ಕರುಣೆಯ ಪರಿಪೂರ್ಣತೆ

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ

– ಸಂಗ್ರಹಾನುವಾದ : ಡಾ. ಕೆ. ವೈ. ಬಾಲರಾಜ್

ಸರ್ವೋತ್ತಮನಾದ ಭಗವಂತನು ಎಲ್ಲೆಲ್ಲೂ ಇರುವುದರಿಂದ ಮತ್ತು ನಾವೆಲ್ಲರೂ ಅವನ ವಿಭಿನ್ನಾಂಶಗಳೇ ಆಗಿರುವುದರಿಂದ ಸಕಲ ಜೀವಿಗಳ ಬಗೆಗೆ ದಯೆ ತೋರಿಸುವುದು ನಮ್ಮ ಕರ್ತವ್ಯ. ಒಬ್ಬ ವ್ಯಕ್ತಿಯು ನಮಗಿಂತಲೂ ಕೆಳಮಟ್ಟದ ಸ್ಥಿತಿಯಲ್ಲಿರುವಾಗ ಅವನಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗುತ್ತದೆ. ಉದಾಹರಣೆಗೆ ಒಂದು ಪುಟ್ಟ ಮಗುವು ಅಸಹಾಯಕವಾಗಿರುವುದರಿಂದ, ಅದು ತನ್ನ ತಂದೆ, ತಾಯಿಯ ಕರುಣೆಯನ್ನು ಅವಲಂಬಿಸಿದೆ.

ಅಮ್ಮ ನನಗೆ ಇದು ಬೇಕು. ಅಪ್ಪ ನನಗೆ ಅದು ಬೇಕು ಎಂದಾಗ ಅಥವಾ ಅದರ ಅವಶ್ಯಕತೆಗಳನ್ನು ನಾವು ಅರ್ಥಮಾಡಿಕೊಂಡು ಪೂರೈಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಹೀಗೆ ಸಕಲ ಜೀವಿಗಳ ಬಗೆಗೆ ಸಹಾನುಭೂತಿಯಿಂದ ಕರುಣೆಯನ್ನು ನಾವು ತೋರಿಸಬೇಕು. ಇದು ಸಹಜ ಧರ್ಮವೂ ಹೌದು. ಪ್ರತಿಯೊಬ್ಬರಿಗೂ  ದಯೆಯನ್ನು ತೋರಿಸುವುದು ಹೇಗೆ? ಎಂಬ ಪ್ರಶ್ನೆ ಪ್ರತಿಯೊಬ್ಬನ ಜೀವನದಲ್ಲಿಯೂ ಎದುರಾಗುತ್ತದೆ.

ಲಕ್ಷೋಪಲಕ್ಷ ಬಡ ಜನರಿರುತ್ತಾರೆ, ಅವರೆಲ್ಲರಿಗೂ ನಾವು ಕರುಣೆಯನ್ನು ತೋರಿಸುವುದು ಹೇಗೆ ಸಾಧ್ಯ? ಜಗತ್ತಿನ ತುಂಬಾ ತುಂಬಿಕೊಂಡಿರುವ ಇಂತಹ ನಿರ್ಗತಿಕರಿಗೆ ಆಹಾರ, ಬಟ್ಟೆ, ವಸತಿ, ಹಣ ಎಲ್ಲರಿಗೂ ಒದಗಿಸಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಅವರಿಗೆ ಕೃಷ್ಣ ಪ್ರಜ್ಞೆ ಕೊಡುವುದರ ಮೂಲಕ ಮಾತ್ರ ಸಾಧ್ಯ.

ಇಲ್ಲವಾದರೆ ದಯೆ, ಕರುಣೆ, ಅನುಕಂಪ ತೋರಿಸುವುದು ಭೌತಿಕವಾಗಿ ನಮ್ಮ ಅಳತೆಗೆ ಮೀರಿದ್ದು. ಸಕಲ ಜೀವಿಗಳಿಗೆ ಸಹಾನುಭೂತಿ ನೀಡಬೇಕೆಂದರೆ ಅವರಿಗೆ ಕೃಷ್ಣ ಪ್ರಜ್ಞೆಯನ್ನು ಹೇಳಿಕೊಡಬೇಕು. ಅದಕ್ಕಿಂತ ಮಿಗಿಲಾದ ಯಾವ ಕರುಣೆಯೂ ಇಲ್ಲ.

ಇಂದು ಕೃಷ್ಣ ಪ್ರಜ್ಞೆಯಿಲ್ಲದೆ ಬಹಳ ಜನ ಮೂರ್ಖರಾಗಿಯೇ ಬಾಳುತ್ತಿದ್ದಾರೆ. ರಾಕ್ಷಸೀಮಯವಾದ ಸ್ವಾರ್ಥ, ಮೋಸ ಜೀವನವನ್ನು ನಡೆಸುತ್ತಿದ್ದಾರೆ. ದೇವರೇ ಇಲ್ಲ ಎಂಬ ನಾಸ್ತಿಕತೆಯ ಅರ್ಥಹೀನ ಬದುಕು ಇವರದಾಗಿದೆ. ಇಂತಹ ಜನರು ದುಷ್ಟತನದಿಂದ ಸದಾಕಾಲವು ಬೇರೆಯವರಿಗೆ ಕೆಟ್ಟದ್ದನ್ನು ಮಾಡಲು ಪ್ರಯತ್ನಿಸುತ್ತಿರುತ್ತಾರೆ.

ಈಗಿನ ಸಮಾಜದಲ್ಲಿ ಒಬ್ಬ ಶ್ರೀಮಂತನಿರಬಹುದು. ಬಹಳ ದೊಡ್ಡ ವ್ಯಕ್ತಿ ಎನಿಸಿಕೊಂಡಿರುವನಾಗಿರಬಹುದು, ರಾಜಕಾರಣಿಗಳು, ವಿದ್ಯಾವಂತರು, ವಕೀಲರು, ವೈದ್ಯರು, ಇಂಜನಿಯರುಗಳು ಯಾರೇ ಆಗಿರಬಹುದು ಇವರಲ್ಲಿ ಬಹಳಷ್ಟು ಮಂದಿ ಮುಗ್ಧ ಜನರನ್ನು ವಂಚಿಸಲು ಸದಾ ಹಂಚಿಕೆ ಮಾಡುತ್ತಿರುತ್ತಾರೆ.

ಉದಾಹರಣೆಗೆ – ಬೇಕಾದಷ್ಟು ಪದವಿಗಳನ್ನು ಪಡೆದವರು ಸೊಗಸಾಗಿ ಉಡುಗೆ ತೊಡುಗೆಗಳನ್ನು ಧರಿಸಿರುವವರು, ನ್ಯಾಯಾಲಯದಲ್ಲಿ ಮಾತಿನ ಚಮತ್ಕಾರಗಳ ವಾಗ್ದಾಳಿ ಮಾಡುವವರು, ಉನ್ನತ ಸ್ಥಾನದಲ್ಲಿದ್ದು ರಾಜ್ಯಭಾರ ಮಾಡುವವರು ಇಂತಹವರ ಮನಸ್ಸು ಒಂದು ನಾಯಿಗಿಂತಲೂ ಹೀನವಾಗಿರುತ್ತದೆ.

ಈ ಮನುಷ್ಯರ ಹತ್ತಿರ ಹಣ ಇದೆ, ಇವರನ್ನು ಹೇಗಾದರೂ ವಂಚಿಸಬಹುದು, ಸುಲಿಯಬಹುದು ಎಂದು ಯೋಚಿಸುತ್ತಿರುತ್ತಾರೆ. ಅವರು ಕೇವಲ ದುರ್ಜನರು. ಅವರು ಏತಕ್ಕಾಗಿ ಮೋಸ ಮಾಡುತ್ತಾರೆ? ಕೇವಲ ತಮ್ಮ ಇಂದ್ರಿಯ ಪೋಷಣೆಗಾಗಿ.

ಇಂದು ಬಹಳ ಮಂದಿ ಜೀವನದ ಉದ್ದೇಶವನ್ನು ಅರಿಯದೇ ಹಣಕ್ಕಾಗಿ ದುಡಿಯುತ್ತಲೇ ಇದ್ದಾರೆ. ತಮ್ಮ ಸುಖ, ಅಂತಸ್ತು ಐಶ್ವರ್ಯ, ಹೆಂಡತಿ- ಮಕ್ಕಳಿಗಾಗಿ ಕತ್ತೆಯ ಹಾಗೆ ದುಡಿಯುತ್ತಲೇ ಇರುತ್ತಾರೆ. ಒಬ್ಬ ಆಗಸ ಕತ್ತೆಯ ಬೆನ್ನು ಮುರಿಯುವಷ್ಟು ಹೊರೆಯನ್ನು ಹೊರಿಸಿ ಅದನ್ನು ದುಡಿಸಿಕೊಳ್ಳುತ್ತಾನೆ.

ಕತ್ತೆ ಇಷ್ಟೆಲ್ಲ ಕಷ್ಟ ಪಡುವುದು ಕೇವಲ ಒಂದೆರಡು ಮುಷ್ಟಿ ಹುಲ್ಲಿಗಾಗಿ ಮಾತ್ರ. ಅದಕ್ಕೆ ದಕ್ಕುವುದು ಕೂಡ ಅಷ್ಟೆ. ಹಾಗೆಯೇ ದಾರಿಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ತಿನ್ನುವುದಕ್ಕಾಗಿಯೇ ಅದರ ಬದುಕು ಸೀಮಿತವಾಗಿರುತ್ತದೆ. ಯಾರದೋ ಸುಖಕ್ಕಾಗಿ ದುಡಿದು ದುಡಿದು ಸಾಯುವುದು ಅದರ ಬದುಕಾಗಿರುತ್ತದೆ.

ಹಾಗೆಯೇ ದೇಹಾತ್ಮವಾದಿಗಳಾದ ಜನರು ಕೇವಲ ಅಲ್ಪವಾದ ಇಂದ್ರಿಯ ತೃಪ್ತಿಗೋಸ್ಕರವಾಗಿ ಬಹಳ ಕಷ್ಟ ಪಟ್ಟು ದುಡಿಯುತ್ತಾರೆ. ಈ ದುಡಿಮೆಯಲ್ಲಿ ಹಣಕ್ಕಾಗಿ, ಸುಖಕ್ಕಾಗಿ ಕೆಲವು ಸ್ವಾರ್ಥಮಯ ದುಷ್ಟಯೋಜನೆಗಳನ್ನು ಕೂಡ ಆಲೋಚಿಸಿಕೊಂಡಿರುತ್ತಾರೆ. ಅವರು ಭಗವಂತನನ್ನು ನಂಬುವುದಿಲ್ಲವಾದ್ದರಿಂದ ಅತ್ಯಂತ ಹೀನರಾಗಿರುತ್ತಾರೆ.

ಭೌತಿಕ ಶಕ್ತಿಯ ಪ್ರಭಾವ ಅಂತಹವರ ಜ್ಞಾನವನ್ನೇ ಮರೆಸಿಬಿಟ್ಟಿರುತ್ತದೆ. ಭಗವಂತನ ಇರುವಿಕೆಯನ್ನೇ ಮರೆಯುವುದರಿಂದ ಇಂತಹ ಕ್ಷುಲ್ಲಕವಾದ ಭ್ರಮೆಯು ಆವರಿಸಿ ಅವರನ್ನು ಹೀಗೆ ಪ್ರೇರೇಪಿಸುತ್ತಿರುತ್ತದೆ – ದೇವರಿಲ್ಲ, ಸ್ವಾರ್ಥಕ್ಕಾಗಿ ದುಡಿ, ಚೆನ್ನಾಗಿ ಹಣ- ಅಂತಸ್ತು ಸಂಪಾದಿಸು, ಪಾಪಕಾರ್ಯಗಳಿಂದ ಹಿಂತೆಗೆಯಬೇಡ, ಸ್ವರ್ಗ-ನರಕ ಎಲ್ಲವೂ ಸುಳ್ಳು, ನಿನ್ನ ಭೌತಿಕ ಸುಖವೇ ಜೀವನದ ಆದರ್ಶ.

ಭಗವಂತನನ್ನೇ ಮರೆಸುವ ಇಂತಹ ಅನಾಚಾರ ಬದುಕಿನ ವಿಚಾರವನ್ನೇ ಕೈ ಬಿಡಬೇಕು. ಈ ಅರ್ಥಶೂನ್ಯವಾದ ವಿಚಾರವನ್ನು ತೊರೆದರೆ, ನಮ್ಮ ಗ್ರಹಿಕೆಗೆ ಅತೀತನಾಗಿರುವ ಪರಮೋನ್ನತ ಪ್ರಭುವು ತುಂಬಾ ಸಂತೋಷಪಟ್ಟು ನಮ್ಮ ಮೇಲೆ ಕರುಣೆ ತೋರಿಸುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi