ಪಾಣಿಹಾಟಿ ಉತ್ಸವ

ಉತ್ಸವ ವಿಶೇಷ

ಶ್ರೀ ನಿತ್ಯಾನಂದ ಪ್ರಭುಗಳ ಆದೇಶದಂತೆ ಶ್ರೀ ರಘುನಾಥದಾಸ ಗೋಸ್ವಾಮಿಗಳು ಪಾಣಿಹಾಟಿ ಗ್ರಾಮದಲ್ಲಿ ಅವಲಕ್ಕಿ – ಮೊಸರು ಹಂಚುವ ಚಿಡಾದಹಿ ಉತ್ಸವವನ್ನು ಆಚರಿಸಿದರು. ಅಂದಿನಿಂದ ಮೊದಲ್ಗೊಂಡು ಪ್ರತಿವರ್ಷ ಪಾಣಿಹಾಟಿ ಚಿಡಾದಹಿ ಉತ್ಸವವನ್ನು ಆಚರಿಸಲಾಗುತ್ತದೆ. ಜೂನ್ 28ರಂದು ಇಸ್ಕಾನ್ ದೇವಾಲಯದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಒಮ್ಮೆ ಶ್ರೀ ನಿತ್ಯಾನಂದ ಪ್ರಭುಗಳು ಕಲ್ಕತ್ತ ನಗರದ ಉತ್ತರಕ್ಕೆ 10 ಮೈಲು ದೂರದಲ್ಲಿರುವ ಪಾಣಿಹಾಟಿ ಗ್ರಾಮಕ್ಕೆ ತಮ್ಮ ಅನುಚರರೊಂದಿಗೆ ಭೇಟಿ ನೀಡಿದ್ದರು. ಅವರು ಗಂಗಾತಟದಲ್ಲಿ ಮರವೊಂದರ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದಾಗ ರಘುನಾಥದಾಸರು ಅಲ್ಲಿಗೆ ಬಂದರು. ಸಾವಿರ ಸೂರ್ಯರ ತೇಜಸ್ಸಿನಿಂದ ಬೆಳಗುತ್ತಿದ್ದ ಶ್ರೀ ನಿತ್ಯಾನಂದ ಪ್ರಭುಗಳನ್ನು ಕಂಡು ರಘುನಾಥ ದಾಸರು ಮೈಮರೆತರು. ದೂರದಿಂದಲೇ ಉದ್ದಂಡ ನಮಸ್ಕಾರ ಅರ್ಪಿಸಿದರು.

ಇದನ್ನು ನೋಡಿದ ನಿತ್ಯಾನಂದ ಪ್ರಭುಗಳ ಸೇವಕನೊಬ್ಬ ಆತನತ್ತ ಬೊಟ್ಟು ಮಾಡಿ ತೋರಿಸುತ್ತ – ”ಅಲ್ಲಿ ರಘುನಾಥನು ನಿಮಗೆ ಪ್ರಣಾಮ ಸಲ್ಲಿಸುತ್ತಿರುವನು’ ಎಂದು ಹೇಳಿದನು. ಈ ಮಾತನ್ನು ಕೇಳಿದ ಪ್ರಭುಗಳು ರಘುನಾಥರತ್ತ ತಿರುಗಿ, ”ನೀನೊಬ್ಬ ಕಳ್ಳ! ನನ್ನನ್ನು ಕಾಣಲು ಈಗ ಬರುತ್ತಿರುವೆಯಲ್ಲವೇ? ಇಲ್ಲಿ ಬಾ, ಇಂದು ನಾನು ನಿನ್ನ ಶಿಕ್ಷಿಸದೇ ಬಿಡೆನು” ಎಂದೆನ್ನುತ್ತ ಅವನನ್ನು ಕರೆದರು.

ಆದರೆ ರಘುನಾಥರು ನಿತ್ಯಾನಂದರ ಬಳಿ ಹೋಗಲಿಲ್ಲ. ಕೊನೆಗೆ ಪ್ರಭುಗಳೇ ಒತ್ತಾಯಪೂರ್ವಕವಾಗಿ ಆತನನ್ನು ಕರೆಸಿಕೊಂಡರು, ಮತ್ತು ತಮ್ಮ ಪಾದಪದ್ಮಗಳನ್ನು ಅವರ ತಲೆಯ ಮೇಲಿಟ್ಟು ಕೃಪೆದೋರಿದರು. ”ಈಗಿಂದೀಗಲೇ ಉತ್ಸವವನ್ನು ಆಚರಿಸು, ನನ್ನೆಲ್ಲ ಸಹಚರರಿಗೂ ಅವಲಕ್ಕಿ – ಮೊಸರನ್ನು ನೀಡಿ ಸಂತೃಪ್ತಿಗೊಳಿಸು” ಎಂದು ಆದೇಶಿಸಿದರು.

ಇದನ್ನು ಕೇಳಿ ಹರ್ಷಾತಿರೇಕದಿಂದ ರಘುನಾಥರು – ಅವಲಕ್ಕಿ, ಮೊಸರು, ಹಾಲು, ಸಕ್ಕರೆ, ಬಾಳೆಹಣ್ಣು ಮತ್ತಿತರ ಸವಿಮಧುರ ಪದಾರ್ಥಗಳನ್ನು ತರಲು ಧಾವಿಸಿದರು.

ಸುಮಾರು ನಾಲ್ಕುನೂರು ಮಣ್ಣಿನ ಕುಡಿಕೆಗಳಲ್ಲಿ ಅವಲಕ್ಕಿಯನ್ನು ಹಾಲು, ಮೊಸರಿನಲ್ಲಿ ನೆನೆಸಲಾಯಿತು. ಕೊಂಚ ದೊಡ್ಡ ಗಾತ್ರದ ಏಳು ಕುಡಿಕೆಗಳಲ್ಲಿ ಕೆನೆಹಾಲು, ಮೊಸರುಗಳಲ್ಲಿ ನೆನೆಸಿದ ಅವಲಕ್ಕಿಯನ್ನು ರಘುನಾಥರು ಪ್ರಭುಗಳಿಗೆ ಅರ್ಪಿಸಿದರು. ತುಪ್ಪ, ಬಾಳೆಹಣ್ಣು, ಸಕ್ಕರೆಯೊಂದಿಗೆ ಬೆರೆಸಿದ ಅವಲಕ್ಕಿಯ ಖಾದ್ಯಗಳು ಸಿದ್ಧವಾದವು. ಶ್ರೀ ನಿತ್ಯಾನಂದ ಪ್ರಭುಗಳು ವಸ್ತ್ರ ಬದಲಿಸಿ ಬಂದೊಡನೆ ಸಂತರ್ಪಣೆಗೆ ಅಣಿಯಾಯಿತು.

ಎತ್ತರದೊಂದು ವೇದಿಕೆಯ ಮೇಲೆ ಪ್ರಭುಗಳು ಮತ್ತವರ ಆಪ್ತ ಸಹಚರರು ಆಸೀನರಾಗಿದ್ದರು. ಅಲ್ಲಿ ಸ್ಥಳ ಸಾಲದಾದಾಗ ಎಲ್ಲರೂ ಪ್ರಭುಗಳು ಕುಳಿತಿದ ಮರದ ಸುತ್ತ ಅಂಗಳದಲ್ಲಿ ನೆರೆದರು. ಕೊಂಚ ಹೊತ್ತಿನಲ್ಲಿಯೇ ಅದೂ ತುಂಬಿ, ಜನರು ಗಂಗೆಯಲ್ಲಿ ನಿಂತು ಪ್ರಸಾದ ಸವಿಯತೊಡಗಿದರು! ಹೀಗೆ ಉತ್ಸವದ ಸಡಗರದಲ್ಲಿ ಸೇರ್ಪಡೆಯಾದ ಜನರಿಗೆ ಲೆಕ್ಕವಿಲ್ಲ. ಅಕ್ಷರಶಃ ಅಲ್ಲಿ ನೆರೆದಿದ್ದ ಜನಜಾತ್ರೆಯನ್ನು ಯಾರಿಂದಲೂ ಗಣಿಸಲಾಗಲಿಲ್ಲ!

ಉತ್ಸವದ ಸುದ್ದಿ ಕೇಳುತ್ತಲೇ ಊರಿನ ವಿದ್ವಾಂಸರು, ಬ್ರಾಹ್ಮಣರು, ಪ್ರಮುಖರು ಅಲ್ಲಿ ಸೇರಿದರು. ಅವರು ನಿತ್ಯಾನಂದಪ್ರಭುಗಳ ಲೀಲೆಯಲ್ಲಿ ಭಾಗಿಯಾದರು. ಊರಿನ, ನೆರೆಯೂರಿನ ವ್ಯಾಪಾರಿಗಳು ತಮ್ಮ ಸಂಗ್ರಹದಲ್ಲಿದ್ದ ಅವಲಕ್ಕಿ, ಸಕ್ಕರೆ, ಬಾಳೆಹಣ್ಣುಗಳನ್ನು ಅಲ್ಲಿಗೆ ತಂದರು. ರಘುನಾಥರು ಅವೆಲ್ಲವನ್ನು ಕೊಂಡು ಮತ್ತೆ ಖಾದ್ಯವನ್ನು ತಯಾರಿಸಿ ವಿತರಣೆಗೆ ತೊಡಗಿದರು. ವ್ಯಾಪಾರಿಗಳು ತಮಗೆ ದೊರೆತ ಲಾಭದಿಂದಲೂ, ಪ್ರಭುಗಳ ದರ್ಶನ, ಪ್ರಸಾದ ಸ್ವೀಕಾರದಿಂದಲೂ ಸಂತುಷ್ಟರಾದರು.

ನಿತ್ಯಾನಂದ ಪ್ರಭುಗಳು ಧ್ಯಾನದ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಆ ಸ್ಥಳಕ್ಕೆ ಕರೆಸಿಕೊಂಡರು. ಅವರ ಕೈ ಹಿಡಿದು ಜನರ ಗುಂಪಿನಲ್ಲಿ ಸಂಚರಿಸುತ್ತಾ, ಪ್ರತಿಯೊಬ್ಬ ಭಕ್ತರ ಕುಡಿಕೆಯಿಂದ ಅವಲಕ್ಕಿಯನ್ನು ತೆಗೆದು ಮಹಾಪ್ರಭುಗಳ ಬಾಯಿಗೆ ಸೋಕಿಸುತ್ತ, ಅದನ್ನು ಪವಿತ್ರಗೊಳಿಸಿದರು.

ಸುತ್ತ ನೆರೆದ ವೈಷ್ಣವರೆಲ್ಲರೂ ಈ ಸಂತೋಷಮಯ ಸನ್ನಿವೇಶದ ವಿನೋದವನ್ನು ಮನದಣಿಯೆ ಅನುಭವಿಸಿದರು. ಅಲ್ಲಿ ನೆರೆದವರಲ್ಲಿ ಕೆಲವು ಶುದ್ಧ ಭಕ್ತರು, ಶ್ರೀ ನಿತ್ಯಾನಂದರೊಡನೆ ಶ್ರೀ ಚೈತನ್ಯ ಮಹಾಪ್ರಭುಗಳೂ ಇರುವುದನ್ನು ಕಂಡರು. ಮಹಾಪ್ರಭುಗಳ ದರ್ಶನದಿಂದ ಧನ್ಯತೆ ಅನುಭವಿಸಿದರು.

ಹೀಗೆ ಅಲ್ಲಿ ನೆರೆದವರೆಲ್ಲರೂ ಆನಂದಾತಿಶಯದಿಂದ ಅವಲಕ್ಕಿ, ಮೊಸರು ಸವಿಯುತ್ತಿರಲು, ರಾಘವ ಪಂಡಿತರು ಅಲ್ಲಿಗೆ ಬಂದರು. ಅಲ್ಲಿ ನಡೆಯುತ್ತಿದ್ದ ಉತ್ಸವದಿಂದ ಚಕಿತರಾದರು. ಅವರು ನಿತ್ಯಾನಂದ ಪ್ರಭುಗಳಿಗಾಗಿ ಅಡುಗೆ ಸಿದ್ಧಪಡಿಸಿ, ಅದನ್ನು ದೇವರಿಗೆ ನೈವೇದ್ಯ ಮಾಡಿ, ಪ್ರಭುಗಳ ಆಗಮನಕ್ಕಾಗಿ ಕಾಯುತ್ತಿದ್ದರು.

ನಿತ್ಯಾನಂದ ಪ್ರಭುಗಳು ಅವರನ್ನು ಕುರಿತು, “ನಾನು ಗೊಲ್ಲರ ಬಳಗಕ್ಕೆ ಸೇರಿದವನು. ಇಲ್ಲಿ ನನ್ನ ಬಹಳಷ್ಟು ಗೊಲ್ಲ ಸಹಚರರು ಸೇರಿದ್ದಾರೆ. ಹೀಗೆ ನದಿಯ ದಡದಲ್ಲಿ ಅವರೊಡನೆ ಕಲೆತು ಆಹಾರ ಸೇವಿಸುವ ಮೋಜನ್ನು ನಾನು ಅನುಭವಿಸ ಬಯಸುತ್ತೇನೆ. ನಿನ್ನ ಮನೆಗೆ ರಾತ್ರಿಯ ಊಟಕ್ಕೆ ಬರುವೆ” ಎಂದು ಹೇಳುತ್ತಾ, ಆತನಿಗೂ ಅವಲಕ್ಕಿ-ಮೊಸರಿನ ಪ್ರಸಾದವನ್ನು ನೀಡಿದರು.

ಕೃಷ್ಣ ಬಲರಾಮರು ಗೊಲ್ಲಬಾಲರೊಡಗೂಡಿ ಯಮುನೆಯ ತೀರದಲ್ಲಿ ಭೋಜನ ಸವಿಯುತ್ತಿದ್ದ ದೃಶ್ಯವನ್ನು ನೆನೆಸುವಂತಿತ್ತು ಆ ಉತ್ಸವ. ಇದೇ ವೇಳೆಗೆ ಶ್ರೀ ನಿತ್ಯಾನಂದರು ಅವರೆಲ್ಲರಿಗೂ, “ಹರಿ ಹರಿ” ಎನ್ನುವ ಪವಿತ್ರ ನಾಮ ಜಪಿಸುತ್ತ ಪ್ರಸಾದ ಸ್ವೀಕರಿಸುವಂತೆ ಹೇಳಿದರು. ಅಂತೆಯೇ ಅವರೆಲ್ಲರೂ ”ಹರಿ ಹರಿ” ಎನ್ನುತ್ತಿರಲು, ಆ ಸಮೂಹ ಧ್ವನಿ ವಿಸ್ತರಿಸುತ್ತ, ಕ್ರಮೇಣ ಇಡಿಯ ವಿಶ್ವವನ್ನು ಆವರಿಸಿಬಿಟ್ಟಿತು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi