ಬಹಳ ಹಿಂದೆ, ಈಗಿನ ಬಂಗಾಳ ಪ್ರಾಂತ್ಯದಲ್ಲಿ ಇರುವ ಪ್ರದೇಶವೊಂದು ಶ್ರೀ ನರೇಶ ನಾರಾಯಣ ಎಂಬ ರಾಜನ ರಾಜಧಾನಿಯಾಗಿತ್ತು. ರಾಜಾ ನರೇಶ ನಾರಾಯಣನಿಗೆ ಶಚೀ ಎಂಬೊಬ್ಬಳು ಮಗಳಿದ್ದಳು. ಬಾಲ್ಯದಿಂದಲೂ ಆಕೆ ಭಗವಂತನ ಅತ್ಯುನ್ನತ ಭಕ್ತಳಾಗಿದ್ದಳು.

ಶಚಿಗೆ ವಿದ್ಯಾಭ್ಯಾಸ ಆರಂಭವಾದಾಗ, ಆಕೆ ವ್ಯಾಕರಣ ಮತ್ತು ಕಾವ್ಯಗಳಲ್ಲಿ ಅತೀವ ಆಸಕ್ತಿ ತೋರಿದಳು. ಕ್ರಮೇಣ ಈ ವಿಷಯಗಳಲ್ಲಿ ಪರಿಣತಳಾಗಿ ಧರ್ಮಗ್ರಂಥಗಳ ಅಧ್ಯಯನದಲ್ಲಿ ಸಂಪೂರ್ಣವಾಗಿ ಮುಳುಗಿಹೋದಳು. ಚಿಕ್ಕ ಹುಡುಗಿಯಾಗಿದ್ದುಕೊಂಡೂ ಬೇರೆ ವಿಷಯಗಳತ್ತ ಆಸಕ್ತಿ ತೋರದೆ, ಸದಾ ಕೃಷ್ಣಪ್ರಜ್ಞೆಯಲ್ಲಿಯೇ ವ್ಯಸ್ತಳಾಗಿರುತ್ತಿದ್ದಳು.
ಶಚಿಯು ಹದಿಹರೆಯಕ್ಕೆ ಕಾಲಿಟ್ಟಾಗ ಅವಳ ಸೌಂದರ್ಯ ಇಮ್ಮಡಿಸಿತು. ತರುಣರು ಅವಳ ರೂಪಕ್ಕೆ ಮನಸೋಲುತ್ತಿದ್ದರು. ಆದರೆ ಶಚಿಯ ಮನಸ್ಸಿನಲ್ಲಿ ಅದೆಷ್ಟೇ ಸುಂದರ- ಶ್ರೀಮಂತನ ಹುಡುಗನಾಗಿದ್ದರೂ ಅಂಥವರ ಬಗೆಗೆ ಎಳ್ಳಷ್ಟೂ ಒಲವಿರಲಿಲ್ಲ. ಅವಳು ಅನುಗಾಲವೂ ಮದನ- ಗೋಪಾಲನನ್ನು ಕುರಿತು ಚಿಂತಿಸುವಲ್ಲೇ ಮಗ್ನಳಾಗಿರುತ್ತಿದ್ದಳು.
ಪ್ರಾಪ್ತ ವಯಸ್ಕಳಾದ ಮಗಳಿಗೆ ಮದುವೆ ಮಾಡಬೇಕೆಂದು ರಾಜಾ ನರೇಶ ನಾರಾಯಣ ಯೋಚಿಸಿದ. ತಂದೆಯ ಆಲೋಚನೆಯನ್ನರಿತ ಮಗಳು, ನೇರವಾಗಿಯೇ, “ನಾನು ಮರ್ತ್ಯಲೋಕದಲ್ಲಿ ಸಾಯಲಿಕ್ಕೆಂದೇ ಜನಿಸಿದ ಪುರುಷನನ್ನು ಮದುವೆಯಾಗುವುದಿಲ್ಲ” ಎಂದು ಹೇಳಿಬಿಟ್ಟಳು. ಮದುವೆಗೆ ಮಗಳ ಮನ ಒಲಿಸುವಲ್ಲಿ ಸೋತ ರಾಜರಾಣಿಯರು ಅದೇ ಚಿಂತೆಯಲ್ಲಿ ಮುಪ್ಪಾದರು. ಕೊನೆಗೊ೦ದು ದಿನ ಮರಣಹೊಂದಿದರು.
ರಾಜನ ಮರಣಾನಂತರ ರಾಜ್ಯಭಾರದ ಜವಾಬ್ದಾರಿ ಶಚಿಯ ಮೇಲೆ ಬಿತ್ತು. ಅವಳು ಅದನ್ನು ಅಂಗೀಕರಿಸಿದಳು ಕೆಲ ಕಾಲಾನಂತರ ಆಡಳಿತ ಉಸ್ತುವಾರಿಗಾಗಿ ಸಂಬಂಧಿಯೊಬ್ಬರನ್ನು ನೇಮಿಸಿ, ತಾನು ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟುಬಿಟ್ಟಳು. ಎಲ್ಲೆಲ್ಲಿ ಸುತ್ತಿದರೂ ಅವಳ ಹೃದಯಕ್ಕೆ_ ತೃಪ್ತಿಯಾಗಲಿಲ್ಲ. ಹೀಗೆ ಸಂಚರಿಸುತ್ತಾ ಆಕೆ ಪುರಿಗೆ ಬಂದಳು. ಅಲ್ಲಿ ಜಗನ್ನಾಥನನ್ನು ಮನತಣಿಯೆ ದರ್ಶಿಸಿದಳು. ಅವಳಿಗೆ, ಅಲ್ಲಿಂದ ವೃಂದಾವನಕ್ಕೆ ತೆರಳುವಂತೆ ಪ್ರೇರಣೆಯಾಯಿತು.
ವೃಂದಾವನದಲ್ಲಿ ಶಚೀ ಹರಿದಾಸ ಪಂಡಿತರನ್ನು ಕಂಡಳು. ತಾನು ಅರಸುತ್ತಿದ್ದ ಗುರು ಇವರೇ ಅನಿಸಿತವಳಿಗೆ. ಹರಿದಾಸ ಪಂಡಿತರು ಆಕೆಗೆ ತಮ್ಮ ಚರಣಕಮಲಗಳಲ್ಲಿ ಆಶ್ರಯವಿತ್ತರು. ಆದರೆ, ತಮ್ಮ ಶಿಷ್ಯೆಯನ್ನು ಪರೀಕ್ಷಿಸುವ ಸಲುವಾಗಿ ಅವರು ಹೀಗೆ ಹೇಳಿದರು;
“ರಾಜಕುವರಿಯಾದವಳು ಹೀಗೆ ವೃಂದಾವನಕ್ಕೆ ಬಂದು ಭಜನೆಯಲ್ಲಿ ನಿರತಳಾಗಿ, ಅಲ್ಪಾಹಾರ ಸೇವಿಸುತ್ತ, ಯಾವ ಸೌಕರ್ಯವೂ ಇಲ್ಲದೆ ಬಡ ಭಕ್ತಳಂತೆ ಇರುವುದು ಸಾಧ್ಯವಾಗದ ಮಾತು. ನೀನು ವೃಂದಾವನದಲ್ಲಿರುವುದಕ್ಕಿಂತ ನಿನ್ನ ಮನೆಯಲ್ಲೇ ಇದ್ದುಕೊಂಡು ಪೂಜೆ- ಧ್ಯಾನಗಳನ್ನು ನಡೆಸುವುದೊಳಿತು.”
ಶಚಿಗೆ ತನ್ನ ಗುರುವಿನ ಆಂತರ್ಯ ತಿಳಿಯಿತು. ಅವರ ಮಾತಿಗೆ ಎಷ್ಟೋ ಗಮನ ನೀಡದೆ, ತನ್ನ ಪಾಡಿಗೆ ತಾನು ಪೂಜೆ, ಜಪ, ತಪಗಳಲ್ಲಿ ಎಂದಿನಂತೆ ನಿರತಳಾದಳು. ತೀವ್ರತೆ, ದೃಢತೆ, ಪರಿತ್ಯಾಗ ಮತ್ತು ತಪಸ್ಸಿನ ಫಲವಾಗಿ ಆಕೆ ಹಂತ ಹಂತವಾಗಿ ಪ್ರಗತಿ ಸಾಧಿಸತೊಡಗಿಸಿದಳು. ತಪಸ್ಸು ತೀವ್ರವಾದೆಂತಲ್ಲ ಆಕೆಯ ವೈರಾಗ್ಯವೂ ಬಲವಾಯಿತು. ಆಕೆ ತನ್ನ ಬೆಲೆಬಾಳುವ ವಸ್ತ್ರಗಳನ್ನು ಬಹುಮೂಲ್ಯ ಆಭರಣಗಳನ್ನು ತೆಗೆದಿರಿಸಿದಳು.
ಒಮ್ಮೆ ಹರಿದಾಸ ಪಂಡಿತಗೋಸ್ವಾಮಿಗಳು ಶಚೀದೇವಿಯನ್ನು ಕುರಿತು, “ನೀನು ನಿನ್ನೆಲ್ಲ ಪ್ರತಿಷ್ಠೆ ಭಯಗಳನ್ನು ಒತ್ತಟ್ಟಿಗಿಡಬಲ್ಲೆಯಾದರೆ, ವ್ರಜಭೂಮಿಯಲ್ಲಿ ಸುತ್ತಾಡಿ, ಮನೆ ಮನೆಗೆ ತೆರಳಿ, ಇತರೆಲ್ಲ ಪರಿತ್ಯಾಗಿ ಭಕ್ತರು ಮಾಡುವಂತೆ ಭಿಕ್ಷಾನ್ನ ಸಂಪಾದಿಸಿಕೊಂಡು ಬಾ.

ನಿನಗೆ ನನ್ನ ಆಶೀರ್ವಾದವಿದ್ದೇ ಇದೆ” ಎಂದರು. ಗುರುದೇವನ ಮಾತಿನಿಂದ ಹರ್ಷಚಿತ್ತಳಾದ ಶಚೀದೇವಿ ಸಂತೋಷವಾಗಿಯೇ ಆ ಕೆಲಸಕ್ಕೆ ಕೈ ಹಾಕಿದಳು. ತನ್ನ ತೀವ್ರ ವೈರಾಗ್ಯ, ತಪಶ್ಯಕ್ತಿಗಳಿಂದ ಭಕ್ತಾಗ್ರಣಿಯಾಗಿ ಮುಂದುವರಿದಳು.
ಕ್ರಮೇಣ ಶಚೀದೇವಿಯ ದೇಹವು ದುರ್ಬಲಗೊಳ್ಳುತ್ತಸಾಗಿತು. ಆದರೆ ಆಕೆ ಅದರತ್ತ ಗಮನ ನೀಡಲೇ ಇಲ್ಲ. ರಾತ್ರಿಯ ವೇಳೆ ಯಮುನೆಯ ತೀರದಲ್ಲಿ ಮಲಗುವುದು, ಮುಂಜಾನೆ ಎದ್ದು ಭಗವಂತನ ಮಂದಿರ ಶುಚಿಗೊಳಿಸುವುದು, ಪವಿತ್ರ ಸ್ಥಳಗಳನ್ನು ದರ್ಶಿಸುವುದು, ಪೂಜಾರತಿಗಳಲ್ಲಿ ಪಾಲ್ಗೊಳ್ಳುವುದು ಮತ್ತು ಶ್ರೀಮದ್ಭಾಗವತದ ಪ್ರವಚನಗಳನ್ನು ಆಲಿಸುವುದು ಇವು ಅವಳ ನಿತ್ಯದ ದಿನಚರಿಯಾಗಿತ್ತು.
ಹರಿದಾಸ ಪಂಡಿತರು ಆಕೆಯ ಭಕ್ತಿಸೇವೆಯಿಂದ ಸಂಪ್ರೀತರಾಗಿ, ಮಂತ್ರೋಪದೇಶ ನೀಡುವುದಾಗಿ ಹೇಳಿದರು. ಇದನ್ನು ಕೇಳಿ ಶಚೀದೇವಿ ಆನ೦ದದಿ೦ದ ಉಬ್ಬಿಹೋದಳು. ಆಕೆಯ ದಿನಗಳು ಹೀಗೆ ಸಾರ್ಥಕಗೊಳ್ಳುತ್ತಿರಲು, ಒಮ್ಮೆ ಹರಿದಾಸರು ಆಕೆಗೆ ಪುರಿಜಗನ್ನಾಥಕ್ಕೆ ತೆರಳುವಂತೆ ಅಲ್ಲಿನ ಜನರಿಗೆ ಉಪದೇಶ ನೀಡುವಂತೆ ಸೂಚಿಸಿದರು.
ಗುರುದೇವನ ಆಜ್ಞೆಯನ್ನು ಶಿರಸಾವಹಿಸಿದ ಶಚೀದೇವಿ ಪುರಿಗೆ ಬಂದಳು. ಸಾರ್ವಭೌಮ ಭಟ್ಟಾಚಾರ್ಯರು ವಾಸಿಸುತ್ತಿದ್ದು, ಈಗ ಪಾಳುಬಿದ್ದ ಮನೆಯಲ್ಲಿ ಶ್ರೀಮದ್ಭಾಗವತದ ಮೇಲೆ ಸೈದ್ಧಾಂತಿಕ ನೆಲೆಯಲ್ಲಿ ಪ್ರವಚನ ನೀಡಲಾರಂಭಿಸಿದಳು.
ಸಾರ್ವಭೌಮರ ಅನಂತರ ಯಾರೂ ಪೂಜಿಸದೆ ಹಾಗೆಯೇ ಉಳಿದಿದ್ದ ದಾಮೋದರ ಸಾಲಿಗ್ರಾಮವನ್ನು ವಿಧಿವತ್ತಾಗಿ ಪುನಃ ಪ್ರತಿಷ್ಠಾಪಿಸಿ, ಪೂಜೆಯ ವ್ಯವಸ್ಥೆ ಕಲ್ಪಿಸಿದಳು. ದಿನಕಳೆದಂತೆ ಹೆಚ್ಚು ಹೆಚ್ಚು ಜನರು ಆಕೆಯ ಪ್ರವಚನಗಳತ್ತ ಆಕರ್ಷಿತರಾಗಿ ಅಲ್ಲಿಗೆ ಬರಲಾರಂಭಿಸಿದರು.
ಜಗನ್ನಾಥ ಪುರಿಯ ರಾಜ ಮುಕುಂದ ದೇವನೂ ಕೂಡ ಆಕೆಯ ಸಿದ್ಧಾಂತ ವಿವರಣೆಯ ಶೈಲಿಗೆ ಮಾರುಹೋಗಿ, ಆಕೆಗೆ ಭಕ್ತಿಪೂರ್ವಕವಾಗಿ ಏನಾದರೊಂದು ಕಾಣಿಕೆ ನೀಡಬೇಕೆಂದು ಯೋಚಿಸಿದನು. ಅಂದು ರಾತ್ರಿ ಅವನ ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ದೇವನು, ಆಕೆಗೆ ಶ್ವೇತಗಂಗೆಯ ತಟದಲ್ಲಿ ಪ್ರಶಸ್ತವಾದ ಸ್ಥಳವೊಂದನ್ನು ಕಾಣಿಕೆ ನೀಡುವಂತೆ ನಿರ್ದೇಶಿಸಿದನು.
ಅದರಂತೆ ಮರುದಿನ ರಾಜಾ ಮುಕುಂದ ದೇವ, ಶಚೀದೇವಿಯ ಬಳಿಸಾರಿ ತನ್ನ ಕಾಣಿಕೆಯನ್ನು ಸ್ವೀಕರಿಸುವಂತೆ ಬಿನ್ನವಿಸಿದನು. ಆದರೆ ಪರಮ ಪರಿತ್ಯಾಗಿಯಾಗಿದ್ದ ಶಚೀದೇವಿಯು ಅದನ್ನು ಸ್ವೀಕರಿಸಲು ನಿರಾಕರಿಸಿದಳು. ಕೊನೆಯಲ್ಲಿ ರಾಜ ಪರಿಪರಿಯಾಗಿ ಬೇಡಿಕೊಂಡ ಮೇಲೆ, ಜಗನ್ನಾಥನ ಆದೇಶವನ್ನು ಧಿಕ್ಕರಿಸಿದಂತಾಗಬಾರದೆಂಬ ಕಾಳಜಿಯಿಂದ ಅವನ ಬಿನ್ನಹಕ್ಕೆ ಒಪ್ಪಿದಳು. ರಾಜನು ಶ್ವೇತಗಂಗೆಯ ತಟದಲ್ಲಿ ಪವಿತ್ರ ಘಟ್ಟವೊಂದರಲ್ಲಿ ಶ್ರೀ ಶಚೀದೇವಿಯ ಹೆಸರಿನಲ್ಲಿ ಶಾಸನ ಬರೆಯಿಸಿದನು.
ಒಮ್ಮೆ ಮಹಾವಾರುಣಿ ಸ್ನಾನದ ಪವಿತ್ರದಿನ ಹತ್ತಿರ ಬರುತ್ತಿರಲು, ಶಚೀದೇವಿಯು ಗಂಗೆಯಲ್ಲಿ ಸ್ನಾನ ಮಾಡಲು ಬಯಸಿದಳು. ಆದರೆ ಪುರಿಯನ್ನು ಬಿಟ್ಟು ಬೇರೆಲ್ಲೂ ಹೋಗದಂತೆ ಆಕೆಯ ಗುರುವಿನ ಆಜ್ಞೆ ಇದ್ದಿತು.

ಅಂದು ರಾತ್ರಿ ಕನಸಿನಲ್ಲಿ ದರ್ಶನವಿತ್ತ ಶ್ರೀ ಜಗನ್ನಾಥ ದೇವನು ಆಕೆಗೆ, ಗಂಗಾದೇವಿಯು ಆಕೆಯ ಸಾಹಚರ್ಯ ಬಯಸಿರುವಳೆಂದೂ ಮಹಾವಾರುಣಿಯಂದು ಅಲ್ಲಿಗೆ ಖಂಡಿತವಾಗಿ ಹೋಗಲೇಬೇಕೆಂದೂ ತಿಳಿಸಿದನು. ಅದರಂತೆ ಶಚೀದೇವಿಯು ಸಂತೋಷದಿಂದ ಶ್ವೇತ ಗಂಗೆಗೆ ತರಳಿದಳು.
ಮಧ್ಯರಾತ್ರಿಯ ಹೊತ್ತಿನಲ್ಲಿ ಶ್ವೇತ ಗಂಗೆಯಲ್ಲಿ ಶಚೀದೇವಿಯು ಸ್ನಾನ ಮಾಡುತ್ತಿರುವಾಗ ಸುಳಿಯೊಂದು ಆಕೆಯನ್ನು ಸೆಳೆದುಕೊಂಡು ಪ್ರವಾಹವೆಬ್ಬಿಸಿ ಜಗನ್ನಾಥ ಮಂದಿರದವರೆಗೂ ಸಾಗಿತು. ಇದನ್ನು ಕಂಡ ಸಾವಿರಾರು ಜನರು ಆನಂದತುಂದಿಲರಾಗಿ ಉಕ್ಕಿಬಂದ ಗಂಗೆಯಲ್ಲಿ ಮಿಂದು ಪುನೀತರಾದರು. ಅಲ್ಲೊಂದು ದೊಡ್ಡ ಕೋಲಾಹಲವೇ ನಡೆಯಿತು.
ನಡುರಾತ್ರಿಯ ಹೊತ್ತಿನ ಈ ಗದ್ದಲದಿಂದ ಎಚ್ಚೆತ್ತ ಜಗನ್ನಾಥ ದೇವಾಲಯದ ಕಾವಲುಗಾರರು ಎಲ್ಲೆಂದರಲ್ಲಿ ನೆರೆದಿದ್ದ ಜನಸಮುದಾಯವನ್ನು ಕಂಡರು. ದೇವಾಲಯದಲ್ಲಿ ನಡೆಯುತ್ತಿದ್ದ ಗದ್ದಲಕ್ಕೆ ದನಿಗೂಡಿಸಿದರು. ಊರತುಂಬ ನಡೆಯುತ್ತಿದ್ದ ದೊಂಬಿಗೆ ರಾಜನೂ ಎಚ್ಚರಗೊಂಡನು. ‘ದೇವಾಲಯದ ದ್ವಾರಗಳನ್ನು ತೆರೆಯಲು ಹೇಳಿ’ ಎಂದು ಆದೇಶಿಸಿದನು. ಅಂತೆಯೇ ಸೇವಕರು ಬಾಗಿಲು ತೆರೆದಾಗ ಅಲ್ಲಿ ದೇವಾಲಯದೊಳಗೆ ಶಚೀದೇವಿ ನಿಂತಿರುವುದು ಕಂಡಿತು.
ಆ ಹೊತ್ತಿನಲ್ಲಿ ಅಲ್ಲಿದ್ದಾಳೆಂದರೆ ಆಕೆಯೊಬ್ಬ ಜಗನ್ನಾಥನ ಆಭರಣ ದೋಚಲು ಬಂದ ಕಳ್ಳಿಯೇ ಇರಬೇಕೆಂದು ಜನ ತೀರ್ಮಾನಿಸಿದರು. ಭಟರು ಅವಳನ್ನು ಬಂಧಿಸಿದರು. ಆದರೆ ಕೆಲವು ಭಕ್ತರು, ‘ಇದು ಸಾಧ್ಯವಿಲ್ಲ ಇದರಲ್ಲೇನೋ ರಹಸ್ಯವಿದೆ” ಎಂದು ಮಾತನಾಡಿಕೊಂಡರು. ಇತ್ತ ದ್ವಾರ ತೆರೆಯಲು ಆದೇಶನೀಡಿ ನಿದ್ರೆ ಹೋಗಿದ್ದ ರಾಜನ ಕನಸಿನಲ್ಲಿ ಜಗನ್ನಾಥನು ಬಿಡುಗಡೆಗೊಳಿಸಿ ಆಕೆಯ ಕಾಲಿಗೆ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ದರ್ಶನವಿತ್ತನು.
ಕೋಪಗೊಂಡಿದ್ದ ಆತನು ಆ ಕೂಡಲೇ ಶಚೀದೇವಿಯನ್ನು ಬಿಡುಗಡೆಗೊಳಿಸಿ ಆಕೆಯ ಕಾಲಿಗೆ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಆದೇಶಿಸಿದನು. “ಆಕೆಯ ಪಾದಗಳನ್ನು ತೊಳೆಯಲು ಇದು ನಾನೇ ಅಣಿಗೊಳಿಸಿದ ವ್ಯವಸ್ಥೆ. ಅದರಿಂದಾಗಿಯೇ ಗಂಗೆ ಆಕೆಯನ್ನು ದೇವಾಲಯಕ್ಕೆ ಸೆಳೆದು ತಂದಿದ್ದು, ನಿನ್ನ ಜೀವನ ಮಂಗಳಕರವಾಗಿರಬೇಕೆಂದು ಬಯಸುವಿಯಾದರೆ ನೀನು, ದೇವಾಲಯದ ಪೂಜಾರಿಗಳು – ನೀವೆಲ್ಲರೂ ಆಕೆಯ ಕ್ಷಮೆ ಬೇಡಿ. ನೀನು ಆಕೆಯಿಂದ ದೀಕ್ಷೆ ಪಡೆದುಕೋ” ಎಂದು ನುಡಿದನು.
ಅದರಂತೆ ಪಶ್ಚಾತ್ತಾಪದಿಂದ ರಾಜನು ಶಚೀದೇವಿಯತ್ತ ತೆರಳಿ, ಆಕೆಯ ಕಾಲಿಗೆ ಬಿದ್ದು ಕ್ಷಮೆ ಬೇಡಿದನು. ಕನಸಿನಲ್ಲಿ ಶ್ರೀ ಜಗನ್ನಾಥ ದೇವನು ನೀಡಿದ ನಿರ್ದೇಶನವನ್ನು ತಿಳಿಸಿ, ಆಕೆಯ ಕೃಪೆ ಕೋರಿದನು. ಶ್ರೀ ಜಗನ್ನಾಥನ ಲೀಲೆಯಿದೆಂದು ಅರಿತು, ಸಂತಸಗೊಂಡ ಶಚೀದೇವಿಯು ಭಗವಂತನ ಅಣತಿಯಂತೆ ರಾಜನಿಗೆ ಅಷ್ಟಾದಶಾಕ್ಷರೀ ರಾಧಾ- ಕೃಷ್ಣ ಮಂತ್ರವನ್ನು ಉಪದೇಶಿಸಿದಳು. ಇತರ ಪಂಡಾ, ಪೂಜಾರಿಗಳು ರಾಜನನ್ನು ಅನುಸರಿಸಿ, ಆಕೆಯ ಪಾದ ಪದ್ಮಗಳಲ್ಲಿ ಆಶ್ರಯ ಬೇಡಿದರು.
ಅಂದಿನಿಂದ ಮುಂದೆ ಶ್ರೀ ಶಚೀದೇವಿಗೆ ‘ಗಂಗಾಮಾತಾ ಗೋಸ್ವಾಮಿನಿ’ ಎಂದು ಹೆಸರಾಯಿತು.






Leave a Reply