ಇಡೀ ಜಗತ್ತು ಕೃಷ್ಣನನ್ನು ಅರಿಯಬೇಕೆಂದು ಅವರು ಬಯಸಿದರು
ಗೀತಾಭವನದ (ಗೀತಾ ಸೆಂಟರ್) ಆಹ್ವಾನದ ಮೇರೆಗೆ ಡಿಸೆಂಬರ್ 1970ರಲ್ಲಿ ಶ್ರೀಲ ಪ್ರಭುಪಾದರು ಹಾಗೂ ಭಕ್ತರ ಒಂದು ತಂಡ ಮಧ್ಯ ಪ್ರದೇಶದ ಇಂದೋರ್‌ಗೆ ಪ್ರಯಾಣ ಬೆಳೆಸಿದರು. ಗೀತಾಭವನವು ಏರ್ಪಡಿಸಿದ್ದ ಒಂದು ವಾರ ಕಾಲದ ಗೀತಾಜಯಂತಿ – ಕೃಷ್ಣನು ಗೀತೆಯನ್ನು ಬೋಧಿಸಿದ ದಿನ – ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರಭುಪಾದ ಹಾಗೂ ಅವರ ತಂಡದ ಉದ್ದೇಶವಾಗಿತ್ತು.

ಆ ಕಾರ್ಯಕ್ರಮಕ್ಕೆ ಬಂದಿದ್ದವರಲ್ಲಿ ಬಹುಪಾಲಿನ ಉಪನ್ಯಾಸಕಾರರು ಮಾಯಾವಾದಿಗಳಾಗಿದ್ದರು. ಈ ಜನ ಭಗವದ್ಗೀತೆಯನ್ನು ಯಥಾರ್ಥದಲ್ಲಿ ವ್ಯಾಖ್ಯಾನಿಸುತ್ತಿರಲಿಲ್ಲ; ಕೃಷ್ಣನನ್ನು ಅವನಿರುವ ಹಾಗೆ ಬಿಂಬಿಸುತ್ತಿರಲಿಲ್ಲ.
ಇಂದೋರ್‌ನಲ್ಲಿ ಬಹುಜನ ಗೃಹಸ್ಥರು ಶ್ರೀಲ ಪ್ರಭುಪಾದರನ್ನು ಭೇಟಿ ಮಾಡಲು ಅವರ ಕೋಣೆಗೆ ಬರುತ್ತಿದ್ದರು. ಹೀಗೆ ಬರುತ್ತಿದ್ದ ಜನ ಆಧ್ಯಾತ್ಮಿಕ ಬದುಕಿನ ಬಗೆಗೆ ತಮ್ಮದೇ ವಿಚಾರಗಳನ್ನಿಟ್ಟುಕೊಂಡಿದ್ದರು. ಪ್ರಭುಪಾದರು ಒಂದು ಸಲ ದೂರು ಹೇಳಿಕೊಂಡರು : “ಈ ಜನ ತಮ್ಮದೇ ಅಭಿಪ್ರಾಯಗಳನ್ನಿಟ್ಟುಕೊಂಡು ಗುರುವನ್ನು ಕಾಣಲು ಬರುತ್ತಾರೆ.
ಗುರು ಅವರ ಅಭಿಪ್ರಾಯವನ್ನು ಅನುಮೋದಿಸುತ್ತಾನೋ ಇಲ್ಲವೋ ಎಂದು ತಿಳಿಯುವುದು ಈ ಜನರ ಉದ್ದೇಶ, ಗುರು ಅವರ ಮಾತನ್ನು ಒಪ್ಪಿದನೋ ಅವನು “ಸರಿಯಾದ ಗುರು.” ಆದರೆ ಅದೇ ಗುರು ಬಂದವರ ಮಾತನ್ನು ಒಪ್ಪಲಿಲ್ಲವೋ ”ಈ ಗುರು ಸರಿಯಿಲ್ಲ” ಎಂದು ಭೇಟಿಕೊಟ್ಟವರು ಆಡಿಕೊಳ್ಳುತ್ತಾರೆ.
ಪ್ರಭುಪಾದ ಹಾಗೂ ಕೆಲವರು ಅತಿಥಿಗಳ ನಡುವೆ ನಡೆದ ಒಂದು ಸಂಭಾಷಣೆ ವಿಶೇಷವಾಗಿ ಬೋಧಪ್ರದವಾಗಿದೆ. ಹಿಂದಿನ ದಿನ ಪ್ರಭುಪಾದರು ಗೀತಾ ಸಮಿತಿಯ ಸಭಾಂಗಣದಲ್ಲಿ ಒಂದು ಉಪನ್ಯಾಸ ನೀಡಿದ್ದರು. ಸಭಾಂಗಣದಲ್ಲಿ ಕೃಷ್ಣನ ಚಿತ್ರಪಟವಿಲ್ಲದಿದ್ದುದು ಪ್ರಭುಪಾದರಿಗೆ ದಿಗಿಲು ಹುಟ್ಟಿಸಿತ್ತು.
ಮರುದಿನದ ಉಪನ್ಯಾಸದಲ್ಲಿ ಪ್ರಭುಪಾದರು ಈ ವಿಷಯವನ್ನು ಪ್ರಸ್ತಾಪಿಸಿ, ಜನ ಭಗವದ್ಗೀತೆಯನ್ನೂ ಅದನ್ನು ನುಡಿದ ಭಗವಾನ್ ಕೃಷ್ಣನನ್ನೂ ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಿಲ್ಲವೆಂಬುದನ್ನು ತೋರಿಸಿಕೊಡಲು ತಮ್ಮ ಮಾತನ್ನು ಬಳಸಿದರು. ತಮ್ಮ ಅಭಿಯಾನವು ಭಗವದ್ಗೀತೆಯನ್ನು ಯಥಾರ್ಥದಲ್ಲಿ ಸಾದರಪಡಿಸುವುದೇ ಆಗಿದೆಯಲ್ಲದೆ ಹಾಗೆ ಮಾಡದವರನ್ನು ಬಯಲಿಗೆಳೆಯುವುದು ಆಗಿದೆ ಎಂದೂ ಪ್ರಭುಪಾದ ನುಡಿದರು.
ಶ್ರೀಲ ಪ್ರಭುಪಾದ: ಯಾರು ತನ್ನ ಮೇಲಿನ ಅಧಿಕಾರಿಗಳ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸುತ್ತಾನೋ ಆತನೇ ಸದ್ಗುರು. ನಾವು ಚೈತನ್ಯ ಮಹಾಪ್ರಭುಗಳ ಅಥವಾ ಕೃಷ್ಣನ ಆಜ್ಞೆಯನ್ನು ಪರಿಪಾಲಿಸುತ್ತಿದ್ದೇವೆ. ಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದನಲ್ಲದೆ, “ಭಗವದ್ಗೀತೆಯ ಗೂಢಾರ್ಥ ಸಂದೇಶವನ್ನು ಯಾರು ಪ್ರಚುರಪಡಿಸುವರೋ ಅವರು ನನಗೆ ಪರಮ ಪ್ರಿಯರಾದವರೂ ಹೌದು” ಎಂದು ನುಡಿದ.
ಮೊದಲನೆಯ ಅತಿಥಿ: ನಾವು ನಿರಾಕಾರನಾದ ದೇವರಲ್ಲಿ ನಂಬಿಕೆಯುಳ್ಳವರು.
ಶ್ರೀಲ ಪ್ರಭುಪಾದ: “ನಿರಾಕಾರ” ಎಂದು ಯಾರು ಹೇಳುತ್ತಾರೆ? ಯಾರು ಹಾಗೆ ಹೇಳುವುದು?
ಮೊದಲನೆಯ ಅತಿಥಿ: ಅದನ್ನು ನೀವು ಭಾರತದಲ್ಲಿ ಎಲ್ಲೆಲ್ಲೂ ಕಾಣಬಹುದು. ಆ ನಿರಾಕಾರ ರೂಪ-ಜ್ಯೋತಿರ್ಲಿಂಗ
ಶ್ರೀಲ ಪ್ರಭುಪಾದ: ನೀವು ಭಗವದ್ಗೀತೆಗೆ ಸಂಬಂಧಿ ಸಿದ್ದಲ್ಲದ ಬೇರೆ ಏನೇನನ್ನೋ ಮಾತಿನಲ್ಲಿ ತರುತ್ತಿದ್ದೀರಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಮ್ಮ ಈ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದಲ್ಲಿ ನಾವು ಭಗವದ್ಗೀತೆಯನ್ನು ಬೋಧಿಸುತ್ತಿದ್ದೇವೆ. ಜ್ಯೋತಿರ್ಲಿಂಗದಂತಹ ಸಿದ್ಧಾಂತಗಳು ಬೇರೆ ಸಾಹಿತ್ಯದಲ್ಲಿರಬಹುದು.
ಆದರೆ ನಮ್ಮ ವಿಶೇಷ ಲಕ್ಷ್ಯ, ಭಗವದ್ಗೀತೆಯನ್ನು ಬೋಧಿಸುವುದಾಗಿದೆ. ಮತ್ತು ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ತಪ್ಪು ರೀತಿಯಲ್ಲಿ ಬೋಧಿಸಲಾಗುತ್ತಿದೆಯಾದ್ದರಿಂದ, ನಾವು ಈ ಸ್ಥಿತಿಯನ್ನು ಸರಿಪಡಿಸಬಯಸುತ್ತೇವೆ. ಆದ್ದರಿಂದಲೇ ನಮ್ಮ ಸಂಘಕ್ಕೆ ವಿಶೇಷವಾಗಿ ”ಕೃಷ್ಣ ಪ್ರಜ್ಞಾ ಸಂಘ’ ಎಂಬ ಹೆಸರಿಟ್ಟಿದ್ದೇವೆ.
ಮೊದಲನೆಯ ಅತಿಥಿ: ಗೀತೆಯ ಬಗೆಗೆ ತಪ್ಪು ತಪ್ಪಾಗಿ ಬೋಧಿಸಲಾಗುತ್ತಿರುವುದು ಯಾವುದು?
ಶ್ರೀಲ ಪ್ರಭುಪಾದ: ಇಲ್ಲೊಂದು ಉದಾಹರಣೆ ಇದೆ. ನಿನ್ನೆ ನಾನು ಆ ಗೀತಾಸಮಿತಿಗೆ ಹೋದೆ. ಅಲ್ಲೊಂದು ದೀಪ ಇದೆ. ಕೃಷ್ಣನಿಗೆ ಬದಲಾಗಿ ಅಲ್ಲಿ ದೀಪ ಏಕಿದೆ? ಕೃಷ್ಣನೇ ಒಂದು ದೀಪ ಅಲ್ಲವೆ? ಆದ್ದರಿಂದ ಗೀತೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಾನು ಹೇಳುವುದು.
ಅಲ್ಲಿ ದೀಪ ಏಕಿದೆ? ಭಗವದ್ಗೀತೆಯನ್ನು ನುಡಿದವನು ಕೃಷ್ಣ ಆದ್ದರಿಂದ ಕೃಷ್ಣನಿರುವ ಚಿತ್ರವೊಂದು ಅಲ್ಲಿ ಏಕಿಲ್ಲ? ಇದರ ಅರ್ಥ ನೀವು ಕೃಷ್ಣನನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದು. ಆದ್ದರಿಂದ ನಿಮ್ಮ ಹೆಸರಿಗೆ ಮಾತ್ರದ ಗೀತಾ ಸಮಿತಿಯು ನೈಜವಾದದ್ದಲ್ಲ.

ಸಾಮಾನ್ಯ ವ್ಯವಹಾರಗಳಲ್ಲಿ ಕೂಡ ಯಾವುದೋ ಒಂದು ರಾಜಕೀಯ ಸಭೆ ನಡೆದಾಗ ನೀವು ಗಾಂಧೀಜಿಯ ಚಿತ್ರ ಇಡುತ್ತೀರಿ, ನೆಹರೂ ಅವರ ಚಿತ್ರ ಇಡುತ್ತೀರಿ. ಯಾಕೆ ಅಂದರೆ ಅವರು ರಾಜಕೀಯ ಮುಖಂಡರು. ಗೀತಾಸಮಿತಿಯು ಭಗವದ್ಗೀತೆಯನ್ನು ಬೋಧಿಸುತ್ತದೆ. ಆ ಸ್ಥಳದಲ್ಲಿ ಕೃಷ್ಣನ ಒಂದು ಚಿಕ್ಕ ಚಿತ್ರ ಕೂಡ ಇಲ್ಲ. ಇದು ಅಪಮಾರ್ಗದರ್ಶನದಿಂದ ಆದದ್ದು.
ನಾವು ಭಗವದ್ಗೀತೆಯನ್ನು ಉಪದೇಶಿಸುತ್ತಿದ್ದೆವು. ಆದ್ದರಿಂದ ಗೀತಾ ಸಮಿತಿಯು ನಮ್ಮನ್ನು ಆಹ್ವಾನಿಸಿದೆ. ಸಮಿತಿ ಗೀತಾ ಜಯಂತಿ ಆಚರಿಸುತ್ತಿದೆ. ಆದರೆ ಭಗವದ್ಗೀತೆಯನ್ನು ಹೇಳಿದವನೇ ಆ ಸ್ಥಳದಲ್ಲಿಲ್ಲ. ಅದರಿಂದಲೇ ನಾನು ಹೇಳುವುದು, ಇಲ್ಲಿ ಕೂಡ ಎಷ್ಟೋ ಕಡೆ ಭಗವದ್ಗೀತೆಯನ್ನು ತಪ್ಪಾಗಿ ಅರ್ಥೈಸುತ್ತಾರೆಂದು. ಈ ತಪ್ಪು ಪ್ರಚಾರವನ್ನು ಸರಿಪಡಿಸಬೇಕೆಂಬುದು ನಮ್ಮ ನಿಲುವು.
ಎರಡನೆಯ ಅತಿಥಿ: ಆ ತಪ್ಪು ಪ್ರಚಾರ ಯಾವುದು?
ಶ್ರೀಲ ಪ್ರಭುಪಾದ: ಉದಾಹರಣೆಗಳು ಬಹಳವಿವೆ. ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದಲ್ಲಿ ಭಗವಾನ್ ಕೃಷ್ಣ ಹೇಳುತ್ತಾನೆ : ಮನ್‌ಮನಾ ಭವ ಮದ್ಭಕ್ತೋ ಮದ್ಯಾಜಿ ಮಾಮ್ ನಮಸ್ಕರು – “ನನ್ನನ್ನು ಕುರಿತು ಚಿಂತಿಸುವುದರಲ್ಲಿ ನಿನ್ನ ಮನಸ್ಸನ್ನು ಸದಾ ತೊಡಗಿಸು. ನನ್ನ ಭಕ್ತನಾಗು, ನನಗೆ ನಮಸ್ಕರಿಸು ಹಾಗೂ ನನ್ನನ್ನು ಪೂಜಿಸು.” ಆದರೆ ಒಬ್ಬ ಪ್ರಖ್ಯಾತ ವ್ಯಾಖ್ಯಾನಕಾರರು ಹೇಳುತ್ತಾರೆ : “ನೀವು ಶರಣಾಗಬೇಕಾದದ್ದು ವ್ಯಕ್ತಿ ಕೃಷ್ಣನಿಗಲ್ಲ. ಈ ಅರ್ಥಹೀನ ಮನೋಧರ್ಮ ಅವರಿಗೆಲ್ಲಿಂದ ಬಂತು?
ಮೊದಲನೆಯ ಅತಿಥಿ: ಹಾಗೇನಿಲ್ಲ. ಒಬ್ಬ (ಪ್ರಭಾವಿ ನಿರಾಕಾರವಾದಿ) ವ್ಯಾಖ್ಯಾನಕಾರರು ಕೂಡ ಆ ಮಾತನ್ನು ಹೇಳಿದ್ದಾರೆ.
ಶ್ರೀಲ ಪ್ರಭುಪಾದ: ಆದ್ದರಿಂದಲೇ ಅವೆಲ್ಲ ಅಸಂಬದ್ಧ ಎಂದು ನಾನು ಹೇಳುವುದು. ಭಗವದ್ಗೀತೆಯ ಮೂಲಪಾಠಕ್ಕೆ ದೂರವಾಗಿರುವುದೆಲ್ಲವೂ ಅಸಂಬದ್ಧ.
ಅತಿಥಿಗಳು ಶ್ರೀಲ ಪ್ರಭುಪಾದರ ಹೇಳಿಕೆಗೆ ಆಕ್ಷೇಪವೆತ್ತಿದರು. ಭಗವದ್ಗೀತೆಗೆ ತಾವು ಕೊಡುವ ವ್ಯಾಖ್ಯಾನ ಮಾತ್ರ ಸಮಂಜಸವೆಂದೂ ಇತರರು ನೀಡುವ ವ್ಯಾಖ್ಯಾನ ಸರಿಯಲ್ಲವೆಂದು ಪ್ರಭುಪಾದರು ತಳೆಯುವ ನಿಲುವು ಸರಿಯಲ್ಲವೆಂದು ವಾದಿಸಿದರು. ಪ್ರಭುಪಾದರು ಇತರರನ್ನೂ ತಮ್ಮಂತೆ ಕಾಣುವ, ಯುಕ್ತವಾಗಿ ನಡೆಸಿಕೊಳ್ಳುವ ಸಮದರ್ಶಿ ಆಗಬೇಕೆಂದು ಅತಿಥಿಗಳು ಆಶಿಸಿದರು.
ಮೂರನೆಯ ಅತಿಥಿ: ಪ್ರತಿಯೊಬ್ಬ ವ್ಯಕ್ತಿಯೂ ದೇಹವನ್ನು ಮೀರಿದ ಆತ್ಮ ಎಂಬ ಅನನ್ಯತೆ ಇದ್ದವನಾದಲ್ಲಿ ನೀವು ಪ್ರತಿಯೊಬ್ಬರನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು.
ಶ್ರೀಲ ಪ್ರಭುಪಾದ: ಎಲ್ಲರೂ ಸಮಾನರಲ್ಲ. ತ್ರಿಗುಣಗಳು ಅಥವಾ ಪ್ರಕೃತಿ ಗುಣಗಳು ಎಂಬುವಿದೆ. ಇದನ್ನು ಭಗವದ್ಗೀತೆ ಹೀಗೆ ವಿಶ್ಲೇಷಿಸುತ್ತದೆ : “ಈ ಜನ ಸತ್ತ್ವಗುಣಸ್ಥಿತರು, ಈ ಜನ ರಜೋಗುಣ ಸ್ಥಿತರು, ಈ ಮಂದಿ ತಮೋಗುಣಸ್ಥಿತರು.”
ಮೂರನೆಯ ಅತಿಥಿ: ಅದು ಆತ್ಮದ ವ್ಯಕ್ತಿತ್ವವಲ್ಲ (ವ್ಯಕ್ತಿಗತ ಗುಣವಲ್ಲ). ಆತ್ಮ ಪ್ರತಿಯೊಬ್ಬನ ಪ್ರಾಣ. ಮೇಲು ಮೇಲಕ್ಕೆ ಬೆಳೆಯುತ್ತಾ ಹೋಗುವ ಶಕ್ತಿ ನಿಮಗಿದೆ.
ಶ್ರೀಲ ಪ್ರಭುಪಾದ: ನೀವು ಆತ್ಮದ ಹಂತದಲ್ಲಿಲ್ಲ. ನಾನೂ ಆತ್ಮದ ಹಂತದಲ್ಲಿಲ್ಲ. ನೀವು ದೇಹಾತ್ಮದ ಕಲ್ಪನೆಯಲ್ಲಿದ್ದೀರಿ. ಆದರೂ ನೀವು ಎಲ್ಲರನ್ನೂ ಸಮಾನದೃಷ್ಟಿಯಿಂದ ಕಾಣುವುದಾದರೆ, ನನ್ನಲೇಕೆ ತಪ್ಪು ಹುಡುಕುತ್ತಿದ್ದೀರಿ? ನೀವು ಆತ್ಮದ ಹಂತ ಮುಟ್ಟಿದ್ದರೆ ನೀವು ನನ್ನೊಂದಿಗೆ ವಾದಕ್ಕಿಳಿಯುವ ಕಾರಣವಿಲ್ಲ. ಪಂಡಿತಾಃ ಸಮದರ್ಶಿನಃ. ಭಗವದ್ಗೀತೆಯಲ್ಲಿ ಈ ಮಾತನ್ನು ಹೇಳಿದೆ :
ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||
(ವಿನಯ ಸಂಪನ್ನರಾದ ಸಾಧು ಸಂತರು ತಮ್ಮ ನೈಜ ಜ್ಞಾನದ ಕಾರಣದಿಂದ ವಿದಗ್ಧ ಬ್ರಾಹ್ಮಣನನ್ನು ಆಕಳನ್ನು, ಆನೆಯನ್ನು ನಾಯಿಯನ್ನು ಮುತ್ತು ಶ್ವಾನಭಕ್ಷಕನನ್ನು (ಅಸ್ಪೃಶ್ಯ) ಸಮಾನ ದೃಷ್ಟಿಯಿಂದ ಕಾಣುತ್ತಾರೆ.)
ನಾಲ್ಕನೆಯ ಅತಿಥಿ: ಅದು ಸರಿಯಾದ ನಿಲುವು.

ಶ್ರೀಲ ಪ್ರಭುಪಾದ: ಅದು ಸರಿಯಾದ ನಿಲುವು. ಆದರೆ ಸ್ವಾಮೀಜಿ (ಪ್ರಭುಪಾದರು) ಉನ್ನತ ಮಟ್ಟದವರಲ್ಲ” ಎಂದು ನೀವು ಭಾವಿಸಿದರೆ ನೀವು ಸಮದರ್ಶಿನಃ – ಸಮದೃಷ್ಟಿಯ ಹಂತದಲ್ಲಿಲ್ಲ.
ನಾಲ್ಕನೆಯ ಅತಿಥಿ: ಒಬ್ಬ ವ್ಯಕ್ತಿ ಯಾರನ್ನೂ ಹತ್ಯೆ ಮಾಡಿದನೆನ್ನಿ, ಆಗೇನು?
ಶ್ರೀಲ ಪ್ರಭುಪಾದ: ಸಮದರ್ಶಿನಃದ ಆತ್ಯಂತಿಕ ಮಟ್ಟದಲ್ಲಿ ಪಾಪ ಹಾಗೂ ಸದ್ಗುಣಕ್ಕೆ ವ್ಯತ್ಯಾಸವೇನಿಲ್ಲ. ‘ಇದು ಪಾಪ, ಇದು ಪುಣ್ಯ’ ಎಂದು ನೀವು ಎಣಿಸಿದ ಕೂಡಲೇ ಅದು ಸಮದರ್ಶಿನಃ ಆಗುವುದಿಲ್ಲ. ಗೀತೆಯಲ್ಲಿ ಹೇಳಲಾಗಿರುವ ಮಾತು ಸ್ಪಷ್ಟವಾಗಿದೆ – ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ, ಬ್ರಾಹ್ಮಣನು ಪಂಡಿತನು ಹಾಗೂ ವಿನೀತನು.
ಇವು ಒಳ್ಳೆಯತನದ (ಸತ್ವಗುಣದ) ಲಕ್ಷಣಗಳು. “ಶುನಿ” ಎಂದರೆ ನಾಯಿ. ಪಂಡಿತನು, ಬ್ರಾಹ್ಮಣನನ್ನೂ ನಾಯಿಯನ್ನೂ ಒಂದೇ ಸಮನಾಗಿ ಕಾಣುತ್ತಾನೆ. ನಾಯಿಯದು ಪಾಪಿಷ್ಠ ಜೀವವೆಂದೂ, ಬ್ರಾಹ್ಮಣನದು ಶೀಲವಂತ ಸದ್ಗುಣಿಯ ಜೀವವೆಂದೂ ತಿಳಿಯಲಾಗಿದೆ. ಆದ್ದರಿಂದ ಪಂಡಿತನ ದೃಷ್ಟಿಯಲ್ಲಿ ಸದ್ಗುಣಿಯೂ ಒಂದೇ, ಪಾಪಿಯೂ ಒಂದೇ. ಅದು ಸಮದರ್ಶಿ.
ಮೊದಲನೆಯ ಅತಿಥಿ: ಶ್ಲೋಕಗಳನ್ನು ಬರೆದವರು ಅವನ್ನು ಬರೆದಾಗ ತಪ್ಪುಗಳನ್ನು ಮಾಡಿದ್ದಾರೆಂದು ನನಗೆ ತೋರುತ್ತದೆ. ಶ್ರೀಲ ಪ್ರಭುಪಾದ: ನೀವು ಈಗ ವ್ಯಾಸರಲ್ಲಿ ತಪ್ಪು ಕಂಡುಹಿಡಿಯುತ್ತಿದ್ದೀರಿ. ನಿಮ್ಮೊಂದಿಗೆ ಯಾರು ಮಾತಾಡಬಲ್ಲರು? ನನ್ನನ್ನು ಕ್ಷಮಿಸಿ. ದಯವಿಟ್ಟು ಹೊರಗೆ ಹೋಗಿ, ನೀವು ವ್ಯಾಸರಲ್ಲಿ ತಪ್ಪು ಹುಡುಕುತ್ತಿದ್ದೀರಿ.
ಐದನೆಯ ಅತಿಥಿ: ನಿಮ್ಮನ್ನು ಅರ್ಥಮಾಡಿಕೊಳ್ಳುವುದಷ್ಟೇ ಇಲ್ಲಿ ನಮಗೀಗ ಬೇಕಾಗಿರುವುದು.
ಶ್ರೀಲ ಪ್ರಭುಪಾದ: (ರೇಗಿ ಕೂಗಾಡುತ್ತಾ) ನಾನು ಸಮದರ್ಶಿಯಲ್ಲ. ನಾನು ಸಮದರ್ಶಿಯೆಂದು ನಾನು ಹೇಳುವುದಿಲ್ಲ. ನೀವು ಸಮದರ್ಶಿಯೆಂದು ನೀವು ಹೇಳುತ್ತಿದ್ದೀರಿ.
ಎರಡನೆಯ ಅತಿಥಿ: ನೀವು ಸಮದರ್ಶಿಯೇ ಆಗಿರಬೇಕು.
ಶ್ರೀಲ ಪ್ರಭುಪಾದ: ನಾನು ಆ ಘಟ್ಟದಲ್ಲಿಲ್ಲ. ಈ ಮಾತನ್ನು ನಾನು ಏಕೆ ಹೇಳುತ್ತೇನೆಂದರೆ ನೀವು ಅವನಿಗೆ ಶರಣಾಗಿಲ್ಲ. ನೀವು ಪಾಪಪೂರ್ಣರು. ಇದು ನನ್ನ ದೃಷ್ಟಿ.
ಮೂರನೆಯ ಅತಿಥಿ: ನೀವು ಕೂಡ ಸಮದರ್ಶಿನಾಃ – ಸಮದರ್ಶಿಯಂತೆಯೇ ನೋಡುತ್ತಿರಬೇಕು.
ಶ್ರೀಲ ಪ್ರಭುಪಾದ: ಇಲ್ಲ. ನಾನೇಕೆ ಹಾಗೆ ಮಾಡಬೇಕು? ನಾನು ಆ ಸ್ಥಾನದಲ್ಲಿಲ್ಲ. ನಾನು ಕೃಷ್ಣನ ಮಾತುಗಳನ್ನು ಪುನರುಚ್ಚರಿಸುತ್ತಿದ್ದೇನೆ ಅಷ್ಟೆ. ನಾನು ಒತ್ತಿ ಹೇಳುವುದು ಅದನ್ನೇ. ನಾನು ಸಮದರ್ಶಿ ಆಗಿರಬಹುದು, ಅಲ್ಲದಿರಬಹುದು. ಕೃಷ್ಣನ ಮಾತನ್ನು ಪುನರುಚ್ಚಾರ ಮಾಡುವುದಷ್ಟೇ ನನ್ನ ಕೆಲಸ ಅಷ್ಟೆ.
ಉನ್ನತ ವೇದಿಕೆಯ ಮೇಲೆ ನಿಂತ ವ್ಯಕ್ತಿಯು ಯಾರ ಬಗೆಗೂ ವ್ಯತ್ಯಾಸ ಮಾಡುವುದಿಲ್ಲ. ಪ್ರತಿಯೊಬ್ಬರೂ ಪ್ರಭುವಿನ ಸೇವೆಯಲ್ಲಿ ನಿರತವಾಗಿರುವುದೆಯೇ ಆತ ಕಾಣುತ್ತಾನೆ ಎಂಬುದನ್ನು ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳಲ್ಲಿ ವಿವರಿಸುತ್ತಾರೆ.
ಆದರೆ ವ್ಯಕ್ತಿಯು ಗುರುವಿನ ಸ್ಥಾನವನ್ನು ವಹಿಸಿ ನಿಂತಾಗ, ಇತರರಿಗೆ ಬೋಧಿಸಲು ಹಾಗೂ ವಿಮೋಚನೆ ದೊರಕಿಸಿಕೊಡಲು ಕೆಲವು ತಾರತಮ್ಯವನ್ನು ಮಾಡಬೇಕಾಗುತ್ತದೆ. ಅತ್ಯಂತ ಉತ್ಕೃಷ್ಟ ಭಕ್ತನು ಕೂಡ ಬೋಧಿಸುವಾಗ ತಾರತಮ್ಯ ತೋರಬೇಕಾಗುತ್ತದೆ. ಎಲ್ಲರೂ ಕೃಷ್ಣನ ಸೇವಕರೆಂದೇ ಆತ ಎಣಿಸುತ್ತಾನಾದರೂ ವ್ಯತ್ಯಾಸಗಳನ್ನೂ ಕಾಣುತ್ತಾನೆ.
ಕೇಹ ಮಾನೇ, ಕೇಹ ನ ಮಾನೇ, ಸಬಾ ತಾಙ್ರ ದಾಸ |
ಯೇ ನ ಮಾನೇ, ತಾರ ಹಯ ಸೇಇ ಪಾಪೇ ನಾಶ ||

“ಕೆಲವರು ಅವನನ್ನು ಒಪ್ಪಿಕೊಳ್ಳುತ್ತಾರೆ, ಕೆಲವರು ಒಪ್ಪಿಕೊಳ್ಳುವುದಿಲ್ಲ. ಆದರೂ ಎಲ್ಲರೂ ಅವನ ಸೇವಕರೇ. ಆದರೆ ಅವನನ್ನು ಒಪ್ಪಿಕೊಳ್ಳದಾತನು ತನ್ನ ಪಾಪಕಾರ್ಯಗಳಿಂದ ಹಾಳಾಗುತ್ತಾನೆ.” (ಚೈತನ್ಯ ಚರಿತಾಮೃತ, ಆದಿ ಲೀಲಾ 6.85)
ದೇಹವೇ ಆತ್ಮವೆಂದು ನಂಬಿ ಅತ್ಯಂತ ಘನವಾದ ಭಕ್ತನನ್ನು – ಉತ್ತಮ ಅಧಿಕಾರಿಯನ್ನು – ಅನುಕರಿಸಲು ಪ್ರಯತ್ನಿಸುವವರನ್ನು ಶ್ರೀಲ ಪ್ರಭುಪಾದರು ತೀಕ್ಷ್ಣವಾಗಿ ಟೀಕಿಸುವುದನ್ನು ಕುರಿತು ನಾನು ಆಲೋಚಿಸಿದೆ. ಈಶೋಪನಿಷತ್ತಿನ ಆರನೆಯ ಮಂತ್ರಕ್ಕೆ ಶ್ರೀಲ ಪ್ರಭುಪಾದರು ಬರೆದಿರುವ ಭಾವಾರ್ಥದಲ್ಲಿ- ಹೀಗೆನ್ನುತ್ತಾರೆ : ಅಗಾಧ ಪಾಂಡಿತ್ಯವುಳ್ಳ ಬ್ರಾಹ್ಮಣನಿಗೂ, ಬೀದಿ ನಾಯಿಗೂ ಏನೂ ವ್ಯತ್ಯಾಸವಿಲ್ಲ ಎಂಬುದನ್ನು ಉತ್ತಮ ಅಧಿಕಾರಿಯು ಬಲ್ಲವನಾಗಿರುತ್ತಾನೆ.
ಆ ಇಬ್ಬರೂ (ಬ್ರಾಹ್ಮಣ-ನಾಯಿ) ಪ್ರಭುವಿನ ವಿಭಿನ್ನಾಂಶರೇ ಆದರೂ ಐಹಿಕ ಪ್ರಕೃತಿಯ ಗುಣಗಳಿಂದಾಗಿ ಅವರು ಬೇರೆ ಬೇರೆ ದೇಹಗತರಾಗಿರುತ್ತಾರೆ ಎಂಬುದೂ ಉತ್ತಮ ಅಧಿಕಾರಿಗೆ ಗೊತ್ತು. ಇಂಥ ಪಂಡಿತನಾದ ಭಕ್ತನು ಐಹಿಕ ದೇಹಗಳನ್ನು ದೃಷ್ಟಿಯಲ್ಲಿಟ್ಟುಕೊ೦ಡು ಮಾರ್ಗಭ್ರಷ್ಟನಾಗುವುದಿಲ್ಲ.
ಆದರೆ ಆಯಾ ವ್ಯಕ್ತಿತ್ವಗಳಲ್ಲಿ ಕಾಣುವ ಆಧ್ಯಾತ್ಮಿಕ ಕಿಡಿಯಿಂದ ಆಕರ್ಷಿತನಾಗುತ್ತಾನೆ. ಬ್ರಾಹ್ಮಣ ಹಾಗೂ ನಾಯಿಯ ಕಾರ್ಯಗಳನ್ನು ಗಮನಿಸದೆ ಉತ್ತಮ ಅಧಿಕಾರಿಯು ಎರಡು ಜೀವಿಗಳಿಗೂ ಒಳಿತನ್ನು ಮಾಡಲು ಯತ್ನಿಸುತ್ತಾನೆ”
“”ಐಕ್ಯದ ಅಥವಾ ಭ್ರಾತೃತ್ವದ ಹುಸಿ ತೋರಿಕೆಯನ್ನು ಪ್ರದರ್ಶಿಸಿ ಉತ್ತಮ ಅಧಿಕಾರಿಯನ್ನು ಅನುಕರಿಸಿ, ಅದೇ ಸಮಯದಲ್ಲಿ ದೇಹವೇ ಆತ್ಮವೆಂಬ ಕಲ್ಪನೆಯಲ್ಲಿರುವವರು ನಿಜವಾಗಿ ಮಿಥ್ಯಾ ಲೋಕೋಪಕಾರಿಗಳು.”
ಶ್ರೀಲ ಪ್ರಭುಪಾದರು ಈಶೋಪನಿಷತ್ತಿಗೆ ಬರೆದಿರುವ ವ್ಯಾಖ್ಯಾನದಲ್ಲಿನ ವಾದವೂ, ಅವರು ಇಂದೋರ್’ನ ಗೃಹಸ್ಥರ ಜೊತೆ ನಡೆಸಿದ ಚರ್ಚೆಯೂ ಒಂದೇ ಓಟ ನೋಟಗಳಲ್ಲಿರುವುದು ಇಲ್ಲಿ ಕಾಣುತ್ತದೆ. ನಮ್ಮ ಕೆಲಸ, ಕೃಷ್ಣನು ಹೇಳಿದ್ದನ್ನು ಪುನರುಚ್ಚರಿಸುವುದೇ ಆಗಿದೆಯೆಂದು ಶ್ರೀಲ ಪ್ರಭುಪಾದರು ಹೇಳಿದ್ದರಿಂದ ಸ್ಫೂರ್ತಿ ಪಡೆದು ಇನ್ನೊಬ್ಬ ಅತಿಥಿ ಅಂತಿಮ ಪ್ರಶ್ನೆಯನ್ನೆತ್ತಿಕೊಂಡರು.
ಆರನೆಯ ಅತಿಥಿ: ಉತ್ತರೋತ್ತರ ಬಂದ ಪ್ರತಿಯೊಬ್ಬ ಬೋಧಕರೂ ಮೂಲ ಪಾಠಕ್ಕೆ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹೌದೋ, ಅಲ್ಲವೋ?
ಐದನೆಯ ಅತಿಥಿ: ನೀವು (ಪ್ರಭುಪಾದರು) ಹಿಂದಿನ ಒಬ್ಬರ ಉತ್ತರಾಧಿಕಾರಿ.
ಶ್ರೀಲ ಪ್ರಭುಪಾದ: ಹೌದು.
ಮೂರನೆಯ ಅತಿಥಿ: ಹಾಗಾದರೆ ನಿಮ್ಮ ಕಾಣಿಕೆ ಏನು? ಅದನ್ನು ನಾವು ಕೇಳುತ್ತಿದ್ದೇವೆ. ನಿಮ್ಮ ಸಮದರ್ಶಿತ್ವ ಎಂಥದು? ನೀವು ಸಮದರ್ಶಿಗಳಾಗಿದ್ದೀರೋ?
ಆರನೆಯ ಅತಿಥಿ: ಇತರರು ಸಮದರ್ಶಿ ಗಳಾಗಬೇಕೆಂದು ನೀವು ಬೋಧಿಸುತ್ತಿದ್ದೀರಿ. ಸ್ವಯಂ ನೀವೇ ಸಮದರ್ಶಿಗಳಾಗಿದ್ದೀರಾ? ಕೃಷ್ಣನಿಗಾಗಿ ಶ್ರೀಲ ಪ್ರಭುಪಾದರು ಎಷ್ಟೆಲ್ಲ ಬಗೆಯಲ್ಲಿ ಹೋರಾಡಿದರು! ಬೋಧಿಸುವುದು ಎಂದರೆ ವಾಸ್ತವವಾಗಿ ಹೋರಾಡುವುದೇ ಆಗಿದೆ. ಪ್ರಭುಪಾದರು ಸದಾ ಕೃಷ್ಣನಿಗಾಗಿ ಹೋರಾಡುತ್ತಿದ್ದರು. ಅವರು ನಿಜಕ್ಕೂ ಆಧ್ಯಾತ್ಮಿಕ ಯೋಧರೇ ಹೌದು.
ಶ್ರೀಲ ಪ್ರಭುಪಾದ: ಪಕ್ಷ ಸಮದರ್ಶಿತ್ವ ಏನೆಂದರೆ ಹಿಂದೂಗಳು ಮಾತ್ರ ಕೃಷ್ಣನನ್ನು ಅರಿಯಬೇಕೇಕೆ? ಇಡೀ ಜಗತ್ತು ಕೃಷ್ಣನನ್ನು ಅರಿಯಬೇಕು. ಆದರೆ ನೀವು ಹಿಂದೂಗಳು ಅರಿಯಲು ನಿರಾಕರಿಸಿದರೆ ನಾನೇನು ಮಾಡಲಿ?” ಶ್ರೀಲ ಪ್ರಭುಪಾದರು ಇಂದೋರ್‌ನ ಗೃಹಸ್ಥರ ಸವಾಲಿಗೆ ಉತ್ತರ ನೀಡಿದ್ದರು: ತಮ್ಮ ವ್ಯಾವಹಾರಿಕ ಕಾರ್ಯದಿಂದ ಅವರು ಕೃಷ್ಣ ಪ್ರಜ್ಞೆ ಎಲ್ಲರಿಗೂ ದಕ್ಕುವಂತೆ ಮಾಡಿದರು.
ಅದು ಈಗ ಜಗತ್ತಿನೆಲ್ಲೆಡೆ ಲಭ್ಯ. ಅವರ ಸಮಾನದೃಷ್ಟಿ ಅದು, ಮತ್ತು ಅದು ಅವರ ಪೂರ್ವದ ಆಚಾರ್ಯರಿಗೆ ನೀಡಿದ ಕೊಡುಗೆ, ನಮಗೆ ನೀಡಿದ ಕೊಡುಗೆ ಪ್ರಭುವಾದರು ಭಗವದ್ಗೀತೆಯನ್ನು ಯಥಾರೂಪವಾಗಿ ಕೃಷ್ಣನನ್ನು ಅವನಿರುವಂತೆ ಸಾದರಪಡಿಸಿದ್ದರು. ಪ್ರಪಂಚದಾದ್ಯಂತ ಎಲ್ಲ ಜನ ಕೃಷ್ಣನನ್ನು ಒಪ್ಪಿಕೊಂಡು ಅವನ ಭಕ್ತರಾಗುತ್ತಿದ್ದರು. ಈಗ ಮೇಲಿನ ನಮ್ಮ ಅತಿಥಿಗಳು ಇಷ್ಟಪಟ್ಟರೆ ಅವರು ಕೂಡ ಕೃಷ್ಣ ಭಕ್ತರಾಗಿ ಅದರ ಲಾಭ ಪಡೆಯಬಹುದು.






Leave a Reply