ವೈದಿಕ ಜ್ಞಾನದ ಬಗ್ಗೆ ಒಂದು ಪಾಠಕ್ರಮ-9
– ಆಂಗ್ಲಮೂಲ : ಪವನೇಶನ ದಾಸ, ಅನುವಾದ: ಚಿರಂಜೀವಿ
ಶ್ರೀಕೃಷ್ಣ ಅಥವಾ ದೇವರು, ಪರಾತ್ಪರ: ಅವನ ಹೆಸರು, ಅವನ ಶರೀರ, ಅವನ ಗುಣಗಳು, ಅವನ ಸಾಧನ ಸಾಮಗ್ರಿ ಮೊದಲಾದವುಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಅವನು ತನ್ನ ದಿವ್ಯ ಶರೀರದ ಯಾವ ಅಂಗದಿಂದ ಯಾವ ಕೆಲಸವನ್ನು ಬೇಕಾದರೂ ಮಾಡುವಂತವನು.

ನಾವು ಬದ್ಧಜೀವಿಗಳು ಪರಾತ್ಪರರಲ್ಲ, ನಾವು ಚೇತನಾತ್ಮರು, ಆದರೆ ನಮಗೀಗ ಲೌಕಿಕ ಶರೀರವಿದೆ – ಇದು ನಮಗಿಂತಲೂ ಭಿನ್ನವಾದದ್ದು. ನಮ್ಮ ಶರೀರಗಳಿಗೆ ಹೆಸರುಗಳಿವೆ, ಮತ್ತೆ ಇವೂ ನಮ್ಮ ಶರೀರಗಳಿಗಿಂತಲೂ ಭಿನ್ನವಾದವು. ಹತ್ತು ಕಿಲೋಮೀಟರ್ ದೂರದಿಂದ ಯಾರಾದರೂ ನಿಮ್ಮ ಹೆಸರು ಕೂಗಿದರೆ, ನೀವು ಅಲ್ಲಿದ್ದೀರೆಂದು ಅರ್ಥವಲ್ಲ, ನೀವು ಮತ್ತು ನಿಮ್ಮ ಹೆಸರು ಭಿನ್ನವಾದವು.
ಶ್ರೀಕೃಷ್ಣ ಪರಾತ್ಪರನಾಗಿರುವುದರಿಂದ ಅವನು ಮತ್ತು ಅವನ ಹೆಸರು ಅನನ್ಯ. ನೀವು ಹರೇಕೃಷ್ಣ, ಕೃಷ್ಣ ಎಂದು ಪಠಿಸಿದಾಗ ಅವನು ಅಲ್ಲೇ ಇರುತ್ತಾನೆ. ಕೂಡಲೇ ನಿಮ್ಮ ಗಮನಕ್ಕದು ಬರದಿರಬಹುದು. ಆದರೆ, ನಿರಂತರ ಪಠನೆಯಿಂದ ನೀವು ನಿಧಾನವಾಗಿ ದೇವರೊಂದಿಗೆ ಸಹಯೋಗ ಹೊಂದುತ್ತಿರುವುದು ಗಮನಕ್ಕೆ ಬರುತ್ತದೆ.
ಪದ್ಮಪುರಾಣ ಹೇಳುತ್ತದೆ ;
ಶ್ರೀಕೃಷ್ಣನ ದಿವ್ಯನಾಮ ಪಾರಮಾರ್ಥಿಕವಾಗಿ ಆನಂದ ನೀಡುವಂತಹದು. ಅದು ಎಲ್ಲ ಆನಂದಗಳ ಅಣೆಕಟ್ಟು ಆಗಿರುವ ಸ್ವತಃ ಶ್ರೀ ಕೃಷ್ಣನೇ ಆಗಿರುವುದರಿಂದ, ಎಲ್ಲ ರೀತಿಯ ಆಧ್ಯಾತ್ಮಿಕ ಶ್ರೇಯಸ್ಸನ್ನು ಅನುಗ್ರಹಿಸುತ್ತದೆ. ಶ್ರೀಕೃಷ್ಣನ ಹೆಸರು ಪರಿಪೂರ್ಣವಾದದ್ದು ಮತ್ತು ಅದು ಎಲ್ಲ ದಿವ್ಯ ರುಚಿಗಳನ್ನೂ ಒಳಗೊಂಡಿರುತ್ತದೆ.
ಯಾವ ರೀತಿಯಿಂದಲೂ ಅದೊಂದು ಪ್ರಾಪಂಚಿಕ ಹೆಸರಲ್ಲ, ಮತ್ತು ತಾನು ಸ್ವತಃ ಶ್ರೀಕೃಷ್ಣನಿಗಿಂತಲೂ ಕಡಮೆ ಸಾಮರ್ಥ್ಯದಂತೂ ಅಲ್ಲ. ಶ್ರೀಕೃಷ್ಣನ ಹೆಸರು ಲೌಕಿಕ ಗುಣಗಳಿಂದ ಮಲಿನವಾಗದೆ ಇರುವುದರಿಂದ, ಅದು ‘ಮಾಯೆ’ (ಭ್ರಾಂತಶಕ್ತಿ) ಎನ್ನುವುದರೊಂದಿಗೆ ಸಂಬಂಧಿಸಿವೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶ್ರೀಕೃಷ್ಣನ ಹೆಸರು ಯಾವಾಗಲೂ ಬಂಧಮುಕ್ತ ಮತ್ತು ಆಧ್ಯಾತ್ಮಿಕ; ಅದು ಎಂದಿಗೂ ಲೌಕಿಕ ಜಗತ್ತಿನ ನಿಯಮಗಳಿಗೆ ಬದ್ಧವಾದದ್ದಲ್ಲ. ಇದು ಏಕೆಂದರೆ, ಶ್ರೀಕೃಷ್ಣನ ಹೆಸರು ಮತ್ತು ಸ್ವತಃ ಶ್ರೀಕೃಷ್ಣ ಎನ್ನುವುದೆರಡೂ ಅನನ್ಯವಾದದ್ದು.
ಹರೇಕೃಷ್ಣ ಮಹಾಮಂತ್ರದ ಪಠನೆ, ಚೇತನಾತ್ಮ ಮತ್ತು ಪರಮಾತ್ಮ (ಶ್ರೀಕೃಷ್ಣ) ನಡುವಿನ ಪರಸ್ಪರ ಅನ್ಯೋನ್ಯತೆಯ ಪರಿಪೂರ್ಣತೆ. ಶ್ರೀಕೃಷ್ಣನೊಂದಿಗೆ ನಮ್ಮ ಸಂಬಂಧ ಶಾಶ್ವತವಾದದ್ದಾದರೂ, ಲೌಕಿಕ ವಿಶ್ವದಲ್ಲಿ ಅದು ಮುಚ್ಚಿಹೋಗಿರುತ್ತದೆ. ಮಂತ್ರವನ್ನು ಪಠಿಸುವುದರ ಮೂಲಕವೇ ಈ ಮುಚ್ಚಿಹೋಗಿರುವಿಕೆಯನ್ನು ಸರಿಸಬಹುದು.
ಒಂದು ಬಟ್ಟಲು ತುಂಬಾ ಇರುವ ಶಾಯಿಯಲ್ಲಿ (ಇಂಕ್) ಚೆನ್ನಾಗಿ ನೀರು ಸುರಿಯುವುದನ್ನು ಕಲ್ಪಿಸಿಕೊಳ್ಳಿ. ನೀರು ಹೆಚ್ಚು ಹೆಚ್ಚು ಸುರಿದಷ್ಟು ಇಂಕು ಬಟ್ಟಲಿನಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅಂತಿಮವಾಗಿ, ಶುದ್ಧ ನೀರು ಅಲ್ಲಿ ಉಳಿದುಕೊಳ್ಳುತ್ತದೆ. ಇದೇ ರೀತಿ ಹರೇಕೃಷ್ಣ ಮಂತ್ರದ ಪಠನೆ ಹಂತ ಹಂತವಾದ ಪರಿಶುದ್ಧತೆಯನ್ನು ಉಂಟುಮಾಡುವ ಒಂದು ಪ್ರಕ್ರಿಯೆ.
ನಿರಂತರವಾಗಿ ನೀವು ಪಠಿಸುತ್ತಿದ್ದರೆ, ಲೌಕಿಕ ಮಲಿನಗಳೆಲ್ಲವೂ ನಿಧಾನವಾಗಿ ಇಲ್ಲವಾಗಿ ಹೋಗುತ್ತವೆ, ಮತ್ತು ಸಚ್ಚಿದಾನಂದ ಅಥವಾ ಪರಿಪೂರ್ಣ ಆನಂದ – ಜ್ಞಾನಭರಿತ ಶಾಶ್ವತ ಜೀವನ ಎನ್ನುವ ನಿಮ್ಮ ಮೂಲ ಆಧ್ಯಾತ್ಮಿಕ ಪ್ರಕೃತಿಯನ್ನು ಗ್ರಹಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
ಮಂತ್ರ ಪಠನೆ ಎನ್ನುವುದೊಂದು ಅಗ್ಗವಾದ ಪ್ರಕ್ರಿಯೆಯಲ್ಲ. ನೀವೊಂದು ಆಭರಣವನ್ನು ಕೊಳ್ಳಬೇಕಾಗಿದ್ದಲ್ಲಿ ನೀವೊಂದು ಅಗ್ಗದ ನಕಲಿ ಆಭರಣವನ್ನು ಕೊಂಡುಬಿಡಬಹುದು, ಆದರೆ, ನೀವು ನಿಜವಾದದ್ದನ್ನೇ ಬಯಸಿದರೆ, ನೀವು ಬಹಳ ಹಣವನ್ನು ಚೆಲ್ಲಬೇಕಾಗುತ್ತದೆ. ಒಂದು ಹೇಳಿಕೆಯಂತೆ, ‘ಕಂತೆಗೆ ತಕ್ಕ ಬೊಂತೆ’ – ನೀವು ಕೊಟ್ಟ ಹಣಕ್ಕೆ ತಕ್ಕಂತಹ ವಸ್ತು ಸಿಗುತ್ತದೆ. ಮೌಲಿಕವಾದದ್ದನ್ನು ಪಡೆಯಬೇಕಾದರೆ ನೀವು ದುಡಿಯಬೇಕಾಗುತ್ತದೆ.
ಆದ್ದರಿಂದ, ದಿಢೀರ್ ಫಲಗಳನ್ನು ನಿರೀಕ್ಷಿಸಬೇಡಿ, ಆದರೆ ನಿರಂತರವಾಗಿ ಮಂತ್ರಪಠಿಸುವುದರಿಂದ ನೀವು ಬೆಳವಣಿಗೆ ಕಾಣುತ್ತೀರಿ ಮತ್ತು ನಿಮ್ಮ ಬದುಕಿನ ಅಂತಿಮ ಗುರಿಯಾದ ‘ದೇವರಿಗೆ ಪರಿಶುದ್ಧ ಪ್ರೀತಿ’ ಯನ್ನು ಹೊಂದುತ್ತೀರಿ.

ಕಾಮಾಲೆ ರೋಗ ಬಂದವನಿಗೆ ಕಲ್ಲು ಸಕ್ಕರೆ ಕಹಿ ಎನಿಸುತ್ತದೆ. ಆದರೆ, ಕಾಮಾಲೆ ರೋಗಕ್ಕೆ ಕಲ್ಲು ಸಕ್ಕರೆಯೇ ಅತ್ಯುತ್ತಮ ಮದ್ದು. ಒಮ್ಮೆ ರೋಗಿ ವಾಸಿಗೊಂಡರೆ, ಕಲ್ಲು ಸಕ್ಕರೆ ಮತ್ತೆ ಸಿಹಿ ಎನಿಸುತ್ತದೆ. ‘ಉಪದೇಶಾಮೃತ’ದಲ್ಲಿ ಶ್ರೀಲ ರೂಪಗೋಸ್ವಾಮಿ ಅವರು ಈ ವಿಷಯವಾಗಿ ಒಂದು ಸಾದೃಶ್ಯವನ್ನು ನೀಡುತ್ತಾರೆ:
ಶ್ರೀಕೃಷ್ಣ ಪವಿತ್ರ ಹೆಸರು, ಗುಣ, ಲೀಲೆಗಳು ಮತ್ತು ಚಟುವಟಿಕೆಗಳೆಲ್ಲವೂ ಒಂದು ಕಲ್ಲು ಸಕ್ಕರೆಯ ಹಾಗೆ ಅಲೌಕಿಕ ಸವಿಯನ್ನೊಳಗೊಂಡಿರುತ್ತದೆ. ಅಜ್ಞಾನದ ಕಾಮಾಲೆಯಿಂದ ಕ್ಷೇಶಗೊಂಡವನ ನಾಲಗೆ ಯಾವ ಸಿಹಿಯನ್ನೂ ಸವಿಯಲಾಗದಿದ್ದರೂ, ಬರೀ ಅತಿ ಸವಿಯಾದ ಸುಂದರ ಹೆಸರುಗಳನ್ನು ಪ್ರತಿದಿವಸ ಪಠಿಸುವುದರಿಂದಲೇ, ಅಚ್ಚರಿಗೊಳ್ಳುವಂತೆ ಆ ನಾಲಗೆಯ ಮೇಲೊಂದು ಸ್ವಾಭಾವಿಕ ರುಚಿ ಎಚ್ಚರಗೊಳ್ಳುತ್ತದೆ. ಮತ್ತು ಆ ರೋಗ ಬೇರಿನಲ್ಲೇ ನಿಧಾನವಾಗಿ ನಾಶಗೊಳ್ಳುತ್ತದೆ.
ನೀವು ನಿರಂತರವಾಗಿ ಪಠಿಸಿದರೆ, ಪರಿಣಾಮಗಳನ್ನು ನಿಮ್ಮ ಬದುಕಿನಲ್ಲಿಯೆ ಕಾಣಬಹುದು. ಹಂತ ಹಂತವಾಗಿ ನೀವು ಕೋಪ, ದುರಾಸೆ, ಅಸೂಯೆ, ದ್ವೇಷ ಮತ್ತು ಶತ್ರುತ್ವ ಮೊದಲಾದ ನಕಾರಾತ್ಮಕ ಗುಣಗಳಿಂದ ಪಾರಾಗುವಿರಿ.
ಅಷ್ಟೇ ಅಲ್ಲ, ನೀವು ಸಕಾರಾತ್ಮಕ ಗುಣಗಳಾದ ಕರುಣೆ, ಶುದ್ಧತೆ, ತಾಳ್ಮೆ ಸತ್ಯತೆ, ಸಹಿಷ್ಣುತೆ ಮತ್ತು ಶಾಂತತೆಗಳನ್ನು ಬೆಳೆಸಿಕೊಳ್ಳುವಿರಿ. ಪ್ರಾಪಂಚಿಕ ಸೋಲು ಗೆಲುವುಗಳು ನಿಮ್ಮನ್ನು ಸುಲಭವಾಗಿ ಶೋಭೆಗೊಳಿಸಲಾರದು. ಏಕೆ೦ದರೆ, ಮಂತ್ರಪಠನೆಯಿಂದ ನಿಮಗೊಂದು ವಿಷಯ ಅರ್ಥವಾಗಿರುತ್ತದೆ: ನಿಜವಾದ ಯಶಸ್ಸಿಗೂ ಮತ್ತು ಪ್ರಾಪಂಚಿಕ ಶರೀರಕ್ಕೂ ಯಾವ ಸಂಬಂಧವೂ ಇಲ್ಲ – ಶರೀರ ಯಾವಾಗ ಬೇಕಾದರೂ ನಾಶವಾಗುವಂತಹದು.
ತದ್ವಿರುದ್ಧ ಸಂದರ್ಭಗಳಲ್ಲಿ ನೀವು ಸಂತೋಷವಾಗಿರುವುದುಂಟು. ಏಕೆಂದರೆ, ನಿಮ್ಮ ಸಂತೋಷ ಬರುವುದು ‘ಆತ್ಮ’ದಿಂದಲೇ ಹೊರತು ಆ ತಾತ್ಕಾಲಿಕ ಪ್ರಾಪಂಚಿಕ ಶರೀರದಿಂದಲ್ಲ. ನಿಮಗೆ ಸಾವಿನ ಹೆದರಿಕೆಯಿಂದಲೂ ಬಿಡುಗಡೆ ಸಿಗಬಹುದು. ಏಕೆಂದರೆ ಒಂದು ಚೇತನಾತ್ಮವಾಗಿ ನೀವು ಶಾಶ್ವತರು ಎನ್ನುವುದನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿರುತ್ತೀರಿ.
ಹರೇ ಕೃಷ್ಣ ಮಂತ್ರದ ಪಠನ ಆಧ್ಯಾತ್ಮಿಕ ಪ್ರಪಂಚಕ್ಕೊಂದು ರಹದಾರಿ ಮತ್ತು ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗಗಳಿಂದ ಕೊನೆ. ಪ್ರಾಪಂಚಿಕರು ಬಹಳ ಶ್ರಮವಹಿಸಿ, ವಸ್ತುಗಳಿಂದ ಸಂತೋಷವನ್ನು ಹಿಂಡಿ ತೆಗೆಯುವ ಹತಾಶ ಪ್ರಯತ್ನದಲ್ಲಿ ಒಂದು ಸಲ ಅಗೆದ ಚೂಯಿಂಗ್ ಗಮ್‌ನ್ನು ಮತ್ತೆ ಅಗಿಯುವ ಹಾಗೆ – ದುಡಿಯಲು ಸಿದ್ಧರಿರುತ್ತಾರೆ.
ಇದೇ ಶಕ್ತಿಯನ್ನು ಶಾಶ್ವತ ಆಧ್ಯಾತ್ಮಿಕ ಆನಂದವನ್ನು ಪಡೆದುಕೊಳ್ಳಲು ಉಪಯೋಗಿಸಬಹುದು. ಯಾರೂ ನಿಮ್ಮಿಂದ ಎಂದಿಗೂ ಈ ಸಂತೋಷವನ್ನು ಕಿತ್ತುಕೊಳ್ಳುವುದು ಸಾಧ್ಯವಿಲ್ಲ ಮತ್ತು ಇದಕ್ಕೆ ನೀವು ತೆರಬೇಕಾದ ಬೆಲೆಯೆಂದರೆ, ಅದನ್ನು ಪಡೆದುಕೊಳ್ಳಲು ನಿಮ್ಮ ಪ್ರಾಮಾಣಿಕ ಆಕಾಂಕ್ಷೆ ಹರೇಕೃಷ್ಣ ಮಂತ್ರ ಪಠಿಸುವುದರಿಂದ ಆಗುವ ಪರಿಣಾಮದ ಬಗ್ಗೆ ಮತ್ತೊಂದು ಹೇಳಿಕೆಯನ್ನು ಇಲ್ಲಿ ಉದಾಹರಿಸಬಹುದಾಗಿದೆ.
ಮುಂಜಾವಿನ ಸೂರ್ಯ ತತ್ ಕ್ಷಣ ಪ್ರಪಂಚದ ಎಲ್ಲ ಕತ್ತಲೆಯನ್ನೂ ಕರಗಿಸುವ ಹಾಗೆ, ದೇವರ ಪವಿತ್ರ ನಾಮವನ್ನು ಯಾವ ಅಪನಂಬಿಕೆಗಳೂ ಇಲ್ಲದೆ ಒಮ್ಮೆ ಪಠಿಸಿದರೆ, ಒಬ್ಬ ಜೀವಿಯ ಎಲ್ಲ ಪಾಪಕರ್ಮಗಳಿಂದ ಎದುರಾಗುವ ಪರಿಣಾಮಗಳನ್ನು ಅದು ಕರಗಿಸಬಲ್ಲದು. ಇಡೀ ಪ್ರಪಂಚಕ್ಕೆ ಶುಭಕರವಾದ, ಭಗವಂತನ ಪವಿತ್ರ ನಾಮಕ್ಕೆ ಎಲ್ಲ ಕೀರ್ತಿಗಳೂ ಸಲ್ಲುತ್ತವೆ.”
ಶ್ರೀಲ ಪ್ರಭುಪಾದರು, ಹರೇಕೃಷ್ಣ ಮಂತ್ರ ಪಠನಕ್ಕೆ ಹೀಗೊಂದು ವಿವರಣೆಯನ್ನು ನೀಡಿದ್ದಾರೆ:
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಹರೇರಾಮ, ಹರೇರಾಮ, ರಾಮರಾಮ ಹರೇಹರೇ – ಈ ನಾಮೋಚ್ಛಾರದ ದಿವ್ಯ ಸ್ಪಂದನ, ಕೃಷ್ಣಪ್ರಜ್ಞೆಯನ್ನು ಪುನಶ್ಚೇತನ್ಯಗೊಳಿಸುವ ಒಂದು ಮಹೋನ್ನತ ರೀತಿ. ಆಧ್ಯಾತ್ಮಕ ಜೀವಾತ್ಮಗಳಾಗಿ ನಾವು ಮೂಲತಃ ಕೃಷ್ಣಪ್ರಜ್ಞೆಯ ಜೀವಿಗಳು, ಆದರೆ, ಅನಾದಿಕಾಲದಿಂದಲೂ ನಮಗಿದ್ದ ವಸ್ತುಸಂಬಂಧ ಸಹಯೋಗದ ಕಾರಣ, ನಮ್ಮ ಪ್ರಜ್ಞೆ ಈಗ ಐಹಿಕ ವಾತಾವರಣದಿಂದ ಮಲಿನಗೊಂಡುಬಿಟ್ಟಿದೆ.

ಇಂತಹದೊಂದು ಮಾಲಿನ್ಯಭರಿತ ಬದುಕಿನಲ್ಲಿ ನಾವು ಐಹಿಕ ಪ್ರಕೃತಿಯ ಮೂಲಾಧಾರಗಳನ್ನು ದುಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ, ಆದರೆ, ನಿಜವಾಗಲೂ ನಾವು ಅದರ ಸಂಕೀರ್ಣತೆಗಳಲ್ಲಿ ಹೆಚ್ಚು ಹೆಚ್ಚು ತೊಡರಿಕೊಂಡು ಬಿಡುತ್ತಿದ್ದೇವೆ. ಈ ಭ್ರಾಂತಿಯೇ ಮಾಯೆ- ಐಹಿಕ ಪ್ರಕೃತಿಯ ಕಟ್ಟುನಿಟ್ಟಿನ ನಿಯಮಗಳನ್ನು ಗೆಲ್ಲಲು ನಮ್ಮ ಶ್ರಮದ ಹೋರಾಟ.
ಈ ಐಹಿಕ ಪ್ರಕೃತಿಯೊಂದಿಗಿನ ಭ್ರಾಂತ ಹೋರಾಟವನ್ನು, ಕೃಷ್ಣಪ್ರಜ್ಞೆಯ ಪುನಶ್ವೇತನದ ಮೂಲಕ, ಕೂಡಲೇ ನಿಲ್ಲಿಸಬಹುದು. ಕೃಷ್ಣಪ್ರಜ್ಞೆ ಎನ್ನುವುದು ಮನಸ್ಸಿನ ಮೇಲಿನ ಒಂದು ಕೃತಕ ಹೊರೆ ಅಲ್ಲ. ಅದು ಜೀವಿಯ ಒಂದು ಮೂಲ ಸಾಮರ್ಥ್ಯ. ನಾವು ದಿವ್ಯ ಸ್ಪಂದನವನ್ನು ಅನುಭವಿಸಿದಾಗ, ಈ ಪ್ರಜ್ಞೆ ಪುನಶ್ಚೇತನಗೊಳ್ಳುತ್ತದೆ, ಮತ್ತು ಈ ಕಾರಣದಿಂದ ಸಂಬಂಧಿಸಿದ ವಿಧಾಯಕ ಶಕ್ತಿಗಳು ಈ ಹರೇಕೃಷ್ಣಪಠನೆಯನ್ನು ಶಿಫಾರಸ್ಸು ಮಾಡಿವೆ.
ಮತ್ತೆ, ಒಂದು ಕಾರ್ಯರೂಪ ಅನುಭವದಿಂದ ಕೂಡ, ‘ಮುಕ್ತಿಗಾಗಿ ಒಂದು ಮಹಾಪಠನೆ’ ಎನ್ನುವ ಈ ಮಹಾಮಂತ್ರವನ್ನು ಪಠಿಸುವುದರಿಂದ, ಆಧ್ಯಾತ್ಮಿಕ ಸ್ತರದಲ್ಲಿ ತತ್ ಕ್ಷಣ ನಾವು ದಿವ್ಯಾನಂದವನ್ನು ಅನುಭವಿಸಬಹುದು. ಒಬ್ಬರು ಆಧ್ಯಾತ್ಮಿಕ ತಿಳಿವಳಿಕೆಯ ಒಂದು ಸ್ತರದ ಮೇಲೆ, ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳನ್ನು ಮೀರಿ ನಿಜವಾಗಲೂ ನಿಂತಿದ್ದಾಗ, ಅಂತಹವರು ಪಾರಮಾರ್ಥಿಕ ಸ್ತರವೊಂದರ ಮೇಲೆ ನಿಂತಿರುವಂತಾಗುತ್ತದೆ.
ಹರೇ ಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಂತ್ರದ ಪಠನೆ, ಎಲ್ಲ ಕೆಳಗಿನ ಸ್ತರದ ಪ್ರಜ್ಞೆಗಳಾದ, ಇಂದ್ರಿಯ ಮನಸ್ಸು ಮತ್ತು ಬುದ್ಧಿಗಳನ್ನು ಮೀರಿ, ಆಧ್ಯಾತ್ಮಿಕ ಸ್ತರದಿಂದ ನೇರವಾಗಿ ಮಾಡುವಂತಹದು. ಈ ಮಂತ್ರದ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿಲ್ಲ.
ಅಥವಾ ಮನೋಕಲ್ಪನೆಗಳಿಗೂ ಆಸ್ಪದವಿಲ್ಲ, ಜೊತೆಗೆ, ಈ ಮಹಾಮಂತ್ರವನ್ನು ಪಠಿಸಲು ಯಾವ ರೀತಿಯ ಬೌದ್ಧಿಕ ಹೊಂದಾಣಿಕೆಯೂ ಬೇಕಾಗಿಲ್ಲ. ಆಧ್ಯಾತ್ಮಿಕ ಆಧಾರ ತತ್ತ್ವದಿಂದ ಇದು ತನಗೆ ತಾನೇ ಚಿಮ್ಮುತ್ತದೆ. ಆದ ಕಾರಣ ಯಾರು ಬೇಕಾದರೂ ಹಿಂದಿನ ಯಾವ ಅರ್ಹತೆಗಳು ಮತ್ತು ಭಾವಾವೇಶಗಳೂ ಇಲ್ಲದೆ ಈ ದಿವ್ಯ ನಾಮೋಚ್ಚಾರಣೆಯಲ್ಲಿ ಭಾಗವಹಿಸಬಹುದು. ನಾವಿದನ್ನು ನಡೆಯುತ್ತಿರುವುದನ್ನೇ ನೋಡಿದ್ದೇವೆ – ಒಂದು ಪುಟ್ಟ ಮಗುವೂ ಸಹ ಈ ಪಠನೆಯಲ್ಲಿ ಭಾಗವಹಿಸಬಹುದು, ಅಷ್ಟೇಕೆ ಒಂದು ನಾಯಿಯೂ ಸೇರಿಕೊಳ್ಳಬಹುದು.
ಹೀಗಿದ್ದರೂ, ಭಗವಂತನ ಪರಿಶುದ್ಧ ಭಕ್ತನ ತುಟಿಗಳ ಮೂಲಕ ಈ ಪಠನೆ ಕೇಳಿರಬೇಕು. ಆಗ ಮಾತ್ರ ತತ್‌ಕ್ಷಣದ ಪರಿಣಾಮವನ್ನು ಸಾಧಿಸಬಹುದು. ಆದಷ್ಟು ಮಟ್ಟಿಗೆ, ಉಪಾಸಕರಲ್ಲದ ತುಟಿಗಳ ಮೂಲಕ ಈ ಮಂತ್ರ ಹೊರಹೊಮ್ಮುವುದನ್ನು ತಡೆಯಬೇಕು. ಸರ್ಪದ ತುಟಿಗೆ ತಗಲಿದ ಹಾಲು ಕೂಡ ವಿಷದ ಪರಿಣಾಮವನ್ನು ಪಡೆದುಕೊಂಡಿರುತ್ತದೆ.
ಹರ ಎನ್ನುವ ಪದ ದೇವರನ್ನು ಸಂಬೋಧಿಸುವ ಒಂದು ರೀತಿ. ಕೃಷ್ಣ ಮತ್ತು ರಾಮ ಇಬ್ಬರೂ ದೇವರನ್ನು ನೇರವಾಗಿ ಸಂಬೋಧಿಸುವ ಎರಡು ಹೆಸರುಗಳು, ಮತ್ತು ಅವೆರಡೂ ‘ಪರಮಾನಂದ’ ನೀಡುವಂತಹವು. ಹರ ಎನ್ನುವುದು ದೇವರ ಮಹಾನ್ ಶಕ್ತಿ. ಈ ಶಕ್ತಿಯನ್ನು, ಹರೇ, ಎಂದು ಸಂಬೋಧಿಸುವುದು ನಮಗೆ ದೇವೋತ್ತಮ ಪುರುಷನನ್ನು ಎಟುಕಿಸಿಕೊಳ್ಳಲು ಸಹಾಯ ಮಾಡುತ್ತದೆ.
ಮಾಯಾ ಎಂದು ಕರೆಸಿಕೊಳ್ಳುವ ಐಹಿಕ ಶಕ್ತಿ ಕೂಡ ದೇವರ ಮಹಾಶಕ್ತಿಗಳಲ್ಲಿ ಒಂದು. ಜೀವಿಗಳನ್ನು ವಸ್ತುಗಳಿಗಿಂತ ಉನ್ನತವಾದ ಶಕ್ತಿ ಎಂದು ಹೇಳಲಾಗುತ್ತದೆ. ಈ ಉನ್ನತ ಶಕ್ತಿ ಎನ್ನುವುದು ಸಾಧಾರಣ ಶಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ಅದೊಂದು ತಾಳಮೇಳವಿಲ್ಲದ ಅಸಂಬಂಧ ಪರಿಸ್ಥಿತಿಯಾಗುತ್ತದೆ. ಆದರೆ, ಅಂಚಿನಲ್ಲಿರುವ ಶಕ್ತಿ ಪರಮೋತ್ತಮ ಆಧ್ಯಾತ್ಮಿಕ ಶಕ್ತಿಯಾದ ಹರದೊಂದಿಗೆ ಸೇರಿಕೊಂಡಾಗ, ಅದು ಜೀವಿಯ ಒಂದು ಸಂತೋಷದ – ಸಾಮಾನ್ಯ ಸ್ಥಿತಿಯಾಗುತ್ತದೆ.
ಮೂರು ಮಂತ್ರಗಳಾದ – ಹರೇ, ಕೃಷ್ಣ ಮತ್ತು ರಾಮ, ಮಹಾಮಂತ್ರದ ದಿವ್ಯಬೀಜಪದಗಳು ಮತ್ತು ಇವನ್ನು ಪಠಿಸುವುದು, ದೇವರ ಮತ್ತು ಅವನ ಅಂತರ್ಗತ ಶಕ್ತಿಯ ಆಧ್ಯಾತ್ಮಿಕ ಮೊರೆ. ಮಾತೆ ಹರಾ, ಮಹಾಪಿತ ಹರಿಯ ಅಥವಾ ಕೃಷ್ಣನ ಅನುಗ್ರಹವನ್ನು ಸಂಪಾದಿಸಲು ಸಹಾಯ ಮಾಡುತ್ತಾಳೆ. ಮತ್ತು ಇಂತಹ ಪ್ರಾಮಾಣಿಕ ಭಕ್ತರಲ್ಲಿ ದೇವರು ತಾನೇ ಸ್ವಯಂ ವ್ಯಕ್ತವಾಗುತ್ತಾನೆ.
ಆದ್ದರಿಂದ ಈ ಯುಗದಲ್ಲಿ ಆಧ್ಯಾತ್ಮಿಕ ಸಾಕ್ಷಾತ್ಕಾರ ಹೊಂದಲು ಈ ಮಂತ್ರದಷ್ಟು ಪರಿಣಾಮಕಾರಿ ಮಂತ್ರ ಬೇರೊಂದಿಲ್ಲ: ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣಕೃಷ್ಣ ಹರೇ ಹರೇ… ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.

ಕೆಲವು ಚಟುವಟಿಕೆಗಳು ಹರೇ ಕೃಷ್ಣ ಪಠನೆಗೆ ಪೂರಕವಾಗಿವೆ ಮತ್ತು ಹೀಗಾಗಿ ಒಬ್ಬರ ಆಧ್ಯಾತ್ಮಿಕ ಬದುಕಿಗೆ ಸಹಾಯಮಾಡುತ್ತವೆ. ಮತ್ತೆ ಇದಕ್ಕೆ ವಿರುದ್ಧವಾದ ಚಟುವಟಿಕೆಗಳೂ ಇವೆ. ಇವೆರಡರ ನಡುವಿನ – ಪರ ಮತ್ತು ವಿರುದ್ಧ – ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ; ಇಲ್ಲದಿದ್ದರೆ, ಯಾರೊಬ್ಬರು ಆಧ್ಯಾತ್ಮಿಕ ಬೆಳವಣಿಗೆಯ ಪ್ರಯತ್ನ, ನೀರು ಸುರಿಯುತ್ತ ಬೆಂಕಿಯನ್ನು ಹೊತ್ತಿಸುವ ಪ್ರಯತ್ನದಂತಾಗುತ್ತದೆ.
ವೈದಿಕ ವಿಧಾಯಕ ಶಕ್ತಿಗಳು, ಕೆಳಕಾಣಿಸಿರುವ ಅಂಶಗಳನ್ನು ಯಾರೊಬ್ಬರ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾದವು ಎಂದು ನಿರ್ಧರಿಸಿದ್ದಾರೆ:
1. ಆಧ್ಯಾತ್ಮಿಕವಾಗಿ ಮುಂದುವರಿಯಲು, ತಾಳ್ಮೆಯ ಮತ್ತು ಉತ್ಸಾಹದ ನಿರ್ಧಾರದಿಂದ ಹರೇಕೃಷ್ಣ ಮಂತ್ರ ಪಠನೆ.
2. ಆಧ್ಯಾತ್ಮಿಕ ನಿಯಮಗಳ ಪ್ರಕಾರ ಒಂದು ಕಟ್ಟುಪಾಡಿನ ಜೀವನವನ್ನು ನಡೆಸುವುದು.
3. ಅನಗತ್ಯ ಐಹಿಕ ಚಟುವಟಿಕೆಗಳಲ್ಲಿ ತೊಡಗದಿರುವುದು.
4. ಭಕ್ತರೊಂದಿಗೆ ಸೇರಿಕೊಳ್ಳುವುದು.
5. ಭಗವದ್ಗೀತೆ ಮತ್ತು ಶ್ರೀ ಮದ್ಭಾಗವತದಂತಹ ಪವಿತ್ರ ಧರ್ಮಗ್ರಂಥಗಳನ್ನು ಓದುವುದು.
6. ಶ್ರೀಕೃಷ್ಣನಿಗೆ ಸಮರ್ಪಿಸಿದ ಆಹಾರವನ್ನೇ ಸೇವಿಸುವುದು.
7. ಪರಿಶುದ್ಧ, ವಿನಿಮಯವಂತ ಮತ್ತು ಪ್ರಾಮಾಣಿಕವಾಗಿರುವುದು.
8. ಸರಳ ಬದುಕು ನಡೆಸುವುದು.
ಅನುಚಿತವೆಂದಿರುವ ಅಂಶಗಳು:
1.ಪ್ರಾಪಂಚಿಕ ಸಾಧನೆಗಳಿಗಾಗಿ ಸ್ವಾರ್ಥ ಪ್ರಯತ್ನಗಳು.
2. ಅನಗತ್ಯ ಪ್ರಾಪಂಚಿಕ ಹರಟೆಗಳಲ್ಲಿ ತೊಡಗುವುದು.
3. ಆಧ್ಯಾತ್ಮಿಕ ನಿಯಮಗಳನ್ನು ಅನುಸರಿಸದಿರುವುದು ಮತ್ತು ಮತಾಚರಣೆ ವಿಧಿಗಳನ್ನು ಪರಿಜ್ಞಾನವಿಲ್ಲದೆ ಅನುಸರಿಸುವುದು. ಮಾಂಸಾಹಾರ, ಅನೈತಿಕ ಲೈಂಗಿಕತೆ, ಮದ್ಯಸೇವನೆ ಮತ್ತು ಜೂಜು, 5. ಜಂಭ, ದುರಾಸೆ, ಕೋಪ ಮತ್ತು ಧನಲೋಭ.
4. ಮಾಂಸಹಾರ, ಅನೈತಿಕ ಲೈಂಗಿಕತೆ, ಮದ್ಯಸೇವನೆ ಮತ್ತು ಜೂಜು.
5. ಜಂಭ, ದುರಾಸೆ, ಕೋಪ ಮತ್ತು ಧನಲೋಭ.
6. ಪ್ರಾಪಂಚಿಕರೊಂದಿಗೆ ಮಧುರ ಬಾಂಧವ್ಯ.
ದೇವರ ಪವಿತ್ರ ನಾಮವನ್ನು ಪಠಿಸುವುದರ ಸಂಬಂಧವಾಗಿ ಆಗಬಹುದಾದ ಅಪಚಾರವನ್ನು ಎಚ್ಚರಿಕೆಯಿಂದ ಹೋಗಲಾಡಿಸಿಕೊಳ್ಳಬೇಕು: ಪದ್ಮಪುರಾಣ ಅಪಚಾರಗಳನ್ನು ಹೀಗೆ ಪಟ್ಟಿ ಮಾಡಿದೆ:
1. ದೇವರ ಪವಿತ್ರನಾಮವನ್ನು ವ್ಯಾಪಕ ಮಾಡುವುದನ್ನೇ ತಮ್ಮ ಜೀವನದ ಉದ್ದೇಶವನ್ನಾಗಿರಿಸಿಕೊಂಡಿರುವ ಭಕ್ತರ ದೂಷಣೆ.
2. ಮಹಾವಿಷ್ಣುವಿನ ಸಮಾನ ಅಥವಾ ಪ್ರತ್ಯೇಕ ಎಂದು ದೇವತೆಗಳಾದ ಶಿವ ಮತ್ತು ಬ್ರಹ್ಮದೇವರನ್ನು ಪರಿಗಣಿಸುವುದು.
3. ಆಧ್ಯಾತ್ಮಿಕ ಗುರುಗಳ ಆಜ್ಞೆಗಳನ್ನು ಪಾಲಿಸದಿರುವುದು.
4. ವೈದಿಕ ಸಾಹಿತ್ಯ ಮತ್ತು ವೈದಿಕ ಸಂಬಂಧಿಕ ಸಾಹಿತ್ಯಗಳ ದೂಷಣೆ.
5. ಹರೇಕೃಷ್ಣ ಪಠಣೆಯ ಮಹಾನತೆಯನ್ನು ಕಲ್ಪನೆ ಎನ್ನುವುದು.
6. ದೇವರ ಪವಿತ್ರನಾಮದ ಬಗ್ಗೆ ಯಾವುದೋ ಒಂದು ಅಪಾರ್ಥ ನೀಡುವುದು.
7. ದೇವರ ಪವಿತ್ರ ನಾಮದ ಹೆಸರಿನಲ್ಲಿ ಪಾಪದ ಕೆಲಸಗಳನ್ನು ಮಾಡುವುದು.
8. ಹರೇಕೃಷ್ಣ ಮಂತ್ರ ಪಠಣೆಯನ್ನು ವೇದಗಳ ಕರ್ಮಕಾಂಡದಲ್ಲಿ ಸೂಚಿಸಿರುವ ಮತಾಚರಣೆ ವಿಧಿಯೆಂದು ಎಣಿಸುವುದು.
9. ನಂಬಿಕೆಯೇ ಇಲ್ಲದ ವ್ಯಕ್ತಿಗೆ ದೇವರ ಪವಿತ್ರ ನಾಮದ ಅದ್ಭುತಗಳನ್ನು ಉಪದೇಶಿಸುವುದು.
10. ಈ ವಿಷಯದಲ್ಲಿ ಬೇಕಾದಷ್ಟು ತಿಳಿವಳಿಕೆಗಳನ್ನು ಅರಗಿಸಿಕೊಂಡಿದ್ದರೂ ದೇವರ ಪವಿತ್ರ ನಾಮಗಳ ಬಗ್ಗೆ ಸಂಪೂರ್ಣ ನಂಬಿಕೆ ಇರಿಸಿಕೊಳ್ಳದೆ, ಪ್ರಾಪಂಚಿಕ ಆಕರ್ಷಣೆಗಳತ್ತ ಸಂಬಂಧ ಉಳಿಸಿಕೊಳ್ಳುವುದು.
ಸಾವಿರಾರು ವರ್ಷಗಳಿಂದ, ತಮ್ಮ ಮೂಲಭೂತ, ಪರಿಶುದ್ಧ ಪ್ರಜ್ಞೆಯನ್ನು ಜಾಗೃತಗೊಳಿಸಲು ಬಯಸಿದವರೆಲ್ಲ, ಹರೇಕೃಷ್ಣ ಮಂತ್ರವನ್ನು ಅಭ್ಯಾಸ ಮಾಡುತ್ತ ಬಂದಿದ್ದಾರೆ. ಇದನ್ನು ಪಠಿಸುತ್ತ ನೀವು ಪ್ರಾಪಂಚಿಕ ಬಂಧನಗಳಾದ ಹುಟ್ಟು, ವೃದ್ಧಾಪ್ಯ, ರೋಗ ಮತ್ತು ಸಾವುಳಿಂದ ನಿಮ್ಮ ನಂಟನ್ನು ಕಳಚಿಕೊಳ್ಳುತ್ತೀರಿ;
ನೀವು ಅಂತಿಮ ಪರೀಕ್ಷೆ – ಸಾವು ಎನ್ನುವುದಕ್ಕೆ ಸಿದ್ಧರಾಗುತ್ತೀರಿ; ಇದು ನಿಮ್ಮ ಮಾನವ ಬುದ್ಧಶಕ್ತಿಗಳನ್ನು ಕರ್ಮಾಧಾರಿತ ಪ್ರತಿಕ್ರಿಯೆಗಳ ಸಿಕ್ಕುಗಳ ಬಳಸು ವ್ಯವಸ್ಥೆಯಲ್ಲಿ ಇನ್ನೂ ತೊಡಗಿಕೊಳ್ಳುತ್ತೀರೊ ಅಥವಾ ಈ ಐಹಿಕ ಪ್ರಪಂಚದ ಬಂಧನದಿಂದ ಬಿಡಿಸಿಕೊಂಡು, ಅಸಂಖ್ಯಾತ ಚೇತನಾತ್ಮಗಳು ದೇವೋತ್ತಮ ಪುರುಷ ಶ್ರೀ ಕೃಷ್ಣನ ಜೊತೆಯಲ್ಲಿ ಶಾಶ್ವತವಾದ ಒಂದು ಪರಮಾನಂದ ಮತ್ತು ಪರಮಜ್ಞಾನದ ಸುಖವನ್ನು ಅನುಭವಿಸುವ “ಆಧ್ಯಾತ್ಮಿಕ ವಿಶ್ವ”ವೇ ಆದ ನಿಜವಾದ ಮನೆಗೆ ಮರಳಬೇಕೆಂದಿದ್ದೀರೋ ಎನ್ನುವುದನ್ನು ನಿರ್ಧರಿಸುತ್ತದೆ.






Leave a Reply