ನಾಲ್ವರು ಕುಮಾರರು

ಸನಕ, ಸನಂದನ, ಸನಾತನ ಮತ್ತು ಸನತ್ ಕುಮಾರ

– ಅನುವಾದ: ಕಿರಣ

ಚತುರ್ಸನರು ಪ್ರಭು ಬ್ರಹ್ಮನಿಂದ ಸೃಷ್ಟಿಯಾದ ನಾಲ್ವರು ಮಾನಸಪುತ್ರರು. ಒಬ್ಬ ವ್ಯಕ್ತಿಯ ಸೌಭಾಗ್ಯವು ತನ್ನ ಬಾಗಿಲನ್ನು ಅವನಿಗೆ ತೆರೆದಾಗ, ಒಬ್ಬ ಸದ್ಗುಣಶೀಲ ವ್ಯಕ್ತಿಯನ್ನೇ ಭೇಟಿಯಾಗುತ್ತಾನೆ. ಆಗ ಅವನ ಆತ್ಮವು ವಿಮುಕ್ತಿಯನ್ನು ಸಾಧಿಸುತ್ತದೆ. ಮತ್ತು ಅವನು ತನ್ನ ಮನಸ್ಸಿನ ಅಜ್ಞಾನ ಮತ್ತು ಬಂಧನಗಳು ಕಳೆದುಕೊಂಡು ಪರಿಶುದ್ಧನಾಗುತ್ತಾನೆ.

ಬ್ರಹ್ಮನು ಸೃಷ್ಟಿಯ ಕ್ರಮವನ್ನು ಆರಂಭಿಸಲು ನಿರ್ಧರಿಸಿದಾಗ, ಮೊದಲು ತನ್ನ ಮನಸ್ಸಿನ ಒಂದು ಆಕಾಂಕ್ಷೆಯಂತೆ ನಾಲ್ವರು ಕುಮಾರರನ್ನು ಸೃಷ್ಟಿಸಿದನು. ಅವರೇ ಸನಕ, ಸನಂದನ, ಸನಾತನ ಮತ್ತು ಸನತ್ ಕುಮಾರರು.

ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿ ಬ್ರಹ್ಮನು ಪ್ರಭು ವಿಷ್ಣುವು ಅನಂತ ಶೇಷನ ಬೆನ್ನ ಮೇಲೆ ಮಲಗಿದ್ದನ್ನು ಕಂಡನು. ಬ್ರಹ್ಮನ ತಪಸ್ಸನ್ನು ನೋಡಿ ಮೆಚ್ಚಿದ ಪ್ರಭು ವಿಷ್ಣು ಅವನಿಗೆ ವೇದದ ಮೂಲ ಜ್ಞಾನವನ್ನು ಪ್ರಸಾದಿಸಿದನು. ಆ ಜ್ಞಾನವನ್ನು ಪಡೆದ ಅನಂತರ ಬ್ರಹ್ಮ ತನ್ನ ಸೃಷ್ಟಿ ಕಾರ್ಯವನ್ನು ಆರಂಭಿಸಿದನು.

ನಾಲ್ವರು ಕುಮಾರರು ಆಸ್ತಿತ್ವಕ್ಕೆ ಬಂದಾಗ ಅವರೆಲ್ಲಾ ಪರಿಶುದ್ಧ ಗುಣಗಳ ಮೂರ್ತಿ ಸ್ವರೂಪಗಳಾಗಿದ್ದರು. ಅವರಲ್ಲಿ ಆಲಸ್ಯ, ನಿದ್ದೆ ಇತ್ಯಾದಿ ಯಾವುದೇ ದುರ್ಗುಣಗಳಿರಲಿಲ್ಲ. ಬ್ರಹ್ಮನು ತನ್ನ ಸೃಷ್ಟಿ ಕಾರ್ಯದಲ್ಲಿ ಅವರನ್ನು ಸಹಾಯಕ್ಕೆಂದೇ ಸೃಷ್ಟಿಸಿದ್ದನು. ಆದರೆ ಅವರೆಲ್ಲಾ ಬ್ರಹ್ಮನ ಆದೇಶವನ್ನು ನಿರಾಕರಿಸಿದರು.

ಆಗ ಅವರು ಕುಮಾರರು ಅಂದರೆ ಬ್ರಹ್ಮಚಾರಿಗಳು ಆದರು. ಆರಂಭದಲ್ಲಿ ಬ್ರಹ್ಮನು ಹಲವಾರು ಮಕ್ಕಳನ್ನು ಸೃಷ್ಟಿಸಿ ಅವರಿಗೆಲ್ಲಾ ತಮ್ಮ ಪೀಳಿಗೆಯನ್ನು ವೃದ್ಧಿಸಬೇಕೆಂದು ಆದೇಶಿಸಿದನು. ಸನಕ, ಸನಂದ, ಸನಾತನ, ಸನತ್ ರಿಗೂ ಈ ಕೋರಿಕೆಯನ್ನು ಇಡಲಾಯಿತು. ಆದರೆ ಅವರು ತಿರಸ್ಕರಿಸಿದರು.

ನಾವು ಈ ಐಹಿಕ ವಿಷಯಗಳಲ್ಲಿ ಸಿಲುಕಲು ಒಪ್ಪುವುದಿಲ್ಲ. ನಾವು ಕುಮಾರರಾಗಿಯೇ, ಬ್ರಹ್ಮಚಾರಿಗಳಾಗಿಯೇ ಉಳಿದು ಪರಮ ಪುರುಷನ ಮಹಿಮೆಗಳನ್ನು ಬೋಧಿಸುತ್ತೇವೆ ಎಂದರು. ಇದನ್ನು ಕೇಳಿ ಬ್ರಹ್ಮ ಕುಪಿತನಾದನು. ಅವನ ಕೋಪದ ಫಲವಾಗಿ ರುದ್ರ (ಶಿವ) ಹಣೆಯ ಮೂಲಕ ಹೊರಹೊಮ್ಮಿದನು.

ಈ ಕುಮಾರರು ನಿತ್ಯ ಮುಕ್ತ ಆತ್ಮಗಳು. ಎಲ್ಲರೂ ತಮ್ಮ ಜನ್ಮದಿಂದ ಸದ್ಗುಣಶೀಲರಾಗಿ, ಧರ್ಮಿಷ್ಠರಾಗಿ ಮತ್ತು ಪ್ರಭುವಿನ ಗುಣಗಾನ ಮಾಡುವ, ಹೆಸರನ್ನು ಸುತ್ತಿಸುವ, ಪ್ರಭುವಿನ ಲೀಲೆಗಳನ್ನು ಕೇಳುವಲ್ಲಿ ಸದಾ ನಿರತರಾಗಿದ್ದರು. ಅವರ ಮನಸ್ಸಿನಲ್ಲಿ ಕ್ಷಣವೂ ಐಹಿಕ ವಿಷಯಗಳ ಬಗ್ಗೆ ಆಸೆ ಮಾಡಲಿಲ್ಲ.

ಅವರು ಸದಾ ‘ಹರಿನಾಮ’ವನ್ನು ಜಪಿಸುತ್ತಿದ್ದರು. ಅವರು ಎಂದೂ ಜೀವನದಲ್ಲಿ ಯಾವುದೇ ಅಪಾಯವನ್ನು ಎದುರಿಸುವುದಿಲ್ಲ ಮತ್ತು ಐದು ವರ್ಷದ ಮಗುವಿನಂತೆ ಸದಾ ಇರುತ್ತಾರೆ. ಅವರಿಗೆ ಯಾವ ಐಹಿಕ ಆಸೆಗಳೂ ಇಲ್ಲ. ಅಥವಾ ಅವರು ಯಾವ ನ್ಯೂನತೆಗಳಿಂದಲೂ ನರಳುವುದಿಲ್ಲ.

ಈ ನಾಲ್ವರು ಕುಮಾರರು ಸಿದ್ದೇಶ್ವರರಾಗಿ, ಎಲ್ಲಾ ಯೋಗ ಪರಿಪೂರ್ಣ ಸಾಧನೆ (ಸಿದ್ಧಿ)ಯನ್ನು ಸಾಧಿಸಿದರು ಮತ್ತು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಬಾಹ್ಯ ಲೋಕಕ್ಕೆ ಪ್ರಯಾಣಿಸುವಷ್ಟು ಸಮರ್ಥರು.

ಈ ಕುಮಾರರಿಂದ ಜ್ಞಾನವನ್ನು ಪಡೆದ ಪೃಥು ಮತ್ತು ಮಹರ್ಷಿ ನಾರದರು ಅದೃಷ್ಟವಂತರು.

ಸನಕ, ಸನಾತನ, ಸನಂದ ಮತ್ತು ಸತನ್ ಕುಮಾರ

ಈ ನಾಲ್ವರು ಕುಮಾರರು ಅಪಾರ ಜ್ಞಾನ ಹೊಂದಿದವರು. ಪರಮ ಸತ್ಯವನ್ನು ಅರಿಯುವ ತತ್ತ್ವಶಾಸ್ತ್ರವಿಧಾನವನ್ನು ಉಪದೇಶಿಸಿದರು. ತದನಂತರ ಅವರು ಪ್ರಭು ವಿಷ್ಣುವಿನ ಪರಿಶುದ್ಧಭಕ್ತರಾದರು. ಈಗ ಅವರು ತಮ್ಮದೇ ಆದ ಸಂಪ್ರದಾಯವಾದ ಸನಕಾದಿ ಸಂಪ್ರದಾಯವನ್ನು ಹೊಂದಿದ್ದಾರೆ. ಈ ಸಂಪ್ರದಾಯವನ್ನು ಕೆಲವರು ನಿಂಬರ್ಕ-ಸಂಪ್ರದಾಯ ಎನ್ನುತ್ತಾರೆ.

ಕುಮಾರರಿಂದ ಸಾಮಾನ್ಯ ಪಾಠಗಳು

ಗಂಗಾ ನದಿಯ೦ತಹ ಪುಣ್ಯ ಕ್ಷೇತ್ರವಿಲ್ಲ. ತನ್ನ ತಾಯಿಯಂತಹ ಮಹಾನ್ ಗುರುವಿಲ್ಲ. ಪ್ರಭು ವಿಷ್ಣುವಿನಂತಹ ವಿಗ್ರಹವಿಲ್ಲ ಮತ್ತು ಅವರೆಲ್ಲರಿಗಿಂತ ಮಹಾನರೇ ಗುರು. ಶಾಂತಿಯ೦ತಹ ಇನ್ನೊಬ್ಬ ಸಹೋದರನಿಲ್ಲ. ಸತ್ಯದಂತಹ ತಪಸ್ಸೊಂದಿಲ್ಲ. ಆತ್ಮ ವಿಮುಕ್ತಿಗಿಂತ ಇನ್ಯಾವ ಉತ್ತಮ ಲಾಭವೂ ಇಲ್ಲ. ಗಂಗೆಯಂತಹ ನದಿಯಿಲ್ಲ.

ದಾನ, ಅನುಭೋಗ ಮತ್ತು ವಿನಾಶಗಳು, ಐಶ್ವರ್ಯದ ಮೂರು ಚಲನೆಗಳು ಮಾತ್ರ ದಾನಕ್ಕಾಗಿ ಬಳಸದ ಅಥವಾ ಕಾಪಿಡದ ಐಶ್ವರ್ಯವು ವಿನಾಶವಾಗುತ್ತದೆ. ಸಸ್ಯಗಳಿಗೂ ಜೀವವಿದೆ. ಅವು ಮನುಕುಲವನ್ನು ತಮ್ಮ ಹಣ್ಣುಗಳು, ಬೇರುಗಳು ಮತ್ತು ಶಾಖೆಗಳಿಂದ ಪೋಷಿಸಿ ಸಂರಕ್ಷಿಸುತ್ತವೆ. ಮನುಷ್ಯನು ಪವಿತ್ರವಾದದ್ದನ್ನು ಸ್ತುತಿಸದಿದ್ದರೆ ಆತ ಒಬ್ಬ ಸತ್ತ ಮನುಷ್ಯನಂತೆಯೇ?

ಭಗವಾನ್ (ಕೃಷ್ಣ) ಎಂದರೆ ಎಲ್ಲ ಐಶ್ವರ್ಯಗಳಿಂದ ತುಂಬಿದ, ಎಲ್ಲ ಸದ್ಗುಣಗಳು ಮತ್ತು ಧರ್ಮನಿಷ್ಟತೆ, ಎಲ್ಲ ಖ್ಯಾತಿ, ಎಲ್ಲ ಜ್ಞಾನ, ಎಲ್ಲ ಐಶ್ವರ್ಯ ಮತ್ತು ಸೌಭಾಗ್ಯ ಹಾಗೂ ಎಲ್ಲ ನಿರ್ವಿಕಾರ ಹೊಂದಿರುವ ಮತ್ತು ಸೃಷ್ಟಿ ಮತ್ತು ನಾಶದ ಕಾರಣವನ್ನು ಅರಿತವನು ಎಂದರ್ಥ. ಈ ಎಲ್ಲ ಆರು ವಿಷಯಗಳನ್ನು ತಿಳಿದವನನ್ನು ಪಂಡಿತ ಅಥವಾ ಜ್ಞಾನಿ ಎನ್ನಲಾಗುತ್ತದೆ.

ಸಾಕ್ಷಾತ್ಕಾರಗಳಿಸಿದ ಓರ್ವ ವ್ಯಕ್ತಿಯು ದೇಹದ ಸಾವು, ರೋಗ ಅಥವಾ ದುಃಖವನ್ನು ಕಾಣುವುದಿಲ್ಲ ಏಕೆಂದರೆ ನಿಜವಾದದ್ದು ಅಥವಾ ಸತ್ಯ ಎಂದರೆ ಆತ್ಮವೆಂದು ಅವನು ಅರಿತಿದ್ದಾನೆ. ಆಹಾರವು ಶುದ್ಧವಾಗಿದ್ದರೆ ಆಂತರಿಕ ಆತ್ಮ ಶುದ್ಧವಾಗುತ್ತದೆ. ಅಂತರಿಕ ಆತ್ಮ ಶುದ್ಧವಾದರೆ ಅವನು ತನ್ನ ಪೂರ್ವ ಜೀವನ (ಸ್ಮೃತಿ)ವನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಆತ್ಮದ ಶಾಶ್ವತ ಗುಣ ಮತ್ತು ಭೌತಿಕ ದೇಹದ ನಶ್ವರತ್ವದ ಅನಂತ ಜ್ಞಾನವನ್ನು ಪಡೆಯುತ್ತಾನೆ.

ಮೂರ್ಖರು ಮತ್ತು ಅಜ್ಞಾನಿಗಳು ಸಾವಿರಾರು ವಿಷಯಗಳ ಬಗ್ಗೆ ಭಯಪಡುತ್ತಾರೆ. ಆದರೆ ಜ್ಞಾನಿಯು ಸಾಕ್ಷಾತ್ಕಾರವನ್ನು ಸಾಧಿಸಿದ ಕಾರಣ ಭಯದಿಂದ ಪ್ರಭಾವಿತನಾಗುವುದಿಲ್ಲ. ಸಾವು ಮತ್ತು ಭಯವನ್ನು ಅವನು ಗೆದ್ದಿದ್ದಾಗ ಐಹಿಕ ಲೋಕವು ಸ್ನೇಹಪರವಾಗುತ್ತದೆ ಮತ್ತು ಜೋಡಿಸಿದ ಕೈಗಳಿಂದ ಭಕ್ತನ ಸೇವೆ ಮಾಡುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi