ಶ್ರೀರಾಘವೇಂದ್ರರು

(ಆಗಸ್ಟ್‌ 29 ರಿಂದ 31, 2026 ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪ್ರಯುಕ್ತ ಅವರ ಸಂಕ್ಷಿಪ್ತ ಜೀವನ ಚರಿತ್ರೆ ಇಲ್ಲಿದೆ)

– ಸುಬ್ರಹ್ಮಣ್ಯ.ಎಂ.ಕೆ

“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ|

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||

ಮೂಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೇ|

ರಾಜರಾಜಾಯತೇ ರಿಕ್ತಃ ರಾಘವೇಂದ್ರಂ ತಮಾಶ್ರಯೇ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|

ಶ್ರೀರಾಘವೇಂದ್ರಗುರುವೇ ನಮೋ ಅತ್ಯಂತದಯಾಲವೇ||”

ಇತ್ಯಾದಿ ಸ್ತೋತ್ರಗಳಿಂದ ಸ್ತುತಿಸಿಕೊಳ್ಳುವ, ಜಾತಿ, ಮತ, ಪಂಥಗಳೆಂಬ ಭೇದವಿಲ್ಲದೆ, ಭಕ್ತರೆಲ್ಲರನ್ನೂ ಅನುಗ್ರಹಿಸುವ ಶ್ರೀರಾಘವೇಂದ್ರ ಸ್ವಾಮಿಗಳ ಚರಿತ್ರೆ ಸ್ಮರಿಸುವುದೇ ಒಂದು ಪುಣ್ಯಕಾರ್ಯ. ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಅವರ ಆರಾಧನೆಯ ಸಮಯದಲ್ಲಿ ಸ್ಮರಿಸಿ, ಅವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸೋಣ.

ವೈಷ್ಣವ ಸಂಪ್ರದಾಯದಲ್ಲಿ “ಅರವತ್ತೊಕ್ಕಲು” ಎಂಬ ಹೆಸರಾಂತ ವಂಶಕ್ಕೆ ಸೇರಿದ “ಬೀಗಮುದ್ರೆ” ಎಂಬ ಮನೆತನದ ಗೌತಮ ಗೋತ್ರೋತ್ಪನ್ನರಾದ ಕೃಷ್ಣಭಟ್ಟರೆಂಬುವರು, ಅವರ ಮಗನಾದ ಕನಕಾಚಲಭಟ್ಟರು, ಅವರ ಮಗನಾದ ತಿಮ್ಮಣ್ಣಭಟ್ಟರು ಮೂವರೂ ವೈಣಿಕ ಮತ್ತು ವೈದಿಕ ಎರಡೂ ವಿದ್ಯೆಗಳಲ್ಲಿ ಪಾಂಡಿತ್ಯ ಪಡೆದು ವಿಜಯನಗರದ ಶ್ರೀಕೃಷ್ಣದೇವರಾಯನ ಕಾಲದಿಂದಲೂ ಕ್ರಮವಾಗಿ ಆಸ್ಥಾನ ವಿದ್ವಾಂಸರಾಗಿದ್ದರು. ತಿಮ್ಮಣ್ಣಭಟ್ಟರ ಪತ್ನಿಯ ಹೆಸರು ಗೋಪಿಕಾಂಬೆ.

ವಿಜಯನಗರ, ರಕ್ಕಸತಂಗಡಿ ಯುದ್ಧದಲ್ಲಿ ಯವನರಿಂದ ಧೂಳಿಪಟ ಆದಕಾರಣ, ತಿಮ್ಮಣ್ಣಭಟ್ಟರಿಗೆ ಹೆಚ್ಚು ಸಮಯ ರಾಜಾಶ್ರಯದಲ್ಲಿ ಇರಲು ಸಾಧ್ಯವಾಗಲಿಲ್ಲ. ಅವರು ಕುಂಭಕೋಣಕ್ಕೆ ಬಂದು ಗುರುಗಳಾದ ಶ್ರೀಸುಧೀಂದ್ರತೀರ್ಥರ ಮಠದಲ್ಲಿ ಆಶ್ರಯ ಪಡೆದರು.  ಮಕ್ಕಳಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು.

ಗೋಪಿಕಾಂಬೆಯ ಇಚ್ಛೆಯಂತೆ, ತಿಮ್ಮಣ್ಣಭಟ್ಟರು ಅವಳೊಡನೆ ತಿರುಪತಿಗೆ ತೆರಳಿ, ಸಂತಾನಾಪೇಕ್ಷೆಯಿಂದ ಶ್ರೀವೆಂಕಟೇಶನನ್ನು ಸೇವಿಸಿದರು. ಅದರ ಫಲವಾಗಿ ವೆಂಕಮ್ಮ ಎಂಬ ಹೆಣ್ಣು ಮಗುವೂ ಹಾಗೂ ಗುರುರಾಜ ಎಂಬ ಗಂಡು ಮಗುವೂ ಜನಿಸಿದರು. ತಮ್ಮ ಕುಲಕ್ಕೆ ಕೀರ್ತಿ ತರುವಂತಹ ಭಗವತ್ಭಕ್ತನಾದ ಸುಪುತ್ರನನ್ನು ಪಡೆಯಬೇಕೆಂಬ ಹೆಬ್ಬಯಕೆ ಅವರಿಗೆ ಹೆಚ್ಚಾದಾಗ, ಪುನಃ ತಿರುಪತಿಗೆ ತೆರಳಿ ಶ್ರೀವೆಂಕಟೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಸೇವಿಸಿದರು.

ಸುಪ್ರೀತನಾದ ಶ್ರೀವೆಂಕಟೇಶ್ವರನ ದಯೆಯಿಂದ ಕ್ರಿ.ಶ.1596ರಲ್ಲಿ, ಶ್ರೀಶಾಲಿವಾಹನ ಶಕೆ 1518ರ ಮನ್ಮಥನಾಮ ಸಂವತ್ಸರದ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ ಮೃಗಶಿರಾ ನಕ್ಷತ್ರದಲ್ಲಿ ಗಂಡು ಸಂತಾನವಾಯಿತು. ಮಗುವಿಗೆ ವೆಂಕಟನಾಥ ಎಂದೇ ನಾಮಕರಣ ಮಾಡಿದರು. ಸಂಸಾರ ಸ್ವಲ್ಪ ದೊಡ್ಡದಾದ ಕಾರಣ ಶ್ರೀಸುಧೀಂದ್ರತೀರ್ಥರಿಗೆ ತೊಂದರೆ ಕೊಡಲು ಇಷ್ಟವಾಗದೆ, ತಿಮ್ಮಣ್ಣಭಟ್ಟರು ಕಾವೇರಿಪಟ್ಟಣಂ ಎಂಬ ಸ್ಥಳಕ್ಕೆ ಬಂದು ನೆಲೆಸಿದರು.

ಅಲ್ಲಿಗೆ ಬಂದ ಸ್ವಲ್ಪ ದಿನಗಳಲ್ಲಿ ಮಗಳು ವೆಂಕಮ್ಮನಿಗೆ ಮಧುರೆಯ ಶ್ರೀಲಕ್ಷ್ಮಿನರಸಿಂಹಾಚಾರ್ಯ ಎಂಬ ಪಂಡಿತರೊಡನೆ ವಿವಾಹ ಮಾಡಿದರು. ನಂತರ ವೆಂಕಟನಾಥನಿಗೆ ಚೌಲ, ಅಕ್ಷರಭ್ಯಾಸ ನಡೆಯಿತು. ನಂತರ ತಮ್ಮ ಮೊದಲನೇ ಮಗ ಗುರುರಾಜನ ಉಪನಯನ ಹಾಗೂ ವಿವಾಹ ಮಾಡಿದರು. ಇದಾಗಿ ಕೆಲವು ದಿನಗಳಲ್ಲಿಯೇ ತಿಮ್ಮಣ್ಣಭಟ್ಟರು ಹಾಗೂ ಗೋಪಿಕಾಂಬೆ ಹರಿಪಾದ ಸೇರಿದರು. ಸಂಸಾರದ ಜವಾಬ್ದಾರಿಯೆಲ್ಲಾ ಗುರುರಾಜನ ಮೇಲೆ ಬಿತ್ತು.

ವೆಂಕಟನಾಥನಿಗೆ, ಗುರುರಾಜಾಚಾರ್ಯರೇ ಸಕಾಲದಲ್ಲಿ ಉಪನಯನ ಮಾಡಿ, ಪ್ರಾರಂಭಿಕ ಹಂತದ ಶಾಸ್ತ್ರವಿದ್ಯಾಭ್ಯಾಸವನ್ನು ನೀಡಿ, ಭಾವನವರಾದ ಶ್ರೀಲಕ್ಷ್ಮಿನರಸಿಂಹಾಚಾರ್ಯರ ಬಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಟ್ಟರು. ವೆಂಕಟನಾಥ ತನ್ನ ತೇಜಸ್ಸಿನ ಪ್ರಭಾವದಿಂದ, ಉತ್ಸಾಹದಿಂದ, ಆಸಕ್ತಿಯಿಂದ ಎಲ್ಲಾ ಪಾಠಗಳನ್ನೂ ಕಲಿಯುತ್ತಿದ್ದ. ಸಂತೋಷಗೊಂಡ ಶ್ರೀಲಕ್ಷ್ಮೀನರಸಿಂಹಾಚಾರ್ಯರು ತಾವು ಕಲಿತ ವಿದ್ಯೆಯೆಲ್ಲವನ್ನೂ ಅವನಿಗೆ ಧಾರೆಯೆರೆದರು.

ವ್ಯಾಕರಣ, ಕಾವ್ಯ, ಸಾಹಿತ್ಯ, ತರ್ಕ, ವೇದಾಂತ ಮುಂತಾದವುಗಳಲ್ಲಿ ವೆಂಕಟನಾಥನು ಸಾಕಷ್ಟು ಪ್ರಭುತ್ವವನ್ನು ಸಂಪಾದಿಸಿಕೊಂಡ. ಅವನು ಶೀಘ್ರದಲ್ಲಿಯೇ ವಿದ್ವನ್ಮಣಿಗಳ ಸಾಲಿನಲ್ಲಿ ನಿಲ್ಲುವಂತೆ ಆಯಿತು. ಸಂಗೀತ ಹಾಗೂ ವೈಣಿಕ ವಿದ್ಯೆಯಲ್ಲಿಯೂ ಪಂಡಿತನಾದ. 

ಕ್ರಿ.ಶ.1614, ಶಾಲಿವಾಹನ ಶಕೆ 1536ರ ಆನಂದನಾಮ ಸಂವತ್ಸರದ ಚೈತ್ರ ಶುದ್ಧ ಪಂಚಮಿಯಂದು ವೆಂಕಟನಾಥನ ವಿವಾಹವನ್ನು ಸರಸ್ವತಿ ಎಂಬ ಕನ್ಯೆಯೊಂದಿಗೆ ನಡೆಸಲಾಯಿತು. ದೈವಭಕ್ತಿ ಮತ್ತು ವಿನಯ ಸರಸ್ವತಿಯಲ್ಲಿ ಮೈತುಂಬಿ ನಿಂತಿದ್ದವು. ವೆಂಕಟನಾಥನಿಗೆ ತಕ್ಕ ಪತ್ನಿಯಾಗಿದ್ದಳು.

ಅಣ್ಣನ ಸಂಸಾರಕ್ಕೆ ಭಾರವಾಗಬಾರದೆಂದು ಯೋಚಿಸಿ ವೆಂಕಟನಾಥನು, ಪ್ರತ್ಯೇಕ ಸಂಸಾರ ಹೂಡಲು, ಗುರುರಾಜಾಚಾರ್ಯರ ಒಪ್ಪಿಗೆ ಪಡೆದು ಪತ್ನಿಯೊಂದಿಗೆ ಬಾಳಿನ ರಥ ಸ್ವಂತವಾಗಿ ಎಳೆಯಲು ಸಿದ್ದನಾದನು.

ದಂಪತಿಗಳಿಗೆ ಕೆಲ ಸಮಯದಲ್ಲಿ ಲಕ್ಷ್ಮೀನಾರಾಯಣ ಎಂಬ ಗಂಡು ಸಂತಾನವಾಯಿತು. ಮಗನ ಜನನದ ನಂತರ ಸಂಸಾರ ಅಷ್ಟೊಂದು ಸರಾಗವಾಗಿ ಸಾಗಲಿಲ್ಲ, ಹಂತ ಹಂತವಾಗಿ ಬಡತನ ತಲೆಯೆತ್ತಿತು. ವೆಂಕಟನಾಥರು ಪಂಡಿತೋತ್ತಮರಾದರೂ, ಬಡವರು ಎಂಬ ಕಾರಣದಿಂದ ಯಾರೂ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಅವರ ಬಳಿ ಕಳುಹಿಸುತ್ತಿರಲಿಲ್ಲ, ಏಕೆಂದರೆ, ಗುರುಕುಲ ವಾಸದ ಪದ್ಧತಿಯಂತೆ ಶಿಷ್ಯರ ಸಂಪೂರ್ಣ ಹೊಣೆಯನ್ನು ಗುರುಗಳೇ ವಹಿಸಬೇಕಾಗಿತ್ತು.

ಎಲ್ಲರಿಗೂ ಪಕ್ಷಕ್ಕೆ ಒಂದು ಏಕಾದಶಿ ಉಪವಾಸವಾದರೆ, ಇವರಿಗೆ ತಿಂಗಳಿಗೆ ಐದಾರು ಉಪವಾಸಗಳಾಗುತ್ತಿದ್ದವು. ಹಾಕಿಕೊಳ್ಳಲು ಹರಿದ ಬಟ್ಟೆಗಳೇ ಇದ್ದವು. ಅಡಿಗೆ ಮಾಡಲು ಸಾಕಷ್ಟು ಪಾತ್ರೆಗಳೂ ಇರಲಿಲ್ಲ. ಎಲೆ ಕೊಳ್ಳಲಾಗದೆ ಕೆಲವೊಮ್ಮೆ ನೆಲದ ಮೇಲೆಯೇ ಊಟ ಮಾಡುತ್ತಿದ್ದರು.

ಇಷ್ಟಿದ್ದರೂ ಸ್ವಧರ್ಮ ಮೀರಿ ಕರ್ತವ್ಯಲೋಪ ಮಾಡಿಕೊಳ್ಳಲಿಲ್ಲ, ಎಲ್ಲವೂ ಹರಿಚಿತ್ತ ಎಂದು ನಿರಾತಂಕವಾಗಿದ್ದರು. ಸಾಧ್ವಿ ಸರಸ್ವತಿಯೂ ತಾಳ್ಮೆಗೆಡದೆ, ಉದಾಸೀನ ಮಾಡದೆ ಪತಿಯನ್ನು ಅನುಸರಿಸುತ್ತಿದ್ದಳು. ಒಮ್ಮೆ ಇವರ ಮನೆಗೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಚಿಂದಿ ಬಟ್ಟೆಗಳನ್ನೂ, ಒಡಕಲು ಪಾತ್ರೆಗಳನ್ನೂ ಕದ್ದುಕೊಂಡು ಹೋದರು.

ಆಗ ಮಾತ್ರ ಮಗು ಲಕ್ಷ್ಮೀನಾರಾಯಣನಿಗೆ ಒಂದು ತೊಟ್ಟು ಹಾಲೂ ಇಲ್ಲವೆಂದು ಸರಸ್ವತಿ ಒದ್ದಾಡಿದಳು. ಆಗ ದಂಪತಿಗಳು ಕುಂಭಕೋಣದಲ್ಲಿ ಶ್ರೀಸುಧೀಂದ್ರತೀರ್ಥರ ಆಶ್ರಯ ಪಡೆಯಲು ನಿರ್ಧರಿಸಿ, ಕುಂಭಕೋಣಕ್ಕೆ ನಡೆದರು.

ವೆಂಕಟನಾಥರ ಪ್ರತಿಭೆಯ ಬಗ್ಗೆ ತಿಳಿದಿದ್ದ ಶ್ರೀ ಸುಧೀಂದ್ರತೀರ್ಥರು ತಮ್ಮ ಮಠದ ಕೀರ್ತಿ ನೂರ್ಮಡಿಗೊಳಿಸುವಂತಹ ಸತ್ಕಾರ್ಯಗಳು ಇನ್ನು ಮುಂದೆ ಹೇರಳವಾಗಿ ನಡೆಯುತ್ತವೆ ಎಂದು ಸಂತೋಷಪಟ್ಟು, ವೆಂಕಟನಾಥರಿಗೆ ಆಶ್ರಯ ನೀಡಿ, ಅವರ ಸಂಸಾರ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಟ್ಟರಲ್ಲದೇ, ವೆಂಕಟನಾಥರ ಅಪೇಕ್ಷೆಯಂತೆ ತಾವೇ ಅವರಿಗೆ ಶ್ರೇಷ್ಠ ಗ್ರಂಥಗಳ ಪಾಠ ಹೇಳತೊಡಗಿದರು.

ವೆಂಕಟನಾಥರು ಬಹುಬೇಗ ಉನ್ನತ ಮಟ್ಟದ ವಿದ್ಯೆಯನ್ನು ಕಲಿತರಲ್ಲದೇ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ಸಾಮರ್ಥ್ಯವನ್ನು ಸಂಪಾದಿಸಿಕೊಂಡು ಸ್ವಾಮಿಗಳ ಪ್ರೀತಿಗೆ ಪಾತ್ರರಾದರು. ತಮ್ಮ ನಂತರ ಉತ್ತರಾಧಿಕಾರಿಯಾಗಲು ವೆಂಕಟನಾಥರೇ ತಕ್ಕವರೆಂದು ಸ್ವಾಮಿಗಳು ಚಿಂತಿಸತೊಡಗಿದರು.

ಸ್ವಾಮಿಗಳ ಸ್ವಪ್ನದಲ್ಲೊಮ್ಮೆ ಶ್ರೀಮೂಲರಾಮದೇವರು ಕಾಣಿಸಿಕೊಂಡು ವೆಂಕಟನಾಥರಿಗೆ ಸಂಸ್ಥಾನವನ್ನು ಒಪ್ಪಿಸುವಂತೆ ಸೂಚಿಸಿದಾಗ, ಸ್ವಾಮಿಗಳು ತಡಮಾಡದೆ, ವೆಂಕಟನಾಥರಿಗೆ ವಿಷಯ ತಿಳಿಸಿದರು. ವೆಂಕಟನಾಥರು ತಕ್ಷಣ ಉತ್ತರಿಸಲಾಗದೆ ಮನೆಗೆ ಬಂದರು. ಅಂದು ರಾತ್ರಿ ಅವರಿಗೆ ಸ್ವಪ್ನದಲ್ಲಿ ವಿದ್ಯಾದೇವತೆಯಾದ ಸರಸ್ವತಿ ಕಾಣಿಸಿಕೊಂಡು, “ವೆಂಕಟನಾಥ, ಶ್ರೀ ಸುಧೀಂದ್ರರ ಮಾತಿನಂತೆ ಸನ್ಯಾಸವನ್ನು ಸ್ವೀಕರಿಸು.

ಧರ್ಮ ರಕ್ಷಣೆಗಾಗಿಯೇ ನಿನ್ನ ಅವತಾರವಾಗಿದೆ. ಕೂಡಲೇ ವೇದಾಂತ ಸಾಮ್ರಾಜ್ಯದ ಅಧಿಪತ್ಯವನ್ನು ಸ್ವೀಕರಿಸು. ನಾನು ನಿನ್ನಲ್ಲಿ ಬಂದು ನೆಲೆಸುತ್ತೇನೆ. ನಿನ್ನಿಂದ ಲೋಕಕಲ್ಯಾಣ ಆಗಬೇಕಾಗಿದೆ, ತಡಮಾಡಬೇಡ” ಎಂದು ಸೂಚಿಸಿದಳು. ಬೆಳಿಗ್ಗೆ ಅವರ ಮನಸ್ಸು ನಿರ್ಮಲವಾಗಿತ್ತು. ಸ್ವಾಮಿಗಳ ಬಳಿ ತೆರಳಿ ವಿಷಯವನ್ನು ತಿಳಿಸಿ, ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಸಿದ್ದ ಎಂದರು.

ನಂತರ ಸ್ವಾಮಿಗಳ ಸಹಾಯದಿಂದ ಮಗನ ಉಪನಯ ನೆರವೇರಿಸಿ, ಕೆಲವೇ ದಿನಗಳಲ್ಲಿ ಸ್ವಾಮಿಗಳೊಂದಿಗೆ ತಂಜಾವೂರಿಗೆ ತೆರಳಿ, ಅಲ್ಲಿನ ರಾಜ ಮತ್ತು ಪುರಗಣ್ಯರ ಸಮ್ಮುಖದಲ್ಲಿ, ಕ್ರಿ.ಶ. 1621, ಶಾಲಿವಾಹನ ಶಕೆ 1543ನೆಯ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ದ್ವಿತೀಯದಂದು ಸನ್ಯಾಸದೀಕ್ಷೆ ಪಡೆದು, ಸ್ವಾಮಿಗಳಿಂದ  “ಶ್ರೀರಾಘವೇಂದ್ರತೀರ್ಥ” ಎಂಬ ಶುಭನಾಮವನ್ನು ಪಡೆದರು.

ಇತ್ತ ತನ್ನ ಗಂಡ ಸನ್ಯಾಸಿಯಾದ ವಿಷಯ ಸಾಧ್ವಿ ಸರಸ್ವತಿಗೆ ತಿಳಿದು, ಬಹಳ ದುಃಖಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಶ್ರೀ ರಾಘವೇಂದ್ರರು ಸನ್ಯಾಸಾಶ್ರಮ ಸ್ವೀಕರಿಸಿದ ಎರಡು ವರ್ಷಕ್ಕೆ, ಅಂದರೆ, ಕ್ರಿ.ಶ. 1623, ಶಾಲಿವಾಹನ ಶಕೆ 1545ನೇ ರುಧಿರೋದ್ಗಾರಿನಾಮ ಸಂವತ್ಸರದ ಫಾಲ್ಗುಣ ಬಹುಳ ಬಿದಿಗೆಯಂದು ಶ್ರೀ ಸುಧೀಂದ್ರತೀರ್ಥರು ಹಂಪಿಯ ಹತ್ತಿರದ ಆನೆಗುಂದಿಯಲ್ಲಿ ಬೃಂದಾವನಸ್ಥರಾದರು. 

ಶ್ರೀರಾಘವೇಂದ್ರತೀರ್ಥರು ಅಮೂಲ್ಯವಾದ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ:

ಪರಿಮಳ – ಶ್ರೀಮನ್ಯಾಯಸುಧಾ (ಶ್ರೀಜಯತೀರ್ಥರ ಸ್ಮಾರಕ ಕೃತಿ) ಕುರಿತು ಅವರ ಅತ್ಯಂತ ಪ್ರಸಿದ್ಧ ಮತ್ತು ನಿರ್ಣಾಯಕ ವ್ಯಾಖ್ಯಾನ ಗ್ರಂಥ.

ತಂತ್ರದೀಪಿಕಾ – ಬ್ರಹ್ಮಸೂತ್ರಗಳ ಕುರಿತು ಒಂದು ಒಳನೋಟವುಳ್ಳ ವ್ಯಾಖ್ಯಾನ ಗ್ರಂಥ.

ಶ್ರೀ ರಾಮ ಚಾರಿತ್ರ ಮಂಜರಿ -ರಾಮಾಯಣದ ಸಾರಾಂಶ ಮತ್ತು ವ್ಯಾಖ್ಯಾನ ಗ್ರಂಥ.

ಶ್ರೀ ಕೃಷ್ಣ ಚಾರಿತ್ರ ಮಂಜರಿ – ಶ್ರೀ ಕೃಷ್ಣನ ಮೇಲೆ ಕೇಂದ್ರೀಕೃತವಾದ ಭಾಗವತದ ವ್ಯಾಖ್ಯಾನ ಗ್ರಂಥ.

ಭಾವ ಸಂಗ್ರಹ -ಮಹಾಭಾರತ ತಾತ್ಪರ್ಯ ನಿರ್ಣಯದ ಸಾರಾಂಶ ಮತ್ತು ಅಧ್ಯಯನ ಗ್ರಂಥ.

ದಶಾವತಾರ ಸ್ತುತಿ – ಶ್ರೀ ಹರಿಯ ಹತ್ತು ಅವತಾರಗಳನ್ನು ಸೆರೆಹಿಡಿಯುವ ಕಾವ್ಯಾತ್ಮಕ ಸ್ತೋತ್ರಗಳ ಗ್ರಂಥ.

ಗೀತಾರ್ಥ ಸಂಗ್ರಹ -ಮಧ್ವಾಚಾರ್ಯರು ವ್ಯಾಖ್ಯಾನಿಸಿದಂತೆ ಭಗವದ್ಗೀತೆಯ ಮೂಲ ಬೋಧನೆಗಳನ್ನು ಹೊರತೆಗೆಯುವ ವಿವರವಾದ ವ್ಯಾಖ್ಯಾನ ಗ್ರಂಥ.

ಗೀತಾ ವಿವೃತಿ -ಗೀತೆಯ ಮೇಲಿನ ಮತ್ತೊಂದು ಸಂಕ್ಷಿಪ್ತ ಆದರೆ ಹೆಚ್ಚು ಒಳನೋಟವುಳ್ಳ ವ್ಯಾಖ್ಯಾನ ಗ್ರಂಥ.

ಪ್ರಾತಃ ಸಂಕಲ್ಪ ಗದ್ಯಂ ಮತ್ತು ಸರ್ವ ಸಮರ್ಪಣ ಗದ್ಯಂ – ಬೆಳಗಿನ ಪ್ರಾರ್ಥನೆ ಮತ್ತು ದೇವರಿಗೆ ದೈನಂದಿನ ಕ್ರಿಯೆಗಳ ಶರಣಾಗತಿಗಾಗಿ ವಿನ್ಯಾಸಗೊಳಿಸಲಾದ ಸ್ಪೂರ್ತಿದಾಯಕ ಗದ್ಯ ತುಣುಕುಗಳ ಗ್ರಂಥಗಳು.

ಈ ಮೇಲೆ ಹೇಳಿದ ಗ್ರಂಥಗಳು ಹಾಗೂ ಇನ್ನಿತರ ಗ್ರಂಥಗಳು ಸೇರಿ, ಸುಮಾರು 48 ಕೃತಿಗಳು ವಿದ್ವತ್ ಪ್ರಪಂಚದಲ್ಲಿ ಅಗ್ರಮಾನ್ಯವಾಗಿ ಅವರ  ಪಾಂಡಿತ್ಯಕ್ಕೆ ಕೈಗನ್ನಡಿಯಾಗಿವೆ. ಹರಿದಾಸ ಸಾಹಿತ್ಯದಲ್ಲಿ ಒಲವಿದ್ದ ಶ್ರೀರಾಘವೇಂದ್ರರು ಕನ್ನಡ ಭಾಷೆಯಲ್ಲಿಯೂ ಅನೇಕ ಕೃತಿಗಳನ್ನು ರಚಿಸಿರುವ ಸಾಧ್ಯತೆ ಇದೆ, ಆದರೆ ಅವರು ರಚಿಸಿರುವ “ಧೀರವೇಣುಗೋಪಾಲ” ಅಂಕಿತದಲ್ಲಿ “ಇಂದು ಎನಗೆ ಗೋವಿಂದ…” ಎಂಬ ದೇವರನಾಮ ಮಾತ್ರ ಸಿಕ್ಕಿದೆ.

ಅವರು ಸುಜೀವಿಗಳನ್ನು ಉದ್ದರಿಸಬೇಕು, ಗತಿಹೀನರಿಗೆ ಮಾರ್ಗದರ್ಶನ ಮಾಡಬೇಕು ಮತ್ತು ಶ್ರೀಹರಿಯ ಅಪಾರ ಮಹಿಮೆಗಳನ್ನು ಪ್ರಚಾರ ಮಾಡಬೇಕೆಂಬ ಉದ್ದೇಶದಿಂದ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು ಮತ್ತು ಜಾತಿ, ಮತ, ಪಂಥಗಳ ಭೇದ ಎಣಿಸದೆ ಎಲ್ಲರಲ್ಲಿಯೂ ಕರುಣೆ ತೋರಿ ಅನುಗ್ರಹಿಸಿದರು.

ಶ್ರೀರಾಘವೇಂದ್ರಸ್ವಾಮಿಗಳ ಮಂತ್ರಸಿದ್ದಿಯ ಶಕ್ತಿಯನ್ನು ಕೆಲವು ಪ್ರಮುಖ ಪ್ರಸಂಗಗಳಿಂದ ತಿಳಿಯಬಹುದು:

ಆತ್ಮಹತ್ಯೆಯ ಪಾಪದಿಂದಾಗಿ ತಮ್ಮ ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ಬಂದಿದ್ದ ಪ್ರೇತಜನ್ಮಕ್ಕೆ ಮಂತ್ರೋದಕವನ್ನು ಪ್ರೋಕ್ಷಿಸಿ ಸದ್ಗತಿಯನ್ನು ಕರುಣಿಸಿದ್ದು.

ಕಾಡಿನಲ್ಲಿ ಸಂಚರಿಸುತ್ತಿರುವಾಗ, ತನಗೆ ಮದುವೆಯಾಗುವ ಇಚ್ಚೆ ತಿಳಿಸಿ ಧನ ಸಹಾಯ ಕೇಳಿದ ಶಿಷ್ಯನಿಗೆ ಮೃತ್ತಿಕೆಯನ್ನು ಮಂತ್ರಿಸಿ, ಇದೇ ಲಕ್ಷವರಹ ಎಂದು ತಿಳಿದುಕೋ ಎಂದಾಗ, ಅವನು ಭಕ್ತಿಯಿಂದ ಅದನ್ನು ಸ್ವೀಕರಿಸಿ, ಒಬ್ಬ ಶ್ರೀಮಂತನಿಗೆ ತೊಂದರೆಕೊಡುತ್ತಿದ್ದ ಬ್ರಹ್ಮರಾಕ್ಷಸನನ್ನು ರಾಯರ ಮೃತ್ತಿಕೆಯಿಂದ ಸಂಹರಿಸಿ, ಶ್ರೀಮಂತನ ಮಗಳನ್ನೇ ಮದುವೆಯಾಗಿ ಲಕ್ಷಾಧಿಪತಿ ಆದದ್ದು.

ತಾವು ಪೂಜೆಗೆ ಹೋಗಿದ್ದ ದೇಸಾಯಿ ಮನೆಯ ಮಗು ಮಾವಿನಹಣ್ಣಿನ ಸೀಕರಣೆ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಾಗ, ಮಂತ್ರೋದಕದಿಂದ ಮಗುವನ್ನು ಬದುಕಿಸಿದ್ದು.

ನಿರಕ್ಷರಕುಕ್ಷಿಯಾದ ಬಡಬ್ರಾಹ್ಮಣ ದನಕಾಯುವ ಜವಾನ ವೆಂಕಣ್ಣ, “ಓಂ ಶ್ರೀರಾಘವೇಂದ್ರಾಯ ನಮಃ” ಎಂದು ಕೇವಲ ಅವರ ನಾಮಸ್ಮರಣೆ ಮಾಡಿ ಆದವಾನಿಯ ನವಾಬನಾದ ಸಿದ್ದಿಮಸೂದಖಾನನಿಗೆ ಬಂದಿದ್ದ ಪತ್ರ ಓದಿ, ಅವನ ಸೈನ್ಯದ ವಿಜಯದ ವಿಷಯ ತಿಳಿಸಿ, ಆದವಾನಿಯ ದಿವಾನನಾಗಿದ್ದು.

ಶ್ರೀರಾಘವೇಂದ್ರರನ್ನು ಪರೀಕ್ಷಿಸಲು, ನವಾಬನಾದ ಸಿದ್ದಿಮಸೂದಖಾನನು ಬಟ್ಟೆಯಿಂದ ಮುಚ್ಚಿದ್ದ ಮಾಂಸದ ತಟ್ಟೆಯನ್ನು ಮೂಲರಾಮದೇವರ ನೈವೇದ್ಯಕ್ಕೆ ಸ್ವೀಕರಿಸಿ ಎಂದು ಇಟ್ಟಾಗ, ಮುಗುಳ್ನಕ್ಕು ಶ್ರೀರಾಘವೇಂದ್ರರು ಮಂತ್ರೋದಕದಿಂದ ಪ್ರೋಕ್ಷಿಸಿ ಹೊದ್ದಿಸಿದ್ದ ಬಟ್ಟೆಯನ್ನು ತೆಗೆಸಿದಾಗ, ತಟ್ಟೆಯಲ್ಲಿ ಕೇವಲ ಹಣ್ಣುಗಳು ಇದ್ದಿದ್ದು, ಇತ್ಯಾದಿ.

ಶ್ರೀರಾಘವೇಂದ್ರರು ವರಾಹದೇವರ ಕೋರೆ ಹಲ್ಲುಗಳಿಂದ ಹುಟ್ಟಿದ ತುಂಗಭದ್ರಾ ನದೀತೀರದ ಮಂಚಾಲೆಗ್ರಾಮದ ಪಾವಿತ್ರ್ಯತೆಯನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದರು. ಒಂದೊಂದು ಯುಗದಲ್ಲಿಯೂ ಮಂತ್ರಾಲಯಕ್ಕೆ ಒಂದೊಂದು ವೈಶಿಷ್ಟ್ಯಪೂರ್ಣವಾದ ಹಿನ್ನೆಲೆ ಮತ್ತು ಪೌರಾಣಿಕ ಮಹತ್ವವಿದೆ.

ಇದನ್ನು ಅಪರೋಕ್ಷ ಜ್ಞಾನಿಗಳಾದ ಅನೇಕ ಹರಿದಾಸರು ಸ್ಪಷ್ಟವಾದ ನುಡಿಗಳಿಂದ ಬಣ್ಣಿಸಿದ್ದಾರೆ. ಕೃತಯುಗದಲ್ಲಿ ಇದು ಪ್ರಹ್ಲಾದರಾಜರ ಯಾಗಭೂಮಿಯಾಗಿತ್ತು. ತ್ರೇತಾಯುಗದಲ್ಲಿ ಶ್ರೀರಾಮ-ಲಕ್ಷ್ಮಣರು ಸೀತಾನ್ವೇಷಣೆ ನಿಮಿತ್ತವಾಗಿ ಇಲ್ಲಿಗೆ ಬಂದಿದ್ದಾಗ ಅವರ ಪಾದಸ್ಪರ್ಶದಿಂದ ಪುನೀತವಾಗಿದ್ದಲ್ಲದೆ, ಶ್ರೀರಾಮದೇವರು ವಿಶ್ರಾಂತಿಗಾಗಿ ಇಲ್ಲಿನ ಶಿಲೆಯೊಂದರ ಮೇಲೆ ಕುಳಿತಿದ್ದ ರಹಸ್ಯವನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದಿದ್ದ ಶ್ರೀರಾಘವೇಂದ್ರರು ತಮ್ಮ ಬೃಂದಾವನವನ್ನು ಆ ಪವಿತ್ರ ಶಿಲೆಯಲ್ಲಿ ಮಾಡಬೇಕೆಂದು ಸೂಚಿಸಿದ್ದರು.

ದ್ವಾಪರಯುಗದಲ್ಲಿ ಅರ್ಜುನನಿಗೂ ಮತ್ತು ಅಣುಸಾಲ್ವನಿಗೂ ಇಲ್ಲಿ ಘೋರವಾದ ಯುದ್ಧ ನಡೆದಿತ್ತು. ಅರ್ಜುನನು ಎಷ್ಟು ಪ್ರಯತ್ನ ಪಟ್ಟರೂ, ಅಣುಸಾಲ್ವನನ್ನು ಗೆಲ್ಲಲಾಗಲಿಲ್ಲ, ಏಕೆಂದರೆ ಅಣುಸಾಲ್ವನು, ಹಿಂದೆ ಪ್ರಹ್ಲಾದರಾಜರು ಸ್ಥಾಪಿಸಿದ್ದ ಯಜ್ಞಕುಂಡದ ಸ್ಥಳದಲ್ಲಿ ನಿಂತಿದ್ದನು. ಇದನ್ನು ತಿಳಿದಿದ್ದ ಶ್ರೀಕೃಷ್ಣನು ಉಪಾಯವಾಗಿ ಅರ್ಜುನನ ರಥವನ್ನು ಸ್ವಲ್ಪ ಹಿಂದೆ ಸರಿಸಿದಾಗ, ಅಣುಸಾಲ್ವನು, ಆ ಜಾಗದಿಂದ ಮುಂದೆ ಬಂದಾಗ, ಅರ್ಜುನನು ಅವನನ್ನು ಗೆದ್ದನು.

ಕಲಿಯುಗದಲ್ಲಂತೂ ಇದು ಪವಿತ್ರ ತಪೋಭೂಮಿ. ದುರ್ಗಾದೇವಿಯ ಅವತಾರಳೆಂದೆ ಪ್ರಸಿದ್ಧಳಾದ ಮಂತ್ರಾಲಯಾಂಬಿಕೆ ಇಲ್ಲಿಯ ಗ್ರಾಮದೇವತೆ. ಮಂಚಾಲಮ್ಮ ಎಂದೇ ಪ್ರಸಿದ್ಧಿ. ಮಂತ್ರಾಲಯಕ್ಕೆ ಬರುವ ಭಕ್ತರು ಶ್ರದ್ಧಾಭಕ್ತಿಗಳಿಂದ ಇವಳನ್ನು ಮೊದಲು ಪೂಜಿಸುವ ಸಂಪ್ರದಾಯ ನಡೆದುಬಂದಿದೆ.

ಏನು ಬೇಕಾದರೂ ಕೊಡುವುದಾಗಿ ಹೇಳಿದ ನವಾಬ ಸಿದ್ದಿ ಮಸೂದ ಖಾನನಿಂದ ಮಂಚಾಲೆ ಗ್ರಾಮವನ್ನು ಶ್ರೀರಾಘವೇಂದ್ರರು ಪಡೆದುಕೊಂಡರು. ತಮ್ಮ ಅವತಾರ ಸಮಾಪ್ತಿಯ ಸಮಯ ಸಮೀಪಿಸುತ್ತಿರುವುದನ್ನು ತಿಳಿದಕೂಡಲೇ, ಶ್ರೀರಾಘವೇಂದ್ರರು, ಕ್ರಿ.ಶ.1671, ಶಾಲಿವಾಹನ ಶಕೆ 1593ರ ವಿರೋಧಿಕೃತನಾಮ ಸಂವತ್ಸರದಲ್ಲಿ ಸಶರೀರವಾಗಿ ಬೃಂದಾವನವನ್ನು ಪ್ರವೇಶ ಮಾಡಬೇಕೆಂದು ಸಂಕಲ್ಪಿಸಿದರು.

ಕ್ರಿ.ಶ.1671ರ ಶ್ರಾವಣ ಬಹುಳ ದ್ವಿತೀಯದಂದು ಯೋಗಾಸನಾರೂಢರಾಗಿ, ಜಪಮಾಲೆ ಹಿಡಿದು, ರಾಮಧ್ಯಾನ ಮಾಡುತ್ತಾ, ರಾಮದೇವರು ಕುಳಿತು ಪವಿತ್ರಗೊಳಿಸಿದ ಶಿಲೆಯಿಂದ ನಿರ್ಮಾಣಗೊಂಡ ಬೃಂದಾವನವನ್ನು ಸಶರೀರವಾಗಿ ಪ್ರವೇಶಿಸಿದರು. ನಂತರ ಅವರ ಅಪೇಕ್ಷೆಯಂತೆ 700 ಸಾಲಿಗ್ರಾಮಗಳನ್ನು ಇಟ್ಟು ಬೃಂದಾವನವನ್ನು ಪೂರ್ಣಗೊಳಿಸಲಾಯಿತು.

ಬೃಂದಾವನ ಪ್ರವೇಶ ಮಾಡಿದ ನಂತರವೂ ಅವರ ಮಂತ್ರಸಿದ್ದಿ ಹಾಗೂ ತಪಃಶಕ್ತಿಯ ಅಸಂಖ್ಯಾತ ಮಹಿಮೆಗಳನ್ನೂ ಕೆಲವು ಪ್ರಮುಖ ಪ್ರಸಂಗಗಳಿಂದ ನಾವು ತಿಳಿಯಬಹುದು:

ತಮ್ಮ ಪ್ರಿಯ ಶಿಷ್ಯರಾದ ಬಿಚ್ಚಾಲೆಯ ಅಪ್ಪಣ್ಣಾಚಾರ್ಯರಿಗೆ, ಅವರು ರಚಿಸಿದ “ಶ್ರೀಪೂರ್ಣಬೋಧ ಗುರುತೀರ್ಥ..” ಎಂಬ ಶ್ರೀರಾಘವೇಂದ್ರರ ಸ್ತೋತ್ರಕ್ಕೆ ಸಾಕ್ಷಿ ಎಂಬಂತೆ “ಸಾಕ್ಷೀ ಹಯಾಸ್ಯೋsತ್ರಹಿ” ಎಂದು ರಾಯರು ಬೃಂದಾವನದ ಒಳಗಿಂದ ತಿಳಿಸಿದರು.

ಕ್ರಿ.ಶ.1800ರಲ್ಲಿ  ಮಠದ ಭೂಮಿಯನ್ನು ವಶಪಡಿಸಿಕೊಳ್ಳಲು ಬಂದ ಬ್ರಿಟಿಷ್ ಕಲೆಕ್ಟರ್ ಸರ್ ಥಾಮಸ್ ಮುನ್ರೊಗೆ, ಬೃಂದಾವನದಿಂದ ತಮ್ಮ ಭೌತಿಕ ರೂಪದಲ್ಲಿ ದರ್ಶನಕೊಟ್ಟು, ಅವನೊಡನೆ ಮಾತನಾಡಿ, ಮಂತ್ರಾಕ್ಷತೆಯನ್ನು ಕೊಟ್ಟಾಗ, ಭಕ್ತಿಯಿಂದ ಅವನು ಮಂತ್ರಾಲಯ ಗ್ರಾಮ ಹಾಗೂ ದತ್ತಿಗೆ ಗೆಜೆಟ್ ಮೂಲಕ ಅಧಿಕೃತವಾಗಿ ವಿನಾಯತಿ ನೀಡಿದನು.

ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಮರಿ ಮಕ್ಕಳಾದ ಹಾಗೂ ಶ್ರೀರಾಘವೇಂದ್ರರ ನಂತರ ಅವರ ಪರಂಪರೆಯ ಪೀಠದಲ್ಲಿ ಬಂದ ಯತಿಶ್ರೇಷ್ಠರಾದ ಶ್ರೀವಾದೀಂದ್ರ ತೀರ್ಥರು ಪಂಡಿತೋತ್ತಮರಾಗಿದ್ದರು ಹಾಗೂ ಅನೇಕ ಪ್ರೌಢ ಕೃತಿಗಳನ್ನೂ ರಚಿಸಿದ್ದಾರೆ. ಅವರೇ ರಚಿಸಿದ ಗುರುಗುಣ ಸ್ತವನ ಎಂಬ ಕೃತಿಯನ್ನು ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನದ ಮುಂದೆ ಪಠಿಸಿ ಸಮರ್ಪಣೆ ಮಾಡಿದಾಗ, ಶ್ರೀರಾಘವೇಂದ್ರ ಸ್ವಾಮಿಗಳಿಗೆ ಅದು ಒಪ್ಪಿಗೆ ಆಗಿದೆ ಎನ್ನುವಂತೆ ಬೃಂದಾವನವೇ ಕಂಪಿಸಿತು ಎಂಬ ಐತಿಹ್ಯವಿದೆ.

ಇಂದಿಗೂ ಭಕ್ತರು ತಮ್ಮ ಅಭಿಲಾಷೆ ಈಡೇರಿಸಿಕೊಳ್ಳಲು, ಅವರ ಬೃಂದಾವನಕ್ಕೆ ಯಾವುದೇ ರೀತಿಯಲ್ಲಿ ಸೇವೆ ಸಲ್ಲಿಸಿದಾಗ, ಶ್ರೀರಾಘವೇಂದ್ರ ಸ್ವಾಮಿಗಳು ಅನುಗ್ರಹ ಮಾಡಿರುವ, ಮಾಡುತ್ತಿರುವ ಬಗ್ಗೆ ಭಕ್ತರ ಅನುಭವದ ಮಾತುಗಳಿಂದ ನಾವು ತಿಳಿಯಬಹುದು.

ಮಂತ್ರಾಲಯವು, ಪ್ರಪಂಚದ ಭಕ್ತರೆಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ನೆನೆದವರ ಮನದಲ್ಲಿ ಎಂಬುವಂತೆ ಕಾಮಧೇನು, ಕಲ್ಪವೃಕ್ಷ ಎನಿಸಿದ ಶ್ರೀರಾಘವೇಂದ್ರರು ಇಂದಿಗೂ ಕರೆದಲ್ಲಿಗೆ ಬಂದು ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi