ಝೂಲನ್ ಯಾತ್ರಾ
ಭಗವಾನ್ ಶ್ರೀಕೃಷ್ಣನ ಅಸಂಖ್ಯಾತ ಲೀಲೆಗಳಲ್ಲಿ ಅತ್ಯಂತ ಮನೋಹಾರಿಯಾದವು ವೃಂದಾವನ ಲೀಲೆಗಳು. ಅದರಲ್ಲೂ ರಾಧಾರಾಣಿಯೊಂದಿಗಿನ ಶ್ರೀಕೃಷ್ಣ ಲೀಲೆ ಹೃದಯಾಪಹಾರಿಯಾದುದು. ಅಂಥ ಲೀಲೆಗಳಲ್ಲೊಂದು, ‘ಜೋಕಾಲಿ ಉತ್ಸವ’ ಅಥವಾ ಝೂಲನ್ ಯಾತ್ರಾ.

ನಮ್ಮಲ್ಲಿ ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಶ್ರಾವಣದ ದಿನಗಳಲ್ಲಿ ಜೋಕಾಲಿ ಉತ್ಸವ ನಡೆಸುವುದುಂಟು. ಶ್ರಾವಣ ಮಾಸದಲ್ಲಿ ತವರಿಗೆ ತೆರಳುವ ಹೆಣ್ಣುಮಕ್ಕಳು, ಅಲ್ಲಿಗೆ ಬಂದ ತಮ್ಮ ಹಳೆಗೆಳತಿಯರೊಡನೆ ಸಂಭ್ರಮದ ಜೋಕಾಲಿ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಪ್ರಿಯ ಬಾಂಧವರೊಡಗೂಡಿ ಜೋಕಾಲಿ ಜೀಕುತ್ತಾರೆ.
ಈ ಪರಿಪಾಠ ಆಧುನಿಕ ಯುಗದಲ್ಲಿ ಹಿನ್ನೆಲೆಯಲ್ಲದೆ ಆರಂಭಗೊಂಡಿದ್ದಲ್ಲ. ಇದು, ಐದು ಸಾವಿರ ವರ್ಷಗಳಿಗೂ ಮೊದಲೇ ಆಚರಣೆಯಲ್ಲಿತ್ತು ಎನ್ನುವುದಕ್ಕೆ ಶ್ರೀಕೃಷ್ಣನು ವೃಂದಾವನದಲ್ಲಿ ನಡೆಸಿದ ‘ಝೂಲನ್ ಲೀಲೆ’ಯೇ ಸಾಕ್ಷಿ.
ಶ್ರೀಲ ಭಕ್ತಿ ವಿನೋದ ಠಾಕುರರು ತಮ್ಮ ವೃತ್ತಾಂತದಲ್ಲಿ ಝೂಲನ್ ಲೀಲೆಯ ಬಗ್ಗೆ ಸುಂದರವಾದ ಚಿತ್ರಣ ನೀಡಿದ್ದಾರೆ.
ಈ ಮೊದಲೇ ಹೇಳಿದಂತೆ ಜೋಕಾಲಿ ಉತ್ಸವ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದುದಾಗಿತ್ತು. ಅದಕ್ಕೆ ಕಾರಣ ಹಲವಾರು. ರಾಧಾರಾಣಿಯ ಸಾಹಚರ್ಯವೂ ಇದಕ್ಕೆ ಮುದ ನೀಡಿತ್ತು.
ಪ್ರತಿ ಶ್ರಾವಣದ ದಿನಗಳಲ್ಲಿ ಹೆಣ್ಣುಮಕ್ಕಳು ತವರುಮನೆಗೆ ಕೆಲದಿನಗಳ ಮಟ್ಟಿಗೆ ಹೋಗುತ್ತಾರಷ್ಟೆ? ಹಾಗೆಯೇ ರಾಧಾರಾಣಿಯೂ ವರ್ಷನಾದ ತನ್ನ ತವರಿಗೆ ಹೋಗುತ್ತಿದ್ದಳು. ಅವಳನ್ನು ಕರೆದುಕೊಂಡು ಹೋಗಲು ಅವಳ ಸಹೋದರ ಶ್ರೀಧಾಮ ಬರುತ್ತಿದ್ದ.
ಶ್ರಾವಣದಲ್ಲಿ ಅಲ್ಲಿಗೆ ಹೋಗುವುದೆಂದರೆ ರಾಧಾರಾಣಿಗೆ ಎಲ್ಲಿಲ್ಲದ ಸಂತಸ. ತನ್ನ ಗೋಪಸಖಿಯರೊಂದಿಗೆ, ಅದಕ್ಕಿಂತ ಹೆಚ್ಚಿನದಾಗಿ, ತನ್ನ ಮೆಚ್ಚಿನ ಸಖ ಕೃಷ್ಣನೊಂದಿಗೆ ಜೋಕಾಲಿ ಜೀಕಬಹುದೆಂಬ ಸಂಭ್ರಮ ಅವಳದು. ಕೃಷ್ಣನೊಡನೆ ಒಡನಾಡುವುದೆಂದರೆ, ಓಹ್! ಅದರ ಆನಂದ ವರ್ಣಿಸಲು ಸಾಧ್ಯವೇ?

ಹೀಗೆ ಅದೊಂದು ಬಾರಿ ರಾಧೆ ತನ್ನ ಸಹೋದರನಿಗಾಗಿ ಕಾಯುತ್ತಿದ್ದಳು. ಅವನೆಂದು ಬರುವ, ಯಾವಾಗ ಸಖಸಖಿಯರನ್ನು ನೋಡುವೆ ಎನ್ನುವುದೊಂದೇ ತವಕ. ಆದರೆ, ಶ್ರಾವಣ ಆರಂಭವಾಗಿ ದಿನ ಕಳೆದರೂ ಶ್ರೀಧಾಮ ಬರಲಿಲ್ಲ. ಬರುವ ಸೂಚನೆಯೂ ದೊರೆಯಲಿಲ್ಲ. ರಾಧೆ ದುಃಖಿಸುತ್ತ, ಸದಾ ಬಾಗಿಲತ್ತ ದೃಷ್ಟಿನೆಟ್ಟು ಅವನನ್ನು ನಿರೀಕ್ಷಿಸುತ್ತ ಕಾಲ ನೂಕತೊಡಗಿದಳು. ಮತ್ತೊಂದು ದಿನ ಕಳೆಯಿತು. ವರ್ಷನಾದಿಂದ ಬಂದ ಹಿರಿಯನೊಬ್ಬ ರಾಧಾರಾಣಿಯನ್ನು ಕುರಿತು ವಿಚಾರಿಸಿದ.
ಅವನನ್ನು ಕಾಣುತ್ತಿದ್ದಂತೆಯೇ, ರಾಧೆಯ ದುಃಖ ಹೆಚ್ಚಿತು. ಅವಳು “ನನ್ನ ತಂದೆ ತಾಯಿ ನನ್ನನ್ನು ಮರೆತಿರುವರೇನು? ಎಂದು ಅವರ ಬಳಿ ಕೇಳಿರಿ” ಎನ್ನುತ್ತ ಅಳಲಾರಂಭಿಸಿದಳು.
ಆತ ರಾಧೆಯನ್ನು ಸಮಾಧಾನಪಡಿಸಿ, ವರ್ಷನಾಕ್ಕೆ ಮರಳಿದವನೇ ವೃಷಭಾನು-ಕೀರ್ತಿದಾ ಸುಂದರಿಯರ ಬಳಿ ರಾಧೆಯ ವಿಷಯ ಅರುಹಿದ. ಕೂಡಲೇ ವೃಷಭಾನು ಮಹಾರಾಜ ಶ್ರೀಧಾಮನನ್ನು ರಾಧೆಯನ್ನು ಕರೆತರಲು ಕಳುಹಿಸಿಕೊಟ್ಟ. ಕೀರ್ತಿದಾ ದೇವಿ, ಜೋತಿಲಾಳಿಗಾಗಿ ಒಂದಷ್ಟು ಉಡುಗೊರೆಯನ್ನು ಅವನೊಂದಿಗೆ ಕಳಿಸಿಕೊಟ್ಟಳು. ಹಾಗೆ ಮಾಡದಿದ್ದಲ್ಲಿ ಸ್ವಭಾವತಃ ಒರಟಳಾದ ಆಕೆ, ತನ್ನ ಮಗಳನ್ನು ವರ್ಷನಾಕ್ಕೆ ಕಳುಹಿಸುವುದಿಲ್ಲವೆಂದು ಅವಳಿಗೆ ಗೊತ್ತಿತ್ತು.
ಹಗಲು ಇರುಳು ಪ್ರಯಾಣ ನಡೆಸಿದ ಶ್ರೀಧಾಮ, ರಾಧಾರಾಣಿಯ ಅರಮನೆ ತಲಪಿದ. ಮುಖ್ಯದ್ವಾರದಲ್ಲಿ ಅವನನ್ನು ಕಾಣುತ್ತಲೇ ಅವಳು ಓಡಿಬಂದು, ಸಂತೋಷದಿಂದ ತಬ್ಬಿಕೊಂಡಳು. ಅಣ್ಣ-ತಂಗಿಯರಿಬ್ಬರೂ ಕುಶಲ ಸಮಾಚಾರ ಮಾತನಾಡಿದ ಮೇಲೆ ರಾಧೆ, ಹುಸಿಕೋಪ ತೋರಿಸುತ್ತ, ‘ಓ ಅಣ್ಣಾ ನೀನೇಕೆ ನನ್ನನ್ನು ಮರೆತೆ? ತಂದೆ ತಾಯಿಯೂ ನನ್ನನ್ನು ಮರೆತರು. ಎಲ್ಲರೂ ನನ್ನನ್ನು ಮರೆತರು” ಎಂದು ದುಃಖಿಸಿದಳು. ಶ್ರೀಧಾಮ ಆಕೆಗೆ ಸಾಂತ್ವನ ನೀಡಿದ –
ಜೋತಿಲಾ ಮೊದಲು ರಾಧೆಯನ್ನು ಕಳುಹಿಸಲು ಒಪ್ಪಲಿಲ್ಲ. “ಅವಳಿಗಿಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ಅದಕ್ಕಿಂತ ಹೆಚ್ಚಿನದೆಂದರೆ, ನಿಮ್ಮ ಊರಿನಲ್ಲೊಬ್ಬ ಕಪ್ಪು ಹುಡುಗನಿದ್ದಾನಲ್ಲ, ಅವನ ಸಹವಾಸ ಬಹಳ ಕಷ್ಟದ್ದು. ಇವಳು ಅಲ್ಲಿ ಬಂದು ಅದನ್ನೇ ಮಾಡುವಳು. ನಾನು ಕಳುಹಿಸುವುದಿಲ್ಲ” ಎಂದುಬಿಟ್ಟಳು.

ಆದರೆ, ಶ್ರೀಧಾಮ, ತನ್ನ ತಾಯಿಯು ಆಕೆಗೆಂದು ಕಳುಹಿಸಿಕೊಟ್ಟ ಉಡುಗೊರೆಗಳನ್ನು ನೋಡಿದ ಮೇಲೆ ಕೊಂಚ ಮೆದುವಾಗಿ, “ಕರೆದುಕೊಂಡು ಹೋಗು, ಆದರೆ ಬೇಗ ಮರಳಿ ಕರೆತರಬೇಕು” ಎಂದು ಸಮ್ಮತಿಸಿದಳು. ಆನಂತರ ಶ್ರೀಮತಿ ರಾಧಾರಾಣಿ ಮತ್ತು ಶ್ರೀಧಾಮ ನಾಲ್ಕು ಎತ್ತುಗಳ ಚಕ್ಕಡಿಯಲ್ಲಿ ಕುಳಿತು ವರ್ಷನಾಕ್ಕೆ ಹೊರಟರು.
ಬೆಟ್ಟದ ಮೇಲಿನ ತನ್ನ ತಂದೆಯ ಮನೆಯನ್ನು ಕಾಣುತ್ತಲೇ ಸಂತೋಷದಿಂದ ಕಣ್ಣೀರ್ಗರೆದಳು. ರಾಧೆ ಮನೆಯ ಮುಂದೆ ಚಕ್ಕಡಿಯಿಂದ ಕೂಡಲೇ ಕೆಳಗಿಳಿದು ತಾಯಿಯನ್ನು ತಬ್ಬಿಕೊಂಡಳು.
ವೃಂದಾವನದಲ್ಲಿ ಅದಾಗಲೇ ಜೋಕಾಲಿ ಉತ್ಸವ ಆರಂಭವಾಗಿತ್ತು. ರಾಧಾರಾಣಿಯ ಸಖಿಯರೆಲ್ಲ ಆಕೆಗಾಗಿ ಕಾಯುತ್ತಿದ್ದರು. ರಾಧೆಯೂ ಅವರೊಡನೆ ಬೆರೆತು ಉತ್ಸವವನ್ನು ಆನಂದಿಸಿದಳು. ಆದರೂ ಅವಳಿಗೆ ತೃಪ್ತಿಯಿಲ್ಲ. ಪ್ರಾಣಸಖ ಕೃಷ್ಣನ ಒಡನಾಟ ಇಲ್ಲದೆ ಉತ್ಸವದ ಸಂಪೂರ್ಣ ಸಂತೋಷ ದೊರೆಯುವುದು ಹೇಗೆ?
ಇದನ್ನರಿತ ಕೃಷ್ಣ ಅಲ್ಲಿಗೆ ಬಂದ. ಒಮ್ಮೆ ಬಳೆಮಾರುವ ಗೋಪಿಯ ವೇಷದಲ್ಲಿ ಮತ್ತೊಮ್ಮೆ ಹೂವಿನ ಮಾಲೆ ಮಾರುವ ನೆವದಲ್ಲಿ… ಹೀಗೆ… ರಾಧಾಕೃಷ್ಣರಿಬ್ಬರೂ ಜೋಕಾಲಿಯ ಮೋಜನ್ನು ಸವಿದರು.
ಶ್ರೀಕೃಷ್ಣ, ರಾಧೆಗೂ ಸಂತೋಷ ನೀಡಿ ತಾನು ಆನಂದಿಸಿದ ಇತರ ಗೋಪಿಯರೂ ಈ ಸಂತಸದಲ್ಲಿ ಪಾಲ್ಗೊಂಡರು. ಹೀಗೆ ಶ್ರಾವಣದ ದಿನಗಳು ಜೋಕಾಲಿಯ ಸಂಭ್ರಮದಲ್ಲಿ ಮುಳುಗಿ, ವ್ರಜ ಮಂಡಲ ಸಂಪೂರ್ಣವಾಗಿ ಶ್ರೀಕೃಷ್ಣನ ಲೀಲೆಯಲ್ಲಿ ಲೀನವಾಯಿತು.






Leave a Reply