ಸಾವು ಅನಿವಾರ್ಯವೆಂದು ಭಾಸವಾಗುತ್ತಿತ್ತು. ರಭಸವಾದ ಮತ್ತೊಂದು ಬಲವಾದ ನೀರು ತನ್ನನ್ನು ಅಸಹಾಯಕನಂತೆ ಎಳೆದುಕೊಂಡು ಹೋಗಬಹುದು ಎಂದು ಅವನಿಗೆ ತಿಳಿದಿತ್ತು.

‘ಇಲ್ಲ, ಇಲ್ಲ ನನಗೆ ಹಾಗಾಗಬಾರದು!’, ಜ್ವರ ಬಂದವರ ಹಾಗೆ ಅವನು ವಿಕಾರವಾದ ಆ ಬಂಡೆಯ ಗೋಡೆಯನ್ನು ಹಿಡಿದುಕೊಂಡು ಬೇಡಿಕೊಂಡ.
ಅನಂತ ಪ್ರಕೃತಿಯ ಶಕ್ತಿಯಿಂದ ನಿಯಂತ್ರಣಕ್ಕೊಳಗಾಗುವ ಒಂದು ಸಣ್ಣ ಹುಳು ತಾನಾಗಿದ್ದೇನೆ ಎನ್ನುವ ಅಭೂತಪೂರ್ವ ಸ್ಪಷ್ಟನೆ ಅವನಿಗೆ ಆಗ ಕಾಣಿಸಿತು. ಅವನು ತನ್ನ ಸ್ವಾಭಿಮಾನವನ್ನು ಬಿಟ್ಟುಕೊಟ್ಟ. ಆಶ್ಚರ್ಯಕರ ರೀತಿಯಲ್ಲಿ ಅವನಿಗೀಗ ಕೈಯಾಸರೆ ಕಾಣಿಸಿತು. ಪ್ರಯತ್ನವಿಲ್ಲದೆಯೇ ಅವನು ಬಂಡೆಯನ್ನು ಹತ್ತಿದ ಮತ್ತು ಅವನಿಗೆ ವಿವರಿಸಿ ಹೇಳಲಾಗದಷ್ಟು ಮೇಲಕ್ಕೆ ಬಂದಿದ್ದ.
ಅದರ ಮೇಲೆ ಮಲಗಿದ. ಒಂದು ಶಕ್ತಿಶಾಲಿ ಅಲೆ ಅವನಿದ್ದ ಬಂಡೆಯ ಕೆಳಕ್ಕೆ ಹೊಡೆದು, ಗಾಳಿ ಅದರ ತುಂತುರು ಹನಿಗಳನ್ನು ಚಿಮುಕಿಸಿ ಅವನ ಬಳಲಿದ ದೇಹವನ್ನು ತೋಯಿಸಿತು.
ಬಳಲಿಹೋಗಿದ್ದ ಅವನು ಸುರಕ್ಷಿತವಾದ ಕಲ್ಲಿನ ಮೇಲೆ ವಿಶ್ರಮಿಸಿಕೊಂಡ ಕಿಟಕಿಯಂತಿರುವ ಕಣ್ಣುಗಳ ಮೂಲಕ ಆಲೋಚಿಸುತ್ತಾ ಅವನು ದಿಟ್ಟಿಸಿ ನೋಡಿದ. ‘ಈ ಜಗತ್ತಿನಲ್ಲಿ ನಾನೊಂದು ಚಿಕ್ಕ ಹುಳುವಿನ ಹಾಗೆ, ಆದರೆ ನಾನು ಅಸ್ತಿತ್ವದಲ್ಲಿದ್ದೇನೆ, ಸೂರ್ಯ ಅಸ್ತಿತ್ವದಲ್ಲಿದೆ, ಮೋಡಗಳೂ ನಕ್ಷತ್ರಗಳೂ ಅಸ್ತಿತ್ವದಲ್ಲಿವೆ. ಚಂದ್ರ, ಸಮುದ್ರ, ಈ ಎಲ್ಲ ಪ್ರಾಣಿ ಪಕ್ಷಿಗಳು ಅಸ್ತಿತ್ವದಲ್ಲಿವೆ.
ಆದರೆ, ಆದರೆ ನಾನು ಜೀವಿಸುತ್ತಿದ್ದೇನೆ. ಕ್ಷುಲ್ಲಕ ವಿಷಯಗಳಿಗಾಗಿ ನಾನು ಸಮಯ ಕಳೆದೆ ನಾನೊಬ್ಬ ಅಸಾಮಾನ್ಯ ಎಂದು ನಾನು ಚಿಂತಿಸುತ್ತಿದ್ದೆ. ವಾಸ್ತವವಾಗಿ ಎಲ್ಲವೂ ಅಸಾಮಾನ್ಯವಾದವುಗಳೇ. ಪ್ರತಿಯೊಂದು ಕೂಡ ಎಷ್ಟೊಂದು ಅದ್ಭುತ! ನಾನು ಅದರ ಒಂದು ಭಾಗ. ಇವೆಲ್ಲವೂ ಹೇಗೆ ನಡೆಯುತ್ತಿವೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಅದಕ್ಕೊಂದು ಕಾರಣವಿದೆ.’
ಮಗು ತನ್ನ ದೇಹವನ್ನು ತಿಳಿಯುವಂತೆ ಆ ಹುಡುಗ ಈ ಮೊದಲು ತನ್ನ ಗ್ರಹಿಕೆಗೂ ಮೀರಿದ್ದ ಅಸ್ತಿತ್ವದ ಇನ್ನೊಂದು ಆಯಾಮವನ್ನು ತಿಳಿದುಕೊಂಡ. ಸಮುದ್ರದ ಅಸಾಧಾರಣ ಶಕ್ತಿಯ ಆಚೆ ಅದರ ಮೂಲವಿದೆ ಎನ್ನುವುದು ಆ ಗಳಿಗೆ ಅವನಿಗೆ ಅರ್ಥವಾಯಿತು. ಯಾವುದೋ ಒಂದು ಅಥವಾ ಅತ್ಯುತ್ಕೃಷ್ಟವಾದ ಚಿರಂತನವೊಂದು ಅವನಿಗೆ ಇನ್ನೂ ನಿಗೂಢವಾಗಿಯೇ ಉಳಿದಿತ್ತು.
ಅವನಲ್ಲಿದ್ದ ಆಧ್ಯಾತ್ಮಿಕ ಅಪ್ರಬುದ್ಧತೆಯೇ ಇದಕ್ಕೆ ಕಾರಣವಾಗಿತ್ತು. ಆ ಬಳಿಕ, ನಾಟಕದ ಪ್ರದರ್ಶನದ ಬಳಿಕ ನೆಮ್ಮದಿಯನ್ನುಂಟುಮಾಡುವ ಮಾಯೆಯ ಪರದೆಯೊಂದು ಅವನ ಒಳಗಣ್ಣಿನ ಮೇಲೆ ಇಳಿಯಿತು. ಮತ್ತೆ ಅವನ ವಿಚಾರಗಳು ಲೌಕಿಕ ವಿಷಯಗಳತ್ತ ಹೊರಳಿದವು.
ಕಲ್ಲು ಬಂಡೆಯ ಮೇಲೆ ತೆವಳುತ್ತಾ ಅವನು ಅಂತಿಮವಾಗಿ ಸಮುದ್ರ ತೀರವನ್ನು ತಲಪಿದ. ಅವನು ಅಲ್ಲೇ ಕುಳಿತು ಸಮುದ್ರವನ್ನು, ಬಂಡೆಗಳನ್ನು ಹಾಗೂ ಆಕಾಶವನ್ನು ಬೆರಗಿನಿಂದ ದಿಟ್ಟಿಸಿ ನೋಡಿದ. ಹಕ್ಕಿಗಳು ಗಾಳಿಯಲ್ಲಿ ವೃತ್ತಾಕಾರವಾಗಿ ಇನ್ನೂ ತೇಲಾಡುತ್ತಿದ್ದವು.
‘ಇಲ್ಲಿಯವರೆಗೆ ನನ್ನ ಬದುಕು ಏನಾಗಿತ್ತು ಎಂದು ನನಗೆ ಸೋಜಿಗವಾಗುತ್ತಿದೆ’ ಎಂದವನು ಆಲೋಚಿಸಿದ.
ಇದೊಂದು ಆತ್ಮಕಥನದ ಘಟನಾವಳಿ: ಭಗವಂತ ಕೃಷ್ಣನ ಪ್ರಬಲವಾದ ಲೌಕಿಕ ಶಕ್ತಿಯೊಂದಿಗೆ ದಡ್ಡತನದಿಂದ ಪಟ್ಟು ಹಿಡಿದು ಕಾದಾಡಿದ ಬಾಲಕ ನಾನೇ. ಈ ಅನುಭವದಿಂದ ನಾನು ಅಮೂಲ್ಯವಾದ ಪಾಠವನ್ನು ಕಲಿತಿದ್ದರೂ ಕೂಡ ಅಲ್ಲಿ ಕ್ಷಣಕಾಲ ನಾನು ಅಮುಖ್ಯ ಎನ್ನುವುದು ಗೋಚರಿಸಿತು. ತತ್ ಕ್ಷಣ ನಾನು ಕಲಿತದ್ದನ್ನು ಮರೆತು ನನ್ನ ಚಿಕ್ಕದಾದ ಆಧ್ಯಾತ್ಮಿಕ ತಮೋಗುಣದ ನೆಮ್ಮದಿಯೆಂದು ತೋರುವ ಜಗತ್ತಿಗೆ ಬಿದ್ದೆ.
ವರ್ಷಗಳ ಬಳಿಕ, ಆದಾಗ್ಯೂ, ಧರ್ಮಗ್ರಂಥಗಳು ಹಾಗೂ ತತ್ತ್ವಶಾಸ್ತ್ರೀಯ ಪುರಾವೆಗಳು, ತರ್ಕಗಳ ಮೂಲಕ ದೇವರ ಇರುವಿಕೆಯಲ್ಲಿ ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಿದ್ದಾಗ ಮತ್ತು ಸಂತರ ಅದರಲ್ಲಿಯೂ ಮುಖ್ಯವಾಗಿ ಶ್ರೀಲ ಪ್ರಭುಪಾದರ ಬೋಧನೆಗಳನ್ನು ಓದುವ ಮೂಲಕ ಸತ್ಯದ ಕುರಿತು ಇದ್ದ ಮೊಂಡುತನದ ನಿಗ್ರಹವನ್ನು ನಾಶಪಡಿಸಲು ಉಜ್ವಲವಾದ ಅನುಭವದ ನೆನಪುಗಳು ಸಹಕಾರಿಯಾದವು. ಕೃಷ್ಣ ಬಯಸುವ ಹೊರತು ಒಂದೇ ಒಂದು ಅಲೆಯೂ ಒಡೆಯುವುದಿಲ್ಲ.






Leave a Reply