ಚೈತನ್ಯ ಮಹಾಪ್ರಭುಗಳ ಚರಣ ಕಮಲಗಳಲ್ಲಿ ಒಂದು ಪ್ರಾರ್ಥನೆ…

ರಚನೆ : ಶ್ರೀ ನರೋತ್ತಮ ಠಾಕುರ

ಅನುವಾದ : ಗೀತಾ ಶ್ರೀನಾಥ್

ಶ್ರೀಕೃಷ್ಣ ಚೈತನ್ಯ ಪ್ರಭು

ದಯಾಕರೋ ಮೋರೇ

ತೋಮ ಬಿನಾ ಕೇ ದಯಾಳು

ಜಗತ್- ಸಂಸಾರೇ

ಪತಿತಪಾವನ ಹೇತು

ತವ ಅವತಾರ

ಮೋ ಸಮಪತಿತ

ಪ್ರಭು ನಾ ಪಾಯಾದೇ ಅರಾ

ಹಾ ಹಾ ಪ್ರಭು ನಿತ್ಯಾನಂದ,

ಪ್ರೇಮಾನಂದ ಸುಖಿ

ಕೃಪಾವಲೋಕನ ಕರೋ

ಅಮಿ ಬೋರೋ ದುಃಖಿ

ದಯಾಕರೋ ಸೀತಾಪತಿ

ಅದ್ವೈತ ಗೋಸಾಯ್

ತವ ಕೃಪಾಬಲೇ ಪಾಮ್

ಚೈತನ್ಯ ನಿತಾಯಿ

ಹಾ ಹಾ ಸ್ವರೂಪ, ಸನಾತನ,

ರೂಪ ರಘುನಾಥ

ಭಟ್ಟ ಜುಗ, ಶ್ರೀ ಜೀವ

ಹಾ ಪ್ರಭು ಲೋಕನಾಥ

ದಯಾಕರೋ ಶ್ರೀ ಆಚಾರ್ಯ

ಪ್ರಭು ಶ್ರೀನಿವಾಸ

ರಾಮಚಂದ್ರ ಸಂಗ

ಮಾಗೇ ನರೋತ್ತಮದಾಸ

ಶ್ರೀ ಚೈತನ್ಯ ಮಹಾಪ್ರಭುಗಳು ಕಲಿಯುಗದಲ್ಲಿ ಕೃಷ್ಣನಾಮ ಜಪದಿಂದಲೇ ಭಗವತ್ ಸಾನಿಧ್ಯ ಹೊಂದಲು ಸಾಧ್ಯ ಎಂದು ಬೋಧಿಸಿದರು. ನಾಮ ಸಂಕೀರ್ತನೆಯನ್ನು ಕೈಗೊಂಡು, ಪ್ರತಿ ಮನೆಗೂ, ಪ್ರತಿ ಗ್ರಾಮ-ನಗರಗಳಿಗೂ ಪ್ರಸಾರ ಮಾಡುವಂತೆ ಬೋಧಿಸಿದರು.

ಸಾಕ್ಷಾತ್ ಕೃಷ್ಣನೇ ತಾವಾಗಿದ್ದರೂ ಸಹ ನಾಮಜಪದಲ್ಲಿ ತಲ್ಲೀನರಾಗಿರುತ್ತ ಭಕ್ತಿಸೇವೆಯ ಮಹತ್ವವನ್ನು ಬೋಧಿಸಿದರು. ಮಾರ್ಚ್ 21ರಂದು ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನ-ಗೌರಾಂಗ ಪೂರ್ಣಿಮೆ. ಮಹಾಪ್ರಭುಗಳ ಅನುಚರ ಶ್ರೇಷ್ಠ ಭಕ್ತರಾದ ಶ್ರೀ ನರೋತ್ತಮ ದಾಸ ಠಾಕುರರು ರಚಿಸಿರುವ ಗೀತೆಯನ್ನು ಶ್ರೀಲ ಪ್ರಭುಪಾದರು ನೀಡಿದ ತಾತ್ಪರ್ಯ ಸಹಿತ ಓದುಗರಿಗಾಗಿ ನೀಡಲಾಗಿದೆ.

ಈ ಗೀತೆಯನ್ನು ನರೋತ್ತಮದಾಸ ಠಾಕುರ ಅವರು ರಚಿಸಿದ್ದಾರೆ. ಚೈತನ್ಯ ಮಹಾಪ್ರಭುಗಳನ್ನು ಅವರು ಈ ರೀತಿ ಪ್ರಾರ್ಥಿಸುತ್ತಾರೆ, “ನನ್ನ ಪ್ರೀತಿಯ ಭಗವಂತನೇ ನನ್ನ ಮೇಲೆ ಕರುಣೆ ಇಡು. ಏಕೆಂದರೆ ತ್ರಿಲೋಕಗಳಲ್ಲಿ ನಿನ್ನಷ್ಟು ದಯಾಮಯನಾದ ಭಗವಂತ ಇನ್ನಾರು ಇದ್ದಾರೆ?”

ನಿಜವಾಗಿಯೂ ಇದು ಸತ್ಯ. ನರೋತ್ತಮದಾಸ ಠಾಕುರರು ಒಬ್ಬರೇ ಅಲ್ಲ, ರೂಪ ಗೋಸ್ವಾಮಿಯವರೂ ಕೂಡ ಚೈತನ್ಯ ಮಹಾಪ್ರಭುಗಳನ್ನು ಇದೇ ರೀತಿ ಸ್ತುತಿಸಿದ್ದಾರೆ. ಅಲಹಾಬಾದ್‌ ನ ಪ್ರಯಾಗದಲ್ಲಿ ರೂಪ ಗೋಸ್ವಾಮಿಯವರು ಮೊಟ್ಟ ಮೊದಲ ಬಾರಿಗೆ ಚೈತನ್ಯ ಮಹಾಪ್ರಭುಗಳನ್ನು ಭೇಟಿಯಾದಾಗ, ಶ್ರೀಲ ರೂಪ ಗೋಸ್ವಾಮಿ ಹೇಳುತ್ತಾರೆ, ‘ನನ್ನ ಪ್ರೀತಿಯ ಭಗವಂತನೇ, ಉಳಿದೆಲ್ಲ ಅವತಾರಗಳಿಗಿಂತಲೂ ನೀನು ಈ ಅವತಾರದಲ್ಲಿ ಅತಿಹೆಚ್ಚು ಔದಾರ್ಯ ಉಳ್ಳವನಾಗಿದ್ದೀಯ.

ಏಕೆಂದರೆ ನೀನು ಕೃಷ್ಣನ ಪ್ರೀತಿಯನ್ನು ಕೃಷ್ಣ ಪ್ರಜ್ಞೆಯನ್ನು ಎಲ್ಲರಿಗೂ ಹಂಚುತ್ತಿದ್ದೀಯ. ಕೃಷ್ಣ ವೈಯಕ್ತಿಕವಾಗಿ ಪ್ರತ್ಯಕ್ಷನಾಗಿದ್ದಾಗ ತನ್ನಲ್ಲಿ ಶರಣಾಗುವಂತೆ ಸರಳವಾಗಿ ಕೇಳಿಕೊಂಡನೇ ಹೊರತು, ಸುಲಭವಾಗಿ ತನ್ನನ್ನು ತಾನು ಹಂಚಿಕೊಳ್ಳಲಿಲ್ಲ. ಅವನು ಷರತ್ತು ಹಾಕಿದ – ‘ಮೊದಲು ನೀನು ಶರಣಾಗು’. ಆದರೆ ಚೈತನ್ಯ ಮಹಾಪ್ರಭುಗಳ ಅವತಾರದಲ್ಲಿದ್ದ ಕೃಷ್ಣ ಇಂತಹ ಯಾವ ಷರತ್ತುಗಳನ್ನೂ ಹಾಕಲಿಲ್ಲ.

‘ಕೃಷ್ಣನ ಪ್ರೀತಿಯನ್ನು ತೆಗೆದುಕೊಳ್ಳಿ’ ಎಂದು ಎಲ್ಲರಿಗೂ ಹಂಚಿದ. ಆದ್ದರಿಂದಲೇ ಚೈತನ್ಯ ಮಹಾಪ್ರಭುಗಳ ಈ ಔದಾರ್ಯದ ಅವತಾರವನ್ನು ಒಪ್ಪುತ್ತಾರೆ. ನರೋತ್ತಮದಾಸ ಠಾಕುರರು ಹೇಳುತ್ತಾರೆ, ದಯವಿಟ್ಟು ನನ್ನಲ್ಲಿ ಕರುಣೆ ಇಡು. ನೀನು ಅತ್ಯಂತ ಉದಾತ್ತ ಗುಣ ಹೊಂದಿದವನು.

ಏಕೆಂದರೆ, ಈ ಕಾಲದ ಪತಿತ ಆತ್ಮಗಳನ್ನು ನೀನು ನೋಡಿರುವ ಮತ್ತು ಅವರಿಗಾಗಿ ತುಂಬಾ ಮರುಗುವೆ, ಅಲ್ಲದೆ ನಾನೂ ಕೂಡ ಅಂತಹ ಪತಿತ ಎನ್ನುವುದು ನಿನಗೆ ತಿಳಿದಿದೆ. ನನಗಿಂತ ಹೆಚ್ಚು ಪತಿತರಾದವರು ಬೇರೆ ಯಾರೂ ಇಲ್ಲ.’ ಪತಿತ ಪಾವನ ಹೇತು ತವ ಅವತಾರ: ಬದ್ಧಾತ್ಮ, ಪತಿತ ಆತ್ಮಗಳನ್ನು ಉದ್ಧಾರ ಮಾಡುವುದೇ ನಿನ್ನ ಅವತಾರದ ಉದ್ದೇಶ.

ನಾನು ನಿನಗೆ ಭರವಸೆ ಕೊಡುತ್ತೇನೆ, ನನ್ನಷ್ಟು ಪತಿತವಾದ ಆತ್ಮವನ್ನು ನೀನು ಬೇರೆಲ್ಲೂ ನೋಡಲಾರೆ. ಹಾಗಾಗಿ ನನ್ನದು ಮೊದಲ ಹಕ್ಕು.’ ಆ ಬಳಿಕ ನಿತ್ಯಾನಂದ ಪ್ರಭುಗಳನ್ನು ಪ್ರಾರ್ಥಿಸುತ್ತಾರೆ. ‘ಹಾ ಹಾ ಪ್ರಭು ನಿತ್ಯಾನಂದ ಪ್ರೇಮಾನಂದ ಸುಖಿಃ ನಿತ್ಯಾನಂದ ಪ್ರಭುವೇ, ಅಧ್ಯಾತ್ಮದ ಪರಮಾನಂದದಲ್ಲಿ  ನೀನು ನಿರಂತರ, ಆನ೦ದವನ್ನು ಪಡೆಯುವವನು.

ನೀನು ಸದಾ ಸಂತೋಷದಿಂದ ಇರುವಂತೆ ಕಾಣುವುದರಿಂದ ನಾನು ನಿನ್ನ ಬಳಿ ಬಂದಿದ್ದೇನೆ. ಏಕೆಂದರೆ ನಾನು ಅತ್ಯಂತ ದುಃಖಿ ನೀನು ಕರುಣೆಯಿಂದ ನನ್ನತ್ತ ನೋಡಿದರೆ ಸಾಕು ನಾನೂ ಸಂತೋಷವನ್ನು ಪಡೆಯುತ್ತೇನೆ.’ ಅನಂತರ ಅದ್ವೈತ ಪ್ರಭುಗಳನ್ನು ಪ್ರಾರ್ಥಿಸುತ್ತಾರೆ. ದಯಾ ಕರೋ ಸೀತಾಪತಿ ಅದ್ವೈತ ಗೋಸಾಮಿ. ಅದ್ವೈತ ಪ್ರಭುಗಳ ಧರ್ಮಪತ್ನಿಯ ಹೆಸರು ಸೀತಾ. ಹಾಗಾಗಿ ಅವರು ಸೀತಾಪತಿ ಎಂದು ಸಂಬೋಧಿಸುತ್ತಾರೆ.

‘ಸೀತಾ ಪತಿಯಾದ ನನ್ನ ಪ್ರೀತಿಯ ಅದ್ವೈತ ಪ್ರಭುಗಳೇ, ತಾವು ಅತ್ಯಂತ ಕರುಣಾಮಯಿ, ದಯವಿಟ್ಟು ನನಗೂ ಕರುಣೆ ತೋರಿಸಿ ನೀವು ನನಗೆ ಕರುಣೆ ತೋರಿಸಿದ್ದೇ ಆದಲ್ಲಿ ಚೈತನ್ಯ ಮಹಾಪ್ರಭುಗಳು ಹಾಗೂ ನಿತ್ಯಾನಂದರೂ ಸಹಜವಾಗಿಯೇ ನನ್ನಲ್ಲಿ ದಯೆ ತೋರಿಸುತ್ತಾರೆ.’ ವಾಸ್ತವವಾಗಿ, ಅದ್ವೈತ ಪ್ರಭುಗಳೇ ಚೈತನ್ಯ ಮಹಾಪ್ರಭುಗಳನ್ನು ಕೆಳಗಿಳಿದು ಬರುವಂತೆ ಆಹ್ವಾನಿಸಿದ್ದು.

ಪತಿತ ಆತ್ಮಗಳು ಕೃಷ್ಣ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳದೆ ಕೇವಲ ಇಂದ್ರಿಯ ತೃಪ್ತಿ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಅದ್ವೈತ ಪ್ರಭುಗಳು ನೋಡಿದಾಗ, ಈ ಪತಿತ ಆತ್ಮಗಳ ಬಗ್ಗೆ ಅವರಿಗೆ ಇನ್ನಿಲ್ಲದ ಕರುಣೆ ಉಂಟಾಗುತ್ತದೆ. ಇವರೆಲ್ಲರ ವಾರಸುದಾರನಾಗುವುದು ತನ್ನಿಂದ ಸಾಧ್ಯವಿಲ್ಲ ಎಂದು ತಿಳಿದ ಮೇಲೆ ಅವರು ಭಗವಂತನಾದ ಕೃಷ್ಣನನ್ನು ಪ್ರಾರ್ಥಿಸುತ್ತಾರೆ.

“ದಯವಿಟ್ಟು ನೀನೇ ಬಾ. ನಿನ್ನ ವೈಯಕ್ತಿಕ ಸಾನ್ನಿಧ್ಯವಿಲ್ಲದೆ ಪತಿತ ಆತ್ಮಗಳನ್ನು ರಕ್ಷಿಸುವುದು ಕಷ್ಟ.’ ಅವರ ಕೋರಿಕೆಯಂತೆ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅದ್ವೈತ ಪ್ರಭುಗಳನ್ನು ಕುರಿತು ನರೋತ್ತಮ ದಾಸ ಠಾಕುರರು ಹೀಗೆ ಪ್ರಾರ್ಥಿಸುತ್ತಾರೆ. “ನೀವು ನನ್ನಲ್ಲಿ ಕರುಣೆಯನ್ನು ತೋರಿಸಿದ್ದೇ ಆದಲ್ಲಿ ಚೈತನ್ಯ ಮಹಾಪ್ರಭುಗಳು ಮತ್ತು ನಿತ್ಯಾನಂದರು ನನ್ನ ಮೇಲೆ ಕರುಣೆ ತೋರಿಸುತ್ತಾರೆ.”

ಬಳಿಕ ಗೋಸ್ವಾಮಿಯನ್ನು ಕುರಿತು ಪ್ರಾರ್ಥಿಸುತ್ತಾರೆ. ಹಾ ಹಾ ಸ್ವರೂಪ, ಸನಾತನ, ರೂಪ, ರಘುನಾಥ. ಸ್ವರೂಪ ಎನ್ನುವುದು ಸ್ವರೂಪ ದಾಮೋದರ ಎನ್ನುವವರನ್ನು ನಿರ್ದೇಶಿಸುತ್ತದೆ.

ಇವರು ಚೈತನ್ಯ ಮಹಾಪ್ರಭುಗಳ ವೈಯಕ್ತಿಕ ಕಾರ್ಯದರ್ಶಿ. ಚೈತನ್ಯ ಮಹಾಪ್ರಭುಗಳೊಂದಿಗೆ ನಿರಂತರವಾಗಿ ಇರುತ್ತಿದ್ದ ಇವರು ಚೈತನ್ಯ ಮಹಾಪ್ರಭುಗಳು ಏನೆಲ್ಲ ಬಯಸುತ್ತಾರೆ ಅದನ್ನು ಆ ಕೂಡಲೇ ಸಿದ್ಧಪಡಿಸುತ್ತಿದ್ದರು. ಸ್ವರೂಪ ದಾಮೋದರ ಮತ್ತು ಗೋವಿಂದ ಎಂಬ ಇಬ್ಬರು ವೈಯಕ್ತಿಕ ಸೇವಕರು ಚೈತನ್ಯ ಮಹಾಪ್ರಭುಗಳ ಜೊತೆಯಲ್ಲೇ ಇರುತ್ತಿದ್ದರು.

ಆದ್ದರಿಂದಲೇ ನರೋತ್ತಮದಾಸ ಠಾಕುರರು ಸ್ವರೂಪ ದಾಮೋದರ ಹಾಗೂ ಆರು ಗೋಸ್ವಾಮಿಗಳನ್ನು ಪ್ರಾರ್ಥಿಸುತ್ತಾರೆ. ಈ ಆರು ಗೋಸ್ವಾಮಿಗಳೂ ಚೈತನ್ಯ ಮಹಾಪ್ರಭುಗಳ ಶಿಷ್ಯರು.

ಅವರೆಂದರೆ – ಶ್ರೀ ರೂಪಗೋಸ್ವಾಮಿ, ಶ್ರೀ ಸನಾತನ ಗೋಸ್ವಾಮಿ, ಶ್ರೀ ಭಟ್ಟ ರಘುನಾಥ ಗೋಸ್ವಾಮಿ, ಶ್ರೀ ಗೋಪಾಲ ಭಟ್ಟ ಗೋಸ್ವಾಮಿ, ಶ್ರೀ ಜೀವ ಗೋಸ್ವಾಮಿ ಮತ್ತು ಶ್ರೀ ರಘುನಾಥ ಗೋಸ್ವಾಮಿ, ಕೃಷ್ಣಪ್ರಜ್ಞೆಯನ್ನು ಎಲ್ಲೆಡೆ ಪಸರಿಸುವಂತೆ ಚೈತನ್ಯ ಮಹಾಪ್ರಭುಗಳು ಈ ಆರು ಗೋಸ್ವಾಮಿಗಳಿಗೆ ನಿರ್ದೇಶನ ನೀಡಿದರು. ನರೋತ್ತಮ ದಾಸ ಠಾಕುರರು ಇವರ ಕರುಣೆಯನ್ನು ಕೋರಿ ಪ್ರಾರ್ಥಿಸುತ್ತಾರೆ.

ಈ ಆರು ಗೋಸ್ವಾಮಿಗಳ ಬಳಿಕ ಬರುವ ಮುಂದಿನ ಆಚಾರ್ಯರೇ ಶ್ರೀನಿವಾಸ ಆಚಾರ್ಯ. ಶ್ರೀನಿವಾಸ ಆಚಾರ್ಯರ ಉತ್ತರಾಧಿಕಾರಿಯೇ ನರೋತ್ತಮದಾಸ ಠಾಕುರ. ಅಲ್ಲದೆ ಇವರು ಆಚಾರ್ಯರ ಸಮಕಾಲೀನರು. ರಾಮಚಂದ್ರ ಚಕ್ರವರ್ತಿ, ನರೋತ್ತಮದಾಸ ಠಾಕುರರ ಮಿತ್ರರು.

ಅದಕ್ಕಾಗಿಯೇ ಅವರು ‘ನಾನು ಯಾವಾಗಲೂ ರಾಮಚಂದ್ರ ಚಕ್ರವರ್ತಿಗಳ ಸಂಗವನ್ನು ಬಯಸುತ್ತೇನೆ’ ಎನ್ನುತ್ತಾರೆ. ಭಕ್ತರ ಸಂಗವನ್ನು ಅವರು ಬಯಸುತ್ತಾರೆ. ಇಡಿಯ ಪ್ರಕ್ರಿಯೆ ಏನೆಂದರೆ, ಶ್ರೇಷ್ಠ ಆಚಾರ್ಯರ ಕರುಣೆಗಾಗಿ ಪ್ರಾರ್ಥಿಸುವುದು ಮತ್ತು ಶುದ್ಧ ಭಕ್ತನ ಸಂಗದಲ್ಲಿರುವುದು. ನಾವು ಹೀಗಿದ್ದಾಗ ಮಾತ್ರ ಕೃಷ್ಣಪ್ರಜ್ಞೆಯತ್ತ ಮುಂದುವರಿದು, ಚೈತನ್ಯ ಮಹಾಪ್ರಭು ಹಾಗೂ ಭಗವಂತ ಕೃಷ್ಣನ ಕರುಣೆಯನ್ನು ಪಡೆಯಲು ಸಾಧ್ಯ. ನರೋತ್ತಮದಾಸ ಠಾಕುರರು ಹಾಡಿದ ಗೀತೆಯ ಸಾರಾಂಶವಿದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi