ಕರ್ಣನೊಡನೆ ಕಾಳಗ

ಆಪತ್ಬಾಂಧವ ಶ್ರೀಕೃಷ್ಣ-8

– ಡಾ.ಬಿ. ಆರ್. ಸುಹಾಸ್

ಸೇನಾಧಿಪತ್ಯ ವಹಿಸಿದ್ದ ಗುರು ದ್ರೋಣರು ಹತರಾದ ಅನಂತರ ದುರ್ಯೋಧನ ಕರ್ಣನಿಗೆ ಅದನ್ನು ವಹಿಸುತ್ತಾನೆ. ಇತ್ತ ಕರ್ಣನ ವಧೆ ವಿಳಂಬವಾಗಲು ಯುಧಿಷ್ಠಿರನು ಅರ್ಜುನನನ್ನೂ, ಗಾಂಡೀವವನ್ನೂ ನಿಂದಿಸಿದನು. ಗಾಂಡೀವದ ನಿಂದಕರನ್ನು ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಅರ್ಜುನನಿಗೆ ಕೃಷ್ಣನು ಧರ್ಮೋಪಾಯವನ್ನು ಸೂಚಿಸಿ ಒದಗಲಿದ್ದ ವಿಪತ್ತುಗಳನ್ನು ತಪ್ಪಿಸಿದನು. ಮುಂದೆ ಓದಿ…..

ಯುಧಿಷ್ಠಿರ ಆಶೀರ್ವಾದ ಪಡೆದು ಕೃಷ್ಣಾರ್ಜುನರು ರಣರಂಗಕ್ಕೆ ಹೊರಟರು. ಅರ್ಜುನನಿಗೆ ಏಕೋ ಮೈಯೆಲ್ಲಾ ಬೆವರತೊಡಗಿತು! ಆಗ ಶ್ರೀಕೃಷ್ಣನು, “ಏಕೆ ಗಾಂಡೀವಿ! ಇದುವರೆಗೆ ಅನೇಕ ಅತಿರಥ ಮಹಾರಥರನ್ನೆಲ್ಲಾ ಜಯಿಸಿರುವೆ, ಸಂಹರಿಸಿರುವೆ! ನೀನು ಮಹಾವೀರ…!

ಆದರೂ ಕರ್ಣನನ್ನು ಆಲಕ್ಷಿಸಬೇಡ! ಅವನು ನಿನ್ನಷ್ಟೇ, ಅಥವಾ ನಿನಗಿಂತಲೂ ಸ್ವಲ್ಪ ಹೆಚ್ಚಿನ ವೀರನೆಂದೇ ಹೇಳಬಹುದು! ಆದರೆ ನಿನ್ನನ್ನು ಬಿಟ್ಟರೆ, ದೇವಾನುದೇವತೆಗಳೂ ಅವನನ್ನು ಎದುರಿಸಲಾರರು! ದುರ್ಯೋಧನನು ನಿಜವಾಗಿ ಅವನನ್ನು ಆಶ್ರಯಿಸಿಯೇ ಈ ಯುದ್ಧ ಮಾಡುತ್ತಿರುವುದು! ಇದುವರೆಗಿನ ಇವನ ದುಷ್ಕೃತ್ಯಗಳೆಗೆಲ್ಲಾ ಈ ಕರ್ಣನದೇ ಮೂಲಪ್ರೇರಣೆ! ಆದ್ದರಿಂದ ಅವನನ್ನು ಸಂಹರಿಸಿ ಯುಧಿಷ್ಠಿರನಿಗೆ ಸಂತಸವುಂಟುಮಾಡು!”

”ಕೇಶವ! ಭೂತಭವಿಷ್ಯತ್ತುಗಳೆಲ್ಲಕ್ಕೂ ಕಾರಣನಾದ ನೀನೇ ನನ್ನಲ್ಲಿ ಪ್ರಸನ್ನನಾಗಿರುವಾಗ, ನನಗೆ ದುಸ್ಸಾಧ್ಯವಾದುದೇನಿದೆ? ನಿನ್ನ ಸಹಾಯವಿದ್ದರೆ ಮೂರು ಲೋಕಗಳನ್ನೂ ಜಯಿಸಿಯೇನು! ಕರ್ಣನ ಬಳಿಗೆ ರಥವನ್ನೋಡಿಸು!’ ಅರ್ಜುನನೆಂದನು.

ಇತ್ತ ರಣರಂಗದಲ್ಲಿ ಕರ್ಣನು ಭಾರ್ಗವಾಸ್ತ್ರದಿಂದ ಪಾಂಡವ ಸೈನ್ಯವನ್ನು ಬಹಳಷ್ಟು ನಾಶಮಾಡಿ, ಭೀಮ, ಸಾತ್ಯಕಿ ಮೊದಲಾದವರೊಂದಿಗೆ ಹೋರಾಡುತ್ತಿದ್ದನು! ಆಗ ಭೀಮನಿಗೆ ದುಶ್ಯಾಸನನು ಎದುರಾಗಲು, ಅವಿಬ್ಬರಿಗೂ ಭಯಂಕರ ಹಣಾಹಣಿಯಾಗಿ, ಕರ್ಣ, ದುರ್ಯೋಧನ, ಕೃಪಾಶ್ವತ್ಥಾಮರು ನೋಡನೋಡುತ್ತಿದ್ದಂತೆಯೇ ಭೀಮನು ದುಶ್ಯಾಸನನ ಎದೆ ಬಗೆದು ಅವನ ರಕ್ತಪಾನ ಮಾಡಿದನು!

ಮೈಕೈಯೆಲ್ಲಾ ರಕ್ತಮಯವಾಗಿ, ತನ್ನ ಒಂದು ಪ್ರತಿಜ್ಞೆ ತೀರಿದ ಸಂತೋಷದಿಂದ ಜೋರಾಗಿ ಗರ್ಜಿಸುತ್ತಾ ಕಾಲಭೈರವನಂತೆ ಅವನು ಕಾಣಲು, ನೋಡಿದವರೆಲ್ಲಾ ‘ಇವನು ಮನುಷ್ಯನಲ್ಲ!’ ಎಂದು ಹೆದರಿ ಬಿದ್ದುಬಿಟ್ಟರು, ಬಿಲ್ಲುಗಳನ್ನು ಜಾರಿಸಿಕೊಂಡರು! ಆಗ ದುಶ್ಯಾಸನನ ಹತ್ತು ತಮ್ಮಂದಿರು ಭೀಮನ ಮೇಲೆ ಬೀಳಲು, ಅವನು ಅವರೆಲ್ಲರನ್ನೂ ಕೊಂದನು. ಇದನ್ನು ನೋಡಿ ಕರ್ಣನೂ ಭಯವ್ಯಾಕುಲಿತನಾಗಲು, ಶಲ್ಯನು ಅವನನ್ನು ಸಮಾಧಾನಪಡಿಸಿದನು.

ಅಷ್ಟರಲ್ಲಿ, ಅರ್ಜುನನು ಬರುತ್ತಿರುವುದನ್ನು ಶಲ್ಯನು ಕರ್ಣನಿಗೆ ತೋರಿಸಿ, “ನೋಡು! ನೀನು ಯಾರಿಗಾಗಿ ಇಷ್ಟು ತವಕಿಸುತ್ತಿದ್ದೆಯೋ, ಅವನೇ ನಮ್ಮತ್ತ ಬರುತ್ತಿದ್ದಾನೆ!’ ಎಂದನು.

ಆಗ ಅರ್ಜುನನು ತನಗೆದುರಾದ ಕರ್ಣನ ಪುತ್ರ ವೃಸಸೇನನ್ನು ಅವನೆದುರೇ ಕೊಲ್ಲಲು, ಅವನು ರೋಷಾವಿಷ್ಟನಾಗಿ ಅರ್ಜುನನ ಬಳಿಗೆ ಧಾವಿಸಿದನು!

ಕಡೆಗೂ ಮಹಾವೀರರಾದ ಕರ್ಣಾರ್ಜುನರು ದ್ವೈರಥಯುದ್ಧಕ್ಕಾಗಿ ಪರಸ್ಪರ ಎದುರಾದರು! ಆ ಇಬ್ಬರ ಮಹಾಯುದ್ಧವನ್ನು ವೀಕ್ಷಿಸಲು ಸಿದ್ಧಚಾರಣದೇವತೆಗಳು ಆಗಸದಲ್ಲಿ ನೆರೆದರು! ಎರಡೂ ಸೇನೆಗಳು ತಂತಮ್ಮ ವೀರರನ್ನು ಉತ್ತೇಜಿಸಿದವು!

ಕರ್ಣಾರ್ಜುನರ ಯುದ್ಧವು ಭಯಂಕರವಾಗಿ ನಡೆಯಿತು. ಅರ್ಜುನನ ಅಸ್ತ್ರಗಳನ್ನೆಲ್ಲಾ ಕರ್ಣನು ಪ್ರತ್ಯಸ್ತ್ರಗಳಿಂದ ನಾಶಪಡಿಸತೊಡಗಿದನು! ಅರ್ಜುನನು ಆಗ್ನೇಯಾಸ್ತ್ರ ಪ್ರಯೋಗಿಸಿದರೆ ಕರ್ಣನು ವಾರುಣಾಸ್ತ್ರದಿಂದ ಅದನ್ನು ಉಪಶಮನಗೊಳಿಸಿದಲ್ಲದೇ ದಟ್ಟವಾದ ಮೇಘಗಳಿಂದ ಎಲ್ಲೆಲ್ಲೂ ಕತ್ತಲನ್ನುಂಟು ಮಾಡಿದನು! ಆಗ ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಗಳ ಸಮೂಹವನ್ನು ಚದುರಿಸಿದನು. ಅನಂತರ ಅವನು ವಜ್ರಾಸ್ತ್ರವನ್ನು ಪ್ರಯೋಗಿಸಲು ಕರ್ಣನು ಅದನ್ನು ಭಾರ್ಗವಾಸ್ತ್ರದಿಂದ ನಾಶಪಡಿಸಿದನು!

”ಅರ್ಜುನ! ಏಕಿಷ್ಟು ಸೌಮ್ಯವಾಗಿ ಯುದ್ಧ ಮಾಡುತ್ತಿರುವೆ? ಖಾಂಡವವನ ದಹನಕಾಲದಲ್ಲಿ ಯುದ್ಧಮಾಡಿದಂತೆ ಬಲದಿಂದ ಯುದ್ಧ ಮಾಡು! ಇಲ್ಲವಾದರೆ ನಾನೇ ಈ ಪಾಪಿ ಕರ್ಣನನ್ನು ನನ್ನ ಗದೆಯಿಂದ ಬಡಿದು ಕೊಲ್ಲುತ್ತೇನೆ!” ಭೀಮನು ಕೈಕೈ ಹಿಸುಕಿಕೊಳ್ಳುತ್ತಾ ಹೇಳಿದನು.

ಕೃಷ್ಣನೂ, “ಅರ್ಜುನ! ಏನಿದು? ಇಂದು ಕರ್ಣನು ನಿನ್ನೆಲ್ಲಾ ಅಸ್ತ್ರಗಳನ್ನೂ ನಾಶಪಡಿಸುತ್ತಿದ್ದಾನೆ! ನಾನು ನಿನಗೆ ಸುದರ್ಶನ ಚಕ್ರ ಕೊಡುತ್ತೇನೆ ಅದರಿಂದಲೇ ಇವನನ್ನು ಸಂಹರಿಸಿಬಿಡು!” ಎಂದನು.

ಇಬ್ಬರ ಮಾತುಗಳನ್ನೂ ಕೇಳಿ ಕುಪಿತನಾದ ಅರ್ಜುನನು ಈಗ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಕರ್ಣನು ಅದನ್ನೂ ನಾಶಪಡಿಸಿದನು! ಆನಂತರ ಕರ್ಣನು ಅತ್ಯುಗ್ರವಾದ ಸರ್ಪಾಸ್ತ್ರವನ್ನು ತೆಗೆದು ಅರ್ಜುನನ ಕುತ್ತಿಗೆಗೆ ಗುರಿಯಿಟ್ಟನು! ಆಗ ಅದನ್ನು ನೋಡಿದ ಶಲ್ಯನು, “”ಕರ್ಣ! ಇದೊಂದು ಮಹಾಸ್ತ್ರವೇ!

ಆದರೆ ನೀನಿಟ್ಟ ಗುರಿಯು ಸರಿಯಿಲ್ಲ! ಪುನಃ ಗುರಿಯಿಡು!” ಎಂದನು. ಆದರೆ ಕರ್ಣನು, “ನಾನು ಎರಡು ಬಾರಿ ಗುರಿಯಿಡುವುದಿಲ್ಲ! ಮೋಸದ ಯುದ್ಧ ಮಾಡುವುದಿಲ್ಲ! ಒಮ್ಮೆ ಇಟ್ಟ ಗುರಿಯನ್ನು ಬದಲಿಸುವುದಿಲ್ಲ!” ಎನ್ನುತ್ತಾ ಬಾಣ ಪ್ರಯೋಗ ಮಾಡಿ, “ಅರ್ಜುನ! ನೀನೀಗ ಸತ್ತೆ!’ ಎಂದು ಕೂಗಿಕೊಂಡ!

ಸರ್ಪಾಸ್ತ್ರವು ಬರುವಷ್ಟರಲ್ಲಿ ಕೃಷ್ಣನು ತನ್ನ ಹೆಬ್ಬೆರಳಿನಿಂದ ರಥವನ್ನು ಅದುಮಿ ರಥಚಕ್ರಗಳು ನೆಲದಲ್ಲಿ ಹೂತುಕೊಳ್ಳುವಂತೆ ಮಾಡಿದ! ಕುದುರೆಗಳು ಮೊಣಕಾಲೂರಿ ಮುಗ್ಗುರಿಸಿದವು! ಇದರಿಂದ ಸರ್ಪಾಸ್ತ್ರವು ಅರ್ಜುನನ ಕಿರೀಟವನ್ನು ಉರುಳಿಸಿತು! ಶ್ರೀಕೃಷ್ಣನು ಪುನಃ ಅವನ ಪ್ರಾಣವುಳಿಸಿ, ಆಪದ್ಭಾಂಧವನಾಗಿದ್ದನು!

ಸರ್ಪಾಸ್ತ್ರವು ಪುನಃ ಕರ್ಣನ ಬತ್ತಳಿಕೆಯಲ್ಲಿ ಸೇರಿಕೊಳ್ಳಲು ಯತ್ನಿಸುತ್ತಿರಲು, ಕರ್ಣನು ಅದು ಯಾರೆಂದು ಪ್ರಶ್ನಿಸಿದನು. ಅದಕ್ಕೆ ಸರ್ಪಾಸ್ತ್ರವು ಹೇಳಿತು, “ಹಿಂದೆ ಅರ್ಜುನನು ಖಾಂಡವವನ ದಹನ ಮಾಡಿದಾಗ ಅಲ್ಲಿಂದ ತಪ್ಪಿಸಿಕೊಂಡ ತಕ್ಷಕನ ಮಗ ಅಶ್ವಸೇನ ನಾನು! ಅರ್ಜುನನ ಬದ್ಧ ವೈರಿ! ಆದ್ದರಿಂದ ಪುನಃ ನನ್ನನ್ನು ಅವನ ಎದೆಗೆ ಗುರಿಯಿಟ್ಟು ಹೊಡೆ! ಇಂದ್ರಾದಿ ದೇವತೆಗಳು ಬಂದರೂ ಅವನು ಸಾಯುತ್ತಾನೆ?”

ಕರ್ಣನು, “ನಾನು ಇತರರ ಬಲವನ್ನಾಶ್ರಯಿಸಿ ಯುದ್ಧ ಮಾಡುವವನಲ್ಲ ನೂರು ಅರ್ಜುನರೊಡನೆಯಾದರೂ ಹೋರಾಡಬಲ್ಲೆ! ತೊಟ್ಟ ಬಾಣ ತೊಡುವುದಿಲ್ಲ!” ಎಂದನು.

ಸರ್ಪವು ಕೋಪಗೊಂಡು ತಾನಾಗಿಯೇ ಅರ್ಜುನನನ್ನು ಕೊಲ್ಲಲು ಹೊರಟಿತು!

”ಪಾರ್ಥ! ನಮ್ಮ ವೈರಿಯಾದ ಆ ದುಷ್ಟ ನಾಗನನ್ನು ಬೇಗನೆ ಕೊಲ್ಲು!” ಕೃಷ್ಣ ಹೇಳಿದ!

”ಗರುಡನ ಬಾಯಿಗೆ ತಾನಾಗಿಯೇ ಬೀಳಲು ಈ ಹಾವು ಎಲ್ಲಿಂದ ಬಂತು?’” ಅರ್ಜುನನು ವಿಸ್ಮಿತನಾಗಿ ಕೇಳಿದ.

“ಅಯ್ಯೋ….! ಹಿಂದೆ ಅಗ್ನಿದೇವನನ್ನು ತೃಪ್ತಿಪಡಿಸಲು ನೀನು ಖಾಂಡವವನವನ್ನು ದಹಿಸಲಿಲ್ಲವೇ? ಆಗ ತಕ್ಷಕನ ಮಗ ಅಶ್ವಸೇನನು ತನ್ನ ತಾಯಿಯ ಬಾಯಲ್ಲಿ ಸೇರಿಕೊಂಡ. ನೀನು ಅವನ ತಾಯಿಯನ್ನು ಸಂಹರಿಸಿದೆ! ಆದರೆ ಇವನು ತಪ್ಪಿಸಿಕೊಂಡು ಕರ್ಣನ ಈ ಸರ್ಪಾಸ್ತ್ರದಲ್ಲಿ ಸೇರಿಕೊಂಡ…! ಆದರೆ ನಾನು ಈಗ ಆ ಸರ್ಪಾಸ್ತ್ರವನ್ನು ವ್ಯರ್ಥಗೊಳಿಸಿದೆ. ಇನ್ನು ಇವನನ್ನು ಬೇಗ ಕೊಲ್ಲು!’ ಕೃಷ್ಣನು ಹೇಳಿದ.

ಅರ್ಜುನನು ಆಗ ಆ ಸರ್ಪವನ್ನು ಆರು ಬಾಣಗಳಿಂದ ತುಂಡು ತುಂಡಾಗಿ ಕತ್ತರಿಸಿ ಕೊಂದ.

ಆನಂತರ, ಶ್ರೀಕೃಷ್ಣನು ರಥದ ಚಕ್ರಗಳನ್ನು ಮೇಲೆತ್ತಲು ಯುದ್ಧವು ಪುನಃ ಮುಂದುವರಿಯಿತು. ಈಗ ದೈವವಶಾತ್, ಕರ್ಣನ ರಥದ ಎಡಚಕ್ರ ನೆಲದಲ್ಲಿ ಹೂತುಹೋಯಿತು! ಹಿಂದೆ, ಕರ್ಣನು ತಿಳಿಯದೇ ಪ್ರಯೋಗಿಸಿದ ಬಾಣವೊಂದು ಬ್ರಾಹ್ಮಣನೊಬ್ಬನ ಹಸುವನ್ನು ಕೊಂದಿದ್ದರಿಂದ ಅವನು, “ನಿನ್ನ ಅತ್ಯಂತ ಪ್ರಬಲ ಶತ್ರುವನ್ನೆದುರಿಸವಾಗ ರಥಚಕ್ರ ಹೂತುಹೋಗಲೆಂದು ಕರ್ಣನನ್ನು ಶಪಿಸಿದ್ದ!

ಕರ್ಣನ ವಧಾಕಾಲವು ಸಮೀಪಿಸಿದ್ದರಿಂದ ಈಗ ಹಾಗೆಯೇ ಆಯಿತು! ಅದೇ ವೇಳೆಗೆ ಕರ್ಣನಿಗೆ ಪರಶುರಾಮನ ಶಾಪದ ಪ್ರಭಾವದಿಂದ ಭಾರ್ಗವಾಸ್ತ್ರವು ಮರೆತುಹೋಯಿತು! ಹೀಗೆ ವಿಘ್ನಗಳು ಒಟ್ಟಾಗಿ ಬರಲು, ಕರ್ಣನು ಬಹಳ ಅಸಹನೆಯಿಂದ ಕೈಕೊಡವುತ್ತಾ, “ಧರ್ಮವನ್ನೇ ಪ್ರಧಾನವಾಗಿಟ್ಟುಕೊಂಡು ವ್ಯವಹರಿಸುವವರನ್ನು ಸದಾ ಆ ಧರ್ಮವೇ ರಕ್ಷಿಸುವುದೆಂದು ಹೇಳುತ್ತಾರೆ!

ನಾನು ಎಷ್ಟು ಸಾಧ್ಯವೋ ಅಷ್ಟು ಧರ್ಮದಲ್ಲಿದ್ದರೂ ಅದು ನನ್ನನ್ನು ರಕ್ಷಿಸುತ್ತಿಲ್ಲ…! ಆದ್ದರಿಂದ ಇದು ಸುಳ್ಳೆನಿಸುತ್ತದೆ!” ಎಂದು ಹೇಳಿ ಕೆಳಗಿಳಿದು ಅರ್ಜುನನ ಕಡೆಗೆ ತಿರುಗಿ, ”ಹೇ ಪಾರ್ಥ! ನಾನು ಭೂಮಿಯಲ್ಲಿ ಹುದುಗಿಕೊ೦ಡಿರುವ ಈ ಚಕ್ರವನ್ನೆತ್ತುವವರೆಗೂ ಒ೦ದು ಮುಹೂರ್ತಕಾಲ ತಾಳು!

ಮಹಾಧನುಷ್ಮಂತನಾದ ನೀನು ಇಂಥ ಸಮಯದಲ್ಲಿ ನನಗೆ ಹೊಡೆದು ಕಾಲಪುರುಷನಂತಾಗಬೇಡ…! ಈ ಲೋಕದಲ್ಲೇ ಮಹಾಶೂರನಾದ ನೀನು ಯುದ್ಧಧರ್ಮವನ್ನು ಚೆನ್ನಾಗಿ ತಿಳಿದಿರುವೆ! ನಿನಗಾಗಲೀ ಕೃಷ್ಣನಿಗಾಗಲೀ ನಾನು ಹೆದರುತ್ತಿಲ್ಲ! ಕ್ಷತ್ರಿಯಕುಲದಲ್ಲಿ ಜನಿಸಿರುವ, ಆ ಕುಲದ ಕೀರ್ತಿಯನ್ನು ಹೆಚ್ಚಿಸುವ ನೀನು ಕೊಂಚ ತಾಳೆನ್ನುತ್ತಿರುವೆ…”

ಕರ್ಣನ ಮಾತುಗಳನ್ನು ಕೇಳಿ ಕುಪಿತನಾದ ಶ್ರೀಕೃಷ್ಣನು, “ಎಲವೋ ಕರ್ಣ ಅದೃಷ್ಟದಿಂದ ನೀನೀಗ ಧರ್ಮವನ್ನು ನೆನೆಯುತ್ತಿರುವೆ! ನೀಚರೇ ಹೀಗೆ…! ಕಷ್ಟ ಬಂದಾಗ ದೈವವನ್ನು ನಿಂದಿಸುತ್ತಾರೆಯೇ ಹೊರತು, ತಾವು ಮಾಡಿದ ತಪ್ಪುಗಳನ್ನು ನೆನೆಯುವುದಿಲ್ಲ!

ನೀನೂ ದುರ್ಯೋಧನಾದಿಗಳೂ ಸೇರಿ ಏಕವಸ್ತ್ರದಲ್ಲಿದ್ದ ರಜಸ್ವಲೆಯಾಗಿದ್ದ ದ್ರೌಪದಿಯನ್ನು ಸಭೆಗೆ ಎಳೆತರಿಸಿ ವಸ್ತ್ರಾಪಹರಣ ಮಾಡಿಸಿ ದುರ್ವಾಕ್ಯಗಳನ್ನಾಡಿದಾಗ ನಿನ್ನ ಧರ್ಮ ಎಲ್ಲಿತ್ತು?

ಭೀಮನಿಗೆ ವಿಷಪ್ರಾಶನ, ಪಾಂಡವರನ್ನು ಅರಗಿನ ಮನೆಯಲ್ಲಿ ಸಜೀವದಹನ ಮಾಡಲು ಯತ್ನ ಅಕ್ಷವಿದ್ಯೆ ತಿಳಿಯದ ಯುಧಿಷ್ಠಿರನನ್ನು ಆಹ್ವಾನಿಸಿ ಮೋಸದ ಜೂಜಿನಲ್ಲಿ ಸೋಲಿಸಿ ಮಾಡಿದ ರಾಜ್ಯಾಪಹರಣ, ವನವಾಸದ ಬಳಿಕವೂ ರಾಜ್ಯವನ್ನು ಕೊಡದಿದ್ದುದು, ಅಭಿಮನ್ಯುವನ್ನು ಒಟ್ಟಾಗಿ ಆಕ್ರಮಿಸಿ ಕೊಂದುದು, ಇಲ್ಲೆಲ್ಲಾ ನಿನಗೆ ಈ ಧರ್ಮ ಹೊಳೆಯಲಿಲ್ಲವೇ?

ಕರ್ಣ! ನೀನು ಎಷ್ಟೇ ಧರ್ಮಕಾರ್ಯಗಳನ್ನು ಮಾಡಿರು, ಈಗ ಮಾತ್ರ ಬದುಕಲಾರೆ!” ಎಂದು ಹೇಳಿ ಆರ್ಜುನನ ಕಡೆ ತಿರುಗಿ, ”ಪಾರ್ಥ! ಈ ಕ್ಷಣವೇ ಅವನನ್ನು ಸಂಹರಿಸು” ಎಂದನು.

ಕರ್ಣನ ದುಷ್ಕೃತ್ಯಗಳನ್ನು ನೆನೆದು ಕ್ರೋಧಾಭಿಭೂತನಾದ ಅರ್ಜುನನು ಪುನಃ ಯುದ್ಧ ಮಾಡತೊಡಗಿದನು. ಕೃಷ್ಣನ ಮಾತುಗಳಿಗೆ ಏನೂ ಹೇಳಲಾರದೇ ಲಜ್ಜಾನ್ವಿತನಾಗಿ ತಲೆತಗ್ಗಿಸಿದ್ದ ಕರ್ಣನೂ ಯುದ್ಧದಲ್ಲಿ ತೊಡಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು! ಅರ್ಜುನನು ಅದನ್ನು ಬ್ರಹ್ಮಾಸ್ತ್ರದಿಂದಲೇ ಉಪಸಂಹರಿಸಿದನು!

ಆಗ ಕರ್ಣನು ಪ್ರಯೋಗಿಸಿದ ಒಂದು ಉಗ್ರ ಬಾಣಕ್ಕೆ ಅರ್ಜುನನು ಮೂರ್ಛೆಹೋಗಲು, ಅವನು ಏಳುವಷ್ಟರಲ್ಲಿ ಕರ್ಣನು ರಥಚಕ್ರವನ್ನೆತ್ತಲು ಪ್ರಯತ್ನಿಸಿದನು. ಆದರೆ ವಿಧಿವಶಾತ್, ಅವನು ಎಷ್ಟೇ ಬಲಶಾಲಿಯಾದರೂ ಚಕ್ರವು ಮೇಲೇಳಲಿಲ್ಲ! ಅಷ್ಟರಲ್ಲಿ ಅರ್ಜುನನು ಎಚ್ಚರಗೊಳ್ಳಲು ಕೃಷ್ಣನು ಅವನನ್ನು ಪ್ರಚೋದಿಸಿದನು, “ತ್ವರೆ ಮಾಡು! ಶತ್ರುವು ಮೇಲೇಳುವ ಮುನ್ನವೇ ಅವನನ್ನು ಮುಗಿಸು!”

ಅರ್ಜುನನು ಪ್ರಾಂಜಲಿಕವೆಂಬ ಬಾಣದಿಂದ ಕರ್ಣನ ರಥಧ್ವಜವನ್ನು ಕತ್ತರಿಸಿ, ಅಂಜಲಿಕವೆಂಬ ಅಸ್ತ್ರವನ್ನು ಹೂಡಿ, ”ನಾನೇನಾದರೂ ತಪಸ್ಸು ಮಾಡಿದ್ದ ಫಲವಿದ್ದರೆ, ಗುರುಗಳನ್ನು ಸೇವಿಸಿದ್ದರೆ, ಯಜ್ಞಗಳನ್ನು ಮಾಡಿದ್ದರೆ, ಸಹೃದಯರ ಹಿತವಚನಗಳನ್ನು ಕೇಳಿದ್ದರೆ, ಆ ಸತ್ಯದ ಬಲದಿಂದ ಈ ಬಾಣವು ನನ್ನ ಮಹಾಶತ್ರುವನ್ನು ಸಂಹರಿಸಲಿ!’ ಎನ್ನುತ್ತಾ ಪ್ರಯೋಗಿಸಿದನು.

ಆ ಅಸ್ತ್ರವು ಕರ್ಣನ ಶಿರಸ್ಸನ್ನು ಅವನ ದೇಹದಿಂದ ಬೇರ್ಪಡಿಸಿತು! ಅವನ ದೇಹದಿಂದ ತೇಜಸ್ಸೊಂದು ಹೊರಟು, ಸೂರ್ಯಮಂಡಲದಲ್ಲಿ ಲೀನವಾಯಿತು!

ಅದು ಮಹಾಯುದ್ಧದ ಹದಿನೆಂಟನೆಯ ದಿನ. ದುರ್ಯೋಧನನು ದುಶ್ಯಾಸನ ಸಹಿತನಾಗಿ ಅನೇಕ ತಮ್ಮಂದಿರನ್ನೂ ತನ್ನ ಪರಮಾಪ್ತ ಮಿತ್ರ ಕರ್ಣನನ್ನೂ ಕಳೆದುಕೊಂಡು ಬಹುದುಃಖಿತನಾಗಿದ್ದ. ಕೃಪರು ಸಂಧಿಯ ಸಲಹೆ ನೀಡಿದರು. ಆದರೆ ಅವನು ಅದನ್ನೊಪ್ಪದೇ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ಯುದ್ದವನ್ನು ಮುಂದುವರಿಸಿದನು.

ಅಂದಿನ ಭಯಂಕರ ಯುದ್ಧದಲ್ಲಿ ಯುಧಿಷ್ಠಿರನು ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ಯುದ್ಧವನ್ನು ಮುಂದುವರೆಸಿದನು. ಅಂದಿನ ಭಯಂಕರ ಯುದ್ಧದಲ್ಲಿ ಯುಧಿಷ್ಠಿರನು ಶಲ್ಯನನ್ನೂ ಸಹದೇವನು ಶಕುನಿ ಮತ್ತವನ ಪತ್ರ ಉಲೂಕನನ್ನೂ ಸಂಹರಿಸಿದರು. ಅರ್ಜುನನು ತ್ರಿಗರ್ತರ ದೊರೆ ಸುಶರ್ಮನನ್ನು ಸಂಹರಿಸಿ ಭೀಮನೊಂದಿಗೆ ಅಳಿದುಳಿದ ಇಡೀ ಕೌರವ ಸೈನ್ಯವನ್ನು ನಾಶಪಡಿಸಿದನು!

ಹಗಲಿನ ಮೇಲೆ ಹೊತ್ತಿದ್ದ ಗದೆಯೊಂದೇ ಆಸರೆಯಾಗಿ ಉಳಿದಿದ್ದ ದುರ್ಯೋಧನನು ಎಲ್ಲೆಲ್ಲೂ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡುತ್ತಾ ವಿದುರನು ಹೇಳಿದ್ದ ಹಿತೋಕ್ತಿಗಳನ್ನು ಸ್ಮರಿಸಿ ದುಃಖಿಸುತ್ತಾ ಪಲಾಯನ ಮಾಡಿದ! ದಾರಿಯಲ್ಲಿ ಬರುತ್ತಿದ್ದ ಸಂಜಯನಿಗೆ ಹೇಳಿ, ತಾನು ಜಲಸ್ತಂಭನ ವಿದ್ಯೆಯಿಂದ ದ್ವೈಪಾಯನ ಸರೋವರದಲ್ಲಿ ಅಡಗಿಕೊಂಡ.

ಅದೇ ದಾರಿಯಲ್ಲಿ ಅವನನ್ನು ಹುಡುಕುತ್ತಾ ಬರುತ್ತಿದ್ದ ಅಶ್ವತ್ಥಾಮ, ಕೃಪ, ಕೃತವರ್ಮರಿಗೆ ಸಂಜಯನು ವಿಷಯವನ್ನರುಹಲು ಅವರು ಸರೋವರದ ಬಳಿ ಹೋಗಿ ತಾವು ಬದುಕಿರುವ ವಿಚಾರವನ್ನು ಅವನಿಗೆ ಹೇಳಿ ಯುದ್ಧ ಮುಂದುವರಿಸುವುದಾಗಿ ಸೂಚಿಸಿ ಪಾಂಡವರು ಬರುತ್ತಿದ್ದ ಗದ್ದಲ ಕೇಳಿ ಹೊರಟು ಹೋದರು.

ದುರ್ಯೋಧನನು ಕಾಣದಿರಲು, ಅವನನ್ನು ಹುಡುಕಲು ಪಾಂಡವರು ಎಲ್ಲ ಕಡೆಗಳಿಗೂ ಬೇಹುಗಾರರನ್ನಟ್ಟಿದರು. ಭೀಮನ ಬೇಹುಗಾರರು, ಈ ಸಂಭಾಷಣೆಯನ್ನು ಕೇಳಿ ಅವನಿಗೆ ದುರ್ಯೋಧನನಿರುವ ಸ್ಥಳವನ್ನು ಹೇಳಿದರು. ಆಗ ಪಾಂಡವರು ಶ್ರೀಕೃಷ್ಣನೊಂದಿಗೆ ಆ ಸರೋವರಕ್ಕೆ ಹೋದರು.

“ಕೃಷ್ಣ! ಈ ಮಾಯಾವಿಯು ಜಲಸ್ತಂಭನ ಮಾಡಿರುವುದನ್ನು ನೋಡಿದೆಯಾ?” ಯುಧಿಷ್ಠಿರನು ಕೃಷ್ಣನಿಗೆ ಹೇಳಿದ.

ಇಂಥ ಮಾಯಾವಿಗಳನ್ನು ಮಾಯೆಯಿಂದಲೇ ಕೊಲ್ಲಬೇಕು! ದೇವತೆಗಳೂ ಹಾಗೆಯೇ ಮಾಡುತ್ತಾರೆ!” ಕೃಷ್ಣನೆಂದ.

ಅನಂತರ ಯುಧಿಷ್ಠಿರನು ಸರೋವರದ ಕಡೆಗೆ ತಿರುಗಿ, “ಎಲವೋ ದುರ್ಯೋಧನ! ಕ್ಷತ್ರಿಯನಾಗಿ ಮಹಾವೀರನೆಂದು ಕರೆಸಿಕೊಳ್ಳುತ್ತಿದ್ದ ನೀನು ಹೀಗೇಕೆ ಭಯಗೊಂಡು ಇಲ್ಲಿ ಅಡಗಿರುವೆ? ಎದ್ದು ಬಂದು ಹೋರಾಡು!” ಎಂದ.

”ಪಾಂಡುನಂದನ! ನನಗಾವ ಭಯವೂ ಇಲ್ಲ! ನೀನೂ ದಣಿದಿರುವೆ. ನಾನೂ ದಣಿದಿರುವೆ. ಆದ್ದರಿಂದ ಕೊಂಚ ವಿಶ್ರಮಿಸಿಕೊಂಡು ನಾಳೆ ಯುದ್ಧವನ್ನು ಮುಂದುವರಿಸೋಣ”

“ನಮಗೆ ಸಾಕಷ್ಟು ವಿಶ್ರಾಂತಿಯಾಗಿದೆ ಬೇಗ ಬಂದು ಯುದ್ಧ ಮಾಡು!’

”ಅಯ್ಯೋ! ಸಹೋದರರನ್ನೂ ಬಂಧುಗಳನ್ನೂ ಕಳೆದುಕೊಂಡಿರುವ ನನಗೆ ಈಗ ರಾಜ್ಯದ ಮೇಲೆ ಮನಸ್ಸಿಲ್ಲ! ಆ ಶೂನ್ಯ ರಾಜ್ಯವನ್ನು ನೀನೇ ಆಳಿಕೋ! ಈ ಯುದ್ಧದಿಂದೇನುಪಯೋಗ? ನಾನು ಕಾಡಿಗೆ ಹೋಗುತ್ತೇನೆ!”

“ಸಾಕು ನಿನ್ನ ಪ್ರಲಾಪ! ಒಂದು ಸೂಜಿ ಮೊನೆಯಷ್ಟೂ ರಾಜ್ಯವನ್ನು ಕೊಡಲೊಲ್ಲದ ನೀನು ಈಗ ಕೊಡುವೆಯಾ? ನಿನ್ನನ್ನು ಜಯಿಸದೇ ನನಗಾವ ರಾಜ್ಯವೂ ಬೇಡ! ಮೇಲೆದ್ದು ಬಾ!”

“ನಿಮ್ಮ ಬಳಿ ರಥಾಶ್ವ ಆಯುಧಗಳಿವೆ. ನಾನೊಬ್ಬನೇ ಇದ್ದೇನೆ! ಇಂಥ ಪರಿಸ್ಥಿತಿಯಲ್ಲಿ ಹೇಗೆ ಯುದ್ಧ ಮಾಡುವುದು? ಈ ಮಾತನ್ನು ನಿಮಗೆ ಹೆದರಿ ಹೇಳುತ್ತಿಲ್ಲ! ಯುದ್ಧಧರ್ಮಾನುಸಾರವಾಗಿ ಹೇಳುತ್ತಿದ್ದೇನೆ!”

ಅಂತೂ ನಿನಗೆ ಕ್ಷತ್ರಧರ್ಮ ತಿಳಿದಿದೆಯಲ್ಲ! ಆದರೆ ಅಭಿಮನ್ಯುವನ್ನು ನೀವೆಲ್ಲರೂ ಒಟ್ಟಾಗಿ ಸೇರಿ ಕೊಂದಾಗ ನಿನಗೆ ಧರ್ಮ ಗೋಚರಿಸಲಿಲ್ಲ! ಇರಲಿ…! ಒಂದು ಅವಕಾಶ ಕೊಡುವೆ. ನಿನಗಿಷ್ಟವಾದ ಆಯುಧವನ್ನು ಆರಿಸಿಕೋ! ನಮ್ಮವರಲ್ಲಿ ಒಬ್ಬರೊಡನೆ ಹೋರಾಡಿ ಜಯಿಸಿದರೂ ರಾಜ್ಯ ನಿನ್ನದು! ಮೇಲೆ ಬಾ!”

”ಹಾಗಿದ್ದಲ್ಲಿ ನಾನು ಗದೆಯನ್ನಾರಿಸಿಕೊಳ್ಳುವೆ! ನೆಲದ ಮೇಲೆ ನಿಂತು ಒಬ್ಬೊಬ್ಬರೊಡನೆಯೂ ಹೋರಾಡುತ್ತೇನೆ! ರಥಯುದ್ಧಗಳು ಈಗಾಗಲೇ ಎಷ್ಟೋ ನಡೆದಿವೆ!”

‘ಹಾಗಿದ್ದರೆ ಬಾ…! ನಿನ್ನ ಪೌರುಷ ತೋರಿಸು!”

ಈ ಮಾತಿನಿಂದ ಬಹಳ ಕೋಪಗೊಂಡ ದುರ್ಯೋಧನನು ಗದೆಯನ್ನು ಹಿಡಿದು ನೀರನ್ನು ಅಲ್ಲೋಲಕಲ್ಲೋಲಗೊಳಿಸುತ್ತಾ ಧಿಗ್ಗನೆದ್ದು ಬಂದನು!

”ಈಗ ನಾನು ಯಾರೊಡನೆ ಹೋರಾಡಬೇಕು?” ಎಂದು ಗರ್ಜಿಸಿದನು! ಅವನ ಮೈಮೇಲಿನ ಗಾಯಗಳಿಂದ ಇನ್ನೂ ರಕ್ತ ಸೋರುತ್ತಿತ್ತು.

ಈಗ ಕೃಷ್ಣನು ಯುಧಿಷ್ಠಿರನಲ್ಲಿ ಕುಪಿತನಾದ, ”ಎಂಥ ದುಡುಕು ನಿನ್ನದು?! ಯಾರೊಬ್ಬರೊಡನೆ ಹೋರಾಡಿ ಗೆದ್ದರೂ ರಾಜ್ಯ ನಿನ್ನದು ಎಂದೆಯಲ್ಲಾ? ಅವನು ನಿನ್ನನ್ನೋ ನಕುಲ ಸಹದೇವರನ್ನೋ ಕರೆದಿದ್ದರೆ..? ಇದು ಮತ್ತೊಂದು ಜೂಜೇ ಆಯಿತು! ಅವನನ್ನು ಭೀಮನೊಬ್ಬ ಮಾತ್ರ ಎದುರಿಸಬಲ್ಲನು!

ಆದರೂ ಅವನಿಗೆ ಪರಿಶ್ರಮ ಸಾಲದು! ಈ ಹದಿಮೂರು ವರ್ಷಗಳ ಕಾಲ ದುರ್ಯೋಧನನು ಭೀಮನ ಉಕ್ಕಿನ ಪ್ರತಿಮೆಯೊಂದಿಗೆ ಗದಾಯುದ್ಧ ನಡೆಸಿದ್ದಾನೆ! ಭೀಮನಿಗೆ ಬಲವಿದ್ದರೆ ಅವನಿಗೆ ಕೌಶಲ ಹೆಚ್ಚು! ಬಲಕೌಶಲಗಳಲ್ಲಿ ಕೌಶಲವೇ ಮೇಲಲ್ಲವೇ?”

”ನಾನಿಂದು ನಿಶ್ಚಯವಾಗಿಯೂ ದುರ್ಯೋಧನನನ್ನು ಸಂಹರಿಸುತ್ತೇನೆ ಕೃಷ್ಣ!” ಭೀಮನು ಆಶ್ವಾಸನೆ ನೀಡಿ ಮುಂದೆ ಬಂದ. ಅವನೂ ದುರ್ಯೋಧನನೂ ಕವಚ ತೊಟ್ಟು ಯುದ್ಧಕ್ಕೆ ಸಜ್ಜಾದರು. ಕೃಷ್ಣನು ಭೀಮನನ್ನು ಪ್ರಶಂಸಿಸಿ ಕಳಿಸಿದ.

ಅಷ್ಟರಲ್ಲಿ ತೀರ್ಥಯಾತ್ರೆಗೆ ಹೋಗಿದ್ದ ಬಲರಾಮನು ಹಿಂದಿರುಗಿ ಬರಲು, ಅವನ ಶಿಷ್ಯರೇ ಆಗಿದ್ದ ಭೀಮ, ದುರ್ಯೋಧನರಿಬ್ಬರೂ ಅವನಿಗೆ ವಂದಿಸಿದರು. ಗದಾಯುದ್ಧಕ್ಕೆ ಸಮಂತ ಪಂಚಕವೇ ಸೂಕ್ತಸ್ಥಳವೆಂದು ಅವನು ಸೂಚಿಸಲು ಎಲ್ಲರೂ ಅಲ್ಲಿಗೆ ಹೋದರು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi