ಪ್ರಸಾದದ ಮಹತ್ತ್ವ

ಆಂಗ್ಲ ಮೂಲ : ಯೋಗೇಶ್ವರ ದಾಸ

ದೇವರನ್ನು ಹೇಗೆ ಪ್ರೀತಿಸುವುದು? ಅತ್ಯಂತ ಆನಂದಮಯ ಮಾರ್ಗವನ್ನು ಊಹಿಸಬಲ್ಲಿರಾ? ಅವನಿಗೆ ಸ್ವಾದಿಷ್ಟವಾದ ತಿನಿಸುಗಳನ್ನು ಅರ್ಪಿಸಿ… ಸಮೋಸ, ಲಸ್ಸಿ ಅಥವಾ ಕೆನೆಭರಿತ ಸಾಸು. ಅನಂತರ ಅವನ ಕೃಪೆ ಎಂದು `ಉಳಿದಿದ್ದನ್ನು’ ಸ್ವತಃ ಸೇವಿಸಿ!

ಮೊದಲು ನಾನು ಗೊಂದಲಕ್ಕೆ ಒಳಗಾದೆ. `ಯೋಗ’ ಶಬ್ದವು ಯಾವಾಗಲೂ ಕಟ್ಟುನಿಟ್ಟಿನ ಆಹಾರ ಸೇವಿಸುವ ತೆಳ್ಳಗಿನ ವ್ಯಕ್ತಿಗಳ ಚಿತ್ರವನ್ನೇ ತೋರುತ್ತಿತ್ತು. ಆದರೆ ಇಲ್ಲಿ ನೋಡಿ, ಹೊಟ್ಟೆ ತುಂಬ ಉಣ್ಣಿ ಎಂದು ಉತ್ತೇಜಿಸಲಾಗುತ್ತಿದೆ! ಇದು ರೋಂನಲ್ಲಿರುವ ರಾಧಾ ಕೃಷ್ಣ ಮಂದಿರದ ದೃಶ್ಯ. ಸಂದರ್ಭ : ಕೃಷ್ಣ ಪ್ರಜ್ಞೆಯ ಶ್ರೇಷ್ಠ ಸಂತರಾದ ಭಕ್ತಿವಿನೋದ ಠಾಕುರ ಅವರ ನೆನಪಿನಲ್ಲಿ ಹತ್ತು ಬಗೆಯ ಸ್ವಾದಿಷ್ಟ ತಿನಿಸುಗಳು. ನಮ್ಮ ಆಧ್ಯಾತ್ಮಿಕ ಗುರು ಶ್ರೀಲ ಪ್ರಭುಪಾದರೂ ನಮ್ಮೊಂದಿಗೆ ಈ ಹಬ್ಬದ ಸಡಗರದಲ್ಲಿ ಭಾಗಿಯಾಗಿದ್ದರು. ಆಗ ನಾನು ಅವರ ಬಳಿ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಸಂದೇಹವನ್ನು ಪರಿಹರಿಸಲು ಕೋರಿದೆ.

ನಾನೆಂದೆ, “ಶ್ರೀಲ ಪ್ರಭುಪಾದರೇ, ಎಲ್ಲ ಯೋಗ ಪದ್ಧತಿಗಳಲ್ಲಿ ಇಂದ್ರಿಯ ನಿಗ್ರಹಕ್ಕೆ ಆದ್ಯತೆ. ಆದರೆ ಕೃಷ್ಣ ಪ್ರಜ್ಞೆಯಲ್ಲಿ ಇಷ್ಟೊಂದು ಹಬ್ಬ ಔತಣಕೂಟಗಳಿರುವಾಗ ಅಂತಹ ಸಂಯಮ ಹೇಗೆ ಸಾಧ್ಯ?”

ಅವರು ಉತ್ತರಿಸಿದರು, “ನೀವು ಏಕೆ ಹಿಂಜರಿಯುವಿರಿ? ಇದೇನೂ ಲೌಕಿಕ ತಿನಿಸುಗಳಲ್ಲ. ಪೂರ್ತಿ ತೃಪ್ತಿಯಾಗುವವರೆಗೂ ನೀವು ತೆಗೆದುಕೊಳ್ಳಬೇಕು. ಆದರೆ ಅತಿಯಾಗಿ ಬೇಡ, ಆರೋಗ್ಯಕೆಟ್ಟೀತು ಮತ್ತು ನೀವು ಎರಡು ದಿನ ಉಪವಾಸ ಮಾಡಬೇಕಾದೀತು!”

ಅನಂತರ ಅವರು ಹೇಗೆ ಎಲ್ಲ ಆಹಾರವು ಕೃಷ್ಣನಿಂದ ಬರುತ್ತದೆ ಎಂಬುವುದನ್ನು ವಿವರಿಸತೊಡಗಿದರು. ಅವನಿಗೆ ಅರ್ಪಿಸಲು ಹೇಗೆ ಸಮೃದ್ಧಿಯಾಗಿ ತಯಾರಿಸಬೇಕೆಂಬುದನ್ನೂ ಅವರು ವಿವರಿಸಿದರು.

ಅವರೆಂದರು, “ಉಣ್ಣುವುದು ಒಂದು ಮುಖ್ಯವಾದ ಕಾರ್ಯ. ಅದನ್ನು ಆಧ್ಯಾತ್ಮಿಕ ವಾತಾವರಣದಲ್ಲಿ ಮಾಡಬೇಕು ಮತ್ತು ಯಾವುದೇ ಗಲಭೆ ಇರಬಾರದು. ಪ್ರಸಾದ ಸ್ವೀಕರಿಸುವಾಗ ನಿಮಗೇನಾದರೂ ಅಡ್ಡಿ ಉಂಟಾದರೆ ನೀವು ಉಣ್ಣುವ ಆಸಕ್ತಿಯನ್ನೇ ಕಳೆದುಕೊಳ್ಳುವಿರಿ. ಅಲ್ಲದೆ ನಿಮಗೆ ಅಜೀರ್ಣವಾಗುತ್ತದೆ.”

ಆಧ್ಯಾತ್ಮಿಕ ಪ್ರಜ್ಞೆಯ ಬೆಳವಣಿಗೆಯಲ್ಲಿ ಪ್ರಸಾದದ ಮಹತ್ತ್ವವನ್ನು ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳು ಮತ್ತು ಬೋಧನೆಗಳಲ್ಲಿ ಒತ್ತಿ ಹೇಳಿದ್ದಾರೆ. ಪ್ರಸಾದವು `ಕೃಪೆ’ಗೆ ಸಂಸ್ಕೃತ ಪದ. ಮೇಲೆ ಹೇಳಿರುವಂತೆ ಶ್ರೀ ಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿದ ಸಸ್ಯಾಹಾರವು `ಪ್ರಸಾದ’ ಆಗುತ್ತದೆ. ಇದು `ಭಗವಂತನ ಕೃಪೆ.’ ಪ್ರಭುವಿಗೆ ಅರ್ಪಿಸುವ ಅಂತಹ ನೈವೇದ್ಯದ ಉಳಿಕೆಯನ್ನು ಎಲ್ಲ ರೀತಿಯ ಆಧ್ಯಾತ್ಮಿಕವಾದಿಗಳು ಅಮೂಲ್ಯವೆಂದು ಭಾವಿಸುತ್ತಾರೆ. ವಿಶ್ವಾದ್ಯಂತ ಇಸ್ಕಾನ್‌ ಕೇಂದ್ರಗಳು ಪ್ರತಿ ಭಾನುವಾರ ಉಚಿತವಾದ `ಪ್ರೀತಿಯ ಔತಣ’ವನ್ನು ಆಚರಿಸುತ್ತಿವೆ. ಅಲ್ಲಿ ಭಕ್ತರು ಎಲ್ಲರಿಗೂ ಪ್ರಸಾದವನ್ನು ಹಂಚುತ್ತಾರೆ.

ಇತ್ತೀಚೆಗೆ ವಿಶ್ವದ ಅನೇಕ ಕೃಷ್ಣ ಮಂದಿರಗಳ ಆವರಣದಲ್ಲಿ ಭಕ್ತರು ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಆರೋಗ್ಯದಾಯಕ ಮತ್ತು ಪೌಷ್ಟಿಕಾಂಶ ಉಳ್ಳ ಪ್ರಸಾದವು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ಪ್ರಸಾದವನ್ನು ಆಧ್ಯಾತ್ಮಿಕ ಪರಿಸರದಲ್ಲಿ ಸ್ವೀಕರಿಸಬೇಕೆಂಬ ಶ್ರೀಲ ಪ್ರಭುಪಾದರ ಬೋಧನೆಯನ್ನು ಅನುಸರಿಸಿ ಭಕ್ತರು ಈ ಭೋಜನ ಮಂದಿರಗಳನ್ನು ಶ್ರೀ ಕೃಷ್ಣನ ಲೀಲೆಗಳನ್ನು ಬಿಂಬಿಸುವ ಚಿತ್ರಗಳಿಂದ ಅಲಂಕರಿಸಿದ್ದಾರೆ. ಅಲ್ಲಿ ಸುಮಧುರವಾದ ದೇವಸ್ಥಾನ ಸಂಗೀತ, ಕೀರ್ತನೆಯನ್ನು ಪ್ರಸಾರ ಮಾಡಲಾಗುತ್ತದೆ. ಈ ಹೋಟೆಲುಗಳಲ್ಲಿ ಬಳಸುವ ಪದಾರ್ಥಗಳನ್ನು ಸಾಧ್ಯವಾದಷ್ಟೂ ಭಕ್ತರೇ ಬೆಳೆಯುತ್ತಾರೆ. ಇಲ್ಲಿರುವ ಬಾಣಸಿಗರು ದೀಕ್ಷೆ ಪಡೆದ ಬ್ರಾಹ್ಮಣರು.

ತಾತ್ತ್ವಿಕ ಹಿನ್ನೆಲೆ

ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಮಾಂಸ ಸೇವನೆ ದೊಡ್ಡ ಅಡಚಣೆ. ಅನೇಕ ವ್ಯಾಖ್ಯಾನಗಳಿದ್ದರೂ ಜಗತ್ತಿನ ಯಾವುದೇ ಧರ್ಮ ಗ್ರಂಥವು ಮಾಂಸ ಸೇವನೆಯನ್ನು ಶಿಫಾರಸು ಮಾಡುವುದಿಲ್ಲ. ತಮ್ಮ ನಾಲಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ಕೆಲವು ವ್ಯಕ್ತಿಗಳಿಗೆ ಕೆಲವು ಧರ್ಮ ಗ್ರಂಥಗಳು ಸ್ವಲ್ಪ ರಿಯಾಯಿತಿ ಮಾಡಬಹುದು. ಆದರೆ ಈ ಪ್ರಾಮಾಣ್ಯರೂ ಕೂಡ ಗೋ ಹತ್ಯೆಯನ್ನು ನಿಷೇಧಿಸುತ್ತಾರೆ. ಅದಕ್ಕೆ ಬದಲಾಗಿ ಮುಖ್ಯವಲ್ಲದ ಪ್ರಾಣಿಗಳನ್ನು ಬಳಸಲು ಅವರು ಸಲಹೆ ಮಾಡುತ್ತಾರೆ. ನಾವು ಹಸುವಿನ ಹಾಲನ್ನು ಕುಡಿಯುವುದರಿಂದ, ವೈದಿಕ ಗ್ರಂಥಗಳು ಅದನ್ನು ಮಾನವ ಸಮಾಜದ ತಾಯಂದಿರಲ್ಲಿ ಒಂದು ಎಂದು ಪರಿಗಣಿಸಿವೆ. ಭಕ್ತಿ ಸೇವೆ, ಭಕ್ತಿ ಯೋಗದ ಆಚರಣೆಯ ತತ್ತ್ವಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಷ್ಠಾನಕ್ಕೆ ತರಲು ಅಗತ್ಯವಾದ ಆರೋಗ್ಯಕರ ಮಿದುಳಿನ ಜೀವಕೋಶದ ಬೆಳವಣಿಗೆಗೆ ಹಸುವಿನ ಹಾಲು ಉತ್ತೇಜನಕಾರಿಯಾಗಿದೆ. ಆದುದರಿಂದ ಗೋ ಸಂರಕ್ಷಣೆ ಅತ್ಯಗತ್ಯ. ಆದರೆ, ಮಾಂಸದಲ್ಲಿ ವಿಷವಿದೆ ಮತ್ತು ಕೊಲೆಸ್ಟರಾಲ್‌ ಹೆಚ್ಚಾಗಿದೆ. ಇದು ಮನಸ್ಸನ್ನು ಮಂಕಾಗಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಕುಂದಿಸುತ್ತದೆ.

ಆದರೂ, ಸಸ್ಯಾಹಾರಿ ತತ್ತ್ವವು ಸ್ವತಃ ಆಧ್ಯಾತ್ಮಿಕವಲ್ಲ. ನಾವು ನಮ್ಮ ಆಹಾರವನ್ನು ಭಗವಂತನಿಗೆ ಭಕ್ತಿಯಿಂದ ಅರ್ಪಿಸಬೇಕು. ಆಗ ನಮ್ಮ ಆಹಾರ ಸೇವನೆಯು ಭಗವಂತನೊಂದಿಗಿನ ಪ್ರೀತಿ ವಿನಿಮಯದ ಒಂದು ಭಾಗವಾಗುತ್ತದೆ. ಆಹಾರವನ್ನು ತಯಾರಿಸುವಾಗ ಅದು ಕೃಷ್ಣನನ್ನು ತೃಪ್ತಿ ಪಡಿಸಲು, ತಮ್ಮ ಸಂತೋಷಕ್ಕೆ ಅಲ್ಲ ಎನ್ನುವುದು ಭಕ್ತರಿಗೆ ತಿಳಿದಿರುತ್ತದೆ. ಇದು ನಿಜವಾದ ಆಧ್ಯಾತ್ಮಿಕ ಭಾವನೆ, ಅನುಭವ ಅಥವಾ ಭಕ್ತಿ.

ಭಕ್ತಿ ಯೋಗವು ನಾವು ಕಳೆದುಕೊಂಡಿರುವ ಪ್ರಭು ಪ್ರಜ್ಞೆಯ ಭಾವನೆಯನ್ನು ಪುನರ್‌ ಎಚ್ಚರಿಸುವ ಗುರಿ ಹೊಂದಿದೆ. ಆದುದರಿಂದ ಪ್ರಸಾದವನ್ನು ತಯಾರಿಸುವ ವಿಧಾನದ ನಿಯಮಗಳು ತುಂಬ ಕಟ್ಟುನಿಟ್ಟಾದವು : ಬಾಣಸಿಗನು ಪಾಕಶಾಲೆ ಪ್ರವೇಶಿಸುವ ಮುನ್ನ ಸ್ನಾನ ಮಾಡಿ ಶುಚಿಯಾದ ಉಡುಗೆ ತೊಡಬೇಕು. ಅಡುಗೆ ಮನೆಯು ಚೊಕ್ಕಟವಾಗಿರಬೇಕು. ಬಾಣಸಿಗನು ಅಡುಗೆ ಮಾಡುವಾಗ ತನ್ನ ಬಾಯಿ ಅಥವಾ ದೇಹದ ಯಾವುದೇ ಭಾಗವನ್ನು ಸ್ಪರ್ಶಿಸಬಾರದು. ಮುಖ್ಯವಾಗಿ ಕೃಷ್ಣನಿಗೆ ಅರ್ಪಿಸುವ ಮುನ್ನ ಅದರ ರುಚಿ ನೋಡಬಾರದು. ಕೃಷ್ಣನೇ ಮೊದಲು ಆಸ್ವಾದಿಸಬೇಕು.

ವಾಸ್ತವವಾಗಿ ಕೃಷ್ಣನಿಗೇನೂ ಆಹಾರ ಸೇವಿಸುವ ಅಗತ್ಯವಿಲ್ಲ. ಅವನು ಆತ್ಮಾರಾಮ ಅಥವಾ ಸಂಪೂರ್ಣವಾಗಿ ಸ್ವಾವಲಂಬಿತ. ಆದರೆ ನಾವು ಅವನಿಗಾಗಿ ಆಹಾರ ತಯಾರಿಸುವಾಗಿನ ನಮ್ಮ ಭಕ್ತಿಯನ್ನು ಅವನು ಮೆಚ್ಚುತ್ತಾನೆ. ಕೃಷ್ಣನನ್ನು ತೃಪ್ತಿಪಡಿಸುವ ನಮ್ಮ ಪ್ರಜ್ಞೆ ಹೆಚ್ಚಾದಷ್ಟೂ ಅರ್ಪಣೆಯು ಹೆಚ್ಚು ಯಶಸ್ವಿಯಾಗುತ್ತದೆ.

ಆಗ ಇದು ನಿಜವಾದ ಯೋಗ ಅಥವಾ ಪರಾತ್ಪರನ ಜೊತೆ ಸಂಪರ್ಕ. ಇದು ಆಹಾರ ಸೇವನೆಯನ್ನು ನಿಲ್ಲಿಸುವ ಪ್ರಶ್ನೆಯಲ್ಲ, ಬದಲಾಗಿ ಮೊದಲು ಕೃಷ್ಣನಿಗೆ ಅರ್ಪಿಸಿ ಅದನ್ನು ಆಧ್ಯಾತ್ಮಿಕಗೊಳಿಸುವುದಾಗಿದೆ. ಈ ಸರಳ ವಿಧಾನವು ಕ್ರಮೇಣ ನಮಗೆ ವೇದಗಳ ಅಗತ್ಯ ಬೋಧನೆ ಬಗೆಗೆ ಅರಿವು ಮೂಡಿಸುತ್ತದೆ : ಎಲ್ಲವೂ ಕೃಷ್ಣನಿಂದ ಬಂದದ್ದು. ಮತ್ತು ಅವನೇ ನಮ್ಮ ಎಲ್ಲ ಪ್ರಯತ್ನಗಳ ನಿಜವಾದ ಭೋಕ್ತ ಎಂಬುವುದು.

ಮಿತ್ರನೊಂದಿಗೆ ಭೋಜನ

ನನ್ನ ಮಿತ್ರರು ನನ್ನನ್ನು ಭೇಟಿಯಾಗಲು ನ್ಯೂಯಾರ್ಕ್‌ ಮಂದಿರಕ್ಕೆ ಬಂದಾಗ ನಾನು ಅವರನ್ನು ಗೋವಿಂದ ಭೋಜನ ಕೇಂದ್ರಕ್ಕೆ ಕರೆದೊಯ್ಯವೆ.

ಇತ್ತೀಚೆಗೆ ನನ್ನ ಶಾಲೆಯ ಸ್ನೇಹಿತನೊಬ್ಬ ಹೇಳಿದ, “ಇದು ತುಂಬ ಸ್ವಾದಿಷ್ಟವಾಗಿದೆ. ಏನಿದು?”

“ಇದು ಸಿಹಿ ಮತ್ತು ಹುಳಿ ತಿನಿಸು. ಇದನ್ನು ಅನಾನಾಸ್‌, ಬಾಳೆಹಣ್ಣು, ಬದನೆ, ಹುಣಸೆಹಣ್ಣಿನ ನೀರು ಮತ್ತು ಮಸಾಲೆಗಳಿಂದ ತಯಾರಿಸಲಾಗಿದೆ.”

“ಇದು ಭಾರತೀಯವೇ?”

“ಬಹುಶಃ ನಿಮಗೆ ಭಾರತದಲ್ಲಿ ಇಂತಹ ಖಾದ್ಯ ಸಿಗಬಹುದು.”

“ಆಹಾರವು ಇಷ್ಟು ಸ್ವಾದಿಷ್ಟವಾಗಿದ್ದರೆ, ಸಸ್ಯಾಹಾರಿಯಾಗುವುದು ಕಷ್ಟವಲ್ಲ. ಆದರೆ ಪ್ರೋಟೀನುಗಳಿಗೇನು ಮಾಡುವಿರಿ?”

“ಗಿಣ್ಣು, ಹಾಲು, ಬೀಜಗಳಲ್ಲಿ ಹೆಚ್ಚು ಪ್ರೋಟೀನಿನ ಅಂಶಗಳಿವೆ. (ನಾನು ದಾಲ್‌ನತ್ತ ಕೈತೋರಿಸಿದೆ) ಈ ಬೇಳೆ ಸೂಪಿನಲ್ಲಿ ಮಾಂಸದಲ್ಲಿರುವುದಕ್ಕಿಂತ ಹೆಚ್ಚು ಪ್ರೋಟೀನ್‌ ಇದೆ. ಆದರೆ ಮಸಾಲೆ ಪದಾರ್ಥಗಳನ್ನು ಹದವಾಗಿ ಬೆರೆಸುವುದೂ ತುಂಬ ಮುಖ್ಯ. ಅಡುಗೆಯವರು ಎಲ್ಲವನ್ನೂ ಕೃಷ್ಣನ ತೃಪ್ತಿಗಾಗಿ ಮಾಡುವುದರಿಂದ ಅವರು ಮಾಸಾಲೆಗಳ ಆಯ್ಕೆ ಮತ್ತು ಬೆರೆಸುವ ರೀತಿಯನ್ನು ಸರಿಯಾಗಿ ಅರಿತಿರಬೇಕು. ಈ ಸೂಕ್ತ ರೀತಿಯ ಮಿಶ್ರಣದಲ್ಲಿಯೇ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಖನಿಜ, ವಿಟಮಿನ್‌ ಮತ್ತಿತರ ಪೌಷ್ಟಿಕಾಂಶಗಳಿವೆ.”

ಕೃಷ್ಣ ಭಕ್ತರು ಅತ್ಯಂತ ಎಚ್ಚರದಿಂದ ಮತ್ತು ಚಿಂತನೆಯಿಂದ ಆಹಾರ ತಯಾರಿಸುವುದನ್ನು ಕೇಳಿ ನನ್ನ ಮಿತ್ರ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ.

ಅವನು ಕೇಳಿದ, “ಆಧ್ಯಾತ್ಮಿಕ ಆಹಾರ ಎಂದರೇನು?”

“ಭಗವದ್ಗೀತೆಯು ಸೂಕ್ತ ಮತ್ತು ಸೂಕ್ತವಲ್ಲದ ಆಹಾರದ ವ್ಯತ್ಯಾಸವನ್ನು ವಿವರಿಸುತ್ತದೆ. ಲೌಕಿಕ ಗುಣದ ನಿಯಂತ್ರಣದಿಂದಾಗಿ ನಾವು ಸತ್ತ್ವ, ರಜೋ ಮತ್ತು ತಾಮಸ ಗುಣಗಳ ಆಹಾರದಿಂದ ಆಕರ್ಷಿತರಾಗುತ್ತೇವೆ. ನಾವು ಕೃಷ್ಣನಿಗೆ ಸಾತ್ತ್ವಿಕ ಆಹಾರವನ್ನಷ್ಟೇ ಅರ್ಪಿಸಬೇಕು. ಅವುಗಳೆಂದರೆ ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಹಾಲಿನ ಉತ್ಪನ್ನಗಳು. ಇವು ದೀರ್ಘಾಯುಸ್ಸು, ಆರೋಗ್ಯ, ಶಕ್ತಿ ಮತ್ತು ಸುಖಕ್ಕೆ ಪೂರಕ.”

“ಮಂದಿರದಲ್ಲಿ ವಾಸಿಸದ ಜನರ ವಿಚಾರವೇನು? ಅವರು ತಮ್ಮ ಪ್ರಸಾದವನ್ನು ದೇವಸ್ಥಾನದಿಂದ ಪಡೆಯಬೇಕೆ ಅಥವಾ ಅವರೇ ಸ್ವತಃ ಮಾಡಬಹುದೇ?”

“ಅನೇಕ ಜನರು ಮನೆಯಲ್ಲಿಯೇ ಪ್ರಸಾದವನ್ನು ತಯಾರಿಸುತ್ತಾರೆ. ವಾಸ್ತವವಾಗಿ ಸಾವಿರಾರು ಜನರ ಮನೆಯಲ್ಲಿ ಪೂಜಾ ಮಂದಿರಗಳಿವೆ. ಅವರು ಪ್ರತಿ ದಿನ ಮನೆಯಲ್ಲಿ ಪ್ರಸಾದ ತಯಾರಿಸಿ ದೇವರಿಗೆ ಅರ್ಪಿಸುವರು. ಇಲ್ಲಿರುವ ಮುಖ್ಯವಾದ ಅಂಶವೆಂದರೆ, ಪ್ರತಿ ದಿನ ನೀವು ಅಡುಗೆ ಮಾಡುವಾಗ ನೀವು ಕೃಷ್ಣನಿಗಾಗಿ ಮಾಡುವಿರಿ ಮತ್ತು ಆಹಾರವನ್ನು ಅವನಿಗೆ ಅರ್ಪಿಸುವಿರಿ. ಬಹಳ ಬೇಗ ನಿಮ್ಮ ಮನೆಯು ದೇವಸ್ಥಾನದ ಅನುಭವವನ್ನು ನೀಡುವುದು ಮತ್ತು ನೀವು ಭಗವದ್ಧಾಮಕ್ಕೆ ಹಿಂದಿರುಗುವ ಹಾದಿಯಲ್ಲಿರುತ್ತೀರಿ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi