ಶ್ರೀರಾಮ ಪಥ ದರ್ಶನ…

– ಆಧಾರ: ಸೀತಾರಾಮ್‌ ಗುರುಮೂರ್ತಿಯವರ, ಸಂಗ್ರಹಾನುವಾದ: ಚೇತನಾ ತೀರ್ಥಹಳ್ಳಿ.

ಶ್ರೀರಾಮ ಪಿತೃವಾಕ್ಯ ಪರಿಪಾಲನೆಗಾಗಿ ಸೀತಾಲಕ್ಷ್ಮಣರ ಸಹಿತ ವನವಾಸ ಕೈಗೊಂಡ ಚಾರಿತ್ರಿಕ ಸಂಗತಿಯ ಕುರಿತು ನಾಸ್ತಿಕರ ಗುಂಪಿನಿಂದ ಒಣ ವಾದಗಳೆದ್ದಿರುವ ಬೆನ್ನಲ್ಲೇ ಭಕ್ತಿವೇದಾಂತ ದರ್ಶನವು ರಾಮ ನಡೆದ ಹಾದಿಯಲ್ಲಿರುವ ಐತಿಹಾಸಿಕ ದೇಗುಲಗಳ ಸಂಕ್ಷಿಪ್ತ ಪರಿಚಯ ನೀಡುವ ಮೂಲಕ ಉತ್ತರ ನೀಡಲು ಹೊರಟಿದೆ. ಮಾಲಿಕೆಯಲ್ಲಿ ಉಲ್ಲೇಖವಾಗಿರುವ ಪ್ರತಿಯೊಂದು ದೇವಾಲಯಕ್ಕೂ ರಾಮಾಯಣದ ಘಟನೆಗೆ ಸಂಬಂಧಿಸಿದ ವಿವರಗಳಿವೆ.

ಸಂಚಿಕೆಯಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿರುವ ರಾಮದೇಗುಲಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದೇವೆ.

ಉತ್ತರ ಪ್ರದೇಶ – ಅಯೋಧ್ಯೆ

ಶ್ರೀ ರಾಮನಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ರಾಜ್ಯಕ್ಕೆ ಹೆಚ್ಚಿನ ಮಹತ್ವವಿದೆ. ರಾಮಜನ್ಮಭೂಮಿ ಅಯೋಧ್ಯೆ ಇರುವುದು ಈ ರಾಜ್ಯದಲ್ಲಿ. ಇದು ಭಾರತವರ್ಷದ ಸಪ್ತಪುಣ್ಯಧಾಮಗಳಲ್ಲಿ ಒಂದು.

ಅಯೋಧ್ಯಾ ಪಟ್ಟಣ ದೆಹಲಿಯಿಂದ 645ಕಿ.ಮೀ. ದೂರದಲ್ಲಿ ಸರಯೂ ನದಿಯ ದಂಡೆಯ ಮೇಲಿದೆ. ಆಯೋಧ್ಯೆಯೊಂದರಲ್ಲೇ ಶ್ರೀರಾಮನ 6000 ದೇಗುಲಗಳಿವೆ. ಅವುಗಳಲ್ಲಿ ಹೆಚ್ಚಿನವು ರಾಮಾಯಣದ ಘಟನೆಗಳಿಗೆ ಸಂಬಂಧವಿರಿಸಿಕೊಂಡವು. ಅವುಗಳಲ್ಲಿ ಪ್ರಸ್ತುತ ಕೇಂದ್ರವಾಗಿರುವ ರಾಮಜನ್ಮಭೂಮಿಯಲ್ಲಿ ನಿರ್ಮಿಸಿರುವ ಶ್ರೀರಾಮ ದೇಗುಲ, ಕುಶನಿಂದ ನಿರ್ಮಿತವಾದ ನಾಗೇಶ್ವರನಾಥ ದೇಗುಲ, ಕಾಲಾರಾಮ ದೇಗುಲಗಳು ಮುಖ್ಯವಾದವು.

ಮುಸ್ಲಿಮ್ ದೊರೆ ನವಾಬ್ ಶುಜಾ ಉಲ್ಲಾನಿಂದ ನಿರ್ಮಾಣಗೊಂಡ ಹನುಮಾನ್‌ ಗ‌ರ್‌ ದೇವಾಲಯ, ಅಯೋಧ್ಯೆಯ ಸ್ಥಳೀಯ ಸಾಮರಸ್ಯತೆಯ ಪ್ರತೀಕ. ನವಾಜ್ ಶುಜಾ ಉಲ್ಲಾ, ರಾಮ ಭಕ್ತನಾಗಿದ್ದವ. ಪಟ್ಟಾಭಿಷೇಕದ ನಂತರ ರಾಮನಿಂದ ನಿರ್ಮಿಸಲ್ಪಟ್ಟ ಈ ಮನೆಯಲ್ಲಿ ಹನುಮಂತ ವಾಸಿಸುತ್ತಿದ್ದನೆಂದು ಹೇಳಲಾಗುತ್ತದೆ.

ಈ ದೇವಾಲಯದುದ್ದಕ್ಕೂ ಒಂದು ಅಡ್ಡಗೋಡೆಯಿದ್ದು, ಅಲ್ಲಿ, ಅರಳಿಮರದ ಕೆಳಗೆ ಹನುಮಂತನು ವಿಶ್ರಾಂತಿ ಪಡೆಯುತ್ತಿದ್ದನೆಂದು ಪ್ರತೀತಿ. ಈ ಗೋಡೆಗೆ ‘ಸಂಕಟ ಮೋಚನ’ ಎಂದು ಕರೆಯುತ್ತಾರೆ. ಅದು, ಹನುಮಂತನಿಗಿರುವ ಹೆಸರೂ ಹೌದು.

ಅಯೋಧ್ಯೆಯ ಬಹುತೇಕ ದೇಗುಲಗಳು ಚಿತ್ರವಿಚಿತ್ರ ಆಚರಣೆಗಳನ್ನು ಹೊಂದಿವೆ. ಆದರೆ, ಅದರ ಹಿನ್ನೆಲೆಯಲ್ಲಿ ಅರ್ಥಗರ್ಭಿತ ಕಥೆಗಳೂ ಇವೆ. ಉದಾಹರಣೆಗೆ, ಅಲ್ಲಿನ ‘ಕಾಗೆ’ ದೇವಾಲಯವನ್ನೆ ತೆಗೆದುಕೊಳ್ಳಿ!

ಕಾಗೆ ದೇವಾಲಯವನ್ನು ಅಲ್ಲಿ ‘ಕಾಗ್ ಮಂದಿರ್’ ಎಂದು ಕರೆಯುತ್ತಾರೆ. ಇದು ಅಕ್ಷರಶಃ ಕಾಗೆಯನ್ನು ಪೂಜಿಸುವ ದೇವಾಲಯ!

ಸಾಂಪ್ರದಾಯಿಕ ಜಾನಪದ ಕಥೆಯ ಪ್ರಕಾರ, ವಿರ್ಧನನ ಶಿಷ್ಯ ಭುಷುಂಡಿಯು ಭಗವಂತನ ಆಸ್ತಿತ್ವದ ಕುರಿತು ಅನುಮಾನದ ಪ್ರಶ್ನೆಗಳನ್ನು ಹೊತ್ತು ಸಾಕ್ಷ್ಯಗಳನ್ನು ಹುಡುಕುತ್ತ ಹೊರಟಾಗ ಕುಪಿತನಾದ ಗುರುವು ಶಿಷ್ಯನಿಗೆ ‘ಕಾಗೆ’ಯಾಗುವಂತೆ ಶಪಿಸುತ್ತಾನೆ.

ಪಶ್ಚಾತ್ತಾಪ ಪಡುತ್ತ ಭುಷುಂಡಿಯು ತನ್ನನ್ನು ಮನ್ನಿಸುವಂತೆ ಕೇಳಿಕೊಂಡಾಗ, ನರರೂಪದಲ್ಲಿ ಭಗವಂತ ಅವತರಿಸಿದಾಗ ಆತನ ದರ್ಶನದಿಂದ ನಿನಗೆ ಶಾಪ ವಿಮೋಚನೆಯಾಗುವುದು ಎಂದು ಹೇಳುತ್ತಾನೆ. ಅದರಂತೆ, ಶ್ರೀ ರಾಮನ ದರ್ಶನದಿಂದ ಭುಷುಂಡಿಯ ಶಾಪವಿಮೋಚನೆಯಾಗಿ ಕಾಗೆಯಿಂದ ಪುನಃ ಮಾನವನಾಗಿ ರೂಪಾಂತರ ಹೊಂದುತ್ತಾನೆ. ಜೊತೆಗೆ ಭಗವಂತನ ದರ್ಶನದಿಂದ ಆತ ಶಾಶ್ವತ ದೇಹ ಪಡೆಯುತ್ತಾನೆ.

ಪ್ರಸ್ತುತ ‘ಕಾಗ್‌ಮಂದಿರ್’ ಇರುವ ಸ್ಥಳವೇ ಕಾಗೆರೂಪದ ಭುಷುಂಡಿಯು ಸೀತಾ ಸಹಿತ ಶ್ರೀರಾಮನನ್ನು ದರ್ಶಿಸಿದ ಸ್ಥಳ. ಪ್ರತಿವರ್ಷ ಮಾಘಮಾಸದ ಆರಂಭದ ದಿನ (ಜನವರಿ 15ರ ಆಸುಪಾಸು) ಮಕ್ಕಳು ಮತ್ತು ತರುಣ-ತರುಣಿಯರು ಈ ದೇವಾಲಯಕ್ಕೆ ಆಗಮಿಸಿ ಕಾಗೆಗಳಿಗೆ ಸಕ್ಕರೆ ಮಿಠಾಯಿ ನೀಡುತ್ತಾರೆ.

ಹೀಗೆ ಮಿಠಾಯಿ ನೀಡುವಾಗ: “ಸಿಹಿಯನ್ನು ತೆಗೆದುಕೊಂಡು, ನನಗೆ ಚೆಂದದ ಮದುಮಗನನ್ನು, ಮದುಮಗಳನ್ನು ನೀಡು’ ಎಂಬರ್ಥದ ಹಾಡನ್ನು ಹಾಡುತ್ತಾರೆ. ಅಚ್ಚರಿಯ ವಿಷಯವೆಂದರೆ, ಪ್ರತಿ ಮಾಘ ಮಾಸದ ಮೊದಲ ದಿನ ಎಂದೂ ಇಲ್ಲದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಗೆಗಳು ಇಲ್ಲಿ ಬಂದು ಸೇರುವುದು! ಸಿಹಿ ಮಿಠಾಯಿ ತಿನ್ನುತ್ತ ಕಾಗೆಗಳು ಸಂಭ್ರಮದ ಜಾತ್ರೆ ನಡೆಸುತ್ತವೆ.

ಪುಟ್ಟದಾಗಿದ್ದರೂ ಗಮನ ಸೆಳೆಯುವ ಇಲ್ಲಿನ ಮತ್ತೊಂದು ದೇವಾಲಯ, ಸದಾ ಸಿಂಧೂರದಿಂದ ಅಲಂಕೃತನಾಗಿರುವ ಹನುಮಂತನದು. ಇದರ ಹಿನ್ನೆಲೆ ಬಹಳ ಸ್ವಾರಸ್ಯವಾಗಿದೆ.

ಸೀತಾಶೋಧದಾರಭ್ಯ ರಾಮನ ಜೊತೆಯಲ್ಲೇ ಇರುತ್ತಿದ್ದ ಮಾರುತಿ, ರಾಮನಿಂದ ಅರೆಘಳಿಗೆ ಅಗಲಲೂ ಸಿದ್ಧನಿರಲಿಲ್ಲ. ವನವಾಸ ಮುಗಿಸಿಬಂದ ಶ್ರೀರಾಮನಿಗೆ ಪಟ್ಟಾಭಿಷೇಕವಾದ ನಂತರದ ಮೊದಲ ರಾತ್ರಿ ಶ್ರೀರಾಮ ಸೀತೆಯರು ತಮ್ಮ ಅರಮನೆ ಪ್ರವೇಶಿಸಿದರು. ಸೀತೆ ಸಿಂಧೂರವನ್ನು ಧರಿಸಿ ಸಾಲಂಕೃತಳಾಗಿ ನಿಂತಳು.

ಹನುಮನೂ ಅಲ್ಲಿಯೇ ನಿಂತಿದ್ದ. ರಾಮ ಹನುಮನಿಗೆ ಅರಮನೆಯಿಂದ ಹೋಗುವಂತೆ ಹೇಳಿದಾಗ, ತಾನೂ ಅಲ್ಲಿಯೇ ಅವರ ಜೊತೆ ಇರುವುದಾಗಿ ಹಟ ಹಿಡಿದ. ಕೊನೆಗೆ ರಾಮ, “ಸೀತೆಗೆ ನನ್ನ ಮೇಲೆ ಸಿಂಧೂರದ ಹಕ್ಕಿದೆ, ನಾನು ಅವಳಿಗೆ ಸಲ್ಲಬೇಕು” ಎಂದ. ಕೂಡಲೇ ಪೇಟೆಗೋಡಿದ ಹನುಮ, ಅಂಗಡಿಯ ಬಾಗಿಲು ಮುರಿದು, ಅಲ್ಲಿದ್ದ ಸಿಂಧೂರವನ್ನು ಮೈಗೆಲ್ಲ ಬಳೆದುಕೊಂಡುಬಂದ, ರಾಮನ ಮೇಲೆ ಸೀತೆಗಿಂತ ತನಗೇ ಸಿಂಧೂರದ ಹಕ್ಕು ಹೆಚ್ಚಿದೆಯೆಂದು ತೋರಿಸಲಿಕ್ಕೆ!

ಅಯೋಧ್ಯೆಯಲ್ಲಿ ಅಭಿವೃದ್ಧಿಯ ನೆವದಲ್ಲಿ ನೆಲಸಮವಾದ ಮಹತ್ವದ ದೇವಾಲಯಗಳು ಸಾಕಷ್ಟಿವೆ. ಅವುಗಳಲ್ಲಿ ಹನುಮಾನ್ ಗೃಹ, ಸುಮಿತ್ರಾ ಭವನ್, ಸೀತಾ ಕೂಪ್ ಮಂದಿರ್, ಲಕ್ಷ್ಮಣ ಚಬುತ್ರ ಮಂದಿರ್ ಮತ್ತು ಸಾಧ್ವಿ ಗೋಪಾಲ ಮಂದಿರಗಳು ಸೇರಿವೆ. ”ರಾವಣ ಸಂಹಾರಿ ಶ್ರೀ ಹರಿಯ ಮೂರ್ತಿ” ಎಂಬ ಉಲ್ಲೇಖ ಹೊತ್ತ ಕಲ್ಲಿನ ಪೀಠವೊಂದು ದೊರೆತಿದ್ದು, ಅಂಥವುದೊಂದು ಮಂದಿರವಿತ್ತೆಂಬುದನ್ನು ಸಾಬೀತು ಪಡಿಸುತ್ತದೆ.

ಗೋರಖ್ ಪುರ

ಗೋರಖ್‌ ಪುರ ಕ್ಷೇತ್ರವು ರಪ್ತಿ ಮತ್ತು ರೋಹಿಣೀ ನದಿಗಳ ಎಡದಂಡೆಯ ಮೇಲಿದೆ. ಬೌದ್ಧ ಸಾಹಿತ್ಯದಲ್ಲಿ ಈ ಸ್ಥಳವು ಕೋಲಿಯಾ ದೇಶದ ರಾಜಧಾನಿಯಾಗಿತ್ತೆಂದು ಹೇಳಲ್ಪಟ್ಟಿದೆ. ಗೋರಖ್ ಪುರ ಎನ್ನುವ ಹೆಸರು ಈ ಸ್ಥಳಕ್ಕೆ ಯೋಗಿ ಗೋರಖನಾಥರಿಂದ ಬಂದುದಾಗಿದೆ.

ಅವರು ಇಲ್ಲಿ ತಮ್ಮ ಜೀವಿತದ ಬಹುಪಾಲು ಭಾಗವನ್ನು ಈ ಪ್ರದೇಶದಲ್ಲಿ ಕಳೆದಿದ್ದರು. ಗೋರಖ್ ಪುರವು ಅಯೋಧ್ಯೆಯ ಗಡಿರಕ್ಷಣಾ ಪಡೆಯ ಸೈನಿಕಠಾಣ್ಯವಾಗಿತ್ತೆಂದು ಹೇಳಲಾಗುತ್ತದೆ. ರಾಮನ ಕಾಲದಲ್ಲಿ ಈ ಪಟ್ಟಣವು ‘ರಾಮಗ್ರಾಮ’ ಎಂದು ಕರೆಯಲ್ಪಡುತ್ತಿತ್ತು.

ರಾಮಸೀತೆಯರ ವಿವಾಹ ಮಿಥಿಲೆಯಲ್ಲಿ ನೆರವೇರಿತ್ತು. ಅವರು ಜನಕಪುರಿಯಿಂದ ಅಯೋಧ್ಯೆಗೆ ಬರುವಾಗ ಸುಮಂತಾದಿ ಸಚಿವರು ಗೋರಖ್‌ ಪುರದಲ್ಲಿ, ರಾಮನ ಕಾಲದ ಸೈನಿಕಠಾಣ್ಯವಾಗಿದ್ದ ಈ ಪ್ರದೇಶ, ಈಗ ಭಾರತೀಯ ಸೇನೆಯ ಶಿಬಿರವೂ ಆಗಿದೆ.

ನೇಪಾಳದಿಂದ – ಪೋಖರಾ, ಭೈರಹ್ವಾ ಮತ್ತು ನೌಟನ್ವಾ ಮಾರ್ಗವಾಗಿ ಭಾರತಕ್ಕೆ ಬರುವವರಿಗೆ ಎದುರಾಗುವ ಮೊದಲ ದೊಡ್ಡ ನಗರವೇ ಗೋರಖ್ ಪುರ. ಲುಂಬಿಣಿಗೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ಗೋರಖಪುರ ಪ್ರಮುಖ ತಂಗುದಾಣವಾಗಿದೆ. ಇಲ್ಲಿ ಸುಪ್ರಸಿದ್ಧ ಸೀತಾರಾಮ ದೇಗುಲವಿದೆ.

ರಾಮನಗರ

ಜನಕಪುರಿಯಿಂದ ಅಯೋಧ್ಯೆಗೆ ಸೇರುವ ಹಾದಿಯಲ್ಲಿ ರಾಮನಗರ ಕಟ್ಟಕಡೆಯ ನಿಲ್ದಾಣ. ರಾಮನಗರದಲ್ಲೊಂದು ಕೋಟೆಯಿರುವ ಕಾರಣ, ಈ ಪಟ್ಟಣವನ್ನು ರಾಮನಗರ ಕೋಟೆ ಎಂದೂ ಕರೆಯುತ್ತಾರೆ. ಈ ಕೋಟೆಯು ವನವಾಸ ಮುಗಿಸಿಬಂದು ಪಟ್ಟಾಭಿಷಿಕ್ತರಾದ ರಾಮ-ಸೀತೆಯರ ವಿಹಾರತಾಣವಾಗಿತ್ತು.

ಅಲ್ಲಿನ ಅರಮನೆಯನ್ನು ಹಿಂದಿನ ಕಾಶೀ ಮಹಾರಾಜರು ಜೀರ್ಣೋದ್ದಾರ ಮಾಡಿಸಿದ್ದು, ಈಗಲೂ ಅಸ್ತಿತ್ವದಲ್ಲಿದೆ. ರಾಮನು ತನ್ನ ಗಡಿಪ್ರದೇಶದ ಬುಡಕಟ್ಟು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ದರ್ಬಾರ್ ಹಾಲ್ ಕೂಡ ಇದೆ. ರಾಮನಗರದಲ್ಲೊಂದು ಮ್ಯೂಸಿಯಂ ಸಹ ಇದ್ದು, ರಾಮಾಯಣ ಕಾಲದ್ದೆಂದು ಹೇಳಲಾಗುವ ಶಸ್ತ್ರಾಸ್ತ್ರಗಳು, ಆಭರಣಗಳು ಇತ್ಯಾದಿಗಳ ಸಂಗ್ರಹ ಹೊಂದಿದೆ.

ಚಿತ್ರಕೂಟ

ಚಿತ್ರಕೂಟವು ಮಾರ್ಕುಂಡಿಯಲ್ಲಿ, ನಾರಯಣೀ ಮತ್ತು ಮಾರ್ವಿ ಕೂಡು ನದಿಯ ನಡುವಿನ ಬೆಟ್ಟದ ಮೇಲಿದೆ. ಇದು, ರಾಜಧಾನಿ ದೆಹಲಿಯಿಂದ 675 ಕಿ.ಮೀ ಮತ್ತು ಅಯೋಧ್ಯೆಯಿಂದ 33 ಕಿ.ಮೀ. ದೂರದಲ್ಲಿದೆ. ಇದು ಉತ್ತರಪ್ರದೇಶ ಮಧ್ಯಪ್ರದೇಶಗಳ ಗಡಿಭಾಗದಲ್ಲಿದ್ದು, ಮಧ್ಯಪ್ರದೇಶದ ಬಸ್ತಾರ್‌ ಜಿಲ್ಲೆಗೆ ಹೊಂದಿಕೊಂಡಂತಿದೆ.

ರಾಮ, ಸೀತೆ, ಲಕ್ಷ್ಮಣರು ವನವಾಸಕ್ಕೆಂದು ಅಯೋಧ್ಯೆಯಿಂದ ಹೊರಟವರು ವಾಲ್ಮೀಕಿ ಆಶ್ರಮವನ್ನು ತಲುಪಿ, ತಮ್ಮ ಮುಂದಿನ ಪ್ರಯಾಣಕ್ಕೆ ಅವರಿಂದ ಸಲಹೆ-ಸೂಚನೆಗಳನ್ನು ಪಡೆದಿದ್ದರು. ವಾಲ್ಮೀಕಿ ಮಹರ್ಷಿಗಳು ಅವರಿಗೆ ಚಿತ್ರಕೂಟ ಪರ್ವತದಲ್ಲಿ ನೆಲೆಸುವಂತೆ ನಿರ್ದೇಶಿಸಿದ್ದರು. ಅದರಂತೆ ಶ್ರೀರಾಮ ಲಕ್ಷ್ಮಣರು ಚಿತ್ರಕೂಟದಲ್ಲಿ ಕುಟೀರವನ್ನು ನಿರ್ಮಿಸಿಕೊಂಡು, ಸೀತೆಯೊಡನೆ ಅಲ್ಲಿ ನೆಲೆಸಿದರು.

ದಶರಥ ಮಹಾರಾಜನ ಆಗಲಿಕೆಯ ನಂತರ ಭರತ ಶತೃಘ್ನರು ರಾಮನನ್ನು ಮರಳಿ ಅಯೋಧ್ಯೆಗೆ ಕರೆತಂದು ಪಟ್ಟಾಭಿಷೇಕ ಮಾಡಿಸಬೇಕೆನ್ನುವ ಇಚ್ಛೆಯಿಂದ ಚಿತ್ರಕೂಟಕ್ಕೆ ಬಂದರು. ಆದರೆ ರಾಮ ಅದಕ್ಕೊಪ್ಪಲಿಲ್ಲ. ಲಕ್ಷ್ಮಣನೊಡಗೂಡಿ, ತಂದೆಯ ಅಂತ್ಯಕ್ರಿಯೆಯನ್ನು ಚಿತ್ರಕೂಟದಲ್ಲಿಯೇ ನಡೆಸಿದ. ಅಸ್ಥಿಗಳನ್ನು ಗಂಗಾ ಮತ್ತು ಮಂದಾಕಿನೀ ನದಿಗಳಲ್ಲಿ ವಿಸರ್ಜಿಸಿದ.

ಚಿತ್ರಕೂಟದಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟ ಕೆಲವು ಸ್ಥಳಗಳು ಮತ್ತು ದೇವಾಲಯಗಳಿವೆ.

ಪಿಪ್ರಹ್ವ

ಪಿಪ್ರಹ್ವ, ನೇಪಾಳದಲ್ಲಿ ಲುಂಬಿನಿಯ ದಕ್ಷಿಣ ಭಾಗದಲ್ಲಿ ಇದೆಯಾದರೂ, ವಾಸ್ತವವಾಗಿ ಉತ್ತರಪ್ರದೇಶಕ್ಕೆ ಸೇರಿದುದಾಗಿದೆ. ಶ್ರೀರಾಮನು ಇಲ್ಲಿ ಕೆಲಕಾಲ ತಂಗಿದ್ದನೆಂದು ಹೇಳಲಾಗುತ್ತದೆ. ಉತ್ಖನನ ನಡೆಸಿದಾಗ ಈ ಪ್ರದೇಶವು ಹಿಂದೆ ‘ಕಪಿಲವಸ್ತುʼ, ಎಂದು ಕರೆಯಲ್ಪಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಬುದ್ಧನು ತನ್ನ ಬಾಲ್ಯವನ್ನು ಕಳೆದದ್ದು, ಜೀವನದ ಇಂದ್ರಿಯ ಸುಖಗಳು ತ್ಯಜಿಸಲು ನಿರ್ಧರಿಸಿದ್ದು ಈ ಸ್ಥಳದಲ್ಲಿಯೇ.

ಕೌಶಾಂಬಿ

ಕೌಶಾಂಬಿಯ ಪ್ರದೇಶ ಶ್ರೀರಾಮನಿಂದ, ಬುದ್ಧನಿಂದ, ಪಾಂಡವರಿಂದ ಪುನೀತವಾದ ಸ್ಥಳ. ಕೌಶಾಂಬಿಯ ಜನಪದ ನೃತ್ಯವೊಂದು ಶ್ರೀರಾಮನು ಇಲ್ಲಿಗೆ ಭೇಟಿ ನೀಡಿದ ಪರಿಯನ್ನು ಬಿಂಬಿಸುತ್ತದೆ. ಇಲ್ಲಿನ ಅವಶೇಷಗಳು ಶ್ರೀರಾಮನ ಯಾತ್ರೆಯನ್ನು ಪುಷ್ಟೀಕರಿಸುತ್ತವೆ.

ಶೃಂಗವೇರುಪುರ

ಇದೊಂದು ಮಹತ್ತ್ವದ ಸ್ಥಳ. ಶ್ರೀರಾಮ, ಬುಡಕಟ್ಟು ಜನಾಂಗದ ಮುಖಂಡ ಗುಹನನ್ನು ಭೇಟಿಯಾಗಿದ್ದು ಇಲ್ಲಿಯೇ. ರಾಮನಿಗೆ ಗಂಗೆಯನ್ನು ದಾಟಲು ಗುಹ ದೋಣಿಯ ವ್ಯವಸ್ಥೆ ಕಲ್ಪಿಸಿಕೊಟ್ಟ. ಈ ಪ್ರದೇಶ ಅಲಹಾಬಾದಿನಿಂದ 35ಕಿ.ಮೀ ದೂರದಲ್ಲಿ ಗಂಗಾ ತೀರದಲ್ಲಿದೆ. ಶೃಂಗವೇರುಪುರದಲ್ಲಿ ಉತ್ಖನನ ನಡೆಸಿದಾಗ ರಾಮಾಯಣ ಕಾಲಕ್ಕೆ ಸಂಬಂಧಿಸಿದ ಹಲವು ವಸ್ತುಗಳು ದೊರಕಿವೆ.

ಸೀತಾಮರ್ಹಿ

ಸೀತಾಮರ್ಹಿ, ಅಲಹಾಬಾದ್‌ ಮತ್ತು ವಾರಣಾಸಿಯ ನಡುವೆ 60 ಕಿ.ಮೀ. ಅಂತರದಲ್ಲಿದೆ. ಜಿ.ಟಿ. ರಸ್ತೆಗೆ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಹೊಂದಿರುವ ಗೋಪಿಗಂಜ್‌ಗೆ 13 ಕಿ.ಮೀ. ದೂರದಲ್ಲಿರುವ ಜಂಗೀಗಂಜ್ ಬಳಿಯಲ್ಲಿ ಇದು ಬರುತ್ತದೆ.

ಅಲಹಾಬಾದಿನಿಂದ ಬರುವ ಮಾರ್ಗದಲ್ಲಿ ಸಿಗುವ ಭಿತಿ ಎನ್ನುವ ಪ್ರದೇಶ ಜಂಗೀಗಂಜ್‌ಗೂ ಮೊದಲೇ ಸಿಗುತ್ತದೆ. ಇಲ್ಲಿಂದ ಒಳಗೆ, ರಸ್ತೆ ಮಾರ್ಗದಲ್ಲಿ 7 ಕಿ.ಮೀ. ಅಂತರದಲ್ಲಿ ಸೀತಾಮರ್ಹಿ ಎದುರಾಗುತ್ತದೆ. ಈ ಎರಡೂ ಸ್ಥಳಗಳಿಂದಲೂ ಇದು ಕೇವಲ 20 ನಿಮಿಷದ ದಾರಿ.

ಸೀತಾಮರ್ಹಿ, ಮಹರ್ಷಿ ವಾಲ್ಮೀಕಿಗಳು ನೆಲೆಸಿದ್ದ ಪುಣ್ಯಭೂಮಿ. ಇದವರ ತಪೋಭೂಮಿಯೂ ಆಗಿತ್ತು. ಶ್ರೀರಾಮನಿಂದ ಪರಿತ್ಯಕ್ತಳಾದ ಸೀತಾದೇವಿ, ವಾಲ್ಮೀಕಿಯ ಆಶ್ರಯ ಪಡೆದಿದ್ದು ಸೀತಾಮರ್ಹಿಯಲ್ಲಿ. ಲವ – ಕುಶರು ಜನಿಸಿದ್ದೂ ಇಲ್ಲಿಯೇ. ಸೀತಾಮರ್ಹಿಯಲ್ಲಿ ಸೀತಾದೇವಿಯನ್ನು ಆರಾಧಿಸುವ ದೇವಾಲಯಗಳಿವೆ. ಇಲ್ಲಿ ಆಕೆಯನ್ನು ‘ಭೂಮಿಯ ಮಗಳು’ ಎಂದು ಪೂಜಿಸುತ್ತಾರೆ.

ಲವಕುಶರು ಅಶ್ವಮೇಧ ಕುದುರೆಯನ್ನು ಅಡ್ಡಗಟ್ಟಿದ್ದು, ಶ್ರೀರಾಮನನ್ನು ಸೋಲಿಸಿದ್ದು ಇಲ್ಲಿಯೇ. ರಾಮನೊಂದಿಗೆ ಮತ್ತೆ ಅಯೋಧ್ಯೆಗೆ ಮರಳಲಿಚ್ಛಿಸದ  ಸೀತೆ, ಭೂತಾಯಿಯನ್ನು ಸೇರಿದ್ದೂ ಇಲ್ಲಿಯೇ. ಹೀಗಾಗಿ ಈ ಪ್ರದೇಶಕ್ಕೆ ಸೀತಾಮರ್ಹಿ ಎಂದು ಹೆಸರು.

ಸೀತೆ ಭೂಮಿಯನ್ನು ಸೇರುವಾಗ ತಡೆಯಲೆತ್ನಿಸಿದ ರಾಮ ಆಕೆಯ ಕೂದಲನ್ನು ಹಿಡಿದುಕೊಂಡ. ಆದರೆ ಅವನ ಕೈಯಲ್ಲಿ ಕೂದಲು ಮಾತ್ರ ಉಳಿದು, ಸೀತೆ, ತಾಯಿ ಮಡಿಲು ಸೇರಿದಳು. ಹೀಗೆ ಆಕೆ ಭೂಮಿ ಹೊಕ್ಕ ಪ್ರದೇಶದಲ್ಲಿ ಕಲ್ಲುಗಳು ಜರಿದಿರುವುದನ್ನು ಈಗಲೂ ನೋಡಬಹುದು.

ಈ ಸ್ಥಳದಲ್ಲಿ ಬೆಳೆಯುವ ಹುಲ್ಲು ಜಂಡುಗಟ್ಟಿ ಬೆಳೆಯದೆ, ಕೂದಲಿನಂತೆ ನಿಡಿದಾಗಿ ಬೆಳೆಯುತ್ತದೆ. ಇದನ್ನು ಸೀತಾದೇವಿಯ ಕೂದಲು ಎನ್ನುತ್ತಾರೆ. ಅಚ್ಚರಿಯ ವಿಷಯವೆಂದರೆ, ಪ್ರಾಣಿಗಳು ಈ ಹುಲ್ಲನ್ನು ತಿಂದ ದಾಖಲೆ ಈವರೆಗೂ ಇಲ್ಲ!

ಸೀತಾಮಾತೆಯ ಸಂಸರ್ಗದಿಂದ ಪುನೀತವಾಗಿರುವ ಸೀತಾಮರ್ಹಿ, ಧಾರ್ಮಿಕ ವ್ಯಕ್ತಿಗಳಿಗೆ ಮುದ ನೀಡುವ ತಾಣ. ಇಲ್ಲಿ ದೊರೆಯುವ ಅಲೌಕಿಕ ಅನುಭವ ಪಡೆಯಲೆಂದೇ ಅನೇಕ ಯಾತ್ರಾರ್ಥಿಗಳು ನಿರಂತರ ಭೇಟಿ ನೀಡುತ್ತಾರೆ. ಅವರಿಗಾಗಿ ಎಲ್ಲ ಸವಲತ್ತುಗಳನ್ನೂ ವ್ಯವಸ್ಥೆ ಮಾಡಲಾಗಿದೆ.

ಸೀತಾ ಮಾತೆಯ ದೇವಾಲಯ ಸೀತೆ ಭೂಮಿಯನ್ನು ಪ್ರವೇಶಿಸುತ್ತಿರುವ ಶಿಲ್ಪ ಇವು ಸೀತಾಮರ್ಹಿಯ ಪ್ರಮುಖ ಆಕರ್ಷಣೆಗಳು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi