ಜಾತಸ್ಯ ಮರಣಂ ಧ್ರುವಂ

– ಶಶಿಕಲಾ ಶ್ರೀಧರ್‌

ಶ್ರೀರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗಾಗಿ ಅಯೋಧ್ಯೆಯನ್ನು ತೊರೆದು ಅರಣ್ಯಕ್ಕೆ ತೆರಳಿ ಚಿತ್ರಕೂಟದಲ್ಲಿ ಸೀತೆ ಲಕ್ಷ್ಮಣರೊಡನೆ ವಾಸಿಸುತ್ತಿದ್ದಾಗ ಭ್ರಾತೃ ಶ್ರೇಷ್ಠನೂ, ಭಕ್ತಿ ಭರಿತನೂ ಆದ ಭರತ ತನಗೆ ರಾಜ್ಯ ಅನಾಯಾಸವಾಗಿ ಲಭಿಸಿದ್ದರೂ ಅದರ ಬಗ್ಗೆ ವ್ಯಾಮೋಹವಿರದೆ ತಂದೆಯ ಕಾಲಾನಂತರ ರಾಜ್ಯ ನ್ಯಾಯವಾಗಿ, ಧರ್ಮಸಮ್ಮತವಾಗಿ ಸೇರಬೇಕಾದುದು ಹಿರಿಯ ಮಗನಿಗೇ ಎಂದು ದೃಢ ನಿರ್ಧಾರದಿಂದ ಕೂಡಿ ರಾಮನನ್ನು ಅಯೋಧ್ಯೆಗೆ ಕರೆದೊಯ್ಯಲು ಚಿತ್ರಕೂಟಕ್ಕೆ ಬರುತ್ತಾನೆ.

ಆಗ ಪಿತೃವಾಕ್ಯ ಪರಿಪಾಲಕನೂ, ದೃಢ ಮನಸ್ಕನೂ, ಧೀರನೂ ಆದ ಪುರುಷೋತ್ತಮ ಶ್ರೀರಾಮಚಂದ್ರ ತಮ್ಮ ಭರತನನ್ನು ಸಂತೈಸುತ್ತಾ ತಂದೆಯ ಆಜ್ಞೆಯನ್ನು ಉಲ್ಲಂಘಿಸುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಾ ಭರತನನ್ನು ಕುರಿತು ಬಾಳಿನ ಅನಿತ್ಯತೆಯನ್ನು ಅತ್ಯಂತ ಸುಂದರವಾಗಿ ಹೀಗೆ ಪ್ರತಿಪಾದಿಸುತ್ತಾನೆ:

‘ಮಗು ಭರತ, ಯಾರ ಕಷ್ಟಕ್ಕೂ ಯಾರೂ ಕಾರಣರಲ್ಲ. ಅವರವರ ಕರ್ಮಾನುಸಾರವಾಗಿ ಅವರವರಿಗೆ ಸುಖ ದುಃಖಗಳು ಬರುತ್ತವೆ. ಪ್ರಪಂಚದಲ್ಲಿ ಹುಟ್ಟಿದ ಮಾನವನೆಂದಿಗೂ ಸ್ವತಂತ್ರನಲ್ಲ; ಕಾಲ ಪುರುಷನು ಮನುಷ್ಯನ ಸುಕರ್ಮ ಹಾಗೂ ದುಷ್ಕರ್ಮಗಳಿಗನುಸಾರವಾಗಿ ಒಂದು ದೇಹದಿಂದ ಮತ್ತೊಂದು ದೇಹಕ್ಕೂ ಒಂದು ಲೋಕದಿಂದ ಮತ್ತೊಂದು ಲೋಕಕ್ಕೂ ಸೆಳೆದಾಡುತ್ತಿರುತ್ತಾನೆ.

ಎಷ್ಟೇ ಐಶ್ವರ್ಯವನ್ನು ಸಂಪಾದಿಸಿದರೂ ಅದು ಕಡೆಗೆ ವಿನಾಶದಲ್ಲಿಯೇ ಕೊನೆಗೊಳ್ಳುತ್ತದೆ. ಪರಸ್ಪರ ಸೇರುವಿಕೆಯು ವಿಯೋಗದಲ್ಲಿಯೇ ಪರ್ಯವಸಾನ ಹೊಂದುತ್ತದೆ. ಉಚ್ಫ್ರಾಯ ಸ್ಥಿತಿಯು ಪತನದಲ್ಲಿಯೇ ಕೊನೆಗಾಣುತ್ತದೆ. ಹಾಗೆಯೇ ಜೀವಿತಕ್ಕೆ ಸಾವೇ ಪರ್ಯವಸಾನ.

ಐಶ್ವರ್ಯ:

ಅತುಲೈಶ್ವರ್ಯವನ್ನು ಸಂಪಾದಿಸಿದರೂ ಆ ಐಶ್ವರ್ಯವು ಕ್ಷಣದಲ್ಲಿಯೇ ಕೊನೆಗೊಳ್ಳುತ್ತದೆ. ರಾಜನೋ ಚೋರನೋ ಅಥವಾ ಅಗ್ನಿಯೋ ಈ ಐಶ್ವರ್ಯವನ್ನು ಅಪಹರಿಸಿಬಿಡುತ್ತಾರೆ. ಅಥವಾ ದುಂದು ವೆಚ್ಚ ಮಾಡುವ ಮಗನೊಬ್ಬನಿದ್ದರೇ ಸಾಕು. ಸಕಲೈಶ್ವರ್ಯವನ್ನು ದುರ್ಮಾರ್ಗದಲ್ಲಿ ಕಳೆದು ಬಿಡುತ್ತಾನೆ. ಆದುದರಿಂದ ಐಶ್ವರ್ಯವು ಕ್ಷಯದಲ್ಲಿಯೇ ಪರ್ಯವಸಾನ ಹೊಂದುವುದೆಂಬುದು ನಿಶ್ಚಯ. ಇದನ್ನರಿತ ಧೀಮಂತನು ಅದಕ್ಕಾಗಿ ದುಃಖಿಸುವುದಿಲ್ಲ.

ಅಧಿಕಾರ:

ಇಂದು ಒಂದು ದೊಡ್ಡ ಹುದ್ದೆಯಲ್ಲಿ ದೊಡ್ಡ ಅಧಿಕಾರಿಯಾಗಿರುವವನು ಜೀವನ ಪರ್ಯಂತ ಅದರಲ್ಲೇ ಇರಲು ಸಾಧ್ಯವಿಲ್ಲ. ಒಂದು ದಿನ ಆ ಪದವಿಯನ್ನು ತೊರೆದು ಕೆಳಗಿಳಿಯಲೇಬೇಕು. ಹೀಗೆ ಉನ್ನತಿ ಅವನತಿ ಎರಡೂ ಪ್ರಕೃತಿಯ ಸಹಜ ನಿಯಮವೇ ಆಗಿರುವುದೆಂಬುದನ್ನು ಅರಿತ ಧೀಮಂತನು ಅದಕ್ಕಾಗಿ ದುಃಖಿಸುವುದಿಲ್ಲ.

ಸಂಯೋಗ- ವಿಯೋಗ:

ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಪತಿ ಪತ್ನಿ ಇಂತಹ ಸಂಬಂಧವನ್ನು ಇಟ್ಟುಕೊಂಡು ಒಂದೆಡೆ ನೆಲೆಸಿರುತ್ತೇವೆ. ಈ ‘ಸೇರುವಿಕೆʼಯ ಜೊತೆಯಲ್ಲೇ ‘ಅಗಲಿಕೆ’ ಇದ್ದೇ ಇರುತ್ತದೆ. ಈ ಸಂಬಂಧಗಳು ಶಾಶ್ವತವಲ್ಲ. ಕಾಲನು ಬಂದು ಕರೆದಾಗ ಈ ಎಲ್ಲ ಆತ್ಮೀಯ ಸಂಬಂಧಗಳನ್ನು ಬಿಟ್ಟು ಹೊರಡಲೇಬೇಕು. ಇವರಾರೂ ನಮ್ಮೊಡನೆ ಬರುವುದು ಸಾಧ್ಯವಿಲ್ಲ. ಹೀಗೆ ಸೇರುವಿಕೆ ಅಗಲಿಕೆಯಲ್ಲೇ ಪರ್ಯವಸಾನ ಹೊಂದುವುದೆಂಬ ಸಿದ್ಧಾಂತವನ್ನು ಅರಿತವರಾರೂ ದುಃಖಿಸುವುದಿಲ್ಲ.

ಜೀವನ – ಮರಣ:

ಹುಟ್ಟಿದೊಡನೆಯೇ ಸಾವೆಂಬುದು ನಮ್ಮ ಬೆನ್ನ ಹಿಂದೆಯೇ ಬಂದಿರುತ್ತದೆ. ಸುತ್ತಮುತ್ತಲೂ ಪ್ರತಿ ದಿನವೂ ಅನೇಕ ಸಾವು ನೋವುಗಳನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದರೂ ನಮಗೆ ಆ ಸ್ಥಿತಿ ಬರುವುದೇ ಇಲ್ಲ. ಎಂಬಂತೆ ನಮ್ಮ ಸಮಾನರಿಲ್ಲ ಎಂದು ಮೆರೆಯುತ್ತೇವೆ. ಆದರೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇಂದು ಅವನು ನಾಳೆ ನಾನು ಎಂಬಂತೆ ನಮ್ಮ ಸರದಿಯು ಬರುತ್ತಲೇ ಓಡಲೇಬೇಕು. ಇಂದು ದೈವ ನಿಯಮ, ಇದರಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.”

ಶ್ರೀರಾಮಚಂದ್ರನು ಮುಂದುವರಿಸುತ್ತಾ ಜೀವನದ ಅನಿತ್ಯತೆ ಮರಣದ ಅನಿವಾರ್ಯತೆಯ ಬಗ್ಗೆ ಅನೇಕ ಸುಂದರವಾದ ಉಪಮಾನಗಳೊಡನೆ ತನ್ನ ತಮ್ಮನಾದ ಭರತನಿಗೆ ವಿವರಿಸುತ್ತಾನೆ:

ಯಾವ ರೀತಿಯಲ್ಲಿ ಮಾಗಿದ ಹಣ್ಣಿಗೆ ಬಿದ್ದು ಹೋಗುವ ಭಯದ ಹೊರತಾಗಿ ಬೇರಾವ ಭಯವೂ ಇರುವುದಿಲ್ಲವೋ ಅದೇ ರೀತಿ ಹುಟ್ಟಿದ ಮನುಷ್ಯನಿಗೆ ಮರಣದ ಹೊರತಾಗಿ ಬೇರಾವ ಭಯವೂ ಇರುವುದಿಲ್ಲ.

ದೃಢವಾದ ಕಂಬಗಳಿಂದ ಕೂಡಿರುವ ವಿಶಾಲವಾದ ಮಹಾಸೌಧವು ಕಾಲಕ್ರಮದಲ್ಲಿ ಹೇಗೆ ಜೀರ್ಣವಾಗಿ ವಿನಾಶ ಹೊಂದುವುದೋ ಹಾಗೆಯೇ ಮನುಷ್ಯನು ಕೂಡ ಜರಾ ಮರಣಗಳಿಗೆ ಅಧೀನನಾಗಿ ಕಾಲಕ್ರಮದಲ್ಲಿ ವಿನಾಶಹೊಂದುತ್ತಾನೆ.

ಜಲಪೂರ್ಣವಾದ ಯಮುನಾ ನದಿಯು ಜಲರಾಶಿಯಿಂದ ಕೂಡಿರುವ ಸಮುದ್ರದ ಕಡೆಗೆ ಹರಿಯುತ್ತಲೇ ಇರುತ್ತದೆ. ಮುಂದೆ ಹರಿವ ಅದು ಹೇಗೆ ಹಿಂದಿರುಗಿ ಬರಲಾರದೋ ಅದೇ ರೀತಿ ಕಾಲನ ಕಡೆಗೆ ಧಾವಿಸುತ್ತಲೇ ಇರುವ ಮಾನವ ಹಿಂದಿರುಗಿ ಬರಲಾರ.

ಬೇಸಿಗೆಯ ಕಾಲದಲ್ಲಿ ಸೂರ್ಯನ ಪ್ರಖರ ಕಿರಣಗಳು ಭೂಮಿಯ ಮೇಲಿರುವ ನೀರನ್ನು ಹೀರಿಕೊಳ್ಳುವಂತೆ ಕಾಲ ಪುರುಷನು ಸರ್ವ ಪ್ರಾಣಿಗಳ ಆಯುಷ್ಯವನ್ನು ಬೇಗ ಬೇಗ ಹೀರಿಕೊಳ್ಳುತ್ತಿರುತ್ತಾನೆ.

ಕಳೆದು ಹೋದ ರಾತ್ರಿಯು ಹಿಂದಿರುಗುವುದಿಲ್ಲ. ಹುಟ್ಟು ಸಾವುಗಳು ಪ್ರತಿಯೊಂದು ಪ್ರಾಣಿಗೂ ಅನಿವಾರ್ಯ. ಒಬ್ಬನು ಒಂದೆಡೆ ನಿಂತಿದ್ದರೂ ಸರಿಯೇ ಸಂಚರಿಸುತ್ತಿದ್ದರೂ ಸರಿಯೇ ಅವನ ಆಯಸ್ಸು ಮಾತ್ರ ಕಣಕ್ಷಣಕ್ಕೂ ಕಡಮೆಯಾಗುತ್ತಲೇ ಇರುತ್ತದೆ.

ಹುಟ್ಟಿದೊಡನೆಯೇ ಮೃತ್ಯು ನಮ್ಮ ಜೊತೆಗೂಡುತ್ತದೆ.

ನಮ್ಮೊಡನೆಯೇ ಸಂಚರಿಸುತ್ತದೆ. ನಾವು ಕುಳಿತಲ್ಲಿಯೇ ಕುಳಿತುಕೊಳ್ಳುತ್ತದೆ. ಹೀಗೆ ಯಾವಾಗಲೂ ನಮ್ಮೊಡನೆಯೇ ಇರುವ ಮೃತ್ಯು ಸುದೀರ್ಘವಾದ ನಮ್ಮ ಜೀವನದ ಹಾದಿಯಲ್ಲಿ ನಮ್ಮೊಡನೆಯೇ ನಡೆದಾಡುತ್ತಾ ಕಡೆಗೊಂದು ದಿನ ನಮ್ಮನ್ನು ಕರೆದುಕೊಂಡೇ ಹೋಗುತ್ತದೆ.

ವಯಸ್ಸು ಕಳೆಯುತ್ತಲೇ ಮುದಿತನ ಪ್ರಾಪ್ತವಾಗಿ ಶರೀರದ ಚರ್ಮಗಳೆಲ್ಲ ಒಣಗಿ ಸುಕ್ಕಾಗಿ, ತಲೆಗೂದಲು ಬಿಳುಪಾಗಿ, ಮಾನವ ಜೀರ್ಣವಾಗಿ ಹೋಗುತ್ತಾನೆ. ಮೃತ್ಯುವಿನ ಈ ಪ್ರಭಾವದಿಂದ ಮುಕ್ತನಾಗುವುದು ಹೇಗೆ ಎಂಬುದನ್ನು ಚಿಂತಿಸಬೇಕು, ಎನ್ನುತ್ತಾನೆ.

ಸೂರ್ಯನ ಉದಯಾಸ್ತಮಾನಗಳಿಂದ.

ಋತುಗಳ ಪರಿವರ್ತನೆಗಳಿಂದ ಪ್ರಾಣಿಗಳ ಆಯುಷ್ಯದ ಕ್ಷಯವೂ ಆಗುವುದೆಂಬುದನ್ನು ಆಳವಾಗಿ ಪರಿಶೀಲಿಸಬೇಕು. ವಿವೇಕವುಳ್ಳವರು ಈ ಪರಿವರ್ತನೆಯಲ್ಲಿ ಒಂದೊಂದು ದಿವಸವೂ ವ್ಯರ್ಥವಾಯಿತಲ್ಲ ಎಂದು ಚಿಂತೆ ಪಡುತ್ತಾರೆ. ಈ ಪ್ರಪ೦ಚದಲ್ಲಿ ಯಾವ ಪ್ರಾಣಿಯ ಕಾಲಾನುಗುಣವಾಗಿ ಉಂಟಾಗುವ ಮುಪ್ಪು ಸಾವುಗಳನ್ನು ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ. ಸತ್ತು ಹೋದ ವ್ಯಕ್ತಿಗಾಗಿ ಅತಿಯಾಗಿ ಶೋಕಿಸುವವನೂ ಒಂದು ದಿನ ಸಾವನ್ನಪ್ಪಲೇಬೇಕು.

ಜನನ ಮರಣದ ಸತ್ಯ ಹೀಗಿರುವಾಗ ವಿವೇಕಿಯಾದವನು ಆತ್ಮ ಕಲ್ಯಾಣಕ್ಕೆ ಸಾಧನಭೂತವಾದ ಧರ್ಮ ಮಾರ್ಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ನಿಜವಾದ ಸುಖವನ್ನು ಅನುಭವಿಸಲು ಸಾಧ್ಯ. ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತಲೇ ಕಾಲದ ಉಪಾಧಿಗೆ ಒಳಪಡದೇ ಇರುವ ಅಮರವಾದ ಆತ್ಮಜ್ಯೋತಿಯ ಆನಂದದಲ್ಲಿ ಸದಾ ಮಗ್ನನಾಗಿರಲು ಸಾಧ್ಯವಾಗುತ್ತದೆ.

ಸರ್ವತಂತ್ರಸ್ವತಂತ್ರದ, ಚಿನ್ಮಯನಾದ, ಹೃದಯಾಂತರಾಳದಲ್ಲಿರುವ ಪರಮಾತ್ಮನನ್ನು ಒಳಗಣ್ಣಿಂದ ಕಾಣುತ್ತಾ ಆನಂದವನ್ನು ಪಡೆಯಬೇಕು.

ಶ್ರೀರಾಮನಿಂದ ತಾರೆಗೆ ಉಪದೇಶ:

ವಾಲಿಯ ವಧೆಯ ಅನಂತರ ತಾರೆ ಪತಿಯನ್ನು ಕಳೆದುಕೊಂಡು ಶೋಕದಲ್ಲಿ ಬಹಳವಾಗಿ ರೋದಿಸುತ್ತಿದ್ದಾಗ ಶ್ರೀರಾಮ ಅವಳಿಗೆ ಈ ರೀತಿ ಸಾಂತ್ವನ ಮಾಡುತ್ತಾನೆ.

“ಲೋಕದಲ್ಲಿ ವಿಧಿ ಎಂಬುದೇ ಎಲ್ಲಕ್ಕೂ ಕಾರಣವಾಗಿರುತ್ತದೆ. ಯಾವ ಮನುಷ್ಯನೂ ಸ್ವತಂತ್ರವಾಗಿ ಯಾವ ಕೆಲಸವನ್ನೂ ಮಾಡಲಾರನು. ಕಾಲ ಸ್ವರೂಪನಾದ ಭಗವಂತನು ಮಾಡಿರುವ ಜನನ-ಮರಣ ರೂಪವಾದ ಕಾಲದ ವ್ಯವಸ್ಥೆಯನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಕಾಲನಿಗೆ ಯಾರಲ್ಲಿಯೂ ಬಂಧುತ್ವವಿಲ್ಲ, ಅವನು ಯಾರನ್ನೂ ಪಕ್ಷಪಾತದಿಂದ ಕಾಣುವುದಿಲ್ಲ.

ಕಾಲನು ಯಾವುದಕ್ಕೂ ಕಾರಣವನ್ನು ಕೊಡತಕ್ಕವನಲ್ಲ. ಅವನ ಕಾರ್ಯಗಳನ್ನು ಕಾರಣಗಳನ್ನು ಸಮರ್ಥಿಸುವುದಕ್ಕೆ ಆಗುವುದಿಲ್ಲ. ಬ್ರಹ್ಮಾಂಡವನ್ನೇ ನಿಯಂತ್ರಿಸುವ ಈ ಕಾಲನ ಇಚ್ಛಾಮಾತ್ರದಿಂದಲೇ ಎಲ್ಲವೂ ನಡೆಯುತ್ತಿರುತ್ತದೆ. ಅವನು ಯಾವೊಬ್ಬನ ವಶದಲ್ಲಿಯೂ ಇರತಕ್ಕವನಲ್ಲ. ಜೀವಿಗಳೆಲ್ಲರೂ ಅವನ ವಶದಲ್ಲಿ ಇರತಕ್ಕವರು.”

ವಾಲ್ಮೀಕಿ ರಾಮಾಯಣದಲ್ಲಿ ಬರುವ ಶ್ರೀರಾಮನ ಮಧುರ ವಚನಗಳೆಲ್ಲವೂ ಉಪನಿಷತ್ತುಗಳ ಸಾರವೇ ಆಗಿದೆ. ಉಪನಿಷತ್ತಿನ ಋಷಿಗಳು ಮೃತ್ಯುವಿಗೆ ಅಂಜಿದವರೇ ಅಲ್ಲ. ಕಠೋಪನಿಷತ್ತಿನಲ್ಲಿ ಬಾಲಕ ನಚಿಕೇತ ಯಮ ಧರ್ಮರಾಯನಿಂದ ಮೂರು ವರಗಳನ್ನು ಪಡೆದಾಗ ಮೂರನೆಯ ವರವಾಗಿ ಮೃತ್ಯುವಿನ ಪಾಶದಿಂದ ಪಾರಾಗುವುದೇ ಹೇಗೆ೦ದು ಕೇಳಿದಾಗ ಧರ್ಮದೇವತೆ ಮೇಲೆ ವಿವರಿಸಿದ ಎಲ್ಲ ವಿಚಾರಗಳನ್ನು ನಚೀಕೇತನಿಗೆ ತಿಳಿಸಿ ಬ್ರಹ್ಮಜ್ಞಾನವನ್ನು ಕರುಣಿಸುತ್ತಾನೆ.

ಹೀಗೆ ಉಪನಿಷತ್ತಿನ ಋಷಿಗಳು ಎಲ್ಲಕ್ಕೂ ಮೀರಿದ ʼಆನಂದ’ದ ಅನುಭವವನ್ನು ಪಡೆದವರು. ಆನಂದವೇ ಬ್ರಹ್ಮ. ಆನಂದದಿಂದಲೇ ಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದ ಪ್ರಾಣಿಗಳು ಆನಂದದಿಂದ ಜೀವಿಸಿರುತ್ತವೆ ಮತ್ತು ಕೊನೆಗೆ ಆನಂದವನ್ನೇ ಪ್ರವೇಶಿಸುತ್ತವೆ. ಈ ಸೃಷ್ಟಿ ಎಲ್ಲವೂ ಆ ಭಗವಂತನ ಆಟ, ಅವನ ಲೀಲೆ, ಎಂದು ಉಪನಿಷದ್ವಾಣಿ ಘಂಟಾಘೋಷವಾಗಿ ಸಾರುತ್ತಿದೆ.

ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶ:

ಮುಂದೆ ದ್ವಾಪರ ಯುಗದಲಿ ಶ್ರೀರಾಮನು ಶ್ರೀಕೃಷ್ಣನಾಗಿ ಅವತರಿಸಿದಾಗ ಈ ಎಲ್ಲ ಉಪನಿಷತ್ತುಗಳ ಸಾರವನ್ನು ಅರ್ಜುನನಿಗೆ ಉಪದೇಶಿಸುತ್ತಾ –

ಜಾತಸ್ಯಹಿ ಧ್ರುವೋ ಮೃತ್ಯುಃ

 ಧ್ರುವಂ ಜನ್ನ ಮೃತಸ್ಯಚ ||

ತಸ್ಮಾದ ಪರಿಹಾರ್ಯೇಽರ್ಥೇ

ನತ್ವಂ ಶೋಚಿತುಮರ್ಹಸಿ ||

ಈ ಚಕ್ರದಿಂದ ಬಿಡುಗಡೆ ಹೇಗೆ?

ಜನನದಿಂದ ಮರಣ, ಮರಣದಿಂದ ಪುನಃ ಜನನ ಎಂಬುದು ಅನಿವಾರ್ಯವಾದಾಗ  ವಿವೇಕಿಯಾದವನು ಈ ಪರಿಹರಿಸಲಾಗದ ವಿಷಯಕ್ಕೆ ಶೋಕಿಸಬಾರದು. ಮಾನವ ಜೀವನ ವಿಷಯಕ್ಕೆ ಶೋಕಿಸಬಾರದು. ಮಾನವ ಜೀವನ ಎಂಬುದು ನೀರಿನ ಮೇಲೆ ಹರಿವ ಗುಳ್ಳೆಯಂತೆ. ಅದು ಏಳುವುದಕ್ಕೆ ಮುಂಚೆ ಇರಲಿಲ್ಲ.

ಒಡೆದ ಮೇಲೆ ಇರುವುದಿಲ್ಲ. ಎಲ್ಲೋ ಕೆಲವು ಮಾರು ದೂರ ಹರಿದುಕೊಂಡು ಹೋಗುವಾಗ ಸುತ್ತ ಮುತ್ತಲಿನ ಗುಳ್ಳೆಗಳೊಡನೆ ಪುತ್ರ ಮಿತ್ರ ಶತ್ರು ಪತಿ ಪತ್ನಿ ಎಂಬ ಸಂಬಂಧಗಳನ್ನು ಕಲ್ಪಿಸಿಕೊಂಡು, ಅಳು-ನಗು ನೋವು-ನಲಿವು, ಸುಖ-ದುಃಖ ಇವುಗಳ ಚಕ್ರಕ್ಕೆ ಸಿಲುಕಿಕೊಂಡು ಪರಿತಾಪ ಪಡುತ್ತದೆ.

ಆದ್ದರಿಂದ ನಾವು ಎಚ್ಚೆತ್ತುಕೊಳ್ಳಬೇಕು. ಈ ಎಲ್ಲ ಬಂಧನಗಳಿಂದ ಬಿಡಿಸಿಕೊಂಡು, ನಿಶ್ಚಲ ಬುದ್ಧಿ ಮನಸ್ಸುಗಳಿಂದ ಮರಳಿ ಭಗವದ್ಧಾಮಕ್ಕೆ ಹಿಂದಿರುಗಬೇಕು ಮತ್ತು ಇದಕ್ಕಾಗಿ ಗುರಿ ಸೇರಲು, ಸತ್ಯದ ಅರಿವನ್ನು ಪಡೆಯಲು ನಿರಂತರವಾಗಿ ಹೋರಾಡಬೇಕು. ಈ ಪ್ರಯತ್ನದಲ್ಲಿ ಮರಣವನ್ನು ಹೊಂದಿದರೂ ಅದರಲ್ಲಿ ಒಂದು ಸಾರ್ಥಕ್ಯವಿದೆ.

ಹಳೆಯ ವಸ್ತ್ರಗಳನ್ನು ಬಿಟ್ಟು ಹೊಸ ವಸ್ತ್ರಗಳನ್ನು ಧರಿಸುವಂತೆ ಹೊಸ ಹೊಸ ಶರೀರವನ್ನು ಧರಿಸುತ್ತಾ ಪೂರ್ಣತೆಯನ್ನು ಪಡೆಯುವವರೆಗೆ ಧೈರ್ಯವಾಗಿ ಸಾಗಬೇಕು. ಗುರಿ ಸೇರಬೇಕು. ಇದೇ ನಮ್ಮ ಜೀವನದ ಧ್ಯೇಯವಾಗಲಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi