– ಇಂಗ್ಲಿಷ್ ಮೂಲ : ಭೂರಿಜನದಾಸ, ಅನುವಾದ: ಚಿರಂಜೀವಿ
ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು. ಶ್ರೀಮದ್ಭಗವದ್ಗೀತೆಯ ಐದನೆಯ ಅಧ್ಯಾಯ ಇನ್ನೊಂದು ಬಗೆಯ ಕಥೆಯನ್ನು ಒಕ್ಕಣಿಸುತ್ತದೆ: ಅದು, ದೇವೋತ್ತಮ ಪುರುಷನ ಆಜ್ಞೆಯ ಮೇರೆಗೆ – ಒಬ್ಬ ಅಭಿಜ್ಞ ಪರಿತ್ಯಾಗಿ ರಾಜನಾಗುವುದು.

ಅವನು ಅರಮನೆ ಬದುಕಿನ ವೈಭೋಗಗಳನ್ನು ನಿರೋಧಿಸಬಲ್ಲನೇ? ಆಧ್ಯಾತ್ಮಿಕವಾಗಿ ಉಳಿದುಕೊಳ್ಳಬಲ್ಲನೇ? ಇಂದಿನ ಪ್ರಪಂಚದ ಮನುಷ್ಯನೊಬ್ಬ, ನಾಗರಿಕತೆಯ ಹೊಸ್ತಿಲ ಸಂದರ್ಭದಲ್ಲಿದ್ದ ರಾಜಪರಿತ್ಯಾಗಿ ಪ್ರಿಯವ್ರತನ ಬದುಕಿನಿಂದ ಏನನ್ನು ಕಲಿಯಬಹುದು?
ಪ್ರಿಯವ್ರತ ಮಹಾರಾಜ, ರಾಜತನ, ಐಶ್ವರ್ಯ ಮತ್ತು ಒಳ ಸಂಚುಗಳಿಗಿಂತಲೂ ಬಹಳ ದೂರದ ಆಧ್ಯಾತ್ಮಿಕ ಸತ್ಯಾಸತ್ಯತೆಗಳಲ್ಲಿ ಆಸಕ್ತಿ ಹೊಂದಿದ್ದವನು. ತನ್ನ ಕಿರಿ ಸೋದರ ಉತ್ತಾನಪಾದನನ್ನು ಚಕ್ರವರ್ತಿಯಾಗಲು ಅಂಗೀಕರಿಸಿದ್ದವನು.
ಉತ್ತಾನಪಾದನ ಮರಣದ ಆನಂತರ, ಪ್ರಿಯವ್ರತ ಮತ್ತು ಉತ್ತಾನಪಾದರ ತಂದೆಯಾದ ಸ್ವಾಯಂಭೂ ಮನು, ಗಂಧಮಾದನ ಪರ್ವತವನ್ನು ಏರಿ, ಅಲ್ಲಿ ತಪಸ್ಸನ್ನಾಚರಿಸುತ್ತಿದ್ದ ಪ್ರಿಯವ್ರತನನ್ನು ಭೇಟಿಮಾಡಿ ವೈರಾಗ್ಯವನ್ನು ಪರಿತ್ಯಜಿಸಿ ರಾಜನಿಲ್ಲದ ರಾಜ್ಯವನ್ನು ಆಳಲು ಹಿಂತಿರುಗುವಂತೆ ಮನವೊಲಿಸಿದನು.
ಪರ್ವತದ ಮೇಲೆ ಈ ತಂದೆ-ಮಗ ಸಂಧಿಸಿದಾಗ, ಅಲ್ಲಿ ನಿಂತಿದ್ದ ಪ್ರಿಯವ್ರತನ ಗುರುಗಳಾದ ನಾರದ ಮುನಿಗಳು ಈ ಸಂಭಾಷಣೆಯನ್ನು ಗಮನಕೊಟ್ಟು ಆಲಿಸಿದರು. ಅವರ ನಡುವೆ, ಕೆಂಪು, ಊದಾ ಮತ್ತು ನೀಲಿ ಬಣ್ಣಗಳ ಹೂಗೊಂಚಲುಗಳು ಆವರಿಸಿಕೊಂಡಿದ್ದ ಹಸಿರು ಉಬ್ಬುತಗ್ಗುಗಳಿದ್ದವು.
ಪರ್ವತ ಶ್ರೇಣಿಗಳ ಇಳಿಜಾರುಗಳಿಂದ ಅಲ್ಲಲ್ಲಿ ಕೆಳಗಿಳಿಯುತ್ತಿದ್ದ ಕಿರು ಜಲಪಾತಗಳು ಸನಿಹದ ಕೊಳದಲ್ಲಿನ ಸ್ಫಟಿಕ ಸದೃಶ ನೀರಿನಲ್ಲಿ ತರಂಗಗಳನ್ನೆಬ್ಬಿಸುತ್ತಿದ್ದವು. ಪರ್ವತದ ಇತರ ಶಿಖರಗಳು ಒಂದಿಷ್ಟು ದೂರದಲ್ಲಿ ಹಿಂದಕ್ಕೊರಗಿ ನಿಂತಂತೆ ಕಾಣಿಸುತ್ತಿದ್ದವು. ಮೃದುವಾದ ಸೌಮ್ಯ ತಂಗಾಳಿ ಬೀಸುತ್ತಿದ್ದಿತು.
ಮನು ಮಾತು ಪ್ರಾರಂಭಿಸಿದ: “ರಾಜ್ಯವನ್ನು ಆಳು. ಅಧೀನಕ್ಕೆ ತೆಗೆದುಕೊ, ಧರ್ಮಶಾಸ್ತ್ರಗ್ರಂಥಗಳು ಇದು ನಿನ್ನ ಕರ್ತವ್ಯ ಎಂದು ಆದೇಶಿಸುತ್ತಿವೆ. ಇದನ್ನು ಎತ್ತಿ ಹಿಡಿಯುವ ಮಹತ್ತರ ಜವಾಬ್ದಾರಿ ನಿನ್ನ ಮೇಲಿದೆ, ಮತ್ತು ಬೇರೆ ಯಾರಿಂದಲೂ ಅಲ್ಲದೆ ನಿನ್ನಿಂದ ಮಾತ್ರ ಇದು ಆಗಬೇಕು.”
ಒಬ್ಬ ಕರ್ತವ್ಯ ನಿಷ್ಠ ಮಗನ ಹಾಗೆ ಪ್ರಿಯವ್ರತ ತಂದೆಯ ಆಜ್ಞೆಯನ್ನು ಪಾಲಿಸುವುದರ ಕಡೆಗೆ ವಾಲಿದ್ದ. ಆದರೂ, ಅವನಲ್ಲೇ ಒಂದು ದಿಗಿಲಿತ್ತು. ಐಹಿಕ ಜೀವನದ ಬಗ್ಗೆ ಅವನಿಗೆ ಎಲ್ಲ ತಿಳಿದಿತ್ತು; ಎಲ್ಲ ಮಹೋನ್ನತಿ ಮತ್ತು ರೋಮಾಂಚಕಗಳೆನ್ನುವ ಪ್ರತಿಬಂಧಕಗಳ ನಡುವೆಯೂ, ಅದು ಅಳಿವು!
ಹೀಗಾಗಿ, ಅದರಲ್ಲೇಕೆ ತೊಡಗಬೇಕು? ಅದರಲ್ಲೇಕೆ ಬೆರೆತು ಹೋಗಬೇಕು? ಲೌಕಿಕ ಸಂಬಂಧದ ಕೆಡಕುಗಳ ಬಗ್ಗೆ ಪ್ರಿಯವ್ರತನಿಗೆ ಸಂಪೂರ್ಣವಾಗಿ ತಿಳಿದಿತ್ತು. ಆದರೂ ಅತ್ಯುತ್ತಮ ವಿವೇಚನೆಯ ನಡುವೆಯೂ ಯಾವನನ್ನಾದರೂ ತಾತ್ಕಾಲಿಕತೆಯ ಕಡೆಗೊಯ್ದು ಬಂಧಿಸುವ ಅತೀಂದ್ರಿಯ ಶಕ್ತಿಯಾದ ಮಾಯೆಯೆದುರು ತನ್ನ ಸಾಕ್ಷಾತ್ಕಾರದ ಶಕ್ತಿಯನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಲು ಅವನು ಹೆದರಿಕೊಂಡಿದ್ದ.
ಶ್ರೀಕೃಷ್ಣನ ಅಪ್ಪಟ ಭಕ್ತರಾದ ನಾರದ ಮುನಿಯಲ್ಲಿ ತಾನು ಶಿಷ್ಯತ್ವ ಹೊಂದಿ ಸಾಧನೆ ಮಾಡುತ್ತಿರುವುದು ತನ್ನ ಸುಯೋಗ ಎಂದು ಪ್ರಿಯವ್ರತ ಭಾವಿಸಿಕೊಂಡಿದ್ದ. ಗಂಧಮಾದನ ಪರ್ವತದಲ್ಲಿ ನಾರದ ಮುನಿಯೊಂದಿಗೆ ಶಾಂತವಾಗಿ ಪರಿಶುದ್ಧ ಜೀವನ ನಡೆಸುತ್ತಿರುವ ತಾನು, ತನ್ನ ಕೃಷ್ಣ ಪ್ರಜ್ಞೆಯ ಭಾಗ್ಯವನ್ನು ಅತಿ ಸಾಮಾನ್ಯವಾದೊಂದರೊಂದಿಗೆ ವಿನಿಮಯ ಮಾಡಿಕೊಳ್ಳಲು ಅವನು ಬಯಸಲಿಲ್ಲ.
ಅಂತೆಯೇ ಪರಿತ್ಯಾಗದಲ್ಲಿ ದೃಢಗೊಂಡಿರುವ ತಾಟಸ್ಥ್ಯ ಭಾವದಲ್ಲಿರುವುದೇ ಬುದ್ಧಿವಂತಿಕೆ ಎಂದವನು ಯೋಚಿಸಿದ. ಈ ಕಾರಣದಿಂದ ಪ್ರಿಯವ್ರತ ಶುದ್ಧಾಂತಃಕರಣದಿಂದ ತಂದೆಯನ್ನು ವಿಚಾರಿಸಿದ. “ಹೀಗೊಂದು ಲೌಕಿಕ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದರಿಂದ ನನ್ನ ಆಧ್ಯಾತ್ಮಿಕ ಜೀವನ ಕ್ಷಯಿಸಿಹೋಗುವುದೆಂದು ನಾನು ಭಾವಿಸಿದ್ದೇನೆ.

ನೀವು ಬಯಸಿದಂತೆ ಈ ರಾಜ್ಯಾಡಳಿತವನ್ನು ನಾನು ಒಪ್ಪಿಕೊಂಡರೆ, ಶ್ರೀಕೃಷ್ಣನ ಕಡೆಗಿನ ನನ್ನ ಭಕ್ತಿಸೇವೆಯನ್ನದು ದಿಕ್ಚ್ಯುತಿ ಮಾಡುವುದಿಲ್ಲವೇ?”
ಸ್ವಾಯಂಭೂ ಮನು, ಒಂದು ರೀತಿ ನಿರಾಕರಣೆಯೇ ಅನ್ನಿಸುವಂತಹ ತನ್ನ ಮಗನ ಈ ಉತ್ತರವನ್ನು ಕೇಳಿದಾಗ, ಅವನಿಗೆ ಬಹಳ ಕೆಡುಕೆನಿಸಿತು. ರಾಜ್ಯಭಾರ ಮಾಡುವವರು ಬೇರಿನ್ನಾರು? ತಾನು ಈ ವೃದ್ಧಾಪ್ಯದ ವಯಸ್ಸಿನಲ್ಲಿ ಪ್ರಜಾಪಾಲನೆಗಾಗಿ ಈ ಸಾಮ್ರಾಜ್ಯ ಸಿಂಹಾಸನವನ್ನು ಮತ್ತೆ ಏರಬೇಕೇ?
ಮನುವಿಗೆ ದಿಕ್ಕು ತೋರದಂತಾಗಿತ್ತು. ಏನು ಮಾಡಬೇಕೆಂದು ತಿಳಿಯದೆ ಕುಳಿತಿದ್ದ. ಆಗಲೇ, ಆಧ್ಯಾತ್ಮದಲ್ಲಿ ಉನ್ನತೋನ್ನತ ವಿಧಾಯಕ ಶಕ್ತಿಯೇ ಆಗಿರುವ, ಅಲ್ಲದೇ; ನಾರದ ಮತ್ತು ಮನು ಇಬ್ಬರ ತಂದೆಯೂ ಆದ ಬ್ರಹ್ಮದೇವ ಆ ಗಂಧಮಾದನ ಪರ್ವತದಲ್ಲಿ ಪ್ರತ್ಯಕ್ಷನಾದ.
ಆಶ್ಚರ್ಯಚಕಿತರಾದ ನಾರದ, ಮನು ಮತ್ತು ಪ್ರಿಯವ್ರತ ಎದ್ದು ನಿಂತು ಭಕ್ತಿಯಿಂದ ಕೈಮುಗಿದರು. ತಮ್ಮ ತಮ್ಮ ಪ್ರವರಗಳನ್ನು ವೇದ ಮಂತ್ರಗಳನ್ನು ಹೇಳಿ ಬ್ರಹ್ಮದೇವನಿಗೆ ಉಪಾಯನಗಳನ್ನು ಅರ್ಪಿಸಿದರು. ಹೀಗೆ ಆ ಪರ್ವತದಲ್ಲಿ ತಮಗೆ ಲಭ್ಯವಿರುವ ಅನುಕೂಲಗಳಿಂದ ಅವನನ್ನು ಉಪಚರಿಸಿ, ಗೌರವಾದರಗಳಿಂದ ಸ್ವಾಗತಿಸಿದರು.
ಬ್ರಹ್ಮದೇವ ಇವರ ಆತಿಥ್ಯಕ್ಕೆ ತೃಪ್ತನಾಗಿ, ನಾರದ ಮತ್ತು ಮನು ಅವರತ್ತ ಮೆಚ್ಚುಗೆಯ ನೋಟವನ್ನು ಬೀರಿದ ಮತ್ತು ಪರಿತ್ಯಾಗಿ ರಾಜಕುಮಾರನತ್ತ ತಿರುಗಿ ನೋಡಿ ಕರುಣೆಯಿಂದ ಮಂದಹಾಸವನ್ನು ತೋರಿದ. “ನನ್ನ ಪ್ರಿಯ ಪ್ರಿಯವ್ರತ, ಲಕ್ಷ್ಯಕೊಟ್ಟು ನನ್ನ ಮಾತುಗಳನ್ನು ಕೇಳು.
ನಾನು ಶ್ರೀಕೃಷ್ಣನ ಆಜ್ಞೆಯನ್ನು ಹೊತ್ತು ತಂದಿದ್ದೇನೆ. ನಿನ್ನ ನಿಜವಾದ ಒಳಿತಿಗೆ, ಶ್ರೀಕೃಷ್ಣನ ಆಶಯವನ್ನು ನಿನ್ನದು ಎಂಬಂತೆ ತಿಳಿದುಕೊ. ನೀನು ಮತ್ತು ಇತರರೆಲ್ಲರೂ ಅವನ ಶಾಶ್ವತ ಸೇವಕರು. ನಾನೂ ಸಹ, ಮನು ಮತ್ತು ನಾರದರ ಹಾಗೆ ದೇವೋತ್ತಮ ಪುರುಷನ ಆಜ್ಞೆಗಳನ್ನು ಪಾಲಿಸಲೇಬೇಕು.”
ಆಧುನಿಕ ನಾಯಕರುಗಳಿಗಿಂತಲೂ ಬ್ರಹ್ಮ ಎಷ್ಟೊಂದು ಭಿನ್ನ! ದೇವರ ಆಜ್ಞೆಗಳನ್ನು ಜಾರಿಗೆ ತರುವುದರ ಬದಲು ಇಂದಿನ ನಾಯಕರು ಗಗನಚುಂಬಿಗಳು, ಉನ್ನತ ತಾಂತ್ರಿಕತೆ ಮತ್ತು ಆಸ್ಫೋಟಗಳ ಅಭಿವೃದ್ಧಿಯಲ್ಲಿ ಹೆಮ್ಮೆಯಿಂದ ತೊಡಗಿಕೊಳ್ಳುತ್ತ, ಸ್ವತಂತ್ರಮನೋಭಾವದ ತಮ್ಮದೇ ಸಿದ್ಧಾಂತಗಳಿಗೆ ಅಂಟಿಕೊಂಡಿದ್ದಾರೆ.
ಅವರ ಅನುಯಾಯಿಗಳಾಗಿ, ನಾವು ಕಣ್ಣುಮುಚ್ಚಿಕೊಂಡು ಅನುಸರಿಸುತ್ತೇವೆ! ಹೀಗೆ ನಾವು ಅಂಗೈಯಲ್ಲಿ ಆಕಾಶ ತೋರಿಸುವವರ ಮನಸ್ವೀ ಆಶ್ವಾಸನೆಗಳನ್ನು ನಂಬಿ ಕುಳಿತರೆ, ನಮ್ಮ ಬದುಕು ವ್ಯರ್ಥವಾಗುವುದಲ್ಲದೆ, ಬುದ್ಧಿಶೂನ್ಯತೆ ಮತ್ತು ಹತಾಶೆ ಆವರಿಸಿಕೊಳ್ಳುವುದರಲ್ಲಿ ಕೊನೆಕಾಣುತ್ತದೆ.
ಇದರ ಬದಲು ನಾವು ಈ ಸಮಕಾಲೀನ ನಿಯಮಾಧೀನಗಳಿಂದ ಬಿಡಿಸಿಕೊಂಡು ಶ್ರೀಕೃಷ್ಣನ ವಿಧಾಯಕಗಳಿಗೆ ಮತ್ತು ಇಚ್ಛೆಗಳಿಗೆ ಒಳಪಟ್ಟು ನಡೆದರೆ ನಮ್ಮ ಪರಿಪೂರ್ಣತೆಯ ಹಾದಿ ಸುಗಮವಾದಂತೆಯೇ ಸರಿ!
ಆದರೆ, ಇಂದು ನಂಬಿಗಸ್ಥ ಆಧ್ಯಾತ್ಮಿಕ ಸಪ್ರಮಾಣಿಕರು ನಮಗೆ ಕಾಣಸಿಗುತ್ತಾರೆಯೆ? ಅಥವಾ ನಾವೆಲ್ಲರೂ ನಮ್ಮೊಳಗಿನ ದನಿಗಳಿಗೆ ಕಟ್ಟು ಬಿದ್ದು ದೇವರ ಇಚ್ಛೆಗಳಿಗೆ ಸಮರ್ಪಿಸಿಕೊಳ್ಳಬೇಕೆ? ಅಪಾಯಕಾರಿ ಸೂಚನೆ – ಏಕೆಂದರೆ, ‘ಈಗಾಗಲೇ ಮಾನವದ್ವೇಷಿಗಳು ತಾವೇ ದೇವರ ಇಚ್ಛೆಗಳನ್ನು ಪೂರೈಸುವವರು ಎಂದು ಹೇಳಿಕೊಳ್ಳುತ್ತ ಪ್ರಪಂಚದ ಮೇಲೆ ಸಾಕಷ್ಟು ಗಲಿಬಿಲಿಗಳನ್ನು ಮತ್ತು ಕೆಡಕುಗಳನ್ನು ಬಿತ್ತಿಬಿಟ್ಟಿದ್ದಾರೆ.

ಬ್ರಹ್ಮ, ಪ್ರಿಯವ್ರತನ ಮನಸ್ಸಿಗೆ ಸಾಂತ್ವನ ತುಂಬುತ್ತ ಕಾರ್ಯಸಾಧ್ಯವಾದ್ದನ್ನು ಮುಂದಿರಿಸುತ್ತಾನೆ: “ಒಬ್ಬ ಕುರುಡ ಅತ್ಯುತ್ತಮ ದೃಷ್ಟಿ ಇರುವವನ ಜೊತೆಯಲ್ಲಿ ಹೇಗೆ ತಡೆಯಿಲ್ಲದೆ ಓಡಾಡುತ್ತಾನೊ ಅಥವಾ ನೇಗಿಲಿಗೆ ಕಟ್ಟಿದ ಜೋಡೆತ್ತುಗಳು ಹೇಗೆ ರೈತನ ಆಜ್ಞೆಯ ಪ್ರಕಾರ ಹೆಜ್ಜೆ ಹಾಕುತ್ತವೋ ಹಾಗೆ, ಶ್ರೀಕೃಷ್ಣನ ಇಚ್ಛೆಗಳ ನಿಯಮಗಳನ್ನು ಪಾಲಿಸುವ ಪ್ರತಿಯೊಬ್ಬರೂ, ಶ್ರೀಮದ್ಭಗವದ್ಗೀತೆ ಮತ್ತು ಶ್ರೀಮದ್ಭಾಗವತ ಮೊದಲಾದ ವೈದಿಕ ಶಾಸ್ತ್ರಗ್ರಂಥಗಳು ಪ್ರಕಟಪಡಿಸಿರುವಂತೆ ಮತ್ತು ಅಪ್ಪಟ ಆಧ್ಯಾತ್ಮಿಕ ಗುರುಗಳು ಉಪದೇಶಿಸಿರುವಂತೆ, ಅತ್ಯುಚ್ಛ ಲಾಭಗಳನ್ನು ಬದುಕಿನಲ್ಲಿ ಗಳಿಸಿಕೊಳ್ಳುತ್ತಾರೆ.”
ಬ್ರಹ್ಮದೇವನ ಉಪದೇಶದ ಫಲವಾಗಿ ಪ್ರಿಯವ್ರತ, ಆಧ್ಯಾತ್ಮಿಕ ಶಾಸ್ತ್ರಗ್ರಂಥಗಳು ಮತ್ತು ಋಷಿಗಳ ಮೂಲಕ ಹೇಳಲ್ಪಟ್ಟಿರುವ, ಶ್ರೀಕೃಷ್ಣನ ಆಜ್ಞೆಯನ್ನು ಕೂಡಲೇ ಒಪ್ಪಿಕೊಂಡನಾದರೂ, ತಾನು ಮಾತ್ರ ಗಲಿಬಿಲಿಗೊಂಡವನಂತೆ ಉಳಿದುಕೊಂಡ. ಯಾವ ವಿಧಾಯಕವನ್ನು ಅವನು ಪಾಲಿಸಬೇಕು?
ಮೊದಲು ಅವನ ಆಧ್ಯಾತ್ಮಿಕ ಗುರುಗಳಾದ ನಾರದರು ಐಹಿಕ ವಿಷಯಗಳನ್ನೆಲ್ಲ ತ್ಯಜಿಸಿ ಪರಿತ್ಯಾಗಿಯಾಗಿ ಜೀವನ ನಡೆಸಬೇಕೆಂದು ಹೇಳಿದ್ದರು. ಈಗ ನಾರದರಿಗೂ ಗುರುವಾದ ಪರಬ್ರಹ್ಮ, ರಾಣಿಯರು-ರಾಜಕುಮಾರಿಯರು-ಅರಮನೆಗಳು ತುಂಬಿದ ಇಡೀ ರಾಜ್ಯವನ್ನೇ ಸ್ವೀಕರಿಸು ಎಂದು ಒತ್ತಾಯಿಸುತ್ತಿದ್ದಾನೆ.
ಶ್ರೀಕೃಷ್ಣ, ಆಧ್ಯಾತ್ಮಿಕ ಬದುಕಿನೊಡನೆಯೂ ಮತ್ತು ಐಹಿಕ ಪ್ರಪಂಚದ ಸಂಬಂಧಗಳ ನಡುವೆಯೂ ಅಂತರ್ಗತವಾಗಿರುವಂತೆ ಕಾಣುವ ವಿರೋಧಾಭಾಸಗಳನ್ನು ಭಗವದ್ಗೀತೆಯಲ್ಲಿ (18.66) ಪ್ರಕಟಪಡಿಸಿದ್ದಾನೆ. ಶ್ರೀಕೃಷ್ಣ ಅರ್ಜುನನಿಗೆ ಹೀಗೆ ವಿವರಿಸುತ್ತಾನೆ:
ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಷ್ಯಾಮಿ ಮಾಶುಚಃ ||
“ಸರ್ವಧರ್ಮಗಳನ್ನೂ ತ್ಯಜಿಸಿ ನನ್ನೊಬ್ಬನನ್ನೇ ಶರಣು ಹೊಂದು, ನಿನ್ನನ್ನು ಎಲ್ಲಾ ಪಾಪಗಳಿಂದ ಉದ್ಧಾರಮಾಡುತ್ತೇನೆ, ಹೆದರಬೇಡ.” (ದುಃಖಿಸಬೇಡ) ಆದ್ದರಿಂದ, ಒಂದು ಕ್ರಿಯೆ, ಆಧ್ಯಾತ್ಮಿಕವೊ ಅಥವಾ ಲೌಕಿಕವೊ, ಅಪವಿತ್ರವೋ ಅಥವಾ ಪವಿತ್ರವೂ, ಅಸಂಗತವೆನಿಸುವಂತಹದೋ ಅಥವಾ ಮುಂದುವರಿಸಲು ಅರ್ಹವಾದ ಸಂಗತವೊ, ಎನ್ನುವ ಒರೆಹಚ್ಚುವಿಕೆಯೆಲ್ಲ ಶ್ರೀಕೃಷ್ಣನ ಅಪೇಕ್ಷೆಗಳ ಮೇಲೆ ಅವಲಂಬಿಸಿರುತ್ತದೆ.
ಹೀಗಾದಾಗ, ಆ ಕ್ರಿಯೆ ಆಧ್ಯಾತ್ಮಿಕವಾದದ್ದು, ಪರಿಶುದ್ಧವಾದದ್ದು ಮತ್ತು ಯಾರನ್ನಾದರೂ ಪರಿಪೂರ್ಣತೆಯ ಹತ್ತಿರಕ್ಕೆ ಕೊಂಡೊಯ್ಯುವಂತಹದು. ಹೀಗಾಗದಿದ್ದಾಗ, ಇಂತಹದೊಂದು ಕ್ರಿಯೆ, ಅದ್ಭುತವೆಂಬಂತೆ ಕಂಡರೂ, ಅದು ಅಪವಿತ್ರವಾದದ್ದು ಮತ್ತು ಐಹಿಕ ಅಸ್ತಿತ್ವದೊಂದಿಗೆ ಯಾರನ್ನಾದರೂ ಬಲವಾಗಿ ಬಂಧಿಸುವಂತಹದು.
ಪ್ರಿಯವ್ರತನ ಉಭಯಸಂಕಟಕ್ಕೆ ಪರಿಹಾರವಾದರೂ ಏನು? ಅಧಿಕಾರವನ್ನು ತುಚ್ಛೀಕರಿಸುವುದು. ನಾರದರು ಅವನಿಗೆ ಪರಿತ್ಯಾಗಿಯಾಗಿ ಉಳಿಯುವುದನ್ನು ಹೇಳಿಕೊಟ್ಟಿದ್ದರು; ಬ್ರಹ್ಮದೇವರು ಚಕ್ರವರ್ತಿ ಪದವಿ ಸ್ವೀಕರಿಸುವಂತೆ ಬೋಧಿಸಿದ್ದರು. ಐಹಿಕ ಪ್ರಪಂಚದಲ್ಲಿ ಚಕ್ರವರ್ತಿಯಾಗಿ ಇದ್ದಾಗಲೂ ಪರಿತ್ಯಕ್ತನಂತಿರುವುದಕ್ಕೆ ದೊಡ್ಡ ಆಧ್ಯಾತ್ಮಿಕ ವಿಚಾರಪ್ರಜ್ಞೆ ಇರಬೇಕು.
ಬ್ರಹ್ಮಮೂಲದವರಲ್ಲೊಬ್ಬರಾದ, ಮಹಾನ್ ಗುರುಗಳೂ ಆದ ಶ್ರೀರೂಪಗೋಸ್ವಾಮಿ ಅವರು ಭೌತವಸ್ತುವನ್ನು ಶ್ರೀಕೃಷ್ಣಸೇವೆಯಲ್ಲಿ ತೊಡಗಿಸುವ ಸಾಮರ್ಥ್ಯ ಎಂದು ಈ ವಿಚಾರಪ್ರಜ್ಞೆಯನ್ನು ಅರ್ಥೈಸಿದ್ದಾರೆ. ನಾವು ಕೊನೆಯುಸಿರೆಳೆದಾಗ, ನಮ್ಮೆಲ್ಲ ಸ್ವಾಧೀನಾನುಭೋಗಗಳನ್ನು ಹಿಂದೆ ಬಿಟ್ಟು ಪಯಣಿಸುತ್ತೇವೆ.
ನಿಜವಾಗಲೂ ಯಾವುದೂ ನಮಗೆ ಸೇರಿದ್ದಲ್ಲ. ನಿಜವಾದ ಪರಿತ್ಯಾಗಿ ಆದ್ದರಿಂದ ತಾನು ಹೊಂದಿರದ ಯಾವುದನ್ನೂ ಪರಿತ್ಯಜಿಸುವುದಿಲ್ಲ. ಆದರೆ, ಬದಲಾಗಿ ತನ್ನದೆಲ್ಲವನ್ನೂ ವಿಶ್ವದೊಡೆಯ ಶ್ರೀಕೃಷ್ಣನ ಭಕ್ತಿಸೇವೆಯಲ್ಲಿ ಮುಡಿಪಾಗಿಸಿಬಿಡುತ್ತಾನೆ.

”ಚಕ್ರವರ್ತಿಯಾಗಿ ನಿನ್ನ ಸ್ಥಾನವನ್ನು ನಿನ್ನ ಸುಖಭೋಗಗಳಿಗೆ ಬಳಸಬೇಡ”- ಎಂದ ಬ್ರಹ್ಮದೇವರು ಮಾತು ಮುಂದುವರಿಸುತ್ತಾರೆ, ”ಆಗ ನೀನು ಮತ್ತೊಮ್ಮೆ ಇನ್ನೊಂದು ಶರೀರವನ್ನು ಹೊಂದಿ ಐಹಿಕ ಕ್ಲೇಶಗಳ ಬಲೆಯಲ್ಲಿ ಬಂಧಿತನಾಗಿ ಉಳಿದುಬಿಡುವೆ. ಚಕ್ರವರ್ತಿ ಆಗು, ಆದರೆ ಶ್ರೀಕೃಷ್ಣನ ಸೇವಕನಾಗಿರು.
ಅವನನ್ನು ಒಲಿಸುವ ವಿಷಯದಲ್ಲಿಯೇ ನಿನ್ನ ಮನಸ್ಸನ್ನು ಕೇಂದ್ರೀಕರಿಸು. ರಾಜ್ಯಭಾರದ ನೋವು-ನಲಿವುಗಳಿಂದ ವಿಚಲಿತನಾಗಬೇಡ. ಅವುಗಳ ಬರುವಿಕೆ ಮತ್ತು ಹೋಗುವಿಕೆಯನ್ನು ಸಹಿಸಿಕೊ ಅವು ತಮ್ಮಷ್ಟಕ್ಕೆ ತಾವೇ ಕಾಣಿಸಿಕೊಂಡು ಮರೆಯಾಗುತ್ತವೆ. ಸುಖದುಃಖಗಳನ್ನು ಹಿಂದಿನ ರಾತ್ರಿಯ ಕನಸೆಂಬಂತೆ ಭಾವಿಸಿಕೊಂಡು ಬಿಡು. ಶ್ರೀಕೃಷ್ಣ ಸೇವೆಯಲ್ಲಿ ಅಚಲನಾಗಿರು.”
‘ಇಷ್ಟಾದರೂ ಮನಸ್ಸು ಮತ್ತು ಇಂದ್ರಿಯಗಳ ಬಗ್ಗೆ ಜಾಗರೂಕನಾಗಿರು.” ಬ್ರಹ್ಮದೇವರು ಎಚ್ಚರಿಸುತ್ತಾರೆ, “ಇವೆರಡನ್ನು ಹತೋಟಿಯಲ್ಲಿಡದಿದ್ದರೆ, ಅವು ನಿನ್ನನ್ನು ತಾತ್ಕಾಲಿಕವಾದವುಗಳನ್ನು ಅರಸುವಂತೆ ಮಾಡುತ್ತವೆ. ನಿನ್ನ ಜೀವನವನ್ನು ಪೋಲು ಮಾಡುವಂತೆ ಪ್ರೋತ್ಸಾಹಿಸುತ್ತವೆ.
ಮತ್ತು ನಿನ್ನ ಗುರಿಯಿಂದ ನಿನ್ನನ್ನು ಹಿಂದಕ್ಕೆಳೆಯುತ್ತವೆ. ಆದ್ದರಿಂದ, ರಾಜತನವನ್ನು ಕಂಡು ಬೆದರಬೇಡ. ಆದರೆ, ಹತೋಟಿಯಿಲ್ಲದ ಮನಸ್ಸು ಮತ್ತು ಇಂದ್ರಿಯಗಳು ಎನ್ನುವ ನಿಜವಾದ ಶತ್ರುಗಳನ್ನು ಕಂಡು ಭಯಭೀತನಾಗು, ಸರ್ವಸಂಗತ್ಯಾಗಿಯಾಗಿ ಒಬ್ಬ ಒಂದು ಗೊಂಡಾರಣ್ಯದಿಂದ ಇನ್ನೊಂದಕ್ಕೆ ಸಂಚರಿಸಿದರೂ, ಆ ಶತ್ರುಗಳು ಹುಡುಕಿಕೊಂಡು ಬಂದು ದೊಡ್ಡ ಅಪಾಯವನ್ನುಂಟು ಮಾಡುತ್ತವೆ.
ಮತ್ತೆ, ಒಬ್ಬ ಮನುಷ್ಯ ವಿವಾಹಬಂಧನದಲ್ಲಿ ಸಿಲುಕಿಕೊಂಡಿದ್ದರೂ, ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೆ, ನಾಲ್ಕು ಕೋಟೆಗೋಡೆಗಳ ನಡುವೆ ಸುರಕ್ಷಿತನಾಗಿರುವ ಚಕ್ರವರ್ತಿಯ ಹಾಗೆ ನಿರಾತಂಕನಾಗಿರುತ್ತಾನೆ. ಹೆಂಡತಿ ಮತ್ತು ಮಕ್ಕಳೊಂದಿಗಿನ ಜೀವನವೂ ಕೂಡ ಒಬ್ಬ ಸ್ವತೃಪ್ತ, ಜ್ಞಾನಾತ್ಮನಿಗೆ ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ.”
ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು, ಜೊತೆಗೆ ನಿಜವಾದ ಸರ್ವಸಂಗಪರಿತ್ಯಾಗ – ಶ್ರೀಕೃಷ್ಣನ ಸೇವೆಯಲ್ಲಿ ಸರ್ವಸ್ವವನ್ನೂ ಸಮರ್ಪಿಸಿ ಆಧ್ಯಾತ್ಮಿಕ ಬದುಕಿನ ನೀತಿನಿಯಮಗಳನ್ನು ಅನುಸರಿಸಿದರೆ, ಇವೆರಡನ್ನು ಸ್ವಾಭಾವಿಕವಾಗಿಯೇ ಸಾಧಿಸಿಬಿಡಬಹುದು.
ಆದ್ದರಿಂದ ಬ್ರಹ್ಮದೇವರು ವಿವರಿಸುತ್ತಾರೆ, “ಯಾರಾದರೂ ಸರಿ, ಶ್ರೀಕೃಷ್ಣನ ಪಾದಪದ್ಮಗಳಲ್ಲಿ ತಮ್ಮ ಪ್ರಜ್ಞೆಯನ್ನು ಶ್ರದ್ಧಾಪೂರ್ವಕವಾಗಿ ಸಮರ್ಪಿಸಿದಾಗ ಮಾತ್ರ ನಿಜವಾದ ಆಶ್ರಯವನ್ನು ಹೊಂದಬಹುದು.”
ಆದರೆ, ಐಹಿಕ ಸುಖಭೋಗಗಳಿಂದ ಸುತ್ತುವರಿಯಲ್ಪಟ್ಟಿರುವ ಒಬ್ಬ ರಾಜ ಅಥವಾ ಒಬ್ಬ ಸಮಕಾಲೀನ ಮನುಷ್ಯ, ತನ್ನ ಸ್ವಾರ್ಥವನ್ನು ಮತ್ತು ಇಂದ್ರಿಯಾಸಕ್ತಿಗಳನ್ನು ಬದಿಗೆ ಸರಿಸಿ, ಪ್ರಜ್ಞಾಪೂರ್ವಕವಾಗಿ ಶ್ರೀಕೃಷ್ಣ ಭಕ್ತಿ ಸೇವೆಯತ್ತ ತನ್ನನ್ನು ಸಮರ್ಪಿಸಿಕೊಳ್ಳುವುದು ಆಗುತ್ತದೆಯೆ?
ಶ್ರೀಕೃಷ್ಣನ ಸೇವೆಯಲ್ಲಿ ತನ್ನ ಸರ್ವಸ್ವವನ್ನೂ ಉಪಯೋಗಿಸಿಕೊಳ್ಳುವುದು ಸಾಧ್ಯವೇ? ಹೌದು-ಸಾಧ್ಯವಾಗುತ್ತದೆ! ಅವನು ಖಂಡಿತವಾಗಿ ಶ್ರೀಕೃಷ್ಣನ ದಿವ್ಯನಾಮಗಳನ್ನು ಪಠಿಸುವ ಅಭ್ಯಾಸವನ್ನು ಇಟ್ಟುಕೊಂಡಾಗ, ಯಶಸ್ಸಿಗೊಂದು ಮುಖ್ಯ ಅಂಶ – ಶ್ರೀಕೃಷ್ಣ ಪ್ರೇಮ ತಾನಾಗಿಯೇ ಸ್ವಾಭಾವಿಕವಾಗಿ ಅವನ ಹೃದಯದಲ್ಲಿ ರೂಪುಗೊಳ್ಳುತ್ತದೆ.
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ |
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ ||

“ಜಗಳ ಕದನಗಳ ಈ ಕಾಲದಲ್ಲಿ ದಿವ್ಯನಾಮಗಳ ಪಠನೆಗಿಂತಲೂ, ಆಧ್ಯಾತ್ಮಿಕ ಪರಿಪೂರ್ಣತೆ ಗಳಿಸಲು ಬೇರೆ ದಾರಿ ಇಲ್ಲ. ಶ್ರೀಕೃಷ್ಣನ ದಿವ್ಯ ನಾಮಗಳ ಪಠನೆಯೇ ದಾರಿ.” ನೀರನ್ನು ಹಾಕುತ್ತ ಹಾಕುತ್ತ ಸಸ್ಯವೊಂದು ಬೆಳೆಯುವ ಹಾಗೆ, ಶ್ರೀಕೃಷ್ಣನೊಂದಿಗಿನ ನಮ್ಮ ಪ್ರೀತಿಯ ಸಂಬಂಧ ನಾವು ಅವನ ದಿವ್ಯ ನಾಮ ಸಂಕೀರ್ತನಗಳನ್ನು ಹೆಚ್ಚು ಹೆಚ್ಚು ಮಾಡಿದಂತೆಲ್ಲ ಹುಲುಸಾಗಿ ಬೆಳೆಯುತ್ತದೆ.
ಹೀಗಾಗಿ, ಅವನ ಸೇವೆ ಮಾಡಬೇಕು ಎನ್ನುವ ನಮ್ಮ ಒಲವು, ನಮ್ಮ ವಿಧಿಲಿಖಿತದ ಪ್ರಕಾರ, ನಾವು ಸಿಂಹಾಸನದ ಮೇಲೆ ಕುಳಿತಿದ್ದರೂ, ತಿರುಕನೊಬ್ಬ ಹೆಣೆದ ಚಾಪೆಯ ಮೇಲೆ ಕುಳಿತಿದ್ದರೂ ಅತವಾ ಆಧುನಿಕ ಕುರ್ಚಿ ಮೇಜುಗಳೊಂದಿಗಿದ್ದರೂ, ಹೆಚ್ಚುತ್ತಿರುತ್ತದೆ.
ಹೀಗೆ ನಾವು ನಮ್ಮ ಶುದ್ಧ ಪ್ರಜ್ಞೆಯಿಂದ, “ನನ್ನನ್ನು ಶ್ರೀಕೃಷ್ಣ ಇಲ್ಲಿ ಸ್ಥಾಪಿಸಿದ್ದಾನೆ. ಇಂತಹದೊಂದು ಕೆಲಸ ಮಾಡುವುದರ ಮೂಲಕ ನಾನು ಪರಮಾತ್ಮನನ್ನು ಹೇಗೆ ಮೆಚ್ಚಿಸಬಹುದು?’ – ಎಂದು ಆಲೋಚಿಸಿಕೊಂಡು ಕಾರ್ಯಪ್ರವೃತ್ತರಾಗಬಹುದು.
ಎಲ್ಲರ ಹೃದಯದಲ್ಲೂ ವಾಸಿಸುವ ಶ್ರೀಕೃಷ್ಣನ ದಯೆಯಿಂದ, ಈ ಶುದ್ಧ ಪ್ರಜ್ಞೆಯ ಎಲ್ಲ ಅಡ್ಡಿ ಆತಂಕಗಳನ್ನು ನಾವು ನಿವಾರಿಸಿಕೊಳ್ಳಬಹುದು.
ಶ್ರೀಕೃಷ್ಣನ ಬಗ್ಗೆ ತಿಳಿದುಕೊಳ್ಳಲು ನಾವು ಕಾತರರಾಗಿದ್ದರೆ, ಧರ್ಮ ಗ್ರಂಥಗಳ ಮೂಲಕ ಅವನ ಅಸ್ತಿತ್ವನ್ನು ಎಲ್ಲೆಲ್ಲೂ ಹೇಗೆ ಗುರುತಿಸಬಹುದು ಎನ್ನುವುದನ್ನು ಅರಿತುಕೊಳ್ಳಬಹುದು. ನೀರನ್ನು ಕುಡಿಯುವಾಗ, ನಮ್ಮ ದಾಹವನ್ನು ತಣಿಸುತ್ತಿರುವ ರುಚಿ ಅವನು ಎಂದುಕೊಳ್ಳಬಹುದು. ಗಗನದಲ್ಲಿ ಹಾರಾಡುತ್ತಿರುವ ಪಕ್ಷಿಸಮೂಹವನ್ನು ತಲೆಯೆತ್ತಿ ನೋಡಿದಾಗ, ಶ್ರೀಕೃಷ್ಣನ ಕಲಾಭಿರುಚಿಯನ್ನು ಮೆಚ್ಚಿಕೊಳ್ಳಬಹುದು…
ನಮ್ಮ ಸಾಮರ್ಥ್ಯಗಳು ಅವನು ನೀಡಿದ ಬಳುವಳಿ, ನಮ್ಮ ಜ್ಞಾನ ಅವನ ಜ್ಞಾನದ ಒಂದು ಅಣು, ಮತ್ತು ನಮ್ಮ ಸಾವು ನಾವು ತಪ್ಪಿಸಿಕೊಳ್ಳಲಾಗದ ಅವನ ಪ್ರತಿನಿಧಿ. ಇಡೀ ವಿಶ್ವದಲ್ಲಿ ಅವನ ಪ್ರಬಲ ಶಕ್ತಿಗಳು ಆಧಾರವಾಗಿವೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಾಗ ಈ ಪ್ರಪಂಚದೊಳಗಿರುವ ಅದ್ಭುತಗಳೆಲ್ಲವನ್ನೂ ಶ್ರೀಕೃಷ್ಣನ ಶಕ್ತಿಯ ಒಂದು ಅತಿ ಸೂಕ್ಷ್ಮ ತುಣುಕು ಎನ್ನುವಂತೆ ಕಾಣಬಹುದು.
ನಾವು ಶ್ರೀಕೃಷ್ಣನ ಬಗ್ಗೆ ಕೇಳಿದಾಗ – ತಿಳಿದುಕೊಂಡಾಗ, ಅವನು ಪರಮ ಪ್ರಧಾನ ಪ್ರಬಲ ಆಜ್ಞಾಶಕ್ತಿಯಾಗಿ ತನ್ನ ಭಕ್ತರನ್ನೆಲ್ಲ ತಣಿಸುವ, ಸಲಹುವ ಮತ್ತು ನಿರ್ವಹಿಸುವ ಪರಿಪೂರ್ಣ ಸಂಚಯನ ಶಕ್ತಿಯನ್ನು ಇಟ್ಟುಕೊಂಡಿದ್ದಾನೆ ಎನ್ನುವುದು ನಮಗೆ ಗೋಚರವಾಗುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ನಲುಗಿಹೋಗಿರುವಂತೆ ಕಾಣುವ ಲೋಪಭರಿತ ಬಾಂಧವ್ಯಗಳೊಂದಿಗೆ ನಮ್ಮ ಪ್ರೀತಿಯನ್ನು ಪರಿಮಿತಿಗೊಳಿಸಿಕೊಂಡಿರುವ ನಮ್ಮ ತಪ್ಪನ್ನು ಸ್ಪಷ್ಟವಾಗಿ ಕಾಣುತ್ತೇವೆ.
ನಮ್ಮ ಹಾತೊರೆಯುವಿಕೆಗಳನ್ನು ಇನ್ನೂ ವೃದ್ಧಿಗೊಳಿಸುವ ಹಾಗೆ ಶ್ರೀಕೃಷ್ಣ ನಮಗೆ ಭಗವದ್ಗೀತೆಯಲ್ಲಿ (18.68-69) ಹೇಳುತ್ತಾನೆ.
ಯ ಇದಂ ಪರಮಂ ಗುಹ್ಯಂ ಮದ್ಬಕ್ತೇಷ್ವಭಿಧಾಸ್ಯತಿ
ಭಕ್ತಿಂ ಮಯಿ ಪರಾಂ ಕೃತ್ತ್ವಾ ಮಾಂ ಏವೈಷ್ಯತಿ ಅಸಂಶಯಃ
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ ಮೇ ಪ್ರಿಯಕೃತ್ತಮಃ
ಭವಿತಾ ನ ಚ ಮೇ ತಸ್ಮಾದ್ ಅನ್ಯಃ ಪ್ರಿಯತರೋ ಭುವಿ
”ಭಕ್ತರಿಗೆ ಈ ಮಹಾನ್ ರಹಸ್ಯವನ್ನು (ಕೃಷ್ಣ ಪ್ರಜ್ಞೆ) ಹರಡುವವರಿಗೆ, ಶುದ್ಧ ಭಕ್ತಿ ಸೇವೆ ಖಾತರಿಯಾದದ್ದು, ಮತ್ತು ಅಂತಿಮವಾಗಿ ಅವರು ನನ್ನಲ್ಲಿಗೆ ಹಿಂತಿರುಗಿ ಬರುತ್ತಾರೆ. ಪ್ರಪಂಚದಲ್ಲಿ ಇಂತಹ ಸೇವಕರಿಗಿಂತಲೂ ಹೆಚ್ಚು ಪ್ರಿಯರು ನನಗೆ ಬೇರೊಬ್ಬರಿಲ್ಲ, ಮತ್ತೆ ಇನ್ನು ಯಾವತ್ತೂ ಇನ್ನೊಬ್ಬರು ಪ್ರಿಯರಾಗುವುದಿಲ್ಲ.”
ಶ್ರೀ ಶ್ರೀ ಚೈತನ್ಯ ಮಹಾಪ್ರಭು ಅವರೂ ಹೀಗೆಯೇ ಪ್ರಾರ್ಥಿಸುತ್ತಾರೆ. “ನೀವು ಭೇಟಿ ಮಾಡುವ ಎಲ್ಲರನ್ನೂ ಶ್ರೀಕೃಷ್ಣನ ಆಜ್ಞೆಗಳನ್ನು ಅನುಸರಿಸುವಂತೆ ತಿಳಿಸಿರಿ- ಏಕೆ೦ದರೆ ಅವು ಭಗವದ್ಗೀತೆಯಲ್ಲಿ ಮತ್ತು ಶ್ರೀಮದ್ಭಾಗವತದಲ್ಲಿ ಕಾಣಿಸಿರುವಂತಹದು. ಈ ರೀತಿಯಲ್ಲಿ ನೀವೊಬ್ಬ ಗುರು ಆಗಿರಿ ಮತ್ತು ನಿಮ್ಮ ಆಸುಪಾಸಿನಲ್ಲಿರುವವರನ್ನೆಲ್ಲ ಬಂಧಮುಕ್ತರನ್ನಾಗಿಸಿ.

ಈ ಉಪದೇಶಾತ್ಮಕ ಆಜ್ಞೆಯನ್ನು ಅನುಸರಿಸಿರಿ, ಮತ್ತು ನಿಮ್ಮ ಆಧ್ಯಾತ್ಮಿಕ ಮುಂದುವರಿಕೆಗೆ ನಿಮ್ಮ ಗೃಹಜೀವನ ಯಾವ ತಡೆಯನ್ನೂ ಉಂಟುಮಾಡಲಾರದು.” ಶ್ರೀ ಚೈತನ್ಯ ಮಹಾಪ್ರಭು ಅವರ ಅಣತಿಯಂತೆ ಎಲ್ಲೆಡೆ ಉಪದೇಶಾಮೃತವನ್ನು ಹರಡುವ ಯಾವುದೇ ಪ್ರಾಮಾಣಿಕ ವ್ಯಕ್ತಿ, ಶ್ರೀಕೃಷ್ಣ ಕೃಪೆಗೆ ಒಳಪಡುತ್ತಾನೆ. ಮತ್ತು, ಐಹಿಕ ಪ್ರಭಾವಗಳಿಂದ ಬಾಧೆಗೊಳಪಡದವನಾಗುತ್ತಾನೆ.
ಶ್ರೀಕೃಷ್ಣನ ಬಗ್ಗೆ ಮಾತನಾಡುತ್ತ ನಾವು ಉಪದೇಶಿಸಬಹುದು, ಅಥವಾ ನಾವು ನಮ್ಮ ಜ್ಞಾನ, ಹಣ, ಸಾಮರ್ಥ್ಯ, ಅಥವಾ ಸಮಯಗಳನ್ನು ಸಮರ್ಪಿಸಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸಬಹುದು. ಯಾರಾದರೊಬ್ಬರು ಪಂಡಿತರೊ, ವಿಜ್ಞಾನಿಯೊ, ತತ್ತ್ವಜ್ಞಾನಿಯೊ ಅಥವಾ ಕವಿಯೊ ಆಗಿದ್ದರೆ, ಅಂತಹವರು ಶ್ರೀಕೃಷ್ಣನ ಶಕ್ತಿಚೈತನ್ಯಗಳನ್ನು ಅಧ್ಯಯನ ಮಾಡಬಹುದು ಮತ್ತು ಈ ಅಧ್ಯಯನದ ಫಲವನ್ನು ಶ್ರೀಕೃಷ್ಣನ ಶ್ರೇಷ್ಠತೆಯನ್ನು ವೈಭವಾನ್ವಿತಗೊಳಿಸಲು ಮೀಸಲಿಡಬಹುದು.
ಒಬ್ಬರು ಆಡಳಿತಗಾರರೊ ಅಥವಾ ರಾಜಕಾರಣಿಯೊ ಆಗಿದ್ದರೆ, ಶ್ರೀಕೃಷ್ಣನ ಶ್ರೇಷ್ಠತೆಯನ್ನು ರಾಜತಂತ್ರಜ್ಞತೆಯ ಮೂಲಕ ಸ್ಥಾಪಿಸಬಹುದು. ಯಾರಾದರೊಬ್ಬರು ವ್ಯಾಪಾರಿಯಾಗಿದ್ದಲ್ಲಿ, ಉದ್ದಿಮೆದಾರರಾಗಿದ್ದಲ್ಲಿ ಅಥವಾ ವ್ಯವಸಾಯಿಯಾಗಿದ್ದಲ್ಲಿ, ಅಂತಹವರು ತಮ್ಮ ಹಣವನ್ನು ಹಣವೆಂದರೆ ಶ್ರೀಕೃಷ್ಣನದು – ಅವನಿಗಾಗಿರುವುದು ಎಂದು ಭಾವಿಸಿ ಅವನ ಕೆಲಸ ಕಾರ್ಯಗಳಿಗೆ ಅದನ್ನು ವಿನಿಯೋಗಿಸಬಹುದು.
ಬ್ರಹ್ಮದೇವರು ಪ್ರಿಯವ್ರತನಿಗೆ ತಮ್ಮ ಎಲ್ಲ ಮಾತುಗಳನ್ನೂ ಸಂಗ್ರಹರೂಪದಲ್ಲಿ ಹೇಳುತ್ತಾರೆ: ”ಶ್ರೀ ಕೃಷ್ಣನ ಆಜ್ಞೆಗಳನ್ನು ಪಾಲಿಸುವುದರ ಮೂಲಕ ಅವನಲ್ಲಿ ಆಶ್ರಯ ಬೇಡು. ಹೀಗಾದಾಗ ಶ್ರೀಕೃಷ್ಣ ತಾವರೆ ಹೂವಿನ ಎಸಳುಗಳಲ್ಲಿ ಜೇನುನೊಣ ಸೇರಿ ಹೋಗಿ ಬೇಸಿಗೆಯ ಬೇಗೆಯಿಂದ ರಕ್ಷಣೆ ಪಡೆಯುವ ಹಾಗೆ, ನಿನಗೆ ಯಾವಾಗಲೂ ರಕ್ಷಣೆ ನೀಡುತ್ತಾನೆ.”
ಪ್ರಿಯವ್ರತನ ಹುಬ್ಬು, ಬ್ರಹ್ಮದೇವರ ಮಾತುಗಳನ್ನು ಕೇಳುತ್ತ ಕೇಳುತ್ತ ಮುದುಡಿಕೊಂಡಿತು. ಕ್ಷಣಗಳು ಕಳೆಯುತ್ತಿದ್ದಂತೆಯೆ, ಸುತ್ತಲಿನ ಪಕ್ಷಿಗಳ ಚಿಲಿಪಿಲಿ-ಚೀರಲು ಎಲ್ಲವೂ ಥಟ್ಟನೆ ಹೆಚ್ಚಾದಂತೆ ಕಂಡಿತು. ಯಾರೂ ಅಲುಗಾಡಲಿಲ್ಲ. ಅಂತಿಮವಾಗಿ ಪ್ರಿಯವ್ರತ ತನ್ನ ತಲೆಯನ್ನೆತ್ತಿದ. ಮತ್ತು ಮೈಬಾಗಿಸಿ ಬ್ರಹ್ಮದೇವರಿಗೆ ಭಕ್ತಿಯಿಂದ ನಮಸ್ಕರಿಸಿದಾಗ, ಅವನ ಉದಾತ್ತ ಮುಖಭಾವದಲ್ಲಿ ಆಳವಾದ ಸಂತಸ ಹರಡಿಕೊಂಡಿತ್ತು. ಪ್ರಿಯವ್ರತ ರಾಜನಾಗಲಿದ್ದ – ಬ್ರಹ್ಮದೇವನ ಅಣತಿಯನ್ನು ಸ್ವೀಕರಿಸಿದ್ದ.
ಮನುವಿಗೆ ಮೊದಲು ನಿರಾಳವೆನಿಸಿತು, ಅನಂತರ ಆನಂದವಾಯಿತು, ಮತ್ತು ಕೊನೆಗೆ ಗಾಢವಾದ ಕೃತಜ್ಞತೆಗಳೊಂದಿಗೆ ಅವನು ಬಹ್ಮದೇವರನ್ನು ಪೂಜಿಸಿದ. ನಾರದ ಮತ್ತು ಚಿಂತೆಗಳಿಂದ ಮುಕ್ತನಾದ ಪ್ರಿಯವ್ರತ ಅಲ್ಲೇ ನಿಂತು ಬ್ರಹ್ಮದೇವರು ಮರೆಯಾಗುವುದನ್ನೇ ನೋಡಿದರು.
ದೇವೋತ್ತಮ ಪುರುಷ ಶ್ರೀ ಕೃಷ್ಣನ ಆಜ್ಞೆ-ಆಕಾಂಕ್ಷೆಗಳಿಗೆ ತಲೆಬಾಗಿ, ಪ್ರಿಯವ್ರತ ಗಂಧಮಾದನ ಪರ್ವತದ ಏಕಾಂತವಾಸವನ್ನು ತ್ಯಜಿಸಿದ ಮತ್ತು ತನ್ನ ದೇಶದ ರಾಜ್ಯಭಾರವನ್ನು ವಹಿಸಿಕೊಂಡ. ಧಾರ್ಮಿಕ ನೀತಿನಿಯಮಗಳಿಗನುಸಾರ ರಾಜ್ಯವನ್ನಾಳಿದ ಮತ್ತು ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳ ಹಾಗೆ ಸಂರಕ್ಷಿಸಿದ.
ಅವನ ಕಟ್ಟುನಿಟ್ಟಾದ ಸಂಕಲ್ಪಗಳನ್ನು ಗಮನಿಸಿದ ದರೋಡೆಕಾರರು ಮತ್ತು ಚೋರರು ರಾಜ್ಯದಿಂದ ಹೊರಗೋಡಿದರು. ಅವನ ಧರ್ಮಶ್ರದ್ಧೆ ಸಮೃದ್ಧ ಮಳೆಯಾಗುವಂತೆ ಮಾಡಿತು ಮತ್ತು ಸಮೃದ್ಧ ಧವಸ ಧಾನ್ಯಗಳು, ಹಣ್ಣುಗಳು ಉತ್ಪತ್ತಿಯಾದವು. ಪ್ರಜೆಗಳಿಗೆ ಅಧಿಕಾಧಿಕ ಸುಂಕಗಳು ಕೊಡಬೇಕಾದ ಪ್ರಮೇಯ ಬರಲಿಲ್ಲ.
ಪ್ರಿಯವ್ರತ ಬರ್ಹಿಶ್ಮತಿಯನ್ನು ಮದುವೆ ಮಾಡಿಕೊಂಡ ಮತ್ತು ಆ ಮೂಲಕ ಹತ್ತು ಮಕ್ಕಳನ್ನು ಪಡೆದುಕೊಂಡ. ಮಕ್ಕಳನ್ನೆಲ್ಲ ಶುದ್ಧಭಕ್ತಿ ಸೇವೆಗೆ ಅಣಿಗೊಳಿಸಿದ.
ಹೊರನೋಟಕ್ಕೆ ಅವನೊಬ್ಬ ಅಸಾಮಾನ್ಯ, ಶಕ್ತಿಯುತ ಚಕ್ರವರ್ತಿ. ಜೊತೆಗೆ ಹೆಂಡತಿ ಬರ್ಹಿಶ್ಮತಿಯ ಅಂದ ಚಂದಗಳಿಗೆ ಮೋಹಗೊಂಡವನಂತೆ ಮತ್ತು ರಾಜಪದವಿಯ ಜಟಿಲತೆಗಳು, ಐಶ್ವರ್ಯಗಳು, ಅಲ್ಲದೆ ಅಧಿಕಾರ, ಮೊದಲಾದವುಗಳ ಚಕ್ರವ್ಯೂಹದಲ್ಲಿ ಸೇರಿಹೋದವನಂತೆ ಕಾಣಿಸುತ್ತಿದ್ದ. ಆದರೆ ಅಂತರಂಗದಲ್ಲಿ ಅವನು ಪರಿವ್ರಾಜಕನಾಗಿಯೇ ಉಳಿದುಕೊಂಡಿದ್ದ. ಅವನ ಪ್ರಜ್ಞೆ ಅತಿ ಪ್ರೇಮದಿಂದ ಶ್ರೀ ಕೃಷ್ಣನ ಪಾದ ಪದ್ಮಗಳಲ್ಲಿ ನೆಲೆಸಿಹೋಗಿತ್ತು.
ಐಶ್ವರ್ಯ, ಹೆಂಡತಿ, ಮನೆ ಎಂಬುದರ ಬಗ್ಗೆಯೇ ಚಿಂತಿಸುತ್ತ ಅಂತ್ಯ ಕಾಣುವ ಈ ಕಾಲದ ಎಲ್ಲ ಐಹಿಕ ಭೋಗಾಸಕ್ತರ ಸ್ಥಿತಿ ಏನಾಗುತ್ತದೆಂದು ಎಲ್ಲರಿಗೂ ತಿಳಿಸಲು, ಪ್ರಿಯವ್ರತ ಹತಾಶನಾಗಿ ಗೋಳಾಡಿದ: ”ಅಯ್ಯೋ, ನಾನು ಎಂತಹ ದುಸ್ಥಿತಿಗೆ ಬಂದು ಬಿದ್ದೆ!
ಐಹಿಕ ಆಕರ್ಷಣೆಯಲ್ಲಿ ಸಿಲುಕಿಕೊಂಡುಬಿಟ್ಟೆ.
ರೈತನ ಬರಡು ಭೂಮಿಯಲ್ಲಿ ಕಣ್ಣಿಗೆ ಕಾಣದ ದೊಡ್ಡ ಗುಣಿಯ ಆಳದಲ್ಲಿ ಬಂದು ಬೀಳುವ ಅಲೆಮಾರಿಯ ಹಾಗೆ ನನ್ನ ಸ್ಥಿತಿಯೂ ಹಳ್ಳಕ್ಕೆ ಬೀಳುವಂತಾಯಿತಲ್ಲ! ನನ್ನ ಹೆಂಡತಿಯ ಕೈಯಲ್ಲಿ ನಾನೊಂದು ಕುಣಿಯುವ ಕೋತಿ ಆಗಿಹೋದೆನಲ್ಲ! ಆದರೆ, ಇನ್ನಿದು ಸಾಕು – ಈ ಬದುಕು ಸಾಕಾಗಿ ಹೋಗಿದೆ!’
ಹೀಗೆ ತನ್ನ ಬದುಕಿನ ಕೊನೆ ಘಟ್ಟದ ವೇಳೆಗೆ ಪ್ರಿಯವ್ರತ ಸಿಂಹಾಸನವನ್ನು ತ್ಯಜಿಸಿದ. ರಾಜತನವನ್ನು ನಿರಾಕರಿಸಿ ತನ್ನ ಶ್ರೀಮಂತ ರಾಜ್ಯವನ್ನು ತನ್ನ ನಿಷ್ಠ ಮಕ್ಕಳಲ್ಲಿ ಸಮಾನವಾಗಿ ಹಂಚಿಬಿಟ್ಟ. ಐಹಿಕ ಆಶೋತ್ತರಗಳಿಂದ ಬಿಡುಗಡೆಗೊಂಡು ಕೃಷ್ಣ ಪ್ರಜ್ಞೆಯನ್ನೇ ಹೃದಯದ ತುಂಬಾ ತುಂಬಿಕೊಂಡು ಅವನು ಮತ್ತೆ ತಪೋಭೂಮಿ ಸೇರಿದ.
ಸರಳ ಬದುಕಿನ ಪರಿತ್ಯಾಗಿ ಪ್ರಿಯವ್ರತ ಗೆದ್ದಿದ್ದ – ರಾಜನಾಗಿದ್ದರೂ ಮನದಾಳದಲ್ಲಿ ಸರ್ವ ತ್ಯಾಗಿಯಾಗಿ ಪರಿಶುದ್ಧನಾಗಿ ಉಳಿದುಕೊಂಡಿದ್ದ. ಇವೆಲ್ಲವೂ ಆಗಿದ್ದು ಪ್ರಾಚೀನ ಬದುಕಿನ ಸತ್ತ್ವವನ್ನು ಶ್ರೀಕೃಷ್ಣನ ಪಾದಪದ್ಮಗಳಲ್ಲಿ ಸಮರ್ಪಿಸಿದ್ದರಿಂದ!






Leave a Reply