ಕತ್ತರಿ ತತ್ತ್ವಶಾಸ್ತ್ರ

ಕಥಾಮೃತ ಬಿಂದು

– ಆಕರ : ಯಶೋಮತಿನಂದ ದಾಸ, ನಂದಕುಮಾರ ಮತ್ತು ನರ-ನಾರಾಯಣರ ಸಂದರ್ಶನ ಟಿಪ್ಪಣಿಗಳು.

(ಆಂಗ್ಲಮೂಲ : ಪ್ರಭುಪಾದ ನೆಕ್ಟರ್, ಸತ್ ಸ್ವರೂಪದಾಸ)

ಶ್ರೀಲ ಪ್ರಭುಪಾದರು ಭಕ್ತ ವಿಜ್ಞಾನಿಗಳು ಸೇರಿ ಒಂದು ಭಕ್ತಿ ವೇದಾಂತ ಅಧ್ಯಯನ ಕೇಂದ್ರ (Institute)ವನ್ನು ಸ್ಥಾಪಿಸಬೇಕೆಂದು ಬಯಸಿದ್ದರು. ಈ ಕೇಂದ್ರದ ಮೂಲಕ, ಪ್ರವಚನ ಮತ್ತು ಸಾಹಿತ್ಯಗಳನ್ನು ಹೊರ ತಂದು, ಭೌತವಾದಿಗಳಾದ ಮತ್ತು ಸೃಷ್ಟಿಯ ಹಿಂದಿನ ಅಲೌಕಿಕ ಶಕ್ತಿಯ ಅಸ್ತಿತ್ವವನ್ನು ನಿರಾಕರಿಸುವ ವಿಜ್ಞಾನಿಗಳನ್ನು ಖಂಡಿಸಬೇಕೆನ್ನುವುದು ಅವರ ಆಶಯವಾಗಿತ್ತು.

ನಾಸ್ತಿಕವಾದಿಗಳೂ ಮತ್ತು ತಮ್ಮ ವಿಚಾರಗಳಿಗೇ ಅಂಟಿಕೊಂಡಿರುತ್ತಿದ್ದ ಜಿಗುಟುಬುದ್ಧಿಯ ಭೌತವಾದಿಗಳ ಮನಃಸ್ಥಿತಿಯನ್ನು ವಿವರಿಸಲು ಪ್ರಭುಪಾದರು ಹೀಗೊಂದು ಕಥೆ ಹೇಳಿದರು;

ಒಮ್ಮೆ ಇಬ್ಬರು ದಾರಿಹೋಕರು ಮಾತುಮಾತಿನಲ್ಲಿ ವಾದ ಬೆಳೆಸುತ್ತ ಹೋಗುತ್ತಿದ್ದರು. ವಸ್ತುವನ್ನು ಕತ್ತರಿಸಲು ಚಾಕು ಸೂಕ್ತವೋ, ಕತ್ತರಿಯೋ ಎನ್ನುವ ವಿಷಯದಲ್ಲಿ ಅವರು ಭಿನ್ನಾಭಿಪ್ರಾಯ ತಳೆದು ಕಿತ್ತಾಡುತ್ತಿದ್ದರು. ‘ಚಾಕು!’ ಎಂದು ಒಬ್ಬಕೂಗಿದರೆ, ‘ಕತ್ತರಿಯೇ!’ ಎಂದು ಮತ್ತೊಬ್ಬಕಿರುಚುತ್ತಿದ್ದ.

ಮೊದಲನೆಯವನಿಗೆ ವಿಪರೀತ ಕೋಪ ಬಂತು. “ನನ್ನ ಮಾತಿಗೆ ನೀನು ಒಪ್ಪಿಕೊಳ್ಳದಿದ್ದರೆ, ಎತ್ತಿ ನದಿಗೆ ಎಸೆದು ಬಿಡುತ್ತೇನೆ’ ಎಂದು ಅಬ್ಬರಿಸಿದ. ಇದಕ್ಕೆ ಕತ್ತರಿಪಕ್ಷದ ಆಸಾಮಿ, ‘ಏನಾದರಾಗಲಿ, ನಾನು ನಿನ್ನ ಮಾತು ಒಪ್ಪುವುದಿಲ್ಲ. ಈಗಲೂ ನನ್ನ ಮತ ‘ಕತ್ತರಿ’ ಗೇ! ಇದೇ ನನ್ನ ಕೊನೆಯ ಮಾತು’ ಎಂದು ರೇಗಿದ.

ಈಗ ಚಾಕುವಿನ ಪರ ವಾದಿಸುತ್ತಿದ್ದವ, ಅವನನ್ನು ಎತ್ತಿ ರಭಸವಾಗಿ ಹರಿಯುತ್ತಿದ್ದ ಹೊಳೆಗೆ ನೂಕಿದ. ಕತ್ತರಿ ಪಕ್ಷದ ವಾದಿ ಕೊಂಚ ಹೊತ್ತು ಈಜಿದ. ಬಳಲಿಕೆ ಬಂದು, ಈಜುವುದನ್ನು ನಿಲ್ಲಿಸಿ ಮುಳುಗಲಾರಂಭಿಸಿದ ಅವನು ಎಷ್ಟು ಮೊಂಡು ಬುದ್ಧಿಯವನಾಗಿದ್ದ ಎಂದರೆ, ಪೂರ್ತಿಯಾಗಿ ಮುಳುಗಿ ಸಾಯುತ್ತಿದ್ದರೂ ತನ್ನ ಕೈಗಳನ್ನು ಮೇಲೆತ್ತಿ, ಎರಡು ಬೆರಳುಗಳನ್ನು ಹಿಂದೆ-ಮುಂದೆ ಆಡಿಸುತ್ತ, ತಾನು ಈಗಲೂ ‘ಕತ್ತರಿ’ಯ ಬೆಂಬಲಿಗನೇ ಎನ್ನುವುದನ್ನು ಸೂಚಿಸುತ್ತಿದ್ದ!

ನೀತಿ: ಮೊಂಡು ಬುದ್ಧಿಯ ನಾಸ್ತಿಕರು, ತಮ್ಮ ವಾದದ ತಳಭದ್ರವಿರದಿದ್ದರೂ ತಮ್ಮ ಮಾತೇ ಸರಿ ಎಂದು ಸಾಧಿಸುವ ಸಾಹಸ ಮಾಡುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi