ಜಯಾನಂದ ಪ್ರಭು

ಆಧಾರ: ದ ಬ್ಯೂಟಿಫುಲ್‌ ಲೈಫ್‌ ಆಫ್‌ ಜಯಾನಂದ ಠಾಕುರ- ವಿಶೋಕದಾಸ, ನ್ಯೂವೃಂದಾವನ ಕಮ್ಯುನಿಟಿ, ವೆಸ್ಟ್‌ ವರ್ಜೀನಿಯಾ.

ನೀವು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ;

* ಬಹಳ ಶೀಘ್ರವಾಗಿ ಸಮಚಿತ್ತತೆಯ ಹೊಸ ಸಾಮ್ರಾಜ್ಯವನ್ನು ಹೊಂದುವಿರಿ ಮತ್ತು ನಿಮ್ಮೆಲ್ಲ ಚಟುವಟಿಕೆಗಳ ನಡುವೆಯೂ ಆಂತರಿಕ ಸಂತೋಷವನ್ನು ಪಡೆಯುವಿರಿ.

* ನಿಮ್ಮ ಚಿಂತೆಗಳು ಕಡಿಮೆಯಾಗಿ ಆನಂದ ಹೆಚ್ಚುವುದು.

* ನಿಮ್ಮ ಏಕಾಗ್ರತೆ, ಜ್ಞಾಪಕಶಕ್ತಿ, ಗ್ರಹಣ ಸಾಮರ್ಥ್ಯ ಮತ್ತು ಸೃಜನಶೀಲತೆಗಳು ಹೆಚ್ಚುವವು.

* ನೀವು ಹೆಚ್ಚು ಕುಶಲವಾಗಿ, ಹೆಚ್ಚು ಆತ್ಮ ವಿಶ್ವಾಸದಿಂದ ಮತ್ತು ಸಾಮರ್ಥ್ಯದಿಂದ ಕೆಲಸ ಮಾಡಬಲ್ಲವರಾಗುವಿರಿ. ಜನರೊಂದಿಗಿನ ನಿಮ್ಮ ಸಂಬಂಧವೂ ಉತ್ತಮಗೊಳ್ಳುವುದು.

* ನೀವು ಯಾವ ಪ್ರಯತ್ನಕ್ಕೆ ಕೈ ಹಾಕಿದರೂ ಬಹಳ ಸುಲಭವಾಗಿ ಗೆಲುವು ಸಾಧಿಸುವಿರಿ.

* ಇರುಳಲ್ಲಿ ಬೇಗ ನಿದ್ದೆ ಹತ್ತುವುದು, ಮತ್ತು ಹಗಲಲ್ಲಿ ನೀವು ಏಳುವಾಗ ಬಹಳ ಉಲ್ಲಾಸದಿಂದಿರುವಿರಿ, ಎಂದಿಗಿಂತ ನೀವು ಕಡಮೆ ಅವಧಿ ನಿದ್ರಿಸಿದ್ದರೂ ಉತ್ಸಾಹ ಕುಂದದು. ಜೊತೆಗೆ, ನಿಮ್ಮ ಜೀವನದ ನಿಜಧ್ಯೇಯ ಮತ್ತು ಸೃಷ್ಟಿಯಲ್ಲಿ ನಿಮ್ಮ ಗುರುತರ ಪಾತ್ರವೇನೆಂಬುದು ನಿಮಗೆ ಅರಿವಾಗುವುದು.

ಈ ಮೇಲಿನ ಅಮೂಲ್ಯ ಟಿಪ್ಪಣಿಗಳು “ಕೃಷ್ಣ” ಪುಸ್ತಕ ಕುರಿತಾದದ್ದು. ಇದನ್ನು ಪುಸ್ತಕದ ಮೇಲು ಹೊದಿಕೆಯ ಒಳಪುಟದಲ್ಲಿ ದಾಖಲಿಸಿದ್ದು ಶ್ರೀ ಜಯಾನಂದ ಪ್ರಭುಗಳು.

ಶ್ರೀ ಜಯಾನಂದ ಪ್ರಭುಗಳ ಮೂಲ ಹೆಸರು ಜಿಮ್ ಕೊಹರ್. ಶ್ರೀಲ ಪ್ರಭುಪಾದರಿಂದ ಪ್ರಭಾವಿತರಾಗಿ, ಅಮೇರಿಕದಲ್ಲಿ ಕೃಷ್ಣಪ್ರಜ್ಞಾಂದೋಲನ ಮತ್ತಷ್ಟು ವಿಸ್ತರಿಸುವಂತೆ ಮಾಡಲು ಸಹಾಯಕರಾಗಿ ನಿಂತವರು. ಆಜಾನುಬಾಹು ಶರೀರದ, ಮುಗ್ಧ ಮನಸ್ಸಿನವಿಶಿಷ್ಟ ವ್ಯಕ್ತಿತ್ವ ಜಯಾನಂದ ಪ್ರಭು ಅವರದು.

ತತ್ತ್ವಸಾಗರದ ಆಳದಿಂದೆದ್ದು ಬಂದಂತೆ ಇರುತ್ತಿದ್ದ ಅವರ ಮಾತುಗಳನ್ನು ಕೇಳಲು ಜನ ಹಾತೊರೆಯುತ್ತಿದ್ದರು. ಶ್ರೀಲ ಪ್ರಭುಪಾದರ ಕರುಣೆಯನ್ನು ಸಮರ್ಥವಾಗಿ ಸ್ವೀಕರಿಸಿ, ಇತರರಿಗೆ ಹಂಚುವ ಕಾರ್ಯದಲ್ಲಿ ಅವರು ಯಶಸ್ವಿಯಾದರು.

ಶ್ರೀ ಮದ್ಭಾಗವತದಲ್ಲಿ ಹೇಳಿರುವಂತೆ (3.29.33) – ಕೃಷ್ಣನ ಹೊರತಾಗಿ ಬೇರೆ ಯಾವುದರಲ್ಲೂ ಆಸಕ್ತಿ ಇರದ, ಕೃಷ್ಣನಿಗಾಗಿಯೇ ಪ್ರತಿಯೊಂದು ಕೆಲಸವನ್ನೂ ಜೀವನವನ್ನೂ ಅರ್ಪಿಸುವವನೇ ಅತಿ ಶ್ರೇಷ್ಠ ವ್ಯಕ್ತಿ. ಶ್ರೀ ಜಯಾನಂದ ಪ್ರಭುಗಳ ವಿಷಯದಲ್ಲೂ ಈ ಮಾತು ಅನ್ವಯವಾಗುತ್ತದೆ. ಅವರು ತಮ್ಮದೆಲ್ಲವನ್ನೂ – ತಮ್ಮ ಜೀವನ, ಸಾಮರ್ಥ್ಯ, ಚಟುವಟಿಕೆಗಳು ಎಲ್ಲವನ್ನೂ ಶ್ರೀಕೃಷ್ಣನಿಗಾಗಿ, ಶ್ರೀ ಗುರುವಿಗಾಗಿ ಮುಡುಪಿಟ್ಟಿದ್ದರು. ಕೃಷ್ಣನ ವಿನಾ ಅವರಲ್ಲಿ ಯಾವ ಆಸಕ್ತಿಯೂ ಇರಲೇ ಇಲ್ಲ.

ಶ್ರೀಲ ಭಕ್ತಿ ವಿನೋದ ಠಾಕುರರು ಒಂದೆಡೆ ಬರೆಯುತ್ತಾರೆ – ”ನಾನು ಈ ದೇಹದ ಅನುಕೂಲಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸದಾ ಪವಿತ್ರನಾಮವನ್ನು ನಾನು ಬೋಧಿಸಬೇಕು. ಓಹ್ ಎ೦ದಿಗೆ ಆ ದಿನ ನನ್ನದಾಗುವುದು?’ ಎಂದು. ಜಯಾನಂದ ಪ್ರಭುಗಳೂ ಸದಾ ಇದೇ ಭಾವದಲ್ಲಿ ಇರುತ್ತಿದ್ದರು.

ಅವರೆಂದೂ ತಮ್ಮ ಸವಲತ್ತುಗಳ ಬಗ್ಗೆ ಚಿಂತಿಸುತ್ತಿರಲಿಲ್ಲ. ಶ್ರೀಲ ಪ್ರಭುಪಾದ ಮತ್ತಿತರರ ಸೇವೆ ಮಾಡುವುದು ಮತ್ತು ಪವಿತ್ರ ನಾಮವನ್ನು ಬೋಧಿಸುವುದು, ಅವರ ಆದ್ಯತೆ ಇದ್ದುದು ಇವೆರಡಕ್ಕೆ ಮಾತ್ರ. ಜಯಾನಂದರು ಪ್ರತಿ ರಥಯಾತ್ರೆಯ ಸಂದರ್ಭದಲ್ಲೂ ಆ ಯೋಜನೆಯ ಸಂಪೂರ್ಣ ಜವಾಬ್ದಾರಿ ತಾವೇ ವಹಿಸುತ್ತಿದ್ದರು. ಜೊತೆಗೆ ರಥಗಳನ್ನು ಸಿದ್ಧಪಡಿಸಲು ಸ್ವತಃ ಕಾರ್ಯಪ್ರವೃತ್ತರಾಗುತ್ತಿದ್ದರು, ಅವಿಶ್ರಾಂತವಾಗಿ ದುಡಿಯುತ್ತಿದ್ದರು.

ಅವರ ಗೌರವಾರ್ಥವಾಗಿ ಮತ್ತು ಸ್ಫೂರ್ತಿಗಾಗಿ ಪ್ರತಿಯೊಂದು ಇಸ್ಕಾನ್ ರಥಯಾತ್ರೆ ಸಂದರ್ಭದಲ್ಲೂ ಅವರ ಭಾವಚಿತ್ರವನ್ನು ಇರಿಸಲಾಗುತ್ತದೆ. ಜಯಾನಂದ ಪ್ರಭುಗಳು ಶ್ರೀಲ ಪ್ರಭುಪಾದರ ಜೀವಿತಾವಧಿಯಲ್ಲಿ ಲ್ಯುಕೇಮಿಯಾಕ್ಕೆ ತುತ್ತಾಗಿ ಪರಂಧಾಮಕ್ಕೆ ತೆರಳಿದರು.

ಅವರು 1967ರಲ್ಲಿ ಶ್ರೀಲ ಪ್ರಭುಪಾದರಿಗೆ ತಮ್ಮ ಜೀವಮಾನದ ಉಳಿತಾಯವಾಗಿದ್ದ 5000 ಡಾಲರ್‌ಗಳನ್ನು ಭಗವದ್ಗೀತೆ ಮುದ್ರಣಕ್ಕಾಗಿ ದೇಣಿಗೆಯಾಗಿ ನೀಡಿದ್ದರು. ಪುನಃ ತಮ್ಮ ಅಂತಿಮ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಇರಿಸಿಕೊಂಡಿದ್ದ 5000 ಡಾಲರ್‌ಗಳನ್ನು ಶ್ರೀಲ ಪ್ರಭುಪಾದರಿಗೆ ನೀಡಿದರು. ಪ್ರಭುಪಾದರ ಸೇವೆ ಮಾಡುವುದಕ್ಕಾಗಿ ಅವರು ಸದಾ ಹಾತೊರೆಯುತ್ತಿದ್ದರು.

ಜಯಾನಂದ ಪ್ರಭುಗಳು ದೇಹತ್ಯಾಗ ಮಾಡಿದ ಅನಂತರ ಶ್ರೀಲ ಪ್ರಭುಪಾದರು ಬರೆದ ಪತ್ರದಲ್ಲಿ ಕೃಷ್ಣನಿಗೆ ವಿವಿಧ ರೀತಿಯಿಂದ ಸೇವೆ ಸಲಿಸಿರುವುದಕ್ಕಾಗಿ ಮತ್ತು ಅಂತಿಮ ಕ್ಷಣಗಳಲ್ಲಿ ಕೃಷ್ಣನನ್ನು ನೆನೆದುದಕ್ಕಾಗಿ, ನಿನಗೆ ನೇರವಾಗಿ ಕೃಷ್ಣಲೋಕದ ಸಾಂಗತ್ಯ ದೊರೆಯಲಿದೆ” ಎಂದು ಹೇಳಿದ್ದರು. ಪ್ರಭುಪಾದರಿಂದ ಈ ಬಗೆಯ ಪ್ರಮಾಣ ಪತ್ರ ಪಡೆದವರು ಅವರೊಬ್ಬರೇ, ಇದು ಜಯಾನಂದ ಪ್ರಭುಗಳ ಭಕ್ತಿ ಸೇವೆ, ಗುರುವಿನೆಡೆಗಿನ ಶ್ರದ್ಧೆಗಳಿಗೊಂದು ನಿದರ್ಶನವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi