ಶ್ರೀ ಚೈತನ್ಯ ಮಹಾಪ್ರಭುಗಳು ಉಂಡು ಉಳಿದದ್ದನ್ನು ತಾನು ತಿನ್ನಬೇಕೆಂದು ನಾಲ್ಕು ವರ್ಷದ ಬಾಲಕಿ ಹಟ ಹಿಡಿದಿದ್ದಳು. ಆಕೆಯ ಚಿಕ್ಕಪ್ಪ ಶ್ರೀವಾಸ ಠಾಕುರರು ಆಕೆಯನ್ನು ಸಮಾಧಾನ ಪಡಿಸಿದರೂ ಫಲ ನೀಡಲಿಲ್ಲ.

ಕೊನೆಗೆ ಶ್ರೀಚೈತನ್ಯ ಮಹಾಪ್ರಭುಗಳು ವಿಶೇಷ ಕರುಣೆ ತೋರಿ ತಮ್ಮ ಪವಿತ್ರ ತುಟಿಗಳು ಸೋಂಕಿ ಪ್ರಸಾದವಾಗಿ ತಟ್ಟೆಯಲ್ಲಿ ಉಳಿದ ಆಹಾರವನ್ನು ಅವಳಿಗೆ ತಿನ್ನಲು ಕೊಟ್ಟರು. ಇದು ಆಕೆಯ ರೂಢಿಯಾಯಿತು. ಆಕೆಯ ತೀವ್ರತೆಯನ್ನು ಮೆಚ್ಚಿದ ಮಹಾಪ್ರಭುಗಳು ಏನೂ ಅರಿಯದ ನಾಲ್ಕು ವರ್ಷದ ಮುಗ್ಧ ಹುಡುಗಿಯ ಮೇಲೆ ಕೃಪೆ ಬೀರಿದರು.
ಈ ಹುಡುಗಿಯೇ ನಾರಾಯಣದೇವಿ. ಶ್ರೀಲ ವೃಂದಾವನದಾಸ ಠಾಕುರರ ತಾಯಿ. ವೃಂದಾವನದಾಸ ಠಾಕುರರು ಶ್ರೀಲ ವೇದವ್ಯಾಸರ ಅವತಾರ. ಮಹಾಪ್ರಭುಗಳ ಉಚ್ಛಿಷ್ಟವನ್ನು ಸೇವಿಸಿದ್ದರಿಂದಲೇ ಇಂಥಾ ಪುತ್ರರತ್ನವನ್ನು ಪಡೆಯುವ ಭಾಗ್ಯ ಅವಳದಾಯಿತು. ವೃಂದಾವನದಾಸ ಠಾಕುರರಿಗೆ ಆಕೆ ನವದ್ವೀಪದ ಒಂದು ಗ್ರಾಮವಾದ ಮಾಮಗಾಚಿಯಲ್ಲಿ ಜನ್ಮ ನೀಡಿದಳು.
ಶ್ರೀಲ ವೃಂದಾವನದಾಸ ಠಾಕುರರು ಜನ್ಮ ತಳೆದಾಗ ಶ್ರೀ ಚೈತನ್ಯ ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಿ ನಾಲ್ಕು ವರ್ಷಗಳಾಗಿತ್ತು. ಮಹಾಪ್ರಭುಗಳು ಭೂಮಿಯಿಂದ ಅಂತರ್ಧಾನರಾಗಿ ಅಪ್ರಕೃತಿ ಲೀಲೆ ಆರಂಭಿಸಿದಾಗ ವೃಂದಾವನ ದಾಸರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸು.
ವೃಂದಾವನದಾಸ ಠಾಕುರರು ದೀಕ್ಷೆ ಸ್ವೀಕರಿಸಿದ್ದು ನಿತ್ಯಾನಂದ ಪ್ರಭುಗಳಿಂದ, ಅವರು ನಿತ್ಯಾನಂದ ಪ್ರಭುಗಳ ದಿವ್ಯ ಸೇವಕರಾಗಿ ಭಕ್ತಿ ಸಲ್ಲಿಸಿದರು. ಮುಂದೆ ನಿತ್ಯಾನಂದ ಪ್ರಭುಗಳ ಪತ್ನಿ ಜಾಹ್ನವಾದೇವಿ ಖೇತುರಿ ಗ್ರಾಮದ ಉತ್ಸವಕ್ಕೆ ತರಳಿದಾಗ ಅವರೂ ಜೊತೆಯಲ್ಲಿದ್ದರು.
ಶ್ರೀಲ ವೃಂದಾವನದಾಸ ಠಾಕುರರು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಯನ್ನು “ಚೈತನ್ಯ ಮಂಗಳ” ಎಂಬ ಕೃತಿಯಲ್ಲಿ ನಿರೂಪಿಸಿದರು. ಈ ಕೃತಿ “ಚೈತನ್ಯ ಭಾಗವತ” ಎಂದೂ ಖ್ಯಾತವಾಗಿದೆ. ಈ ಕೃತಿ ಸಂಪೂರ್ಣ ಬಂಗಾಳಿ ಭಾಷೆಯಲ್ಲಿದ್ದು ಮಹಾಪ್ರಭುಗಳ ಜೀವನ ಉಪದೇಶಗಳ ಸಾಕಷ್ಟು ವಿವರಗಳನ್ನೊಳಗೊಂಡಿದೆ.
ವೃಂದಾವನದಾಸ ಠಾಕುರರು “ಚೈತನ್ಯ ಮಂಗಳ”ವನ್ನು ರಚಿಸಿದ ಕಾಲದಲೆಲ ಮತ್ತೊಬ್ಬ ಭಕ್ತ ಲೋಚನದಾಸರೂ ಅದೇ ಹೆಸರಿನ ಕೃತಿಯನ್ನು ರಚಿಸಿದ್ದರು.
ಆದ್ದರಿಂದ ಭಕ್ತರು ವೃಂದಾವನಕ್ಕೆ ತೆರಳಿ, ಠಾಕುರರ ಮನ ಒಲಿಸಿ ಅದಕ್ಕೆ “ಚೈತನ್ಯ ಭಾಗವತ” ಎಂದು ಹೆಸರಿಟ್ಟರು.

ಶ್ರೀಲ ವೃಂದಾವನದಾಸ ಠಾಕುರರು ಸದಾ ಶ್ರೀ ಚೈತನ್ಯ ಮಹಾಪ್ರಭುಗಳ ಮತ್ತು ಶ್ರೀ ನಿತ್ಯಾನಂದ ಪ್ರಭುಗಳ ಚಿಂತನೆಯ ಭಕ್ತಿ ಭಾವದಲ್ಲಿ ತಲ್ಲೀನಾರಾಗಿರುತ್ತಿದ್ದರು. ಮಹಾಪ್ರಭುಗಳ ದಿವ್ಯ ಉಪದೇಶವನ್ನು ಮಧುರವಾದ ನುಡಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು.
ಅವರ ಸ್ತುತ್ಯರ್ಹ ಕಾರ್ಯವನ್ನು ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಹೀಗೆ ಗುಣಗಾನ ಮಾಡಿದ್ದಾರೆ.
“ಶ್ರೀಲ ವೇದವ್ಯಾಸರು ಭಾಗವತದಲ್ಲಿ ಶ್ರೀ ಕೃಷ್ಣನ ಜೀವನವನ್ನು ಬರೆದರು. ಶ್ರೀ ಚೈತನ್ಯ ಮಹಾಪ್ರಭುಗಳ ಪಾಲಿಗೆ ವೃಂದಾವದಾಸರೇ ವೇದವ್ಯಾಸರಾಗಿದ್ದಾರೆ. ವೃಂದಾವನದಾಸರು ತಮ್ಮ ಪುಸ್ತಕವನ್ನು “ಚೈತನ್ಯ ಮಂಗಳ” ಎಂದಿರುವುದು ಸರಿಯಷ್ಟೆ. ಈ ಗ್ರಂಥವನ್ನು ಕೇಳಿದ ಮಾತ್ರದಿಂದ ಅಮಂಗಳಗಳು ನಾಶವಾಗುತ್ತವೆ.
ಶ್ರೀ ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ ಪ್ರಭುಗಳ ವೈಭವವನ್ನು ಓದಿದವರೆಲ್ಲರಿಗೂ ಕೃಷ್ಣಭಕ್ತಿ ಎಂದರೆ ಏನು, ಅದು ಹೇಗಿರುತ್ತದೆ ಮತ್ತು ಯಾಕಾಗಿ ಇದೆ ಎಂಬುದು ತಿಳಿಯುತ್ತದೆ. ಶ್ರೀಮದ್ಭಾಗವತದ ಗಂಧವನ್ನು ಹೊಂದಿರುವ ಕೃತಿಯಲ್ಲಿ ಕೃಷ್ಣಭಕ್ತಿ ಯಾವುದು ಮತ್ತು ಯಾವುದು ಭಕ್ತಿಯಲ್ಲ ಎಂಬುದು ಸ್ಟಷ್ಟವಾಗಿ ಹೇಳಲ್ಪಟ್ಟಿದೆ.
ಯಾರಾದರೊಬ್ಬ ನಾಸ್ತಿಕನು ಠಾಕುರರ ನುಡಿಗಳನ್ನು ಕೇಳಿದರೂ ಸಾಕು ಶೀಘ್ರವಾಗಿ ಜ್ಙಾನೋದಯ ಹೊಂದಿ ಸಂತನ ಸ್ಥಾನಕೇರುತ್ತಾನೆ ಮತ್ತು ಆತನ ಆತ್ಮವು ಭಗವದ್ಧಾಮದಲ್ಲಿ ಸ್ಥಾನ ಪಡೆಯುತ್ತದೆ. ಆತ ಹಾಡಿದ ಹಾಗೆ ಭಗವಂತನ ಮಹಿಮೆಯನ್ನು ಯಾವ ಸಾಮಾನ್ಯ ಮನುಷ್ಯನಿಂದಲೂ ಹಾಡಲಾಗುವುದಿಲ್ಲ.
ದೇವೋತ್ತಮ ತಾನೇ ವೃಂದಾವನದಾಸರ ಪವಿತ್ರ ನಾಲಗೆಯ ಮೂಲಕ ನುಡಿಸಿದ್ದಾನೆಲ. ಇಂಥ ಪವಿತ್ರ ಚರಣಕಮಲಗಳಿಗೆ ನಾನು ಕೋಟಿ ಕೋಟಿ ಬಾರಿ ನಮಿಸುತ್ತೇನೆ.
ಓ ವೃಂದಾವನದಾಸ, ಯಾರ ಉಕ್ತಿಗಳು ಅಷ್ಟೊಂದು ಮಧುರವಾಗಿದೆಯೋ ಅವನ್ನು ಓದುವುದರಿಂದ ಅಶಾಶ್ವತ ಜೀವನದ ಅಂಧಕಾರದಿಂದ ಮುಕ್ತಿ ದೊರಕುವುದೋ ಅಂಥವರು ಜನಿಸಿದ ಸ್ಥಳಕ್ಕೆ ನಾನು ಕೋಟಿ ಕೋಟಿ ಬಾರಿ ನಮಿಸುತ್ತೇನೆ.”






Leave a Reply