ಆಯುರ್ವೇದ-2
– ಮನೋಜ್, ಸುಮ – ವಿದ್ಯಾರ್ಥಿಗಳು, ಸರ್ಕಾರಿ ವೈದ್ಯಕೀಯ ವಿದ್ಯಾಲಯ, ಬೆಂಗಳೂರು.
ಕಳೆದ ಸಂಚಿಕೆಯಲ್ಲಿ ಆಯುರ್ವೇದದ ಹುಟ್ಟು ಮತ್ತು ಉದ್ದೇಶಗಳ ಬಗ್ಗೆ ಹೇಳಲಾಗಿತ್ತು. ಆಧ್ಯಾತ್ಮಿಕ್ ಜೀವನದ ಉನ್ನತಿಗೆ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವ ಉದ್ದೇಶದಿಂದ ಆಯುರ್ವೇದ ಬಳಕೆಗೆ ಬಂತು. “ಆಯುರ್ವೇದ’ ಎಂದರೆ ‘ಜೀವ ವಿಜ್ಞಾನಿ’ ಎನ್ನುವ ವಿವರಣೆ ಕಳೆದ ಬಾರಿ ನೀಡಿದೆ. ಈ ಲೇಖನದಲ್ಲಿ ಆಯುರ್ವೇದವನ್ನು ಕುರಿತು ಒಂದು ಆಧ್ಯಾತ್ಮಿಕ ಒಳನೋಟ ಬೀರೋಣ.

ಆಯುರ್ವೇದವೂ ಸೇರಿದಂತೆ ಯಾವುದೇ ರೀತಿಯ ಜ್ಞಾನವನ್ನು ಪಡೆಯಲು ಎರಡು ಮಾರ್ಗಗಳಿವೆ. ಅವು – ‘ಆರೋಹಣ ಪಂಥ’ ಮತ್ತು ‘ಅವರೋಹಣ ಪಂಥ’. ಆರೋಹಣ ಪಂಥ – ಇದು ಯಾವುದೇ ವ್ಯಕ್ತಿಯು ಸ್ವಪ್ರಯತ್ನ ಮತ್ತು ಸೀಮಿತ ತಿಳುವಳಿಕೆಯಿಂದ ಜ್ಞಾನಗಳಿಕೆಗೆ ತೊಡಗಲು ಪ್ರಯತ್ನಿಸುವ ವಿಧಾನವಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದೊಂದು ತಾರ್ಕಿಕ ವಿಧಾನ. ಈ ವಿಧಾನದಲ್ಲಿ ಎರಡು ಉಪಮಾರ್ಗಗಳಿವೆ. ಅವು, ‘ಪ್ರತ್ಯಕ್ಷ’ ಮತ್ತು ‘ಅನುಮಾನ’.
ಈ ವಿಧಾನವು ವೇದಗಳಿಂದ (ಆಯುರ್ವೇದದಿಂದಲೂ) ನಿರಾಕರಿಸಲ್ಪಟ್ಟಿದೆ. ಆರೋಹಣ ಪಂಥದಲ್ಲಿ ಜ್ಞಾನವನ್ನು ಅಪರಿಪೂರ್ಣ ಮತ್ತು ಸೀಮಿತ ತಿಳುವಳಿಕೆಗಳಿಂದ ಪಡೆಯಲು ಯತ್ನಿಸುವ ಕಾರಣ, ಅದು ಮಾನ್ಯತೆ ಪಡೆದಿಲ್ಲ.
ಆಚಾರ್ಯ ಚರಕ ತನ್ನ ಚರಕ ಸೂತ್ರದಲ್ಲಿ ಆರೋಹಣ ಪಂಥದ ದೋಷಗಳನ್ನು ಕುರಿತು ಹೀಗೆ ವಿವರಿಸಿದ್ದಾನೆ:-
“ಪ್ರತ್ಯಕ್ಷಮ್ ಹಿ ಅಲ್ಪಮ್, ಅಪ್ರತ್ಯಕ್ಷಮ್, ಅನಲ್ಪಮ್ ಅಸ್ತಿ” ಬುದ್ಧಿವಂತನಾದವನು ಶಾಸ್ತ್ರಸಮ್ಮತವಲ್ಲದ ದೃಷ್ಟಿಕೋನ ಮತ್ತು ಅನುಮಾನಗಳನ್ನು ತ್ಯಜಿಸಬೇಕು.
“ಸತಾಮ್ ಚ ರೂಪಾಣಾಮ್ ಅತಿ ಸನ್ನಿಕರ್ಷಾತ್ ಅತಿವಿಪ್ರಕರ್ಷಾತ್ ಆವರಣಾತ್ ಕರಣದೌರ್ಬಲ್ಯ ಮನೋಅವಸ್ಥಾನ ಸಮಾನಾಭಿಹಾರಾತ್ ಅಭಿಭಾವಾತ್, ಅತಿಸೌಕ್ಟ್ಯತ್ ಚ ಪ್ರತ್ಯಕ್ಷಾನ್ ಅನುಪಲಬ್ಧಿಃ |”
ವಾಸ್ತವವಾಗಿ ಅಸ್ತಿತ್ವದಲ್ಲಿರುವ ಎಲ್ಲ ವಸ್ತುಗಳೂ ನೇರವಾಗಿ ಗ್ರಹಿಕೆಗೆ ನಿಲುಕುವುದಿಲ್ಲ. ಅದಕ್ಕೆ ಕಾರಣ ಈ ಕೆಳಗಿನ ದೋಷಗಳೇ ಆಗಿವೆ:
1. ಅತಿ ಸನ್ನಕರ್ಷ – ಮಿತಿ ಮೀರಿದ ಇಂದ್ರಿಯ ಸಾಮೀಪ್ಯ. ಉದಾ: ಕಣ್ಣಿಗೆ ಅತಿ ಹತ್ತಿರದಲ್ಲಿರುವ (ರೆಪ್ಪೆಗಳು) ವಸ್ತುವನ್ನು ನೋಡಲಾಗುವುದಿಲ್ಲ.
2. ಅತಿ ವಿಕರ್ಷಕ – ಅತಿ ದೂರದಲ್ಲಿರುವವಸ್ತುಗಳನ್ನೂ ಗ್ರಹಿಸಲಾಗುವುದಿಲ್ಲ.
3. ಆವರಣಾತ್ – ವಸ್ತುವು ಯಾವುದೇ ತೆರೆಯಿಂದ ಮುಚ್ಚಲ್ಪಟ್ಟಾಗ. ಉದಾ: ಗೋಡೆಯ ಹಿಂದಿನ ವಸ್ತುವನ್ನು ನೋಡಲಾಗುವುದಿಲ್ಲ.
4. ಕರಣ ದೌರ್ಬಲ್ಯ – ಇಂದ್ರಿಯ ಅಪರಿಪೂರ್ಣತೆ
5. ಮನೋ ಅನವಸ್ಥಾನ್ – ಗ್ರಹಿಕೆಗೆ ನಿಲುಕದ ವಸ್ತುವಿನ ಮೇಲೆ ಏಕಾಗ್ರತೆಯ ಕೊರತೆ.
6. ಸಮಾನಾಭಿಹಾರ – ಒಂದೇ ರೀತಿಯ ಎರಡು ವಸ್ತುಗಳಿದ್ದಾಗ ಅವುಗಳ ಪ್ರತ್ಯೇಕತೆಯನ್ನು ಗುರುತಿಸಲಾಗದಿರುವುದು.
7. ಅಭಿಭಾವ – ಮತ್ತೊಂದು ವಸ್ತುವನ್ನು ಮರೆಮಾಚುವಂಥ ವಸ್ತುಗಳ ಉಪಸ್ಥಿತಿ. ಉದಾ: ಸೂರ್ಯನ ಇರುವಿಕೆಯಿಂದ ನಕ್ಷತ್ರಗಳು ಗೋಚರಿಸದೆ ಇರುವುದು.
