– ಆಕರ : ಸತ್‌ಸ್ವರೂಪದಾಸರ ಸ್ಮೃತಿಪಟಲದಿಂದ
ಉಪದೇಶದ ಅಂತರಾರ್ಥವನ್ನು ತಿಳಿಯದೆ, ಅದನ್ನು ಕುರಿತು ತಾವು ಹೇಗೆ ಅರ್ಥೈಸಿಕೊಳ್ಳುವರೋ ಅದನ್ನೇ ಬೇರೆಯವರಿಗೂ ಬೋಧಿಸುವ ಅಂಧಾನುಕರಣೆ ಮಾಡುವ ಜನರನ್ನು ಕುರಿತು ಶ್ರೀಲ ಪ್ರಭುಪಾದರು ಈ ಕಥೆ ಹೇಳುತ್ತಾರೆ:
ಒಂದು ಊರಿನಲ್ಲಿ ಖ್ಯಾತ ಪಶುವೈದ್ಯನೊಬ್ಬನಿದ್ದ. ಅವನು ಹಳ್ಳಿ ಹಳ್ಳಿಗೆ ತೆರಳಿ ಪ್ರಾಣಿಗಳ ರೋಗ ವಾಸಿ ಮಾಡುವಲ್ಲಿ ಸಾಕಷ್ಟು ಯಶಗಳಿಸಿದ್ದ. ಈ ಪಶುವೈದ್ಯನಿಗೊಬ್ಬ ಸಹಾಯಕನಿದ್ದ. ಅವನಿಗೋ, ವೈದ್ಯನ ಖ್ಯಾತಿಯ ಬಗ್ಗೆ ಹೊಟ್ಟೆ ಕಿಚ್ಚು! ಆದಷ್ಟು ಬೇಗ ಮುಖ್ಯ ವೈದ್ಯನನ್ನು ಹಿಂದಿಕ್ಕಿ ತಾನೆ ಎಲ್ಲರೆದರು ಮೆರೆಯಬೇಕೆಂಬ ಚಪಲ.
ಒಮ್ಮೆ ಪಶುವೈದ್ಯನ ಬಳಿ ವಿಚಿತ್ರ ಪರಿಸ್ಥಿತಿಯಲ್ಲಿದ್ದ ಕುದುರೆಯೊಂದನ್ನು ಕರೆತರಲಾಯ್ತು. ಅದರ ಗಂಟಲ ಬಳಿ ದೊಡ್ಡದಾಗಿ ಊದಿಕೊಂಡು, ಅದು ಏನನ್ನೂ ತಿನ್ನಲಾಗದೆ, ಕುಡಿಯಲಾಗದೆ ಒದ್ದಾಡುತ್ತಿತ್ತು.
ಪಶುವೈದ್ಯ ಕುದುರೆಯ ಬಾಯಿ ತೆರೆಸಿದ. ಅದರ ಗಂಟಲನ್ನು ಪರೀಕ್ಷಿಸಿದ. ಆಮೇಲೆ ತನ್ನ ಸಹಾಯಕನಿಗೆ ತನ್ನ ಕೈ ಚೀಲ ಕೊಡಲು ಹೇಳಿದ. ಅದರಿಂದ ಸುತ್ತಿಗೆಯನ್ನು ತೆಗೆದುಕೊಂಡು, ಕುದುರೆಯ ಕತ್ತಿನ ಬಳಿ ಮತ್ತೆ ಮತ್ತೆ ಕುಟ್ಟಿದ.
ಈ ಅಸಾಮಾನ್ಯ ಚಿಕಿತ್ಸೆಯ ಅನಂತರ ಕುದುರೆಯ ಊತ ಇಳಿದುಹೋಯ್ತು. ಅದರ ಮಾಲೀಕ ಸಂತೋಷದಿಂದ ಪಶುವೈದ್ಯನ ಕೈಗುಣವನ್ನು ಕೊಂಡಾಡಿದ. ಹಣ ನೀಡಿ ಗೌರವಿಸಿದ. ಈ ಘಟನೆಯ ಅನಂತರ ಸಹಾಯಕ ಪಶುವೈದ್ಯನಿಗೆ, ಅವನ ಸ್ಥಾನವನ್ನು ಪಡೆಯುವ ಹಂಬಲ ಮತ್ತೂ ಬಲವಾಯ್ತು.

ಒಂದು ದಿನ ಸಹಾಯಕ ಹೇಳದೆ ಕೇಳದೆ ಓಡಿಹೋದ. ಆಸುಪಾಸಿನ ಹಳ್ಳಿಗಳಲ್ಲಿ ತಾನೇ ಮುಖ್ಯ ಪಶುವೈದ್ಯನೆ೦ಬ೦ತೆ ಸೋಗುಹಾಕಿದ. ತಾನೊಬ್ಬ ನುರಿತ ಪಶುಚಿಕಿತ್ಸಕನೆಂದು ಹೇಳಿಕೊಂಡು ತಿರುಗತೊಡಗಿದ.
ಆದರೆ ಅವನು ಕೈ ಹಾಕಿದ ಪ್ರತಿಯೊಂದು ಕೆಲಸದಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಬಿಡುತ್ತಿತ್ತು. ಅವನು ಚಿಕಿತ್ಸೆಗೆ ಹೋದಲ್ಲೆಲ್ಲ ಆ ಪಾಪದ ಮೂಕ ಪ್ರಾಣಿಗಳನ್ನು ಹಿಂಸಿಸಿ ಕೈಬಿಡುತ್ತಿದ್ದ. ಕೆಲವೊಮ್ಮೆ ಏನೋ ಮಾಡಲು ಹೋಗಿ ಅವನ್ನು ಕೊಂದೇ ಬಿಡುತ್ತಿದ್ದ! ಮುಖ್ಯ ಪಶುವೈದ್ಯನಿಗೆ ಈ ಸುದ್ದಿ ತಿಳಿಯಿತು.
ಕೊನೆಗೊಂದು ದಿನ ಮುಖ್ಯ ಪಶುವೈದ್ಯನ ಕೈಗೆ ಸಿಕ್ಕಿಬಿದ್ದ ಮೂರ್ಖ ಸಹಾಯಕ. “ನೀನು ಮಾಡುತ್ತಿರುವುದಾದರೂ ಏನು? ಚಿಕಿತ್ಸೆಗೆಂದು ಕರೆತರುವ ಪ್ರಾಣಿಗಳನ್ನೆಲ್ಲ ಕೊಂದೇ ಬಿಡುತ್ತಿದ್ದೀಯಲ್ಲ, ನಿನಗೇನಾದರೂ ಪ್ರಜ್ಞೆಇದೆಯೇ?” ಎಂದು ಗದರಿದ.
ಅದಕುತ್ತರವಾಗಿ ಮೂರ್ಖ ಪಶುವೈದ್ಯ “ನಾನೇನು ಹೊಸತನ್ನು ಮಾಡಿಲ್ಲ. ನಿಮ್ಮನ್ನು ಅನುಕರಿಸಲು ಪ್ರಯತ್ನಿಸಿದೆ ಅಷ್ಟೆ” ಎಂದು ಹೇಳಿದ. ಆತ, ತಾನು ಮುಖ್ಯವೈದ್ಯನ ಜೊತೆ ಕುದುರೆ ಚಿಕಿತ್ಸೆಗೆ ಹೋದಾಗ ವೈದ್ಯ ಮಾಡಿದ್ದನ್ನೇ ಅನುಕರಣೆ ಮಾಡಿದ್ದಾಗಿ ಹೇಳಿಕೊಂಡ. ಹೋದಲ್ಲೆಲ್ಲ ರೋಗ ಪೀಡಿತ ಪ್ರಾಣಿಗಳನ್ನು ಸುತ್ತಿಗೆಯಿಂದ ಕುಟ್ಟುವುದೇ ಅವನ ಕಾಯಕವಾಗಿ ಹೋಗಿತ್ತು. ಪೆಟ್ಟು ತಾಳಲಾರದೆ ಪ್ರಾಣಿಗಳು ಸತ್ತುಬೀಳುತ್ತಿದ್ದವು!
‘ಅಯ್ಯೋ ಮೂರ್ಖ!” ಅವನ ವಾದ ಸರಣಿ ಕೇಳಿದ ವೈದ್ಯ ಉರಿದುಬಿದ್ದ. “”ನೀನು ಅವತ್ತು ನೋಡಿದ್ದೊಂದು ಅಪರೂಪದ ಪ್ರಕರಣವಷ್ಟೆ. ಆ ಕುದುರೆ ಇಡಿಯ ಕಲ್ಲಂಗಡಿ ಹಣ್ಣುನುಂಗಿತ್ತು. ನಾನು ಹೊರಗಿನಿಂದ ಮೆಲ್ಲಗೆ ಕುಟ್ಟಿ, ಒಳಗಿದ್ದ ಹಣ್ಣನ್ನು ಒಡೆದು ಸರಿಮಾಡಿದೆ. ಅದು ಪ್ರತಿಯೊಂದು ಪ್ರಕರಣಕ್ಕೂ ಅನ್ವಯವಾಗುವಂಥದಲ್ಲ ತಿಳಿದುಕೋ!”
ನೀತಿ : ಕೆಲವೊಂದು ಬೋಧನೆಗಳು ನಿರ್ದಿಷ್ಟ ದೇಶ-ಕಾಲ-ಪರಿಸ್ಥಿತಿಗಳಿಗೆ ಮಾತ್ರ ಅನ್ವಯವಾಗುತ್ತವೆ. ಅವನ್ನೇ ಎಲ್ಲವುದಕ್ಕೂ ಅನ್ವಯಿಸಿದರೆ ಕೇಡು ಖಂಡಿತ.






Leave a Reply