– ಆಂಗ್ಲಮೂಲ: ಸದಾಪೂತ ದಾಸ, ಅನುವಾದ: ಭೂಮಿಪುತ್ರ
‘ಜೀವ ಎಂದರೆ ಮತ್ತೇನಲ್ಲ ಅದೊಂದು ಜೀವ ರಾಸಾಯನಿಕ ಪ್ರಕ್ರಿಯೆ ಅಷ್ಟೆ’ ಎಂದು ತುಂಬ ವರ್ಷಗಳಿಂದ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ.

ಜೀವಿಗಳ ಪ್ರತಿರೂಪಗಳನ್ನು ಕಂಪ್ಯೂಟರಿನಲ್ಲಿ ಮೂಡಿಸಿ ವಿಜ್ಞಾನಿಗಳು ಅವಶ್ಯ ಚಲನಾಶಕ್ತಿಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮನುಷ್ಯನ ಪ್ರಜ್ಞೆಯೂ ಅದರಲ್ಲಿ ಸೇರಿಕೊಳ್ಳುವಂತೆ ಮಾಡಿದ್ದಾರೆ. ಇದು ಸಾಧ್ಯವಾಗಿದೆ ಎಂದಮೇಲೆ, ನಮ್ಮಲ್ಲಿ ಅಂತರ್ಗತವಾಗಿರುವ ಪ್ರಜ್ಞೆಯೂ ಈ ಭೌತಿಕ ಪ್ರಪಂಚದಾಚಿನ ಬೇರೊಂದು ಅಧ್ಯಾತ್ಮಪ್ರಜ್ಞೆಯೊಂದಿಗೆ ಬೆಸುಗೆಯಾಗಿರಬಾರದೇಕೆ?
ಈ ಮಾತು ನಿಜವೇ ಆಗಿದ್ದರೆ ಏನೆಲ್ಲ ದ್ರವ್ಯಗಳಲ್ಲಿ ಜೀವ ಮೈದಳೆಯಲು ಸಾಧ್ಯವಾಗಬೇಕು. ಅದರಲ್ಲೂ ನಿರ್ದಿಷ್ಟವಾಗಿ, ಕಂಪ್ಯೂಟರಿನಲ್ಲಿ ಕಾಣುವ ಎಲೆಕ್ಟ್ರಾನಿಕ್ ಚಿತ್ರಣಗಳೂ ಜೀವ ತಳೆಯಲು ಸಾಧ್ಯವಾಗಬೇಕು.
‘ಸಾಧ್ಯವಾಗಲಿದೆ, ಅಂಥ ಕಂಪ್ಯೂಟರ್ ಆಧಾರಿತ ಕೃತಕ ಜೀವರೂಪಗಳು ಈಗಾಗಲೇ ಅವತರಿಸಿವೆ’ ಎಂದು ತಜ್ಞರು ಹೇಳುತ್ತಾರೆ. ಮುಂದೊಂದು ದಿನ ಅದೇ ಜಗತ್ತನ್ನು ಆಳುವಷ್ಟರಮಟ್ಟಿಗೆ ವಿಕಾಸ ಆಗಬಹುದೆಂದೂ ಅವರು ಹೇಳುತ್ತಾರೆ.
ಇವರ ಅಭಿಪ್ರಾಯದ ಪ್ರಕಾರ, ಮನುಷ್ಯ ವಿಕಾಸದ ಮೆಟ್ಟಿಲೇರಿ ಬಂದ ಉದ್ದೇಶವೇ ಅದು. ಸಹಜ ಬುದ್ಧಿಮತ್ತೆಯಿಂದ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿ ಮಾಡುವುದು, ಅದರಿಂದ ಸಿಲಿಕಾನ್ ಆಧಾರಿತ ಜೀವಿಗಳ ಸೃಷ್ಟಿ ಮಾಡುವುದು. ಮುಂದೆ ಆ ಜೀವಿಗಳು ಮನುಷ್ಯರನ್ನು ಆದಿಕಾಲದ ಪೂರ್ವಜರೆಂಬಂತೆ ಕ್ಷುಲ್ಲಕ ದೃಷ್ಟಿಯಿಂದ ನೋಡುವುದು.
ಈಚೆಗೆ ನಡೆದ ಒಂದು ರೊಬೊಟಿಕ್ಸ್ ಸಮ್ಮೇಳನದಲ್ಲಿ ಈ ಸಾಧ್ಯತೆಯ ಕುರಿತು ಚರ್ಚೆ ನಡೆಯಿತು. ಮುಂದಿನ ಜೀವಿಗಳ ವಿಕಾಸದ ಬಗ್ಗೆ ನಾವು ತುಸು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಕೆಲವರು ಸಲಹೆ ಮಾಡಿದರು. ಮಾನವಕೇಂದ್ರಿತ, ಸ್ವಜನ ಪಕ್ಷಪಾತತನವನ್ನು ಮೀರಬೇಕು; ನಮಗಿಂತ ಹೆಚ್ಚು ಸುಧಾರಿಸಿದ ಯಾವುದೇ ಬಗೆಯ ಜೀವಸೃಷ್ಟಿಯ ಉಗಮವಾದರೂ ನಾವದನ್ನು ಸ್ವಾಗತಿಸಬೇಕು ಎಂಬರ್ಥದ ಅಭಿಪ್ರಾಯಗಳು ಮೂಡಿದವು.
