ನವದ್ವೀಪ ಪರಿಕ್ರಮ…

ಶ್ರೀ ಸೀಮಂತ ದ್ವೀಪ (ಭಾಗ-1)

– ಡಾ.ಬಿ.ಆರ್. ಸುಹಾಸ್

ಸೀಮಂತ ದ್ವೀಪವು ನವದ್ವೀಪಧಾಮದ ಎರಡನೆಯ ದ್ವೀಪವಾಗಿದೆ. ಇದು, ನವವಿಧ ಭಕ್ತಿಗಳಲ್ಲೊಂದಾದ ‘ಶ್ರವಣ’ ಅಂದರೆ, ಭಗವಂತನ ಲೀಲೆಗಳನ್ನು ಕೇಳುವ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಹಿಂದೆ, ಶ್ರೀಚೈತನ್ಯ ಮಹಾಪ್ರಭುಗಳ ಅವತಾರ ಕಾಲದಲ್ಲಿ ಈ ಸ್ಥಳಕ್ಕೆ ಸಿಮುಲಿಯಾ ಎಂಬ ಹೆಸರಿತ್ತು. ಅನಂತರ, ಇದು ಸೀಮಂತದ್ವೀಪವೆ೦ದು ಪ್ರಸಿದ್ಧವಾಯಿತು. ಶ್ರೀನವದ್ವೀಪ ಮಾಹಾತ್ಮೆಯು ಇದರ ಹಿಂದಿನ ಕಾರಣವನ್ನು ಸ್ವಾರಸ್ಯವಾಗಿ ವಿವರಿಸುತ್ತದೆ.

ಒಮ್ಮೆ, ಸತ್ಯಯುಗದಲ್ಲಿ ಭಗವಾನ್ ಶಿವನು “ಗೌರಾಂಗ! ಗೌರಾಂಗ’ ಎಂಬ ಹೆಸರನ್ನು ಜೋರಾಗಿ ಕೀರ್ತಿಸುತ್ತಾ ಹುಚ್ಚನಂತೆ ಕುಣಿಯುತ್ತಿದ್ದನು! ಇದನ್ನು ಕಂಡು ವಿಸ್ಮಿತಳಾದ ಪಾರ್ವತಿಯು, ಶಿವನನ್ನು ಗೌರಾಂಗನು ಯಾರೆಂದು ವಿಚಾರಿಸಿದಳು; ಆ ನಾಮವನ್ನು ಕೇಳುತ್ತಿದ್ದಂತೆ ಅವಳ ಹೃದಯವು ಕರಗಿಹೋಗುತ್ತಿತ್ತೆಂದು ಹೇಳಿದಳು.

ಶಿವನು, “ಗೌರಾಂಗನೆಂಬುದನ್ನು ಭಗವಾನ್‌ ಚೈತನ್ಯರ ಇನ್ನೊಂದು ಹೆಸರು. ಭಗವಾನ್‌ ಚೈತನ್ಯರು ಕಲಿಯುಗದಲ್ಲಿ ಅವತರಿಸಿ, ಭೇದಭಾವ ತೋರದೇ ಎಲ್ಲರಿಗೂ ಭಗತ್ಪ್ರೇಮವನ್ನು ಹಂಚುವರು. ದೇವಿ, ಶ್ರೀ ಚೈತನ್ಯರು ಬರುವರೆಂದು ಯೋಚಿಸಿಯೇ ನನಗಿಷ್ಟು ಆನಂದವಾಗಿದೆ. ನಾನೀಗ ನನ್ನದೇ ವಾಸಸ್ಥಾನವಾದ ಕಾಶಿಯನ್ನೂ ಬಿಟ್ಟು ಗಂಗಾನದಿಯ ದಡದಲ್ಲಿ ಪುಟ್ಟ ಗುಡಿಸಲಿನಲ್ಲಿರುತ್ತಾ ಗೌರಾಂಗದೇವನನ್ನು ಪೂಜಿಸುತ್ತಿರಬೇಕಂದು ನಿರ್ಧರಿಸಿದ್ದೇನೆ” ಎಂದು ಹೇಳಿದನು.

ಇದನ್ನು ಕೇಳಿ ಪಾರ್ವತಿದೇವಿಗೆ ಅತ್ಯಾನಂದವಾಯಿತು. ಅವಳು ಪತಿ ಪರಮೇಶ್ವರನ ಆಶೀರ್ವಾದವನ್ನು ಪಡೆದು, ತಾನೇ ಸ್ವಯಂ ಗೌರಾಂಗನನ್ನು ಧ್ಯಾನಿಸಲು ಈ ದ್ವೀಪಕ್ಕೆ ಬಂದಳು. ಗೌರಾಂಗದೇವನನ್ನು ಕುರಿತು ತಪಸ್ಸನ್ನಾಚರಿಸಿದಳು. ಸ್ವಲ್ಪ ಕಾಲದ ಬಳಿಕ, ಶ್ರೀಚೈತನ್ಯ ಮಹಾಪ್ರಭುಗಳು ಪಾರ್ವತಿಯ ಮುಂದೆ ಪ್ರತ್ಯಕ್ಷರಾದರು.

ಅವಳು ಅಲ್ಲಿಗೇಕೆ ಬಂದಳೆಂದು ಕರುಣೆಯಿಂದ ಕೇಳಿದರು. ಪಾರ್ವತಿಯು ಶ್ರೀಚೈತನ್ಯರ ಪಾದಗಳಿಗೆ ನಮಸ್ಕರಿಸಿ, ”ಪ್ರಭು! ನಿನಗೆ ವಿರುದ್ಧವಾಗಿರುವ ಜೀವಿಗಳನ್ನು ಸಂಸಾರಬಂಧನದಲ್ಲಿ ಬಂಧಿಸಲು ಮಾಯೆಯಾಗಿ ನನ್ನನ್ನು ನೇಮಿಸಿರುವೆ. ಆದರೆ ಮಾಯೆಯಿರುವ ಕಡೆ ಕೃಷ್ಣನಿರುವುದಿಲ್ಲ.

ಹಾಗಾಗಿ ನಾನು ನಿನ್ನ ಲೀಲಾಧಾಮದಿಂದ ಹೊರಗಿರುವಂತಾಗಿದೆ. ನಾನೂ ನಿನ್ನ ಲೀಲೆಗಳನ್ನು ನೋಡಬಯಸುತ್ತೇನೆ. ಇದಕ್ಕೆ ನೀನೇ ಸಹಾಯ ಮಾಡಬೇಕು ಪ್ರಭು” ಎಂದು ಬಿನ್ನವಿಸಿಕೊಂಡಳು. ಅನಂತರ, ಅವಳು ಶ್ರೀಚೈತನ್ಯರ ಪಾದಧೂಳಿಯನ್ನು ತನ್ನ ಬೈತಲೆಯ ಆರಂಭಪ್ರದೇಶ (ಸೀಮಂತ) ಕೈ ಸವರಿಕೊಂಡಳು.

ಗೌರಸುಂದರನಾದ ಶ್ರೀಚೈತನ್ಯರು ಕರುಣಾಪೂರಿತರಾಗಿ “ದೇವಿ, ನೀನು ಯೋಗಮಾಯೆಯಲ್ಲವೇ? ನಿನ್ನ ಮೂಲಕವೇ ನಾನು ಈ ಪ್ರಪಂಚದಲ್ಲಿ ಲೀಲೆಗಳನ್ನು ಮಾಡುವುದು. ನೀನಿಲ್ಲದೇ ನಾನು ಲೀಲೆಗಳನ್ನು ಮಾಡಲಾಗುವುದಿಲ್ಲ. ಆದ್ದರಿಂದ ವಾಸ್ತವವಾಗಿ ನನಗೂ ನಿನಗೂ ಭೇದವಿಲ್ಲ. ವೃಂದಾವನದಲ್ಲಿ ನೀನು ಪೌರ್ಣ ಮಸೀದೇವಿಯಾಗಿ ನೆಲೆಸಿರುವೆ. ಈ ನವದ್ವೀಪಧಾಮದಲ್ಲಿ ಪ್ರೌಢಮಾಯೆಯೆಂಬ ರೂಪದಲ್ಲಿ, ಕ್ಷೇತ್ರಪಾಲ ಶಿವನೊಂದಿಗೆ ನೆಲೆಸಿರುವೆ.” ಎಂದು ಹೇಳಿ ಅವಳನ್ನು ಸಮಾಧಾನಪಡಿಸಿದರು.

ಈ ದ್ವೀಪದಲ್ಲಿರುವ ಸೀಮಂತೀದೇವಿ ದೇವಾಲಯದ ಬಳಿ ಈ ಲೀಲೆ ನಡೆಯಿತು. ಪಾರ್ವತಿಯು ಇಲ್ಲಿ ಸೀಮಂತದ್ವೀಪದ ದೇವತೆಯಾಗಿಯೂ, ಮಾಯಾಪುರದಲ್ಲಿ ಪ್ರೌಢಮಾಯೆಯಾಗಿಯೂ ನೆಲೆಸಿದ್ದಾಳೆ. ಪಾರ್ವತಿಯು ಇಲ್ಲಿ ಶ್ರೀ ಚೈತನ್ಯರ ಪಾದಧೂಳಿಯನ್ನು ತನ್ನ ಸೀಮಂತಕ್ಕೆ ಹಚ್ಚಿಕೊಂಡಿದ್ದರಿಂದ, ಈ ದ್ವೀಪಕ್ಕೆ ಸೀಮಂತದ್ವೀಪ ಎಂಬ ಹೆಸರು ಪ್ರಾಪ್ತಿಯಾಯಿತು.

ನವದ್ವೀಪಮಾಯಾತ್ಮ್ಯದ ಪ್ರಕಾರ, ಚೈತನ್ಯರ ಕಾಲದಲ್ಲಿ ಈ ದ್ವೀಪವು ಗಂಗಾನದಿಯ ದಕ್ಷಿಣ ದಡದಲ್ಲಿತ್ತು, ಹಾಗೂ ಅವರು ತಮ್ಮ ಲೀಲೆಗಳನ್ನು ಮುಗಿಸಿದ ಬಳಿಕ, ನೂರು ವರ್ಷಗಳ ಕಾಲ ನವದ್ವೀಪವು ಪ್ರವಾಹದಿಂದ ತುಂಬಿದ್ದರೂ, ಇದೊಂದು ಸ್ಥಳ ಮಾತ್ರ ಯಾವ ತೊಂದರೆಗೂ ಸಿಲುಕಲಿಲ್ಲ.

ಸೀಮಂತದ್ವೀಪದಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳೆಂದರೆ, ಚಾಂದ್‌ ಖಾಜಿಯ ಸಮಾಧಿ, ಜಗನ್ನಾಥನ ಮಂದಿರ, ವಿಶ್ರಾಮಸ್ಥಾನ, ಮಯಮಾರಿ, ಷಷ್ಠಿತೀರ್ಥ, ಸೀಮಂತಿದೇವಿ ಮಂದಿರ, ಮೇಘಾರ್ ಚಡ, ಬೇಲ್‌ ಪುಕುರ, ಮತ್ತು ರಾಮತೀರ್ಥ (ರುಕುನ್‌ ಪುರ)

ಚಾಂದ್‌ಖಾಜಿಯ ಸಮಾಧಿ: ಶ್ರೀಚೈತನ್ಯ ಮಹಾಪ್ರಭುಗಳ ಲೀಲೆಗಳಲ್ಲಿ ಚಾಂದ್‌ ಖಾಜಿಯದು ಒಂದು ಪ್ರಮುಖ ಪಾತ್ರವಾಗಿರುವುದರಿಂದ, ಚಾಂದ್‌ ಖಾಜಿಯ ಸಮಾಧಿ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಇದು, ಯೋಗಪೀಠದಿಂದ ಒಂದು ಕಿ.ಮೀ. ದೂರದಲ್ಲಿದ್ದರೆ, ಇಸ್ಕಾನ್ ದೇವಾಲಯದಿಂದ ಮೂರೂವರೆ ಕಿ.ಮೀ. ದೂರದಲ್ಲಿದೆ, ರಸ್ತೆಯ ಎಡಕ್ಕಿರುವ ಈ ಸಮಾಧಿ ಯೋಗಪೀಠದ ಬಳಿಕ ಸಿಗುವ ಮೊದಲ ಹಳ್ಳಿಯ ಮಧ್ಯದಲ್ಲಿದೆ.

ವಿಶೇಷವೆಂದರೆ, ಈ ಕಲ್ಲಿನ ಸಮಾಧಿಯಿಂದ ಎರಡು ಮರಗಳು ಬೆಳೆದು ನಿಂತಿವೆ. ಒಂದು, ಚಂಪಕವೃಕ್ಷ (ಸಂಪಿಗೆಮರ) ವಾದರೆ, ಇನ್ನೊಂದು ಅದನ್ನು ಸುತ್ತಿಕೊಂಡು ಬೆಳೆದಿರುವ ಬೇವಿನ ಮರ. ಐನೂರು ವರ್ಷಗಳಷ್ಟು ಹಳೆಯದೆಂದು ಹೇಳಲಾಗುವ ಈ ಸಂಪಿಗೆ ಮರವನ್ನೇ ಚಾಂದ್‌ ಖಾಜಿಯೆಂದು ಭಕ್ತರು ಪರಿಗಣಿಸುತ್ತಾರೆ.

ಅದನ್ನು ಸುತ್ತಿಕೊಂಡು ಬೆಳೆದಿರುವ ಬೇವಿನಮರ, ಭಕ್ತನಾದ ಖಾಜಿಯನ್ನು ಆನಂದದಲ್ಲಿ ಆಲಿಂಗಿಸಿರುವ ನಿತ್ಯಾನಂದ ಪ್ರಭು ಎಂದು ಭಕ್ತರು ಹೇಳುತ್ತಾರೆ.  ಸಂಪಿಗೆ ಮರದ ಕಾಂಡವು ಟೊಳ್ಳಾಗಿದ್ದರೂ, ಅದು ವರ್ಷವಿಡೀ, ಹೂಬಿಡುವ ಕಾಲವಲ್ಲದಿದ್ದರೂ ಹೂ ಬಿಡುತ್ತದೆ.

ಚಾಂದ್‌ ಖಾಜಿಯ ಸಮಾಧಿಯಿರುವ ಹಳ್ಳಿಯನ್ನು ಚಾಂದ್ ಖಾಜಿಯ ಹಳ್ಳಿಯೆಂದೇ ಕರೆಯುತ್ತಾರೆ. ಭಕ್ತರ ಪ್ರಕಾರ, ಈ ಹಳ್ಳಿಯು ಮಥುರೆಯಿಂದ ಬೇರೆಯಲ್ಲ. ನವದ್ವೀಪ ಮಾಹಾತ್ಮ್ಯದ ಪ್ರಕಾರ, ಈ ಸಮಾಧಿಯನ್ನು ನೋಡುವವರು ವೃದ್ಧಾಪ್ಯ ಮತ್ತು ಸಾವಿನಿಂದ ಮುಕ್ತರಾಗುತ್ತಾರೆ. ಅಂತೆಯೇ, ಇದು ಮಥುರೆಯೇ ಆಗಿರುವುದರಿಂದ ಒಬ್ಬನ ಭಕ್ತಿಯು ವರ್ಧಿಸುತ್ತದೆ.

ಚಾಂದ್‌ ಖಾಜಿಯ ಕಥೆ: ಚಾಂದ್ ಖಾಜಿಯು, ಬಂಗಾಳದ ರಾಜ ಹುಸೇನ್‌ ಷಾ ನೇಮಿಸಿದ್ದ ನವದ್ವೀಪದ ಅಧಿಕಾರಿಯಾಗಿದ್ದನು. ಇಂಥ ಅಧಿಕಾರಿಗಳಿಗೆ ಖಾಜಿಗಳೆನ್ನುತ್ತಿದ್ದರು. ಇವರು ನಗರದಲ್ಲಿ ಕಾನೂನು ರಕ್ಷಣೆ ಮಾಡುತ್ತಾ ತಪ್ಪಿತಸ್ಥರನ್ನು ಶಿಕ್ಷಿಸುವ ಹೊಣೆ ಹೊಂದಿದ್ದರು. ಚಾಂದ್‌ ಖಾಜಿಯು ನವಾಬ್‌ ಹುಸೇನ್ ಷಾನ ಆಧ್ಯಾತ್ಮಿಕ ಗುರುವಾಗಿದ್ದನೆಂದು ಕೆಲವರು ಹೇಳುತ್ತಾರೆ.

ಕೆಲವರ ಪ್ರಕಾರ, ಇವನ ಹೆಸರು ಮೌಲಾನಾ ಸಿರಾಜುದ್ದೀನ ಎಂದಾಗಿದ್ದರೆ, ಇನ್ನು ಕೆಲವರ ಪ್ರಕಾರ, ಇವನ ಹೆಸರು ಹಬೀಬರ ರಹಮಾನಾ ಎಂದಿತ್ತು. ಚಾಂದ್‌ ಖಾಜಿಯ ವಂಶಸ್ಥರು ಈಗಲೂ ಮಾಯಾಪುರದ ಬಳಿ ವಾಸಿಸುತ್ತಿದ್ದಾರೆ.

ಭಕ್ತರು ಖಾಜಿಯನ್ನು ಕೃಷ್ಣಲೀಲೆಯ ಕಾಲದ ಕಂಸನೆಂದೂ ಹುಸೇನ್ ಷಾನನ್ನು ಜರಾಸಂಧನೆಂದೂ ಪರಿಗಣಿಸುತ್ತಾರೆ.

ಖಾಜಿಯು ಒಬ್ಬ ಶ್ರದ್ಧಾವಂತ ಮುಸಲ್ಮಾನನಾಗಿದ್ದು ಕುರಾನಿನಲ್ಲಿ ಪಾಂಡಿತ್ಯ ಹೊಂದಿದ್ದನು. ಚೈತನ್ಯ ಮಹಾಪ್ರಭುಗಳು ಆರಂಭಿಸಿದ್ದ ನಗರ ಸಂಕೀರ್ತನೆಯನ್ನು ನಿಷೇಧಿಸಿದನು. ಆದರೆ ಭಕ್ತರು ಅವನ ಆಜ್ಞೆಗೆ ತಲೆಬಾಗದಿರಲು, ಕೋಪಗೊಂಡ ಅವನು ಸೈನಿಕರನ್ನು ಶ್ರೀವಾಸಪಂಡಿತರ ಮನೆಗೆ ಕಳುಹಿಸಿದನು. ಆ ಸೈನಿಕರು ಪಂಡಿತರ ಮನೆಯಲ್ಲಿ ದಾಂಧಲೆ ನಡೆಸಿ ಅಲ್ಲಿದ್ದ ಮೃದಂಗವನ್ನು ಒಡೆದು ಹಾಕಿದರು.

ಈ ವಿಷಯವನ್ನು ತಿಳಿದ ಚೈತನ್ಯರು ಬಹಳ ಕೋಪಗೊಂಡು ಮಾರನೆಯ ದಿನ ಜನರನ್ನು ಹಲವು ಗುಂಪುಗಳಲ್ಲಿ ಸಂಘಟಿಸಿ, ಎಲ್ಲರ ಕೈಯಲ್ಲಿ ಪಂಜು ಹಿಡಿಸಿ ನವದ್ವೀಪದ ರಸ್ತೆರಸ್ತೆಗಳಲ್ಲಿ ಸಂಕೀರ್ತನೆ ಮಾಡಿಸಿದರು. ಈ ಮೆರವಣಿಗೆ, ಕೊನೆಗೆ ಖಾಜಿಯ ಮನೆಯನ್ನು ಮುಟ್ಟಿತು. ಚೈತನ್ಯರು ಖಾಜಿಯನ್ನು ಹೊರಗೆ ಬರುವಂತೆ ಕೂಗಿದರು.

ಜನರ ದೊಡ್ಡ ಗುಂಪನ್ನು ನೋಡಿ ಹೆದರಿದ ಖಾಜಿ ನಿಧಾನವಾಗಿ ಹೊರಬಂದನು; ತಾನು ಚೈತನ್ಯರ ಮಾತಾಮಹ ನೀಲಾಂಬರ ಚಕ್ರವರ್ತಿಗಳ ನೆರೆಯವನಾಗಿದ್ದನೆಂದು ಹೇಳುತ್ತಾ ತನ್ನ ತಪ್ಪನ್ನು ದೊಡ್ಡದಾಗಿ ತೆಗೆದುಕೊಳ್ಳಬಾರದೆಂದು ಬಿನ್ನವಿಸುತ್ತಾ ಸಮಾಧಾನಪಡಿಸಲು ಯತ್ನಿಸಿದನು.

ಅನಂತರ, ಅವನಿಗೂ ಚೈತನ್ಯರಿಗೂ ಶಾಸ್ತ್ರಗ್ರಂಥಗಳ ವಿಷಯವಾಗಿ ದೊಡ್ಡ ಚರ್ಚೆಯೇ ನಡೆಯಿತು. ಖಾಜಿಯು ತಮ್ಮ ಶಾಸ್ತ್ರಗ್ರಂಥವು ಇತ್ತೀಚಿನದೆಂದೂ ಅದರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆಯೆಂದೂ ಒಪ್ಪಿಕೊಂಡನು. ಹಿಂದಿನ ರಾತ್ರಿ ಅವನ ಕನಸಿನಲ್ಲಿ ನರಸಿಂಹ ದೇವರು ಬಂದಿದ್ದನೆಂದೂ ಅವನು ಭಕ್ತರಿಗೆ ತೊಂದರೆ ಕೊಟ್ಟುದಕ್ಕಾಗಿ ಅವನ ಎದೆಯನ್ನು ತನ್ನ ಉಗುರುಗಳಿಂದ ಪರಚಿದನೆಂದೂ ವಿವರಿಸಿ, ಅವನ ಎದೆಯ ಮೇಲಾಗಿದ್ದ ಉಗುರಿನ ಗುರುತುಗಳನ್ನು ತೋರಿಸಿದನು.

ಇನ್ನು ಮುಂದೆ, ತಾನಾಗಲೀ ತನ್ನ ವಂಶಸ್ಥರಾಗಲೀ ಸಂಕೀರ್ತನೆಯನ್ನು ತಡೆಯುವುದಿಲ್ಲವೆಂದು ಮಾತು ಕೊಟ್ಟು, ಚೈತನ್ಯರ ಪಾದಾಭಿವಂದನೆ ಮಾಡಿದ. ಇದನ್ನು ಕೇಳಿ ಚೈತನ್ಯರ ಶಿಷ್ಯವೃಂದವು ‘ಹರಿ,ಹರಿ’ ಎಂದು ಆನಂದದಿಂದ ಕುಣಿಯಿತು. ಹೀಗೆ ಖಾಜಿಯು ಚೈತನ್ಯರ ಭಕ್ತನಾದ.

ನವದ್ವೀಪ ಮಾಹಾತ್ಮ್ಯೆಯಲ್ಲಿ ನಿತ್ಯಾನಂದ ಪ್ರಭುಗಳು ಈ ಘಟನೆಯನ್ನು ಜೀವ ಗೋಸ್ವಾಮಿಗಳಿಗೆ ವಿವರಿಸಿ, ನವದ್ವೀಪ ತತ್ತ್ವವನ್ನು ಕೊಂಡಾಡುತ್ತಾರೆ. ವ್ರಜತತ್ತ್ವಕ್ಕೂ ನವದ್ವೀಪತತ್ತ್ವಕ್ಕೂ ಪ್ರಮುಖ ವ್ಯತ್ಯಾಸವೆಂದರೆ, ಅಲ್ಲಿ ಶ್ರೀಕೃಷ್ಣನಲ್ಲಿ ತಪ್ಪನ್ನಾಚರಿಸಿದ ಕಂಸನು, ಅವನಿಂದ ಕೊಲ್ಲಲ್ಪಟ್ಟು ಮುಕ್ತನಾದರೆ, ಇಲ್ಲಿ, ಅದೇ ಕಂಸನಾದ ಖಾಜಿಯು ಗೌರಾಂಗದೇವನಲ್ಲಿ ತಪ್ಪನ್ನೆಸಗಿ, ಗೌರಾಂಗದೇವನಿಂದ ಕೃಷ್ಣಪ್ರೇಮದ ಸವಿಯೆಂಬ ಔನ್ನತ್ಯವನ್ನು ಪಡೆಯುತ್ತಾನೆ.

ಹೀಗೆ, ಭಗವಂತನನ್ನು ದ್ವೇಷಿಸುವವರಿಗೂ ಮುಕ್ತಿಯನ್ನು ಉಡುಗೊರೆಯಾಗಿ ನೀಡುವ ಕೃಷ್ಣನ ನಾಮಕ್ಕಿಂತಲೂ ಅವನ ಭಕ್ತಶಿರೋಮಣಿಯ ರೂಪದಲ್ಲಿರುವ ಗೌರಾಂಗ ದೇವನ ನಾಮವು ಕೃಷ್ಣಪ್ರೇಮವೆಂಬ ಹೆಚ್ಚಿನ ಫಲವನ್ನು ಬಹುಬೇಗನೆ ನೀಡುತ್ತದೆ.

ಜಗನ್ನಾಥ ಮಂದಿರ: ಚಾಂದ್‌ ಖಾಜಿಯ ಸಮಾಧಿಯಿಂದ ನೇರ ಭಕ್ತಿಸಿದ್ಧಾಂತ ಸರಸ್ವತಿ ಮಾರ್ಗದಲ್ಲಿ ಹೋದರೆ, ಹತ್ತಿರದಲ್ಲೇ ರಸ್ತೆಯ ಎಡಕ್ಕೆ ಒಂದು ಮೂಲೆಯಲ್ಲಿ ಜಗನ್ನಾಥ ಮಂದಿರಕ್ಕೆ ದಾರಿ ಎಂಬ ಫಲಕ ಕಾಣುತ್ತದೆ. ಇದಕ್ಕೆ ಎದುರಿನ ರಸ್ತೆಯಲ್ಲಿ ಸುಮಾರು ಹದಿನೈದು ನಿಮಿಷ ನಡೆದರೆ ಬಲಗಡೆಗೆ, ಸಿಂಹದ್ವಾರವಿರುವ ಒಂದು ಮಂದಿರ ಕಾಣುತ್ತದೆ.

ಇದೇ ಜಗನ್ನಾಥಮಂದಿರ. ಇದು ಇಸ್ಕಾನ್ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದೆ. ಆಟೋವಿನಲ್ಲಾದರೆ, ಇಲ್ಲಿಗೆ ಬರಲು ಅರ್ಧಗ೦ಟೆಯಾಗುತ್ತದೆ. ಸುಮಾರು ಒಂದು ಗಂಟೆಯ ಕಾಲ, ದೇವಾಲಯವನ್ನು ವೀಕ್ಷಿಸಿ ಪುನಃ ಇಸ್ಕಾನ್ ದೇವಾಲಯಕ್ಕೆ ಹಿಂದಿರುಗಬಹುದು. ಈ ದೇವಾಲಯಕ್ಕೆ ಸಂಬಂಧಿಸಿದ ಕಥೆ ಬಹಳ ಸ್ವಾರಸ್ಯಕರವಾಗಿದೆ. ಹಿಂದೆ, ಈ ಸ್ಥಳ, ಸುರವಂಶದ ರಾಜರ ಆಳ್ವಿಕೆಯಲ್ಲಿತ್ತು.

ನವದ್ವೀಪ ಮಾಹಾತ್ಮ್ಯವು, ಭಗವಾನ್ ಜಗನ್ನಾಥನು ಪುರಿ (ಒರಿಸ್ಸಾ)ಯನ್ನು ಬಿಟ್ಟು ರಕ್ತಬಾಹುವೆಂಬ ರಾಕ್ಷಸನನ್ನು ಕೊಂದು, ತನ್ನ ಶಬರ ಭಕ್ತರೊಂದಿಗೆ ಇಲ್ಲಿಯೇ ನೆಲೆಸಿದನೆಂದು ಹೇಳುತ್ತದೆ. (ಶಬರರು ವರ್ಣಾಶ್ರಮ ಧರ್ಮದ ಕಳಗಿರುವ ಆದಿವಾಸಿಗಳು) ಆದ್ದರಿಂದ ಈ ಸ್ಥಳಕ್ಕೆ ಸಮೀಪದಲ್ಲಿಯೇ, ಶಬರರು ವಾಸಿಸುವ ಶಬರದಾಂಗವೆಂಬ ಗ್ರಾಮವಿದೆ.

ಈ ಜಗನ್ನಾಥ ಮಂದಿರವು ಪುರಿಯಲ್ಲಿರುವ ಜಗನ್ನಾಥ ಮಂದಿರಕ್ಕಿಂತ ಬೇರೆಯಲ್ಲವೆಂದೂ ಅದನ್ನು ದರ್ಶನ ಮಾಡುವುದರಿಂದ ದೊರೆಯುವ ಫಲವು ಇದರ ದರ್ಶನ ಮಾಡುವುದರಿಂದಲೂ ದೊರೆಯುವುದೆಂದು ನವದ್ವೀಪ ಮಾಹಾತ್ಮ್ಯವು ಹೇಳುತ್ತದೆ.

ಹಿ೦ದೆ, ರಕ್ತಬಾಹುವೆಂಬ ರಾಕ್ಷಸೀಯ ವ್ಯಕ್ತಿಯು ಭಾರತದಾದ್ಯಂತ ದೇವಾಲಯಗಳನ್ನು ನಾಶಪಡಿಸುತ್ತಿದ್ದ. ಆಗ ಜಗನ್ನಾಥನ ಭಕ್ತರು ಆತಂಕಗೊಂಡು, ಭಗವಂತನನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಜಗನ್ನಾಥನು ಮುಖ್ಯ ಪೂಜಾರಿಯ ಕನಸಿನಲ್ಲಿ ಕಾಣಿಸಿಕೊಂಡು ತನಗೆ ಯಾರೂ ಏನೂ ತೊಂದರೆ ಮಾಡಲಾರರೆಂದು ಹೇಳಿ, ತನ್ನ ಮತ್ತು ಸುಭದ್ರಾಬಲರಾಮರ ವಿಗ್ರಹಗಳನ್ನು ಬಂಗಾಳಕ್ಕೆ ಸಾಗಿಸಬೇಕೆಂದು ಹೇಳಿದನು.

ಪುರಿಯ ವೈಶಿಷ್ಟ್ಯವೆಂದರೆ ನಿರ್ದಿಷ್ಟ ಸೇವೆಗಳನ್ನು ನಿರ್ದಿಷ್ಟ ಜನಾಂಗಗಳೇ ಮಾಡಬೇಕು. ರಥಯಾತ್ರೆಯ ಸಮಯದಲ್ಲಿ ಅಥವಾ ಜಗನ್ನಾಥನ ಬೇರೆಲ್ಲಾದರೂ ಹೋಗಬೇಕೆಂದಾಗ ಶಬರರು ಅವನನ್ನು ಎತ್ತಿಕೊಂಡು ಹೋಗುತ್ತಾರೆ. ಅದರಂತೆ, ಈಗ ಶಬರರು ಭಗವಂತನ ವಿಗ್ರಹಗಳನ್ನು ಎತ್ತಿಕೊಂಡು ರಕ್ತಬಾಹುವಿನಿಂದ ತಪ್ಪಿಸಿಕೊಳ್ಳಲು ಕಾಡು ದಾರಿಯ ಮೂಲಕ ಹೊರಟರು; ಹನ್ನೆರಡು ದಿನಗಳ ಬಳಿಕ, ಅವರು ಸೀಮಂತದ್ವೀಪಕ್ಕೆ ಆಗಮಿಸಿದರು.

ಒ೦ದು ರಾತ್ರಿ, ಜಗನ್ನಾಥಸ್ವಾಮಿಯು ಮುಖ್ಯ ಶಬರನಿಗೆ ತಾನು ಆ ಸ್ಥಳದಲ್ಲೇ ಶಾಶ್ವತವಾಗಿ ನೆಲೆಸುವೆನೆಂದು ಹೇಳಿದನು. ಶಬರರು ಕೂಡಲೇ ಒಪ್ಪಿ ಜಗನ್ನಾಥ ಸ್ವಾಮಿಯನ್ನು ಅಲ್ಲಿಯೇ ಪೂಜಿಸತೊಡಗಿದರು. ಹೀಗೆ ಅವರು ಅನೇಕ ಸಂತತಿಗಳವರೆಗೆ ಪೂಜಿಸಿದರು. ಆದರೆ ಕಾಲಕ್ರಮದಲ್ಲಿ ಭಗವಂತನ ವಿಗ್ರಹಗಳು ಮಾಯವಾದವು. ಆದರೆ ಜಗನ್ನಾಥನು ನಿಜವಾಗಿ ನವದ್ವೀಪವನ್ನು ಬಿಟ್ಟು ಹೋಗಿರಲಿಲ್ಲ. ಈಗ್ಗೆ ಐನೂರು ವರ್ಷಗಳ ಹಿಂದೆ, ಇನ್ನೊಂದು ಲೀಲೆಯ ಮೂಲಕ ಪುನಃ ಕಾಣಿಸಿಕೊಂಡನು. ಆ ಕಥೆ ಹೀಗಿದೆ.

ಮಾಯಾಪುರದ ಬಳಿ ಜಗದೀಶ ಗಂಗೂಲಿ (ದಾಸ) ಯೆಂಬ ಭಕ್ತನು ಒಂದು ಚಿಕ್ಕ ಹಳ್ಳಿಯಲ್ಲಿ ವಾಸಿಸುತ್ತಿದ್ದನು. ಅವನು ಶ್ರೀಚೈತನ್ಯ ಮಹಾಪ್ರಭುಗಳ ಭಕ್ತನಾಗಿದ್ದು, ಪ್ರತಿ ವರ್ಷವೂ ಮಾಯಾಪುರದ ಹಲವಾರು ಭಕ್ತರೊಂದಿಗೆ ಶ್ರೀಚೈತನ್ಯರನ್ನೂ ಜಗನ್ನಾಥ ಸ್ವಾಮಿಯನ್ನೂ ದರ್ಶಿಸಲು ಪುರಿಗೆ ಹೋಗುತ್ತಿದ್ದನು.

ಆದರೆ ಒ೦ದು ವರ್ಷ, ಅವನು ಬಹಳ ವೃದ್ಧನಾದುದರಿ೦ದಲೂ ದೃಷ್ಟಿಯನ್ನು ಕಳೆದುಕೊಂಡದ್ದರಿಂದಲೂ ಭಕ್ತರೆಲ್ಲರೂ ಅವನನ್ನು ಬಿಟ್ಟು ಹೋದರು. ಇದರಿಂದ ಅವನು ಬಹಳ ದುಃಖಿತನಾದನು.

ಆಗ ಅವನನ್ನು ಸಮಾಧಾನಪಡಿಸಲು ಭಗವಾನ್ ಜಗನ್ನಾಥನು ಅವನ ಕನಸಿನಲ್ಲಿ ಕಾಣಿಸಿಕೊಂಡು, ಮರುದಿನ ಅವನು ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಒಂದು ಮರದ ಕಟ್ಟಿಗೆಯು ತೇಲಿ ಬಂದು ಅವನನ್ನು ಸ್ಪರ್ಶಿಸುವುದೆಂದೂ ಅದರಿಂದ ಅವನಿಗೆ ಪುನಃ ದೃಷ್ಟಿಯು ಪ್ರಾಪ್ತವಾಗುವುದೆಂದೂ ಹೇಳಿ, ಆ ಕಟ್ಟಿಗೆಯನ್ನು ಭಕ್ತನಾದ ಒಬ್ಬ ಕಮ್ಮಾರನ ಬಳಿಗೆ ತೆಗೆದುಕೊಂಡು ಹೋಗಿ ಅದರಿಂದ ತನ್ನ ವಿಗ್ರಹವನ್ನು ಕೆತ್ತಿಸಬೇಕೆಂದೂ ಆದೇಶಿಸಿದನು.

ಅಲ್ಲದೇ, ಆ ಕಮ್ಮಾರನು ಕುಷ್ಠರೋಗಿಯಾದುದರಿಂದ ಮೊದಲು ವಿಗ್ರಹ ಕೆತ್ತಲು ಒಪ್ಪುವುದಿಲ್ಲವೆಂದೂ ಬಲವಂತಪಡಿಸಬೇಕೆಂದೂ ವಿಗ್ರಹ ಕೆತ್ತಿದ ಬಳಿಕ ಅವನ ಕುಷ್ಠರೋಗವು ಗುಣವಾಗುವುದೆಂದೂ ಹೇಳಿದನು.

ಜಗನ್ನಾಥಸ್ವಾಮಿಯು ಹೇಳಿದಂತೆಯೇ ಎಲ್ಲವೂ ನಡೆಯಿತು. ಮೊದಲು ಒಪ್ಪದಿದ್ದ ಕಮಾರನು ಅನಂತರ ವಿಗ್ರಹವನ್ನು ಕೆತ್ತಿ ಕುಷ್ಠರೋಗದಿಂದ ಮುಕ್ತನಾದನು. ಜಗನ್ನಾಥಸ್ವಾಮಿಯನ್ನು ಈಗಿರುವ ಮಂದಿರದ ಸ್ಥಳಕ್ಕೆ ಸಾಗಿಸಲಾಯಿತು. ಒಂದು ಪುಟ್ಟ ಮಂದಿರವನ್ನು ನಿರ್ಮಿಸಿ ಭಗವಂತನನ್ನು ಪೂಜಿಸಲಾಯಿತು.

ಕೆಲದಿನಗಳ ಬಳಿಕ, ಪುನಃ ಒಂದು ರಾತ್ರಿಯಲ್ಲಿ ಜಗದೀಶನಿಗೆ ಕನಸಿನಲ್ಲಿ ಭಗವಂತನು ಕಾಣಿಸಿಕೊಂಡು, ಬೇವಿನ ಮರವನು ತೆಗೆದುಕೊಂಡು ಅದೇ ಕಮ್ಮಾರನಿಂದ ಬಲರಾಮ ಮತ್ತು ದೇವೀ ಸುಭದ್ರೆಯರ ಮೂರ್ತಿಗಳನ್ನು ನಿರ್ಮಿಸಲು ಹೇಳಿದ. ಜಗದೀಶನು ಅಂತೆಯೇ ಮಾಡಿ, ಮೂರೂ ಮೂರ್ತಿಗಳನ್ನು ಪೂಜಿಸತೊಡಗಿದ. ಆದರೆ ಅವನು ದಿವಂಗತನಾದ ಬಳಿಕ, ಆ ಮೂರ್ತಿಗಳನ್ನು ಉಪೇಕ್ಷಿಸಲಾಯಿತು. ಮಂದಿರವು ಕ್ರಮೇಣ ಶಿಥಿಲವಾಗಿ ಮುರಿದು ಬಿತ್ತು.

ಕೆಲವು ಶತಮಾನಗಳ ಬಳಿಕ, ಒಬ್ಬ ಗ್ರಾಮಸ್ಥನು ಹುತ್ತವೊಂದರ ಮೇಲೆ ಒಂದು ಸುಂದರವಾದ ನೀಲಿ ಹೂವನ್ನು ಕಂಡ. ಅವನು ಅದರ ಹತ್ತಿರ ಹೋಗಲು, ಒಂದು ಧ್ವನಿಯನ್ನು ಕೇಳಿದ, ದಯವಿಟ್ಟು ನನಗೆ ಒಂದಿಷ್ಟು ನೀರು ಕೊಡಿ. ನನಗೆ ಬಹಳ ಬಾಯಾರಿಕೆಯಾಗಿದೆ. ಬೇಗ ಒಂದಿಷ್ಟು ನೀರು ಕೊಡಿ.” ಹೀಗೆ ಒಂದು ಧ್ವನಿ ಕೇಳಿತು.

ವಿಸ್ಮಿತನಾದ ಆ ಗ್ರಾಮಸ್ಥನು ಆ ಹುತ್ತವನ್ನು ಅಗೆದ. ಹುತ್ತದ ಕೆಳಗೆ ಜಗನ್ನಾಥ ಮತ್ತಿತರ ವಿಗ್ರಹಗಳನ್ನು ಕಂಡು ಆಶ್ಚರ್ಯಚಕಿತನಾದ. ಆ ವಿಗ್ರಹಗಳು ಮರದಿಂದ ಮಾಡಲ್ಪಟ್ಟಿದ್ದು ಗೆದ್ದಲು ಹುಳುಗಳು ಹುತ್ತದಲ್ಲಿದ್ದರೂ ಒಂದಿಷ್ಟೂ ಹಾನಿಗೊಳಗಾಗಿರಲಿಲ್ಲ. ಈ ಘಟನೆ ಅರವತ್ತು ವರ್ಷಗಳ ಹಿಂದೆ ನಡೆಯಿತು.

ಪುನಃ ಜಗನ್ನಾಥ ಸ್ವಾಮಿಯ ದೇವಾಲಯ ನಿರ್ಮಾಣವಾಗಿ ವಿಗ್ರಹಗಳ ಪೂಜೆ ಆರಂಭವಾಯಿತು. ಆದರೆ ವರ್ಷದಿಂದ ವರ್ಷಕ್ಕೆ ಕ್ರಮೇಣ ಪೂಜೆಯು ಉಪೇಕ್ಷೆಗೊಳಗಾಯಿತು. ಕಡೆಗೆ, 1978ರಲ್ಲಿ ವೃದ್ಧನಾದ ಪೂಜಾರಿಯು ದೇವಾಲಯವನ್ನೂ ವಿಗ್ರಹಗಳ ಪೂಜೆಯನ್ನೂ ಇಸ್ಕಾನ್‌ ದೇವಾಲಯಕ್ಕೆ ಅರ್ಪಿಸಿದ.

ಸುಂದರವಾದ ಈ ದೇವಾಲಯವು ಬೆಳಗ್ಗೆ 7:30ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ, ಹಾಗೂ ಸಂಜೆ 4:00 ರಿಂದ 8:00 ಗಂಟೆಯವರೆಗೂ ತೆರೆದಿರುತ್ತದೆ. ದೇವಾಲಯದ ಮುಖ್ಯದ್ವಾರವು ಎರಡೂ ಬದಿಗಳಲ್ಲಿ ಒಂದೊಂದು ಸಿಂಹವನ್ನು ಹೊಂದಿದ್ದು, ಸುಂದರವಾದ ವಿನ್ಯಾಸಗಳಿಂದ ಕೂಡಿದೆ.

ಮುಖ್ಯದ್ವಾರಕ್ಕೂ ದೇವಾಲಯಕ್ಕೂ ಮಧ್ಯೆ ಎಡಗಡೆ, ಜಗನ್ನಾಥಸ್ವಾಮಿಯು ಇಲ್ಲಿಗೆ ಬಂದ ಲೀಲೆಯನ್ನು ತೋರಿಸುವ ಪ್ರತಿಕೃತಿಗಳ ಪ್ರದರ್ಶನವಿದೆ. ಸಂಪೂರ್ಣ ಬಲಕ್ಕೆ ಇರುವ ಪ್ರದೇಶವೇ ಹಳೆಯ ಮಂದಿರವಿದ್ದ ಸ್ಥಳ. ಭಗವಂತನ ವಿಗ್ರಹಗಳನ್ನು ಸ್ನಾನಯಾತ್ರೆಯ ಬಳಿಕ, ಎರಡು ವಾರಗಳ ಕಾಲ ಇಲ್ಲಿ ಇರಿಸಲಾಗುತ್ತದೆ.

ಈ ಸ್ಥಳಕ್ಕೆ ಸನಿಹದಲ್ಲೇ ಒಂದು ಕಲ್ಪವೃಕ್ಷವಿದೆ. ಬೇಡಿದವರ ಆಸೆಗಳನ್ನು ಈ ಮರವು ಪೂರೈಸುವುದೆಂದು ಭಕ್ತರ ನಂಬಿಕೆ. ಈ ವೃಕ್ಷದ ಕೆಳಗೆ ಒಂದು ಶಿವಲಿಂಗವಿದೆ. ಇದನ್ನು ಕ್ಷೇತ್ರಪಾಲಶಿವನೆಂದು ಕರೆಯುತ್ತಾರೆ. ಅನೇಕ ವರ್ಷಗಳಿಂದ ಭಕ್ತರು ಇಲ್ಲಿ ಶಿವಪಾರ್ವತಿಯರನ್ನು ಪೂಜಿಸುತ್ತಾ ಬಂದಿದ್ದಾರೆ.

ಈ ಮರಕ್ಕೆ ಒಂದು ಕಲ್ಲನ್ನು ಕಟ್ಟಿ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಬಹಳ ಹಿಂದೆ ಶಿವಪಾರ್ವತಿಯರು ಇಲ್ಲಿಗೆ ತಪಶ್ಚೆರ್ಯೆಗಾಗಿ ಬಂದರೆಂದೂ ಈಗಲೂ ಇಲ್ಲಿ ನೆಲೆಸಿರುವರೆಂದೂ ಭಕ್ತರು ಹೇಳುತ್ತಾರೆ. ದೇವಾಲಯವು ಇಸ್ಕಾನ್‌ನ ವಶಕ್ಕೆ ಬಂದ ಬಳಿಕ, ಇಸ್ಕಾನ್ ಪೂಜಾರಿಯೊಬ್ಬನು ಈ ಶಿವಲಿಂಗವನ್ನು ಒಂದು ಸಾಮಾನ್ಯ ಕಲ್ಲೆಂದು ತಪ್ಪು ತಿಳಿದು ಕಾಲಿನಿಂದ ತಳ್ಳಿಬಿಟ್ಟನಂತೆ.

ಆಗ ಅವನು ಇಸ್ಕಾನ್ ಗೆ ಮರಳುವಾಗ ದಾರಿಯಲ್ಲಿ ಅನೇಕ ಬಾರಿ ಗಾಡಿಯಿಂದ ಬಿದ್ದುದಲ್ಲದೇ ತೀವ್ರ ತಲೆನೋವು ಮತ್ತು ವಾಂತಿಯಿಂದ ನರಳಿದ. ಇಸ್ಕಾನ್‌ ನಲ್ಲಿ ಅವನಿಗೆ ಪುನಃ ಮಂದಿರಕ್ಕೆ ಹಿಂದಿರುಗಿ ಶಿವಲಿಂಗವನ್ನು ಪೂಜಿಸಿ ಕ್ಷಮೆ ಬೇಡುವಂತೆ ಹೇಳಿದರು. ಅವನು ಹಾಗೆಯೇ ಮಾಡಲು ಕೂಡಲೇ ಗುಣಹೊಂದಿದ. ಈ ಪ್ರದೇಶ ಬಹಳ ತಂಪಾಗಿಯೂ ಪ್ರಶಾಂತವಾಗಿಯೂ ಇದೆ.

ದೇವಾಲಯದೊಳಗೆ ಬಹಳ ಸುಂದರವಾದ ಜಗನ್ನಾಥ, ಬಲರಾಮ, ಮತ್ತು ಸುಭದ್ರೆಯರ ಮರದ ವಿಗ್ರಹಗಳಿವೆ. ಈ ವಿಗ್ರಹಗಳು ಪುರಿಯಲ್ಲಿರುವ ವಿಗ್ರಹಗಳಂತೆಯೇ ಇವೆ. ದೇವಾಲಯಕ್ಕೆ ಸಂಬಂಧಿಸಿದ ಅಂಗಡಿಯಲ್ಲಿ ಪುರಿ ಶೈಲಿಯ ಸೀರೆಗಳೂ ಇತರ ವಸ್ತುಗಳೂ ಜಗನ್ನಾಥ ಭಗವಂತನಿಗೆ ಸಂಬಂಧಿಸಿದ ವಿವಿಧ ವಸ್ತುಗಳೂ ದೊರೆಯುತ್ತವೆ.

ಮಾಯಾಪುರದ ಇಸ್ಕಾನ್‌ನ ವಿಗ್ರಹ ವಿಭಾಗವನ್ನು ಸಂಪರ್ಕಿಸಿ, ಭಗವಾನ್ ಜಗನ್ನಾಥನಿಗೆ ರಾಜಭೋಗವೆಂಬ ಮಹಾಪ್ರಸಾದದ ಅರ್ಪಣೆಯ ವ್ಯವಸ್ಥೆಯನ್ನು ಮಾಡಿಸಬಹುದು.

ಈ ಜಗನ್ನಾಥ ಮಂದಿರದ ವಿಷಯದಲ್ಲೂ ಇಲ್ಲಿನ ಭಗವನ್ಮೂರ್ತಿಗಳ ವಿಷಯದಲ್ಲೂ ಭಕ್ತರು ಅನೇಕ ಪವಾಡ ಕಥೆಗಳನ್ನು ಹೇಳುತ್ತಾರೆ.

ವಿಶ್ರಾಮಸ್ಥಾನ: ಈ ಸ್ಥಳವನ್ನು ದಿನದ ಯಾವ ಹೊತ್ತಿನಲ್ಲಾದರೂ ದರ್ಶಿಸಬಹುದು. ಜಗನ್ನಾಥ ಮಂದಿರದ ಹಿಂಭಾಗದಲ್ಲಿರುವ ಒಂದು ಪುಟ್ಟ ದ್ವಾರದ ಮೂಲಕ ಹೊರಹೋದರೆ ಅಲ್ಲಿ ಒಂದು ಮಾವಿನ ತೋಪಿದೆ. ಮಾವಿನ ಮರಗಳ ಮಧ್ಯೆ ಬಲಗಡೆಗೆ ಒಂದು ಪುಟ್ಟ ಕಟ್ಟಡ ಕಾಣುತ್ತದೆ. ಇದೇ ವಿಶ್ರಾಮಸ್ಥಾನ ಅಥವಾ ಕೋಲಾವೇಚಾ ಶ್ರೀಧರನ ಮನೆ.

ಭಕ್ತರ ಪ್ರಕಾರ ಈ ಸ್ಥಳ ವೃಂದಾವನದಲ್ಲಿ ಕೃಷ್ಣಬಲರಾಮರು ತಮ್ಮ ಗೋಪಾಲಸಖರೊಂದಿಗೆ ಲೀಲೆಗಳನ್ನು ಮೆರೆದ ಮಧುವನ ಎಂಬ ಸ್ಥಳಕ್ಕಿಂತ ಬೇರೆಯಲ್ಲ. ಆ ಗೋಪಾಲಸಖರಲ್ಲಿ ಒಬ್ಬನಾಗಿದ್ದ ಕುಸುಮಾಸವ ಗೋಪಾಲನೆಂಬುವನೇ ಶ್ರೀಚೈತನ್ಯ ಮಹಾಪ್ರಭುಗಳ ಲೀಲಾಕಾಲದಲ್ಲಿ ಶ್ರೀಧರನಾಗಿ ಜನ್ಮತಳೆದಿದ್ದ.

ಶ್ರೀಧರನು ಶ್ರೀ ಚೈತನ್ಯರ ಲೀಲೆಗಳಲ್ಲಿ ಒಬ್ಬಮುಖ್ಯ ಭಕ್ತನಾಗಿದ್ದು, ಶ್ರೀಚೈತನ್ಯರಿಗೆ ಬಹಳ ಪ್ರಿಯನಾಗಿದ್ದ. ಕೋಲಾ ಎಂದರೆ ಬಾಳೆ. ಶ್ರೀಧರನು ಬಾಳೆಹಣ್ಣು, ಬಾಳೆಗಿಡ, ಬಾಳೆಎಲೆ, ಬಾಳೆಕಾಂಡ ಮೊದಲಾದವುಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವಿಸುತ್ತಿದ್ದನಾದ್ದರಿಂದ ಇವನನ್ನು ಕೋಲಾವೇಚಾ ಶ್ರೀಧರ ಎಂದು ಕರೆಯುತ್ತಿದ್ದರು.

ಅವನು ತನ್ನ ಸಂಪಾದನೆಯ ಶೇ.50ರಷ್ಟನ್ನು ಗಂಗಾದೇವಿಯ ಪೂಜೆಗಾಗಿ ಬಳಸುತ್ತಿದ್ದ; ಸತತವಾಗಿ ಹರಿನಾಮ ಸಂಕೀರ್ತನೆ ಮಾಡುತ್ತಿದ್ದ. ರಾತ್ರಿಯ ಹೊತ್ತಿನಲ್ಲೂ ಅವನು ಜೋರಾಗಿ ನಾಮಸಂಕೀರ್ತನೆ ಮಾಡುತ್ತಿದ್ದುದರಿ೦ದ ನೆರೆಹೊರೆಯವರಿಗೆ ಆದರಿಂದ ತೊಂದರೆಯೆನಿಸಿ ಅವರು ಅವನನ್ನು ಬಯ್ದುಕೊಳ್ಳುತ್ತಿದ್ದರು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi