ಶ್ರೀ ವ್ಯಾಸತೀರ್ಥರು

ಹರಿದಾಸ ಪರಂಪರೆ

ಶ್ರೀ ಜಯತೀರ್ಥರ ನಂತರ ಮಧ್ವ ಸಿದ್ಧಾಂತದ ಅತ್ಯಂತ ಶ್ರೇಷ್ಠರೆಂದು ಭಾವಿಸಲ್ಪಟ್ಟಿರುವವರು ಶ್ರೀ ವ್ಯಾಸತೀರ್ಥರೇ ಆಗಿದ್ದಾರೆ. ಅವರು ಶ್ರೀಮದ್ ಆನಂದ ತೀರ್ಥ ಮತ್ತು ಶ್ರೀ ಜಯತೀರ್ಥರ ಕೃತಿಗಳ ವಿವರವಾದ ವ್ಯಾಖ್ಯೆಯನ್ನು ಬರೆದಿದ್ದಾರೆ, ಹಾಗೂ ಮಧ್ವ ಸಿದ್ಧಾಂತವನ್ನು ದೃಢ ತಾರ್ಕಿಕ ನೆಲೆಗಟ್ಟಿನಲ್ಲಿ ಮಂಡಿಸಿದ್ದಾರೆ.

ಅವರ ಕೃತಿಗಳನ್ನು ಅತ್ಯುನ್ನತವಾದವೆಂದು ಪರಿಗಣಿಸಲಾಗಿದೆ. ತಮ್ಮ ಸ್ಪಷ್ಟ, ನಿಖರ ಮತ್ತು ಪ್ರಖರ ವಿಚಾರಧಾರೆಗಳಿಂದಾಗಿ ಶ್ರೀ ವ್ಯಾಸತೀರ್ಥರು ವಿಜಯನಗರ ಸಾಮ್ರಾಜ್ಯದ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದರು. ವಿಶಿಷ್ಟವಾಗಿ ಅವರ ಸಂರಕ್ಷೆಯಲ್ಲಿ ಅದು ಖ್ಯಾತಿ ಸಮೃದ್ಧಿಯ ಉತ್ತಂಗಕ್ಕೇರಿ ತನ್ನ ಮಹಾನ್ ಆಳ್ವಿಕೆಯನ್ನು ತಲಪಿತ್ತು.

ಇದಕ್ಕೂ ಮುಖ್ಯವಾಗಿ, ಹರಿದಾಸ ಸಂಪ್ರದಾಯವು ಮೊಳಕೆಯೊಡೆದು ಎಲ್ಲೆಡೆ ಹರಡಲು ಒ೦ದು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಶ್ರೀ ವ್ಯಾಸತೀರ್ಥರೇ ಕಾರಣರೆಂದು ಹೇಳಬಹುದು. ಅವರು ಕೆಳಜಾತಿಯವರ ಕುರಿತು ಎಲ್ಲಾ ಪೂರ್ವಾಗ್ರಹ ಅಸಮ್ಮತಿಗಳನ್ನು ತಿರಸ್ಕರಿಸಿದರು. ಅವರು ಕೆಳಜಾತಿಯ ಕನಕದಾಸನನ್ನು ಇತರ ಶಿಷ್ಯರ ಸಮಾನಕ್ಕೆ ಶಿಷ್ಯನೆಂದು ಸ್ವೀಕರಿಸಿ, ಕನಕದಾಸರು ಅವರೆಲ್ಲರಿಗಿಂತ ಮಹಾಭಕ್ತನೆಂದು ತೋರಿಸುವ ನಿದರ್ಶನವನ್ನು ರೂಪಿಸಿದರು ಕೂಡ.

ಶ್ರೀ ವ್ಯಾಸತೀರ್ಥರು ಇಂದಿನ ಕರ್ನಾಟಕದ ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಸುಮಾರು 1460ರಲ್ಲಿ ಜನಿಸಿದರು.  ಕಾವ್ಯ, ನಾಟಕ, ಅಲಂಕಾರ ಮತ್ತು ವ್ಯಾಕರಣದಂತಹ ವಿಷಯಗಳ ಅಧ್ಯಯನದಲ್ಲಿ ಪಾಂಡಿತ್ಯವನ್ನು ಗಳಿಸಿದ ಯುವಕ ಯತಿರಾಜ (ಮುಂದಿನ ಶ್ರೀವ್ಯಾಸತೀರ್ಥರು) ನಿಗೆ ಬ್ರಾಹ್ಮಣ್ಯತೀರ್ಥರ ಬಳಿ ಕರೆದೊಯ್ಯಲಾಯಿತು.

ಯತಿರಾಜನ ಕುಶಾಗ್ರ ಬುದ್ಧಿ, ಕಲಿಕೆಗಾಗಿ ತೀವ್ರಾಸಕ್ತಿಯನ್ನು ನೋಡಿ ಮೆಚ್ಚಿದ ಬ್ರಾಹ್ಮಣ್ಯತೀರ್ಥರು ಅವನು ಸಂನ್ಯಾಸ ಪಂಥವನ್ನು ಸೇರಬೇಕೆಂದು ಸಂಕಲ್ಪ ಮಾಡಿದರು. ತನ್ನ ಗುರುಗಳನ್ನು ಗೌರವಿಸುತ್ತಿದ್ದ ಯತಿರಾಜನಿಗೆ ಇಂತಹ ದೀಕ್ಷೆಯ ಬಗ್ಗೆ ಶಂಕೆಗಳಿದ್ದರೂ ಪ್ರಭು ವಿಷ್ಣುವೇ ದರ್ಶನವಾಗಿ ತನ್ನ ವಿಧಿಯನ್ನು ಬದಲಾಯಿಸಲು ಪ್ರಯತ್ನ ಮಾಡಬಾರದೆಂದು ಆದೇಶಿಸಿದಾಗ ಕೊನೆಗೆ ಅವರು ಸಂನ್ಯಾಸವನ್ನು ಸ್ವೀಕರಿಸಿದರು.

ಯತಿರಾಜನು ಶ್ರೀ ವ್ಯಾಸತೀರ್ಥರಾಗಿ ದೀಕ್ಷೆ ಪಡೆದ ಅನಂತರ ಶ್ರೀ ಬ್ರಾಹ್ಮಣ್ಯತೀರ್ಥರು ಅಂತರ್ಧಾನರಾದರು. ಶ್ರೀ ವ್ಯಾಸತೀರ್ಥರು ಕಂಚಿಗೆ ಹೊರಟರು. ಅಲ್ಲಿ ಪೀಠವನ್ನು ಸೇರಿ, ಆರು ತತ್ತ್ವ ಶಾಸ್ತ್ರಗಳನ್ನು ಕಲಿಯುವಲ್ಲಿ ಹಲವಾರು ವರ್ಷಗಳೇ ಕಳೆದರು. ಅದ್ವೈತ ವಿಶಿಷ್ಟಾದ್ವೈತ ಮತ್ತು ತತ್ತ್ವವಾದದೊಂದಿಗೆ ನವ್ಯ-ನ್ಯಾಯಗಳಂತಹ ವಿಷಯಗಳಲ್ಲಿ ಪಾಂಡಿತ್ಯವನ್ನು ಅವರು ಗಳಿಸಿದರು.

ಕಂಚಿಯ ಅನಂತರ ಅವರು ಶ್ರೀಪಾದರಾಜರ ಮಠ ಹಾಗೂ ಕಂಚಿಯಂತೆ ಜ್ಞಾನ ಕೇಂದ್ರವಾದ ಮುಳಬಾಗಿಲಿನಲ್ಲಿ ತಮ್ಮ ಓದನ್ನು ಮುಂದುವರಿಸಿದರು. ಅಲ್ಲಿ ಅವರು ವೇದಾಂತದ ಬಗ್ಗೆ ಐದರಿಂದ ಆರು ವರ್ಷಗಳ ಕಾಲ ಅಧ್ಯಯನ ಮಾಡಿದರು.

ಅದೇ ಸಮಯದಲ್ಲಿ ಚಂದ್ರಗಿರಿಯ ಚೆಲುವ ನರಸಿಂಹ ಆಸ್ಥಾನದಲ್ಲಿ ವಿವಿಧ ತತ್ತ್ವಜ್ಞರ ಎದುರು ಹಲವಾರು ವಾಗ್ವಾದಗಳಲ್ಲಿ ಗೆದ್ದು ಬಹಳ ಹೆಸರಾದರು. ಆ ಸಮಯದಲ್ಲಿ ತಿರುಪತಿಯ ಪ್ರಭು ಶ್ರೀನಿವಾಸನ ಪೂಜೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅದನ್ನು ಅವರು ಸತತ 12 ವರ್ಷಗಳ ಕಾಲ (1486-1498) ನೆರವೇರಿಸಿದರು.

ರಾಜ ಮನೆತನ ಮತ್ತು ಮಂತ್ರಿಗಳ ಒತ್ತಾಯದಿಂದ ಅವರು ವಿಜಯನಗರಕ್ಕೆ ಬಂದು ತಮ್ಮ ಜೀವಿತ ಕಾಲದ ಬಹಳಷ್ಟು ಭಾಗವನ್ನು ಅಲ್ಲಿಯೇ ಕಳೆದರು. ಕೃಷ್ಣದೇವರಾಯನು ಶ್ರೀ ವ್ಯಾಸತೀರ್ಥರನ್ನು ತುಂಬಾ ಗೌರವಿಸುತ್ತಿದ್ದನು ಮತ್ತು ಆದರಿಸುತ್ತಿದ್ದನು. ಶ್ರೀ ವ್ಯಾಸತೀರ್ಥರನ್ನು ಆತನು ತನ್ನ ಕುಲಗುರುವೆಂದು ಆದರಿಸಿದನೆಂದು ಐತಿಹಾಸಿಕ ಸಾಕ್ಷಿಗಳಿಂದ ಹಾಗೂ ಕೃಷ್ಣದೇವರಾಯನ ಬರಹಗಳಲ್ಲಿನ ಗೌರವಪೂರ್ಣ ಉಲ್ಲೇಖಗಳಿಂದ ಸಾಬೀತಾಗುತ್ತದೆ.

ಶ್ರೀ ವ್ಯಾಸತೀರ್ಥರ ಒಂಬತ್ತು ಪ್ರಮುಖ ಕೃತಿಗಳಲ್ಲಿ ನ್ಯಾಯಾಮೃತ, ತರ್ಕಾತಾಂಡವ ಮತ್ತು ಚಂದ್ರಿಕಾ ಮುಖ್ಯವಾದವು. ಈ ಮೂರು ಕೃತಿಗಳನ್ನು ವ್ಯಾಸತ್ರಯ ಎಂದೂ ಒಟ್ಟಾಗಿ ಕರೆಯಲಾಗುತ್ತದೆ. ತಮ್ಮ ಮೇರು ಕೃತಿ ನ್ಯಾಯಾಮೃತದಲ್ಲಿ ಅವರು ತತ್ತ್ವವಾದದ ಶಾಸ್ತ್ರವನ್ನು ಸಮರ್ಥಿಸಿಕೊಳ್ಳುತ್ತಾರೆ.

ಅವರು ಕನ್ನಡದಲ್ಲಿ ಸುಂದರವಾದ ದೇವರನಾಮಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಹರಿದಾಸ ಸಾಹಿತ್ಯದ ಸಂಪ್ರದಾಯದ ಎರಡು ಅಮೂಲ್ಯ ರತ್ನಗಳಾದ ಪುರಂದರದಾಸರು ಮತ್ತು ಕನಕದಾಸರುಗಳನ್ನು ಕೊಡಮಾಡಿದ್ದಾರೆ. ಪುರಂದರದಾಸರು ಆಧುನಿಕ ಕರ್ನಾಟಕ ಸಂಗೀತದ ಸಂಸ್ಥಾಪಕರು ಹಾಗೂ ಪ್ರಾಯಃ ಇತಿಹಾಸದಲ್ಲೇ ಮಹಾನ್ ಗಾಯಕ ಸಂತರಾಗಿದ್ದರು.

ಶ್ರೀ ವ್ಯಾಸತೀರ್ಥರು 1539ರ ಮಾರ್ಚ್ 8ರಂದು ತಮ್ಮ ದೇಹತ್ಯಾಗ ಮಾಡಿದರು. ಹಂಪಿಯ ತೀರಾ ಸಮೀಪದ ಆನೇಗುಂದಿಯ ಹತ್ತಿರದ ತುಂಗಭದ್ರಾ ನದಿಯಲ್ಲಿನ ಒಂದು ದ್ವೀಪದಲ್ಲಿ ಅವರ ವೃಂದಾವನವಿದೆ. ಇಲ್ಲಿ ಇತರ ಎಂಟು ಪ್ರಮುಖ ಮಾಧ್ವ ಸಂನ್ಯಾಸಿಗಳೊಂದಿಗೆ ಅವರು ನಿರಂತರವಾಗಿ ಧ್ಯಾನ ಮಾಡುತ್ತಿದ್ದಾರೆ ಮತ್ತು ಭಕ್ತರನ್ನು ನೈಜ ಜ್ಞಾನಕ್ಕಾಗಿ ಆಶೀರ್ವದಿಸುತ್ತಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi