ಮುದುಕಿಯ ಹಾರೈಕೆ

ಶ್ರೀಲ ಪ್ರಭುಪಾದರು ಮಾಯಾಪುರದಲ್ಲಿ ವಾಸ್ತವ್ಯ ಹೂಡಿದ್ದಾಗ ನಡೆದ ಘಟನೆ. ಪ್ರಭುಪಾದರೊಂದಿಗೆ ಬಂದಿದ್ದ ಇಬ್ಬರು ಪಾಶ್ಚಾತ್ಯ ಶಿಷ್ಯರು ದೇವಾಲಯವೊಂದಕ್ಕೆ ಭೇಟಿ ನೀಡಿದ್ದರು. ದೇವಾಲಯದ ಪೂಜಾರಿಯಿಂದ ಅವರ ಮನಸ್ಸಿಗೆ ಅಹಿತವಾಗುವಂಥ ಹಾರೈಕೆ ಬಂತು.

ಅವರು ದರ್ಶನ ಪಡೆದು ಹೊರಡುತ್ತಿರುವಾಗ ಪೂಜಾರಿ ಅವರನ್ನು ಉದ್ದೇಶಿಸಿ “ನಿಮ್ಮಭಕ್ತಿ ಸೇವೆಯನ್ನು ಹೀಗೆಯೇ ಮುಂದುವರಿಸಿ. ಮುಂದಿನ ಜನ್ಮದಲ್ಲಿ ನೀವು ಬ್ರಾಹ್ಮಣರಾಗಿ ಹುಟ್ಟಬಹುದು” ಎಂದು ಹೇಳಿದ್ದು ಅವರಿಗೆ ಸರಿಕಾಣಲಿಲ್ಲ. ಅವರು ಶ್ರೀಲ ಪ್ರಭುಪಾದರೊಂದಿಗೆ ಈ ವಿಷಯ ಪ್ರಸ್ತಾಪಿಸಿದಾಗ ಅವರು ಅವರನ್ನು ಸಮಾಧಾನಪಡಿಸುತ್ತ ಈ ಕಥೆ ಹೇಳಿದರು:

ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆದ ಕತೆ, ಒಂದು ಕುಗ್ರಾಮದಲ್ಲಿ ಒಬ್ಬ ಮುದುಕಿ ಇದ್ದಳು. ಅವಳಿಗೂ, ಆಕೆಯ ಸಂಬಂಧಿಕರಿಗೂ ಆಸ್ತಿಯ ವಿಷಯವಾಗಿ ವ್ಯಾಜ್ಯ ನಡೆಯುತ್ತಿತ್ತು. ಅದೇ ವೇಳೆಗೆ ಬ್ರಿಟಿಷ್‌ ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಆ ಹಳ್ಳಿಗೆ ಭೇಟಿ ನೀಡಿದ.

ಮುದುಕಿಯ ಬಗೆಹರಿಯದ ವ್ಯಾಜ್ಯದಿಂದ ಬೇಸರಿಸಿದ್ದ ಜನ, ಆಕೆಗೆ ತನ್ನ ಬವಣೆಯನ್ನು ಮ್ಯಾಜಿಸ್ಟ್ರೇಟರನ ಬಳಿ ನಿವೇದಿಸಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ಆಕೆ ತನ್ನ ಅಹವಾಲು ಒಯ್ದಾಗ, ಆತ ಆಕೆಯ ಪರವಾಗಿಯೇ ತೀರ್ಪ ನೀಡಿ, ಆಸ್ತಿಯನ್ನು ದಕ್ಕಿಸಿಕೊಟ್ಟ.

ಈ ತೀರ್ಮಾನದಿಂದ ಸಂತೋಷಗೊಂಡ ಮುದುಕಿ, ಮ್ಯಾಜಿಸ್ಟ್ರೇಟರನನ್ನು ಕುರಿತು, “ನೀನು ಮುಂದಿನ ಜನ್ಮದಲ್ಲಿ ಪೊಲೀಸನವನಾಗಿ ಉದ್ಯೋಗ ಹೊಂದುವಿ ಇದೇ ನನ್ನ ಆಶೀರ್ವಾದ” ಎಂದು ಹರಿಸಿದಳು!

ಆ ಮುದುಕಿಯ ತಿಳುವಳಿಕೆಯ ವ್ಯಾಪ್ತಿಯಲ್ಲಿ ಪೊಲೀಸ್‌ ಹುದ್ದೆಯೇ ಅತಿ ಮೇಲಿನದು. ಮ್ಯಾಜಿಸ್ಟ್ರೇಟ್‌ ಹುದ್ದೆ ಅದಕ್ಕಿಂತ ಹೆಚ್ಚಿನದೆಂದು ಆಕೆ ಅರಿಯಳು. ಅದು ಅವಳ ಅಜ್ಞಾನ.

ಆ ಪೂಜಾರಿಯೂ ಅಷ್ಟೇ. ಆತ ಬ್ರಾಹ್ಮಣರೇ ವೈಷ್ಣವ ಸಮುದಾಯಕ್ಕಿಂತ ಮೇಲ್ದರ್ಜೆಯವರೆಂದು ತಿಳಿದಿದ್ದಾನೆ ಅದು ಅವನ ಅಜ್ಞಾನ!

ನೀತಿ: ಬಾವಿಯ ಕಪ್ಪೆ ಬಾವಿಗಿಂತ ದೊಡ್ಡದು ಇಲ್ಲವೆಂದೇ ವಾದಿಸುವಂತೆ ಅಲ್ಪಜ್ಞರು ತಾವೇ ಶ್ರೇಷ್ಠರೆಂಬ ಭ್ರಮೆಯಲ್ಲಿರುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi