ಸೀತಾ ಠಾಕುಠಾಣಿ

ಸೀತಾ ಠಾಕುರಾಣಿ ಅವರು ಶ್ರೀ ಅದ್ವೈತ ಆಚಾರ್ಯರ ಪತ್ನಿಯಾಗಿದ್ದರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ ತಾಯಿ ಶ್ರೀಮತಿ ಶಚೀದೇವಿಯಷ್ಟೇ ಪೂಜ್ಯ ಭಾವದಿಂದ ಗೌರವಿಸಲ್ಪಡುವರು.

ಶ್ರೀಮತಿ ಸೀತಾದೇವಿಯವರು ಚೈತನ್ಯ ಮಹಾಪ್ರಭುಗಳನ್ನು ಅತ್ಯುನ್ನತ ವಾತ್ಸಲ್ಯ ಭಾವದಿಂದ ಕಾಣುತ್ತಿದ್ದರು. ಮಹಾಪ್ರಭುಗಳು ಭೂಲೋಕದಲ್ಲಿ ಅವತರಿಸಿದಾಗ ಅವರು ತಮ್ಮ ಪತಿಯ ಅನುಮತಿ ಪಡೆದು ಆ ದಿವ್ಯ ಶಿಶುವಿನ ದರ್ಶನಕ್ಕೆ ತೆರಳಿದರು. ಬಗೆ ಬಗೆಯ ಆಭರಣಗಳ ಉಡುಗೊರೆಯಿತ್ತು.

ಆನಂದಬಾಷ್ಪ ತುಂಬಿದ ಕಣ್ಣುಗಳಿಂದ ತಮ್ಮ ವಾತ್ಸಲ್ಯವನ್ನು ವ್ಯಕ್ತಪಡಿಸಿದರು. ಬುಟ್ಟಿಗಟ್ಟಲೆ ಉಡುಗೊರೆಗಳನ್ನು ನೀಡಿದರೂ ಅವರ ಮಾತೃಹೃದಯಕ್ಕೆ ತೃಪ್ತಿಯಾಗಲಿಲ್ಲ! ಮಗುವನ್ನೇ ದಿಟ್ಟಿಸಿ ನೋಡುತ್ತ ಸೀತಾದೇವಿಯವರು ಗೋಕುಲದಲ್ಲಿ ಜನಿಸಿದ ಶ್ರೀ ಕೃಷ್ಣನಿಗೂ ಇಲ್ಲಿ ಜನಿಸಿರುವ ದಿವ್ಯ ಶಿಶುವಿಗೂ ಬಣ್ಣ ಮಾತ್ರದ ವ್ಯತ್ಯಾಸದ ಹೊರತು ಅವರಿಬ್ಬರೂ ಒಂದೇ ಎಂದು ಮನಗಂಡರು.

ಶ್ರೀಮತಿ ಸೀತಾದೇವಿ ಮತ್ತು ಶಚೀದೇವಿಯರು ಒಂದೇ ಮನಸ್ಸಿನವರಾಗಿದ್ದರು. ಅವರಿಬ್ಬರಿಗೂ ಪುಟ್ಟ ನಿಮಾಯ್ ಸರ್ವಸ್ವವಾಗಿದ್ದನು. ಸೀತಾದೇವಿ ಪ್ರತಿ ದಿನವೂ ಶಚೀದೇವಿಯ ಮನೆಗೆ ತೆರಳಿ, ಶಿಶುವಿನ ಪಾಲನೆಯಲ್ಲಿ ನೆರವಾಗುತ್ತಿದ್ದರು. ಹುಣ್ಣಿಮೆ ಚಂದ್ರನಂತೆ ವೃದ್ಧಿಸುತ್ತಿದ್ದ ಮಗುವಿನ ಸೌಂದರ್ಯವನ್ನು ಕಂಡು ಹಿಗ್ಗುತ್ತಿದ್ದರು.

ಮುಂದೆ, ಶ್ರೀ ಚೈತನ್ಯ ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಿ ವೃಂದಾವನದತ್ತ ಹೊರಟು ನಿಂತಾಗ ಶಚೀಮಾತೆಯು ದುಃಖದಿಂದ ಸೊರಗಿ ಹೋದರು. ಆಗ ಸೀತಾದೇವಿ ಅವರ ಮನೆಯಲ್ಲಿಯೇ ಇದ್ದು ಸಾಂತ್ವನ ನೀಡಿದರು. ಮಾತೃಪ್ರೇಮವಶರಾದ ಮಹಾಪ್ರಭುಗಳು ವೃಂದಾವನಕ್ಕೆ ಹೋಗದೆ ಶಾ೦ತಿಪುರಕ್ಕೆ ಮರಳಿದಾಗ ಶ್ರೀ ಅದ್ವೈತ ಆಚಾರ್ಯ ಮತ್ತು ಸೀತಾಠಾಕುರಾಣಿ ಅತ್ಯಾನಂದದಿಂದ ಅವರ ಪಾದಪೂಜೆ ಮಾಡಿ ಪ್ರಸಾದವನ್ನು ನಿವೇದಿಸಿದರು.

ಮಹಾಪ್ರಭುಗಳು ಶಚೀಮಾತೆಗೆ ಕೊಟ್ಟ ಮಾತಿನಂತೆ ಪುರಿಯಲ್ಲಿ ನೆಲೆ ನಿಂತಾಗಲೂ ಸೀತಾದೇವಿಯು ತಮ್ಮ ಪತಿಯೊಂದಿಗೆ ಅಲ್ಲಿಗೆ ತೆರಳಿ, ಅವರ ದರ್ಶನ ಪಡೆಯುತ್ತಿದ್ದರು.

ಗೌರಘನೋದ್ದೇಶ ದೀಪಿಕಾದಲ್ಲಿ ಸೀತಾ ಠಾಕುರಾಣಿಯು “ಯೋಗಮಾಯೆ’ ಎಂದು ಹೇಳಲಾಗಿದೆ. ಅವರು ಚೈತನ್ಯ ಲೀಲೆಯಲ್ಲಿ ಅದ್ವೈತ ಮಹಾಪ್ರಭುಗಳ ಪತ್ನಿಯಾಗಿ ಅವತರಿಸಿ ತಮ್ಮ ವಾತ್ಸಲ್ಯ ಭಾವದ ಪರಿಪೂರ್ಣತೆಯನ್ನು ಅನುಭವಿಸಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi