ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳು

ಆಕರ: (The Vaishnavism) ಟೋನಿ ಸ್ಟಿವರ್ಟ್ ಸಂವಾದ

ಶ್ರೀ ಚೈತನ್ಯ ಮಹಾಪ್ರಭುಗಳು 15ನೆಯ ಶತಮಾನದಲ್ಲಿ ಆವಿರ್ಭವಿಸಿ ‘ಯುಗಧರ್ಮ’ ವಾದ ನಾಮ ಸಂಕೀರ್ತನೆ ಯಜ್ಞವನ್ನು ಪ್ರಚುರಪಡಿಸಿದ ಸಾಕ್ಷಾತ್ ಶ್ರೀಕೃಷ್ಣನೇ ಆಗಿರುವರು. ಅನ್ಯದೇಶೀಯರ, ಮತೀಯರ ಆಕ್ರಮಣಗಳಿಂದಲೂ ಒಳಗಿನ ಜಾತಿಯ ಕಟ್ಟುಪಾಡು, ಸಾಮಾಜಿಕ ತಾರತಮ್ಯಗಳಿಂದಲೂ ಟೊಳ್ಳಾಗಿ ಹೋಗಿದ್ದ ಭಾರತೀಯರನ್ನು “ಭಕ್ತಿ”ಯ ಏಕಸೂತ್ರದಡಿ ಸೇರಿಸಿ ಕಾಯಕಲ್ಪ ನೀಡಿದ ಮಹಾಪ್ರಭುಗಳನ್ನು ಈ ಕಾರಣಕ್ಕಾಗಿಯೇ ‘ಕ್ರಾಂತಿಕಾರಿ ಸಂತ’ ಎಂದೂ ಹೇಳುವುದುಂಟು.

ಶ್ರೀ ಚೈತನ್ಯ ಮಹಾಪ್ರಭುಗಳ ಪರಿಚಯ ಕನ್ನಡಿಗರಿಗೆ ವಿರಳ. ಬಹುಶಃ, ಈ ನಿಟ್ಟಿನಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳು ಇಲ್ಲದಿರುವುದೇ ಅದಕ್ಕೆ ಕಾರಣವೇನೋ. ಆದರೆ ಬೆಂಗಳೂರು ಇಸ್ಕಾನ್ ಈ ಕೊರತೆಯನ್ನು ನೀಗಲು ಮುಂದಾಗಿದೆ. ಶ್ರೀಕೃಷ್ಣ ಚೈತನ್ಯರ ಜೀವನ ಚರಿತ್ರೆಗಳಲ್ಲಿ ಒಂದಾದ, ಇಸ್ಕಾನ್‌ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ಇಂಗ್ಲಿಷಿಗೆ ಅನುವಾದಿಸಲ್ಪಟ್ಟ ‘ಶ್ರೀ ಚೈತನ್ಯ ಚರಿತಾಮೃತ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದೆ.

ಈಗಾಗಲೇ ಕನ್ನಡದಲ್ಲಿ ಮಹಾಪ್ರಭುಗಳ ಜೀವನ-ಸಂದೇಶಗಳ ಕುರಿತ ಕಿರುಹೊತ್ತಗೆಗಳು ಸಂಸ್ಥೆಯ ವತಿಯಿಂದ ಪ್ರಕಟಗೊಂಡಿದ್ದರೂ, ಇಷ್ಟೊಂದು ವ್ಯಾಪಕವಾಗಿ ಅವರ ಜೀವನದ ಸಮಗ್ರ ಚಿತ್ರಣವನ್ನು ಒದಗಿಸುತ್ತಿರುವುದು ಇದೇ ಮೊದಲು.

ವಾಸ್ತವವಾಗಿ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನದ ಬಗ್ಗೆ ನಿಖರವಾಗಿ ಮಾಹಿತಿ ನೀಡುವ ಚರಿತ್ರಾಕೃತಿಗಳು 13ರಿಂದ 14 ಇವೆ ಎಂದು ಹೇಳಲಾಗುತ್ತದೆ. ಆದರೆ ಈವರೆಗೂ ನಮಗೆ ಸಂಪೂರ್ಣವಾಗಿ ದೊರೆತಿರುವುದು ಏಳು ಕೃತಿಗಳು ಮಾತ್ರ.

ಈ ಕೃತಿಗಳಲ್ಲಿ ಕೆಲವು 16ನೇ ಶತಮಾನದ ಕಾಲದಲ್ಲಿ ರಚಿತವಾಗಿದ್ದರೆ, ಕೆಲವು 17ನೇ ಶತಮಾನವನ್ನೂ ಕಂಡಿವೆ. ಪ್ರಸ್ತುತ ಈ ಲೇಖನದಲ್ಲಿ ಲಭ್ಯವಿರುವ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಗಳು, ಅವುಗಳ ಲೇಖಕರು, ಮತ್ತು ಅವರ ಕಾಲಘಟ್ಟಗಳ ಕುರಿತು ಕಿರು ಆವಲೋಕನ ಮಾಡಲಾಗಿದೆ.

ಜೀವನ ಚರಿತ್ರೆಗಳು ಮತ್ತು ಕರ್ತೃಗಳು :

ಲಭ್ಯವಿರುವ 7 ಜೀವನ ಚರಿತ್ರೆಗಳಲ್ಲಿ ನಾಲ್ಕು ಬಂಗಾಳಿ ಭಾಷೆಯಲ್ಲಿದ್ದರೆ, ಮೂರು ಕೃತಿಗಳು ಸಂಸ್ಕೃತದಲ್ಲಿವೆ. ಅವುಗಳಲ್ಲೊಂದು ನಾಟಕ ರೂಪದಲ್ಲಿದೆ. ಅವು ಹೀಗಿವೆ:

1. ಶ್ರೀ ಕೃಷ್ಣ ಚೈತನ್ಯ ಚರಿತಾಮೃತ (ಶ್ರೀ ಚೈತನ್ಯ ಚರಿತ) – ಮುರಾರಿ ಗುಪ್ತ, ಸಂಸ್ಕೃತ

2. ಶ್ರೀ ಚೈತನ್ಯ ಚರಿತಾಮೃತ ಮಹಾಕಾವ್ಯ – ಕವಿ ಕರ್ಣಾಪುರ, ಸಂಸ್ಕೃತ

3. ಶ್ರೀ ಚೈತನ್ಯ ಚಂದ್ರೋದಯ ನಾಟಕ – ಕವಿ ಕರ್ಣಾಪುರ, ಸಂಸ್ಕೃತ

4. ಶ್ರೀ ಚೈತನ್ಯ ಭಾಗವತ – ವೃಂದಾವನದಾಸ ಠಾಕುರ, ಬಂಗಾಳಿ

5. ಶ್ರೀ ಚೈತನ್ಯ ಮಂಗಳ – ಲೋಚನದಾಸ ಠಾಕುರ, ಬಂಗಾಳಿ

6. ಶ್ರೀ ಚೈತನ್ಯ ಮಂಗಳ – ಜಯಾನಂದ ಠಾಕುರ, ಬಂಗಾಳಿ

7. ಶ್ರೀ ಚೈತನ್ಯ ಚರಿತಾಮೃತ – ಕೃಷ್ಣದಾಸ ಕವಿರಾಜ, ಬಂಗಾಳಿ

ಈ ಕೃತಿಗಳಲ್ಲಿ ಶ್ರೀ ಮುರಾರಿಗುಪ್ತ ಕೃತಿಯು ಮೊಟ್ಟ ಮೊದಲಿನದು. ಮುರಾರಿಗುಪ್ತರು ಶ್ರೀ ಚೈತನ್ಯರ ಕಾಲದಲ್ಲಿ ಜೀವಿಸಿದ್ದು, ಅವರ ಸಮೀಪವರ್ತಿಗಳಾಗಿದ್ದವರು. ಈ ಜೀವನ ಚರಿತ್ರಾಕಾರರಲ್ಲಿ ಮಹಾಪ್ರಭುಗಳ ಸಮಕಾಲೀನರಾಗಿದ್ದವರೆಂದರೆ ಅವರೊಬ್ಬರೇ.

ವಯಸ್ಸಿನಲ್ಲಿ ಶ್ರೀ ಚೈತನ್ಯರಿಗಿಂತ ಹಿರಿಯರಾಗಿದ್ದ ಗುಪ್ತರು, ಶ್ರೀ ಗಂಗಾದಾಸ ಪಂಡಿತರಲ್ಲಿ ಮಹಾಪ್ರಭುಗಳ ಸಹಪಾಠಿಯಾಗಿ ಸಂಸ್ಕೃತ ಅಧ್ಯಯನ ಮಾಡುತ್ತಿದ್ದರು.

ಶ್ರೀ ಕೃಷ್ಣ ಚೈತನ್ಯ ಚರಿತಾಮೃತವನ್ನು ಮುರಾರಿಗುಪ್ತರು ಶ್ರೀ ಚೈತನ್ಯರು ಅಂತರ್ಧಾನರಾಗುವ ಮುನ್ನವೇ ಆರಂಭಿಸಿದ್ದರು. ಅದಕ್ಕಾಗಿ ಅವರು ಮಹಾಪ್ರಭುಗಳ ಸಮ್ಮತಿಯನ್ನು ಪಡೆದಿದ್ದರು. ಶ್ರೀ ಚೈತನ್ಯ ಚರಿತದ ಎರಡನೇ ಅಧ್ಯಾಯದಲ್ಲಿ ಮಹಾಪ್ರಭುಗಳ ಅಂತರ್ಧಾನದ ಬಗ್ಗೆ ಒಂದೇ ಒಂದು ಶ್ಲೋಕದಲ್ಲಿ ಹೇಳಲಾಗಿದೆ. ಇದು, ಈ ಕೃತಿಯು, ಅವರ ಲೀಲಾ ಸಮಾಪ್ತಿಯ ಬಹಳ ಕಾಲದ ಅನಂತರ ಮುಕ್ತಾಯಗೊಂಡಿರಬಹುದು ಎಂದು ಸೂಚಿಸುತ್ತದೆ.

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಯ ಕಾಲಾನುಕ್ರಮಣಿಕೆಯಲ್ಲಿ ಶ್ರೀ ಮುರಾರಿಗುಪ್ತರ ಕೃತಿಯು ಪರಮ ಪ್ರಮಾಣೀಕೃತವೆಂದು ಮುಂದಿನ ಎಲ್ಲ ಚರಿತ್ರಕಾರರೂ ಸಮ್ಮತಿಸಿದ್ದಾರೆ. ಕೆಲವರು ತಮ್ಮ ಕೃತಿಯಲ್ಲಿ ಮುರಾರಿಗುಪ್ತರ ಕೆಲವು ವಿವರಣೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ ಕೂಡ.

ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳಲ್ಲಿ ಎರಡನೆಯದು ಕವಿ ಕರ್ಣಾಪುರದ ಚೈತನ್ಯ ಚರಿತಾಮೃತ ಮಹಾಕಾವ್ಯ. ಇದಲ್ಲದೆ ಕರ್ಣಾಪುರರು ಚೈತನ್ಯ ಚಂದ್ರೋದಯವೆಂಬ ನಾಟಕವನ್ನೂ ಬರೆದಿರುವರು. ಚೈತನ್ಯ ಮಹಾಕಾವ್ಯದ ಕಾಲ 1542ರ ಆಸುಪಾಸು ಎಂದೂ, ನಾಟಕ ರಚನೆಯ ಕಾಲ 1570 ಎಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕವಿಕರ್ಣಾಪುರರು ಕೂಡ ಶ್ರೀ ಚೈತನ್ಯರ ಕಾಲದಲ್ಲಿ ಜೀವಿಸಿದ್ದವರೇ ಆದರೂ ಅವರು ವಯೋಮಾನದಲ್ಲಿ ಬಹಳ ಚಿಕ್ಕವರು. ಕರ್ಣಾಪುರರ ತಂದೆ ಶಿವಾನಂದ ಸೇನರು ಮಹಾಪ್ರಭುಗಳ ಭಕ್ತಾನುಯಾಯಿಗಳಾಗಿದ್ದವರು. ಮಹಾಪ್ರಭುಗಳು ಶಿವಾನಂದ ಸೇನರ ಮಗನಿಂದ ರಚಿಸಲ್ಪಟ್ಟ ಅತ್ಯಂತ ಸುಂದರವಾದ ಕೃಷ್ಣ ಸ್ತುತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

