ಕೈಕೇಯಿಯ ಕಾರಣದಿಂದ ರಾಮಚಂದ್ರ ಹದಿನಾಲ್ಕು ವರ್ಷ ಕಾಡಿಗೆ ಹೋದ ಕಥೆ ಗೊತ್ತಲ್ವ? ಹಾಗೆ ಹೊರಟ ರಾಮನ ಜೊತೆ ಅವನ ಹೆಂಡತಿ ಸೀತೆ, ತಮ್ಮ ಲಕ್ಷ್ಮಣರು ಹೊರಟಿದ್ದೂ ನಿಮಗೆಲ್ಲ ಗೊತ್ತು. ಮೊದಲಿಂದ್ಲೂ ಲಕ್ಷ್ಮಣನಿಗೆ ರಾಮನ ಮೇಲೆ ತುಂಬಾ ತುಂಬಾ ಗೌರವ, ಭಕ್ತಿ ಮತ್ತು ಪ್ರೀತಿ. ಅದಕ್ಕೇ, ಅಣ್ಣನಿಗೆ ಕಾಡಿನ ಜೀವನದಲ್ಲಿ ಸಹಾಯ ಮಾಡೋಣ ಅಂತ ಅವನೂ ರಾಮ ಸೀತೆಯರ ಜೊತೆ ಹೊರಟ.

ಹೀಗೆ ಮೂವರೂ ಅಯೋಧ್ಯೆಯಿಂದ ಹೋದ ಸ್ವಲ್ಪ ದಿನಕ್ಕೇ ದಶರಥ ಮಹಾರಾಜ ತೀರಿಕೊಂಡ. ಆ ಹೊತ್ತಿಗೆ ರಾಮನ ಮಲತಮ್ಮ ಕೈಕೇಯಿಯ ಮಗ ಭರತ ರಾಜ್ಯದ ಹೊರಗಿದ್ದ. ಅವನಿಗೂ ರಾಮನ ಮೇಲೆ ವಿಪರೀತ ಪ್ರೀತಿ-ಗೌರವ. ರಾಜ್ಯಕ್ಕೆ ವಾಪಸು ಬಂದ ಮೇಲೇ ಭರತನಿಗೆ ಅಣ್ಣ-ಅತ್ತಿಗೆಯರು ಲಕ್ಷ್ಮಣನ ಜೊತೆ ಕಾಡಿಗೆ ಹೋದ ಸುದ್ದಿ ತಿಳಿದಿದ್ದು!
ಮಾವನ ಮನೆಯಿಂದ ವಾಪಸು ಬಂದ ಭರತನಿಗೆ ಎರಡು ಕೆಟ್ಟ ಸುದ್ದಿಗಳು. ತಂದೆ ತೀರಿಹೋಗಿದ್ದು, ಪ್ರಾಣದಂತೆ ಇದ್ದ ಅಣ್ಣನ್ನ ತನ್ನ ಅಮ್ಮನೇ ಕಾಡಿಗಟ್ಟಿದ್ದು… ಭರತ ಬಿಕ್ಕಿ ಬಿಕ್ಕಿ ಅತ್ತ. ಕೈಕೇಯಿಯ ಮೇಲೆ ಅವನಿಗೆ ಸಿಟ್ಟು ಬಂತು. ಏನೇ ಆದರೂ ತಾನು ಮಾತ್ರ ಅಣ್ಣನು ಕೂರಬೇಕಾಗಿದ್ದ ಸಿಂಹಾಸನದ ಮೇಲೆ ಕೂರೋದೇ ಇಲ್ಲ ಅಂತ ಹಠ ಹಿಡಿದ.
ಮಂತ್ರಿಗಳು, ಪ್ರಜೆಗಳು ಎಲ್ಲರೂ ಕಂಗಾಲಾಗಿ ಹೋದ್ರು. ರಾಮ ಕಾಡಿಗೆ ಹೋಗಿದಾನೆ. ಭರತ ರಾಜನಾಗೋಲ್ಲ ಅಂತಿದಾನೆ. ಲಕ್ಷ್ಮಣ ಮತ್ತು ಶತ್ರುಘ್ನರು ಅಣ್ಣಂದಿರ ನೆರಳುಗಳಂತೆ ಇರುವವರು. ರಾಜ್ಯಕ್ಕೆ ಇನ್ಯಾರು ಗತಿ!?
ಏನು ಹೇಳಿದರೂ ಭರತ ಕೇಳಲಿಲ್ಲ. ನಾನು ಕಾಡಿಗೆ ಹೋಗಿ ರಾಮನನ್ನು ಕರೆ ತರ್ತೀನಿ ಅಂತ ಪ್ರಮಾಣ ಮಾಡಿಕೊಂಡ. ಆ ಹೊತ್ತಿಗೆ `ಕೆಟ್ಟ ಮೇಲೆ ಬುದ್ಧಿ’ ಅನ್ನೋ ಹಾಗೆ ಕೈಕೇಯಿಗೂ ಬುದ್ಧಿ ಬಂದಿತ್ತು. ತಾನೂ ಜೊತೆಯಲ್ಲಿ ಬಂದು ರಾಮನ ಕ್ಷಮೆ ಕೇಳ್ತೀನಿ ಅಂತ ಹೇಳಿದಳು. ಅವಳೊಂದಿಗೆ ಕೌಸಲ್ಯಾ, ಸುಮಿತ್ರೆಯರೂ ಹೊರಟರು. ಮಂತ್ರಿಯೂ ಹೊರಟ. ಕೊನೆಗೆ ರಾಜನ ಸೇನೆಯೂ, ಕೆಲವು ಪ್ರಜೆಗಳೂ ಭರತನ ಜೊತೆ ಹೊರಟರು. ಅವರೆಲ್ಲ ರಾಮನನ್ನು ಕರೆದುಕೊಂಡು ಬರುವುದಾಗಿ ಪಣ ತೊಟ್ಟಿದ್ದರು.

ಈ ವೇಳೆಗೆ ರಾಮ, ಸೀತೆ, ಲಕ್ಷ್ಮಣರು ಚಿತ್ರಕೂಟ ಅನ್ನುವ ಪ್ರದೇಶದಲ್ಲಿದ್ದರು. ದೂರದಿಂದ ಭರತನ ಪರಿವಾರವನ್ನು ನೋಡಿದ ಲಕ್ಷ್ಮಣ, ಅವನು ತಮ್ಮ ಮೇಲೆ ಏರಿ ಬಂದಿದ್ದಾನೆ ಎಂದು ತಿಳಿದ. ಆದರೆ, ರಾಮನಿಗೆ ಭರತನ ಗುಣ ಗೊತ್ತಿತ್ತು. ಅವನು ತಮ್ಮನನ್ನು ಸಮಾಧಾನಪಡಿಸಿದ. ಭರತನ ಪರಿವಾರದವರೆಲ್ಲ ಚಿತ್ರಕೂಟಕ್ಕೆ ಬಂದರು. ರಾಮನನ್ನು ಕಂಡ ಕೂಡಲೇ ಭರತ, ದುಃಖ ಮಿತಿ ಮೀರಿ ಮೂರ್ಛೆ ಹೋದ! ತಮ್ಮನನ್ನು ಬಹಳ ಪ್ರೀತಿಸ್ತಿದ್ದ ರಾಮ, ಅವನನ್ನ ತೊಡೆಯ ಮೇಲೆ ಮಲಗಿಸ್ಕೊಂಡು ಉಪಚಾರ ಮಾಡಿದ. ಅಣ್ಣ-ತಮ್ಮಂದಿರ ಬಾಂಧವ್ಯ ನೋಡುತ್ತ ನಿಂತಿದ್ದ ಎಲ್ಲರ ಕಣ್ಣಲ್ಲೂ ನೀರು ಸುರೀತಿತ್ತು. ಭರತ ಎಚ್ಚರಗೊಂಡ. ರಾಮನ ಕಾಲಿಗೆ ಅಡ್ಡ ಬಿದ್ದ. ರಾಮನೂ ತನ್ನ ತಾಯಿ ಕೌಸಲ್ಯಗೆ, ಸುಮಿತ್ರೆ-ಕೈಕೇಯಿಯರಿಗೆ ನಮಸ್ಕಾರ ಮಾಡಿದ. ಅವನಿಗೆ ಕೈಕೇಯಿ ಮೇಲೆ ಸ್ವಲ್ಪವೂ ಬೇಸರವಿರಲಿಲ್ಲ. ರಾಮನ ಉದಾರಗುಣ ಕಂಡು ಎಲ್ಲರ ಮನಸ್ಸು ತುಂಬಿ ಬಂತು.
ಸ್ವಲ್ಪ ಸುಧಾರಿಸಿಕೊಂಡ ಭರತ, ಅಣ್ಣನಿಗೆ ಮರಳಿ ಬರುವ ಹಾಗೆ ಬೇಡಿಕೊಳ್ಳಲು ತೊಡಗಿದ. ರಾಮ ಒಪ್ಪಲಿಲ್ಲ. ತನ್ನ ಜೀವ ತೆಗೆದುಕೊಳ್ಳುತ್ತೇನೆಂದು ಭರತ ಬೆದರಿಕೆ ಹಾಕಿದರೂ ರಾಮ ಮನಸ್ಸು ಮಾಡಲಿಲ್ಲ. ತಂದೆಯ ಮಾತಿಗೆ ತಪ್ಪಿ ನಡೆಯುವುದು ಪಾಪ ಎಂದು ಹೇಳಿದ. ತಾನು ಯಾವತ್ತಿಗೂ ಮಾತಿಗೆ ತಪ್ಪುವುದಿಲ್ಲ ಎಂದು ಬಿಟ್ಟ.
ಭರತನ ಪರಿವಾರಕ್ಕೆ ನಿರಾಶೆಯಾಯ್ತು, ಯಾರ ಮಾತಿಗೂ ರಾಮ ಬಗ್ಗಲಿಲ್ಲ. ಕೊನೆಗೆ ಭರತ, ತಾನೂ ಅಲ್ಲೇ ರಾಮನ ಜೊತೆ ಇದ್ದು ಬಿಡುವುದಾಗಿ ಹೇಳಿದ. ಬರುವಾಗಲೇ ಸರಳ ಉಡುಗೆಯಲ್ಲಿ ಬಂದಿದ್ದ ಭರತ ಮೊದಲಿಂದಲೂ ಹಾಗೆ ನಿಶ್ಚಯ ಮಾಡಿಕೊಂಡಿದ್ದ. ಅಣ್ಣ ಕಾಡಿನಲ್ಲಿ ಇರುವಾಗ ತಾನು ಹೇಗೆ ಸುಖ ಅನುಭವಿಸುವುದು? ಅನ್ನೋದು ಭರತನ ಪ್ರಶ್ನೆ. ಅಷ್ಟೊಂದು ಪ್ರೀತಿ ಅವನಿಗೆ ಅಣ್ಣನ ಮೇಲೆ, ಆದರೇನು ಮಾಡುವುದು? ರಾಮನ ನಿಶ್ಚಯವೂ ನಿಶ್ಚಯವೇ. ರಾಜನಿಲ್ಲದ ರಾಜ್ಯದಲ್ಲಿ ಶತ್ರುಗಳು ಹಾವಳಿ ನಡೆಸುತ್ತಾರೆ ಎಂದು ತಮ್ಮನಿಗೆ ಬುದ್ಧಿ ಹೇಳಿದ. ಮರಳಿ ಹೋಗಿ ರಾಜ್ಯಭಾರ ಮಾಡಬೇಕೆಂದು ಭರತನಿಗೆ ಆದೇಶ ನೀಡಿದ. ಅಣ್ಣನ ಆಜ್ಞೆಯನ್ನು ಭರತ ಯಾವತ್ತೂ ಮೀರಿದವನಲ್ಲ. ಬೇರೆ ಉಪಾಯ ತೋರದೆ ಅದಕ್ಕೆ ಒಪ್ಪಿಕೊಂಡ. ಆದರೆ ತಾನು ಅಣ್ಣನ ಪ್ರತಿನಿಧಿಯಾಗಿ ರಾಜ್ಯಭಾರ ಮಾಡುವುದಾಗಿಯೂ, ವನವಾಸ ಮುಗಿದ ಮೇಲೆ ರಾಮನೇ ರಾಜನಾಗಬೇಕೆಂದೂ ಕರಾರು ಹಾಕಿದ, ರಾಮ, ಅದಕ್ಕೆ ಸಮ್ಮತಿ ಕೊಟ್ಟ.

ಅಣ್ಣನ ಮೇಲಿನ ಗೌರವದಿಂದ ಭರತ, ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ನಡೆದ. ಅವನ್ನೇ ಸಿಂಹಾಸನದ ಮೇಲೆ ಇರಿಸಿ, ತಾನು ರಾಮನ ಪಾದಸೇವಕನಂತೆ ಆಡಳಿತ ನಡೆಸಿದ. ರಾಮ ವನವಾಸ ಮುಗಿಸಿ ಬಂದ ಮೇಲೆ ರಾಮನ ಪಟ್ಟಾಭಿಷೇಕವಾಗಿ ಅವನೇ ರಾಜನಾದ.






Leave a Reply