ಪ್ರೇಮ ನಿಧಿ, ಆಚಾರ್ಯನಿಧಿ ಎಂದು ಗೌರವಿಸಲ್ಪಡುತ್ತಿದ್ದ ಶ್ರೀಲ ಪುಂಡರೀಕ ವಿದ್ಯಾನಿಧಿಗಳು ಶ್ರೀ ಚೈತನ್ಯ ಮಹಾಪ್ರಭುಗಳ ಆಪ್ತರೂ ಹಿರಿಯ ಭಕ್ತರೂ ಆಗಿದ್ದರು.

ರಾಧಾಭಾವದಲ್ಲಿರುವಾಗಲೆಲ್ಲ ಮಹಾಪ್ರಭುಗಳು ವಿದ್ಯಾನಿಧಿಯವರನ್ನು “ತಂದೆ” ಎಂದೇ ಸಂಬೋಧಿಸುತ್ತಿದ್ದರು. ಹಿಂದೆ ಕೃಷ್ಣವತಾರದಲ್ಲಿ ರಾಧಾರಾಣಿಯ ತಂದೆ ವೃಷಭಾನುವಾಗಿ ಜನಿಸಿದ್ದವರೇ ಚೈತನ್ಯಾವತಾರದ ಪುಂಡರೀಕ ವಿದ್ಯಾನಿಧಿಗಳು ಎಂಬುದಾಗಿ ಕವಿ ಕರ್ಣಾಪುರರ “ಗೌರ ಘನೋದ್ದೇಶ ದೀಪಿಕಾ” ದಿಂದ ತಿಳಿದುಬರುತ್ತದೆ.
ಶ್ರೀ ಚೈತನ್ಯ ಮಹಾಪ್ರಭುಗಳು ಪುಂಡರೀಕ ವಿದ್ಯಾನಿಧಿಯವರನ್ನು ಗುರುವಿನಂತೆ ಕಂಡು ಗೌರವಿಸುತ್ತಿದ್ದರು. ಪುಂಡರೀಕರು ಶ್ರೀ ಚೈತನ್ಯ ಗುರುಗಳ ಗುರುಗಳಾದ ಶ್ರೀ ಮಾಧುವೇಂದ್ರ ಪುರಿಗಳ ಶಿಷ್ಯರಾಗಿದ್ದುದೇ ಅದಕ್ಕೆ ಕಾರಣ.
ಆದರೆ ಪುಂಡರೀಕ ವಿದ್ಯಾನಿಧಿಗಳು ಮಾತ್ರ ತಮ್ಮನ್ನು ತಾವು ಮಹಾಪ್ರಭುಗಳ ಶಿಷ್ಯರೆಂದೇ ಮನಃಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಮಹಾಪ್ರಭುಗಳ ಮತ್ತೊಬ್ಬ ಅನುಚರರಾದ ಶ್ರೀ ಗದಾಧರ ಪಂಡಿತರು ವಿದ್ಯಾನಿಧಿಗಳನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸುತ್ತಿದ್ದರು.

ಪುಂಡರೀಕ ವಿದ್ಯಾನಿಧಿಗಳು ಜನಿಸಿದ್ದು ಚಟ್ಟ ಗ್ರಾಮವೆಂಬ ಹಳ್ಳಿಯಲ್ಲಿ. ಇದು ಪೂರ್ವ ಬಂಗಾಳದಲ್ಲಿದೆ. ಅವರ ತಂದೆ ಶುಕ್ಲಾಂಬರ ಬ್ರಹ್ಮಚಾರಿ ಮತ್ತು ತಾಯಿ ಗಂಗಾದೇವಿ. ಪುಂಡರೀಕರು ಮಹಾನ್ ಕೃಷ್ಣಭಕ್ತರು. ಕೃಷ್ಣಪ್ರೇಮಾಮೃತವನ್ನು ತಾವು ಸವಿದುದು ಮಾತ್ರವಲ್ಲದೆ ಎಲ್ಲರೂ ಅದರ ಪ್ರಯೋಜನ ಪಡೆಯಬೇಕೆಂಬುದು ಅವರ ಆಶಯವಾಗಿತ್ತು.
ಅದರಂತೆ ನಿರಂತರವಾಗಿ ಕೃಷ್ಣನಾಮಾಮೃತವನ್ನು ಜನರಿಗೆ ಉಣಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸ್ವತಃ ಶ್ರೀ ಚೈತನ್ಯ ಮಹಾಪ್ರಭುಗಳೇ ಶ್ರೀ ಪುಂಡರೀಕ ವಿದ್ಯಾನಿಧಿಗಳನ್ನು ಕುರಿತು “ಸದಾ ಶ್ರೀ ಕೃಷ್ಣನ ಪ್ರೇಮ ಸಾಗರದಲ್ಲಿ ತೇಲುವವರು” ಎಂದು ಹೇಳಿರುವರು.
ಪುಂಡರೀಕ ವಿದ್ಯಾನಿಧಿಯವರು ಪ್ರತಿಷ್ಠಾಪಿಸಿದ ಲಕ್ಷ್ಮೀಗೋವಿಂದ ಮೂರ್ತಿಯು ಇಂದಿಗೂ ಅಸ್ತಿತ್ವದಲ್ಲಿದೆ. ಅವರು ಜನಿಸಿದ ಸ್ಥಳದಲ್ಲಿ ಅವರ ಕೈ ಬರಹವಿರುವ ಮಣ್ಣಿನ ಮಡಕೆಯೊಂದನ್ನು ನಾವು ಕಾಣಬಹುದಾಗಿದೆ. ಪರಮ ವೈಷ್ಣವ ಮಹಾಭಕ್ತ ಶ್ರೇಷ್ಠ ಪುಂಡರೀಕ ವಿದ್ಯಾನಿಧಿ ಭಗವಂತನೆಡೆಗಿನ ದಿವ್ಯ ಪ್ರೇಮಕ್ಕೆ ಇಂದಿಗೂ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ.






Leave a Reply