ಕರ್ಣಾನಂದಕರವಾಗಿದ್ದ ಇಂತಹ ಗೀತೆಯನ್ನು ರಚಿಸಿದ ಬಾಲಕನಿಗೆ “ಕವಿ ಕರ್ಣಪುರ” ಎಂದು ಹೆಸರಿಟ್ಟರು. ಅದರ ಅರ್ಥ, ‘ಎಲ್ಲ ಕವಿಗಳಲ್ಲಿ ಕಿವಿಗೆ ಅತ್ಯಂತ ಭೂಷಣವಾದವನು – ಕರ್ಣಾನಂದಕರನಾದ ಕವಿ” ಎಂದು. ಅಲ್ಲಿಗೂ ಮುಂಚೆ ಕವಿ ಕರ್ಣಾಪುರರ ಹೆಸರು – ಪರಮಾನಂದ ಸೇನ ಎಂಬುದಾಗಿತ್ತು.

ಕವಿ ಕರ್ಣಾಪುರರು ರಚಿಸಿರುವ ಮತ್ತೊಂದು ಮಹತ್ತ್ವದ ಕೃತಿ ‘ಗೌರ ಘನೋದ್ದೇಶ ದೀಪಿಕಾ’, ಚೈತನ್ಯ ಮಹಾಪ್ರಭುಗಳ ಅಸುರರು ವ್ರಜಲೀಲೆಯಲ್ಲಿ(ಕೃಷ್ಣಲೀಲೆ) ವಹಿಸಿದ್ದ ಪಾತ್ರವನ್ನು ಸಮೀಕರಿಸಿ ರಚಿಸಲಾಗಿರುವ ಕೃತಿ ಇದು.

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಬಂಗಾಳಿ ಭಾಷೆಯಲ್ಲಿ ನಿರೂಪಿತವಾಗಿದ್ದು, ಶ್ರೀ ವೃಂದಾವನ ದಾಸರ ‘ಚೈತನ್ಯ ಭಾಗವತ’ ಕೃತಿಯ ಮೂಲಕ. ಅಷ್ಟೇ ಅಲ್ಲ, ಉಳಿದ ಆರು ಜೀವನ ಚರಿತ್ರೆಗಳಿಗಿಂತ ಅತಿ ವಿಸ್ತಾರವಾದ ಕೃತಿಯೆಂಬ ಹೆಗ್ಗಳಿಕೆ ಇದರದು. ಈ ಕೃತಿಯಲ್ಲಿ ಸುಮಾರು 12,300 ಬಂಗಾಳಿ ದ್ವಿಪದಿಗಳಿವೆ.

ಚೈತನ್ಯ ಭಾಗವತದ ರಚನೆಯ ಕಾಲ, ಅಂದಾಜು 1546ರಿಂದ 1550ರ ನಡುವೆ ಬರುತ್ತದೆ. ಶ್ರೀ ವೃಂದಾವನ ದಾಸರು ಮತ್ತೋರ್ವ ಚರಿತ್ರಾಕಾರರಾದ ಶ್ರೀ ಲೋಚನದಾಸರ ಸಮಕಾಲೀನರು.

ಆರಂಭದಲ್ಲಿ ಚೈತನ್ಯ ಭಾಗವತದ ಹೆಸರು ಕೂಡ ಚೈತನ್ಯ ಮಂಗಳ ಎಂದೇ ಕರೆಯಲಾಗಿತ್ತು. ಶ್ರೀ ವೃಂದಾವನ ದಾಸರನ್ನು ಚೈತನ್ಯ ಲೀಲೆಯ ‘ವ್ಯಾಸ’ ಎಂದು ಗೌರವಿಸಲಾಗಿತ್ತು. ವೇದ ವ್ಯಾಸರು ಶ್ರೀ ಕೃಷ್ಣಲೀಲೆಯನ್ನು ‘ಭಾಗವತ’ ದಲ್ಲಿ ಬರೆದರು. ಹೀಗಾಗಿ, ವೃಂದಾವನದಾಸರು ದಾಖಲಿಸಿದ ಚೈತನ್ಯ ಲೀಲೆಯನ್ನು ‘ ಚೈತನ್ಯ ಭಾಗವತ’ ಎಂದು ಕರೆಯಲಾಯ್ತು.

ಲೋಚನ ದಾಸರು ತಮ್ಮ ಚರಿತ್ರಾಕೃತಿಯಲ್ಲಿ ಮಹಾಪ್ರಭುಗಳ ಜೀವನದ ಮಾಧುರ್ಯ ಭಾವವನ್ನು ಪ್ರಮುಖವಾಗಿ ಚಿತ್ರಿಸಿದ್ದರು. ಮಾಧುರ್ಯ, ಶ್ರೀ ಚೈತನ್ಯಾವತರವಾದ ಅತ್ಯಂತ ಮಂಗಳಕಾರವಾದ ಭಾವ. ಈ ಕಾರಣದಿಂದ ಲೋಚನದಾಸರ ಕೃತಿಗೆ “ಚೈತನ್ಯ ಮಂಗಳ” ಎಂದು ಹೆಸರಿಟ್ಟರು.

ಜಯಾನಂದರ “ಚೈತನ್ಯ ಮಂಗಳ” ಕೃತಿ ಕೂಡ ಲೋಚನದಾಸರ ಕೃತಿಯ ಕಾಲಘಟ್ಟದಲ್ಲಿ. ಆದರೆ ಈ ಕೃತಿಯನ್ನು ಚೈತನ್ಯ ಪರಂಪರೆಯಲ್ಲಿ ಅಷ್ಟಾಗಿ ಮಾನ್ಯಮಾಡಿಲ್ಲ. ಆದರೂ ಇದು ಅತ್ಯಂತ ಹೆಚ್ಚು ಹಸ್ತಪ್ರತಿಗಳಲ್ಲಿ ದಾಖಲಾದ ಗ್ರಂಥವಾಗಿದೆ. ಮಹಾಪ್ರಭುಗಳ ಅಂತರ್ಧಾನದ ಬಗ್ಗೆ ಸಮ್ಮತಿಗೆ ಅರ್ಹವಲ್ಲದ ವಿವರಗಳಿರುವುದರಿಂದ ಈ ಕೃತಿಯನ್ನು ಶುದ್ಧ ವೈಷ್ಣವ ಭಕ್ತರು ದೂರವಿರಿಸಿದ್ದಾರೆ.

ಲೋಚನದಾಸರ ಕೃತಿ ಮತ್ತು ಜಯಾನಂದರ ಕೃತಿಗಳೆರಡಕ್ಕೂ “ಚೈತನ್ಯ ಮಂಗಳ” ಎಂಬ ಹೆಸರಿದ್ದು, ಎರಡೂ ಕೃತಿಗಳ ಹಸ್ತಪ್ರತಿಗಳು ದೊರೆತಿವೆ. ಅವುಗಳಲ್ಲಿ ಜಯಾನಂದರ ಕೃತಿಯ ಪ್ರತಿಗಳೇ ಸಾಕಷ್ಟು ಸಂಖ್ಯೆಯಲ್ಲಿವೆ.

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಗಳಲ್ಲಿ ಕೊನೆಯ ಪ್ರಮಾಣೀಕೃತ ಗ್ರಂಥವೆಂದರೆ, ಶ್ರೀಕೃಷ್ಣದಾಸ ಕವಿರಾಜರ “ಚೈತನ್ಯ ಚರಿತಾಮೃತ” ಕೃತಿ. ಕವಿರಾಜರು ಇದನ್ನು ತಮ್ಮ ವೃದ್ಧಾಪ್ಯದಲ್ಲಿ ರಚಿಸಿದರು. ಇದರ ಕಾಲಘಟ್ಟ 1612 ರಿಂದ 1615 ಎಂದು ಹೇಳಲಾಗುತ್ತದೆ. ಕೆಲವರು ಅದಕ್ಕಿಂತ ಕಡಮೆ ಪಕ್ಷ 10 ರಿಂದ 15 ವರ್ಷ ಮೊದಲಿನದೆಂದು ಲೆಕ್ಕ ಹಾಕುತ್ತಾರೆ.

ಚೈತನ್ಯ ಚರಿತಾಮೃತ, ಚೈತನ್ಯ ಭಾಗವತದ ಅನಂತರ ಎರಡನೆಯ ಅತಿದೊಡ್ಡ ಜೀವನ ಚರಿತ್ರೆಯಾಗಿದೆ. ಗೌಡೀಯ ವೈಷ್ಣವರು ಈ ಕೃತಿಯನ್ನು ಅತ್ಯಂತ ಗೌರವದಿಂದ ಪರಿಗಣಿಸುತ್ತಾರೆ. ಸಾಹಿತ್ಯಾತ್ಮಕವಾಗಿಯೂ ಈ ಕೃತಿಯು ತನ್ನ ವಿಶೇಷ ಲಯ ವಿನ್ಯಾಸಗಳಿಂದ ವಿದ್ವಾಂಸರ ಗಮನ ಸೆಳೆದಿದೆ.

ವೈಷ್ಣವ ಸಾಹಿತ್ಯವಷ್ಟೇ ಅಲ್ಲ, ಬಂಗಾಳಿ ಸಾಹಿತ್ಯ ಪರಂಪರೆಯಲ್ಲಿ ಚೈತನ್ಯ ಚರಿತಾಮೃತವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಕೃತಿಯಲ್ಲಿ ಸಂಸ್ಕೃತ ಶ್ಲೋಕಗಳು ಕೂಡ ಅಡಕವಾಗಿದ್ದು, ಬಂಗಾಳಿ ಭಾಷೆಯು ಸರಳ – ಸುಲಲಿತ ಶೈಲಿಯಲ್ಲಿದೆ.

ಎಲ್ಲ ಚರಿತ್ರಾ ಕೃತಿಗಳಲ್ಲಿ ಸಂಸ್ಕೃತ ವ್ಯಾಖ್ಯಾನ ಹೊಂದಿರುವ ಕೃತಿ ಇದೊಂದೇ ಆಗಿದೆ. ಕೇವಲ ಬಂಗಾಳಿ ಮಾತ್ರವಲ್ಲ, ಉಳಿದ ಯಾವ ಭಾಷೆಯ ಜೀವನ ಚರಿತ್ರ ಗ್ರಂಥಗಳಲ್ಲೂ ಈ ಬಗೆಯ ವೈಶಿಷ್ಟ್ಯವಿಲ್ಲ. ಇದು, ಈ ಕೃತಿಗೊಂದು ಸಾಂಸ್ಥಿಕ ಪ್ರಮಾಣವನ್ನು ಒದಗಿಸಿಕೊಟ್ಟಿದೆ.

ಹೀಗೆ ಚೈತನ್ಯ ಚರಿತಾಮೃತಕ್ಕೆ ಸಂಸ್ಕೃತದಲ್ಲಿ ವ್ಯಾಖ್ಯಾನ ನೀಡಿದವರು ಆಚಾರ್ಯ ಪರಂಪರೆಯ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು. ಇಪ್ಪತ್ತನೆಯ ಶತಮಾನದಲ್ಲಿ ಶ್ರೀಲ ಪ್ರಭುಪಾದರು ಈ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ, ವಿಶ್ವಾದ್ಯಂತ ಚೈತನ್ಯ ಪರಂಪರೆಯ ವಿಸ್ತರಣೆಗೆ ಕಾರಣವಾದರು. ಇತರ ಆಕರಗಳು …

ಶ್ರೀ ಚೈತನ್ಯ ಮಹಾಪ್ರಭುಗಳ ಚರಿತ್ರ ಗ್ರಂಥಗಳಲ್ಲದೆ, ಸಣ್ಣ ಪ್ರಮಾಣದ ಕೆಲವು ರಚನೆಗಳು ಕೂಡ ಅವರ ಜೀವನ ಸಂದೇಶವನ್ನು ಸಫಲವಾಗಿ ತೆರೆದಿಡುತ್ತವೆ. ಶ್ರೀ ಸ್ವರೂಪ ದಾಮೋದರರ ದಿನಚರಿ ‘ಕಡಚಾ’ಗಳು ಅವುಗಳಲ್ಲೊಂದು. ಶ್ರೀಕೃಷ್ಣದಾಸ ಕವಿರಾಜರಿಗೆ ಆಕರ ಮತ್ತು ಪ್ರೇರಣೆಯಾಗಿದ್ದು ಈ ಕಡಚಗಳೇ ಸ್ವರೂಪ ದಾಮೋದರರು ಮಹಾಪ್ರಭುಗಳ ನೇರ ಶಿಷ್ಯರು ಅವರ ಶಿಷ್ಯ ಶ್ರೀ ರಘುನಾಥದಾಸರು ಕೃಷ್ಣದಾಸರ ಗುರುಗಳು.

ಉಳಿದಂತೆ ಗೋವಿಂದದಾಸ ಮತ್ತು ರಘುನಾಥ ದಾಸರ ಕಡಚಗಳು ಅತ್ಯಲ್ಪ ಮಾಹಿತಿ ನೀಡುವ ಅತಿ ಚಿಕ್ಕ ಆಕರಗಳಾಗಿವೆಯಷ್ಟೆ.

ಇನ್ನು, ‘ಚೈತನ್ಯವಿಲಾಸ’ ಹೆಸರಿನ ಸಾಕಷ್ಟು ಕೃತಿಗಳು ಮಹಾಪ್ರಭುಗಳ ಜೀವನ ಚರಿತ್ರೆ ಎಂದು ಎದುರಾಗುತ್ತವೆ. ಆದರೆ ಅವುಗಳೆಲ್ಲವನ್ನೂ ಪ್ರಮಾಣೀಕೃತ ಗ್ರಂಥಗಳೆಂದು ಒಪ್ಪಿಕೊಳ್ಳಲಾಗುವುದಿಲ್ಲ.

ವಂಶೀದಾಸರು ರಚಿಸಿರುವ “ಗೌರಘನೋದ್ದೇಶ” ಕೃತಿಯು ಸಂಪೂರ್ಣ ಜೀವನ ಚರಿತ್ರೆಯಾಗಿದೆಯಾದರೂ ಇನ್ನೂ ಹಸ್ತಪ್ರತಿ ರೂಪದಲ್ಲಿದೆಯೇ ಹೊರತು ಒಂದೂ ಮುದ್ರಣ ಕಂಡಿಲ್ಲ. ನಿತ್ಯಾನಂದ ವಂಶಸ್ಥರಾದ ಚೂಡಾಮಣಿ ದಾಸರು ಬರೆದಿರುವರೆನ್ನಲಾದ “ಗೌರಾಂಗ ವಿಜಯ” ದ ನಾಲ್ಕನೇ ಒಂದು ಭಾಗ ಹಸ್ತಪ್ರತಿ ಮಾತ್ರ ಈ ವರೆಗೆ ‍ಲಭ್ಯವಾಗಿದೆ.

ಅನಂತರದ ದಿನಗಳಲ್ಲಿ ಸುಕುಮಾರ ಸೇನರು ಬರೆದ ಶ್ರೀ ಚೈತನ್ಯರ ಚರಿತ್ರೆಯು ವಿಸ್ತಾರವಾದ ಕೃತಿಯಾದರೂ ಅಷ್ಟೇನೂ ಮಹತ್ತ್ವದ ರಚನೆಯಲ್ಲ ಎನಿಸಿದ ಕಾರಣ ಜನಪ್ರಿಯವಾಗದೆ ಉಳಿದುಹೋಗಿದೆ.

ಚೈತನ್ಯ ಚರಿತಾಮೃತದ ಅನಂತರ ರಚನೆಯಾದ ಮತ್ತೊಂದು ಜೀವನ ಚರಿತ್ರೆ “ಚೈತನ್ಯ ತತ್ತ್ವ ಪ್ರದೀಪ” ರಚನೆಗೊಂಡದ್ದು ನಿತ್ಯಾನಂದ ವಂಶಸ್ಥರಾದ ವ್ರಜಮೋಹನ ದಾಸರಿಂದ. ಆದರೆ ಇದು ಕೂಡ ಕೇವಲ ಒಂದೇ ಒಂದು ಹಸ್ತಪ್ರತಿಯಲ್ಲಿ ದಾಖಲಾಘಿ ಅಜ್ಞಾತವಾಗೇ ಉಳಿದಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi