ಚೈತನ್ಯ ಚರಿತಾಮೃತದಲ್ಲಿ ದಾಖಲಾಗಿರುವಂತೆ (ಆದಿಲೀಲಾ 10.115) ಚೈತನ್ಯ ವೃಕ್ಷದ ಎಂಬತ್ತೆರಡು, ಎಂಬತ್ಮೂರು ಮತ್ತು ಎಂಬತ್ನಾಲ್ಕನೇ ಶಾಖೆಗಳು ಗೋವಿಂದ, ಮಾಧವ ಮತ್ತು ವಸುದೇವ ಎಂಬ ಸಹೋದರರು. ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತು ಶ್ರೀ ನಿತ್ಯಾನಂದರು ಈ ಸಹೋದರರು ಸಂಕೀರ್ತನೆ ನಡೆಸುವಾಗ ಆನಂದೋನ್ಮತ್ತರಾಗಿ ನರ್ತಿಸುತ್ತಿದ್ದರು.

ರಾಯಸ್ಥವಂಶದ ಘೋಷ್ ಕುಟುಂಬದ ಗೋವಿಂದ ಘೋಷ್, ಮಾಧವ ಘೋಷ್ ಮತ್ತು ವಸುದೇವ ಘೋಷ್ ಎಂಬ ಮೂವರು ಸಹೋದರರು ಮಹಾಭಕ್ತರಾಗಿದ್ದರು. ಇವರು ವ್ರಜಲೀಲೆಯಲ್ಲಿ ವಿಶಾಖಾಗೋಪಿಯು ರಚಿಸುತ್ತಿದ್ದ ಗೀತೆಗಳನ್ನು ಸುಮಧುರವಾಗಿ ಹಾಡಿ ಕೃಷ್ಣನನ್ನು ರಂಜಿಸುತ್ತಿದ್ದ ಕಲಾವತೀ ರಾಸೋಲ್ಲಾಸ ಮತ್ತು ಗುಣತುಂಗಾ ಗೋಪಿಯರಾಗಿದ್ದರು ಎಂದು ಗೌರಘನೋದ್ದೇಶ ದೀಪಿಕಾ ಕೃತಿಯಲ್ಲಿ ಕವಿ ಕರ್ಣಾಪೂರರು ತಿಳಿಸಿದ್ದಾರೆ.
ಶ್ರೀ ಗೋವಿಂದ ಘೋಷರು ಅಗ್ರದ್ವೀಪದಲ್ಲಿ ವಾಸಿಸುತ್ತಿದ್ದು, ಗೋಯಿನಾಥ ದೇವಾಲಯವನ್ನು ಕಟ್ಟಿಸಿದರು. ಶ್ರೀ ಚೈತನ್ಯ ಮಹಾಪ್ರಭುಗಳ ಆದೇಶದಂತೆ ಉಳಿದಿಬ್ಬರು ಸಹೋದರರು ಶ್ರೀ ನಿತ್ಯಾನಂದ ಪ್ರಭುಗಳೊಡನೆ ಕೃಷ್ಣನಾಮ ವಿತರಣೆಗೆ ತೆರಳಿದಾಗ ಗೋವಿಂದ ಘೋಷರು ಮಹಾಪ್ರಭುಗಳೊಡನೆಯೇ ಉಳಿದು, ಅವರ ಸೇವೆಯ ಭಾಗ್ಯವನ್ನು ಪಡೆದರು.
ಮಾಧುರ್ಯ ರಸಭಾವದಲ್ಲಿ ತಲ್ಲಿನರಾಗಿರುತ್ತಿದ್ದ ಗೋವಿಂದ ಘೋಷ್ ಮತ್ತು ಸಹೋದರರು ಅತ್ಯಂತ ಸುಮಧುರ ಕಂಠವನ್ನು ಹೊಂದಿದ್ದರು. ಸಂಕೀರ್ತನಾ ತಂಡಗಳಲ್ಲಿ ಇವರು ಹಾಡಿದರೆಂದರೆ, ಭಕ್ತ ವೈಷ್ಣವರು ಮತ್ತರಾಗಿ ಆಲಿಸುತ್ತಾ ನರ್ತನಕ್ಕೆ ಉತ್ತೇಜನರಾಗುತ್ತಿದ್ದರು.

ಜಗನ್ನಾಥಪುರಿಯ ರಥಯಾತ್ರೆಯಲ್ಲಿ ಇವರು ಪ್ರತಿವರ್ಷವೂ ತಪ್ಪದೆ ಭಾಗವಹಿಸುತ್ತಿದ್ದರು. ಈ ಸಂದರ್ಭದಲ್ಲೊಮ್ಮೆ ಶ್ರೀ ಚೈತನ್ಯ ಮಹಾಪ್ರಭುಗಳು ಗೋವಿಂದಘೋಷರ ಮುಂದಾಳತ್ವದಲ್ಲಿ ಕೀರ್ತನ ತಂಡವನ್ನು ರಚಿಸಿದರು. ಶ್ರೀ ವಕ್ರೀಶ್ವರ ಪಂಡಿತರು ಈ ತಂಡದ ಪ್ರಮುಖ ನರ್ತಕರು. ಈ ಸಮೂಹದೊಂದಿಗೆ ಮಹಾಪ್ರಭುಗಳು ತಮ್ಮ ಕೀರ್ತನ-ನರ್ತನ ಲೀಲೆಯನ್ನು ನಡೆಸಿದರು.
ಶ್ರೀ ಚೈತನ್ಯ ಮಹಾಪ್ರಭುಗಳು ಅಂತರ್ಧಾನರಾದ ಬಳಿಕ ಘೋಷ್ ಸಹೋದರರು ಬೇರೆ ಬೇರೆ ಗ್ರಾಮಗಳಿಗೆ ತೆರಳಿ ವಾಸ್ತವ್ಯ ಹೂಡಿದರು. ಶ್ರೀ ಗೋವಿಂದ ಘೋಷರು ಅಗ್ರದ್ವೀಪಕ್ಕೆ ಬಂದು ನೆಲೆಸಿದರು. ಸಂತಾನವಿಲ್ಲದೆ ತಮ್ಮ ದೇಹತ್ಯಾಗದ ಅನಂತರ ಉತ್ತರ ಕ್ರಿಯೆಗಳನ್ನು ಯಾರು ಮಾಡುವರೆಂದು ಅವರು ತೀವ್ರ ಚಿಂತಿತರಾಗಿದ್ದರು.
ಅವರ ಇಷ್ಟ ದೈವ ಗೋಪಿನಾಥನು ಕನಸಿನಲ್ಲಿ ಬಂದು ತಾನು ಅವರ ಉತ್ತರ ಕ್ರಿಯೆ ನಡೆಸುವುದಾಗಿ ವಾಗ್ದಾನವಿತ್ತನೆಂದು ಪ್ರತೀತಿ. ಅಂದಿನಿಂದ ಇಂದಿನವರೆಗೂ ಶ್ರೀ ಗೋವಿಂದ ಘೋಷರ ಪುಣ್ಯದಿನದಂದು ಗೋಪಿನಾಥ ಮೂರ್ತಿಯ ಉತ್ತರಕ್ರಿಯೆ ನಡೆಸುವ ವಾಡಿಕೆ ನಡೆದು ಬಂದಿದೆ.






Leave a Reply