ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

ಕೃಷ್ಣಪ್ರಜ್ಞಾಂದೋಲನವು ಇಂದು ಜಗದ್ವ್ಯಾಪಿಯಾಗಿ ಬೆಳೆದು ಲಕ್ಷ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವುದರ ಹಿಂದೆ ಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ಕೊಡುಗೆಯಿದೆ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು.

ಶ್ರೀಮದ್‌ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ತಮ್ಮ ಗುರುಗಳ ಆದೇಶದ ಮೇರೆಗೆ ಕೃಷ್ಣಪ್ರಜ್ಞಾ ಚಳುವಳಿಯ ವ್ಯಾಪ್ತಿಯನ್ನು ವಿದೇಶಗಳಿಗೂ ಕೊಂಡೊಯ್ದರು. ಠಾಕುರರ ಕೃಪಾಶೀರ್ವಾದದಿಂದ ಯಶಸ್ವಿಯೂ ಆದರು.

ಶೀಲ ಭಕ್ತಿಸಿದ್ಧಾಂತ ಠಾಕುರರ ಹುಟ್ಟು ಹೆಸರು ವಿಮಲ ಪ್ರಸಾದ. ವಿಮಲ ಪ್ರಸಾದನ ತಂದೆ ಭಕ್ತಿವಿನೋದ ಠಾಕುರರು ಪುರಿಜಗನ್ನಾಥ ದೇವಾಲಯದ ನಿರೀಕ್ಷಕರಾಗಿದ್ದರು. ತಮ್ಮನ್ನು ಸಂಪೂರ್ಣವಾಗಿ ವೈಷ್ಣವ ಪಂಥ ಪ್ರಚಾರಕ್ಕೆ ಅರ್ಪಿಸಿಕೊಂಡಿದ್ದ ಭಕ್ತಿವಿನೋದ ಠಾಕುರರು, ಸದಾ ತಮ್ಮ ಧ್ಯೇಯೋದ್ದೇಶ ಈಡೇರಿಕೆಗಾಗಿ ಒಬ್ಬ ಸತ್ಪುತ್ರನನ್ನು ಕರುಣಿಸುವಂತೆ ಪ್ರಾರ್ಥಿಸುತ್ತಿದ್ದರು. ಅದರ ಫಲವಾಗಿ, ಪರಮಪವಿತ್ರ ಕ್ಷೇತ್ರ ಪುರಿಯಲ್ಲಿ 1874ರ ಫೆಬ್ರವರಿ 6ರಂದು ವಿಮಲ ಪ್ರಸಾದನ ಜನನವಾಯಿತು.

ವಿಮಲ ಪ್ರಸಾದ ಬಹಳ ಬುದ್ಧಿವಂತ ಬಾಲಕ. ತನ್ನ ಏಳನೆಯ ವಯಸ್ಸಿನಲ್ಲಿಯೇ ಭಗವದ್ಗೀತೆಯ ನೂರಾರು ಶ್ಲೋಕಗಳನ್ನು ಆಸ್ಖಲಿತವಾಗಿ ಆತ ಹೇಳಬಲ್ಲವನಾಗಿದ್ದ. ತನ್ನ ಇಪ್ಪತ್ತಾರನೆ ವಯಸ್ಸಿನ ವೇಳೆಗೆ ಆತ ಗಣಿತ, ಖಗೋಳಶಾಸ್ತ್ರ ವೇದ-ವೇದಾಂತಗಳಲ್ಲಿ ಅಪರಿಮಿತ ಪರಿಣತಿ ಸಾಧಿಸಿದ್ದ. ಮನೆಯಲ್ಲಿ ಭಕ್ತಿಯ ವಾತಾವರಣವಿದ್ದುದರಿಂದ ಮತ್ತು ಒಬ್ಬಮಹಾ ವೈಷ್ಣವನ ಪುತ್ರನಾಗಿದ್ದುದರಿಂದ ಆತನೂ ಒಬ್ಬ ಭಕ್ತನಾಗಿದ್ದು, ಗುರುಹಿರಿಯರಲ್ಲಿ ಗೌರವ ಭಾವವನ್ನಿರಿಸಿಕೊಂಡಿದ್ದ.

ಇಂಥ ತರುಣನಿಗೆ ಒಮ್ಮೆ ಅವನ ತಂದೆ ಅನಕ್ಷರಸ್ಥರೂ, ಭಿಕ್ಷಾನ್ನದಿಂದ ಜೀವನ ನಡೆಸುತ್ತಿದ್ದವರೂ ಆಗಿದ್ದ ಸಂತ ಗೌಡಕಿಶೋರ ದಾಸ ಬಾಬಾಜಿಯವರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದುಕೋ ಎಂದು ಸಲಹೆ ನೀಡಿದರು. ಗೌರಕಿಶೋರ ಬಾಬಾಜಿ ಮಹಾನ್‌ ಸಾಧಕರು. ತಮ್ಮನ್ನು ಆರಾಧಿಸಲು ಬರುವ ಜನಜಂಗುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಸ್ಮಶಾನದ ಬಳಿಯ ಸ್ಥಳವೊಂದಕ್ಕೆ ಹೋಗಿ, ಅಲ್ಲಿಯೇ ನೆಲೆಸಿದ್ದರು.

ಬುದ್ಧಿವಂತನೂ, ಪ್ರಾಮಾಣಿಕನೂ ಆಗಿದ್ದ ವಿಮಲ ಪ್ರಸಾದ ತನ್ನ ಕೋರಿಕೆಯನ್ನು ಅವರ ಮುಂದಿಟ್ಟ. ಆದರೆ ಬಾಬಾಜಿ ಅದನ್ನು ನಿರಾಕರಿಸಿದರು. ಅವರ ಒಲವು ಗಳಿಸುವಲ್ಲಿ ತನ್ನ ಪುನರಾವರ್ತಿತ ಸೋಲಿನಿಂದಾಗಿ ತಂದೆಯಿಂದ ಆಕ್ಷೇಪಿಸಲ್ಪಟ್ಟ ಆತ ಬಾಬಾಜಿ ಬಳಿ ಬಂದು, “ನಿಮ್ಮ ಕರುಣೆ ದೊರೆಯದೆ ಹೋದರೆ ನಾನು ಜೀವಿತನಾಗಿ ಇರುವುದಿಲ್ಲ’ ಎಂದು ಆರ್ದ್ರತೆಯಿಂದ ಬೇಡಿಕೊಂಡ.

ತರುಣನ ಉತ್ಕಟತೆಗೆ ಸೋತ ಬಾಬಾಜಿ ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ, “ಎಲ್ಲ ಕಾರ್ಯಗಳ ಹೊರತಾಗಿ, ಪರಮಸತ್ಯವನ್ನು ಬೋಧಿಸುವಲ್ಲಿ ತೊಡಗಿಕೊಂಡರು” ಎಂದು ಸಲಹೆ ನೀಡಿದರು.

ಮುಂದೆ ‘ಭಕ್ತಿ ಸಿದ್ಧಾಂತ ಸರಸ್ವತಿʼ ಎಂದು ವಿಮಲ ಪ್ರಸಾದ ಖ್ಯಾತನಾದ. ಭಕ್ತಿ ಸಿದ್ಧಾಂತರು ತಂದೆ ಪರಂಧಾಮ ಸೇರಿದ ನಂತರ ಅವರ ಮುದ್ರಣಾಲಯದ ಜವಾಬ್ದಾರಿ ತಾವು ವಹಿಸಿಕೊಂಡರು. ‘ಸಜ್ಜನ ತೋಷಣಿ’ ಪತ್ರಿಕೆಯನ್ನು ಮುನ್ನಡೆಸಿದರು. 1918ರಲ್ಲಿ ಸಂನ್ಯಾಸವನ್ನು ಸ್ವೀಕರಿಸಿದ ನಂತರವೂ ಪುಸ್ತಕಗಳ ಮೂಲಕ ಭಕ್ತಿಯ ಜ್ಞಾನ ಪ್ರಸಾರ ಮಾಡುವ ಕಾರ್ಯವನ್ನು ಮುಂದುವರೆಸಿದರು.

ಆಧುನಿಕ ಯುಗದ ಅವಶ್ಯಕತೆಗಳಿಗೆ ತಕ್ಕಂತೆ ಸಂನ್ಯಾಸೀ ಶಿಷ್ಯರ ಆಚರಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಖ್ಯಾತಿ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರದು.

ಗೌಡೀಯ ವೈಷ್ಣವ ತತ್ತ್ವದ ಪುನರುತ್ಥಾನಕ್ಕೆ ಕಾರಣರಾದ ಠಾಕುರರು ಅದಕ್ಕೆ ಭಾರತದ ಆಧ್ಯಾತ್ಮ ಪರಂಪರೆಯ ಪ್ರಮುಖ ಶಕ್ತಿಯ ಸ್ಥಾನವನ್ನು ಮರಳಿ ಗಳಿಸಿಕೊಟ್ಟರು. ಅವರು 1ನೇ ಜನವರಿ, 1937 (ನಾರಾಯಣ ಮಾಸ, ಕೃಷ್ಣಪಕ್ಷದ ಚತುರ್ಥಿ) ರಂದು ಭಗವದ್ಧಾಮಕ್ಕೆ ತೆರಳಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi