ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ
ಈ ಲೌಕಿಕ ಜೀವನದಲ್ಲಿ ಪ್ರತಿಯೊಬ್ಬನಿಗೂ ತನ್ನ ಕುಟುಂಬದ ಬಗ್ಗೆ ಅತಿ ವ್ಯಾಮೋಹವಿರುತ್ತದೆ. ಈ ತರಹದ ವ್ಯಾಮೋಹಗಳಿಂದ ಇಂದ್ರಿಯಗಳ ನಿಯಂತ್ರಣ ಸಾಧ್ಯವಿಲ್ಲ.

ಸಹಜವಾಗಿ ಪ್ರತಿಯೊಬ್ಬನೂ ಯಾರನ್ನಾದರೂ ಪ್ರೀತಿಸಲು ಬಯಸುತ್ತಾನೆ. ಸಮಾಜ, ಗೆಳೆತನ, ಪ್ರೇಮ ಇವೆಲ್ಲ ಆತ್ಮದ ಅಗತ್ಯಗಳಾದರೂ ಅವೆಲ್ಲವೂ ಅವನ ಬದುಕಿನಲ್ಲಿ ವಿಕೃತವಾಗಿಯೇ ಪ್ರತಿಬಿಂಬಿತವಾಗುತ್ತವೆ.
ನಾವು ಪ್ರೀತಿಸಲು ಯಾರೂ ಸಿಗದಿದ್ದಾಗ ನಾಯಿ, ಬೆಕ್ಕುಗಳನ್ನಾದರೂ ಪ್ರೀತಿಸುತ್ತೇವೆ. ಹೀಗೆ ಸತ್ಯದ ಅರಿವಿಲ್ಲದೆ ತಮ್ಮ ಅಮೂಲ್ಯವಾದ ಪ್ರೀತಿಯನ್ನು ಪ್ರಾಣಿಗಳ ಬಗ್ಗೆ, ನಮ್ಮ ಒಡವೆ, ಹಣ, ಅಂತಸ್ತು, ಕೀಳು ಅಭಿರುಚಿಗಳ ಕಡೆ ಹರಿಸಿ ಕಡೆಯಲ್ಲಿ ಹತಾಶೆ, ಮೋಸಕ್ಕೆ ಒಳಗಾಗಿ ದುಃಖಿತರಾಗುತ್ತೇವೆ. ನಮ್ಮ ಪ್ರೇಮವನ್ನು ಎಲ್ಲಿ ನಿರ್ದೇಶಿಸಬೇಕೆಂಬುದೇ ನಮಗೆ ತಿಳಿಯದು.
ಈ ಜಗತ್ತಿನಲ್ಲಿ ಪ್ರತಿಯೊಬ್ಬನು ಭೌತಿಕ ಪ್ರೇಮದಿಂದ ಬಂಧಿತನಾಗಿದ್ದಾನೆ. ಈ ಪ್ರೇಮ ಬಂಧನವು ಅತ್ಯಂತ ಬಲವಾದುದು. ಈ ಭೌತಿಕ ಸುಖದ ಮೂಲತತ್ತ್ವವೇ ಲೈಂಗಿಕ ಸುಖ. ಒಂದು ಗಂಡು-ಹೆಣ್ಣು ಅವರು ಪರಸ್ಪರ ಲೈಂಗಿಕ ಸುಖವನ್ನು ಪಡೆದಾಗ ಗಾಢವಾಗಿ ಮೋಹಿತರಾಗುತ್ತಾರೆ.
ಮದುವೆ, ಮನೆ, ಮಕ್ಕಳು, ಸಾಮಾಜಿಕ ಮನ್ನಣೆ, ಬದುಕಲು ಉದ್ಯೋಗ, ಗೆಳೆತನ, ಪ್ರೇಮ ಇವೆಲ್ಲ ಬೇಕಾಗುತ್ತದೆ. ಹೀಗೆ ಐಹಿಕ ಆಸೆಗಳ ಸರಪಳಿ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲಕ್ಕೂ ಹಣ ಬೇಕು. ಹಣವೊಂದೇ ಅವನ ಜೀವನದಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವುದಾಗಿದೆ.
ಹಣಕೋಸ್ಕರ ಅವನು ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಲು ಸಿದ್ಧನಾಗುತ್ತಾನೆ. ಸಾಲ, ಲಂಚ, ಕಳ್ಳತನ, ಮೋಸ, ವಂಚನೆ, ಸ್ವಾರ್ಥ ಆಮಿಷಗಳಿಂದ ಒಂದು ದಾರಿಯನ್ನು ಕಾಣಲು ಇಷ್ಟಪಡುತ್ತಾನೆ. ಗೃಹಸ್ಥನಿರಲಿ, ಕಾರ್ಮಿಕ, ವರ್ತಕ ಅಷ್ಟೇ ಏಕೆ ಒಬ್ಬ ಕಳ್ಳ, ದುಷ್ಟ, ದರೋಡೆಕೋರನು ಸಹ ಹಣಕ್ಕಾಗಿಯೇ ಹಾತೊರೆಯುತ್ತಿರುತ್ತಾನೆ.

ಅದು ಅವರ ಜೀವನದ ಉದ್ದೇಶವು ಕೂಡ ಆಗಿರುತ್ತದೆ. ತನ್ನ ಸುಖ, ಹೆಂಡತಿ-ಮಕ್ಕಳಿಗಾಗಿ ಮನುಷ್ಯ ಯಾವ ಹೀನ ಸ್ಥಿತಿಗೂ ಇಳಿಯಲು ಸಿದ್ಧನಿರುತ್ತಾನೆ. ಇಂತಹ ದೇಹಾತ್ಮ ಕಲ್ಪನೆಯ ತೊಡರಿನಲ್ಲಿ ಸಿಕ್ಕಿಹಾಕಿಕೊಂಡು ಮನುಷ್ಯ ಒದ್ದಾಡುತ್ತಾನೆ. ಇದೇ ಮಾಯೆಯ ಹಿಡಿತ.
ಮನುಷ್ಯನ ಜೀವನದಲ್ಲಿ ಐಹಿಕ ಸಂಬಂಧಗಳು, ಐಶ್ವರ್ಯಗಳು ಯಾವುವೂ ಶಾಶ್ವತವಲ್ಲ. ಸಮುದ್ರದಲ್ಲಿನ ನೆರೆತೊರೆಗಳಂತೆ ಅವು ಕಾಣಿಸಿಕೊಳ್ಳುತ್ತವೆ. ಕೆಲ ಕಾಲಾನಂತರ ಅವು ಮಾಯವಾಗುತ್ತವೆ.
ಆದರೆ ಅವನು ಮಾತ್ರ ಅವುಗಳ ಬಗ್ಗೆ ವಿಪರೀತವಾಗಿ ಮೋಹಿತನಾಗಿರುತ್ತಾನೆ. ಅವರನ್ನು ಪೋಷಿಸಲು ಹಣಬೇಕೆಂದು ಅದಕ್ಕೋಸ್ಕರ ತನ್ನಲ್ಲಿರುವ ಆಧ್ಯಾತ್ಮಿಕ ಧ್ಯೇಯವನ್ನು ಕೂಡ ಅವನು ಬಲಿಕೊಡುತ್ತಾನೆ.
ನಾನು ಈ ದೇಹ, ಈ ಭೌತ ಪ್ರಪಂಚದ ಪ್ರೀತಿಯೇ ಸತ್ಯ. ನನ್ನ ಕುಟುಂಬ, ನನ್ನ ಜನ, ನನ್ನ ದೇಶ, ನನ್ನ ಸಮುದಾಯ ಈ ತರಹದ ಅಭಿಮಾನ ಅಹಂಕಾರದಿಂದ ತನಗೆ ತಾನೇ ಮೋಸ ಮಾಡಿಕೊಳ್ಳುತ್ತಾನೆ. ಈ ಬಗೆಯ ಆಲೋಚನೆಗಳೇ ಅವನ ಬದುಕಾಗುತ್ತದೆ.
ಸುಖಮಯವಾದ ಸಾಂಸಾರಿಕ ಜೀವನ, ಅದರಲ್ಲಿನ ಸವಿ ಎಂದುಕೊಂಡು ಅದರಲ್ಲಿ ಮುಳುಗುವ ಮನುಷ್ಯನಿಗೆ ಈ ಸುಖ ಮಿಥ್ಯೆ. ಸುಳ್ಳು ಎಂದು ತಿಳಿಯುವುದೇ ಇಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಈ ಸುಖವನ್ನು ತೊರೆದು ಸಾವಿನ ಕಡೆ ಹೊರಡುತ್ತೇವೆ. ಸಾವು ನಮ್ಮ ಹತೋಟಿಯಲ್ಲಿಲ್ಲ.
ವ್ಯಕ್ತಿಯು ಸಾಯುವಾಗ ಯಾವ ಭಾವನೆಯಲ್ಲಿರುತ್ತಾನೋ ಅದೇ ತರಹದ ಜನ್ಮವನ್ನು ಅವನು ಪಡೆಯುತ್ತಾನೆ. ಇದು ಪ್ರಕೃತಿಯ ನಿಯಮ.

ಆದುದರಿಂದ ನಾವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಬೇಕು. ಸಾಧ್ಯವಾದರೆ ಬಾಲ್ಯದಿಂದಲೇ ಅಂದರೆ ಬ್ರಹ್ಮಚರ್ಯ ಅವಸ್ಥೆಯಲ್ಲಿಯೇ ಈ ಪ್ರಜ್ಞೆಯನ್ನು ಆರಂಭಿಸಬೇಕು.
ಇನ್ನು ಬಾಲ್ಯಾವಸ್ಥೆ ಇದು ಆಟವಾಡೋ ವಯಸ್ಸು ಎಂತಲೋ, ಈ ಯೌವನದ ವಿಲಾಸ ಜೀವನ ಪೂರೈಸಿದ ಮೇಲೂ ಅಥವಾ ಮುದುಕನಾಗಿ ಮಾಡಲು ಏನು ಕೆಲಸವಿಲ್ಲದಾಗ ಈ ಕೃಷ್ಣಪ್ರಜ್ಞೆ ಪ್ರಾರಂಭಿಸುತ್ತೇನೆ. ಕೇಳುತ್ತೇನೆ ಎಂದು ಹೇಳುವುದು ಖಂಡಿತವಾಗಿಯೂ ತಪ್ಪು.
ಕೃಷ್ಣ ಪ್ರಜ್ಞೆ ಎಂದರೆ ನಮ್ಮ ಅಮೂಲ್ಯವಾದ ಪ್ರೀತಿಯನ್ನು ಕ್ಷುಲ್ಲಕ ವಸ್ತುಗಳಿಂದ ತಿರುಗಿಸಿ ಕೃಷ್ಣನ ಕಡೆ ವರ್ಗಾಯಿಸುವುದು. ಅದೇ ನಿಜವಾದ ಪರಿಪೂರ್ಣತೆ. ಕೃಷ್ಣಪ್ರಜ್ಞೆಯೇ ಅತ್ಯಂತ ಉತ್ಕೃಷ್ಟವಾದ ಆನಂದವೆಂಬುದಾಗಿ ಜನರು ತಿಳಿಯರು.
ಕೃಷ್ಣ ಪ್ರಜ್ಞೆ ಪ್ರಕ್ರಿಯೆಯ ಏಕೈಕ ಆಸ್ತಿ’ ಹರೇ ಕೃಷ್ಣ ಮಹಾ ಮಂತ್ರ.’ ಕೃಷ್ಣಪ್ರಜ್ಞೆಯಿಂದ ಮಾತ್ರ ಒಬ್ಬನು ಸಂತೋಷವಾಗಿರಬಹುದು. ವಾಸ್ತವವಾಗಿ ಅದು ಆನಂದಭರಿತವಾದ ಜೀವನ. ಜೀವನದ ಯಾವುದೇ ಹಂತದಲ್ಲಿ ಹರೇಕೃಷ್ಣ ಮಹಾಮಂತ್ರ ಪಠಣದಿಂದಲೇ ನಮ್ಮ ಪ್ರಗತಿ ಜಾಗೃತವಾಗಿ ಸಾಧಿತವಾಗುತ್ತದೆ.
ಫಲವು ತತ್ ಕ್ಷಣವೇ ದೊರಕುತ್ತದೆ. ನಮ್ಮ ಬದುಕಿನ ಭರವಸೆಯಾದರೂ ಏನು? ಯಾವ ಕ್ಷಣದಲ್ಲಾದರೂ ಮೃತ್ಯುವಿನ ಪಾಶ ನಮ್ಮ ಮೇಲೆ ಬೀಳಬಹುದು. ಆದುದರಿಂದ ಆಧ್ಯಾತ್ಮಿಕ ಜೀವನವನ್ನು ಮುಂದೆ ಹಾಕುವುದು ಅಪಾಯಕಾರಿ.
ಸಂಗ್ರಹಾನುವಾದ : ಡಾ.ಕೆ. ವೈ. ಬಾಲರಾಜ್, ಆಧಾರ : ಪ್ರಹ್ಲಾದ ಮಹಾರಾಜರ ಪಾರಮಾರ್ಥಿಕ ಬೋಧನೆಗಳು






Leave a Reply