8. ಅತಿ ಸ್ಮೂಕ್ಷ್ಮ – ಅತಿ ಚಿಕ್ಕ ವಸ್ತುಗಳು ಉದಾ: ಪರಮಾಣು ಆದ್ದರಿಂದ ನಮ್ಮ ವೈದಿಕ ಆಚಾರ್ಯರು (ಚರಕ ಮುಂತಾದವರು), ಯಾವುದೇ ವಸ್ತುವನ್ನಾದರೂಜ್ಞಾನಿಗಳು ಹೊತ್ತಿಸಿದ ಜ್ಞಾನದ ದೀವಟಿಗೆಯ ಬೆಳಕಲ್ಲಿ ನೋಡಬೇಕೆಂದು ಬೋಧಿಸಿದ್ದಾರೆ. ಈ ಹಾದಿಯಲ್ಲಿ ನಡೆಯುವ ವಿಧಾನಕ್ಕೆ ಅವರೋಹಣ ಪಂಥ ಎನ್ನುವರು. ಇದು ಪ್ರಮಾಣೀಕೃತ ಆಚಾರ್ಯರಿಂದ (ಆಪ್ತ) ಶ್ರವಣಗೋಚರ ಸಾಧ್ಯವಾದ ಪರಿಪೂರ್ಣ ಜ್ಞಾನವನ್ನು ಸ್ವೀಕರಿಸುವ ವಿಧಾನವಾಗಿದೆ.
ಈ ‘ ಆಪ್ತ’ರನ್ನು ಹೀಗೆ ಗುರುತಿಸಲಾಗುತ್ತದೆ –
ರಜಸ್ತಮೋಭ್ಯಾಮ್ ನಿರ್ಮುಕ್ತಾಃ
ತಪೋಜ್ಞಾನ ಬಲೇನ ಯೇ ।
ಏಷಾಮ್ ತ್ರಿಕಾಲಮ್ ಅಮಲಮ್
ಜ್ಞಾನಮ್ ಅವ್ಯಾಹತಮ್ ಸದಾ |
ಆಪ್ತಾಃ ಶಿಷ್ಟಾ ವಿಬುದ್ಧಾಸ್ತೇ ತೇಷಾಮ್
ವಾಕ್ಯಮ್ ಅಸಂಹಮ್|
ಸತ್ಯಮ್ ವಕ್ಷ್ಯಸ್ತಿ ತೇ ಕಸ್ಮಾತ್
ಅಸತ್ಯಮ್ ನೀರಜಸ್ತಮಃ || (ಚ.ಸೂ.11:18:19)
”ರಜ-ತಮೋಗುಣಗಳಿಂದ ಮುಕ್ತರಾಗಿ ಪರಿಶುದ್ಧರೂ ಜ್ಞಾನೋದಯ ಹೊಂದಿದವರೂ ಆಗಿ, ತಮ್ಮ ತಪೋಬಲದಿಂದ ಗಳಿಸಿದ ಅಕಲಂಕಿತ ಜ್ಞಾನವನ್ನು ಭೂತ-ವರ್ತಮಾನ -ಭವಿಷ್ಯತ್ ಕಾಲಗಳಲ್ಲೂ ಧಾರೆಯೆರೆಯುವರನ್ನು ‘ಆಪ್ತ’ ರೆಂದು ತಿಳಿಯಲಾಗುತ್ತದೆ. ಅವರು ಶಿಷ್ಟರೆಂದೂ, ವಿಬುದ್ಧರೆಂದೂ ಕರೆಯಲ್ಪಡುತ್ತಾರೆ.
ಅವರ ವಾಕ್ಯವು ಎಂದಿಗೂ ಸತ್ಯವಾಗಿ ಮತ್ತು ಯಾವುದೇ ಅನುಮಾನಗಳಿಂದ ಹೊರತಾಗಿ ಇರುವಂಥದಾಗಿರುತ್ತದೆ. ರಜ-ತಮಗಳಿಂದ ಮುಕ್ತರಾದ ಈ ವ್ಯಕ್ತಿಗಳು ಅದು ಹೇಗೆ ತಾನೇ ಅಸತ್ಯ ನುಡಿಯಬಲ್ಲರು?”
ಆದ್ದರಿಂದ, ವೈದಿಕ ಸಂಪ್ರದಾಯದ ಮಾನ್ಯತೆ ಪಡೆದಿರುವ ಅವರೋಹಣ ಪಂಥವು – ಆಪ್ತೋಪದೇಶ, ಶಬ್ದ ಪ್ರಮಾಣ ಮತ್ತು ಆಗಮ ಪ್ರಮಾಣ ಎಂದೂ ಕರೆಯಲ್ಪಟ್ಟಿದೆ. ಇದುವೇ ಜ್ಞಾನಸಂಪಾದನೆಯ ಪರಿಪೂರ್ಣ ಪಥವಾಗಿದೆ. ಆಯುರ್ವೇದದ ಜ್ಞಾನವು ”ಗುರುಶಿಷ್ಯ ಪರಂಪರೆ’ ಅಥವಾ ‘ಸಂಪ್ರದಾಯ’ ಎಂದು ಹೇಳಲಾಗುವ ಇದೇ ಪದ್ಧತಿಯ ಮೂಲಕ ಗಳಿಸಲ್ಪಟ್ಟಿತು.
ಆಯುರ್ವೇದವು ಅಥರ್ವವೇದದ ಉಪಶಾಖೆಯಾಗಿದ್ದು, ಅವರೋಹಣ ಪಂಥದಿಂದ ಸ್ವೀಕರಿಸಲ್ಪಟ್ಟಿದೆ. ಆದ್ದರಿಂದ ಇದು ಆಧುನಿಕ ವೈದ್ಯ ವಿಜ್ಞಾನದಂತಿರದೆ, ಸಂಪೂರ್ಣವೂ, ಆಸ್ಖಲಿನವೂ ಆಗಿದೆ.
ಈಗ ನಾವು ಆಯುರ್ವೇದವು ದೇವೋತ್ತಮ ಪರಮ ಪುರುಷನಿಂದ ಈ ಭೌತಿಕ ಪ್ರಪಂಚಕ್ಕೆ ಹೇಗೆ ವ್ಯವಸ್ಥಿತವಾಗಿ ಹರಿದು ಬಂತು ಎನ್ನುವುದನ್ನು ನೋಡೋಣ-
ದೇವೋತ್ತಮ ಪರಮಪುರುಷ ಶ್ರೀಕೃಷ್ಣನೇ ಎಲ್ಲ ಜ್ಞಾನಗಳಿಗೂ ಮೂಲ ಎಂದು ಭಗವದ್ಗೀತೆಯಲ್ಲಿ ಹೇಳಿದೆ –
ವೇದೈಶ್ವ ಸರ್ವೈಃ ಅಹಮ್ ಏವ ವೇದ್ಯಃ|
ವೇದಾನ್ತ ಕೃತ್ ವೇದಾನ್ತ ವಿದೇವ ಚಾಹಮ್ ||
ಈ ಎಲ್ಲ ಜ್ಞಾನಗಳು ಭೌತಿಕ ಪ್ರಪಂಚದಲ್ಲಿ ಮೊತ್ತ ಮೊದಲು ಅಸ್ತಿತ್ವಕ್ಕೆ ಬಂದ ಬ್ರಹ್ಮನಿಂದ ಹೃದಯದ ಮೂಲಕ ಸ್ವೀಕರಿಸಲ್ಪಟ್ಟವು. (ಶ್ರೀಮದ್ಭಾಗವತಮ್)
ತೇನೇ ಬ್ರಹ್ಮ ಹೃದಯ ಆದಿ ಕವಯೋ। (ಶ್ರೀಮದ್ಭಾಗವತಮ್)
ಆಯುರ್ವೇದದ ಅಲೌಕಿಕ ವಿಜ್ಞಾನವು ಕೂಡ ಈ ವೈದಿಕ ಜ್ಞಾನದ ಭಾಗವೇ ಆಗಿದೆ.

ಎರಡನೆಯದಾಗಿ ಆಯುರ್ವೇದವನ್ನು ಬ್ರಹ್ಮದೇವನಿಂದ ದಕ್ಷ ಪ್ರಜಾಪತಿಯು ಸ್ವೀಕರಿಸಿದನು. ಅನಂತರ ಅದನ್ನು ಅಶ್ವಿನಿಕುಮಾರರಿಗೆ ಧಾರೆ ಎರೆದನು.
ದೇವತೆಗಳ ರಾಜನಾದ ಇಂದ್ರನು ಈ ಜ್ಞಾನವನ್ನು ಅಶ್ವಿನೀಕುಮಾರರಿಂದ ಪಡೆದನು. ಹೀಗೆ ಆಯುರ್ವೇದ ವಿಜ್ಞಾನವು ದೇವೋತ್ತಮನಿಂದ ಇತರ ದೇವತೆಗಳೆಡೆಗೆ ಹರಿದುಬಂತು.
ಜಗತ್ತಿನ ಜೀವಿಗಳೆಲ್ಲರು ರೋಗಾದಿ ಪೀಡಿತರಾಗಿ ತಪಸ್ಸು, ಉಪವಾಸ, ಅಧ್ಯಯನ, ಬ್ರಹ್ಮಚರ ವ್ರತಗಳಿಗೆ ಭಂಗವುಂಟಾಗತೊಡಗಿತು. ಈ ಸಂದರ್ಭದಲ್ಲಿ – ಅಂಗೀರಸ, ವಸಿಷ್ಟ, ಜಮದಗ್ನಿ, ಭೃಗು, ಆತ್ರೇಯ, ಕಾಶ್ಯಪ, ಗೌತಮ, ಅಗಸ್ತ್ಯ ಶ್ರೀನಾರದ, ಅಸಿತ, ದೇವಲ, ಬಾದರಾಯಣ (ವ್ಯಾಸದೇವ), ಭಾರದ್ವಾಜ, ಮಾರ್ಕಂಡೇಯ, ವಿಶ್ವಾಮಿತ್ರ, ಗಾರ್ಗ್ಯ, ಶಾಂಡಿಲ್ಯ, ಧೌಮ್ಯ, ಮರೀಚ, ಕಶ್ಯಪ, ಮೈತ್ರೇಯ, ತೌವಕ, ವಾಲಖಿಲ್ಯ ಮೊದಲಾದ ಮಹಾಜ್ಞಾನಿಗಳಾಗಿದ್ದ ಋಷಿಗಳು ಒಟ್ಟಿಗೆ ಕಲೆತು, ಜೀವಿಗಳಿಗೆ ಬಂದೊದಗಿದ ದುರ್ಗತಿಯ ನಿವಾರಣೋಪಾಯಗಳ ಕುರಿತು ಈ ಕೆಳಗಿನಂತೆ ಚರ್ಚಿಸಿದರು.
“ರೋಗಗಳ ಕಾರಣದಿಂದ ಆರೋಗ್ಯ ಮಾತ್ರವಲ್ಲ, ಜೀವಿಗಳ ಸುಖಕ್ಕೂ, ಜೀವನಕ್ಕೂ ತೊಂದರೆಯಾಗುತ್ತದೆ. ಇದು ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತದೆ. ಇದರ ಪರಿಹಾರ ಹುಡುಕುವುದು ಹೇಗೆ?”
ಅವರೆಲ್ಲರೂ ಧ್ಯಾನಸ್ಥರಾದರು, ಮತ್ತು ಇಂದ್ರನ ಬಳಿ ರೋಗಗಳನ್ನು ನಿವಾರಿಸುವ ಸುರಕ್ಷೋಪಯವಿದೆ ಎಂಬುದನ್ನು ಕಂಡುಕೊಂಡರು. (ಚ.ಸೂ. 1:15:17)
ಅನಂತರ ಅವರು ತಮ್ಮ ತಮ್ಮಲ್ಲೇ ಸದಾ ಶಚಿದೇವಿಗೆ ಅಂಟಿಕೊಂಡಿರುವ ಇಂದ್ರ ಭಗವಾನನಿಂದ ಆಯುರ್ವೇದದ ಪರಿಪೂರ್ಣ ಜ್ಞಾನವನ್ನು ಯಾರು ಪಡೆಯಬಲ್ಲರು ಎಂದು ಚರ್ಚಿಸಿದರು. ಆಗ ಭಾರದ್ವಾಜ ಮಹರ್ಷಿಯು ತಾನು ಇಂದ್ರನಿಂದ ಜ್ಞಾನ ಸಂಪಾದನೆ ಮಾಡಿಬರುವೆನೆಂದು ಸ್ವ ಇಚ್ಛೆಯಿಂದ ನುಡಿದನು.
ಅವನು ಇಂದ್ರಲೋಕಕ್ಕೆ ಹೋಗಿ, ಆಯುರ್ವೇದದ ಸಂಪೂರ್ಣ ಜ್ಞಾನವನ್ನು ಪಡೆದು ಭೌತಿಕ ಪ್ರಪಂಚದ ಎಲ್ಲ ಋಷಿಗಳಿಗೂ ಅದನ್ನು ಅರುಹಿದನು. ಇದರಿಂದ ಜನರೆಲ್ಲ ಸಂತೋಷಪ್ರದವಾದ ದೀರ್ಘಾಯುವನ್ನು ಅನುಭವಿಸುವಂತಾಯಿತು.
ಹೀಗೆ ಭಾರದ್ವಾಜ ಋಷಿಯಿಂದ ಈ ಜ್ಞಾನವನ್ನು ಪಡೆದವರಲ್ಲಿ ‘ಪುನರ್ವಸು ಆತ್ರೇಯ’ ಎಂಬ ಋಷಿಯೂ ಒಬ್ಬ. ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಇದರ ಸದುಪಯೋಗವಾಗಲೆಂದು ವಿಚಾರದಿಂದ ಈತ ತನ್ನ ಭೇಲ, ಜತೂಕರ್ಣ, ಪರಾಶರ, ಹಾರೀತ, ಕ್ಷಾರಪಾಣಿ ಮತ್ತು ಆಗ್ನಿವೇಶರೆಂಬ ಆರು ಪ್ರಮುಖ ಶಿಷ್ಯರಿಗೆ ಈ ವಿಜ್ಞಾನವನ್ನು ಬೋಧಿಸಿದನು.
ಈ ಶಿಷ್ಯರಲ್ಲಿ ಹೆಚ್ಚು ಚಾಣಾಕ್ಷಮತಿಯಾಗಿದ್ದ. ಅಗ್ನಿವೇಶನು ಆಯುರ್ವೇದದ ಸಂಪೂರ್ಣ ಜ್ಞಾನವನ್ನು ‘ಅಗ್ನಿವೇಶ ಸಂಹಿತೆ’ಯಲ್ಲಿ ಸಂಕಲಿಸಿದನು. ಬಹಳ ಕಾಲದ ಅನಂತರ ಆಚಾರ್ಯ ಚರಕನು ಇದನ್ನು ಪರಿಷ್ಕರಿಸಿದನು. ಅ೦ದಿನಿಂದ ಇದು ‘ಚರಕಸಂಹಿತೆ’ ಎಂದೇ ಖ್ಯಾತವಾಗಿದೆ.
ಸಂಪ್ರದಾಯಗಳು
ಚರಕ ಸಂಹಿತೆಯು ಕಾಯಾಗ್ನಿ (ಜೀರ್ಣಕಾರಕ ಅಗ್ನಿ) ಮತ್ತು ಕಾಯ ಚಿಕಿತ್ಸೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ ಮತ್ತು ಆತ್ರೇಯ ಸಂಪ್ರದಾಯ ಅಥವಾ ಕಾಯಚಿಕಿತ್ಸಾ ಸಂಪ್ರದಾಯದ ವಾಹಕವಾಗಿದೆ. ಹಾಗೆಯೇ, ದಿವೋದಾಸ ಧನ್ವಂತರಿ (ಧನ್ವಂತರಿಯ ಅವತಾರ)ಯಿಂದ ಮತ್ತೊಂದು ಸಂಪ್ರದಾಯವು ಚಿಗುರಿತು. ಇದು ಶಲ್ಯತಂತ್ರಕ್ಕೆ ಅಥವಾ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿದೆ. ಇದು ಶಲ್ಯ ಸಂಪ್ರದಾಯ ಅಥವಾ ಧನ್ವಂತರಿ ಸಂಪ್ರದಾಯವೆಂದು ಕರೆಯಲ್ಪಡುತ್ತದೆ.
ಸುಶ್ರುತ ಸಂಹಿತೆಯು ಈ ಸಂಪ್ರದಾಯದ ಅವತರಣವನ್ನು ಹೀಗೆ ವಿವರಿಸುತ್ತದೆ –
ಆತ್ರೇಯ ಸಂಪ್ರದಾಯ ಧನ್ವಂತರಿ ಸಂಪ್ರದಾಯ
ಕೃಷ್ಣ ಕೃಷ್ಣ (ಧನ್ವಂತರಿ)
ಬ್ರಹ್ಮ ಬಹ್ಮ
ದಕ್ಷ ಪ್ರಜಾಪತಿ ದಕ್ಷ ಪ್ರಜಾಪತಿ
ಅಶ್ವಿನಿ ಕುಮಾರರು ಅಶ್ವಿನಿ ಕುಮಾರರು
ಇಂದ್ರ ದಿವೋದಾಸ ಧನ್ವಂತರೀ
ಭಾರದ್ವಾಜ ಸುಶ್ರುತ
ಆತ್ರೇಯ
ಅಗ್ನಿವೇಶ
ಅಹಮ್ ಓ ಧನ್ವನ್ತರಿಮ್ ಆದಿ ದೇವಮ್
ಜರಾರುಜಾಮೃತ್ಯು ಹರೋ ಅಮರಾಣಾಮ್ |
ಶಲ್ಯಾಙ್ಗಮ್ ಅಙ್ಗೈರ ಪರೈರುಪೇತಮ್
ಪ್ರಾಪೋSಸ್ಮಿಮಾಂಭೂಯ ಇಹೋ ವದೇಷ್ಟುಮ್ || (ಚ.ಸೂ.1)
ದಿವೋ ದಾಸ ಧನ್ವಂತರಿಯು ಹೀಗೆ ಹೇಳಿದನು. – “ನಾನೇ ಆದಿದೇವನಾದ ಧನ್ವಂತರಿಯು, ವೃದ್ಧಾಪ್ಯ, ರೋಗ ಮತ್ತು ಮೃತ್ಯುಗಳಿಂದ ರಕ್ಷಿಸಿ, ದೀರ್ಘಾಯುವನ್ನು ಕರುಣಿಸಲು ಕಾಶೀರಾಜನಾಗಿ ಅವತರಿಸಿದ್ದೇನೆ. ನಾನು ಮಹತ್ತರವಾದ ಈ ಆಯುರ್ವೇದದ ಜ್ಞಾನವನ್ನು ಶಲ್ಯತಂತ್ರದ ಮಹತ್ತಿನ ಮೂಲಕ ವಿವರಿಸುತ್ತೇನೆ.”
ಹೀಗೆ, ಧನ್ವಂತರಿಯು ಈ ವಿಜ್ಞಾನವನ್ನು ತನ್ನ ಶಿಷ್ಯರಾದ ಸುಶ್ರುತ, ಔಪಧೇನವ ಮೊದಲಾದವರಿಗೆ ಹಸ್ತಾಂತರಿಸಿದನು. ಮುಂದೆ ಇದನ್ನು ಸುಶ್ರುತನು ‘ಸುಶ್ರುತ ಸಂಹಿತೆ’ ಯ ಮೂಲಕ ಪ್ರಚುರಪಡಿಸಿದನು.
ಇವರಂತೆಯೇ ಇತರ ಕೆಲವು ಆಚಾರ್ಯರು ಬಾಲರೋಗ, ಗ್ರಹಚಿಕಿತ್ಸೆ ಮೊದಲಾದ ವಿಧಾನಗಳಿಂದ ಚಿಕಿತ್ಸೆಯ ವಿವಿಧ ರೀತಿಗಳಿಗೆ ಒತ್ತು ನೀಡಿ – ಅಷ್ಟಾಂಗ ಸಂಗ್ರಹ ಮತ್ತು ಹೃದಯ (ವಾಗ್ಭಟ ವಿರಚಿತ), ಕಾಶ್ಯಪ ಸಂಹಿತಾ, ಭೇಲ ಸಂಹಿತಾ ಮೊದಲಾದ ಗ್ರಂಥಗಳನ್ನು ರಚಿಸಿದರು.
ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ನಮಗೆ, ಆಯುರ್ವೇದವು ಕೇವಲ ಪರ್ಯಾಯ ವೈದ್ಯವಲ್ಲ, ಇದೊಂದು ಅಲೌಕಿಕ ಜ್ಞಾನನಿಧಿ ಎನ್ನುವುದು ಮನದಟ್ಟಾಗುತ್ತದೆ. ಈ ಜ್ಞಾನವು ಭೌತಿಕ ಜಗತ್ತಿನ ಜೀವಿಗಳ ಆಧ್ಯಾತ್ಮಿಕ ಪ್ರಗತಿಗೆ ದೇವೋತ್ತಮ ಪರಮ ಪುರುಷನಿಂದ ಪರಂಪರಾನುಗತವಾಗಿ ಹರಿದ ಕರುಣಾಪೂರಿತ ಕೊಡುಗೆಯಾಗಿದೆ.






Leave a Reply