ಆದರೆ ಕೆಲವರಿಗೆ ಸಂಶಯ ಮೂಡಿತ್ತು. ಕಂಪ್ಯೂಟರ್‌ನಲ್ಲಿ ಸೃಷ್ಟಿಯಾದ ಯಾವುದೊಂದು ಪೋಗ್ರಾಮನ್ನು ‘ಜೀವಿಗಳು’ ಎಂದು ಪರಿಗಣಿಸಲು ಸಾಧ್ಯವೆ? ಉದಾಹರಣೆಗೆ ಎಂಜಿನಿಯರ್‌ಗಳು ಕಂಪ್ಯೂಟರ್ ಪ್ರೋಗ್ರಾಮ್‌ನ ನೆರವಿನಿಂದ ಒಂದು ಸೇತುವೆಯನ್ನು ತದ್ವತ್ತಾಗಿ ರೂಪಿಸಿ ಅದರ ಮೇಲೆ ವಾಹನಗಳು ಚಲಿಸುವಂತೆ (ಸಿಮ್ಯುಲೇಶನ್ *) ಮಾಡಿದರೆ, ಅದು ನಿಜವಾದ ಸೇತುವೆ ಆಗಿರುವುದಿಲ್ಲ. ಅದೊಂದು ಚಲನಶೀಲ ಚಿತ್ರವಾಗಿರುತ್ತದೆ ಅಷ್ಟೆ.
ಕಂಪ್ಯೂಟರ್ ಪರದೆಯ ಮೇಲೆ ಯಾವುದೇ ಯಂತ್ರ ಅಥವಾ ಜೀವಿಯ ಪ್ರತಿರೂಪವನ್ನು ಸೃಷ್ಟಿಸಿ, ಅದಕ್ಕೆ ಯಥಾವತ್ತಾದ ಚಾಲನೆ ಕೊಡಲು ಸಾಧ್ಯವಿದೆ. ಇದನ್ನೇ ಸಿಮ್ಯುಲೇಶನ್’ ಎನ್ನುತ್ತಾರೆ. ಇದಕ್ಕೆ ‘ಛದ್ಮನ’ ಎಂಬ ಸಮಾನಾರ್ಥವಿದೆ. ಆದರೆ ಅರ್ಥಗ್ರಹಣ ತುಸು ಸುಲಭವಾಗಲೆಂದು ಈ ಲೇಖನದುದ್ದಕ್ಕೂ ಅಂಥ ಪ್ರತಿರೂಪಗಳಿಗೆ ತದ್ರವತ್ ಬಿಂಬ, ತದ್ವತ್ ಕಾಯ, ತದ್ವತ್ ಯಂತ್ರ, ತದ್ವತ್ ಜೀವ ಎಂದು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಲಾಗಿದೆ. ಇಂಥ ಬಿಂಬಗಳಿಗೆ ಚಾಲನಶಕ್ತಿಯೂ ಇರುತ್ತದೆ ಎಂಬುದು ನೆನಪಿನಲ್ಲಿರಬೇಕು. –ಅನುವಾದಕ.
ಸೇತುವೆಯ ನಾನಾ ಮಗ್ಗಲುಗಳನ್ನು ಅದು ತೋರಿಸುತ್ತದೆ. ಹಾಗೆಯೇ ಕಂಪ್ಯೂಟರಿನಲ್ಲಿ ಯಾವುದೊಂದು ಜೀವಿಯ ಪ್ರತಿರೂಪಗಳು ಮೂಡುತ್ತಿದ್ದರೆ, ಅದು ಆ ಜೀವಿಯ ಚಲನಶೀಲ ಚಿತ್ರವಾಗಿರುತ್ತದೆ ಅಷ್ಟೆ. ಜೀವಂತವಾಗಲು ಸಾಧ್ಯವಿಲ್ಲ ಎಂಬ ವಾದವನ್ನು ಮುಂದಿಟ್ಟವರು ದಾರ್ಶನಿಕ ಚಿಂತಕ ಎಲಿಯಟ್ ಸೋಬರ್.
ಕಂಪ್ಯೂಟರ್ ವಿಜ್ಞಾನಿಗಳ ಅಭಿಪ್ರಾಯ ಬೇರೆಯದೇ ಆಗಿತ್ತು. ಎಮ್ ಐ ಟಿಯ ಕಂಪ್ಯೂಟರ್ ತಜ್ಞ ಟೊಮ್ಮಾಸೊ ಟೊಫೋಲಿಯ ಪ್ರಕಾರ, ನೈಜ ಜೀವಕ್ಕೂ ಕಂಪ್ಯೂಟರಿನಲ್ಲಿ ಬಿಂಬರೂಪದಲ್ಲಿ ಚಲಿಸುವ ತದ್ವತ್ ಜೀವಕ್ಕೂ ವ್ಯತ್ಯಾಸವಿಲ್ಲ. ಅದೇ ತದ್ವತ್ ಸೇತುವೆಯ ಮೇಲೆ, ತದ್ವತ್ ಕಾರಿನಲ್ಲಿ ಕೂತು ತದ್ವತ್ ಪ್ರಯಾಣಿಕರು ಸಾಗುತ್ತಿದ್ದಾಗ ಸೇತುವೆ ಕುಸಿದರೆ, ಪ್ರಯಾಣಿಕರೆಲ್ಲ ತದ್ವತ್ ಸಾವಪ್ಪುತ್ತಾರೆ.
ನಿಜ ಪರಿಸ್ಥಿತಿಯಲ್ಲಿ ಏನೇನಾಗುತ್ತದೋ ಅದನ್ನೇ ತದ್ವತ್ ಸ್ಥಿತಿಯಲ್ಲೂ ನಡೆಯುತ್ತದೆ. ನಿಜವಾದ ಸೇತುವೆಯ ಮೇಲೆ ನಿಜವಾದ ಜನರು ನಿಜವಾದ ಕಾರಿನಲ್ಲಿ ಸಾಗುವ ಹಾಗೆ, ತದ್ವತ್ ಸೇತುವೆಯ ಮೇಲೂ ತದ್ವತ್ ಜನರು ಸಾಗುತ್ತಾರೆ. ಸಹಜ ದೃಶ್ಯಾವಳಿಗಳನ್ನು ನೋಡಿದ ಹಾಗೆ ತದ್ವತ್ ದೃಶ್ಯಾವಳಿಗಳನ್ನೂ ನೋಡಲು ಸಾಧ್ಯ ಎಂದು ಟೊಪೋಲಿ ವಾದಿಸಿದರು. ಅದರರ್ಥ, ದ್ರವ್ಯರೂಪಿ ಸ್ಥಿತಿಯಲ್ಲಿ ಕಾಣುವುದನ್ನೇ ತತ್ಕ್ರಿಯಾ ರೂಪದಲ್ಲೂ ಕಾಣಲು ಸಾಧ್ಯ.
ನಿಜಸ್ಥಿತಿಯನ್ನೇ ಅಷ್ಟೊಂದು ತದ್ವತ್ತಾಗಿ ತೋರಿಸಲು ಈಗಿನ ಕಂಪ್ಯೂಟರ್ ಗಳಿಗೆ ಸಾಧ್ಯವಿರಲಿಕ್ಕಿಲ್ಲ. ಏಕೆಂದರೆ ಅವುಗಳಲ್ಲಿ ಒಂದೇ ಒಂದು ಸಂಸ್ಕರಣಾ ಘಟಕ (ಪ್ರೊಸೆಸರ್) ಇರುತ್ತದೆ. ಆದರೆ ಟೊಫೋಲಿ ವಾದಿಸುವ ಪ್ರಕಾರ, ಮುಂದೊಂದು ದಿನ ಅತಿ ಶಕ್ತಿಶಾಲಿ ಕಂಪ್ಯೂಟರ್‌ಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಹರಳುಗಳ ರೂಪದಲ್ಲಿ ಅನೇಕ ಸಹಸ್ರ ಸಂಸ್ಕರಣಾ ಘಟಕಗಳು ಸಾಲುಗಟ್ಟಿ ಕೆಲಸ ಮಾಡುತ್ತಿರುತ್ತವೆ.
ತುಸು ಹೆಚ್ಚು ಕಮ್ಮಿ ಪರಮಾಣು ಗಾತ್ರದಲ್ಲಿರುವ ಅವೆಲ್ಲ ಒಟ್ಟಾಗಿ ಏಕಕಾಲಕ್ಕೆ ಕೆಲಸ ಮಾಡುತ್ತವೆ. ಅಂದರೆ ನಾವು ಆದೇಶ ಕೊಟ್ಟಾಗ ಆ ಪರಮಾಣು ಗಾತ್ರದ ದ್ರವ್ಯಗಳೇ ಕಂಪ್ಯೂಟರ್ ನಂತೆ ವರ್ತಿಸಲು ತೊಡಗುತ್ತವೆ. “ಆಗ ನಾವದಕ್ಕೆ ಆದೇಶ ಪಾಲಿಸುವ ದ್ರವ್ಯಗಳು ಎನ್ನಬೇಕಾಗುತ್ತದೆ’ ಎಂದು ಟೊಪೋಲಿ ವಿವರಿಸಿದರು.
ಈಗಿನ ಜೀವಿಗಳನ್ನೂ ಅದೇರೀತಿ ‘ಆದೇಶ ಪಾಲಿಸುವ ದ್ರವ್ಯಗಳು’ ಎಂತಲೇ ಹೇಳಬಹುದಲ್ಲವೆ? ಜೀವಿಗಳಲ್ಲಿ ಹುದುಗಿರುವ ಅಣುಪರಮಾಣು ಗಾತ್ರದ ದ್ರವ್ಯಗಳೇ ತಾನೆ ಜೀವಿಗೆ ಚಲನಶಕ್ತಿಯನ್ನು ನೀಡುತ್ತಿವೆ? ಈ ದೃಷ್ಟಿಯಲ್ಲಿ ನೋಡಿದರೆ ಜೀವಿಗಳೆಂದರೆ ಯಾವುದೋ ಆಗೋಚರ ಮಹಾ ಕಂಪ್ಯೂಟರ್ ಒಂದರಿಂದ ಆದೇಶ ಪಡೆಯುವ ತದ್ವತ್ ದ್ರವ್ಯಗಳೇ ಆಗಿವೆ. ಅವು ವಿಶ್ವದ ಆದೇಶ ಪಾಲಿಸುವ ದ್ರವ್ಯಗಳು.

