ಶ್ರೀಮನ್‌ ನ್ಯಾಯಸುಧಾ

– ವಿದ್ವಾನ್‌ ಶ್ರೀವಿಷ್ಣು ಆಚಾರ್ಯ ಕೆ.ಎಸ್.‌

ಸಾಧಕನ ಬದುಕಿನಲ್ಲಿ ಮುಖ್ಯವಾಗಿ ಬೇಕಾದದ್ದು ಭಗವಂತನ ಅರಿವು. ಭಗವಂತನ ಅರಿವನ್ನು ಪಡೆಯದೆ ನಾನಾ ಬಗೆಯ ಸಾಂಸಾರಿಕ ದುಃಖದಲ್ಲಿ ಮಾನವನು ಬಳಲುತ್ತಿರುತ್ತಾನೆ. ಈ ದುಃಖದಿಂದ ಬಿಡುಗಡೆ ಹೊಂದುವ ಇಚ್ಛೆ ಅವನಿಗಿದ್ದರೂ ಹೊರಬರುವ ಬಗೆಯನ್ನು ಅವನು ಕಾಣಲಾರ.

ಆದ್ದರಿಂದ ನಮ್ಮ ಈ ಸನಾತನ ಸಂಸ್ಕೃತಿಯಲ್ಲಿ ಇದಕ್ಕೊಂದು ಉಪಾಯವನ್ನು ಬೋಧಿಸಿದ್ದಾರೆ. ಪರಬ್ರಹ್ಮ ರೂಪನಾದ ಶ್ರೀ ಕೃಷ್ಣನ ಜ್ಞಾನದಿಂದಾಗಿ ಕೂಡಿದ ಅವನ ಪರಮ ಪ್ರಸಾದವೊಂದೇ ಸಾಧನ! ಇದಕ್ಕೆ ಶ್ರೀ ಮಧ್ವಾಚಾರ್ಯರ “ಜ್ಞಾನೇನೈವ ಪರಂ ಪದಂ’” ಎಂಬ ವಾಕ್ಯವೂ ಮತ್ತು “ಯಸ್ಯ ಪ್ರಸಾದಾತ್…” ಎಂಬ ಶ್ರುತಿವಾಕ್ಯವೂ ಪೂರಕವಾಗಿದೆ.

ಪರಮ ಪುರುಷ ಶ್ರೀ ಕೃಷ್ಣನ ಜ್ಞಾನವನ್ನು ಪಡೆಯಬೇಕೆಂಬ ಹಂಬಲವಿದ್ದರೂ ಕೇವಲ ಬಯಕೆ ಮಾತ್ರದಿಂದ ಅದು ಸಾಧ್ಯವಾಗದು. ಆದ್ದರಿಂದ ಮೂಲರೂಪಿಯಾದ ವಿಷ್ಣುವಿನ ಅವತಾರ-ಭೂತರಾದ ಭಗವಾನ್ ಶ್ರೀ ವೇದವ್ಯಾಸರು ಬ್ರಹ್ಮ-ಜ್ಞಾನವನ್ನು ಪಡೆಯುವ ಉಪಾಯಗಳನ್ನು (ನ್ಯಾಯಗಳನ್ನು) ಸೂತ್ರ ರೂಪೇಣ ನಮಗೆ ಕರುಣಿಸಿದ್ದಾರೆ.

ಭಗವಂತನ ಸರಿಯಾದ ಜ್ಞಾನವನ್ನು ಬೋಧಿಸುವ ವೇದಗಳ ಅರ್ಥವನ್ನು ಸರಿಯಾಗಿ ನಿರ್ಣಯಿಸುವುದಕ್ಕೆ ಇದು ಸಾಧನವಾಗಿದೆ. ಸೂತ್ರಗಳು ನಮ್ಮ ಕೈಯಲ್ಲಿದ್ದರೂ ಅದರ ಅಗಾಧತೆಯನ್ನು ತಿಳಿಯದ ಪಾಮರರು ಇದನ್ನು ಬಳಸಿಕೊಳ್ಳಲಾರರು. ಅದರ ಅರ್ಥ ತಿಳಿಯುವವರೆಗೂ ಸೂತ್ರಗಳು ಮಂಗನ ಕೈಯಲ್ಲಿ ಮಾಣಿಕ್ಯವಿದ್ದಂತೆಯೇ ಸರಿ.

ಇಂತಹ ವಿಷಮ ಪರಿಸ್ಥಿತಿಯನ್ನರಿತ ದೇವತೆಗಳು ಪ್ರಾರ್ಥಿಸಿದಾಗ ಶ್ರೀ ನಾರಾಯಣನು ವಾಯುದೇವರಿಗೆ ಧರೆಯೊಳಗೆ ಅವತರಿಸಲು ಆಜ್ಞಾಪಿಸಿದನು. ವಾಯುದೇವರೇ ಮಧ್ವರಾಗಿ ಅವತರಿಸಿ ಸೂತ್ರಗಳ ಕಂಪನ್ನು ಸೂಸಿದರು.

ಸೂತ್ರ ಎಂದರೆ ಲೌಕಿಕ ಭಾಷೆಯಲ್ಲಿ formula ಎಂದು ಪರಿಗಣಿಸಬಹುದು. ಅದರ ವಿಸ್ತಾರ ರೂಪವೇ ಭಾಷ್ಯ. ಶ್ರೀ ಮದನುವ್ಯಾಖ್ಯಾನವೂ ಬ್ರಹ್ಮಸೂತ್ರಕ್ಕೆ ಭಾಷ್ಯವೇ ಆಗಿದೆ.

ಶ್ರೀಮಧ್ವಾಚಾರ್ಯರು ಬ್ರಹ್ಮಸೂತ್ರವನ್ನುದ್ದೇಶಿಸಿ 4 ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ “ಶ್ರೀಮದನುವ್ಯಾಖ್ಯಾನ”ವೂ ಒಂದು. ಈ ಗ್ರಂಥಕ್ಕೆ ಪರಮಪೂಜ್ಯ ಶ್ರೀ ಜಯತೀರ್ಥರು “ವಿಷಮ ಪದ ವಾಕ್ಯಾರ್ಥ ವಿವೃತಿ” ಎಂಬ ವ್ಯಾಖ್ಯಾನವನ್ನು ಬರೆದಿದ್ದಾರೆ. ಈ ವ್ಯಾಖ್ಯಾನವು ಲೋಕದಲ್ಲಿ “ಶ್ರೀಮನ್ಯಾಯ ಸುಧಾ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಗ್ರಂಥದ ಸ್ಥೂಲ ಪರಿಚಯ:

ಈ ಗ್ರಂಥವು ಅನುವ್ಯಾಖ್ಯಾನದ ಪ್ರತಿಪದಾರ್ಥ ಮತ್ತು ಶ್ರೀ ಮಧ್ವಾಚಾರ್ಯರ ಮಾತಿನಿಂದ ಸೂಚಿಸಲ್ಪಟ್ಟ ಅನೇಕ ಶಾಸ್ತ್ರದ ಗಹನ ವಿಚಾರಗಳನ್ನು ಒಳಗೊಂಡಿದೆ. ಬ್ರಹ್ಮಸೂತ್ರಗಳ ನಾಲ್ಕೂ ಅಧ್ಯಾಯಗಳಿಗೂ, ಪ್ರತಿಯೊಂದು ಅಧ್ಯಾಯದ ನಾಲ್ಕೂ ಪಾದಗಳಿಗೂ ಅಷ್ಟೇ ಅಲ್ಲದೆ ಪ್ರತಿಯೊಂದು ಅಧಿಕರಣ, ಅದರಲ್ಲಿರುವ ಪ್ರತಿಯೊಂದು ಸೂತ್ರಗಳಿಗೂ ವಿಷದವಾದ ವ್ಯಾಖ್ಯಾನದಿಂದ ಕೂಡಿದೆ.

ಈ ಗ್ರಂಥವನ್ನು ಓದಬೇಕಾದರೆ ಅನೇಕ ವರ್ಷಗಳ ಶಾಸ್ತ್ರೀಯ ಅಧ್ಯಯನ ಅತ್ಯಗತ್ಯ. ತರ್ಕಶಾಸ್ತ್ರ, ಮೀಮಾಂಸಾ-ಶಾಸ್ತ್ರ, ವ್ಯಾಕರಣಶಾಸ್ತ್ರ, ವೇದಾಂತ-ಶಾಸ್ತ್ರವೇ ಮೊದಲಾದ ಎಲ್ಲ ದರ್ಶನ ಗ್ರಂಥಗಳ ಆಳವಾದ ಜ್ಞಾನವಿಲ್ಲದವ ಇದರ ನೈಜಾರ್ಥವನ್ನು ತಿಳಿಯಲಾರ. ಕೇವಲ ಶ್ರೇಷ್ಠತಮ ದ್ವೈತ ಸಿದ್ದಾಂತದ ಸ್ಥಾಪನೆ ಒಂದೇ ಅಲ್ಲದೆ ಪರಕೀಯರ ಅಭಿಪ್ರಾಯಗಳ ವಿಮರ್ಶೆ ಇರುವುದು ಕೂಡ ಈ ಗ್ರಂಥದ ಶ್ರೇಷ್ಠತೆಗೆ ಕಾರಣ.

ಗ್ರಂಥದ ಹಿರಿಮೆ:

ಟೀಕಾ ಗ್ರಂಥಗಳನ್ನು ಅನೇಕರು ರಚಿಸಿದ್ದರೂ “ಶ್ರೀಮನ್ಯಾಯ ಸುಧೆ”ಯಂತಹ ಪ್ರೌಢ ಗ್ರಂಥವನ್ನು ಮತ್ತಾರೂ ರಚಿಸಿಲ್ಲ. ಹೀಗೊಂದು ಸೂಕ್ತಿ ಕೇಳಿ ಬರುತ್ತದೆ “ಸುಧಾ ವಾ ಪಠನೀಯಾ ವಸುಧಾ ವಾ ಪಾಲನೀಯಾ” ಎಂದು. ಇದರ ಅರ್ಥ ಒಬ್ಬ ಚಕ್ರವರ್ತಿ ದೇಶದ ಆಳ್ವಿಕೆಯನ್ನು ಅಚ್ಚುಕಟ್ಟಾಗಿ ನಡೆಸಬೇಕಾದರೆ ಎಂತಹ ಬುದ್ಧಿಚಾತುರ್ಯ ಬೇಕೋ ಅದಕ್ಕೂ ಮಿಗಿಲಾದ ಬುದ್ಧಿ ಉಳ್ಳವ ಮಾತ್ರ ಸುಧೆಯನ್ನು ಚೆನ್ನಾಗಿ ಓದಬಲ್ಲ ಎಂದು.

ಇಂತಹ ನ್ಯಾಯಸುಧೆಯ ಅರ್ಥವನ್ನು ಪೂರ್ಣವಾಗಿ ತಿಳಿಯಲು ಮಹಾ ಜ್ಞಾನಿವರೇಣ್ಯರಾದ ಶ್ರೀ ವ್ಯಾಸರಾಜರೇ ಮೊದಲಾದವರಿಗೆ ಮಾತ್ರ ಸಾಧ್ಯ. ನಮ್ಮ ತಲೆಗೆ ಬರುವ ವಿಷಯ ಅಲ್ಪ ಮಾತ್ರ. “ಟೀಕಾ ಗಾಂಭೀರ್ಯಮುದ್ದರ್ತುಮ್ ವ್ಯಾಸರಾಜಾದಯಃ ಕ್ಷಮಾಃ” ಎಂಬುದಾಗಿ ಹಿರಿಯರು ಕೊಂಡಾಡಿದ್ದಾರೆ.

ಅದಕ್ಕೆಂದೇ ಗ್ರಂಥ ಕರ್ತೃಗಳಾದ ಶ್ರೀಮಜ್ಜಯತೀರ್ಥರನ್ನು “ಶ್ರೀ ಟೀಕಾಕೃತ್ಪಾದರು” ಎಂಬ ಬಿರುದಿನಿಂದಲೇ ಗುರುತಿಸುತ್ತಾರೆ. ಈ ಗ್ರಂಥದ ಪ್ರೌಢಿಮೆಗೆ ಸಾಕ್ಷಿಯಾಗಿ ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು ಕೂಡ ಇದಕ್ಕೆ ಶ್ರೀ ತಾತ್ಪರ್ಯ ಚಂದ್ರಿಕಾ ಎಂಬ ವಿಷದವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ.

ಅದಲ್ಲದೆ ಕಲಿಯುಗ ಕಲ್ಪತರುಗಳಾದ ಮಂತ್ರಾಲಯ ಪುರಾಧೀಶರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಬರೆದ ʼಪರಿಮಳʼ ಕೂಡಿದಂತೆ ಐವತ್ತಕ್ಕೂ ಮಿಗಿಲಾದ ಟಿಪ್ಪಣಿ ಗ್ರಂಥಗಳು ಸುಧೆಯನ್ನು ವಿವರಿಸಲು ಬಂದಿವೆ. ಇಂದಿಗೂ ಕೂಡ ದ್ವೈತ ಮತಾನುಯಾಯಿಗಳಲ್ಲಿ ಶ್ರೀಮನ್ನ್ಯಾಯಸುಧೆಯನ್ನು ಓದಿದವನನ್ನು ಪಂಡಿತ ಎಂದು ಕರೆಯುತ್ತಾರೆ. ಅದರ ಅರ್ಥ ಈ ಗ್ರಂಥಗಳನ್ನು ಓದಬೇಕಾದರೆ ಅನೇಕ ವರ್ಷಗಳ ಪರಿಶ್ರಮವಿದ್ದರೆ ಮಾತ್ರ ಸಾಧ್ಯ ಎಂದು.

ಪರಮಪುರುಷ ಶ್ರೀ ಕೃಷ್ಣನ ನಿರ್ದುಷ್ಟವಾದ ತತ್ವ ಜ್ಞಾನವನ್ನು (ಈಶ-ದಾಸ ಭಾವವನ್ನು-ಎಂದೆಂದಿಗೂ ಶ್ರೀಕೃಷ್ಣನೇ ಒಡೆಯ, ನಾನವನ ದಾಸ) ನೀಡುವ ಈ ಗ್ರಂಥವು ಅಧಿಕಾರಿಗಳಾದ ಎಲ್ಲ ಸಜ್ಜನರಿಂದ ಶ್ರದ್ಧಾ ಭಕ್ತಿ ಪೂರ್ವಕವಾಗಿ ಅಧ್ಯೇಯವಾಗಿದೆ. ಇದು ಕೇವಲ ಸಂಸ್ಕೃತ ವಾಙ್ಮಯದಲ್ಲಿರುವ ವ್ಯಾಖ್ಯಾನ ಗ್ರಂಥವಷ್ಟೇ ಅಲ್ಲ, ಯೋಗ್ಯ ಅಧಿಕಾರಿಗಳಿಗೆ ಮೋಕ್ಷದಾಯಕವೂ ಆಗಿದೆ.

ಇದನ್ನೇ ಶ್ರೀ ಮಾದನೂರು ವಿಷ್ಣುತೀರ್ಥರು ಹೀಗೆ ಬಣ್ಣಿಸಿದ್ದಾರೆ “ಜಯತೀರ್ಥಕೃತೋ ಪ್ರವಣೋ ನ ಪುನರ್ ಭವಭಾಕ್‌ ಭವತೀತಿ ಮತಿರ್ಹಿ ಮಮ” ಇತ್ಯಾದಿ. ಅದರರ್ಥ ಯಾವ ಅಧಿಕಾರಿ ಶ್ರದ್ಧಾಭಕ್ತಿಯಿಂದ ಈ ಗ್ರಂಥವನ್ನೋದುವನೋ ಅವನಿಗೆ ಪುನರಜನ್ಮವಿಲ್ಲವೆಂದು.

ಶ್ರೀ ಜಯತೀರ್ಥರ ಕಿರು ಪರಿಚಯ :

ಶ್ರೀ ಜಯತೀರ್ಥರು ಪೂರ್ವಾಶ್ರಮದಲ್ಲಿ “ಧೋಂಡೋಪಂತ್‌” ಎಂಬ ಹೆಸರಿನಿಂದ ಅವತರಿಸಿದರು. ಇವರ ಜನ್ಮ ಮಹಾರಾಷ್ಟ್ರದ ಮಂಗಳವೇಡೇ ಗ್ರಾಮದಲ್ಲಿ ಆಯಿತು. ರಘುನಾಥ ನರಸಮ್ಮರ ಸುಪುತ್ರರಿವರು. ಬಾಲ್ಯದಲ್ಲಿ ವೈಭವದ ಜೀವನ ನಡೆಸುತ್ತಿದ್ದ ಇವರು ಪರಮಪೂಜ್ಯ ಶ್ರೀ ಅಕ್ಷೋಭ್ಯತೀರ್ಥರ ದಯೆಯಿಂದ ತುರೀಯಾಶ್ರಮವನ್ನು (ಸನ್ಯಾಸಾಶ್ರಮವನ್ನು) ಸ್ವೀಕರಿಸಿದರು.

ತದನಂತರ 21 ಗ್ರಂಥಗಳನ್ನು ರಚಿಸಿದರು. ಇಂದ್ರನ ಅವತಾರ ಎನ್ನಲಾದ ಜಯತೀರ್ಥರು ಪೂರ್ವಜನ್ಮದಲ್ಲಿ ವೃಷಭವಾಗಿ ಶ್ರೀಮದಾಚಾರ್ಯರಿಗೆ ಸೇವೆ ಸಲ್ಲಿಸಿರುವರು. ಶ್ರೀಮಧ್ವಾಚಾರ್ಯರ ಪ್ರೀತಿಪಾತ್ರರಾದ ಇವರ ಚಿಂತನೆಯಿಂದ ಶ್ರೀ ಮಧ್ವಾಚಾರ್ಯರ ಕರುಣೆ ನಮಗೂ ದೊರಕಲಿ. ತನ್ಮೂಲಕ ಪರಮಪುರುಷ ಶ್ರೀ ಕೃಷ್ಣನ ಪರಮ ಪ್ರಸಾದವೂ ಆಗಲೆಂದು ಪ್ರಾರ್ಥಿಸೋಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi