– ಸಂಗ್ರಹಾನುವಾದ: ಚೇತನಾ ತೀರ್ಥಹಳ್ಳಿ, ಆಧಾರ: ರಾಮಾಯಣ ದೇವಸ್ಥಾನಗಳು, ಮೂಲ ಲೇಖಕ : ಸೀತಾರಾಮ್ ಗುರುಮೂರ್ತಿ
ಭಗವಾನ್ ಮಹಾವಿಷ್ಣುವಿನ ದಶಾವತಾರಗಳಲ್ಲಿ ಸಪ್ತಮಾವತಾರವೇ ಶ್ರೀರಾಮಾವತಾರ. ಪಿತೃವಾಕ್ಯ ಪರಿಪಾಲಕನಾಗಿ, ರಾವಣಸಂಹಾರಿಯಾಗಿ, ಮರ್ಯಾದಾ ಪುರುಷೋತ್ತಮನಾಗಿ ಶ್ರೀರಾಮ ಸ್ಮರಿಸಲ್ಪಡುತ್ತಾನೆ, ಪೂಜಿಸಲ್ಪಡುತ್ತಾನೆ. ದಶರಥಸುತ ರಾಮ, ಚಿಕ್ಕಮ್ಮ ಕೈಕೇಯಿಯ ಬಯಕೆಯಂತೆ, ತಂದೆ ಆಕೆಗೆ ಇತ್ತಿದ್ದ ವಚನವನ್ನು ನೆರವೇರಿಸಲಿಕ್ಕಾಗಿ ಹದಿನಾಲ್ಕು ವರ್ಷಗಳ ಕಾಲ ವನವಾಸಿಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಹೀಗೆ ವನವಾಸಕ್ಕೆಂದು ಅಯೋಧ್ಯೆಯಿಂದ ಹೊರಟ ಶ್ರೀರಾಮ ಯಾವ ಯಾವ ಪ್ರದೇಶಗಳಲ್ಲಿ ಸಂಚರಿಸಿದ? ಸೀತಾ, ಲಕ್ಷ್ಮಣರ ಸಹಿತ ರಾಮ ಪಂಚವಟಿಯವರೆಗೆ ಹೇಗೆ ಬಂದ? ಸೀತೆಯನ್ನು ಅರಸುತ್ತ ಕಿಷ್ಕಂಧೆಗೆ ಯಾವ ಮಾರ್ಗದ ಮೂಲಕ ತಲಪಿದ? ಲಂಕೆಗೆ ಹೋಗಲು ಬಳಸಿದ ದಾರಿ ಯಾವುದು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವುದೇ ‘ರಾಮಪಥ’ದ ಉದ್ದೇಶ. ಈ ಲೇಖನಮಾಲೆಯಲ್ಲಿ ಶ್ರೀರಾಮ ಚರಣಗಳಿಂದ ಪುನೀತವಾದ ಪುಣ್ಯಭೂಮಿಗಳ ವಿವರಣೆಯನ್ನು ಅಯೋಧ್ಯೆಯಿಂದ ಲಂಕೆಯವರೆಗೆ ಕ್ರಮಿಸಿದ ಮಾರ್ಗವನ್ನು ಪರಿಚಯಿಸುವ ಯತ್ನ ಮಾಡಲಾಗಿದೆ.
ರಾಮನ ಕಥೆ ಗೊತ್ತಿಲ್ಲದವರಿಲ್ಲ. ಅಯೋಧ್ಯೆಯ ರಾಜ ದಶರಥ ಪುತ್ರಾಕಾಂಕ್ಷಿಯಾಗಿ ಪುತ್ರಕಾಮೇಷ್ಟಿಯಾಗ ನಡೆಸಿದ್ದು, ತತ್ಫಲವಾಗಿ ರಾಮ, ಭರತ, ಲಕ್ಷಣ, ಶತ್ರುಘ್ನರು ಜನಿಸಿದ್ದು, ಪೂರ್ಣಚಂದ್ರನಂತೆ ಬೆಳೆದು ನಿಂತ ರಾಮನಿಗೆ ದಶರಥ ಪಟ್ಟಾಭಿಷೇಕ ನಿಶ್ಚಯಿಸಿದ್ದು, ಕೈಕೇಯಿಯ ಅಡ್ಡಿ, ವನವಾಸದ ಕರಾರು – ಇವೆಲ್ಲವೂ ಪ್ರತಿಯೊಬ್ಬ ಸುಸಂಸ್ಕೃತನಿಗೂ ಬಾಯಿಪಾಠ.
ಭಾರತ ಮಾತ್ರವಲ್ಲ, ಮಲೇಷಿಯಾ, ಇಂಡೋನೇಷಿಯಾ, ಕಾಂಬೋಡಿಯಾ, ಬಾಲಿ, ಚೀನಾ, ಮಲಯಾ, ಲಂಕಾ, ನೇಪಾಳ, ಮಯನ್ಮಾರ್ ಮೊದಲಾದ ದೇಶಗಳಲ್ಲೂ ಶ್ರೀರಾಮ ಕಥೆ ಚಿರಪರಿಚಿತ. ಆಯಾದೇಶಗಳಲ್ಲಿ ಅವರವರ ಭಾಷೋಚ್ಚಾರಕ್ಕೆ ತಕ್ಕಂತೆ ರಾಮನಿಗೆ ಬೇರೆ ಬೇರೆ ಹೆಸರುಗಳಿವೆ. ಉಚ್ಚಾರಣೆ ಬದಲಾದರೂ ‘ರಾಮನಾಮ’ದ ಮಹತ್ವ ಕುಂದುವುದಿಲ್ಲ.
ರಾಮನಾಮದ ಮಹತ್ತ್ವವನ್ನು ಶಿವ, ಪಾರ್ವತಿಗೆ ಹೀಗೆ ವಿವರಿಸಿದ್ದಾನೆ:
ರಾಮ ರಾಮೇತಿ ರಾಮೇತಿ ರಮೋ ರಾಮ್ ಮನೋರಮೇ|
ಸಹಸ್ರನಾಮ ತತ್ತುಲ್ಯಮ್ ರಾಮನಾಮ ವರಾನನೇ ||
‘ರಾಮ’ ಎನ್ನುವ ಒಂದು ಹೆಸರು ಮಹಾವಿಷ್ಣುವಿನ ಇತರ ಸಾವಿರ ಹೆಸರುಗಳಿಗೆ ಸಮನಾಗಿದೆ. ಅದು ನೀಡುವ ಪುಣ್ಯವನ್ನು ರಾಮನಾಮವೊಂದೇ ಕೊಡುತ್ತದೆ! ಆದರೆ ಕೆಲವು ಸಂಶೋಧಕರು, ತಮ್ಮನ್ನು ತಾವು ಇತಿಹಾಸಕಾರರೆಂದು ಕರೆದುಕೊಳ್ಳುವವರು; ‘ರಾಮ ಒಬ್ಬ ಸಾಮಾನ್ಯ ರಾಜ, ಅವನೆಂದೂ ಮಧ್ಯಪ್ರದೇಶದ ಗಡಿಯನ್ನೇ ದಾಟಿರಲಿಲ್ಲ.
ರಾಮಾಯಣದ ಕಥಾನಕಗಳು ಪಾಶ್ಚಾತ್ಯ ಸಾಹಿತ್ಯದ ಕಲ್ಪನೆಗಳಿಂದ ಎರವಲು ಪಡೆದವು” ಎಂದು ಹೇಳುತ್ತಾರೆ. ಮಹಾವಿದ್ವಾಂಸರೆನಿಸಿಕೊಂಡ ಡಾ. ಸುನೀತಿಕುಮಾರ ಚಟರ್ಜಿಯವರಂತೂ, ರಾಮಾಯಣ ಕೃತಿ ರಚನೆಯಾಗಿದ್ದು ಕ್ರಿ.ಪೂ. 500ರ ವೇಳೆಗೆ ಎನ್ನುತ್ತಾರೆ. ಅಲ್ಲದೇ, ರಾಮಾಯಣ ಕಥೆ ವಾಲ್ಮೀಕಿಯದಲ್ಲ, ಬೌದ್ಧಸಾಹಿತ್ಯದ ‘ದಶರಥ ಜಾತಕ’ ದ್ದು ಎನ್ನುತ್ತಾರೆ. ಅವರ ಪ್ರಕಾರ, ಸೀತಾಪಹರಣ ಸನ್ನಿವೇಶ ರಚನೆಗೆ ಸ್ಫೂರ್ತಿ ದೊರೆತಿದ್ದು – ಹೋಮರನ ಕೃತಿಗಳಿಂದ!
ರಾಮಾಯಣ ಕೇವಲ ಕಾಲ್ಪನಿಕ ಕಥೆಯೋ ಎಂದಾದರೆ ಅದು ಭಾರತದಾಚೆಗೂ ವಿಸ್ತರಿಸಿ, ಅದರ ನಾಯಕ ಅಲ್ಲಿನ ಸಂಸ್ಕೃತಿಯ ಒಂದು ಭಾಗವಾಗಲು ಸಾಧ್ಯವಾಗಿದ್ದು ಹೇಗೆ? ವಿಶ್ವದ ಇನ್ನಾವ ಪ್ರಸಿದ್ಧ ಕೃತಿಯ ಪಾತ್ರವೂ ಈ ಪರಿಯ ಮನ್ನಣೆ ಪಡೆಯಲು ಸಾಧ್ಯವಾಗದಿರುವಾಗ, ರಾಮ ಮಾತ್ರ ಎಲ್ಲೆಡೆಗಳಲ್ಲಿ ಪೂಜಾರ್ಹನಾಗಿದ್ದು ಹೇಗೆ? ಈ ಪ್ರಶ್ನೆಗಳೇ ಸಾಕು, ರಾಮಾಯಣ ಸತ್ಯಘಟನೆಗಳ ಚಾರಿತ್ರಿಕ ಕೃತಿ ಎನ್ನುವುದಕ್ಕೆ.
ಥಾಯ್ ಲ್ಯಾಂಡ್ ಇಸ್ಲಾಂ ಬಹುಸಂಖ್ಯಾತರಾಗಿದ್ದೂ ಬಹುತೇಕ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ರಾಷ್ಟ್ರ. ಅಲ್ಲಿ ಉತ್ತುಂಗನೆಂಬ ದೊರೆ (ಯು-ಥಾಂಗ್) 1344ರ ಸುಮಾರಿನಲ್ಲಿ ನಾಂಗ್ ಸಾನೋ ಎಂಬ ಪ್ರಾಂತ್ಯವನ್ನು ಆಳುತ್ತಿದ್ದ. ಅವನು ಶ್ರೀರಾಮನ ಬಹುದೊಡ್ಡ ಭಕ್ತ. ಅದರಿಂದಾಗಿಯೇ ತನ್ನ ರಾಜಧಾನಿಗೆ ಆಯೋಧ್ಯಾ (ಅಯೋಥ್ಯಾ) ಎಂದು ಹೆಸರಿಟ್ಟ, ತನ್ನ ಹೆಸರಿನ ಮುಂದೆ ರಾಮಾಥಿಬೋದಿ – ಅಂದರೆ ಶ್ರೀರಾಮನ ಸಾಮ್ರಾಜ್ಯದ ಸಾಮಂತ – ಎಂದು ಸೇರಿಸಿಕೊಂಡು!
ಥಾಯ್ಲ್ಯಾಂಡ್ನಲ್ಲಿ 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಾಮ-ಸೀತೆಯರ ದೇವಾಲಯಗಳಿವೆ.

ಪ್ರೊ. ಕನುಗಾ ಅವರು ರೋಮ್ ಸಂಗ್ರಹಾಲಯದಲ್ಲಿರುವ ರಾಮನ ಕಾಲದ ನಾಣ್ಯಗಳು, ಲಂಕೆಯಲ್ಲಿ ನಡೆದ ಯುದ್ಧದ ಅವಶೇಷಗಳತ್ತ ಬೊಟ್ಟು ಮಾಡುತ್ತಾರೆ. ಶ್ರೀಲಂಕೆಯಲ್ಲಿ ಇಂದಿಗೂ ರಾಮ-ರಾವಣರ ಯುದ್ಧದ ಪಳೆಯುಳಿಕೆಗಳು ಉತ್ಖನನ ಸಂದರ್ಭದಲ್ಲಿ ದೊರೆಯುತ್ತದೆ ಎಂದು ಭೂಗರ್ಭಶಾಸ್ತ್ರ ಇಲಾಖೆ ಹೇಳುತ್ತದೆ.
ನಾಸಾ ತೆಗೆದ ಉಪಗ್ರಹ ಚಿತ್ರಗಳಲ್ಲಿ ಭಾರತದ ತುತ್ತತುದಿಯಿಂದ ಲಂಕೆಯವರೆಗೆ ಬೆಸೆದುಕೊಂಡಿರುವ ‘ರಾಮಸೇತು’ ಸಷ್ಟವಾಗಿ ಗೋಚರವಾಗುತ್ತದೆ. ಮತ್ತು ಇದು ನೈಸರ್ಗಿಕವಾಗಿ ನಿರ್ಮಾಣಗೊಂಡ ರಚನೆಯಲ್ಲ ಎಂಬುದೂ ವಿಜ್ಞಾನಿಗಳಿಂದ ಸಾಬೀತಾಗಿದೆ.
ರಾಮಾಯಣದ ಕಥೆಗೆ ತಾಳೆ ಹಾಕಿದಾಗ, ರಾಮಸೇತುವಿನ ರಚನೆಗೆ ಶ್ರೀರಾಮನೇ ಪ್ರೇರಣೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಶ್ರೀರಾಮ, ಮಧ್ಯಪ್ರದೇಶವನ್ನೂ ದಾಟಿರಲಿಲ್ಲ ಎಂದು ಮೊಂಡುವಾದ ಹೂಡುವವರಿಗಂತೂ ಈ ಪುರಾವೆಗಳು ಚಾಟಿ ಏಟಿನಂತೆ ಉತ್ತರಿಸುತ್ತವೆ!
ರಾಮಕಥೆಯ ಸ್ಥಳಗಳು
ಶ್ರೀರಾಮ ಜನಿಸಿದ್ದು ಸುಪ್ರಸಿದ್ಧ ಇಕ್ಷ್ವಾಕುವಿನ ಕುಲದಲ್ಲಿ. ಈ ವಂಶದ ಮೂಲ ಪುರುಷ ಸ್ವಾಯಂಭುವ ಮನು, ಸರಯೂ ತೀರದ ಅಯೋಧ್ಯೆ ಮನುವಿನ ಶ್ರೀರಾಮನು ಉತ್ತರ ಪ್ರದೇಶದ ಆಯೋಧ್ಯೆಯಿಂದ ಹೊರಟು ಉತ್ತರ ಪ್ರದೇಶ ರಾಜಧಾನಿ.
ಮನುವಿನ ಸಾಮ್ರಾಜ್ಯದ ಎಲ್ಲೆಗಳು – ವಿದೇಹ (ನೇಪಾಳ), ಚಿನ್ (ಚೀನಾ), ತಿಬಾಟ (ಟಿಬೆಟ್), ಗಾಂಧಾರ (ಅಫ್ಘಾನಿಸ್ಥಾನ್), ಇರಾನ್, ಅರೇಬಿಯಾದ ಗಡಿ, ಸುವರ್ಣಭೂಮಿ (ಮಾಯನ್ಮಾರ್), ಅಂಗೊರ್ ವಾಟ್ (ಥಾಯ್ಲ್ಯಾಂಡ್), ಕಾಂಬೋಜ (ಕಾಂಬೋಡಿಯಾ), ಸುವರ್ಣ ದ್ವೀಪ (ಮಲೇಷಿಯಾ), ಬೋರೋಬಂದರ್ (ಇಂಡೋನೇಷ್ಯಾ), ಸಿಂಹಳ (ಶ್ರೀಲಂಕಾ) ಹತ್ತು ಭಾರತದೊಳಗೆ ಕರ್ನಾಟಕ.
ಮನುವಿನಿಂದ ಆರಂಭಗೊಂಡ ಈ ವಂಶ ಸೂರ್ಯವಂಶವೆಂದೇ ಖ್ಯಾತ. ರಘು, ದಿಲೀಪ, ದಶರಥರಂತಹ ರಾಜರು ಈ ವಂಶದ ಪ್ರಖ್ಯಾತ ಅರಸರು. ದಶರಥ ಮಹಾರಾಜನ ಹಿರಿಯ ಪತ್ನಿಯ ಪುತ್ರನೇ ಶ್ರೀರಾಮ. ರಾಮ ಜನಿಸಿದ್ದು ಅಯೋಧ್ಯೆಯಲ್ಲಿ. ಅಯೋಧ್ಯೆ – ಇಂದಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ. ರಾಜಧಾನಿ ದೆಹಲಿಯಿಂದ 645 ಕಿ.ಮೀ. ದೂರದಲ್ಲಿರುವ ಅಯೋಧ್ಯೆ, ಭರತವರ್ಷದ ಸಪ್ತ ಪುಣ್ಯಧಾಮಗಳಲ್ಲೊಂದು.
ವಿಶ್ವಾಮಿತ್ರನೊಡನೆ ರಾಕ್ಷಸ ಸಂಹಾರಕ್ಕೆ ಹೊರಟ ರಾಮಲಕ್ಷ್ಮಣರು ತಾಟಕಿಯ ವಧೆಯ ಅನಂತರ ಮಹರ್ಷಿಗಳೊಡನೆ ವಿದೇಹಕ್ಕೆ ತೆರಳಿದರು. ವಿದೇಹದ ರಾಜಧಾನಿ ಮಿಥಿಲಾ. ಇದು ಜನಕ ಮಹಾರಾಜನ ರಾಜ್ಯ. ಸೀತೆ, ಜನಕನ ಮಗಳು, ಶ್ರೀ ರಾಮ ಶಿವಧನುಸ್ಸು ಮುರಿದು ಜಾನಕಿಯನ್ನು ಮದುವೆಯಾಗಿದ್ದು ಮಿಥಿಲೆಯಲ್ಲೇ.
ಈ ಪ್ರದೇಶ ಈಗ ನೇಪಾಳ ದೇಶದ ವ್ಯಾಪ್ತಿಗೆ ಬರುತ್ತದೆ. ವನವಾಸಕ್ಕೆ ಹೊರಟ ರಾಮ ಕ್ರಮಿಸಿದ ಮಾರ್ಗವನ್ನು ಆಧರಿಸಿ ಅಮೆರಿಕ ಸಿರಾಕಸ್ ವಿಶ್ವವಿದ್ಯಾಲಯದ ಪ್ರೊ. ಎಚ್. ಡೇನಿಯಲ್ ಸ್ಮಿತ್ ಅವರು ಒಂದು ನಕಾಶ ತಯಾರಿಸಿದ್ದಾರೆ.
ಆದರೆ, ದೇಶದುದ್ದಕ್ಕೂ ಹರಡಿಕೊಂಡಿರುವ ರಾಮಾಯಣದ ಘಟನೆಗಳಿಗೆ ತಾಳೆಯಾಗಿರುವ ಕೆಲವು ದೇವಾಲಯಗಳನ್ನು ಗಮನಿಸಿದಾಗ, ರಾಮಕ್ರಮಿಸಿದ ಮಾರ್ಗದ ನಕಾಶೆ ಬೇರೆಯದೇ ರೀತಿಯದ್ದಾಗಿರುತ್ತದೆ ಈ ಮಾರ್ಗ ನಕ್ಷೆಯ ಆಧಾರದ ಮೇಲೆ ಯೋಚಿಸಿದರೆ, ಸೀತಾ, ಲಕ್ಷ್ಮಣ ಸಹಿತವಾದ ಶ್ರೀರಾಮನ ಉತ್ತರ ಪ್ರದೇಶದ ಅಯೋಧ್ಯೆಯಿಂದ ಹೊರಟು ಉತ್ತರ ಪ್ರದೇಶ – ಮಧ್ಯಪ್ರದೇಶಗಳ ಗಡಿಯಲ್ಲಿರುವ ಚಿತ್ರಕೂಟಕ್ಕೆ ಬಂದುದು ತಿಳಿಯುತ್ತದೆ.

ಚಿತ್ರಕೂಟದಿಂದ ಶ್ರೀರಾಮ ಹೊರಟಿದ್ದು ದಂಡಕಾರಣ್ಯಕ್ಕೆ. ಅಲ್ಲಿಂದ ಮಹಾರಾಷ್ಟ್ರದ ಪಂಚವೃಕ್ಷ ಕ್ಷೇತ್ರಕ್ಕೆ. ಶೂರ್ಪನಖಿ ಮೂಗು ಕೊಯ್ಯಿಸಿಕೊಂಡಿದ್ದು ಇಲ್ಲೇ ಆದ್ದರಿಂದ ಈ ಸ್ಥಳಕ್ಕೆ “ನಾಸಿಕ್” ಎಂದೂ ಹೆಸರಿದೆ. ರಾಮ, ಸೀತೆ, ಲಕ್ಷ್ಮಣರು ಪಂಚವೃಕ್ಷದಲ್ಲಿ ಹತ್ತು ವರ್ಷಗಳ ಕಾಲ ನೆಲೆ ನಿಂತಿದ್ದರೆಂದು ಹೇಳಲಾಗುತ್ತದೆ. ಆದ್ದರಿಂದಲೇ, ನಾಸಿಕ್ ಸುತ್ತಮುತ್ತ ರಾಮಕುಂಡ, ಲಕ್ಷ್ಮಣಕುಂಡ, ರಾಮಕುಟಿ, ಲಕ್ಷ್ಮಣಕುಟಿ ಇತ್ಯಾದಿ ಪುಣ್ಯಸ್ಥಳಗಳು ಹೇರಳವಾಗಿ ದೊರೆಯುತ್ತವೆ.
ನಾಸಿಕ್ ನಿಂದ ಹೊರಟ ರಾಮ ಪರಿವಾರ ಸೇರಿದ್ದು ಆಂಧ್ರಪ್ರದೇಶದ, ಗೋದಾವರಿ ತೀರದ ಭದ್ರಾಚಲಮ್ ಅನ್ನು. ಇಲ್ಲಿ ಭಕ್ತರಾಮದಾಸರು ರಾಮನ ಭೇಟಿಯ ನೆನಪಿಗಾಗಿ ಬಹಮನಿ ಸುಲ್ತಾನರ ಆಡಳಿತ ಕಾಲದಲ್ಲಿ ನಿರ್ಮಿಸಿದ ದೇಗುಲವಿದೆ.
ಭದ್ರಾಚಲಮ್ನಿಂದ ದಕ್ಷಿಣದತ್ತ ಹೊರಟ ಇವರು ಪಂಚವಟಿಯಲ್ಲಿ ನೆಲೆಸಿದರು. ಇದು ಗೋದಾವರಿಯು ಬಂಗಾಳಕೊಲ್ಲಿಯನ್ನು ಸೇರುವ ಯಾನಮ್ ಎನ್ನುವ ಪ್ರಾಂತ್ಯದಲ್ಲಿದೆ. ಇದೀಗ ಪಾಂಡಿಚರಿ ಕೇಂದ್ರಾಡಳಿತ ಪ್ರದೇಶದ ಒಂದು ಭಾಗ. ಈ ಸ್ಥಳವನ್ನು ‘ರಾಮಚಂದ್ರಪುರ’ ಎಂದೂ ಕರೆಯಲಾಗುತ್ತದೆ. ಸೀತಾದೇವಿಯನ್ನು ರಾವಣಾಸುರ ಅಪಹರಿಸಿದ್ದು ಇಲ್ಲೇ.
ಸೀತೆಯನ್ನರಸುತ್ತ ರಾಮಲಕ್ಷ್ಮಣರು ಹೊರಟಿದ್ದು ತಮಿಳುನಾಡಿನ ಕಡೆಗೆ. ದೇವಿಯ ತಲೆಯಿಂದ ಉದುರಿಬಿದ್ದ ಹೂಗಳು ಅವರಿಗೆ ದಾರಿ ತೋರಿದವು. ಹೀಗೆ ಹೂಗಳು ಬಿದ್ದ ಸ್ಥಳವೇ ಪೂವಿಜುಂತಾನಲ್ಲೂರ್. ಇದು ಚಿದಂಬರಮ್ ಬಳಿ ಇದೆ. ಅಲ್ಲಿಂದ ಮುಂದೆ ಸಾಗಿದ ಅವರು ಜಟಾಯುವು (ರಣಹದ್ದು – ದಶರಥನ ಮಿತ್ರ) ಕೊನೆಯುಸಿರೆಳೆಯುತ್ತಿದ್ದ ಉಮಾಯಲ್ ಪುರಮ್ ಗೆ ಬಂದರು.
ಸೀತೆಯನ್ನು ರಾವಣ ಹೊತ್ತುಕೊಂಡು ಹೋದುದನ್ನು, ತಡೆಯ ಹೋದ ತನಗೆ ರಾವಣ ಒದಗಿಸಿದ ಸ್ಥಿತಿಯನ್ನು ಅರುಹಿ, ಜಟಾಯು ಮರಣಹೊಂದಿತು. ಈ ನೆನಪಿಗಾಗಿ ಉಮಾಯಲ್ ಪುರಮ್ ನಲ್ಲಿ ಜಟಾಯುವಿನ ಮಂದಿರಗಳನ್ನು ಸ್ಥಾಪಿಸಲಾಗಿದೆ. ಈ ಮಂದಿರಗಳನ್ನು ಪುಲ್ಲಭೂತನ ಗುಡಿ (ಹಕ್ಕಿ ತೀರಿಕೊಂಡ ಜಾಗ) ಎಂದು ಕರೆಯುತ್ತಾನೆ.
ಶ್ರೀರಾಮ ಜಟಾಯುವಿನ ಅಂತ್ಯ ಸಂಸ್ಕಾರ ಮಾಡುವುದು ಸಿರ್ಕಾಲಿ ಮತ್ತು ಮಯಿಲಾದುತುರೈ ನಡುವೆ ಇರುವ ವೈದೀಶ್ವರನ್ ಕೋಯಿಲ್ನಲ್ಲಿ. ಇದು ಉಮಾಯಲ್ ಪುರಮ್ ನಿಂದ 60 ಕಿ.ಮೀ. ದೂರದಲ್ಲಿದೆ. ಕೇರಳದ ತ್ರಿಶ್ಯೂರ್ನಲ್ಲಿರುವ ಶ್ರೀರಾಮನ ವಡಕುಂತಾರ್ ಮತ್ತು ಗುರುವಾಯೂರಿನಿಂದ 20 ಕಿ.ಮೀ.ದೂರದಲ್ಲಿರುವ ತಿಪ್ರಾಯರ್ ದೇವಾಲಯಗಳಿಂದ ರಾಮಲಕ್ಷ್ಮಣರು ಕೇರಳದ ಪಶ್ಚಿಮ ಘಟ್ಟಗಳಲ್ಲಿ ಸೀತೆಗಾಗಿ ಹುಡುಕಾಟ ನಡೆಸಿದ್ದು ಖಚಿತವಾಗುತ್ತದೆ.
ಅಲ್ಲದೆ, ಗುರುವಾಯೂರು ಮತ್ತು ತ್ರಿಶೂರುಗಳ ಆಸುಪಾಸಿನಲ್ಲಿ ಶ್ರೀರಾಮನಿಗಾಗಿ ತಿರುವೆಲ್ಲಾಮಲೈನಲ್ಲಿ, ಲಕ್ಷ್ಮಣನಿಗಾಗಿ ಮಾರಿಕುಲಮ್ನಲ್ಲಿ, ಭರತನಿಗಾಗಿ ಕೂಡಲಮಾಣಿಕದಲ್ಲಿ ಶತ್ರುಘ್ನನಿಗಾಗಿ ಕಡತುರುತಿಯಲ್ಲಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ಪ್ರತಿಯೊಂದಕ್ಕೂ, ಐತಿಹಾಸಿಕ ಹಿನ್ನೆಲೆಯಿದ್ದು, ಮಹತ್ತ್ವದ ತಾಣವಾಗಿದೆ.
ಪಂಪಾನದಿಯನ್ನು ದಾಟಿದ ಸಹೋದರರು ಶಬರಿಯ ಆತಿಥ್ಯ ಸ್ವೀಕರಿಸಿ, ಆಕೆಯ ನಿರ್ದೇಶನದ ಮೇರೆಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ಕಿಷ್ಕಂಧೆಯತ್ತ ಹೊರಟರು. ಇದು ಸುಪ್ರಸಿದ್ಧ ಚಾರಿತ್ರಿಕ ಸ್ಥಳ. ಇದು ಹಂಪಿಯ ಬಳಿ ಬರುತ್ತದೆ.
ಇಂದಿಗೂ ಹಂಪಿಯ ಸುತ್ತಮುತ್ತಲಿನ ಹಲವು ಪ್ರದೇಶಗಳು ಪೌರಾಣಿಕ ಹೆಸರುಗಳನ್ನು ಉಳಿಸಿಕೊಂಡು ಬಂದಿವೆ. ಪಂಪಾಸರಸು ಎಂದು ಕರೆಯಲ್ಪಡುತ್ತಿದ್ದ ಕೊಳ ರಾಯಚೂರಿನ ಆನೆಗೊಂದಿಯಲ್ಲಿದೆ. ‘ಪಂಪಾ’ ಎನ್ನುವುದು ತುಂಗಭದ್ರೆಯ ಪೌರಾಣಿಕ ಹೆಸರು.
ಹೊಸಪೇಟೆಯ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿಯೇ ಆಂಜನೇಯ (ಹನುಮಾನ್) ಜನಿಸಿದ್ದು, ರಾಮನಿಗೆ ಹನುಮ-ಸುಗ್ರೀವರ ಭೇಟಿಯಾಗಿದ್ದು ಕಿಷ್ಕಿಂಧೆಯಲ್ಲಿ. ಅಣ್ಣ ವಾಲಿಯಿಂದ ಭೀತನಾಗಿ ಸುಗ್ರೀವ ಅಡಗಿಕೊಂಡಿದ್ದು ಋಷ್ಯಮೂಕ ಪರ್ವತದಲ್ಲಿ. ಇದು ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಸೀತೆಯನ್ನು ಅರಸುತ್ತ ಶ್ರೀರಾಮನ ಕಾರ್ಯಾಚರಣೆಗೆ ಬಲ ಒದಗಿದ್ದು ಕಿಷ್ಕಿಂದೆಯಿಂದಲೇ.

ವಾನರಸೇನೆಯೊಂದಿಗೆ ಶ್ರೀರಾಮ ರಾಮನಾಥಪುರದ ಬಳಿಯಿರುವ ಮನ್ನಾರ್ ಕೊಲ್ಲಿಗೆ ಬಂದ. ಅವರು ಲಂಕೆಯನ್ನು ಬೆಸೆಯುವ ಸೇತುವೆಯ ನಿರ್ಮಾಣ ಆರಂಭಿಸಿದ್ದು ಮನ್ನಾರ್ ಬಳಿಯ ಸೇತುಕರೈ ಪ್ರಾಂತ್ಯಕ್ಕೆ. ಸೇತುಕರೈ ಆ ಹೆಸರು ಬಂದಿದ್ದು ಸೇತುವೆ ನಿರ್ಮಾಣದ ಕಾರಣದಿಂದ.
ರಾಜಸಿಂಗ ಮಂಗಳಮ್ ನಿಂದ ರಾಮನಾಥಪುರ – ದೇವಕೊಟ್ಟೈ ನಡುವಿನ ಮಾರ್ಗದಲ್ಲಿರುವ ಕುಪ್ಪೂರು ಗ್ರಾಮದಲ್ಲಿನ ಗಣಪತಿ ದೇವಾಲಯದಲ್ಲಿ ಸೇತುವೆ ಕಟ್ಟುವ ಮುನ್ನ ಪೂಜೆ ಸಲ್ಲಿಸಿದ್ದನೆಂದು ಪ್ರತೀತಿ. ಗಣಪತಿ ಪೂಜೆಯ ಅನಂತರ ಶ್ರೀರಾಮ ನವಪಾಷಾಣಮ್ ನಲ್ಲಿ ನವಗ್ರಹ ಪೂಜೆ ಕೈಗೊಂಡನೆಂದು ಹೇಳಲಾಗುತ್ತದೆ.
ಇಲ್ಲಿನ ಸಮುದ್ರ ತೀರದಲ್ಲಿ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಸಮವಾಗಿ ನಿಲ್ಲಿಸಲಾದ ಒಂಬತ್ತು ಶಿಲೆಗಳಿವೆ. ಆದ್ದರಿಂದಲೇ ಇದರ ಹೆಸರು ನವಪಾಷಾಣಮ್. ನೀರಿನಲ್ಲಿರುವ ನವಪಾಷಾಣಮ್ಗೆ ಕಾಲ್ನಡಿಗೆಯಲ್ಲಿಯೇ ಹೋಗಬಹುದು. ಸಮುದ್ರ ತೀರದಲ್ಲಿನ ದೇವಾಲಯದಲ್ಲಿ ಶ್ರೀ ಆದಿಜಗನ್ನಾಥ ಸ್ವಾಮಿಯ ಮೂರ್ತಿಯಿದೆ. ಜಗನ್ನಾಥ ಸ್ವಾಮಿಯು ಇಲ್ಲಿ ಕಾರಲ್ ಅದ್ವೈತ ಪೆರುಮಾಳ್ ಎಂದು ಕರೆಯಲ್ಪಡುತ್ತಾನೆ.
ಹೀಗೆಂದರೆ ಅಲೆಗಳ ಬರುವಿಕೆಯನ್ನು ತಡೆದವನು ಎಂದರ್ಥ. ಇಲ್ಲೊಂದು ವಿಸ್ಮಯವಿದೆ. ಸಮುದ್ರ ತೀರದಿಂದ ಒಂದು ಕಿಲೋಮೀಟರ್ ದೂರದವರೆಗೆ ಸಮುದ್ರದಲ್ಲಿ ಅಲೆಗಳೇ ಏಳುವುದಿಲ್ಲ! ಅವುಗಳ ಆರ್ಭಟವೇನಿದ್ದರೂ ಒಂದು ಕಿಲೋ ಮೀಟರಿನಿಂದ ಆಚೆಗೆ. ಅಲೆಯಿಲ್ಲದ ಸಮುದ್ರದ ಈ ಭಾಗ ಶಾಂತ ಕೊಳದಂತೆ ಕಾಣುತ್ತದೆ.
ಸಮುದ್ರದಲ್ಲಿ ಬಿರುಗಾಳಿಯದ್ದಾಗಲೂ ನವಪಾಷಾಣಮ್ ಹತ್ತಿರಕ್ಕೂ ಅಲೆಗಳು ತಲೆಹಾಕಲಾರವೆಂದರೆ, ಇದೊಂದು ಅದ್ಭುತ ಪವಾಡವಲ್ಲವೇ? ಇದನ್ನು ಶ್ರೀರಾಮನಲ್ಲದೆ ಬೇರಾರು ಮಾಡಿರಲು ಸಾಧ್ಯ?
2000ನೇ ಇಸವಿಯಲ್ಲಿ ನವಪಾಷಾಣವ ದೇವಾಲಯದ ಅರ್ಚಕರಲ್ಲೊಬ್ಬರಾದ ಶ್ರೀ ಜಗನ್ನಾಥ ಐಯ್ಯಂಗಾರರು ಮನೆಯ ಬಳಿ ಅಗೆಯುತ್ತಿದ್ದಾಗ ಕೆಲವು ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳು ದೊರೆತಿವೆ. ಅವನ್ನು ಈಗ ಅಧ್ಯಯನಕ್ಕಾಗಿ ತಮಿಳುನಾಡಿನ ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಇರಿಸಲಾಗಿದೆ.
ಶ್ರೀ ರಾಮ ಹತಾಶನಾಗಿ ದರ್ಭಾಸನದ ಮೇಲೆ ಮಲಗಿದ್ದು ‘ತಿರುಪುಲ್ಲನೈ’ ಎಂಬಲ್ಲಿ ತಿರುಪುಲ್ಲು ಎಂದರೆ ಪವಿತ್ರ ಹುಲ್ಲು – ದರ್ಭೆ. ಸಮುದ್ರರಾಜ ಶ್ರೀರಾಮನಿಗೆ ಶರಣುಬಂದು, ಸೇತುವೆ ಕಟ್ಟಲು ಸಹಕರಿಸುವುದಾಗಿ ಮಾತುಕೊಟ್ಟ ಸ್ಥಳವಿದು. ಇಂದಿಗೂ ಕೂಡ ಈ ಪ್ರದೇಶದಲ್ಲಿ ಉಬ್ಬರ ಕಡಮೆಯಿದ್ದಾಗ ಸಮುದ್ರದ ಅಲೆಯಲ್ಲಿನ ಬಂಡೆಕಲ್ಲುಗಳನ್ನು ಕಾಣಬಹುದು. ಈ ಕಲ್ಲುಗಳು ಶ್ರೀಲಂಕಾ ತೀರದವರೆಗೂ ಇವೆ ಎಂಬುದು ಅನುಭವಿ ಮೀನುಗಾರರ ಮಾತು.
ಶ್ರೀಲ೦ಕೆಯಲ್ಲಿಯೂ ರಾಮಾಯಣ ಕಾಲದ ಸ್ಮಾರಕ ಹೊತ್ತ ಹಲವು ದೇವಾಲಯಗಳಿವೆ. ಸೀತಾದೇವಿಯ ದೇಗುಲ ನುವಾರಾ ಎಲಿಯಾ ಎಂಬಲ್ಲಿದೆ. ಅಶೋಕವನ ಇದ್ದ ಸ್ಥಳವೀಗ ಹಕ್-ಗಲಾ ಎಂದು ಕರೆಯಲ್ಪಡುತ್ತದೆ.
ರಾವಣನನ್ನು ಕೊಂದ ಬ್ರಹ್ಮಹತ್ಯಾ ದೋಷ ನಿವಾರಣೆಗೆ ಶ್ರೀರಾಮ ರಾಮೇಶ್ವರ ದ್ವೀಪದಲ್ಲಿ ಶಿವಪೂಜೆ ನಡೆಸಿದ. ಈ ಪ್ರದೇಶದಲ್ಲಿ ‘ರಾಮನಾಥ ಸ್ವಾಮಿ’ ಶಿವ ದೇವಾಲಯ ನಿರ್ಮಾಣಗೊಂಡಿದೆ. ಶಿವಲಿಂಗ ತರಲು ಕಾಶಿಗೆ ತೆರಳಿದ್ದ ಮಾರುತಿ ಹಿಂತಿರುಗುವುದು ತಡವಾದಾಗ ಸೀತಾದೇವಿಯೇ ಮರಳಿನಿಂದ ಶಿವಲಿಂಗ ನಿರ್ಮಿಸಿದಳೆಂದು ಹೇಳಲಾಗುತ್ತದೆ. ಹನುಮಂತ ಕಾಶಿಯಿಂದ ತಂದ ವಿಶ್ವನಾಥ ಲಿಂಗ, ಗರ್ಭಗೃಹದ ಹೊಸ್ತಿಲಲ್ಲಿ ಸ್ಥಾಪಿತವಾಗಿದೆ.
ಧನುಷ್ಕೋಟಿಗೆ ಹೋಗುವ ಮಾರ್ಗಮಧ್ಯದಲ್ಲಿ ಸಮುದ್ರದಡದ ಮೇಲೆ ಲಂಕಾಭಿಮುಖವಾದ ಕೋದಂಡರಾಮಸ್ವಾಮಿ ದೇವಾಲಯವಿದೆ. ಶ್ರೀರಾಮ ಕಾಂಚಿಪುರದಲ್ಲಿರುವ ಏಕಾಂಬರೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡನೇ ಬಾರಿ ಪೂಜೆ ಸಲ್ಲಿಸಿದ ಉಲ್ಲೇಖವಿದೆ. ರಾಮಸೀತೆ ಲಕ್ಷ್ಮಣರು ಶ್ರೀ ವಿಭಾಂಡಕ ಮಹರ್ಷಿಗಳನ್ನು ಭೇಟಿಯಾಗಲು ಪುಷ್ಪಕ ವಿಮಾನದಲ್ಲಿ ಮಥುರಾಂತಕಮ್ ಗೆ ತೆರಳಿದರು. ಇಲ್ಲಿನ ಕೋದಂಡರಾಮ ದೇವಾಲಯದಲ್ಲಿ ಹನುಮನ ವಿಗ್ರಹವಿಲ್ಲದಿರುವುದನ್ನು ಗಮನಿಸಬಹುದು.
ಸಮಯಕ್ಕೆ ಸರಿಯಾಗಿ ಶ್ರೀರಾಮ ಬಾರದೇ ಹೋದರೆ ಅಗ್ನಿ ಪ್ರವೇಶ ಮಾಡುವುದಾಗಿ ಹೇಳಿದ್ದ ಭರತನಿಗೆ ಸುದ್ದಿ ಮುಟ್ಟಿಸಲು ತೆರಳಿದ್ದರಿಂದ, ಹನುಮ ಆವೇಳೆ ರಾಮ ಪರಿವಾರದೊಂದಿಗೆ ಇರುವುದಿಲ್ಲ. ಇದೇ ಕಾರಣಕ್ಕೆ, ದೇವಾಲಯದಲ್ಲೂ ಹನುಮಂತನ ಮೂರ್ತಿಯಿಲ್ಲ!
ಈ ದೇವಾಲಯದ ಶ್ರೀರಾಮನನ್ನು ಎರಿ ಕಥಾ ರಾಮರ್ ಎಂದು ಕರೆಯುತ್ತಾರೆ. ಮಥುರಾಂತಕಮ್ ಕೊಳವನ್ನು ಹಾಳುಗೆಡವಲು ಹೊರಟಿದ್ದ ಬ್ರಿಟಿಷ್ ಕಲೆಕ್ಟರ್ ಲಿಯೊನೆಲ್ ಪ್ಲೇಸ್ ನನ್ನು ತಡೆಯಲು ಶ್ರೀ ರಾಮಲಕ್ಷ್ಮಣರು ಅಲ್ಲಿ ಪ್ರತ್ಯಕ್ಷರಾಗಿದ್ದರೆಂದು ಹೇಳುತ್ತಾರೆ. ಇಲ್ಲಿನ ದೇವಾಲಯದ ಶ್ರೀರಾಮನ ಮೂಲ ಹೆಸರು “ಅಯೋಧಿರಾಮ’” ಎಂದು.
ಶ್ರೀರಂಗಂನಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ 108 ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಒಂದು. ರಾಮನಿಂದ ಪೂಜಿಸಲ್ಪಟ್ಟ ಶ್ರೀರಂಗನಾಥನ ಮೂರ್ತಿ ಈ ದೇವಾಲಯದಲ್ಲಿ ಪೂಜೆಗೊಳ್ಳುತ್ತಿದೆ.
ಈ ಎಲ್ಲ ಸ್ಥಳಗಳನ್ನೂ ನಕಾಶೆಯಲ್ಲಿ ಜೋಡಿಸಿದಾಗ ಶ್ರೀರಾಮಪಥ ಸಿದ್ಧಗೊಳ್ಳುತ್ತದೆ. ಶ್ರೀರಾಮನನ್ನು ಮಹಾವಿಷ್ಣುವಿನ ಅವತಾರವೆಂದು ಒಪ್ಪದ ನಾಸ್ತಿಕರೂ ರಾಮ ಈ ಎಲ್ಲಾ ಸ್ಥಳಗಳಲ್ಲಿ ಓಡಾಡಿದನೆಂದು ಒಪ್ಪಲೇಬೇಕು. ಅಷ್ಟು ಬಲವಾದ ಸಾಕ್ಷ್ಯ ನುಡಿಯುತ್ತವೆ ಈ ದೇವಾಲಯಗಳು.






Leave a Reply