ವೈಯುಕ್ತಿಕ ಲಾಭ

ಸಂಕೀರ್ತನ ಯಶೋಗಾಥೆಗಳು

– ಆಂಗ್ಲಮೂಲ : ರೋಹಿಣೀಸುತ ದಾಸ

ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು ಬಗೆಯಲ್ಲಿ ಲಾಭವೇ ಆಗುತ್ತದೆ. ಇದು ಹಣದ ಲಾಭ ಎಂದುಕೊಳ್ಳಬೇಕಿಲ್ಲ. ಅದು ವರ್ಣಿಸಲಾಗದಂಥ ಲಾಭ. ವೈಯುಕ್ತಿಕ ಲಾಭ. ಪುಸ್ತಕ ವಿತರಣೆಯಲ್ಲಿ ಸಾಕಷ್ಟು ವರ್ಷಗಳ ಕಾಲ ನಿರಂತರವಾಗಿ ತೊಡಗಿಕೊಂಡಿದ್ದ ಮಣಿಧರ ದಾಸರ ಅನುಭವ ಹೀಗಿದೆ:

“ನಾನು ಪುಸ್ತಕ ವಿತರಣೆಯನ್ನು ಮುಂದುವರಿಸಲು ಉತ್ತಮ ಕಾರಣಗಳಿವೆ. ಪುಸ್ತಕವಿತರಣೆಗೆ ಹೊರಟಾಗಲೆಲ್ಲ ಸಂಪೂರ್ಣ ರಕ್ಷಿತನಾಗಿರುವ ಅನುಭವ ನಾನು ಪಡೆಯುತ್ತೇನೆ. ನಾನು ಮಾಡುತ್ತಿರುವ ಕೆಲಸ ಶ್ರೀಲ ಪ್ರಭುಪಾದರಿಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ನಾನು ಬಲ್ಲೆ. ಆದರೆ ಶ್ರೀ ಕೃಷ್ಣನೆಡೆಗಿನ ನನ್ನ ಸಂಬಂಧ ಇನ್ನೂ ನನಗೆ ತಿಳಿದಿರಲಿಲ್ಲ. ಇದು ನನಗೆ ಈ ಪುಸ್ತಕಗಳಿಂದ ಅರಿವಿಗೆ ಬಂತು.

ಕೇವಲ ನಾನು ಪುಸ್ತಕ ವಿತರಣೆಗೆಂದು ಬೀದಿಗೆ ಇಳಿಯುವುದರಿಂದಲೇ ಪ್ರಭುಪಾದರನ್ನು, ಶ್ರೀಕೃಷ್ಣನನ್ನು ಸ್ಮರಿಸಲು ಪ್ರೇರಣೆ ದೊರೆತು ಬಿಡುತ್ತದೆ. ನಿಜಕ್ಕೂ ಇದು ನಿಗೂಢ. ನಾನು ಪುಸ್ತಕ ವಿತರಣೆಗೆ ತೊಡಗಿದೆನೆಂದರೆ, ‘ಹರೇ ಕೃಷ್ಣಮಂತ್ರ’ದ ಸ್ಮರಣೆ ಉಂಟಾಗಿ ಬಿಡುತ್ತದೆ! ಅಷ್ಟೇ ಅಲ್ಲ, ದಾರಿಯಲ್ಲಿ ನನಗೆ ವಿಶೇಷ ರಕ್ಷಣೆಯೊಂದಿಗೆ ಗಾಢವಾದ ಆಧ್ಯಾತ್ಮಿಕ ಶಕ್ತಿಯ ಸಹಾಯವು ದೊರೆಯುತ್ತದೆ.

ಸಂಕೀರ್ತನೆಯಲ್ಲಿ ತೊಡಗಿರುವಾಗ ‘ಶರಣಾಗತಿ’ಗಿಂತ ಅತ್ಯುತ್ತಮವಾದ ಯಶಸ್ಸಿನ ಸೂತ್ರ ಬೇರೆ ತೋರುವುದಿಲ್ಲ. ನಮ್ಮ ನ್ಯೂನತೆಯೇ ಅದು. ನಾವು ಸುಲಭವಾಗಿ ಬಾಗಲಾರೆವು. ಆದರೆ ಸಂಕೀರ್ತನೆ ನಡೆಸುವಾಗ ಶರಣಾಗತರಾಗದೆ ವಿಧಿಯಿಲ್ಲ. ಇದೊಂದು – ಮೊಸಳೆಗಳಿಂದ ತುಂಬಿದ ಕೊಳದ ಆಚೀಚೆ ಕಟ್ಟಿದ ಹಗ್ಗದ ಮೇಲೆ ನಡೆದ ಹಾಗೆ!

ಹಗ್ಗದ ಮೇಲೆ ಜೋಲಿ ಹೊಡೆದರೆ ಕೊಳದಲ್ಲಿ ಈಜಿಕೊಂಡು ಹೋಗಬಲ್ಲೆ ಎನ್ನುವಂತೆಯೂ ಇಲ್ಲ. ಮೊಸಳೆಗಳನ್ನು ನೋಡಿಯೂ ಜೋಲಿ ಹೊಡೆಯದೆ ನಡೆಯಬಲ್ಲೆ ಎನ್ನುವ ವಿಶ್ವಾಸವೂ ಇಲ್ಲ!

ಮಾಯೆಯ ಪ್ರಕೃತಿಯ ಬಗೆಗಿನ ಈ ಆಳವಾದ ಜ್ಞಾನವು ಶ್ರೀಕೃಷ್ಣನ ದಯೆಯಿಂದ ಮಾತ್ರ ದೊರೆಯುತ್ತದೆ. ಮತ್ತು ಇದರಿಂದ ಶರಣಾಗತಿ ಭಾವವು ಸಹಜವಾಗಿ – ಸುಲಭವಾಗಿ ಸಿದ್ಧಿಸುತ್ತದೆ.

ಕೃಷ್ಣನೊಡನೆ ನಮ್ಮ ಪ್ರೇಮ ಬೆಳೆಸಿಕೊಳ್ಳಲು ಇತರೆಲ್ಲ ಪ್ರಯತ್ನಗಳಿಗಿಂತ ಸಂಕೀರ್ತನೆಯೇ ಮಹತ್ವದ್ದೆಂದು ನನ್ನ ಭಾವನೆ. ಕೃಷ್ಣ ತಾನೇ ಹೇಳಿಲ್ಲವೆ, “ನನ್ನ ಸಂದೇಶವನ್ನು ಭಕ್ತರಲ್ಲಿ ಹರಡುವವನೇ ನನಗೆ ಪ್ರಿಯನಾದವನು” ಎಂದು?

ಸಂಪೂರ್ಣ ಶರಣಾಗಿ ಭಕ್ತಿಸೇವೆಗೆ ನಿನ್ನನ್ನು ನೀನು ನೂರಕ್ಕೆ ನೂರು ಅರ್ಪಿಸಿ ಕೊಂಡಿರುವುದು ನನಗೆ ಸಂತೋಷ ತಂದಿದೆ. ಹೇಗಾದರೂ ಸರಿ, ಸದಾ ಕೃಷ್ಣನ ಸ್ಮರಣೆಯಲ್ಲೇ ವ್ಯಸ್ತನಾಗಿರು. ಇದುವೇ ಕೃಷ್ಣಪ್ರಜ್ಞಾಂದೋಲನದ ಮೂಲ ಸೂತ್ರ. ಈಗ ನೀನು ದಯವಿಟ್ಟು ನನಗೊಂದು ಸಹಾಯ ಮಾಡು. ಎಷ್ಟು ಸಾಧ್ಯವೋ ಅಷ್ಟು ನನ್ನ ಪುಸ್ತಕ – ಸಾಹಿತ್ಯಗಳನ್ನು ವಿತರಿಸುವ ಮೂಲಕ ಈ ಸಂದೇಶವನ್ನು ಭೂಮಿಯಲ್ಲಿ ಹರಡು. ಇದರ ಫಲ ನೀನು ಖಚಿತವಾಗಿ ಪಡೆಯುವೆ. ಮರಳಿ ಮನೆಗೆ, ಭಗವದ್ಧಾಮಕ್ಕೆ ತೆರಳುವೆ.

– ಶೀಲ ಪ್ರಭುಪಾದರು.

23 ನವೆಂಬರ್ 1971 ರಂದು ಮಹಾಮಾಯ ಇವರಿಗೆ ಬರೆದ ಪತ್ರದಲ್ಲಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi