ಕರ್ದಮ ದೇವಹೂತಿ ಪ್ರಸಂಗ
ಬ್ರಹ್ಮಪುತ್ರನೂ ಪ್ರಜಾಪತಿಯೂ ಆದ ಕರ್ದಮ ಮುನಿಯು ಸ್ವಾಯಂಭುವ ಮನುವಿನ ಪುತ್ರಿಯಾದ ದೇವಹೂತಿಯನ್ನು ವಿವಾಹವಾಗಿ ಆದರ್ಶ ಗಾರ್ಹಸ್ಥ್ಯ ಜೀವನ ನಡೆಸಿದನು. ಪತಿವ್ರತೆಯಾದ ತನ್ನ ಪ್ರಿಯಪತ್ನಿಯ ಆಸೆಯನ್ನು ಪೂರೈಸಲು ತನ್ನ ಯೋಗಶಕ್ತಿಯಿಂದ ದೊಡ್ಡ ಭವನವುಳ್ಳ, ಎಲ್ಲೆಡೆ ಸಂಚರಿಸಬಲ್ಲ ಒಂದು ಅದ್ಭುತ ವಿಮಾನವನ್ನು ಸೃಷ್ಟಿಸಿ ಅವಳನ್ನು ವಿವಿಧ ಲೋಕಗಳಿಗೂ ರಮಣೀಯ ಸ್ಥಳಗಳಿಗೂ ಕರೆದೊಯ್ದು ಅನೇಕಾನೇಕ ವರ್ಷಗಳ ಕಾಲ ರಮಿಸಿದನು. ಕಡೆಗೆ ಅವಳಿಗೆ ಒಂಬತ್ತು ಸುಂದರ ಹೆಣ್ಣುಮಕ್ಕಳು ಜನಿಸಲು, ಕರ್ದಮ ಮುನಿಗೆ ಹಿಂದೆ ವಿಷ್ಣುವು ಹೇಳಿದ್ದ ಮಾತೂ ತಾನೇ ವಿವಾಹದ ಸಮಯದಲ್ಲಿ ಹೇಳಿದ್ದ ಮಾತೂ ಸ್ಮರಣೆಗೆ ಬಂದಿತು. ಸಂತಾನವಾದ ಬಳಿಕ ತಾನು ಸಂನ್ಯಾಸಿಯಾಗಬೇಕೆಂಬುದೇ ಆ ಮಾತಾಗಿತ್ತು. ಅದರಂತೆ, ಕರ್ದಮನು ಸಂಸಾರದಲ್ಲಿ ವಿರಕ್ತಿ ಹೊಂದಿ ಸಂನ್ಯಾಸಿಯಾಗಲು ಹೊರಟು ನಿಂತನು.
ಹೀಗೆ ಹೊರಟು ನಿಂತ ಪತಿಯನ್ನು ಕಂಡು ದೇವಹೂತಿಯು ಮುಖದಲ್ಲಿ ಮುಗುಳ್ನಗು ತೋರುತ್ತಿದ್ದರೂ ಹೃದಯದಲ್ಲಿ ಬಹಳ ಸಂಕಟ, ವೇದನೆಗಳನ್ನನುಭವಿಸಿದಳು! ಕಾಂತಿಯುತವಾಗಿದ್ದ ತನ್ನ ನಖಮಣಿಗಳಿಂದ ನೆಲದಲ್ಲಿ ಚಿತ್ತಾರ ಮೂಡಿಸುತ್ತಾ, ಕೆಳಮುಖಳಾಗಿ, ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ತಡೆಯುತ್ತಾ ಅವಳು ಹೇಳಿದಳು, “ಪತಿದೇವ! ನೀವು ನನಗೆ ವಚನವಿತ್ತಂತೆ ಇದುವರೆಗೆ ನನ್ನೆಲ್ಲಾ ಆಸೆಗಳನ್ನೂ ಪೂರೈಸಿರುವಿರಿ. ಆದರೆ ನಿಮ್ಮ ಆಶ್ರಿತಳಾದ ನನಗೆ ನೀವು ಅಭಯವನ್ನೂ ಕರುಣಿಸಬೇಕಾಗಿದೆ. ಈ ನಮ್ಮ ಪುತ್ರಿಯರಾದರೋ ತಮಗೆ ಅನುರೂಪರಾದ ವರರನ್ನು ವರಿಸಿ ಅವರ ಮನೆಗಳಿಗೆ ಹೊರಟುಹೋಗುತ್ತಾರೆ. ನೀವು ವನಕ್ಕೆ ನಿರ್ಗಮಿಸಿದರೆ ನನ್ನ ಶೋಕವನ್ನು ಕಳೆವವರಾರು?”

ಕರ್ದಮನು ಮೌನವಾಗಿ ನಿಂತ.
“ಪತಿದೇವ!” ದೇವಹೂತಿಯು ಮುಂದುವರಿಸಿದಳು, “ಇದುವರೆವಿಗೂ ಇಂದ್ರಿಯಸುಖದಲ್ಲೇ ಕಾಲಕಳೆಯುತ್ತಾ ನಾವು ಪರಾತ್ಪರ ತತ್ತ್ವವನ್ನು ಅರಿಯಲು ಪ್ರಯತ್ನಿಸಲೇ ಇಲ್ಲ! ನಾನಾದರೋ, ನಿಮ್ಮ ಮಹತ್ವವನ್ನರಿಯದೇ ಕೇವಲ ಇಂದ್ರಿಯಸುಖಕ್ಕಾಗಿ ನಿಮ್ಮನ್ನು ಪ್ರೀತಿಸಿದೆ! ಆದರೂ ಆ ಪ್ರೀತಿಯನ್ನು ಮನ್ನಿಸಿ ನೀವು ನನಗೆ ಅಭಯವನ್ನು ನೀಡಬೇಕಾಗಿದೆ. ಪತಿದೇವ, ವಿಷಯಸುಖಕ್ಕಾಗಿ ಒಬ್ಬರ ಸಂಗ ಮಾಡಿದರೆ, ಅದು ಸಂಸಾರಬಂಧನವನ್ನು ಉಂಟುಮಾಡುತ್ತದೆ. ಆದರೆ ಅಂಥದ್ದೇ ಸುಖಕ್ಕಾಗಿ ಸಾಧುಸಂತರ ಸಂಗ ಮಾಡಿದರೆ, ಮೋಕ್ಷವೆಂಬ ಮಹಾಫಲ ದೊರೆಯುತ್ತದೆ! ಈ ಲೋಕದಲ್ಲಿ ಯಾರೇ ಆದರೂ ಧರ್ಮಕ್ಕಾಗಿ, ವೈರಾಗ್ಯಕ್ಕಾಗಿ, ಇಲ್ಲವೇ ಭಗವಂತನ ಪಾದಸೇವೆಗಾಗಿ ತನ್ನ ಕಾರ್ಯವನ್ನು ಬಳಸದಿದ್ದರೆ, ಅಂಥವನು ಬದುಕಿದ್ದರೂ ಸತ್ತಂತೆ! ನಾನಾದರೋ, ನಿಮ್ಮಂತಹ ಮಹಾತ್ಮರನ್ನು ನನ್ನ ಪತಿಯನ್ನಾಗಿ ಪಡೆದೂ ಮುಕ್ತಿಮಾರ್ಗವನ್ನು ತಿಳಿಯಲೆತ್ನಿಸದೇ ಕೇವಲ ಇಂದ್ರಿಯಸುಖಕ್ಕಾಗಿ ಆಸೆಪಡುತ್ತಾ ಭಗವಂತನ ಮಾಯೆಯಿಂದ ವಂಚಿತಳಾದೆ!”
ಪತಿಯು ವನಾಭಿಮುಖವಾಗಿ ಹೊರಟುಹೋದ ಬಳಿಕ, ತನ್ನನ್ನು ರಕ್ಷಿಸಲು ಒಬ್ಬ ಪುತ್ರನು ಬೇಕೆಂದು ದೇವಹೂತಿಯು ಸೂಚ್ಯವಾಗಿ ಹೇಳುತ್ತಿದ್ದಳು. ಅಲ್ಲದೇ, ಕರ್ದಮನಂಥ ಮಹಾಜ್ಞಾನಿಯನ್ನು ಪತಿಯನ್ನಾಗಿ ಪಡೆದ ಅವಳು ಅಧ್ಯಾತ್ಮದಲ್ಲಿ ಸ್ವಲ್ಪವಾದರೂ ಪ್ರಗತಿ ಸಾಧಿಸಬೇಕಿತ್ತೆಂದು ಬಯಸಿದಳು. ಇದನ್ನರಿತ ಅವಳ ಪತಿ ಕರ್ದಮನು, ಶ್ರೀಹರಿಯ ಮಾತನ್ನು ಸ್ಮರಿಸಿಕೊಂಡು ಹೇಳಿದನು, “ಅನಿಂದ್ಯಳಾದ ರಾಜಪುತ್ರಿಯೇ! ದುಃಖಿಸದಿರು! ಭಗವಂತನ ಬಗ್ಗೆ, ಮುಕ್ತಿಮಾರ್ಗದ ಬಗ್ಗೆ ತಿಳಿಯಲು ಬಯಸುತ್ತಿರುವ ನೀನು ನಿಜಕ್ಕೂ ಶ್ಲಾಘನೀಯಳು! ಬಹಳ ಬೇಗನೆ, ಆ ಭಗವಂತನೇ ನಿನ್ನ ಗರ್ಭದಲ್ಲಿ ಪ್ರಕಟವಾಗುವನು! ನೀನು ಈಗಾಗಲೇ ಹಲವಾರು ವ್ರತಗಳನ್ನಾಚರಿಸಿರುವೆ. ಈಗಲೂ ನೀನು ಯಮನಿಯಮಗಳಿಂದಲೂ, ವ್ರತತಪಗಳಿಂದಲೂ, ನಿನ್ನ ಧನವನ್ನು ಯೋಗ್ಯರಿಗೆ ದಾನಮಾಡುತ್ತಲೂ, ಶ್ರದ್ಧೆಯಿಂದ ಆ ಭಗವಂತನನ್ನು ಅರ್ಚಿಸು. ಅವನು ನಿನ್ನಲ್ಲಿ ಸುಪ್ರೀತನಾಗಲಿ! ನಿನ್ನಿಂದ ಸೇವಿಸಲ್ಪಟ್ಟು ಸಂತುಷ್ಟನಾಗುವ ಅವನು ನಿನಗೆ ಮಗನಾಗಿ ಜನಿಸಿ ನನ್ನ ಕೀರ್ತಿಯನ್ನು ಬೆಳಗುವನು! ನಿನಗೆ ಬ್ರಹ್ಮಜ್ಞಾನವನ್ನು ಉಪದೇಶಿಸಿ ನಿನ್ನ ಸಂಸಾರಬಂಧನದ ಗಂಟನ್ನು ತುಂಡರಿಸುವನು!”
ಪತಿಯ ಮಾತನ್ನು ಕೇಳಿ ದೇವಹೂತಿಯು ಆನಂದಸಾಗರದಲ್ಲಿ ಮುಳುಗಿಹೋದಳು!
“ಬ್ರಹ್ಮರುದ್ರೇಂದ್ರಾದಿ ಮಹಾನ್ ದೇವತೆಗಳಿಗೂ ಒಡೆಯನಾದ ದೇವೋತ್ತಮ ಪರಮ ಪುರುಷನು ನನಗೆ ಮಗನಾಗಿ ಜನಿಸುವನೇ?! ಅವನಿಂದಲೇ ನೇರವಾಗಿ ಬ್ರಹ್ಮೋಪದೇಶ ಪಡೆಯುವಷ್ಟು ಪುಣ್ಯವಂತಳೇ ನಾನು?! ಏನೊಂದೂ ತಿಳಿಯದ ಈ ಸಾಮಾನ್ಯ ಸ್ತ್ರೀ, ಮುಕ್ತಿಗೆ ಅರ್ಹಳಾಗುವಳೇ?! ನನ್ನ ಪತಿ ಮಹಾತ್ಮ! ಅವರಿಂದಲೇ ನನಗೆ ಈ ಭಾಗ್ಯ!”
ದೇವಹೂತಿಯ ಮನಸ್ಸೆಂಬ ನದಿಯಲ್ಲಿ ಆನಂದದ ಅಲೆಗಳು ಒಂದರ ಮೇಲೆ ಒಂದು ಏಳುತ್ತಿದ್ದರೂ, ಭಾವಪರವಶತೆಯಿಂದ ಅವಳಿಗೆ ಮಾತುಗಳೇ ಹೊರಡಲಿಲ್ಲ! ತನ್ನ ಪತಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಮೌನವಾಗಿಬಿಟ್ಟಳು!
ಪತಿಯ ಮಾತಿನಲ್ಲಿ ಬಹಳ ಗೌರವ ಹೊಂದಿದ್ದ ದೇವಹೂತಿಯು ಅವನು ಹೇಳಿದಂತೆ ಶ್ರದ್ಧಾಭಕ್ತಿಗಳಿಂದ ಪರಮಪುರುಷನನ್ನು ಅರ್ಚಿಸಿದಳು. ಅನೇಕ ವರ್ಷಗಳ ಬಳಿಕ, ಶ್ರೀಹರಿಯು ಕರ್ದಮನ ವೀರ್ಯವನ್ನು ಪ್ರವೇಶಿಸಿ, ಕಟ್ಟಿಗೆಯಲ್ಲಿನ ಬೆಂಕಿಯಂತೆ, ದೇವಹೂತಿಯಲ್ಲಿ ಜನಿಸಿದನು.
ಭಗವಂತನ ಅವತಾರವಾದಾಗ ದೇವತೆಗಳೆಲ್ಲರೂ ಬಹಳ ಸಂತೋಷಪಟ್ಟರು. ಅವರು ಆಗಸದಿಂದ ಪುಷ್ಪವೃಷ್ಟಿ ಮಾಡಿದರು! ಗಂಧರ್ವಾಪ್ಸರೆಯರು ವಿವಿಧ ವಾದ್ಯಗಳನ್ನು ನುಡಿಸುತ್ತಾ ಹಾಡಿ ನರ್ತಿಸಿದರು! ದಶದಿಕ್ಕುಗಳೂ ನದನದಿಗಳೂ ಎಲ್ಲರ ಮನಗಳೂ ಸಂತಸಮಯ ವಾತಾವರಣದಿಂದ ತುಂಬಿಹೋದವು! ಆಗ ಬ್ರಹ್ಮದೇವನು ಮರೀಚಿಯೇ ಮೊದಲಾದ ಋಷಿಗಳೊಂದಿಗೆ ಕರ್ದಮನ ಆಶ್ರಮಕ್ಕೆ ಆಗಮಿಸಿದನು. ಅವನಿಗೆ ಪರಮ ಪುರುಷನೇ ತನ್ನ ಸತ್ವಾಂಶದಿಂದ ಕರ್ದಮನ ಮನೆಯಲ್ಲಿ ಸಾಂಖ್ಯಶಾಸ್ತ್ರದ ಪ್ರತಿಪಾದನೆಗಾಗಿ ಅವತರಿಸಿದ್ದನೆಂದು ಜ್ಞಾನದೃಷ್ಟಿಯಿಂದ ತಿಳಿಯಿತು.
ಬ್ರಹ್ಮದೇವನು ಶುದ್ಧವಾದ ಮನಸ್ಸಿನಿಂದ ಹಾಗೂ ಸಂತುಷ್ಟಗೊಂಡ ಇಂದ್ರಿಯಗಳಿಂದ ಭಗವಂತನನ್ನು ಅರ್ಚಿಸಿದನು. ಅನಂತರ ಅವನು ಕರ್ದಮನಿಗೆ ಹೇಳಿದನು, “ವತ್ಸ, ಕರ್ದಮ, ನಾನು ನಿನಗೆ ಹೇಳಿದ ಕಾರ್ಯವನ್ನು ನೀನು ಯಥಾವತ್ತಾಗಿ ಪೂರೈಸಿರುವೆ. ನನ್ನ ಮಾತಿಗೆ ಗೌರವ ತೋರಿ ಎಲ್ಲಿಯೂ ದೋಷವಾಗದಂತೆ ನಡೆದಿರುವ ನೀನು ಈ ಕಾರ್ಯದಿಂದ ನಿಜವಾಗಿ ನನಗೇ ಗೌರವ ತಂದಿರುವೆ! ಸತ್ಪುತ್ರನಾಗಲೀ ಉತ್ತಮ ಶಿಷ್ಯನಾಗಲೀ ತನ್ನ ತಂದೆ ಅಥವಾ ಗುರುವು ಹೇಳಿದ ಕಾರ್ಯವನ್ನು ಆಗಲೆಂದು ಒಪ್ಪಿ ವಿಧೇಯತೆಯಿಂದ ಮಾಡುವುದೇ ಅವರಿಗೆ ತೋರುವ ನಿಜವಾದ ಗೌರವವಾಗಿರುತ್ತದೆ!”
ಅನಂತರ ಬ್ರಹ್ಮನು, ವಿನಯದಿಂದ ತನಗೆ ನಮಸ್ಕರಿಸಿ ನಿಂತಿದ್ದ, ಅಪ್ರತಿಮ ಚೆಲುವೆಯರಾಗಿದ್ದ, ಕರ್ದಮನ ಒಂಬತ್ತು ಪುತ್ರಿಯರನ್ನು ನೋಡುತ್ತಾ ಅವನಿಗೆ ಹೇಳಿದನು, “ವತ್ಸ! ಸುಮಧ್ಯಮೆಯರಾದ ಈ ನಿನ್ನ ಸುಂದರ ಹೆಣ್ಣು ಮಕ್ಕಳು ಸುಶೀಲೆಯರೂ ಆಗಿದ್ದಾರೆ! ಖಂಡಿತವಾಗಿಯೂ ಇವರೆಲ್ಲರೂ ಅನೇಕಪ್ರಕಾರವಾಗಿ ಈ ಸೃಷ್ಟಿಯನ್ನು ವಿಸ್ತರಿಸುತ್ತಾರೆ! ಇವರೆಲ್ಲರನ್ನೂ ನೀನು ಅವರವರ ಗುಣಶೀಲಗಳಿಗನುಗುಣವಾಗಿ ಪ್ರಮುಖರಾದ ಋಷಿಗಳಿಗೆ ಕೊಟ್ಟು ಮದುವೆ ಮಾಡು. ಇವರು ನಿನ್ನ ಯಶಸ್ಸನ್ನು ಎಲ್ಲೆಡೆ ಹರಡುತ್ತಾರೆ!”
ಕರ್ದಮನು ತನ್ನ ಪುತ್ರಿಯರ ಕಡೆ ಒಮ್ಮೆ ನೋಡಿ ಮುಗುಳ್ನಕ್ಕನು. ಆ ನವಕನ್ನಿಕೆಯರು ನಸುನಗುತ್ತಾ ನಾಚಿ ತಲೆಬಾಗಿಸಿದರು!
“ಕರ್ದಮ!” ಬ್ರಹ್ಮನು ಮತ್ತೂ ಹೇಳಿದನು, “ಆ ದೇವೋತ್ತಮ ಪರಮ ಪುರುಷನೇ ತನ್ನ ಯೋಗಮಾಯೆಯಿಂದ ಇಲ್ಲಿ ಅವತರಿಸಿರುವನೆಂದು ನಾನು ಬಲ್ಲೆ! ಜೀವಿಗಳ ಕಾಮನೆಗಳೆಲ್ಲವನ್ನೂ ನೆರವೇರಿಸುವ ಅವನು ಈಗ ಕಪಿಲಮುನಿಯಾಗಿ ಅವತರಿಸಿದ್ದಾನೆ! ಇವನು ಲೋಕದಲ್ಲಿ ಕಪಿಲನೆಂಬ ಹೆಸರಿನಿಂದ ಪ್ರಖ್ಯಾತನಾಗಿ, ಸಾಂಖ್ಯವೆಂಬ ಶಾಸ್ತ್ರವನ್ನು ಪ್ರತಿಪಾದಿಸುತ್ತಾನೆ! ಸಿದ್ಧಸಾಧಕರ ಪರಮಗುರುವಾಗುವ ಇವನು ನಿನ್ನ ಕೀರ್ತಿಯನ್ನು ವರ್ಧಿಸುತ್ತಾನೆ!”
ಅನಂತರ ಬ್ರಹ್ಮದೇವನು ದೇವಹೂತಿಯ ಕಡೆ ತಿರುಗಿ ಹೇಳಿದನು, “ಅಮ್ಮಾ! ಸುಮಂಗಳೆ! ಮಧುಕೈಟಭರನ್ನು ಕೊಂದ ಆ ಆದಿಪುರುಷನೇ ನಿನ್ನ ಮಗನಾಗಿ ಜನಿಸಿರುವನಮ್ಮಾ! ಇವನು ನಿನ್ನನ್ನು ಸಂಸಾರ ಬಂಧನಕ್ಕೀಡು ಮಾಡಿರುವ ಅಜ್ಞಾನ, ಸಂಶಯಗಳ ಗಂಟನ್ನು ಛೇದಿಸಿ ಲೋಕಸಂಚಾರ ಮಾಡುತ್ತಾನೆ! ಹೊನ್ನಿನ ಕೇಶವನ್ನು ಹೊಂದಿರುವ ಈ ನಿನ್ನ ಸುಂದರ ಪುತ್ರನು ಕಮಲದಳಗಳಂತಹ ಸುಂದರ ಕಂಗಳನ್ನು ಹೊಂದಿದ್ದಾನೆ! ಇವನ ಪಾದಪದ್ಮಗಳಲ್ಲಿ ಪದ್ಮಚಿಹ್ನೆಗಳಿವೆ! ಜ್ಞಾನವಿಜ್ಞಾನಗಳಿಂದಲೂ ಯೋಗದಿಂದಲೂ ಕೂಡಿರುವ ಇವನ ಉಪದೇಶ, ಭೌತಿಕ ಕರ್ಮಗಳಲ್ಲೇ ಸದಾ ನಿರತರಾಗಿರುವವರನ್ನು ಉದ್ಧರಿಸುತ್ತದೆ!”

ಇಷ್ಟು ಹೇಳಿ ಬ್ರಹ್ಮದೇವನು ನಾರದ, ಸನಕಸನಂದಾದಿ ಮುನಿವೃಂದದೊಂದಿಗೆ ತನ್ನ ಹಂಸವಾಹನವನ್ನೇರಿ ತನ್ನ ಲೋಕಕ್ಕೆ ಹೊರಟಹೋದನು.
ಬ್ರಹ್ಮನು ನಿರ್ಗಮಿಸಿದ ಬಳಿಕ, ಕರ್ದಮನು ಅವನು ಹೇಳಿದಂತೆ, ಸೃಷ್ಟಿಯನ್ನು ವಿಸ್ತರಿಸುವ ಸಲುವಾಗಿ ತನ್ನ ಒಂಬತ್ತು ಪುತ್ರಿಯರನ್ನು ಬ್ರಹ್ಮಮಾನಸಪುತ್ರರಾದ ಒಂಬತ್ತು ಋಷಿವರ್ಯರಿಗಿತ್ತು ವಿವಾಹ ಮಾಡಿದನು. ಅವನು ಕಲೆಯನ್ನು ಮರೀಚಿಗೂ, ಅನಸೂಯೆಯನ್ನು ಅತ್ರಿಗೂ, ಶ್ರದ್ಧೆಯನ್ನು ಅಂಗಿರಸನಿಗೂ, ಹವಿರ್ಭೂಳನ್ನು ಪುಸಲ್ತ್ಯನಿಗೂ, ಗತಿಯನ್ನು ಪುಲಹನಿಗೂ, ಕ್ರಿಯೆಯನ್ನು ಕ್ರತುವಿಗೂ, ಖ್ಯಾತಿಯನ್ನು ಭೃಗುವಿಗೂ, ಅರುಂಧತಿಯನ್ನು ವಸಿಷ್ಠನಿಗೂ, ಶಾಂತಿಯನ್ನು ಅಥರ್ವನಿಗೂ ಧಾರೆಯೆರೆದು ಕೊಟ್ಟು ವಿವಾಹವನ್ನು ನೆರವೇರಿಸಿದನು. ಸಂತೋಷಭರಿತರಾದ ಆ ಋಷಿಗಳೆಲ್ಲರೂ ತಂತಮ್ಮ ಪತ್ನಿಯರೊಡನೆ ಕರ್ದಮಮುನಿಯನ್ನು ಬೀಳ್ಕೊಂಡು ತಮ್ಮ ಆಶ್ರಮಗಳಿಗೆ ನಿರ್ಗಮಿಸಿದರು.
* * *
ದೇವೋತ್ತಮ ಪರಮ ಪುರುಷನೇ ಕಪಿಲಮುನಿಯಾಗಿ ಅವತರಿಸಿದ್ದನೆಂದು ತಿಳಿದುಕೊಂಡ ಕರ್ದಮನು ಅವನನ್ನು ಏಕಾಂತದಲ್ಲಿ ಸಂಧಿಸಿ ಅವನಿಗೆ ನಮಸ್ಕರಿಸುತ್ತಾ ಹೇಳಿದನು, “ಆಹಾ! ಪ್ರಭು! ನರಕದಂತಹ ಈ ಲೋಕದಲ್ಲಿ ತಮ್ಮದೇ ಆದ ದುಷ್ಕೃತ್ಯಗಳಿಂದ ಸಂಕಷ್ಟಗಳಲ್ಲಿ ಸಿಲುಕಿರುವ ಜೀವಿಗಳನ್ನು ಉದ್ಧರಿಸಲು ನೀನು ಅವತರಿಸಬೇಕೆಂದು ದೇವತೆಗಳು ಆಗಾಗ ಪ್ರಾರ್ಥಿಸುವರು. ಬಹುಶಃ, ಬಹಳ ಕಾಲದ ಬಳಿಕ ಆ ದೇವತೆಗಳು ಈಗ ನಮ್ಮ ಮೇಲೆ ಕೃಪೆ ತೋರಿದ್ದಾರೆ! ಆದ್ದರಿಂದಲೇ ನೀನು ಅವತರಿಸಿರುವೆ! ಅನೇಕ ಜನ್ಮಗಳ ಬಳಿಕ, ಮಹಾಯೋಗಿಗಳು ಶಾಂತವಾದ ಏಕಾಂತ ಸ್ಥಳದಲ್ಲಿ ಯೋಗಸಮಾಧಿಯಲ್ಲಿ ನೆಲೆಸಿ ನಿನ್ನ ಪಾದಪದ್ಮಗಳನ್ನು ಕಾಣಲು ಪ್ರಯತ್ನಿಸುತ್ತಾರೆ! ನೀನಾದರೋ, ನಿನ್ನ ಭಕ್ತರ ಭಕ್ತಿಯನ್ನು ಬಹಳ ಗೌರವಿಸುತ್ತಾ ನಮ್ಮಂತಹ ಸಾಮಾನ್ಯ ಗೃಹಸ್ಥರನ್ನು ಅಲ್ಲಗಳೆಯದೇ ನಮ್ಮಂಥವರ ಮನೆಗಳಲ್ಲೂ ಅವತರಿಸುವೆ! ಪ್ರಭು! ಭಕ್ತರ ಗೌರವವನ್ನು ಕಾಪಾಡುವ ನೀನು, ಜ್ಞಾನವನ್ನು ಎಲ್ಲೆಡೆ ಹರಡಲು, ಅಂದು ನನಗೆ ಕೊಟ್ಟ ಮಾತನ್ನು ನಿಜವಾಗಿಸಲು ನನ್ನ ಮನೆಯಲ್ಲಿ ಅವತರಿಸಿರುವೆ! ನಿನಗೆ ಭೌತಿಕವಾದ ರೂಪವಿಲ್ಲದಿದ್ದರೂ ಭಕ್ತರನ್ನು ಸಂತೋಷಪಡಿಸುವ ನಿನ್ನ ಅನಂತರೂಪಗಳು ದಿವ್ಯವೂ ಅಪ್ರಾಕೃತವೂ ಆಗಿವೆ! ಪ್ರಭು, ನಿನ್ನ ಪಾದಪದ್ಮಗಳು ಸದಾಕಾಲವೂ ತತ್ತ್ವಜಿಜ್ಞಾಸುಗಳಿಂದ ವಂದಿಸಲ್ಪಡಲು ಯೋಗ್ಯವಾಗಿವೆ! ಐಶ್ವರ್ಯ, ಜ್ಞಾನ, ವೈರಾಗ್ಯ, ಯಶಸ್ಸು, ಬಲ, ಸೌಂದರ್ಯಗಳೆಂಬ ಷಡ್ಗುಣಗಳಿಂದ ಪರಿಪ್ಲುತನಾಗಿರುವ ಭಗವಂತನೇ, ನಿನ್ನ ಪಾದಪದ್ಮಗಳಲ್ಲಿ ನಾನು ಶರಣುಹೊಂದುತ್ತೇನೆ! ಈ ಸೃಷ್ಟಿಗೆ ಯಾರು ಮೂಲನೋ, ಇದನ್ನು ಯಾರು ಪಾಲಿಸುವನೋ, ಮತ್ತು ಕಡೆಗೆ ಯಾರು ಇದನ್ನು ತನ್ನಲ್ಲೇ ಲೀನವಾಗಿಸಿಕೊಳ್ಳುವನೋ, ಯಾರು ಸರ್ವತಂತ್ರಸ್ವತಂತ್ರನೂ ಪರಮಪುರುಷನೂ ಆಗಿರುವನೋ, ಯಾರು ಈಗ ಕಪಿಲಮುನಿಯಾಗಿ ಅವತರಿಸಿರುವನೋ, ಅಂಥ ಭಗವಂತನಿಗೆ ನಾನು ಶರಣಾಗುತ್ತೇನೆ!”
ಕರ್ದಮನು ಹೀಗೆ ಭಕ್ತಿಯಿಂದ ಸ್ತುತಿಸಲು, ಕಪಿಲ ಭಗವಂತನು ಸಂತುಷ್ಟನಾಗಿ ಮುಗುಳ್ನಕ್ಕನು. ಕ್ಷಣಕಾಲದ ಮೌನದ ಬಳಿಕ, ಕರ್ದಮನು ಪುನಃ ಹೇಳಿದನು,
“ಪರಮ ಪುರುಷ! ಸಕಲಜೀವಿಗಳಿಗೂ ನೀನು ಪ್ರಭುವಾಗಿರುವೆ. ನಿನ್ನಲ್ಲಿ ನನ್ನದೊಂದು ಬಿನ್ನಹವಿದೆ. ಸೃಷ್ಟಿಯು ಮುಂದುವರಿಯುವಂತೆ ಮಾಡಿ ನನ್ನ ತಂದೆಯ ಕಾರ್ಯವನ್ನು ನಾನು ನಡೆಸಿದ್ದೇನೆ. ಹೀಗೆ ನಿನ್ನ ದಯೆಯಿಂದ ಪಿತೃಋಣಮುಕ್ತನಾದ ನಾನು ಈಗ ಸಂನ್ಯಾಸಾಶ್ರಮವನ್ನು ಸ್ವೀಕರಿಸಲು ಇಚ್ಛಿಸುವೆ. ಸಂಸಾರದಿಂದ ವಿರಕ್ತನಾಗಿ, ಶೋಕದೂರನಾಗಿ, ಸದಾ ನಿನ್ನನ್ನೇ ಹೃದಯದಲ್ಲಿ ಧ್ಯಾನಿಸುತ್ತಿರಬೇಕೆಂಬ ಆಸೆಯಾಗಿದೆ ನನಗೆ.”
ಭಗವಾನ್ ಕಪಿಲನು ಹೇಳಿದನು, “ಎಲೈ ಮುನಿಯೇ, ನಾನು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿ ಶಾಸ್ತ್ರಗಳಲ್ಲಾಗಲೀ ಏನು ಹೇಳುವೆನೋ, ಅದು ಜನರಿಗೆ ಪ್ರಮಾಣವಚನವಾಗಿರುತ್ತದೆ. ಆದ್ದರಿಂದಲೇ, ಅಂದು ನಿನಗೆ ಹೇಳಿದ್ದಂತೆ ಈಗ ನಿನ್ನ ಮಗನಾಗಿ ಜನಿಸಿದ್ದೇನೆ. ಮುಮುಕ್ಷುಗಳಿಗೂ ತತ್ತ್ವಜಿಜ್ಞಾಸುಗಳಿಗೂ ಅತ್ಯಂತ ಅವಶ್ಯವಾಗಿರುವ ಸಾಂಖ್ಯಶಾಸ್ತ್ರದ ಪ್ರತಿಪಾದನೆಗಾಗಿ ನಾನು ಅವತರಿಸಿದ್ದೇನೆ. ಅರ್ಥಮಾಡಿಕೊಳ್ಳಲು ಬಹಳ ಕಷ್ಟವಾದ ಈ ಶಾಸ್ತ್ರ, ಕಾಲಗತಿಯಲ್ಲಿ ನಷ್ಟವಾಗಿದೆ! ಅದನ್ನು ಪುನಃ ಸ್ಥಾಪಿಸಲೆಂದು ಈ ದೇಹವನ್ನು ಧರಿಸಿದ್ದೇನೆ. ಮಹಾಮುನಿಯೇ, ನಾನು ಈ ಜ್ಞಾನವನ್ನು ನನ್ನ ತಾಯಿಗೂ ಉಪದೇಶಿಸುತ್ತೇನೆ. ಆತ್ಮಜ್ಞಾನವನ್ನು ನೀಡುವ ಇದು, ಅವಳ ಕರ್ಮಗಳೆಲ್ಲವನ್ನೂ ದಹಿಸಿ, ಅವಳ ಸಂಸಾರಭಯವನ್ನು ದೂರ ಮಾಡುತ್ತದೆ! ನೀನು ನಿನ್ನೆಲ್ಲಾ ಕರ್ಮಗಳನ್ನೂ ನನ್ನಲ್ಲಿ ಸಮರ್ಪಿಸಿ ನಿನಗೆ ಇಷ್ಟಬಂದಲ್ಲಿಗೆ ತೆರಳು! ದುರ್ಜಯವಾದ ಮೃತ್ಯುವನ್ನು ಜಯಿಸಿ ಸದಾ ನನ್ನನ್ನೇ ಭಜಿಸುತ್ತಾ ಅಮರತ್ವವನ್ನು ಪಡೆ! ಸಕಲ ಜೀವಿಗಳ ಹೃದಯಾಂತರಾಳದಲ್ಲೂ ಅಡಗಿರುವ, ಸ್ವಯಂಜ್ಯೋತಿಯಾದ, ಪರಮಾತ್ಮನಾದ ನನ್ನನ್ನು ನಿನ್ನ ಹೃದಯದಲ್ಲೇ ಜ್ಞಾನದೃಷ್ಟಿಯಿಂದ ಸದಾ ವೀಕ್ಷಿಸುತ್ತಾ ಭಯಶೋಕಗಳಿಂದ ದೂರಾಗುವೆ!”
ಭಗವಂತನು ಹೀಗೆ ಹೇಳಲು, ಕರ್ದಮ ಪ್ರಜಾಪತಿಯು ಅವನಿಗೆ ಪ್ರದಕ್ಷಿಣೆ, ನಮಸ್ಕಾರಗಳನ್ನರ್ಪಿಸಿ, ಶಾಂತಮನಸ್ಕನಾಗಿ ಅರಣ್ಯಕ್ಕೆ ಹೊರಟನು.

ಕರ್ದಮನು ಮೌನವ್ರತವನ್ನು ಧರಿಸಿ, ಸಂಗರಹಿತನಾಗಿ, ಭಗವಂತನಲ್ಲಿ ಸಂಪೂರ್ಣ ಶರಣಾಗಿ, ಎಲ್ಲಿಯೂ ನಿಲ್ಲದೆ, ಭೂಮಂಡಲದಲ್ಲಿ ಸಂಚರಿಸತೊಡಗಿದನು. ಅಹಂಕಾರ, ಮಮಕಾರಗಳಿಂದ ದೂರಾಗಿ, ದ್ವಂದ್ವರಹಿತನಾಗಿ, ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತಾ ಕ್ರಮೇಣ ಅಂತರ್ಮುಖಿಯಾಗುತ್ತಾ, ಅಲೆಗಳಿದ್ದರೂ ಅಬಾಧಿತವಾದ ಸಾಗರದಂತೆ ಪ್ರಶಾಂತಮನಸ್ಕನಾದನು. ಸರ್ವಾಂತರ್ಯ್ಮಿಯೂ ಪರಮಾತ್ಮನೂ ಆದ ಶ್ರೀವಾಸುದೇವನಲ್ಲಿ ಭಕ್ತಿಭಾವವನ್ನು ಹೊಂದಿ ಸಂಸಾರಬಂಧನದಿಂದ ಮುಕ್ತನಾದನು; ಸಕಲ ಜೀವಿಗಳಲ್ಲೂ ಭಗವಂತನು ಪರಮಾತ್ಮನಾಗಿ ನೆಲೆಸಿರುವನೆಂದೂ, ಸಕಲ ಜೀವಿಗಳೂ ಭಗವಂತನಲ್ಲಿ ನೆಲೆಸಿರುವರೆಂದೂ ಅವನು ಕಂಡುಕೊಂಡನು. ಹೀಗೆ ಅವನು ಭಕ್ತಿಯುಕ್ತನಾಗಿ, ಪರಮ ಭಾಗವತರಿಗೆ ಲಭ್ಯವಾಗುವ ಭಗವದ್ಧಾಮವನ್ನು ಪಡೆದನು.
* * *
ಕರ್ದಮ ಪ್ರಜಾಪತಿಯು ಸಂನ್ಯಾಸಿಯಾಗಿ ವನಕ್ಕೆ ತೆರಳಲು, ಕಪಿಲದೇವನು ತನ್ನ ತಾಯಿ ದೇವಹೂತಿಯ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಬಿಂದುಸರೋವರದ ದಡದಲ್ಲಿ ನೆಲೆಸಿದನು.
ಒಂದು ದಿನ, ನಿತ್ಯದ ಕಾರ್ಯಗಳನ್ನು ಮುಗಿಸಿ ಕಪಿಲದೇವನು ವಿಶ್ರಮಿಸುತ್ತಿದ್ದಾಗ, ದೇವಹೂತಿಯು ಅವನಿಗೆ ಹೇಳಿದಳು, “ಪ್ರಭು! ಅಶಾಶ್ವತವಾದ ಈ ಭೌತಿಕ ಇಂದ್ರಿಯಗಳ ಬೇಡಿಕೆಗಳನ್ನು ತೀರಿಸುವಲ್ಲಿ ಮನೋಕ್ಲೇಶಕ್ಕೊಳಗಾಗುತ್ತಾ ಅಂಧಕಾರದಲ್ಲಿ ಮುಳುಗಿದ್ದೇನೆ! ಇಂಥ ಅಂಧಕಾರದಿಂದ ನಾನು ಹೊರಗೆ ಬರಲು ನೀನೇ ದಾರಿಯಾಗಿರುವೆ! ಅನೇಕ ಜನ್ಮಗಳ ಬಳಿಕ, ನಿನ್ನ ದಯೆಯಿಂದಲೇ ಜ್ಞಾನನೇತ್ರನಾದ ನೀನು ನನಗೆ ದೊರೆತಿರುವೆ. ಲೋಕದ ಅಂಧಕಾರವನ್ನು ತೊಲಗಿಸಿ ಬೆಳಕನ್ನು ನೀಡುವ ಸೂರ್ಯನಂತೆ ಉದಿಸಿರುವ ನೀನು, ಸಕಲ ಜೀವಿಗಳಿಗೂ ಈಶ್ವರನಾದ, ಎಲ್ಲಕ್ಕೂ ಮೂಲನಾದ ಭಗವಂತನಾಗಿರುವೆ! ನಿನ್ನ ಮಾಯೆಯಿಂದ ಪ್ರಭಾವಿತಳಾಗಿ `ನಾನು’, `ನನ್ನದು’ ಎಂಬ ಅಹಂಕಾರದಲ್ಲಿ ಮುಳುಗಿರುವ ನನ್ನನ್ನು ದಯವಿಟ್ಟು ಉದ್ಧರಿಸು! ಧರ್ಮವಿದರಲ್ಲಿ ವರಿಷ್ಠನೇ, ನಿನ್ನ ಭಕ್ತರ ಸಂಸಾರವೆಂಬ ವೃಕ್ಷವನ್ನು ಕತ್ತರಿಸಿಬಿಡುವ ಕೊಡಲಿಯಂತಿರುವ ನಿನ್ನಲ್ಲಿ ನಾನು ಶರಣು ಹೋಗುತ್ತೇನೆ! ಪ್ರಕೃತಿ ಮತ್ತು ಪುರುಷರ ನಡುವಿನ ಸಂಬಂಧವನ್ನು ನನಗೆ ವಿವರಿಸು.”
ತತ್ತ್ವಜ್ಞಾನವನ್ನು ತಿಳಿಯುವಲ್ಲಿ ತಾಯಿಯು ತೋರಿದ ಅಪೇಕ್ಷೆಗೆ ಮನದಲ್ಲೇ ಅಭಿನಂದಿಸುತ್ತಾ ಭಗವಾನ್ ಕಪಿಲನು ಮುಗುಳ್ನಗುತ್ತಾ ಹೇಳಿದನು. ಜೀವಿಗೂ ಭಗವಂತನಿಗೂ ಸಂಬಂಧಿಸಿದ, ದ್ವಂದ್ವಗಳಾದ ಸುಖದುಃಖಗಳಿಂದ ವ್ಯಕ್ತಿಯನ್ನು ವಿರಕ್ತಗೊಳಿಸುವ, ಎಲ್ಲರಿಗೂ ಅತ್ಯಂತ ಉಪಯುಕ್ತವಾದ ಯೋಗವಿದ್ಯೆಯು ಬಹಳ ಶ್ರೇಷ್ಠವಾದುದು. ಅಮ್ಮಾ! ಈ ಯೋಗವಿದ್ಯೆಯನ್ನು ನಾನು ಹಿಂದೆ ಮಹಾ ಋಷಿಮುನಿಗಳಿಗೆ ಉಪದೇಶಿಸಿದ್ದೆ; ಈಗ ನಿನಗೂ ಅದನ್ನೇ ಉಪದೇಶಿಸುತ್ತೇನೆ. ಅಮ್ಮಾ! ಸಂಸಾರಬಂಧನಕ್ಕಾಗಲೀ ಮುಕ್ತಿಗಾಗಲೀ ಒಬ್ಬನ ಪ್ರಜ್ಞೆಯೇ ಕಾರಣವಾಗುತ್ತದೆ. ಭೌತಿಕವಾದ ತ್ರಿಗುಣಗಳಲ್ಲಿ ಒಬ್ಬನ ಪ್ರಜ್ಞೆ ನೆಲೆಸಿದ್ದರೆ, ಸಂಸಾರಬಂಧನವಾಗುತ್ತದೆ; ಅದೇ ಪ್ರಜ್ಞೆ ಭಗವಂತನಲ್ಲಿ ನೆಲೆಸಿದ್ದರೆ, ಮುಕ್ತಿಸ್ಥಿತಿ ಉಂಟಾಗುತ್ತದೆ. ಒಬ್ಬ ವ್ಯಕ್ತಿಯು `ನಾನು’, `ನನ್ನದು’, ಎಂಬ ಅಭಿಮಾನದಿಂದಲೂ, ಕಾಮ, ಕ್ರೋಧ, ಲೋಭಾದಿ ದುರ್ಗುಣಗಳಿಂದಲೂ ದೂರಾದಾಗ, ಅವನು ಸುಖದುಃಖಗಳನ್ನು ಸಮನಾಗಿ ಕಾಣುತ್ತಾನೆ. ಆಗ ಅವನು, ಸ್ವಯಂಜ್ಯೋತಿಯೂ, ಅಖಂಡಿತವೂ ಆತ್ಮಸ್ವರೂಪವೂ ಆದ ತನ್ನನ್ನು ಪ್ರಕೃತಿಗಿಂತಲೂ ಮಿಗಿಲಾದ ಪರವಸ್ತುವೆಂದು ಅರಿತುಕೊಳ್ಳುತ್ತಾನೆ. ಜ್ಞಾನ, ವೈರಾಗ್ಯ, ಮತ್ತು ಭಗವಂತನಲ್ಲಿನ ಭಕ್ತಿಯಿಂದ ಅವನು ಪ್ರಾಕೃತಿಕ ಆಕರ್ಷಣೆಗಳಿಗೆ ಒಳಗಾಗದೆ ಅದನ್ನು ಮೀರುತ್ತಾನೆ. ಭಗವಂತನಲ್ಲಿ ಭಕ್ತಿಯನ್ನಾಚರಿಸದೇ ಯಾರಿಗೂ ಆತ್ಮಜ್ಞಾನದ ಸಿದ್ಧಿ ಆಗುವುದಿಲ್ಲ! ಯೋಗಿಗಳಿಗೆ ಭಕ್ತಿಯೋಗವೇ ಶ್ರೇಷ್ಠವಾದ ಮಾರ್ಗ. ವಿಷಯಗಳಲ್ಲಿ ಆಸಕ್ತಿ ತೋರುವುದರಿಂದ ಹೆಚ್ಚಿನ ಬಂಧನವಾಗುತ್ತದೆ! ಅದೇ ಆಸಕ್ತಿ, ಸಾಧುಗಳಲ್ಲಿ ತೋರಿದರೆ, ಮೋಕ್ಷದ್ವಾರವೇ ತೆರೆದುಕೊಳ್ಳುತ್ತದೆ!

“ಅಮ್ಮಾ! ಈಗ ನಾನು ಸಾಧುಗಳ ಗುಣಗಳನ್ನು ಹೇಳುತ್ತೇನೆ. ಸಾಧುಗಳು ತಾಳ್ಮೆ, ಕರುಣೆಗಳಿಂದ ಕೂಡಿದ್ದು ಸದಾ ಶಾಂತರಾಗಿರುತ್ತಾರೆ. ಎಲ್ಲ ಜೀವಿಗಳಲ್ಲೂ ಸ್ನೇಹಭಾವವನ್ನು ತೋರುತ್ತಾ ಶತ್ರುರಹಿತರಾಗಿರುತ್ತಾರೆ. ನನ್ನಲ್ಲಿ ಅನನ್ಯ ಭಕ್ತಿಯುಳ್ಳವರಾಗಿ ನನಗಾಗಿ ತಮ್ಮ ಕಾರ್ಯಗಳನ್ನೂ ಬಂಧುಬಾಂಧವರನ್ನೂ ತ್ಯಜಿಸಿಬಿಡುತ್ತಾರೆ! ಆನಂದದಾಯಕವಾದ ನನ್ನ ಕಥೆಗಳನ್ನು ಹೇಳುತ್ತಲೂ ಕೇಳುತ್ತಲೂ ಅವರು ನನ್ನಲ್ಲೇ ಮನಸ್ಸುಳ್ಳವರಾಗಿ ಭೌತಿಕ ತಾಪತ್ರಯಗಳಿಂದ ಸಂಕಟಪಡುವುದಿಲ್ಲ. ಇವೇ ಸಾಧುಗಳ ಮಹಾಗುಣಗಳು. ಅಮ್ಮಾ, ನೀನು ಸರ್ವಸಂಗಪರಿತ್ಯಾಗಿಗಳಾದ ಇಂಥ ಸಾಧುಗಳ ಸಂಗಕ್ಕಾಗಿ ಪ್ರಾರ್ಥಿಸಬೇಕು; ಅದರಿಂದ ವಿಷಯಸಂಗ ದೂರಾಗುತ್ತದೆ.
“ಭಕ್ತರ ಸಂಗದಲ್ಲಿ, ಕಿವಿಗಳಿಗೂ ಹೃದಯಕ್ಕೂ ಅಮೃತಪ್ರಾಯವಾಗಿರುವ ನನ್ನ ಲೀಲೆಗಳನ್ನು ಕೇಳುವುದರಿಂದ ಒಬ್ಬನಿಗೆ ಶ್ರದ್ಧೆ, ಭಕ್ತಿಗಳು ಉಂಟಾಗಿ ಕ್ರಮೇಣ ಅವನು ಮುಕ್ತಿಮಾರ್ಗದಲ್ಲಿ ನಡೆಯುತ್ತಾನೆ. ಅವನಿಗೆ ಕ್ರಮೇಣವಾಗಿ ಇಂದ್ರಿಯಸುಖದಲ್ಲಿ ಆಸಕ್ತಿ ಕಡಮೆಯಾಗಿ ತನ್ನ ಮನಸ್ಸನ್ನು ನಿಯಂತ್ರಿಸಬಲ್ಲವನಾಗುತ್ತಾನೆ. ಹೀಗೆ ಅವನು ಪ್ರಕೃತಿಯ ಗುಣಗಳನ್ನು ಸೇವಿಸದೇ ನನ್ನಲ್ಲೇ ಭಕ್ತಿಯುಳ್ಳವನಾಗಿ ಈ ಲೋಕದಲ್ಲೇ ನನ್ನನ್ನು ಪಡೆಯುತ್ತಾನೆ. ಈ ಭಕ್ತಿಯೋಗದ ಮಾರ್ಗವು ಅತ್ಯಂತ ಶ್ರೇಷ್ಠವೂ ಸುಲಭವೂ ಆದ ಮಾರ್ಗವಾಗಿದೆ.”
ದೇವಹೂತಿಯು ಹೇಳಿದಳು, “ನಿನ್ನಲ್ಲಿ ಯಾವ ರೀತಿಯ ಭಕ್ತಿಯನ್ನಾಚರಿಸಬೇಕು? ಎಂತಹ ಭಕ್ತಿಯಿಂದ ನಾನು ಬೇಗನೆ ನಿನ್ನ ಪಾದಸೇವೆಯನ್ನು ಮಾಡಬಹುದು? ನೀನು ಹೇಳಿದ ಯೋಗವಿದ್ಯೆಯು ಭಗವಂತನನ್ನೇ ಮುಟ್ಟುವುದಾಗಿದೆ. ಇದರಲ್ಲಿ ಎಷ್ಟು ರೀತಿಗಳಿವೆ? ನಾನೊಬ್ಬ ಮುಂದಬುದ್ಧಿಯುಳ್ಳ ಸ್ತ್ರೀಯಾಗಿದ್ದೇನೆ! ಬಹಳ ಕಷ್ಟಕರವಾದ ಈ ತತ್ತ್ವಗಳನ್ನು ದಯವಿಟ್ಟು ಸುಲಭವಾಗಿ ಅರ್ಥವಾಗುವಂತೆ ವಿವರಿಸು.
ಕಪಿಲಮುನಿಯು ಸ್ವಯಂ ಭಗವಂತನೇ ಆಗಿದ್ದರೂ ದೇವಹೂತಿಯಿಂದ ಜನ್ಮ ತಾಳಿದ್ದನು. ಈಗ ತಾಯಿಯು ಹೇಳಿದ ಮಾತುಗಳನ್ನು ಕೇಳಿ ಅವಳ ಮೇಲೆ ಅವನಿಗೆ ಮಮತೆ ಹೆಚ್ಚಾಯಿತು. ಅವಳಿಗೆ ಮುಕ್ತಿಯನ್ನು ಕರುಣಿಸಲೆಂದು, ಭಕ್ತಿಯೋಗಗಳಿಂದ ಸಮನ್ವಿತವಾದ ಸಾಂಖ್ಯಶಾಸ್ತ್ರವನ್ನು ಉಪದೇಶಿಸಿದನು.
* * *
ಭಗವಾನ್ ಕಪಿಲನು ಹೇಳಿದನು, “ಅಮ್ಮಾ! ಇಂದ್ರಿಯಗಳು ದೇವತೆಗಳನ್ನು ಪ್ರತಿನಿಧಿಸಿದರೆ, ಮನಸ್ಸು ಭಗವಂತನನ್ನು ಪ್ರತಿನಿಧಿಸುತ್ತದೆ. ಇವುಗಳ ಸ್ವಭಾವವೇ ಸೇವೆ ಮಾಡುವುದು. ಆ ಸೇವೆಯನ್ನು ನಿಷ್ಕಾಮದಿಂದ ಭಗವಂತನಲ್ಲಿ ವಿನಿಯೋಗಿಸಿದರೆ, ಅದು ಮುಕ್ತಿಗಿಂತಲೂ ಶ್ರೇಷ್ಠವೆನಿಸುತ್ತದೆ. ಜಠರಾಗ್ನಿಯು ನಾವು ತಿನ್ನುವ ಆಹಾರವನ್ನೆಲ್ಲಾ ಅರಗಿಸುವಂತೆ ಭಕ್ತಿಯು ಜೀವಿಯು ಮತ್ತೆ ಮತ್ತೆ ಜನ್ಮವೆತ್ತಲು ಕಾರಣವಾಗುವ ಸೂಕ್ಷ್ಮ ಶರೀರವನ್ನು ಕರಗಿಸಿಬಿಡುತ್ತದೆ! ನನ್ನ ಶುದ್ಧ ಭಕ್ತನು ನನ್ನೊಡನೆ ಒಂದಾಗಲು ಬಯಸದೆ, ಕೇವಲ ನನ್ನ ಪಾದಸೇವೆಯಲ್ಲೇ ಆಸಕ್ತನಾಗಿರುತ್ತಾನೆ. ಅಂಥವನು, ಇತರ ಭಕ್ತರ ಸಂಗದಲ್ಲಿ ನನ್ನ ಲೀಲೆಗಳ ಶ್ರವಣ, ಕೀರ್ತನಗಳಲ್ಲಿ ತೊಡಗುತ್ತಾನೆ. ಇಂಥ ಭಕ್ತರು, ಅರುಣೋದಯದ ಬಾನಿನಂತೆ ಕೆಂಪಾದ ಕಂಗಳಿಂದಲೂ ಸುಂದರ ನಗೆಯಿಂದಲೂ ಕೂಡಿರುವ ನನ್ನ ದಿವ್ಯ ಮೂರ್ತಿಗಳನ್ನು ನೋಡುತ್ತಾ, ನನ್ನ ವಿಷಯವಾಗಿಯೇ ಮಾತನಾಡುತ್ತಾ, ನನ್ನನ್ನೇ ಚಿಂತಿಸುತ್ತಾ, ಭೌತಿಕ ವಿಷಯಗಳಲ್ಲಿ ಸಂಪೂರ್ಣ ಅನಾಸಕ್ತರಾಗಿ, ಇಚ್ಛೆಯಿರದಿದ್ದರೂ, ಯಾವುದೇ ಕಷ್ಟವಿಲ್ಲದೇ ಮುಕ್ತಿಯನ್ನು ಪಡೆಯುತ್ತಾರೆ! ಅಮ್ಮಾ, ಇಂಥ ನಿಷ್ಕಾಮ ಭಕ್ತರು ಸ್ವರ್ಗಸುಖಗಳನ್ನಾಗಲೀ, ಸತ್ಯಲೋಕವನ್ನಾಗಲೀ ಅಥವಾ ನನ್ನ ಧಾಮವನ್ನಾಗಲೀ, ಅಷ್ಟಸಿದ್ಧಿಗಳನ್ನಾಗಲೀ ಯಾವುದನ್ನೂ ಬಯಸುವುದಿಲ್ಲ. ಆದರೂ ಮುಕ್ತಿಯು ಸದಾ ಅವರ ಬಾಗಿಲಲ್ಲೇ ಕೈ ಮುಗಿದು ನಿಂತಿರುತ್ತದೆ. ನನ್ನನ್ನು ಒಬ್ಬ ಮಿತ್ರ, ಪ್ರಿಯಕರ, ಬಂಧು, ಮಗ, ಗುರು, ಅಥವಾ ದೈವವಾಗಿ ಕಾಣುವ ಇಂಥ ಭಕ್ತರಿಗೆ ನಾನು ನೀಡುವ ಆಧ್ಯಾತ್ಮಿಕ ಸಿರಿಸಂಪತ್ತು ಕಾಲಗತಿಯಲ್ಲಿ ನಷ್ಟವಾಗುವುದಿಲ್ಲ.
“ಹೀಗೆ ಭಕ್ತರು ಈ ಲೋಕದ ಧನ, ಮಕ್ಕಳು, ಪಶುಗಳು, ಮನೆ, ಆಸ್ತಿ, ಮೊದಲಾದವುಗಳಲ್ಲಿನ ಆಸೆಯನ್ನೂ ಸ್ವರ್ಗವೇ ಮೊದಲಾದ ಉತ್ತಮಲೋಕಗಳ ಆಸೆಯನ್ನೂ ತ್ಯಜಿಸಿ ನನ್ನನ್ನೇ ಭಕ್ತಿಯಿಂದ ಭಜಿಸುತ್ತಾರೆ. ಅಂಥವರನ್ನು ನಾನು ಮೃತ್ಯುವಿನ ಭಯದಿಂದ ದೂರಮಾಡುತ್ತೇನೆ. ಅಮ್ಮಾ, ಪ್ರಕೃತಿ ಪುರುಷರಿಬ್ಬರಿಗೂ ಈಶ್ವರನಾದ, ಎಲ್ಲ ಜೀವಿಗಳ ಪರಮಾತ್ಮನಾದ ನನ್ನ ಆಶ್ರಯವಲ್ಲದೆ, ಭಯವನ್ನು ನಿವಾರಿಸಲು ಬೇರೆ ದಾರಿಯೇ ಇಲ್ಲ! ವಾಯುವು ನನ್ನ ಭಯದಿಂದಲೇ ಗಾಳಿ ಬೀಸುತ್ತಾನೆ! ಸೂರ್ಯನು ನನ್ನ ಭಯದಿಂದಲೇ ಬೆಳಗುತ್ತಾನೆ! ಇಂದ್ರನು ಮಳೆಸುರಿಸುವುದಾಗಲೀ ಅಗ್ನಿಯು ಸುಡುವುದಾಗಲೀ ನನ್ನ ಭಯದಿಂದಲೇ! ಹೆಚ್ಚೇನು ಹೇಳಲಿ? ಸ್ವಯಂ ಮೃತ್ಯುವೇ ನನ್ನ ಭಯದಿಂದ ಎಲ್ಲ ಪ್ರಾಣಿಗಳ ಜೀವವನ್ನೊಯ್ಯುತ್ತಾನೆ!
“ಆದ್ದರಿಂದ ಅಮ್ಮಾ, ಯೋಗಿಗಳು ಜ್ಞಾನವೈರಾಗ್ಯಗಳಿಂದಲೂ ಭಕ್ತಿಯಿಂದಲೂ ನನ್ನ ಪಾದಮೂಲಗಳಿಗೆ ಶರಣಾಗಿ ತಮ್ಮ ಭಯವನ್ನು ನೀಗಿಕೊಳ್ಳುತ್ತಾರೆ.”
“ಈ ಲೋಕದಲ್ಲಿ ವಾಸಿಸುತ್ತಲೇ ಜನರು ಭಕ್ತಿಯೋಗದಿಂದ ತಮ್ಮ ಮನಸ್ಸನ್ನು ನನ್ನಲ್ಲಿ ಸ್ಥಿರವಾಗಿ ಅರ್ಪಿಸಬೇಕು. ಇದೇ ಅತ್ಯುನ್ನತ ಸ್ಥಿತಿಯನ್ನು ಹೊಂದಲು ಇರುವ ಒಂದೇ ಮಾರ್ಗ.”
ಭಗವಂತನು ಈಗ ಇಪ್ಪತ್ತೈದು ತತ್ತ್ವಗಳ ಸಮನ್ವಯದಿಂದ ಉಂಟಾದ ಈ ಸೃಷ್ಟಿಯ ರಹಸ್ಯವನ್ನು ವಿವರಿಸತೊಡಗಿದನು. ಪ್ರಕೃತಿ, ಪುರುಷರ ಸಂಪರ್ಕವೇ ಸೃಷ್ಟಿಗೆ ಮೂಲವಾಗಿ, ಅದು ಇಪ್ಪತ್ತೈದು ಸಂಖ್ಯಾತ್ಮಕ ತತ್ತ್ವಗಳಿಂದ ಕೂಡಿದೆ. ಹಾಗಾಗಿ ಈ ಜ್ಞಾನ, ಸಾಂಖ್ಯವೆನಿಸಿದೆ.
ಭಗವಾನ್ ಕಪಿಲನು ಹೇಳಿದನು, “ಆದಿಯಿಲ್ಲದ ದೇವೋತ್ತಮ ಪುರುಷನು ಪ್ರಕೃತಿಗಿಂತಲೂ ಮಿಗಿಲಾದವನೂ ಸ್ವಯಂಪ್ರಕಾಶನೂ ಸರ್ವಾಂತರ್ಯಾಮಿಯೂ ಆಗಿರುವನು. ಅವನಿಂದಲೇ ಈ ಜಗತ್ತು ಹೊರಹೊಮ್ಮಿದೆ. ಸೃಷ್ಟಿಗೆ ಮೊದಲು, ಅವನೂ ಪ್ರಕೃತಿಯೂ ಇದ್ದರು. ಅವನು ಸೂಕ್ಷ್ಮವಾದ ಪ್ರಕೃತಿಯೊಡನೆ ಲೀಲೆಯಿಂದ ಸಂಪರ್ಕಿಸಿದನು. ತ್ರಿಗುಣಾತ್ಮಕವಾದ ಪ್ರಕೃತಿಯಲ್ಲಿ ಆಗ ವಿಕಾರವುಂಟಾಗಿ ಸುಪ್ತವಾಗಿದ್ದ ಆ ಗುಣಗಳು ಪ್ರಕಟಗೊಂಡವು. ಆ ಕಾರಣದಿಂದ, ಅವನ ಅಂಶಗಳೇ ಆದ ಜೀವಿಗಳ ಸ್ವರೂಪವನ್ನು ಮರೆಮಾಡುವ ವಿವಿಧ ರೂಪಗಳು ಸೃಷ್ಟವಾದವು. ತನ್ನ ಸ್ವರೂಪವನ್ನು ಮರೆತ ಜೀವಿಯು ಪ್ರಕೃತಿಯ ಪ್ರಭಾವದಿಂದ ತಾನು ನಿಜವಾಗಿ ಕರ್ಮಗಳನ್ನು ಮಾಡದಿದ್ದರೂ ತಾನೇ ಮಾಡಿದೆನೆಂದು ಭಾವಿಸಿಕೊಳ್ಳುತ್ತಾನೆ. ಎಲ್ಲ ಕಾರ್ಯಗಳಿಗೂ ಪ್ರಕೃತಿಯೇ ಕಾರಣವಾದರೂ, ಪುರುಷನು ತನ್ನನ್ನು ಪ್ರಕೃತಿಯಲ್ಲಿ ಆರೋಪಿಸಿಕೊಂಡು ಸುಖದುಃಖಗಳನ್ನು ಅನುಭವಿಸುತ್ತಾನೆ.”
ದೇವಹೂತಿಯು ಹೇಳಿದಳು, “ಪ್ರಭು! ಸದಸದಾತ್ಮಕವಾಗಿರುವ ಈ ಸೃಷ್ಟಿಗೆ ಕಾರಣವಾದ ಪ್ರಕೃತಿ, ಪುರುಷರ ಲಕ್ಷಣಗಳನ್ನು ವಿವರಿಸು.”

“ಅಮ್ಮಾ”, ಭಗವಾನ್ ಕಪಿಲನು ಹೇಳತೊಡಗಿದನು, “ಯಾವುದು ತ್ರಿಗುಣಾತ್ಮಕವಾಗಿರುವುದೋ, ಕಾರ್ಯಕಾರಣಗಳನ್ನೊಳಗೊಂಡಿರುವುದೋ, ನಿತ್ಯವಾಗಿರುವುದೋ, ಅದು ಅವ್ಯಕ್ತವಾಗಿದ್ದಾಗ, ಪ್ರಧಾನವೆಂದು ಕರೆಯಲ್ಪಡುವುದು. ಅದೇ ವ್ಯಕ್ತವಾದಾಗ ಪ್ರಕೃತಿಯೆಂದು ಕರೆಯಲ್ಪಡುವುದು. ಅಗ್ನಿ, ನೀರು, ಗಾಳಿ, ಭೂಮಿ, ಆಕಾಶವೆಂಬ ಪಂಚಭೂತಗಳೂ, ರೂಪ, ರಸ, ಸ್ಪರ್ಶ, ಗಂಧ ಶಬ್ದವೆಂಬ ತನ್ಮಾತ್ರೆಗಳೂ, ಕಣ್ಣು, ಕಿವಿ, ನಾಲಗೆ, ಚರ್ಮ, ಮೂಗು ಎಂಬ ಐದು ಜ್ಞಾನೇಂದ್ರಿಯಗಳೂ ಕೈ, ಕಾಲು, ವಾಕ್, ಗುದ, ಜನನೇಂದ್ರಿಯಗಳೆಂಬ ಐದು ಕರ್ಮೇಂದ್ರಿಯಗಳೂ – ಒಟ್ಟು ಹತ್ತು ಇಂದ್ರಿಯಗಳೂ, ತಮ್ಮ ವಿಭಿನ್ನ ಕಾರ್ಯಗಳಿಂದ ಮಾತ್ರ ವ್ಯತ್ಯಾಸ ತಿಳಿಯಬಹುದಾದ ಮನಸ್ಸು, ಬುದ್ಧಿ, ಅಹಂಕಾರ, ಕಲುಷಿತ ಪ್ರಜ್ಞೆ (ಚಿತ್ತ) ಎಂಬ ನಾಲ್ಕು ಸೂಕ್ಷ್ಮೇಂದ್ರಿಯಗಳೂ ಸೇರಿ ಒಟ್ಟು ಇಪ್ಪತ್ತುನಾಲ್ಕು ತತ್ತ್ವಗಳು ಪ್ರಧಾನಾತ್ಮಕವಾಗಿವೆ. ಇವೆಲ್ಲವೂ ಸಗುಣಬ್ರಹ್ಮನ ಗುಣಗಳೆನಿಸುತ್ತವೆ. ಪರಬ್ರಹ್ಮನು ವಾಸ್ತವವಾಗಿ ಭೌತಿಕ ಗುಣಗಳ ಕಲ್ಮಷವಿಲ್ಲದೆ ನಿರ್ಗುಣನೆನಿಸಿದ್ದರೂ, ತನ್ನ ಶಕ್ತಿಯಿಂದ ಎಲ್ಲವನ್ನೂ ವ್ಯಾಪಿಸಿರುತ್ತಾನೆ! ಈ ತತ್ತ್ವಗಳನ್ನು ಸಮನ್ವಯಗೊಳಿಸುವ ಇಪ್ಪತ್ತೈದನೆಯ ತತ್ತ್ವವೇ ಕಾಲ. ಎಲ್ಲರಿಗೂ ಮರಣಭಯವುಂಟುಮಾಡುವ ಈ ಕಾಲದಲ್ಲಿ ಭಗವಂತನ ಪ್ರಭಾವ ಕಾಣುವುದು! ಅವನು ಹೊರಗೆ ಕಾಲರೂಪದಲ್ಲಿರುತ್ತಾ ಒಳಗೆ ಪರಮಾತ್ಮನ ರೂಪದಲ್ಲಿದ್ದು ಇಪ್ಪತ್ತೈದನೆಯ ತತ್ತ್ವವೆನಿಸುವನು. ಪುರುಷ ಅಥವಾ ಜೀವ, ಪರಮಪುರುಷನಾದ ಅವನ ಅಂಶವೇ ಆಗಿದ್ದು ಅವನಿಂದ ಅಭಿನ್ನನೇ ಹೌದು. ಆದರೆ ಪ್ರಕೃತಿಯ ಮೇಲೆ ಒಡೆತನ ಸಾಧಿಸಲು ತನ್ನ ದಿವ್ಯ ಸ್ವರೂಪ ಮರೆತು ಬಂಧಿತನಾಗುವನು.
“ಭಗವಂತನು ಪ್ರಕೃತಿಯಲ್ಲಿ ತನ್ನ ವೀರ್ಯ ಅಥವಾ ಶಕ್ತಿಯನ್ನು ನಿಯೋಜಿಸಿದಾಗ ಅದು ವಿಶ್ವಕ್ಕೆ ಮೂಲವಾದ ಮಹತ್ತತ್ತ್ವವನ್ನು ಪ್ರಕಟಿಸುವುದು. ಹಿರಣ್ಮಯವಾದ ಇದು, ಸುತ್ತಲಿನ ಕತ್ತಲನ್ನು ನುಂಗಿ ಬೆಳಗುವುದು. ನಿರ್ವಿಕಾರವಾದ, ಶುದ್ಧ ಪ್ರಜ್ಞೆ (ಚಿತ್ತ) ಇದರಲ್ಲಿರುವುದು.
“ಭಗವಂತನ ಶಕ್ತಿಯಿಂದ ಮಹತ್ತತ್ತ್ವದಲ್ಲಿ ವಿಕಾರವಾಗಿ ಕ್ರಿಯಾಶೀಲವಾದ ಅಹಂಕಾರ ತತ್ತ್ವ ಉಂಟಾಗುವುದು. ಸಾತ್ತ್ವಿಕ, ರಾಜಸಿಕ, ತಾಮಸಿಕ ಎಂಬ ಮೂರು ವಿಧದ ಅಹಂಕಾರ, ಶಾಂತ, ಕ್ರಿಯಾಶೀಲ, ಮೌಢ್ಯ ಗುಣಗಳುಳ್ಳದ್ದಾಗಿರುವುದು.
“ಸಾತ್ತ್ವಿಕ ಅಹಂಕಾರದಿಂದ ಮನಸ್ಸೆಂಬ ತತ್ತ್ವವೂ ರಾಜಸಿಕ ಅಹಂಕಾರದಿಂದ ಬುದ್ಧಿತತ್ತ್ವವೂ ಉಂಟಾಗುತ್ತದೆ. ರಾಜಸಾಹಂಕಾರದಿಂದ ಜ್ಞಾನೇಂದ್ರಿಯಗಳೂ ಕರ್ಮೇಂದ್ರಿಯಗಳೂ ಉದ್ಭವಿಸುತ್ತವೆ. ತಾಮಸಾಹಂಕಾರದಿಂದ ಪಂಚಭೂತಗಳೂ ಪಂಚನ್ಮಾತ್ರೆಗಳೂ ಉದ್ಭವಿಸುತ್ತವೆ.
“ಹೀಗೆ ಇಪ್ಪತ್ತುನಾಲ್ಕು ತತ್ತ್ವಗಳೂ ಪ್ರಕಟವಾಗಿ ಬಿಡಿಬಿಡಿಯಾಗಿದ್ದವು. ಆಗ ಅವನ್ನು ಸಮನ್ವಯಗೊಳಿಸಲು ಭಗವಂತನು ಕಾಲ, ಕರ್ಮ, ತ್ರಿಗುಣಗಳೊಂದಿಗೆ ಸುಪ್ತ ವಿಶ್ವವನ್ನು ಪ್ರವೇಶಿಸಲು, ಅದು ಅಚೇತನವಾದ ದೊಡ್ಡ ಅಂಡದ ರೂಪ ತಾಳಿತು! ಅದು, ಒಂದಕ್ಕಿಂತ ಒಂದು ಹತ್ತು ಪಟ್ಟು ವಿಸ್ತಾರವಾದ ನೀರು, ವಾಯು, ಅಗ್ನಿ, ಆಕಾಶ, ಅಹಂಕಾರ, ಮಹತ್ತತ್ತ್ವಗಳ ಆರು ಆವರಣಗಳಿಂದ ಸುತ್ತುವರಿಯಲ್ಪಟ್ಟಿತ್ತು. ಕಡೆಯ ಆವರಣ ಪ್ರಧಾನವಾಗಿತ್ತು. ಈ ಬೃಹತ್ ಅಂಡದಲ್ಲಿ ಭಗವಂತನು ವಿರಾಟ್ಪುರುಷನಾಗಿ ಪ್ರಕಟಗೊಂಡನು. ನೀರಿನಮೇಲೆ ಪವಡಿಸಿದ್ದ ಅವನ ದೇಹದಲ್ಲೇ ಹದಿನಾಲ್ಕು ಲೋಕಗಳಿದ್ದವು. ಒಂದೊಂದಾಗಿ ಅವನ ಅಂಗಾಂಗಗಳೂ ಅವುಗಳ ಅಭಿಮಾನಿ ದೇವತೆಗಳೂ ಪ್ರಕಟವಾದರು. ಆದರೆ ಅವರಾರಿಗೂ ಅವನನ್ನು ಎಬ್ಬಿಸಲಾಗಲಿಲ್ಲ. ಆಗ ಅವರು ಯಾವ ಅಂಗಗಳಿಂದ ಹೊರಬಂದಿದ್ದರೋ ಆ ಅಂಗಗಳನ್ನೇ ಪ್ರವೇಶಿಸಿದರು. ಕಡೆಗೆ ಪ್ರಜ್ಞೆ (ಚಿತ್ತ) ಯ ದೇವತೆಯಾದ ಕ್ಷೇತ್ರಜ್ಞ ಅಥವಾ ಪರಮಾತ್ಮನು ಪ್ರವೇಶಿಸಿದಾಗ ವಿರಾಟ್ಪುರುಷನು ಎಚ್ಚರಗೊಂಡನು.
“ನಿದ್ರೆಯಲ್ಲಿರುವವನ್ನು ಎಚ್ಚರಿಸುವುದು ಪ್ರಜ್ಞೆಯೇ ಅಲ್ಲವೇ? ಆದ್ದರಿಂದ ಆ ಪರಮಾತ್ಮನನ್ನು ಜ್ಞಾನದಿಂದಲೂ ವಿರಕ್ತಿಯಿಂದಲೂ ಧ್ಯಾನಿಸಬೇಕು.”
ದೇವಹೂತಿಯು ಕೇಳಿದಳು, “ಪ್ರಭು! ಪ್ರಕೃತಿ ಪುರುಷರು ಒಂದನ್ನೊಂದು ತೀವ್ರವಾಗಿ ಆಶ್ರಯಿಸಿರುವಾಗ, ಪ್ರಕೃತಿಯಿಂದ ಪುರುಷನಿಗೆ ಬಿಡುಗಡೆ ಸಾಧ್ಯವೇ?”
ಕಪಿಲನು ಹೇಳಿದನು, “ಫಲಗಳನ್ನು ಅಪೇಕ್ಷಿಸದೇ ಸ್ವಧರ್ಮವನ್ನು ಆಚರಿಸುವುದರಿಂದಲೂ ನನ್ನಲ್ಲಿ ತೀವ್ರವಾದ ಭಕ್ತಿಯಿಂದಲೂ ಬಿಡುಗಡೆ ಸಾಧ್ಯ. ಅರಣಿಯಿಂದ ಬೆಂಕಿಯು ಹುಟ್ಟಿದ ಬಳಿಕ, ಅದು ಆ ಅರಣಿಯನ್ನೇ ಸುಟ್ಟುಹಾಕುವಂತೆ, ಯಾವ ಕರ್ಮಗಳಿಂದ ಜೀವಿಯು ಬಂಧಿತನಾಗುವನೋ, ಅದೇ ಕರ್ಮಗಳನ್ನು ಭಗವಂತನ ಸೇವೆಗಾಗಿ ಮಾಡಿದರೆ, ಪ್ರಕೃತಿಯ ಪ್ರಭಾವ ದೂರಾಗುತ್ತದೆ. ಕನಸು ಕಾಣುತ್ತಿರುವ ವ್ಯಕ್ತಿಯು ತನ್ನ ಪ್ರಜ್ಞೆಯು ಮುಚ್ಚಲ್ಪಟ್ಟು ಅನೇಕ ಅನರ್ಥಗಳನ್ನು ಕಾಣುತ್ತಾನೆ; ಎಚ್ಚರಗೊಂಡ ಕೂಡಲೇ ಆ ಭ್ರಮೆಯಿಂದ ದೂರಾಗುತ್ತಾನಲ್ಲವೇ? ಇದೂ ಹಾಗೆಯೇ!”
* * *
ಭಗವಾನ್ ಕಪಿಲನು ಮುಂದುವರಿಸಿದನು, “ಅಮ್ಮಾ, ಈಗ ನಾನು ಯೋಗದ ಬಗ್ಗೆ ಹೇಳುವೆ. ಯೋಗವೆಂದರೆ, ಭಗವಂತನ ಸುಂದರ ರೂಪವನ್ನು ಧ್ಯಾನಿಸುವುದೇ ಆಗಿದೆ. ಯೋಗಿಯು ತನ್ನ ಶಕ್ತ್ಯನುಸಾರ ಸ್ವಧರ್ಮವನ್ನಾಚರಿಸುತ್ತಾ, ನಿಷಿದ್ಧಕರ್ಮಗಳನ್ನು ತ್ಯಜಿಸುತ್ತಾ ದೈವದಿಂದ ಏನು ದೊರೆಯುವುದೋ ಅದರಿಂದ ಸಂತೋಷವಾಗಿದ್ದು ಗುರುಗಳ ಪಾದ ಪದ್ಮವನ್ನು ಪೂಜಿಸಬೇಕು. ಮಿತವಾಗಿ ಆಹಾರಸೇವನೆ ಮಾಡುತ್ತಾ ಅಹಿಂಸೆ, ಸತ್ಯ, ಬ್ರಹ್ಮಚರ್ಯೆ, ಕಳ್ಳತನವಿಲ್ಲದಿರುವಿಕೆ, ಅಗತ್ಯವಿದ್ದಷ್ಟು ಧನಸಂಗ್ರಹ, ವೈದಿಕಗ್ರಂಥಗಳ ಅಧ್ಯಯನ, ಶೌಚ, ಭಗವಂತನ ಅರ್ಚನೆಗಳನ್ನು ಪಾಲಿಸಬೇಕು. ಮೌನ, ಸ್ಥೈರ್ಯ, ಇಂದ್ರಿಯನಿಗ್ರಹ, ವಿವಿಧ ಯೋಗಾಸನಗಳ ಅಭ್ಯಾಸ, ಪ್ರಾಣಾಯಾಮಗಳಿಂದ ಮನಸ್ಸನ್ನು ನಿಯಂತ್ರಿಸಬೇಕು. ಶುಚಿಯಾದ, ಏಕಾಂತವಾದ ಸ್ಥಳದಲ್ಲಿ, ನೇರವಾಗಿ ಕುಳಿತ ಸೂಕ್ತ ಆಸನದಲ್ಲಿ (ಪದ್ಮಾಸನ), ಅರ್ಧ ಮುಚ್ಚಿದ ಕಂಗಳಿಂದ ಮೂಗಿನ ತುದಿಯಲ್ಲಿ ಶ್ರೀಹರಿಯ ಸುಂದರ ರೂಪವನ್ನು ಕಲ್ಪಿಸಿಕೊಂಡು ಏಕಾಗ್ರತೆಯಿಂದ ಧ್ಯಾನಿಸಬೇಕು.”
ದೇವಹೂತಿಯು ಕೇಳಿದಳು, “ಪ್ರಭು! ನೀನು ನನಗೆ ಸಾಂಖ್ಯಶಾಸ್ತ್ರವನ್ನೂ ಯೋಗದ ವಿಧಿಯನ್ನೂ ವರ್ಣಿಸಿರುವೆ. ಈಗ ಭಕ್ತಿಯೋಗದ ರೀತಿಗಳನ್ನು ವಿವರಿಸು.”
ಭಗವಾನ್ ಕಪಿಲನು ಹೇಳಿದನು, “ಅಮ್ಮಾ! ಭಕ್ತಿಯೋಗವು ಬಹುವಿಧವಾಗಿರುತ್ತದೆ. ಅದು, ಭಕ್ತನ ಸ್ವಭಾವ, ಗುಣಗಳಿಗನುಗುಣವಾಗಿರುತ್ತದೆ. ಹಿಂಸೆ, ಅಹಂಕಾರ, ಮಾತ್ಸರ್ಯ, ಕೋಪ, ಈ ಗುಣಗಳನ್ನುಳ್ಳ, ನನಗಿಂತ ಬೇರೆ ಆಶಯವುಳ್ಳ ಭಕ್ತನ ಭಕ್ತಿ, ತಾಮಸಿಕವಾದುದು. ದೇವಾಲಯಗಳಲ್ಲಿ ವಿಗ್ರಹಪೂಜೆ ಮಾಡುತ್ತಾ, ಐಶ್ವರ್ಯ, ಕೀರ್ತಿಗಳಿಗಾಗಿ ಮಾಡುವ ಭಕ್ತಿ ರಾಜಸಿಕವಾದುದು. ಕರ್ಮಗಳನ್ನು ಮಾಡುತ್ತಾ ಅವುಗಳ ಫಲಗಳನ್ನು ಭಗವಂತನಿಗೆ ಅರ್ಪಿಸುತ್ತಾ ಅವುಗಳ ಬಂಧನದಿಂದ ಮುಕ್ತನಾಗಲು ಆಚರಿಸುವ ಭಕ್ತಿ, ಸಾತ್ತ್ವಿಕವಾದುದು.
“ಅಮ್ಮಾ! ನನ್ನ ನಾಮ, ಲೀಲೆಗಳನ್ನು ಕೇಳಿದ ಮಾತ್ರಕ್ಕೆ ಗಂಗೆಯು ಸಮುದ್ರದೆಡೆಗೆ ಹರಿಯುವಂತೆ ಯಾರ ಮನಸ್ಸು ನನ್ನ ಕಡೆಗೆ ಹರಿಯುವುದೋ ಅಂಥವನ ಭಕ್ತಿ, ಶುದ್ಧವಾದುದು. ಇಂಥ ಭಕ್ತರು, ನಾನು ದಯಪಾಲಿಸುವ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾರ್ಷ್ಟಿ, ಸಾಯುಜ್ಯವೆಂಬ ಮುಕ್ತಿಗಳನ್ನೂ ಬಯಸದೇ ಕೇವಲ ನನ್ನ ಪಾದಸೇವೆಯೊಂದನ್ನೇ ಬಯಸುವರು. ಇದು ಭಕ್ತಿಯ ಅತ್ಯುನ್ನತ ಸ್ಥಿತಿ. ಇಂಥ ಭಕ್ತಿಯಿಂದ ತ್ರಿಗುಣಗಳನ್ನು ಮೀರಿ ಭಕ್ತನು ನನ್ನ ಭಾವವನ್ನು ಹೊಂದುತ್ತಾನೆ.
“ಭಕ್ತನಾದವನು ತನಗೆ ವಿಧಿಸಲ್ಪಟ್ಟಿರುವ ಸ್ವಧರ್ಮವನ್ನು ಫಲಾಪೇಕ್ಷೆಯಿಲ್ಲದೇ ಆಚರಿಸುತ್ತಾ, ಅತಿಯಾದ ಹಿಂಸೆಯಿಲ್ಲದೇ, ನನ್ನ ದರ್ಶನ, ವಿಗ್ರಹದ ಪಾದಸ್ಪರ್ಶ, ಅರ್ಚನೆ, ವಂದನೆಗಳನ್ನು ಮಾಡುತ್ತಾ ಎಲ್ಲ ಜೀವಿಗಳಲ್ಲೂ ನನ್ನ ಇರುವಿಕೆಯನ್ನು ಗುರುತಿಸಬೇಕು. ಗುರುಗಳನ್ನು ಗೌರವಿಸುತ್ತಾ, ಶ್ರವಣಕೀರ್ತನಗಳಲ್ಲಿ ತೊಡಗಿರುತ್ತಾ, ಬಡಜನರಲ್ಲಿ ಅನುಕಂಪ ತೋರುತ್ತಾ, ಸಮಾನರೊಂದಿಗೆ ಮೈತ್ರಿಯಿಂದಿರುತ್ತಾ, ದುಷ್ಟರೊಂದಿಗೆ ಹೆಚ್ಚಾಗಿ ಬೆರೆಯದೆ, ಶಾಂತರಾಗಿರಬೇಕು, ಹಾಗೂ ನಿರಹಂಕಾರಿಗಳಾಗಿರಬೇಕು.
“ಅಮ್ಮಾ, ನಾನು ಎಲ್ಲ ಜೀವಿಗಳಲ್ಲೂ ಪರಮಾತ್ಮನಾಗಿ ನೆಲೆಸಿದ್ದೇನೆ. ಅಂಥ ನನ್ನನ್ನು ಗುರುತಿಸದೇ ಕೇವಲ ವಿಗ್ರಹಾರ್ಚನೆ ಮಾಡುವುದು ವಿಡಂಬನೆಯೆನಿಸುತ್ತದೆ! ಅವನ ಆಚರಣೆಯು ಬೂದಿಯಲ್ಲಿ ಹೋಮ ಮಾಡಿದಂತಾಗುವುದು! ಎಲ್ಲರಲ್ಲೂ ಭೇದಭಾವದ ದೃಷ್ಟಿಯಿರುವವನು ಇತರ ದೇಹಗಳಲ್ಲಿ ನನ್ನನ್ನು ದ್ವೇಷಿಸುತ್ತಾ ಇದ್ದರೆ ಎಂದಿಗೂ ಶಾಂತಿಯನ್ನು ಹೊಂದುವುದಿಲ್ಲ. ಸಕಲ ಜೀವಿಗಳಲ್ಲೂ ನಾನಿರುವುದನ್ನು ಅರಿಯದೇ ಧೂಪದೀಪಗಳಿಂದ ಎಷ್ಟೇ ಅಚ್ಚುಕಟ್ಟಾಗಿ ವಿಗ್ರಹಾರ್ಚನೆ ಮಾಡಿದರೂ ನಾನು ತೃಪ್ತನಾಗುವುದಿಲ್ಲ. ನಾನು ಭಕ್ತನ ಹೃದಯದಲ್ಲೂ ಎಲ್ಲರ ಹೃದಯಗಳಲ್ಲೂ ಇರುವೆನೆಂಬ ಅರಿವಾಗುವವರೆಗೂ ವಿಗ್ರಹಪೂಜೆ ಮಾಡುತ್ತಾ ಸ್ವಧರ್ಮವನ್ನಾಚರಿಸಬೇಕು. ಎಲ್ಲರ ದೇಹಗಳಲ್ಲೂ ನಾನಿದ್ದೇನೆಂದು ಅರಿತು, ದಾನ, ಗೌರವಗಳಿಂದಲೂ ಸ್ನೇಹದಿಂದಲೂ ವ್ಯಕ್ತಿಯು ತನ್ನ ಆತ್ಮದಂತೆಯೇ ಎಲ್ಲರನ್ನೂ ಕಾಣುತ್ತಾ ನನ್ನನ್ನು ಪೂಜಿಸಬೇಕು.”
* * *
ಭಗವಾನ್ ಕಪಿಲನು ತನ್ನ ಉಪದೇಶವನ್ನು ಮುಂದುವರಿಸಿದನು, “ಅಮ್ಮಾ, ಕಾಮ್ಯಕರ್ಮಗಳಲ್ಲೇ ಅಂಟಿಕೊಂಡಿರುವ ಜೀವಿಯ ಗತಿಯನ್ನು ಈಗ ಹೇಳುತ್ತೇನೆ. ಮೋಡಗಳ ಸಮೂಹಕ್ಕೆ ಗಾಳಿಯು ಅದನ್ನು ಚದುರಿಸುವುದೆಂದು ಹೇಗೆ ತಿಳಿಯುವುದೇ ಇಲ್ಲವೋ, ಜೀವಿಗಳಿಗೆ ಕಾಲದ ಪ್ರಭಾವ ತಿಳಿಯುವುದೇ ಇಲ್ಲ! ಸುಖಕ್ಕಾಗಿ ಒಬ್ಬ ವ್ಯಕ್ತಿಯು ಬಹಳ ಕಷ್ಟಪಟ್ಟು ಏನೆಲ್ಲಾ ಮಾಡುವನೋ, ಕಾಲರೂಪಿಯಾದ ಭಗವಂತನು ಅವೆಲ್ಲವನ್ನೂ ನಾಶಪಡಿಸಿಬಿಡುತ್ತಾನೆ! ಅದರಿಂದ ಅವನು ಬಹಳ ದುಃಖಿಸುತ್ತಾನೆ! ತನ್ನ ಮನೆ, ಪತ್ನಿ, ಸುತರನ್ನು ಶಾಶ್ವತವೆಂದು ಭಾವಿಸುತ್ತಾ ಅವರನ್ನು ಸಾಕಲು ಅನೇಕ ಪಾಪಾಚರಣೆಗಳನ್ನು ಮಾಡುವ ಅವನು, ವೃದ್ಧನಾಗಿ ಶಕ್ತಿಹೀನನಾದಾಗ ಅವರಿಂದಲೇ ಉಪೇಕ್ಷೆಗೊಳಗಾಗುತ್ತಾ ಅವರು ಹಾಕಿದ್ದು ತಿನ್ನುವ ನಾಯಿಯಂತಾಗುತ್ತಾನೆ! ಕೊನೆಗಾಲದಲ್ಲಿ ಅವರನ್ನು ಬಿಟ್ಟುಹೋಗಲಾರದೇ ಅಳುತ್ತಳುತ್ತಾ, ಯಮದೂತರನ್ನು ಕಂಡು ಹೆದರಿ, ಮಲಮೂತ್ರಗಳನ್ನು ವಿಸರ್ಜಿಸುತ್ತಾನೆ! ಯಾತನಾದೇಹವನ್ನು ಸ್ವೀಕರಿಸುವ ಅವನನ್ನು ಯಮದೂತರು ದುರ್ಗಮವಾದ ದಾರಿಯಲ್ಲಿ ಎಳೆದೊಯ್ದು ಯಮಲೋಕದಲ್ಲಿ ವಿವಿಧ ಶಿಕ್ಷೆಗಳಿಗೊಳಪಡಿಸುತ್ತಾರೆ! ಅನಂತರ ಅವನು ವಿವಿಧ ಜನ್ಮಗಳನ್ನೆತ್ತಿ ಪುನಃ ಮಾನವನಾಗಿ ಹುಟ್ಟುತ್ತಾನೆ. ಅಮ್ಮಾ, ಸ್ವರ್ಗ ನರಕಗಳು ಈ ಭೂಮಿಯಲ್ಲೇ ಇವೆಯೆಂದು ಬಲ್ಲವರು ಹೇಳುತ್ತಾರೆ! ಅದೂ ನಿಜವೇ! ಯಾತನೆಗಳನ್ನೂ ಸುಖಗಳನ್ನೂ ಜನರು ಇಲ್ಲಿಯೇ ಅನುಭವಿಸುತ್ತಾರೆ! ಅಲ್ಲವೇ?
“ಗಂಡಿನ ವೀರ್ಯದಿಂದ ಹೆಣ್ಣಿನ ಗರ್ಭಕ್ಕೆ ಸೇರುವ ಜೀವಿಯು ವಿವಿಧ ಹಂತಗಳ ಬೆಳವಣಿಗೆಯಲ್ಲಿ ಸಾಗಿ ಶಿಶುವಾಗುತ್ತಾನೆ. ತಾಯಿಯು ಗರ್ಭದಂಥ ಇಕ್ಕಟ್ಟಿನ ಸ್ಥಳದಲ್ಲಿ, ಪಂಜರದಲ್ಲಿನ ಪಕ್ಷಿಯಂತೆ, ಮೂತ್ರದ ಮಧ್ಯೆ ಇರುತ್ತಾ, ಕೆಲವೊಮ್ಮೆ ಕ್ರಿಮಿಗಳಿಂದ ಕಚ್ಚಲ್ಪಡುತ್ತಾ ಬಹಳ ಕಷ್ಟದಿಂದ ವಾಸಿಸುತ್ತಾನೆ. ಆಗ ಅವನಿಗೆ ಪೂರ್ವಜನ್ಮಗಳ ಸ್ಮರಣೆಯುಂಟಾಗಿ ದುಃಖದಿಂದ ಭಗವಂತನನ್ನು ಪ್ರಾರ್ಥಿಸುತ್ತಾನೆ! ಆದರೇನು? ನವಮಾಸಗಳು ಕಳೆಯುತ್ತಲೇ ವಾಯುವಿನಿಂದ ಹೊರಕ್ಕೆ ತಳ್ಳಲ್ಪಟ್ಟಾಗ ಜನನ ಸಂಕಷ್ಟದಲ್ಲಿ ಆ ಜ್ಞಾನವೆಲ್ಲಾ ಲುಪ್ತವಾಗಿ ರೋದಿಸುತ್ತಾನೆ! ಹುಟ್ಟಿದ ಮಗುವನ್ನು ಎಲ್ಲರೂ ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರೂ ಬೆವರು, ಮೂತ್ರ, ಕ್ರಿಮಿಗಳ ಕಚ್ಚುವಿಕೆಯಿಂದ ಅದರ ಮೃದು ಚರ್ಮ ಬಾಧಿತವಾಗಿ, ಹೇಳಿಕೊಳ್ಳಲೂ ಆಗದೆ, ಬಹಳ ಕಷ್ಟಪಡುತ್ತದೆ! ಕ್ರಮೇಣ ಬೆಳೆಯುತ್ತಾ, ವ್ಯಕ್ತಿಯು ದುರಭಿಮಾನ, ಕಾಮ, ಕ್ರೋಧಗಳನ್ನು ಬೆಳೆಸಿಕೊಂಡು, ದೇಹಕ್ಕಾಗಿ ಬಹಳ ಕಷ್ಟಪಡುತ್ತಾನೆ. ಅವನು ದುಸ್ಸಂಗಕ್ಕೆ ಬಿದ್ದು ಪುನಃ ಪಾಪಾಚರಣೆಯಲ್ಲಿ ತೊಡಗಿದರೆ ಮತ್ತೆ ನರಕಕ್ಕೆ ಹೋಗುತ್ತಾನೆ. ಮತ್ತೆ ಮತ್ತೆ ಜನ್ಮವೆತ್ತುತ್ತಿರುತ್ತಾನೆ.
“ಅಮ್ಮಾ, ಹೆಣ್ಣಿನ ಕೈಯಲ್ಲಿ ಬೊಂಬೆಯಂತಾಗುವನ ಸಂಗವನ್ನೆಂದೂ ಮಾಡಬಾರದು! ಹೆಣ್ಣಿನ ಸುಂದರ ರೂಪ, ಭಗವಂತನ ಮಾಯೆಯೇ ಆಗಿದೆ! ಅಂತೆಯೇ ಹೆಣ್ಣಿಗೂ ಗಂಡಿನ ರೂಪ, ಮಾಯಾಸ್ವರೂಪವಾಗಿದೆ! ಆದ್ದರಿಂದ ಉನ್ನತಗತಿಯನ್ನು ಬಯಸುವವನು ಮೋಹಕ್ಕೆ ಒಳಗಾಗಬಾರದು.
“ಅಮ್ಮಾ, ಭಗವಂತನಲ್ಲಿ ಭಕ್ತಿಯಿಲ್ಲದ ಗೃಹಸ್ಥರು ಕಾಮನೆಗಳ ಪೂರೈಕೆಗಾಗಿ ಅನೇಕ ಯಾಗಯಜ್ಞಗಳನ್ನು ಮಾಡುತ್ತಾ ದೇವತೆಗಳನ್ನೂ ಪಿತೃಗಳನ್ನೂ ಸಂತೃಪ್ತಗೊಳಿಸಿ ಅವರ ಲೋಕಗಳಿಗೆ ಹೋಗುತ್ತಾರೆ. ಆದರೆ ಮಹಾವಿಷ್ಣುವು ಆದಿಶೇಷನ ಮೇಲೆ ಮಲಗಿದಕೂಡಲೇ ಆ ಲೋಕಗಳೆಲ್ಲವೂ ನಾಶಹೊಂದುತ್ತವೆ! ಆದರೆ ಭಕ್ತರು ಫಲಾಪೇಕ್ಷೆಯಿಲ್ಲದೇ ತಮ್ಮ ಸ್ವಧರ್ಮವನ್ನು ಮಾಡುತ್ತಾ `ನಾನು’, `ನನ್ನದು’ ಎಂಬ ಅಹಂಕಾರ ತ್ಯಜಿಸಿ ಭಗವಂತನಲ್ಲೇ ಶರಣಾಗಿ ಅವನ ಬಳಿಗೇ ಹಿಂದಿರುಗುತ್ತಾರೆ. ಆದ್ದರಿಂದ ಅಮ್ಮಾ, ನೀನೂ ಭಕ್ತಿಯಿಂದ ಅವನ ಪಾದಾರವಿಂದಗಳನ್ನು ಸೇವಿಸು. ಶ್ರೀಕೃಷ್ಣನಲ್ಲಿ ಭಕ್ತಿ ತೋರುವುದರಿಂದ ಬಹಳ ಬೇಗನೆ ಜ್ಞಾನ, ವೈರಾಗ್ಯಗಳು ಪ್ರಾಪ್ತವಾಗಿ ಮುಕ್ತಿ ದೊರೆಯುತ್ತದೆ.
“ಅಮ್ಮಾ, ಪ್ರಕೃತಿ ಪುರುಷರ ಸಂಬಂಧದ ವಿಷಯವಾದ ಸಾಂಖ್ಯಶಾಸ್ತ್ರವನ್ನೂ ಭಕ್ತಿಯೋಗವನ್ನೂ ವಿವರಿಸಿದ್ದೇನೆ. ಇದನ್ನು ದುಷ್ಟರಿಗೂ, ಅಧರ್ಮಿಗಳಿಗೂ, ಅಹಂಕಾರಿಗಳಿಗೂ, ಧರ್ಮದ ಸೋಗುಹಾಕಿದವರಿಗೂ ಉಪದೇಶಿಸಬಾರದು. ಈ ಶಾಸ್ತ್ರವನ್ನು ಶ್ರದ್ಧೆಯಿಂದ ಕೇಳುವವನು ನನ್ನಲ್ಲಿ ಭಕ್ತಿಯನ್ನು ಪಡೆದು, ನನ್ನ ಧಾಮಕ್ಕೆ ಹಿಂದಿರುಗುತ್ತಾನೆ.”
ದೇವಹೂತಿಯು ಆನಂದಭರಿತಳಾಗಿ ಹೇಳಿದಳು, “ಭಗವಾನ್! ನೀನು ಸಾಕ್ಷಾತ್ ಶ್ರೀಮನ್ನಾರಾಯಣ! ಜನ್ಮವಿಲ್ಲದುದರಿಂದ ಬ್ರಹ್ಮನನ್ನು ಎಲ್ಲರೂ ಅಜ ಎನ್ನುವರು. ಆದರೆ ಅವನೂ ನಿನ್ನ ನಾಭಿಕಮಲದಿಂದ ಜನಿಸಿ ನಿನ್ನನ್ನೇ ಧ್ಯಾನಿಸುವನು! ಇಡೀ ಬ್ರಹ್ಮಾಂಡವನ್ನು ನಿನ್ನ ಉದರದಲ್ಲಿರಿಸಿಕೊಂಡಿರುವ ನೀನು ನನ್ನ ಉದರದಿಂದ ಹೇಗೆ ಜನಿಸಿದೆ?! ಅದ್ಭುತ ಲೀಲೆಗಳನ್ನು ಮಾಡುವ ನಿನಗೆ ಮಾತ್ರ ಅದು ಸಾಧ್ಯ! ಪ್ರಳಯಕಾಲದಲ್ಲಿ ಪುಟ್ಟ ಮಗುವಿನಂತೆ ಆಲದೆಲೆಯ ಮೇಲೆ ಮಲಗಿ ನಿನ್ನ ಪಾದವನ್ನು ಚೀಪುವ ನೀನು, ನನ್ನ ಮಗನಾದುದರಲ್ಲಿ ಆಶ್ಚರ್ಯವೇನು?! ಹೀಗೆಯೇ ಧರ್ಮಸಂಸ್ಥಾಪನೆ ಮಾಡಲು, ಜ್ಞಾನವನ್ನು ವಿತರಿಸಲು, ವರಾಹವೇ ಮೊದಲಾದ ಅವತಾರಗಳನ್ನು ನೀನು ತಾಳುವೆ! ನಿನ್ನ ನಾಮಸ್ಮರಣೆ ಮಾಡುವ ಚಾಂಡಾಲರಂಥ ನೀಚಕುಲದವರೂ ಶ್ರೇಷ್ಠರೇ! ನಿನ್ನ ನಾಮಸ್ಮರಣೆ ಮಾಡುವವರು ಬಹಳ ತಪಸ್ಸು ಮಾಡಿರಬೇಕು! ಅನೇಕ ಪುಣ್ಯನದಿಗಳಲ್ಲಿ ಸ್ನಾನ ಮಾಡಿರಬೇಕು! ವೇದಾಧ್ಯಯನವನ್ನೂ ಮಾಡಿರಬೇಕು!”
“ಅಮ್ಮಾ” ಕಪಿಲನು ಸಂತೋಷದಿಂದ ಹೇಳಿದನು, “ನಾನು ಹೇಳಿದ ಭಕ್ತಿಯೋಗದ ಮಾರ್ಗವು ಬಹಳ ಸುಲಭವಾಗಿದೆ. ಅದನ್ನು ಆಚರಿಸುತ್ತಾ ನೀನು ಬೇಗನೆ ಮುಕ್ತಳಾಗುವೆ. ನಾನಿನ್ನು ಹೊರಡಲು ಅನುಮತಿ ನೀಡು.”
ದೇವಹೂತಿಯು ಒಪ್ಪಲು, ಕಪಿಲಮುನಿಯು ತಪಶ್ಚರ್ಯೆಗೆಂದು ಹೊರಟುಹೋದನು.
ಅನಂತರ, ದೇವಹೂತಿಯು ದಿನನಿತ್ಯ ಮೂರು ಬಾರಿ ಸ್ನಾನಮಾಡುತ್ತಾ ಭಕ್ತಿಯೋಗದ ಆಚರಣೆಯಲ್ಲಿ ತೊಡಗಿದಳು. ಅವಳಿಗಾಗಿ ಕರ್ದಮ ಮುನಿಯು ನಿರ್ಮಿಸಿದ್ದ ದಿವ್ಯ ವಿಮಾನ ಗೃಹದ ಸಿರಿಸಂಪತ್ತನ್ನು ಕಂಡು ದೇವಲೋಕದ ಸ್ತ್ರೀಯರೂ ಮಾತ್ಸರ್ಯಕ್ಕೊಳಗಾಗುತ್ತಿದ್ದರು! ಆದರೆ ಭಗವಂತನ ಭಕ್ತಿಯಲ್ಲಿ ಮುಳುಗಿದ್ದ ಅವಳೇ ಆ ಆಕರ್ಷಣೆಗಳಿಂದ ವಿರಕ್ತಳಾಗಿದ್ದಳು! ಸಂಬಂಧಗಳ ಅನಿತ್ಯತೆಯು ತಿಳಿದಿದ್ದರೂ ಅವಳನ್ನು ಬಾಧಿಸುತ್ತಿದ್ದುದು ಒಂದೇ ಚಿಂತೆ; ಅದುವೇ ಅವಳು ತನ್ನ ಮಗನಿಂದ ದೂರಾದದ್ದು! ಕರುವನ್ನು ಕಳೆದುಕೊಂಡ ಹಸುವಿನಂತೆ ಅವಳು ಸದಾ ತನ್ನ ಮಗನ ಚಿಂತೆ ಮಾಡುತ್ತಾ ಶೋಕಾತುರಳಾಗಿದ್ದಳು!
ದೇವಹೂತಿಯು ಕ್ರಮೇಣ ತನ್ನ ಮಗನು ವಿವರಿಸಿದ್ದ ರೀತಿಯಲ್ಲಿ ಶ್ರೀಹರಿಯನ್ನು ಧ್ಯಾನಿಸುತ್ತಾ ಅವನಲ್ಲೇ ಮನಸ್ಸನ್ನು ಸ್ಥಿರವಾಗಿಸಿದಳು. ಅವಳನ್ನು ವಿದ್ಯಾಧರಿ ಸ್ತ್ರೀಯರು ಪೋಷಿಸುತ್ತಿದ್ದುದರಿಂದ ಅವಳ ದೇಹವೇನೂ ಕೃಶವಾಗಲಿಲ್ಲ. ಭಗವಂತನ ಧ್ಯಾನದಲ್ಲಿ ಮೈಮರೆತ ಅವಳು, ಕನಸಿನಲ್ಲಿ ಒಬ್ಬನು ತನ್ನ ದೇಹವನ್ನು ಮರೆಯುವಂತೆ ತನ್ನ ದೇಹವನ್ನೇ ಮರೆತಳು! ಆಗ ಅವಳು, ಬಿಚ್ಚಿಹೋದ ಕೇಶವನ್ನೂ ಅಸ್ತವ್ಯಸ್ತಗೊಂಡ ವಸ್ತ್ರವನ್ನೂ ಗಮನಿಸದೇ, ಹೊಗೆಯಿಂದ ಆವೃತವಾದ ಬೆಂಕಿಯಂತಿದ್ದಳು!
ಹೀಗೆ ಹರಿಧ್ಯಾನ ಮಾಡುತ್ತಾ ಹರಿಯನ್ನು ಪಡೆದು ದೇವಹೂತಿಯು ಮುಕ್ತಳಾದಳು. ಅವಳು ವಾಸಿಸುತ್ತಿದ್ದ ಸ್ಥಳ, ಸಿದ್ಧಪಾದವೆಂಬ ತೀರ್ಥಕ್ಷೇತ್ರವಾಯಿತು. ಅವಳ ದೇಹವು, ಪುಣ್ಯನದಿಯಾಗಿ ಹರಿಯಿತು!

ತಾಯಿಯನ್ನು ಬೀಳ್ಕೊಂಡು ಹೊರಟ ಕಪಿಲಮುನಿಯು ಈಶಾನ್ಯದಿಕ್ಕಿನ ಕಡೆ ಹೋದನು. ಆಗ ಸಿದ್ಧ, ಚಾರಣ, ಗಂಧರ್ವಾಪ್ಸರೆಯರೂ ಋಷಿಮುನಿಗಳೂ ಅವನನ್ನು ಕೀರ್ತಿಸುತ್ತಾ ಸ್ತುತಿಸಿದರು. ಸಮುದ್ರರಾಜನು ಅವನನ್ನು ಸ್ತುತಿಸಿ ಅವನಿಗೊಂದು ವಾಸಸ್ಥಳವನ್ನು ನೀಡಿದನು. ಕಪಿಲಮುನಿಯು ಸಮಾಧಿಸ್ಥನಾಗಿ ಈಗಲೂ ಅಲ್ಲಿಯೇ ನೆಲೆಸಿರುವನು.






Leave a Reply