ಹಾಗಿದ್ದಾಗ, ಜೀವವೂ ಮೂಲಭೂತವಾಗಿ ಅಸಹಜವೇ ಆಗಿರಬೇಕು. ದ್ರವ್ಯದ ವಿವಿಧ ರೂಪಗಳ ತೋರಿಕೆಗೆ, ಆಕಾರಕ್ಕೆ ತಕ್ಕಂತೆ ನಾವು ‘ಹೂವು’, ‘ನಾಯಿಮರಿ’, ‘ಮನುಷ್ಯ’ ಎಂದೆಲ್ಲ ಸಂಜ್ಞಾರೂಪಕ ಹೆಸರುಗಳನ್ನಿಟ್ಟು ಕರೆಯುತ್ತೇವೆ. ವೇದವಿಜ್ಞಾನದಲ್ಲೂ ದ್ರವ್ಯರೂಪಿ ಕಾಯಗಳಿಗೆ ಇದೇ ಅರ್ಥವಿದೆ.
ಶ್ರೀಮದ್ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ಕೃಷ್ಣ ಇದನ್ನೇ ಇನ್ನೊಂದು ಬಗೆಯಲ್ಲಿ ಉದ್ದವನಿಗೆ ವಿವರಿಸುತ್ತಾನೆ. ‘ದ್ರವ್ಯರೂಪಿ ಕಾಯಗಳಿಗೆ ತಮ್ಮದೇ ಆದ ಅಸ್ತಿತ್ವವಿಲ್ಲ. ಅವು ಅನಂತ ಕಾಲದಿಂದಲೂ ಅಸ್ತಿತ್ವದಲ್ಲಿರುವ ನಿಖರ ಸತ್ಯದ ನಾನಾ ರೂಪಗಳು ಅಷ್ಟೆ’ ಎನ್ನುತ್ತಾನೆ.
ಇದಕ್ಕೊಂದು ಉದಾಹರಣೆಯನ್ನೂ ಕೃಷ್ಣ ನೀಡುತ್ತಾನೆ: ಚಿನ್ನದ ಆಭರಣವನ್ನು ತಯಾರು ಮಾಡುವ ಮೊದಲೂ ಚಿನ್ನ ಇತ್ತು. ಆಭರಣವನ್ನು ಕರಗಿಸಿದನಂತರವೂ ಚಿನ್ನ ಇರುತ್ತದೆ. ಇಲ್ಲಿ ಚಿನ್ನ ಎಂಬುದು ಮಾತ್ರ ಸತ್ಯ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡರೂ ಮೂಲತಃ ಅದು ಚಿನ್ನವೇ. ಅದೇ ರೀತಿ, ವಿಶ್ವದ ಆದಿಯಲ್ಲಿಯೂ ನಾನು ಮಾತ್ರ ಇದ್ದೇನೆ. ವಿಶ್ವದ ಅಂತ್ಯದಲ್ಲಿಯೂ ನಾನೊಬ್ಬನೇ ಇರುತ್ತೇನೆ. ವಿಶ್ವದ ಅಸ್ತಿತ್ವದುದ್ದಕ್ಕೂ ನಾನೊಬ್ಬನೇ ಇರುತ್ತೇನೆ…
“ಯಾವುದು ಹಿಂದೆಂದೂ ಇರಲಿಲ್ಲವೋ, ಯಾವುದು ಮುಂದೆಯೂ ಇರಲಾರದೋ, ಅದು ಇಂದಿದ್ದಂತಿದ್ದರೂ ಅಸ್ತಿತ್ವದಲ್ಲಿರಲಾರದು. ಬೇರೊಂದರಿ೦ದ ನಿರ್ಮಿತವಾಗಿ ಪ್ರತ್ಯಕ್ಷ ಕಾಣುವಂತಿರುವುದು ಕೂಡ ಅಂತಿಮವಾಗಿ ಆ ಬೇರೊಂದೇ ಆಗಿರುತ್ತದೆ’ (ಭಾಗವತ 11.28.19-21).
ಆದ್ದರಿಂದ ದ್ರವ್ಯರೂಪಿ ವಿಶ್ವದಲ್ಲಿ ನಮಗೆ ಗೋಚರವಾಗುತ್ತಿರುವುದೆಲ್ಲವೂ ಕೃಷ್ಣನ ಶಕ್ತಿಯ ನಾನಾ ರೂಪಗಳೆಂದೇ ಹೇಳಬೇಕಾಗುತ್ತದೆ. ಅವಕ್ಕೆ ನಾವು ನಾನಾ ಹೆಸರಿಟ್ಟು ಕರೆಯುತ್ತೇವಷ್ಟೆ.
ಕಂಪ್ಯೂಟರ್‌ನಲ್ಲಿ ಇಲೆಕ್ಟ್ರಾನ್‌ಗಳು ನಾನಾ ಬಗೆಯ ಬಿಂಬಗಳಾಗಿ, ತದ್ವತ್ ಚೇತನಗಳಾಗಿ ಅವತರಿಸಿ ಕಣ್ಮರೆಯಾಗುವ ಹಾಗೆ ಕೃಷ್ಣನ ಬಹಿರಂಗ ಶಕ್ತಿ (ದ್ರವ್ಯ ಚೇತನ) ಕೂಡ ನಾನಾ ರೂಪಗಳಲ್ಲಿ ಜೀವಿಗಳಾಗಿ, ವಸ್ತುಗಳಾಗಿ ಕಾಣುತ್ತವೆ. ಒಟ್ಟಾರೆಯಾಗಿ ಇಡೀ ಕಂಪ್ಯೂಟರ್ ಸಿಮ್ಯುಲೇಶನ್ ಎಂದೂ, ಕೃಷ್ಣನೇ ಅದಕ್ಕೆ ಚಾಲನೆ ಕೊಡುವ ಸಿಮ್ಯುಲೇಟರ್ ಎಂದೂ ನಾವು ಪರಿಭಾವಿಸಬಹುದು.
ಹಾಗಿದ್ದರೆ ಪ್ರಜ್ಞೆ ಮತ್ತು ಆತ್ಮ ಎಲ್ಲಿರುತ್ತದೆ? ವಿಶ್ವದಲ್ಲಿರುವ ದ್ರವ್ಯಕಾಯಗಳೆಲ್ಲ ಇಲೆಕ್ಟ್ರಾನಿಕ್ ಮ೦ಡಲದ ಮೂಲಕ ಮಿನುಗುವ ವಿನ್ಯಾಸದಂತಿದೆಯೆಂದು ಭಾವಿಸಿದರೂ ಜೀವಗಳನ್ನು ಅದೇ ದೃಷ್ಟಿಯಿಂದ ನೋಡುವಂತಿಲ್ಲ. ವ್ಯಕ್ತಿಗತ ಪ್ರಜ್ಞೆ ಅರ್ಥಾತ್ ಅ೦ತರಾತ್ಮ ಎಂಬುದ ಚಿರಂತನವಾಗಿದೆಯೆಂದು ಭಗವದ್ಗೀತೆಯಲ್ಲಿ ಕೃಷ್ಣ (2.20) ಹೇಳುತ್ತಾನೆ.
” ಆತ್ಮಕ್ಕೆ ಆದಿ ಅಂತ್ಯ ಅಥವಾ ಹುಟ್ಟು-ಸಾವು ಎಂಬುದಿಲ್ಲ. ಆತ್ಮನು ಹಿಂದೆಯೂ ಜನ್ಮ ತಳೆದು ಬಂದಿರಲಿಲ್ಲ. ಈಗಲೂ ಬಂದಿಲ್ಲ ಮುಂದೆಯೂ ಬರುವುದಿಲ್ಲ. ಆತ್ಮ ಅಜಾತ, ನಿರಂತರ, ಚಿರಂತನ ಮತ್ತು ಆದಿಮ. ದೇಹವನ್ನು ಛೇದಿಸಿದರೂ ಆತ್ಮವನ್ನು ಛೇದಿಸುವುದು ಸಾಧ್ಯವಿಲ್ಲ.”
ಟೊಮ್ಮಾಸೊ ಟೊಫೋಲಿ ನಿರೂಪಿಸಿದಂತೆ ತದ್ವತ್ ಸೇತುವೆಯ ಮೇಲೆ ತದ್ವತ್ ಜನರು ಚಲಿಸಿದರೂ ಅವರಿಗೆ ಪ್ರಜ್ಞೆ ಎಂಬುದು ಇರಲಾರದು. ಕಂಪ್ಯೂಟರ್ ಆದೇಶದ ಪ್ರಕಾರ, ಅಂಥ ದೇಹದ ಚಹರೆಗಳು ಕ್ಷಣಕ್ಷಣಕ್ಕೆ ಬದಲಾಗಬಹುದಾದರೂ, ಆವರ ಮಿದುಳು ಕ್ರಿಯಾಶೀಲವಾಗಿದ್ದರೂ, ಅವರಲ್ಲಿ ಸಂಚರಿಸುವ ವಿದ್ಯುತ್ ಚೈತನ್ಯದಲ್ಲಿ ಪ್ರಜ್ಞೆ ಇರುತ್ತದೆಂದು ಹೇಳುವಂತಿಲ್ಲ.
ಕಂಪ್ಯೂಟರಿನಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಚೈತನ್ಯದಲ್ಲಿ ಪ್ರಜ್ಞೆ ಇರಲು ಸಾಧ್ಯವಿಲ್ಲ ಎಂದು ನಾವು ಸಲೀಸಾಗಿ ಊಹಿಸಬಹುದು. ಅಥವಾ ಪ್ರಜ್ಞೆ ಕೂಡ ಪ್ರವಹಿಸುತ್ತಿದ್ದರೂ ನಮ್ಮ ಗ್ರಹಿಕೆಗೆ ಬಾರದಂತಿರಬಹುದು. ಕಂಪ್ಯೂಟರಿನ ಬಗ್ಗೆ ನಮಗಿರುವ ಪರಿಜ್ಞಾನದ ಮಿತಿಯಿಂದಾಗಿಯೇ ಅದು ನಮ್ಮ ಗ್ರಹಿಕೆಯ ಆಚೆ ಇರಬಹುದು.
ಕೆಲವರು ಹೀಗೂ ವಾದಿಸಬಹುದು: ಕಂಪ್ಯೂಟರ್‌ನಲ್ಲಿ ಮೂಡುವ ವಿದ್ಯುತ್ ತರಂಗ ಚಿತ್ರಣಗಳಲ್ಲಿ ಪ್ರಜ್ಞೆ ಹೇಗೆ ಹರಿಯುತ್ತೆಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿರದೇ ಹೋಗಬಹುದು. ಆದರೆ ನಮ್ಮ ಮಿದುಳಿನಲ್ಲಿ ಕೂಡ ಪ್ರಜ್ಞೆ ಪ್ರವಹಿಸುತ್ತಿದೆ ಎಂದು ನಾವು ಹೇಳುತ್ತೇವೆ. ಅದೇ ರೀತಿ ಕಂಪ್ಯೂಟರ್ ಚಾಲಿತ ತದ್ವತ್ ವ್ಯಕ್ತಿಯ ಮಿದುಳಿನಲ್ಲೂ ಪ್ರಜ್ಞೆ ಇರಬಹುದಲ್ಲ?
ಮಾನವ ಮಿದುಳಿನಲ್ಲಿ ಪಜ್ಞೆ ಹೇಗೆ ಪ್ರವಹಿಸುತ್ತದೆ ಎಂಬುದು ವೈಜ್ಞಾನಿಕವಾಗಿ ನಮಗೆ ಈಗಲೂ ಗೊತ್ತಿಲ್ಲ. ಅದನ್ನು ಪತ್ತೆ ಮಾಡುವುದೆಂದರೆ, ಕಂಪ್ಯೂಟರ್‌ನಲ್ಲಿ ಪ್ರಜ್ಞೆ ಮೂಡುತ್ತದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡುವಷ್ಟೇ ಕ್ಲಿಷ್ಟದ ಕೆಲಸ.
ಭಗವದ್ಗೀತೆಯಲ್ಲಿ ಇದಕ್ಕೊಂದು ಸರಳ ಸಮಾಧಾನ ಇದೆ: ಅದರಲ್ಲಿ ಪ್ರತಿಪಾದಿಸಿದ್ದೇನೆಂದರೆ, ದ್ರವ್ಯಕಾಯದಲ್ಲಿ (ಅಂದರೆ ನಿಜ ಶರೀರದಲ್ಲಿ) ಪ್ರಜ್ಞೆಗೂ ದ್ರವ್ಯಕ್ಕೂ ಸಂಬಂಧವೇ ಇಲ್ಲ ದ್ರವ್ಯಕ್ಕಿಂತ ಮೂಲತಃ ಭಿನ್ನವಾಗಿರುವ ಸಂಗತಿಯೊಂದು ಪ್ರಜ್ಞೆಗೆ ಕಾರಣವಾಗಿರುತ್ತದೆ. ಇದುವರೆಗೆ, ಪ್ರಜ್ಞೆಯು ದ್ರವ್ಯಮೂಲದ್ದೇ ಆಗಿರಬೇಕೆಂದು ಊಹಿಸಿ, ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ, ಏನೆಲ್ಲ ಅಡೆತಡೆ ಎದುರಿಸುತ್ತಿರುವ ದಾರ್ಶನಿಕರು ಮತ್ತು ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯೋಚಿಸಬಹುದು.

ಹಾಗೆ ಒಂದುವೇಳೆ ಯೋಚಿಸಿದ್ದೇ ಆದರೆ, ಅಲ್ಲಿಗೆ ಇನ್ನೊಂದು ಪ್ರಶ್ನೆ ತಲೆದೋರುತ್ತದೆ: ದ್ರವ್ಯಕ್ಕಿಂತ ಭಿನ್ನವಾದ ಪ್ರಜ್ಞೆಯು ದ್ರವ್ಯಕಾಯದೊಂದಿಗೆ ಹೇಗೆ ಬೆಸೆದುಕೊಂಡಿದೆ?
ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಟೊಫೋಲಿಯ ತದ್ವತ್ ಸೇತುವೆಯ ಉದಾಹರಣೆಯನ್ನೇ ಮತ್ತೆ ಎತ್ತಿಕೊಳ್ಳಬೇಕಾಗುತ್ತದೆ. ಆ ಸೇತುವೆಯ ಮೇಲೆ ಜೀವಿಯ ಪ್ರತಿರೂಪವೊಂದು ಸಾಗುವಂತೆ ಮಾಡಲಾಗುತ್ತದೆಯಷ್ಟೆ? ಅದರಲ್ಲಿ ಪ್ರಜ್ಞೆಯನ್ನು ತೂರಿಸಲು ಸಾಧ್ಯವಿದೆ.
ಅದರ ಒಂದು ವಿಧಾನ ಹೇಗೆಂದರೆ ಅಲ್ಲಿನ ತದ್ವತ್ ಬಿಂಬಗಳು ನೈಜ ಸಮಯದಲ್ಲಿ ಚಲಿಸುವಂತೆ ಮಾಡಬೇಕು. ಅಂದರೆ ನಿಜ ಜಗತ್ತಿನಲ್ಲಿ ಘಟನೆಗಳು ನಡೆಯುತ್ತಿರುವಾಗಲೇ ತದ್ವತ್ ಬಿಂಬಗಳೂ ಕ್ರಿಯಾಶೀಲವಾಗಿರಬೇಕು. (ತ್ವರಿತ ವೇಗದ ಶಕ್ತಿಶಾಲಿ ಕಂಪ್ಯೂಟರ್‌ಗೆ ಇದನ್ನು ಸಾಧಿಸುವುದು ಕಷ್ಟವೇನಲ್ಲ.) ನಿಜ ವ್ಯಕ್ತಿಗೂ ತದ್ವತ್ ವ್ಯಕ್ತಿಗೂ ಸಂಪರ್ಕ ಏರ್ಪಡಿಸಿ, ಈತನ ಸಂವೇದನೆಗಳೆಲ್ಲವೂ ತದ್ವತ್ ವ್ಯಕ್ತಿಯ ಸಂವೇದನೆಯೊಂದಿಗೆ ಬೆಸೆಯುವಂತೆ ಮಾಡಬೇಕು.
ನಿಜ ವ್ಯಕ್ತಿಯ ಇಚ್ಛೆಯಂತೆಯೇ ತದ್ವತ್ ವ್ಯಕ್ತಿಯ ಅಂಗಾಂಗಗಳು ಕ್ರಿಯಾಶೀಲವಾಗಬೇಕು. ಆಗ ತದ್ವತ್ ವ್ಯಕ್ತಿಯ ಅನುಭವಗಳೆಲ್ಲ ನಿಜ ವ್ಯಕ್ತಿಯ ಅನುಭವಗಳೇ ಆಗುತ್ತವೆ.
ಇಂಥದ್ದು ಅಸಂಭವ ಎಂದಿರಾ? ಕಂಪ್ಯೂಟರ್ ವಿಜ್ಞಾನರಂಗದ ಕೆಲವರು ಈಗಾಗಲೇ ಈ ನಿಟ್ಟಿನಲ್ಲಿ ತೊಡಗಿದ್ದಾರೆ. ಕ್ಯಾಲಿಫೋರ್ನಿಯಾದ ವಿಪಿಎಲ್ ರೀಸರ್ಚ್ ಸಂಸ್ಥೆಯವರು ಇಂಥ ಛಾಯಾ ವಾಸ್ತವದ ಪ್ರಯೋಗ ನಡೆಸುತ್ತಿದ್ದಾರೆ.
ಒಬ್ಬ ವ್ಯಕ್ತಿಯ ಕಣ್ಣು, ಕಿವಿ ಮತ್ತು ಒಂದು ತೋಳನ್ನು ಕಂಪ್ಯೂಟರಿನ ತದ್ವತ್ ಜಗತ್ತಿನಲ್ಲಿರುವ ಛಾಯಾ ಕಣ್ಣು ಛಾಯಾ ಕಿವಿ ಮತ್ತು ಛಾಯಾ ತೋಳಿನ ಜತೆ ಜೋಡಣೆ ಮಾಡಲಾಗಿತ್ತು ಇಲೆಕ್ಟ್ರಾನ್ ಮಂಡಲದ ಮೂಲಕ. ನೈಜ ವ್ಯಕ್ತಿಯ ಕಣ್ಣಿಗೆ ಪುಟ್ಟ ಟಿವಿ ಪರದೆ ಇರುವ ವಿಶೇಷ ಕನ್ನಡಕ (ನೇತ್ರಪರದೆ) ತೊಡಿಸಲಾಗಿತ್ತು. ಕಂಪ್ಯೂಟರ್ ಬಿಂಬದಲ್ಲಿರುವ ತದ್ವತ್ ವ್ಯಕ್ತಿಯ ಕಣ್ಣಿಗೆ ಕಾಣುತ್ತಿದ್ದುದಷ್ಟೇ ನೈಜ ವ್ಯಕ್ತಿಗೆ ಕಾಣುತ್ತಿತ್ತು, ಬೇರಿನ್ನೇನೂ ಕಾಣುತ್ತಿರಲಿಲ್ಲ.
ಹೀಗೆ ಮಾನವ ಪ್ರಜ್ಞೆಯನ್ನು ಕಂಪ್ಯೂಟರ್‌ನಲ್ಲಿರುವ ಅನೈಜ ಬಿಂಬದೊಂದಿಗೆ ಬೆಸೆಯುವುದು ಸಾಧ್ಯವಾಗುವುದಾದರೆ ನಮ್ಮೆದುರಿನ ನೈಜ ಜಗತ್ತಿನ ಅಂಥದ್ದೇ ಅಪ್ರತ್ಯಕ್ಷ ಕಾಯಗಳೊಂದಿಗೆ ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಸೆಯುವುದು ಸಾಧ್ಯವಾಗಬಾರದೇಕೆ?
ನೈಜ ವ್ಯಕ್ತಿಯ ಕೈಗೆ ಒಂದು ‘ದತ್ತ ಗವಸು’ (Data Gloves) ತೊಡಿಸಲಾಗಿತ್ತು. ತೋಳಿನ ಅತಿ ಸೂಕ್ಷ್ಮ ಚಲನೆಯ ಮಾಹಿತಿಯನ್ನೂ ಸಂಗ್ರಹಿಸಿ ಅದು ತದ್ವತ್ ತೋಳಿಗೆ ತತ್ಕಾಲಕ್ಕೆ ರವಾನೆ ಮಾಡುತ್ತಿತ್ತು. ಅದೇ ರೀತಿ, ನೈಜ ವ್ಯಕ್ತಿಗೆ ತೊಡಿಸಿದ್ದ ಹೆಲ್ಮೆಟ್‌ನಿಂದಲೂ ಮಿದುಳಿನ ಸಂಕೇತಗಳು ತದ್ವತ್ ತಲೆಗೆ ರವಾನೆಯಾಗುತ್ತಿದ್ದವು.
ಒಟ್ಟಾರೆಯಾಗಿ ತದ್ವತ್ ಜಗತ್ತಿನ ಸಂವೇದನೆಗಳಿಗೆ ತದ್ವತ್ ಶರೀರವೊಂದು ಹೇಗೆ ಪ್ರತಿಕ್ರಿಯೆ ತೋರುತ್ತದೆ ಎಂಬುದರ ಅನುಭವ ನೈಜ ವ್ಯಕ್ತಿಗೆ ಅದೇ ಕಾಲಕ್ಕೆ ಬರುತ್ತಿತ್ತು. ಆ ತದ್ವತ್ ಜಗತ್ತನ್ನು ನಿಭಾಯಿಸಲು ನೈಜ ವ್ಯಕ್ತಿಗೆ ಸಾಧ್ಯವಾಗಿತ್ತು.
ಹೀಗೆ ಮಾನವ ಪ್ರಜ್ಞೆಯನ್ನು ಕಂಪ್ಯೂಟರ್‌ನಲ್ಲಿರುವ ಅನೈಜ ಬಿಂಬದೊಂದಿಗೆ ಬೆಸೆಯುವುದು ಸಾಧ್ಯವಾಗುವುದಾದರೆ ನಮ್ಮೆದುರಿನ ನೈಜ ಜಗತ್ತಿನ ಅಂಥದ್ದೇ ಅಪ್ರತ್ಯಕ್ಷ ಕಾಯಗಳೊಂದಿಗೆ ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಸೆಯುವುದು ಸಾಧ್ಯವಾಗಬಾರದೇಕೆ?
ವೇದಕಾಲದ ‘ಸಾಂಖ್ಯ’ ಎಂಬ ಅಧ್ಯಾತ್ಮ ಚಿಂತನೆಯಲ್ಲಿ ಇಂಥ ಸಂಪರ್ಕ ಸೇತುಗಳ ಕಾರ್ಯಾಚರಣೆಯ ಪ್ರಸ್ತಾಪವಿದೆ.
ಶ್ರೀಮದ್ ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ ಕೃಷ್ಣ ತನ್ನ ದ್ರವ್ಯಚೈತನ್ಯದಲ್ಲಿ ‘ಅಹಂಕಾರ’ ಎಂಬ ಮೂಲವಸ್ತುವೂ ಬೆರೆತಿದೆ ಎನ್ನುತ್ತಾನೆ. ಇದೇ ನಮ್ಮ ಶರೀರದ ದ್ರವ್ಯಚೈತನ್ಯ ಮತ್ತು ನಿರಾಕಾರ ಸ್ವರೂಪವಾದ ಆತ್ಮ ಇವೆರಡರ ನಡುವಣ ಬೆಸುಗೆವಸ್ತುವಾಗಿ ಕೆಲಸ ಮಾಡುತ್ತದೆ. ಕಂಪ್ಯೂಟರ್‌ನ ತದ್ವತ್ ಬಿಂಬದೊಂದಿಗೆ ಸಂಪರ್ಕ ಸಾಧಿಸಲು ‘ದತ್ತ ಗವಸು’ (Data Gloves) ಮತ್ತು ‘ನೇತ್ರಪರದೆ’ ಯಂತೆ ಅಹಂಕಾರ ಕೆಲಸ ಮಾಡುತ್ತದೆ.
ವೇದಸಾಹಿತ್ಯಗಳಲ್ಲಿ ಅರ್ಥೈಸಲಾಗಿದ್ದ ದ್ರವ್ಯಕಾಯ ಮತ್ತು ಕಂಪ್ಯೂಟರಿನಲ್ಲಿ ಮೂಡುವ ತದ್ವತ್ ಕಾಯ ಎರಡೂ ಒಂದು ತಳತಲ್ಬದ ಮೇಲೆ ತಾತ್ಕಾಲಿಕವಾಗಿ ಮೂಡಿ ಮರೆಯಾಗುವ ಬಿಂಬಗಳೇ ಆದರೆ ಜೀವಿಗಳ ಮೂಲಸ್ರೋತವೆನಿಸಿದ ಆತಪ್ರಜ್ಞೆ ಮಾತ್ರ ಇಂಥ ಕ್ಷಣಿಕ ಅಸ್ತಿತ್ವದ ಆಚೆಗೂ ಇರತಕ್ಕಂಥ ಸತ್ಯ ಸಂಗತಿಯಾಗಿರುತ್ತದೆ.
ಕಂಪ್ಯೂಟರ್‌ನಲ್ಲಿ ಸಾಕ್ಷಾತ್ಕಾರಗೊಳ್ಳುವ ತದ್ವತ್ ಜೀವಿಗಳಲ್ಲಿ ಆತ್ಮಪ್ರಜ್ಞೆ ಇರುವುದು ಅನುಭವಕ್ಕೆ ಬಂದರೂ ಅದು ಕಂಪ್ಯೂಟರ್ ಭಾಗವಲ್ಲದ ಮನುಷ್ಯನೊಬ್ಬನ ಮೂಲಕ ವೇದ್ಯವಾಗುತ್ತದೆ. ಹಾಗೆಯೇ ವೇದಗಳಲ್ಲಿ ಬರುವ ತಾತ್ವಿಕ ಚಿಂತನೆಯಲ್ಲಿ ಆತ್ಮ ಎಂಬುದು ದ್ರವ್ಯದಿಂದ ಸಂಪೂರ್ಣ ಬೇರೆಯಾಗಿರುವ ಬೀಜಾತೀತ ಸಂಗತಿಯಾಗಿರುತ್ತದೆ.
ಕಂಪ್ಯೂಟರ್ ತಜ್ಞರ ವಿಚಾರ ಮತ್ತು ಪ್ರಯೋಗಗಳಿಂದ ನಮಗೆ ಸಿಗುವ ಪಾಠ ಏನೆಂದರೆ, ಆತ್ಮ ಮತ್ತು ಐಹಿಕ ಜಗತ್ತಿನೊಂದಿಗೆ ಈ ವಿಧವಾದ ಬೆಸುಗೆ ಸಾಧ್ಯವಿದೆ. ಸಾಧ್ಯವಷ್ಟೇ ಅಲ್ಲ, ಇದುವೇ ನಿಜವಾದ ವಸ್ತುಸ್ಥಿತಿ ಇರಲಿಕ್ಕೂ ಸಾಕು.






Leave a Reply